-ಕೆ. ರಾಧಾಕೃಷ್ಣ ಹೊಳ್ಳ

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣಗೊಳ್ಳುವುದರೊಂದಿಗೆ ದೇಶದ ಧಾರ್ಮಿಕ–ಅಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಅಧ್ಯಾಯ ಆರಂಭವಾಗಿದೆ. ಸಾಧಾರಣವಾಗಿ ದಿನಕ್ಕೆ 70–80 ಸಾವಿರ ಯಾತ್ರಾರ್ಥಿಗಳು ಅಯೋಧ್ಯೆಗೆ ಬರುವುದು ಸಾಮಾನ್ಯವಾಗಿದ್ದು, 2028ರ ವೇಳೆಗೆ ಈ ಸಂಖ್ಯೆ ಮೂರುಪಾಲು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಸುಮಾರು 400 ಕೋಟಿ ರು. ಮೊತ್ತದ ಆದಾಯ ತೆರಿಗೆ ಪಾವತಿಸಿರುವುದು ಸುದ್ದಿಮಾಧ್ಯಮಗಳಲ್ಲಿ ವರದಿಯಾಗಿದ್ದು, ಧಾರ್ಮಿಕ ಕ್ಷೇತ್ರಗಳು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಯ ಪ್ರಮುಖ ಚಾಲಕರಾಗಲಿವೆ ಎಂಬುದಕ್ಕೆ ಇದು ಬಲವಾದ ಸೂಚನೆ.

ಭಾರತ ಇಂದು ಕೇವಲ ಒಂದು ರಾಷ್ಟ್ರವಲ್ಲ — ಅದು ಜಗತ್ತಿಗೆ ಶಾಂತಿಯ ಸಂದೇಶ ನೀಡುವ ಸಾಂಸ್ಕೃತಿಕ ತಾಯ್ನಾಡು. ಧರ್ಮ, ತತ್ತ್ವ, ತಪಸ್ಸು ಮತ್ತು ತ್ಯಾಗದ ನೆಲದಿಂದ ಹೊರಹೊಮ್ಮಿದ ಭಾರತೀಯ ಆಧ್ಯಾತ್ಮಿಕ ಪರಂಪರೆ, ಧಾರ್ಮಿಕ–ಅಧ್ಯಾತ್ಮಿಕ ಪ್ರವಾಸೋದ್ಯಮದ ಮೂಲಕ ವಿಶ್ವಗುರುವಾಗಿ ತನ್ನತ್ತ ವಿಶ್ವದ ಗಮನ ಸೆಳೆಯುತ್ತಿದೆ. ನಮ್ಮ ದೇವಾಲಯಗಳು, ಮಸೀದಿಗಳು, ಚರ್ಚುಗಳು ಮತ್ತು ಗುರುದ್ವಾರಗಳು ಕೇವಲ ಪೂಜಾ ಸ್ಥಳಗಳಲ್ಲ; ಅವು ಶಾಂತಿ, ಸಹಬಾಳ್ವೆ ಮತ್ತು ಮಾನವೀಯತೆಯನ್ನು ಸಾರುವ ಕೇಂದ್ರಗಳು. ಅದೇ ಕಾರಣಕ್ಕೆ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಈ ತೀರ್ಥಕ್ಷೇತ್ರಗಳನ್ನು ಜಾಗೃತವಾಗಿ ಆಯ್ದು ಭೇಟಿ ನೀಡುತ್ತಿದ್ದಾರೆ.

Ananta Padmanabha temple of Kerala

ಅಯೋಧ್ಯೆಯಿಂದ ಪುರಿಯ ಜಗನ್ನಾಥ ದೇವಾಲಯದವರೆಗೆ, ಕೇರಳದ ಪದ್ಮನಾಭಸ್ವಾಮಿ ದೇವಾಲಯದಿಂದ ಮಧುರೈನ ಮೀನಾಕ್ಷಿ ಮಂದಿರದವರೆಗೆ, ಮುಂಬೈನ ಸಿದ್ಧಿವಿನಾಯಕದಿಂದ ವೈಷ್ಣೋದೇವಿವರೆಗೆ — ಈ ತಾಣಗಳು ಭಾರತದ ಶಾಂತಿಪೂರ್ಣ ಸಂಸ್ಕೃತಿಯ ಜೀವಂತ ಪ್ರತಿರೂಪಗಳು. ಪುಟ್ಟಪಾರ್ಥಿಯ ಶ್ರೀ ಸಾಯಿ ಬಾಬಾ ಆಶ್ರಮ, ಸದ್ಗುರುಗಳ ಇಶಾ ಕೇಂದ್ರ, ಮಾತೆ ಅಮೃತಾನಂದಮಯಿ ಆಶ್ರಮಗಳಂಥ ಆಧ್ಯಾತ್ಮಿಕ ಕೇಂದ್ರಗಳು ಜಗತ್ತಿನ ನಾನಾ ದೇಶಗಳಿಂದ ಭಕ್ತರನ್ನು ಸೆಳೆಯುತ್ತಿವೆ. ಪ್ರತಿವರ್ಷ ಲಕ್ಷಾಂತರ ವಿದೇಶಿ ಪ್ರವಾಸಿಗರು ಮತ್ತು ಕೋಟಿ ಕೋಟಿ ಯಾತ್ರಾರ್ಥಿಗಳು ಭಾರತಕ್ಕೆ ಬಂದು ಕೇವಲ ದರ್ಶನವಲ್ಲ, ಭಾರತೀಯ ಜೀವನದ ಆಂತರಿಕ ತತ್ತ್ವವನ್ನೂ ಅನುಭವಿಸಿ ಹೋಗುತ್ತಾರೆ. ಈ ಹೆಚ್ಚುತ್ತಿರುವ ಯಾತ್ರಿಕರ ಪ್ರವಾಹವೇ, ಜಗತ್ತು ನಿಧಾನವಾಗಿ ಭಾರತದ ಆಧ್ಯಾತ್ಮಿಕ ಚಿಂತನೆಯತ್ತ ಆಕರ್ಷಿತವಾಗುತ್ತಿದೆ ಎಂಬುದಕ್ಕೆ ಸಾಕ್ಷಿ.

ಜಗತ್ತು ಇಂದು ಶಸ್ತ್ರಾಸ್ತ್ರಗಳ ಪೈಪೋಟಿಯಲ್ಲಿ ಮುಳುಗಿದ್ದರೆ, ಭಾರತ ಆತ್ಮೀಯತೆಯ ಮೂಲಕ ಶಾಂತಿಯ ಪರ್ಯಾಯ ಮಾರ್ಗವನ್ನು ತೋರಿಸುತ್ತಿದೆ. ಧರ್ಮಸ್ಥಳದಿಂದ ಶಬರಿಮಲೆಯವರೆಗೆ, ವೈಷ್ಣೋದೇವಿಯಿಂದ ತಿರುಪತಿಯವರೆಗೆ, ಉಡುಪಿಯಿಂದ ಗುರುವಾಯೂರಿನವರೆಗೆ — ಪ್ರತಿ ತೀರ್ಥಕೇಂದ್ರವೂ ಒಂದೇ ಭಾಷೆ ಮಾತನಾಡುತ್ತದೆ: ಧರ್ಮ ಮೀರಿದ ಮಾನವೀಯತೆ, ಜಾತಿ–ಮತ ಮೀರಿದ ಭಕ್ತಿಭಾವ. ಇದು ಯಾದೃಚ್ಛಿಕ ಬೆಳವಣಿಗೆಯಲ್ಲ; ಭಾರತದ ಸಂಸ್ಕೃತಿಯೇ ರೂಪಿಸಿರುವ ಸಾಂಸ್ಕೃತಿಕ ರಾಜತಂತ್ರ (Cultural Diplomacy). ಭಾರತ ತನ್ನ ಧರ್ಮ–ಪರಂಪರೆಯ ಮೂಲಕ ಜಗತ್ತಿನೊಂದಿಗೆ ಭಾವನಾತ್ಮಕ ಸೇತುವೆ ಕಟ್ಟುತ್ತಿದೆ.

Puri jagannatha temple

ಆದಾಗ್ಯೂ ಧಾರ್ಮಿಕ–ಅಧ್ಯಾತ್ಮಿಕ ಪ್ರವಾಸೋದ್ಯಮದ ಪರಿಣಾಮ ಶಾಂತಿಗೆ ಮಾತ್ರ ಸೀಮಿತವಲ್ಲ; ಇದು ದೇಶದ ಆರ್ಥಿಕತೆಯ ಮೇಲೂ ದಿಟ್ಟ ಪ್ರಭಾವ ಬೀರುತ್ತಿದೆ. ಒಂದು ದೇವಾಲಯದ ಸುತ್ತ ಹೊಟೇಲ್ ಉದ್ಯೋಗಿಗಳಿಂದ ಹಿಡಿದು ವಾಹನ ಚಾಲಕರವರೆಗೆ, ಅಂಗಡಿ ಮಾಲೀಕರಿಂದ ಹಿಡಿದು ಪೂಜಾರಿಗಳವರೆಗೆ ಸಾವಿರಾರು ಕುಟುಂಬಗಳ ಬದುಕು ಜೋಡಣೆಗೊಂಡಿದೆ. ಇದು ಕೇವಲ ತಾತ್ಕಾಲಿಕ ಆದಾಯವಲ್ಲ — ಗ್ರಾಮೀಣ ಭಾರತದಲ್ಲಿ ಶಾಶ್ವತ ಆರ್ಥಿಕ ವ್ಯವಸ್ಥೆಯನ್ನು ನಿರ್ಮಿಸಿದೆ. ನಗರಗಳಿಗಿಂತಲೂ ಹೆಚ್ಚು, ತೀರ್ಥಕ್ಷೇತ್ರಗಳ ಸುತ್ತಲಿನ ಗ್ರಾಮಗಳು ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿವೆ. ವಲಸೆ ಕಡಿಮೆಯಾಗುತ್ತಿದೆ. ಸ್ಥಳೀಯ ಉದ್ಯಮಗಳು ವೃದ್ಧಿಸುತ್ತಿವೆ. ಮಹಿಳೆಯರಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ಯುವಕರು ತಮ್ಮ ಊರಲ್ಲಿಯೇ ಭವಿಷ್ಯ ಕಟ್ಟಿಕೊಳ್ಳುತ್ತಿದ್ದಾರೆ.

ಹೀಗಾಗಿ ಧಾರ್ಮಿಕ ಪ್ರವಾಸೋದ್ಯಮವನ್ನು ಕೇವಲ ಭಕ್ತಿಯ ವಲಯಕ್ಕೆ ಸೀಮಿತಗೊಳಿಸುವುದು ಅಲ್ಪ ದೃಷ್ಟಿ. ಇಂದು ಅದು ಭಾರತದ ಆರ್ಥಿಕ ನೀತಿಯ ಅವಿಭಾಜ್ಯ ಅಂಗವಾಗಿದೆ. ಭಾರತ ಜಗತ್ತಿಗೆ ನೀಡುತ್ತಿರುವ ಸಂದೇಶ ಸ್ಪಷ್ಟ: ಧರ್ಮ ಎಂದರೆ ಸಂಘರ್ಷವಲ್ಲ, ಅದು ಶಾಂತಿಯ ಸೇತುವೆ. ದೇವಾಲಯಗಳ ಶಿಖರಗಳು, ಮಸೀದಿಗಳ ಮಿನಾರ್‌ಗಳು, ಚರ್ಚುಗಳ ಗಂಟೆಗಳು ಮತ್ತು ಗುರುದ್ವಾರಗಳ ನಿಶಾನ್ ಸಾಹಿಬ್ ಧ್ವಜಗಳು — ಇವೆಲ್ಲವೂ ಶಾಂತಿಯ ಸಂಕೇತಗಳು. ಅವು ಕೇವಲ ಆಧ್ಯಾತ್ಮದ ಚಿಹ್ನೆಗಳಲ್ಲ; ಉದ್ಯೋಗ, ವಿಶ್ವಾಸ ಮತ್ತು ಭವಿಷ್ಯದ ಗೋಪುರಗಳೂ ಹೌದು.

ಇಂದು ಭಾರತ ಒಂದು ಕಡೆ ಜಗತ್ತಿನ ಮುಂದೆ ಶಾಂತಿಯ ದೀಪವನ್ನೆತ್ತಿ ನಿಂತಿದ್ದರೆ, ಇನ್ನೊಂದು ಕಡೆ ತನ್ನ ಜನತೆಗೆ ಉದ್ಯೋಗದ ದಾರಿ ತೆರೆದಿದೆ. ಧಾರ್ಮಿಕ–ಅಧ್ಯಾತ್ಮಿಕ ಪ್ರವಾಸೋದ್ಯಮದ ಮೂಲಕ ದೇಶ ತನ್ನ ಆತ್ಮಶಕ್ತಿಯನ್ನೂ ಆರ್ಥಿಕ ಶಕ್ತಿಯನ್ನೂ ಒಂದೇ ದಿಕ್ಕಿನಲ್ಲಿ ಸಾಗಿಸುತ್ತಿದೆ. ಇದು ಇಪ್ಪತ್ತೊಂದನೇ ಶತಮಾನದ ಭಾರತವನ್ನು ರೂಪಿಸುವ ಮಹತ್ವದ ಅಧ್ಯಾಯ.