ಗುರುಮಂತ್ರ

  • ಡಾ. ಡಿ. ವಿ.ಗುರುಪ್ರಸಾದ್

ವೈನ್ ಟೂರಿಸಂ ಎನ್ನುವುದನ್ನು ನಾವೆಲ್ಲರೂ ಕೇಳಿದ್ದೇವೆ. ಇದರೊಡನೆ ಬಳಸುವ ಇನ್ನೊಂದು ಪದಜೋಡಣೆ ಈನೋ ಟೂರಿಸಂ. ಇದು ವೈನ್ ಟೂರಿಸಂನ ಮುಂದುವರೆದ ಭಾಗವೇ ಆಗಿದ್ದು, ಇವೆರಡರ ನಡುವೆ ಸೂಕ್ಷ್ಮವಾದ ವ್ಯತ್ಯಾಸವಿದೆ. ವೈನ್ ಟೂರಿಸಂನಲ್ಲಿ ಪ್ರವಾಸಿಗಳು ದ್ರಾಕ್ಷಿ ತೋಟಗಳಿಗೆ ಹೋಗಿ ಅಲ್ಲಿ ಬೆಳೆಯುವ ದ್ರಾಕ್ಷಿ ಹಣ್ಣುಗಳು ವೈನ್ ಪೇಯವಾಗಿ ಮಾರ್ಪಾಟಾಗುವ ವಿವಿಧ ಹಂತಗಳನ್ನು ಅರಿಯುತ್ತಾರೆ. ಜತೆಗೆ ಅಲ್ಲಿ ತಯಾರಾಗುವ ವೈನ್‌ಗಳನ್ನು ಟೇಸ್ಟ್ ಮಾಡುತ್ತಾರೆ. ಸಾಧಾರಣವಾಗಿ ಈ ಪ್ರವಾಸದ ಅವಧಿ ಒಂದು ದಿನ. ಈನೋ ಟೂರಿಸಂನಲ್ಲಿ ಪ್ರವಾಸಿಗರು ಮೂರ‍್ನಾಲ್ಕು ದಿನಗಳ ಕಾಲ ದ್ರಾಕ್ಷಿ ತೋಟ ಇಲ್ಲವೇ ವೈನರಿಯಿರುವ ಜಾಗದಲ್ಲಿ ಇಲ್ಲವೇ ಅದರ ಬಳಿಯೇ ತಂಗಿದ್ದು, ಅಲ್ಲಿ ತಯಾರಾಗುವ ವಿವಿಧ ವೈನ್‌ಗಳ ರುಚಿಯನ್ನು ಸವಿಯುತ್ತಾರೆ. ಇದಲ್ಲದೆ ಅಲ್ಲಿನ ವೈನ್ ಯಾವ ರೀತಿಯ ಆಹಾರದ ಜತೆಗೆ ಹೊಂದಿಕೆಯಾಗುತ್ತದೆ ಎನ್ನುವುದನ್ನು ಪ್ರಯೋಗಗಳ ಮೂಲಕ ತಿಳಿದುಕೊಳ್ಳುತ್ತಾರೆ. ಈ ಬಗೆಯ ಟೂರಿಸಂನಲ್ಲಿ ತೋಟಗಳ ಭೇಟಿಗಿಂತ ವೈನ್ ಸೆಲ್ಲಾರ್‌ಗಳ ಭೇಟಿಗೆ ಆದ್ಯತೆ.

ಇದನ್ನೂ ಓದಿ: ಎಲ್ಲರಿಗೂ ಲಾಭದಾಯಕವಾಗಿರುವ ಶಾಪಿಂಗ್ ಟೂರಿಸಂ

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಅಗ್ರಿ ಟೂರಿಸಂನೊಂದಿಗೂ ಈನೋ ಟೂರಿಸಂ ಅನ್ನು ಹೋಲಿಸಬಹುದು. ಇವೆರಡರ ನಡುವಿನ ಮುಖ್ಯ ವ್ಯತ್ಯಾಸವೆಂದರೆ ಈನೋ ಟೂರಿಸಂನಲ್ಲಿ ದ್ರಾಕ್ಷಿ ತೋಟಗಳು ಹಾಗೂ ವೈನರಿಗಳ ಭೇಟಿಯಿದ್ದರೆ ಅಗ್ರಿ ಟೂರಿಸಂನಲ್ಲಿ ಕಾಫಿ, ಟೀ, ಹಣ್ಣು, ತರಕಾರಿ, ಧಾನ್ಯಗಳು, ಮುಂತಾದವುಗಳ ತೋಟಗಳಿಗೆ, ಇಲ್ಲವೇ ಚೀಸ್, ಪೌಲ್ಟ್ರಿ ಘಟಕಗಳಿಗೆ ಹೋಗಿ ಅಲ್ಲಿಯೇ ವಾಸ್ತವ್ಯವನ್ನು ಹೂಡಿ ಅಲ್ಲಿ ಬೆಳೆಯುವ ವಸ್ತುಗಳಿಂದ ತಯಾರಿಸುವ ಆಹಾರವನ್ನು ಸೇವನೆ ಮಾಡುವುದು. ವೈನ್ ಟೂರಿಸಂ, ಈನೋ ಟೂರಿಸಂ ಮತ್ತು ಅಗ್ರಿ ಟೂರಿಸಂಗಳಿಗೆ ಪೂರಕವಾಗಿರುವ ಇನ್ನೊಂದು ಪ್ರವಾಸವಿದೆ. ಅದೇ ಕ್ಯುಲಿನರಿ ಟೂರಿಸಂ ಅಥವಾ ಫುಡ್ ಟೂರಿಸಂ. ಇದು ವಿಶೇಷವಾಗಿ ಸ್ಥಳೀಯ ಆಹಾರಗಳ ಸೇವನೆಗೆಂದೇ ಮಾಡುವ ಪರ್ಯಟನೆ. ಇದರಲ್ಲಿ ವೈನ್‌ಗಿಂತ ಆಹಾರಕ್ಕೆ ಮುಖ್ಯ ಪಾತ್ರವಿದೆ.

Untitled design (38)

ಅರ್ಧ ಶತಮಾನದ ಹಿಂದಿನಿಂದಲೇ ವೈನ್ ಟೂರಿಸಂ ಜನಪ್ರಿಯವಾಗಿದೆ. ಇದರ ಚರಿತ್ರೆ ವಿಶ್ವದ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಭಿನ್ನವಾಗಿದ್ದರೂ ಇದನ್ನು ಆರಂಭಿಸಿದ ಪ್ರಮುಖ ಉದ್ದೇಶ ವಿವಿಧ ಪ್ರದೇಶಗಳಲ್ಲಿ ತಯಾರಾಗುವ ವೈನ್‌ಗಳನ್ನು ಜನಪ್ರಿಯಗೊಳಿಸುವುದು. ಇದರ ಉಗಮ ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತದಲ್ಲಿ1975ರ ಆಸುಪಾಸಿನಲ್ಲಾಯಿತು ಎನ್ನಬಹುದು. ಅಲ್ಲಿನ ನಾಪಾ ವ್ಯಾಲಿ ಮತ್ತು ವೈನ್ ಕಂಟ್ರಿಗಳಲ್ಲಿ ಭಾರಿ ಪ್ರಮಾಣದ ವೈನ್ ತಯಾರಾಗುತ್ತಿದ್ದ ಕಾರಣ ವೈನರಿಗಳ ಮಾಲೀಕರು ತಮ್ಮಲ್ಲಿ ತಯಾರಾಗುವ ವೈನ್ ಅನ್ನು ಹೆಚ್ಚು ಮಾರಾಟ ಮಾಡಲೆಂದು ವೈನ್ ಟೂರಿಸಂ ಅನ್ನು ಯೋಜಿಸಿದರು. ತಮ್ಮ ದ್ರಾಕ್ಷಿ ತೋಟಗಳಿಗೆ ಭೇಟಿನೀಡಿ ದ್ರಾಕ್ಷಿಯ ಕೊಯ್ಲಿನ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಾವು ತಯಾರಿಸುವ ವೈನ್ ಅನ್ನು ಟೇಸ್ಟ್ ಮಾಡಲು ಸಾರ್ವಜನಿಕರನ್ನು ಆಹ್ವಾನಿಸಿದರು. ಬಂದವರಿಗೆ ತಮ್ಮಲ್ಲಿ ತಯಾರಾದ ವೈನ್ ಟೇಸ್ಟ್ ಮಾಡಲು ಕೊಟ್ಟು ಆನಂತರ ಅವರು ಇಷ್ಟಪಟ್ಟ ವೈನ್‌ಗಳನ್ನು ಅವರಿಗೆ ಡಿಸ್ಕೌಂಟ್ ಬೆಲೆಯಲ್ಲಿ ಮಾರತೊಡಗಿದರು. ಆದರೆ, ಇದರಿಂದ ವೈನರಿಗಳಿಗೆ ನಿರೀಕ್ಷಿತ ಪ್ರತಿಕ್ರಿಯೆ ಬರಲಿಲ್ಲ.

2004ರಲ್ಲಿ ಬಿಡುಗಡೆಯಾದ ‘ಸೈಡ್‌ವೇಸ್’ ಎನ್ನುವ ಹಾಲಿವುಡ್ ಸಿನಿಮಾ ವೈನ್ ಟೂರಿಸಂನ ಜನಪ್ರಿಯತೆಗೆ ನಾಂದಿ ಹಾಡಿತು. ಇದರ ಇಬ್ಬರು ಪ್ರಮುಖ ಪಾತ್ರದಾರಿಗಳು ದಕ್ಷಿಣ ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾದ ದ್ರಾಕ್ಷಿ ತೋಟಗಳಿಗೆ ಹೋಗಿ ಅಲ್ಲಿ ವೈನ್ ಟೇಸ್ಟ್ ಮಾಡುವುದು ಚಿತ್ರದಲ್ಲಿ ಬಿಂಬಿತವಾಗಿತ್ತು. ಇದರಿಂದ ಪ್ರಭಾವಿತರಾದ ಜನರು ದ್ರಾಕ್ಷಿ ತೋಟಗಳಿಗೆ ಹೋಗಿ ಅಲ್ಲಿನ ವೈನರಿಗಳಲ್ಲಿ ವೈನ್ ಸೇವಿಸತೊಡಗಿದರು. ವೈನ್ ಮಾರಾಟ ಹೆಚ್ಚಾಯಿತು. ಅದರ ತಯಾರಕರಿಗೆ ಲಾಭ ಬರತೊಡಗಿದಾಗ ವೈನ್ ತಯಾರಿಸುವ ಪ್ರಕ್ರಿಯೆಯನ್ನೇ ಟೂರಿಸಂನ ಒಂದು ಭಾಗವಾಗಿ ಮಾಡಲಾಯಿತು.

2000ದ ಆದಿಭಾಗದಲ್ಲಿಯೇ ಯೂರೋಪ್ ಖಂಡದ ವಿವಿಧ ದೇಶಗಳು ತಮ್ಮಲ್ಲಿಯೂ ವೈನ್ ಟೂರಿಸಂ ಪ್ರಾರಂಭಿಸಿದವು. ಸ್ಪೇನ್‌ನ ಕಟಲೂನಿಯಾ ಪ್ರಾಂತದ ವೈನ್‌ಗಳ ಗುಣಮಟ್ಟ ಉತ್ತಮವಾಗಿರುವುದರಿಂದ ಆ ದೇಶವು ವೈನ್ ಟೂರಿಸಂ ಅನ್ನು ಪ್ರಮೋಟ್ ಮಾಡತೊಡಗಿತು. ಅದರ ನೆರೆದೇಶ ಪೋರ್ಚುಗಲ್‌ನಲ್ಲಿ ಡುವೋರೋ ಕಣಿವೆ ವೈನ್‌ಗಾಗಿ ಪ್ರಸಿದ್ಧವಾದ್ದರಿಂದ ಅಲ್ಲಿಯೂ ವೈನ್ ಟೂರಿಸಂ ಬೆಳೆಯಿತು. ಉತ್ತಮ ಗುಣಮಟ್ಟದ ವೈನ್ ತಯಾರಿಕೆಗೆ ಹೆಸರುವಾಸಿಯಾಗಿರುವ ಫ್ರಾನ್ಸ್, ಇಟಲಿ, ಜರ್ಮನಿ ದೇಶಗಳೂ ವೈನ್ ಟೂರಿಸಂ ಆರಂಭಿಸಿದವು. ಪ್ರತಿಷ್ಠಿತ ವೈನ್ ತಯಾರಿಕೆಗೆ ಪ್ರಸಿದ್ಧವಾದ ಫ್ರಾನ್ಸ್‌ನ ಬೋರ್ಡೋ ಪ್ರಾಂತವು ಆರಂಭಿಸಿದ ವೈನ್ ಟೂರಿಸಂ ಭಾರಿ ಜನಪ್ರಿಯವಾಯಿತು. ಇಟಲಿಯ ಟಸ್ಕನಿ ತನ್ನ ವೈನಿಗಲ್ಲದೆ ಪ್ರಾಕೃತಿಕ ಸೌಂದರ್ಯಕ್ಕೂ ಹೆಸರುವಾಸಿಯಾದ್ದರಿಂದ ಅಲ್ಲಿಗೆ ಬರುವವರ ಸಂಖ್ಯೆಯೂ ಜಾಸ್ತಿಯಾಯಿತು. ಹೀಗೆ ಯೂರೋಪಿನಲ್ಲಿ ಅಮೆರಿಕಕ್ಕಿಂತ ಮಿಗಿಲಾಗಿ ವೈನ್ ಟೂರಿಸಂ ಬೆಳೆಯಿತು. ತದನಂತರ ಈನೊ ಟೂರಿಸಂ ಜನಪ್ರಿಯತೆಯನ್ನು ಗಳಿಸಿತು.

ಪ್ರತಿವರ್ಷದ ನವೆಂಬರ್ ತಿಂಗಳ 2ನೆಯ ಭಾನುವಾರದಂದು ಜರ್ಮನಿ, ಆಸ್ಟ್ರಿಯಾ, ಸ್ಲೋವೇನಿಯಾ, ಫ್ರಾನ್ಸ್, ಹಂಗೆರಿ, ಇಟಲಿ ಮತ್ತು ಪೋರ್ಚುಗಲ್‌ಗಳಲ್ಲಿ ಈನೋ ಟೂರಿಸಂ ದಿನವನ್ನು ಆಚರಿಸಲಾಗುತ್ತದೆ. ಅಂದು ಜಗತ್ತಿನೆಲ್ಲೆಡೆಗಳಿಂದ ಯೂರೋಪ್‌ನ ವಿಶ್ವವಿಖ್ಯಾತ ವೈನರಿಗಳಿಗೆ ಪ್ರವಾಸಿಗರು ಬಂದು ಕಡಿಮೆ ಬೆಲೆಯಲ್ಲಿ ವೈನ್ ಖರೀದಿಸುತ್ತಾರೆ. ಇದರ ಯಶಸ್ಸಿನಿಂದ ಸ್ಪೂರ್ತಿ ಪಡೆದ ಪ್ರವಾಸಗಳ ಆಯೋಜಕರು ಒಂದು ವೈನರಿಯಿಂದ ಇನ್ನೊಂದು ವೈನರಿಗೆ ಹೋಗಿ ಆ ಪ್ರದೇಶದಲ್ಲಿ ತಯಾರಾಗುವ ವಿವಿಧ ರೀತಿಯ, ವಿವಿಧ ಬಣ್ಣಗಳ, ವಿವಿಧ ರುಚಿಗಳ ವೈನ್‌ಗಳನ್ನು ಸೇವಿಸಲು ಅವಕಾಶವಾಗುವಂತೆ ವೈನ್ ಸರ್ಕ್ಯೂಟ್‌ಗಳನ್ನು ರೂಪಿಸಿದರು. ಯೂರೋಪಿನಿಂದ ಸ್ಪೂರ್ತಿ ಪಡೆದ ಅಮೆರಿಕವೂ ಮೇ 11ರಂದು ವೈನ್ ಟೂರಿಸಂ ಡೇ ಆಚರಿಸಲಾರಂಭಿಸಿತು.

ತಾಂತ್ರಿಕವಾಗಿ ಏಷ್ಯಾದಲ್ಲಿಯೇ ಇರುವ ಜಾರ್ಜಿಯಾ ನೂರಾರು ವರ್ಷಗಳಿಂದ ತನ್ನ ವೈನ್‌ಗಾಗಿ ವಿಶ್ವದೆಲ್ಲೆಡೆ ಹೆಸರುವಾಸಿಯಗಿದೆ. ಇಲ್ಲಿ ಮನೆಮನೆಗಳಲ್ಲಿ ವೈನ್ ತಯಾರಿಸುತ್ತಾರೆ. ಪ್ರತಿಯೊಂದರ ರುಚಿಯೂ ವಿಭಿನ್ನ. ಆ ದೇಶದ ಕಾಖೇತಿ ಪ್ರಾಂತವು ವೈನ್ ಟೂರಿಸಂಗೆ ಪ್ರಸಿದ್ಧವಾಗಿದೆ. ಅಲ್ಲಿನ ನೂರಾರು ಕುಟುಂಬಗಳು ಹೋಮ್‌ಸ್ಟೇಗಳನ್ನು ಆರಂಭಿಸಿ ಪ್ರವಾಸಿಗಳಿಗೆ ತಮ್ಮ ದ್ರಾಕ್ಷಿ ತೋಟಕ್ಕೆ ಕರೆದೊಯ್ದು ತಾವು ವಿಶೇಷ ರೀತಿಯಲ್ಲಿ ಹೇಗೆ ವೈನ್ ತಯಾರಿಸುತ್ತಾರೆ ಎಂದು ತೋರಿಸಲಾರಂಭಿಸಿದವು. ನಾನು ಕಳೆದ ವರ್ಷ ಜಾರ್ಜಿಯಾಗೆ ಹೋಗಿದ್ದಾಗ ಅಲ್ಲಿನ ಒಂದು ಕುಟುಂಬದೊಡನೆ ಒಂದು ದಿನ ಕಳೆದು ಅವರ ವೈನ್ ತಯಾರಿಕೆಯ ಪ್ರಕ್ರಿಯೆಯನ್ನು ಕಂಡೆ. ಇದಲ್ಲದೆ ಜಾರ್ಜಿಯನ್ನರ ಆಚಾರ ವಿಚಾರ, ಆಹಾರ ಪದ್ಧತಿಗಳನ್ನು ತಿಳಿದುಕೊಂಡಿದ್ದಲ್ಲದೇ ಅವರ ಸಂಸ್ಕೃತಿ ಹೇಗಿದೆಯೆಂದು ಮನಗಂಡೆ. ಇದೇ ವೈನ್ ಟೂರಿಸಂನ ಒಂದು ಮಹತ್ವ.

ಈಚೀಚೆಗೆ ಯುವ ಜನಾಂಗ ವೈನ್ ಸೇವನೆಯನ್ನು ಹೆಚ್ಚಾಗಿ ಮಾಡಲಾರಂಭಿಸಿರುವುದರಿಂದ ವೈನ್ ಟೂರಿಸಂಗಾಗಿ ಹೋಗುವ ಪ್ರವಾಸಿಗರ ಸಂಖ್ಯೆ ಏರುತ್ತಿದೆ. ವಿಶ್ವದಲ್ಲಿ ವೈನ್ ಟೂರಿಸಂ ಒಂದು ಬಿಲಿಯನ್ ಡಾಲರ್ ಆದಾಯ ತರುವ ಉದ್ಯಮವಾಗಿದೆ. ಇದನ್ನು ಮನಗಂಡ ವೈನರಿಗಳು ತಮ್ಮಲ್ಲಿ ಬರುವ ಪ್ರವಾಸಿಗರಿಗೆ ಹೊಸಹೊಸ ಆಕರ್ಷಣೆಗಳನ್ನು ಪರಿಚಯಿಸುತ್ತಿವೆ. ದ್ರಾಕ್ಷಿ ತೋಟದ ಒಳಗಡೆ ಸೈಕ್ಲಿಂಗ್ ಮಾಡುವುದು, ದ್ರಾಕ್ಷಿ ಹಣ್ಣುಗಳನ್ನು ಕೀಳುವುದು, ದ್ರಾಕ್ಷಿ ಹಣ್ಣಿರುವ ಬೃಹತ್ ಕಡಾಯಿಗಳಲ್ಲಿಳಿದು ದ್ರಾಕ್ಷಿಗಳನ್ನು ತುಳಿದು ಅವುಗಳ ರಸ ತೆಗೆಯುವುದು, ವೈನರಿಗಳಲ್ಲಿ ತಯಾರಾಗುವ ಪ್ರತಿಯೊಂದು ವೈನಿನ ವಿಶೇಷವನ್ನು ಕಂಡುಹಿಡಿಯುವ ಸ್ಪರ್ಧೆಗಳು ಮುಂತಾದವುಗಳನ್ನು ಏರ್ಪಡಿಸುತ್ತಿವೆ.

Untitled design (39)

ಭಾರತದಲ್ಲಿ ವೈನ್ ಟೂರಿಸಂ ಆರಂಭವಾಗಿದ್ದರೂ ಈನೋ ಟೂರಿಸಂ ಇನ್ನೂ ಜನಪ್ರಿಯವಾಗಿಲ್ಲ. ನಮ್ಮಲ್ಲಿ ವೈನ್ ಹೆಚ್ಚು ಜನಪ್ರಿಯ ಪೇಯವಾಗದಿರುವುದೇ ಇದರ ಮುಖ್ಯ ಕಾರಣ. ಮಹಾರಾಷ್ಟ್ರದ ನಾಸಿಕ್ ನಮ್ಮ ದೇಶದ ಅತಿ ಪ್ರಮುಖ ವೈನ್ ಕೇಂದ್ರವಾಗಿದೆ. ಅಲ್ಲಿನ ಮುಖ್ಯ ವೈನ್ ತಯಾರಿಕಾ ಘಟಕಗಳಾದ ಸುಲಾ ವೈನ್‌ಯಾರ್ಡ್, ಸಾಂಬಾ, ಚಾಟೋ ಇಂಡಾದ ವೈನರಿಗಳು ಪ್ರತಿ ವರ್ಷವೂ ವೈನ್ ಟೂರಿಸಂ ದಿನವನ್ನು ಆಚರಿಸುತ್ತವೆ. ಸುಲಾ ವೈನರಿ ಪ್ರತಿ ವರ್ಷ ಫೆಬ್ರವರಿಯಲ್ಲಿ ವೈನ್ ಫೆಸ್ಟ್ ಉತ್ಸವವನ್ನು ಆಚರಿಸುತ್ತದೆ. ಆ ಸಮಯದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಜನರು ಅಲ್ಲಿಗೆ ಬರುತ್ತಾರೆ. ಬೆಂಗಳೂರಿನ ಬಳಿ ನಂದಿ ಬೆಟ್ಟಗಳ ತಪ್ಪಲಲ್ಲಿ ಇರುವ ಗ್ರೋವರ್ ವೈನ್‌ಯಾರ್ಡ್ ವಾರಾಂತ್ಯಗಳು ಮತ್ತು ರಜಾ ದಿನಗಳಂದು ಪ್ರವಾಸಿಗಳನ್ನು ಬರಮಾಡಿಕೊಳ್ಳುತ್ತದೆ.

ಭಾರತದಲ್ಲಿ ಈನೋ ಟೂರಿಸಂಗಾಗಿ ವಿಫುಲ ಅವಕಾಶಗಳಿವೆ. ಇದರ ಜತೆಜತೆಗೆ ಅಗ್ರಿ ಟೂರಿಸಂ ಅನ್ನೂ ಪ್ರಮೋಟ್ ಮಾಡಬಹುದು. ದ್ರಾಕ್ಷಿ ತೋಟಗಳು ಹಾಗೂ ಇತರ ಫಾರ್ಮ್‌ಗಳ ಭೇಟಿ, ಅಲ್ಲಿ ಬೆಳೆಯುವ ಉತ್ಪನ್ನಗಳ ಪರಿಚಯ, ನಮ್ಮಲ್ಲಿ ತಯಾರಿಸುವ ವೈನ್‌ಗಳ ಸೇವನೆ, ಅವಕ್ಕೆ ಹೊಂದುವಂಥ ಭಾರತೀಯ ಆಹಾರಗಳ ಗುರುತಿಸುವಿಕೆಯನ್ನು ವಿದೇಶಿ ಪ್ರವಾಸಿಗಳಿಗೆ ಮಾಡಿಕೊಡಬಹುದು. ರೈತರ ಮನೆಗಳಿಗೆ ಭೇಟಿ, ಭಾರತೀಯ ಆಚಾರವಿಚಾರಗಳ ಪರಿಚಯ ಮಾಡುವ ತರಗತಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂತಾದವನ್ನು ಏರ್ಪಡಿಸಿ ವಿದೇಶಿ ಪ್ರವಾಸಿಗಳನ್ನು ಆಕರ್ಷಿಸಬಹುದಾಗಿದೆ. ನಾಸಿಕ್ ಮತ್ತು ಬೆಂಗಳೂರಿನ ವೈನರಿಗಳನ್ನು ಜೋಡಿಸಿ ವೈನ್ ಸರ್ಕ್ಯೂಟ್ ಮಾಡಿದರೆ ಎರಡು ಬೇರೆ ಬೇರೆ ಪ್ರಾಂತಗಳಲ್ಲಿ ತಯಾರಾಗುವ ವೈನ್‌ಗಳ ಸೇವನೆಯಲ್ಲದೆ ಅವುಗಳ ವಿಭಿನ್ನ ಸಂಸ್ಕೃತಿಯನ್ನೂ ಪ್ರವಾಸಿಗಳು ಅರಿಯಬಹುದು.

ಇವೆಲ್ಲವನ್ನೂ ಮಾಡಿದರೆ ಭಾರತವು ಸದ್ಯಕ್ಕಿಂತ ಐದು ಪಟ್ಟು ಹೆಚ್ಚು ಪ್ರವಾಸಿಗರನ್ನು ಮುಂದಿನ ಕೆಲವು ವರ್ಷಗಳಲ್ಲಿ ಆಕರ್ಷಿಸಬಹುದು. ಹೆಚ್ಚು ಹೆಚ್ಚು ವಿದೇಶಿಯರು ಈನೋ, ವೈನ್ ಹಾಗೂ ಅಗ್ರಿ ಟೂರಿಸಂಗಾಗಿ ಭಾರತಕ್ಕೆ ಬಂದರೆ ನಮ್ಮ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ, ಭಾರತೀಯ ವೈನ್ ಹಾಗೂ ಚೀಸ್ ಮುಂತಾದವುಗಳ ಗುಣಮಟ್ಟವೂ ಹೆಚ್ಚಾಗಿ ಅವು ವಿದೇಶಗಳಲ್ಲಿ ಜನಪ್ರಿಯವಾಗುತ್ತವೆ. ಈ ನಿಟ್ಟಿನಲ್ಲಿ ಪ್ರವಾಸಿ ಏಜೆನ್ಸಿಗಳು ಮತ್ತು ಸರಕಾರಗಳು ಗಮನಹರಿಸಬೇಕಾಗಿದೆ.