ಎಲ್ಲರಿಗೂ ಲಾಭದಾಯಕವಾಗಿರುವ ಶಾಪಿಂಗ್ ಟೂರಿಸಂ
ಒಂದು ಕಾಲದಲ್ಲಿ ವಿದೇಶ ಪ್ರವಾಸ ಎಂದರೆ ಅಪರೂಪದ ಅವಕಾಶ; ಇಂದು ಅದು ಶಾಪಿಂಗ್‌ಗೂ ಹೊಸ ಆಯಾಮ ನೀಡಿದೆ. ವಿಶ್ವದ ಹಲವು ದೇಶಗಳು ಪ್ರವಾಸಿಗರನ್ನು ಸೆಳೆಯಲು ಶಾಪಿಂಗ್ ಅನ್ನೇ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ರೂಪಿಸಿವೆ. ದುಬೈ, ನ್ಯೂಯಾರ್ಕ್, ಪ್ಯಾರಿಸ್, ಮಿಲಾನ್‌ನಂಥ ನಗರಗಳು ಶಾಪಿಂಗ್ ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ. ಶಾಪಿಂಗ್ ಟೂರಿಸಂ ಪ್ರವಾಸಿಗರ ಖರ್ಚು ಹೆಚ್ಚಿಸುವುದಷ್ಟೇ ಅಲ್ಲ, ಸ್ಥಳೀಯ ಉತ್ಪನ್ನ, ಉದ್ಯೋಗ ಮತ್ತು ಆರ್ಥಿಕತೆಗೆ ಉತ್ತೇಜನ ನೀಡುತ್ತದೆ. ಭಾರತವೂ ತನ್ನ ವೈವಿಧ್ಯಮಯ ಕರಕುಶಲ, ಕೈಮಗ್ಗ ಮತ್ತು ಸಾಂಪ್ರದಾಯಿಕ ಉತ್ಪನ್ನಗಳ ಮೂಲಕ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ.
ಗುರು ಮಂತ್ರ
- ಡಾ. ಡಿ. ವಿ. ಗುರುಪ್ರಸಾದ್
--
35 ವರ್ಷಗಳ ಹಿಂದೆ ನಾನು ನನ್ನ ಮೊದಲ ವಿದೇಶ ಪ್ರವಾಸಕ್ಕಾಗಿ ಇಂಗ್ಲೆಂಡ್‌ಗೆ ಹೋಗುವ ಸುದ್ದಿ ತಿಳಿದ ಕೂಡಲೇ ನಮ್ಮ ಮನೆಯವರು, ನೆಂಟರಿಷ್ಟರು, ಗೆಳೆಯರು ಮತ್ತು ಸಹೋದ್ಯೋಗಿಗಳಿಂದ ನಾನು ಅಲ್ಲಿಂದ ಏನನ್ನು ಅವರಿಗಾಗಿ ಖರೀದಿಸಿ ತರಬೇಕೆಂಬ ಬಂದ ಬೇಡಿಕೆಗಳು ಅಷ್ಟಿಷ್ಟಲ್ಲ. ಎಲ್ಲರೂ ಹೇಳಿದ್ದನ್ನು ಪಟ್ಟಿ ಮಾಡಿಕೊಂಡಾಗ ನನಗೆ ಗಾಬರಿಯಾಯಿತು. ಏಕೆಂದರೆ ಅವೆಲ್ಲವನ್ನೂ ತರಲು ನನಗೆ 1500 ಡಾಲರ್ ಹಣ ಬೇಕಾಗುತ್ತಿತ್ತು. ಅದೂ ಸಾಲದೆಂಬಂತೆ ತರುವ ವಸ್ತುಗಳಿಗೆ ದುಬಾರಿ ಕಸ್ಟಂ ಶುಲ್ಕವನ್ನು ಕೊಡಬೇಕಾಗಿತ್ತು. ಅವೆಲ್ಲಕ್ಕೂ ತಯಾರಾಗಿದ್ದರೂ ನಮಗೆ ವಿದೇಶಿ ಕರೆನ್ಸಿಯೇ ಸಿಗುತ್ತಿರಲಿಲ್ಲ. ಏಕೆಂದರೆ ಭಾರತ ಸರಕಾರ ವಿದೇಶಕ್ಕೆ ಹೋಗುವವರಿಗೆ ವರ್ಷವೊಂದಕ್ಕೆ ಕೇವಲ 500 ಡಾಲರ್‌ಗಳನ್ನು ಒಯ್ಯುವ ಮಿತಿ ಹೇರಿತ್ತು. ಡಾಲರ್‌ಗಳನ್ನು ಇಲ್ಲಿನ ಬ್ಯಾಂಕ್‌ಗಳಲ್ಲಿ ನಮ್ಮ ಪಾಸ್‌ಪೋರ್ಟ್ ತೋರಿಸಿಯೇ ಕೊಳ್ಳಬೇಕಾಗಿತ್ತು.
ಇದನ್ನೂ ಓದಿ: ಲೆಸ್ ಲಗೇಜ್... ಈ ಪುಸ್ತಕ ಜತೆಗಿದ್ದರೆ ವಿದೇಶ ಪ್ರವಾಸ ಸುಲಭ
ಆದರೆ, ವಿದೇಶದಲ್ಲಿ ನೆಂಟರಿಷ್ಟರು, ಬಿಸಿನೆಸ್ ಪಾಲುದಾರರು ಮುಂತಾದವರಿದ್ದರಿಗೆ ಈ ತೊಂದರೆ ಉಂಟಾಗುತ್ತಿರಲಿಲ್ಲ. ಹೀಗಾಗಿ ಅವರಲ್ಲಿ ಕೆಲವರು ಶಾಪಿಂಗ್ ಉದ್ದೇಶದಿಂದಲೇ ವಿದೇಶ ಪ್ರವಾಸವನ್ನು ಮಾಡುತ್ತಿದ್ದರು. ಬ್ರಾಂಡೆಡ್ ಬಟ್ಟೆಬರೆ ಮತ್ತು ಚರ್ಮದ ವಸ್ತುಗಳು, ಪರ್‌ಫ್ಯೂಮ್, ಸ್ಕಾಷ್ ವಿಸ್ಕಿ, ಸಿಗರೇಟ್ ಮುಂತಾದವುಗಳನ್ನು ಖರೀದಿಸಲು ವಿದೇಶಗಳಿಗೆ ಹೋಗುವುದು ಕೆಲವರಿಗಂತೂ ಸ್ಟೇಟಸ್ ಸಿಂಬಲ್ ಆಗಿತ್ತು. ವಿದೇಶಕ್ಕೆ ಹೋಗಲಾರದವರು ಕಳ್ಳಸಾಗಾಣಿಕೆಯಲ್ಲಿ ದೇಶಕ್ಕೆ ಬರುತ್ತಿದ್ದ ವಿದೇಶಿ ವಸ್ತುಗಳನ್ನು ಇಲ್ಲಿಯೇ ಕೊಳ್ಳುತ್ತಿದ್ದರು. ಶಾಪಿಂಗ್ ಉದ್ದೇಶಕ್ಕಾಗಿಯೇ ಪ್ರವಾಸವನ್ನು ಮಾಡುವ ಭಾರತೀಯರ ಸಂಖ್ಯೆ ಬಹಳ ಕಡಿಮೆಯಿತ್ತು.

ಉಳಿದವರಿಗೆ ಪ್ರವಾಸ ಎಂದರೆ ಹೋದ ಜಾಗದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಅಲ್ಲಿಂದ ಬರುವಾಗ ಒಂದು ಸ್ಮರಣಿಕೆಯನ್ನು ತರುವುದು ವಾಡಿಕೆಯಾಗಿತ್ತು. ಇಂಥ ಸ್ಮರಣಿಕೆಗಳು ಕರಕುಶಲ ವಸ್ತುಗಳಾಗಿರುತ್ತಿದ್ದು ಅವು ಮನೆಗಳ ಶೋಕೇಸ್‌ಗಳಲ್ಲಿ ರಾರಾಜಿಸುತ್ತಿದ್ದವು. ಆದರೆ, ವಿದೇಶಿ ವಿನಿಮಯದ ಕೊರತೆಯಿಲ್ಲದ ದೇಶಗಳ ಜನರು ಶಾಪಿಂಗ್ ಟೂರಿಸಂಗಾಗಿಯೇ ಫ್ಯಾಷನ್ ಕೇಂದ್ರಗಳಾದ ನ್ಯೂಯಾರ್ಕ್, ಲಂಡನ್, ಪ್ಯಾರಿಸ್, ಮಿಲಾನ್ ಮುಂತಾದ ನಗರಗಳಿಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೋಗಿ ಬರುತ್ತಿದ್ದರು.
ಆದರೆ, ಕಾಲಕ್ರಮೇಣ ಭಾರತದಲ್ಲಿಯೂ ಪರಿಸ್ಥಿತಿ ಎಷ್ಟು ಬದಲಾಗಿದೆಯೆಂದರೆ ನಾವು ವಿದೇಶಕ್ಕೆ ಒಯ್ಯುವ ಡಾಲರ್‌ಗಳಿಗೆ ಯಾವುದೇ ಮಿತಿಯಿಲ್ಲದ ಕಾರಣದಿಂದ ವಿದೇಶಗಳಿಗೆ ಶಾಪಿಂಗ್‌ಗಾಗಿಯೇ ಹೋಗುತ್ತಿರುವವರ ಸಂಖ್ಯೆ ಏರುತ್ತಿದೆ.
ಭಾರತೀಯ ಪ್ರವಾಸಿಗರ ಶಾಪಿಂಗ್ ಟೂರಿಸಂನ ಏರಿಕೆಗೆ ನಾಂದಿ ಹಾಡಿದ್ದು ಯುಎಇ, ತನ್ನ ದೇಶದಲ್ಲಿ ಪ್ರವಾಸಿಗಳು ನೋಡುವಂಥ ಚಾರಿತ್ರಿಕ ಸ್ಥಳಗಳು ಇಲ್ಲವೇ ಸುಂದರ ಪ್ರೇಕ್ಷಣೀಯ ತಾಣಗಳು ಇರದಿದ್ದರೂ ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಅಲ್ಲಿನ ಸರಕಾರ ದುಬೈನಲ್ಲಿ ದೊಡ್ಡ ದೊಡ್ಡ ಮಾಲ್‌ಗಳು ಮತ್ತು ಶಾಪಿಂಗ್ ಸೆಂಟರ್‌ಗಳನ್ನು ನಿರ್ಮಿಸಿತು. ಕೇವಲ ಮರ‍್ನಾಲ್ಕು ಗಂಟೆಗಳ ಪ್ರಯಾಣದ ಮೂಲಕ ಭಾರತದಿಂದ ದುಬೈ ತಲುಪಿ ಅಲ್ಲಿ ಎರಡು ಮೂರು ದಿನ ಶಾಪಿಂಗ್ ಮಾಡಿಕೊಂಡು ಬರುವ ಸೌಕರ್ಯವನ್ನು ಅರಿತ ಭಾರತೀಯರು ಆರಂಭದಲ್ಲಿ ಪ್ರಮುಖವಾಗಿ ಚಿನ್ನ ಮತ್ತು ಚಿನ್ನಾಭರಣಗಳನ್ನು ಖರೀದಿಸಲು ದುಬೈಗೆ ಹೋಗಲಾರಂಭಿಸಿದರು. ಪ್ರವಾಸಿಗಳ ಸಂಖ್ಯೆ ಹೆಚ್ಚಾಗುತ್ತ ಬಂದಂತೆ ಶಾಪಿಂಗ್‌ನ ನಂತರವೂ ಪ್ರವಾಸಿಗರು ತನ್ನ ನೆಲದಲ್ಲಿ ಉಳಿಯುವಂತೆ ಮಾಡಲು ಅಲ್ಲಿನ ಸರಕಾರ ವಿವಿಧ ಮನೋರಂಜನಾ ಕಾರ್ಯಕ್ರಮಗಳು, ಕ್ರಿಕೆಟ್ ಪಂದ್ಯಗಳನ್ನೂ ಏರ್ಪಡಿಸಲಾರಂಭಿಸಿತು. ಈಗಂತೂ ದುಬೈ ವಿಶ್ವದ ಅತಿ ಮುಖ್ಯ ಶಾಪಿಂಗ್ ತಾಣಗಳಲ್ಲಿ ಒಂದಾಗಿದೆ.
ಶಾಪಿಂಗ್ ಟೂರಿಸಂನ ಮೂಲಕ ಪ್ರವಾಸಿಗಳನ್ನು ಆಕರ್ಷಿಸಲು ಹಲವು ದೇಶಗಳು ಪೈಪೋಟಿ ನಡೆಸುತ್ತಿವೆ. ದುಬೈನ ಅಸಾಧಾರಣ ಯಶಸ್ಸನ್ನು ಕಂಡ ಮಲೇಷಿಯಾ, ಥೈಲ್ಯಾಂಡ್ ದೇಶಗಳು ತಮ್ಮ ಇತರ ಆಕರ್ಷಣೆಗಳ ಜತೆ ಶಾಪಿಂಗ್ ಅನ್ನು ಕೂಡಾ ಒಂದು ಆಕರ್ಷಣೆಯಾಗಿ ಮಾಡಿದವು. ಶಾಪಿಂಗ್ ಫೆಸ್ಟಿವಲ್‌ಗಳನ್ನು ಏರ್ಪಡಿಸತೊಡಗಿದವು. ತಮ್ಮ ದೇಶದಲ್ಲಿ ಶಾಪಿಂಗ್ ಮಾಡಿದ ಪ್ರವಾಸಿಗಳಿಗೆ ಅವರು ಖರೀದಿಸಿದ ವಸ್ತುವಿನ ತೆರಿಗೆಯನ್ನು ಹಿಂತಿರುಗಿಸುವ ಸಂಪ್ರದಾಯವನ್ನು ರೂಢಿಸಿಕೊಂಡವು. ಹೀಗಾಗಿ ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಏರತೊಡಗಿತು. ಡ್ಯೂಟಿ ಫ್ರೀ ಶಾಪಿಂಗ್ ಪ್ರವಾಸಿಗರಿಗೆ ದೊಡ್ಡ ಆಕರ್ಷಣೆಯಾಯಿತು.
ಶಾಪಿಂಗ್ ಪ್ರವಾಸದಲ್ಲಿ ಸದ್ಯಕ್ಕೆ ಮುಂಚೂಣಿಯಲ್ಲಿರುವ ದೇಶವೆಂದರೆ ಗ್ರಾಹಕರ ಸ್ವರ್ಗ ಎಂದೇ ಬಿಂಬಿತವಾಗಿರುವ ಅಮೆರಿಕ. ಇದು ವಿಶ್ವದ ಅತಿ ದೊಡ್ಡ ಶಾಪಿಂಗ್ ದೇಶವಾಗಿದೆ. ನ್ಯೂಯಾರ್ಕ್ ನಗರವೊಂದರಲ್ಲಿಯೇ ವಿದೇಶಿ ಪ್ರವಾಸಿಗರು ಪ್ರತಿ ವರ್ಷವೂ 8 ಬಿಲಿಯನ್ ಡಾಲರ್‌ಗಳಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಶಾಪಿಂಗ್ ಪ್ರವಾಸದಲ್ಲಿ ಅಮೆರಿಕದ ಮಾರುಕಟ್ಟೆಯ ಪ್ರಮಾಣ ವಿಶ್ವದ ಶೇ.2ರಷ್ಟಿದೆ. ಆ ದೇಶದ ಎಲ್ಲ ದೊಡ್ಡ ನಗರಗಳಲ್ಲಿ ಪ್ರೀಮಿಯಂ ಔಟ್‌ಲೆಟ್ ಮಾಲ್ ಎಂದು ಕರೆಯುವ ಬೃಹತ್ ಮಾರುಕಟ್ಟೆ ಸಂಕೀರ್ಣಗಳಿವೆ. ಇವುಗಳಲ್ಲಿ ಬ್ರಾಂಡೆಡ್ ವಸ್ತುಗಳ ನೂರಾರು ಅಂಗಡಿಗಳಿರುತ್ತವೆ. ಎಲ್ಲ ವಸ್ತುಗಳೂ ಮಾರುಕಟ್ಟೆ ಬೆಲೆಗಿಂತ ಶೇ.40ರಿಂದ 65ರಷ್ಟು ಕಡಿಮೆ ದರದಲ್ಲಿ ಸಿಗುತ್ತವೆ. ಇವೇ ಅಲ್ಲದೆ ಅಮೆರಿಕದ 15 ರಾಜ್ಯಗಳಲ್ಲಿ ಅತಿ ಕಡಿಮೆ ಟ್ಯಾಕ್ಸ್ ಇರುವುದಲ್ಲದೆ ಐದು ರಾಜ್ಯಗಳಲ್ಲಿ ಟ್ಯಾಕ್ಸ್ ಕೊಡಲೇ ಬೇಕಾದ್ದಿಲ್ಲದ್ದರಿಂದ ಅಲ್ಲಿನ ಅಂಗಡಿಗಳಲ್ಲಿ ವಸ್ತುಗಳು ಬಹಳ ಸೋವಿಯಾಗಿ ದೊರೆಯುತ್ತವೆ. ಇವು ಸಾಲದೆಂಬಂತೆ ಪ್ರತಿ ವರ್ಷವೂ ನಾಲ್ಕೈದು ಬಾರಿ ಎಲ್ಲ ಅಂಗಡಿಗಳಲ್ಲಿಯೂ ಸೇಲ್‌ಗಳು ಇರುತ್ತವೆ.
ಶಾಪಿಂಗ್ ಟೂರಿಸಂನಲ್ಲಿ ಎರಡನೆಯ ಸ್ಥಾನವನ್ನು ಪಡೆದಿರುವುದು ಏಷ್ಯಾ-ಪೆಸಿಫಿಕ್ ದೇಶಗಳು. ಇವುಗಳಲ್ಲಿ ಪ್ರಮುಖವಾದದ್ದು ಚೀನಾ. ಆ ದೇಶದಲ್ಲಿಯೇ ವಿಶ್ವದ ವಿವಿಧ ಹೆಸರಾಂತ ಬ್ರಾಂಡ್‌ಗಳ ವಸ್ತುಗಳು ತಯಾರಾಗುವ ಕಾರಣ ಅಲ್ಲಿ ಅಂಥ ವಸ್ತುಗಳ ಬೆಲೆಯೂ ಕಡಿಮೆ. ಇದೇ ರೀತಿ ವಿಯೆಟ್ನಾಂನಲ್ಲಿ ಬ್ರಾಂಡೆಡ್ ಸೂಟ್‌ಕೇಸ್‌ಗಳು, ಪಾದರಕ್ಷೆಗಳು, ಚರ್ಮದ ಹ್ಯಾಂಡ್‌ಬ್ಯಾಗ್ ಮುಂತಾದವನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಮಲೇಷಿಯಾ ಮತ್ತು ಥೈಲ್ಯಾಂಡ್ ದೇಶಗಳು ಶಾಪಿಂಗ್‌ಗೆ ಪ್ರಸಿದ್ಧವಾಗಿದ್ದು, ಕಾಲಕಾಲಕ್ಕೆ ಶಾಪಿಂಗ್ ಫೆಸ್ಟಿವಲ್‌ಗಳನ್ನು ಏರ್ಪಡಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಲಕ್ಸುರಿ ಶಾಪಿಂಗ್ ಟೂರಿಸಂಗಾಗಿ ಪ್ಯಾರಿಸ್ ಮತ್ತು ಮಿಲಾನ್‌ಗಳು ಇಂದಿಗೂ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಾಗಿವೆ.
ತಮ್ಮ ಆರ್ಥಿಕ ಬೆಳವಣಿಗೆಗಾಗಿ ಶಾಪಿಂಗ್ ಬಹಳ ಮಹತ್ವದ್ದು ಎಂದು ಈಗ ಹಲವಾರು ದೇಶಗಳು ಅರಿತಿವೆ. ನಗರಗಳ ಬೆಳವಣಿಗೆಗಾಗಿ ಹಾಗೂ ರಾಷ್ಟ್ರೀಯ ಆದಾಯಕ್ಕಾಗಿ ಶಾಪಿಂಗ್ ಟೂರಿಸಂನ ಅವಶ್ಯಕತೆಯನ್ನು ಅವು ಮನಗಂಡಿವೆ. ಹೀಗಾಗಿ ಸದ್ಯಕ್ಕೆ ಗ್ಲೋಬಲ್ ಶಾಪಿಂಗ್ ಟೂರಿಸಂನಿಂದ ಉತ್ಪಾದನೆಯಾಗುತ್ತಿರುವ ಮೊತ್ತ 321 ಮಿಲಿಯನ್ ಅಮೆರಿಕನ್ ಡಾಲರ್ ಮುಟ್ಟಿದೆ.
ಶಾಪಿಂಗ್ ಟೂರಿಸಂನಿಂದ ದೇಶಗಳ ಜಿಡಿಪಿ ಹೆಚ್ಚುತ್ತದೆ. ಎಕೆಂದರೆ ಶಾಪಿಂಗ್‌ಗಾಗಿಯೇ ಬರುವ ಅಂತಾರಾಷ್ಟ್ರೀಯ ಪ್ರವಾಸಿಗರು ಇತರ ಪ್ರವಾಸಿಗಳಿಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಾರೆ. ಇವರಿಂದ ದೇಶಗಳ ಆರ್ಥಿಕತೆಗೆ ಹೆಚ್ಚು ಹಣ ಹರಿದುಬರುತ್ತದೆ. ಶಾಪಿಂಗ್‌ನಿಂದ ಬರುವ ಆದಾಯದಿಂದ ಹಲವಾರು ಸಾಂಪ್ರದಾಯಿಕ ಮಾರುಕಟ್ಟೆಗಳ ಬೆಳವಣಿಗೆಯಾಗುತ್ತದೆ. ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಮತ್ತಿತರ ಸೌಕರ್ಯಗಳು ಬೆಳೆಯುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ ಮತ್ತು ಸರಕಾರಕ್ಕೆ ತೆರಿಗೆ ಬರುತ್ತದೆ.

ಇತರ ರೀತಿಯ ಪ್ರವಾಸಗಳು ಸೀಸನ್‌ಗಳ ಮೇಲೆ ಅವಲಂಬಿಸುತ್ತದೆ. ಉದಾಹರಣೆಗೆ ಚಳಿಗಾಲ ಮತ್ತು ಬೇಸಗೆಯಲ್ಲಿ ತೀರಾ ಚಳಿ ಇಲ್ಲವೇ ಬಿಸಿಲಿರುವ ದೇಶಗಳಿಗೆ ಪ್ರವಾಸಿಗಳು ಕಡಿಮೆ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ, ಶಾಪಿಂಗ್ ಪ್ರವಾಸಕ್ಕೆ ಎಂಥ ಸೀಸನ್ ಆದರೂ ಪರವಾಗಿಲ್ಲ. ಶಾಪಿಂಗ್‌ಗಾಗಿ ಬರುವ ಶೇ.30 ರಿಂದ 60ರಷ್ಟು ಪ್ರವಾಸಿಗರು ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಬಯಸುವುದರಿಂದ ಅಂಥ ಉತ್ಪನ್ನಗಳ ತಯಾರಿಕೆ ಹೆಚ್ಚಾಗುತ್ತದೆ. ಭಾರತದಲ್ಲಂತೂ ಪ್ರತಿಯೊಂದು ಜಿಲ್ಲೆಯೂ ತನ್ನ ವಿಶೇಷ ಉತ್ಪನ್ನಕ್ಕಾಗಿ ಹೆಸರುವಾಸಿಯಾಗಿರುವ ಕಾರಣ ಅಂಥ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಯು ದೊರೆಯುತ್ತದೆ.
ಹೀಗಾಗಿ ನಮ್ಮ ದೇಶವೂ ಶಾಪಿಂಗ್ ಟೂರಿಸಂಗೆ ಹೆಚ್ಚು ಒತ್ತನ್ನು ಕೊಡಬೇಕಾಗಿದೆ. ವಿದೇಶಿ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಗರಗಳಲ್ಲಿ ವಿಶೇಷ ಶಾಪಿಂಗ್ ಮಾಲ್‌ಗಳನ್ನು ನಿರ್ಮಿಸಬಹುದಾಗಿದೆ. ಈರೋಡ್ ಬಳಿ ಕೇವಲ ಬಟ್ಟೆಬರೆಗಳ ಮಾರಾಟಕ್ಕಾಗಿಯೇ ಇರುವ ಟೆಕ್ಸ್ ವ್ಯಾಲಿ ಎನ್ನುವ ಬೃಹತ್ ಮಾಲ್‌ನ ಮಾದರಿಯಲ್ಲಿಯೇ ಶಾಪಿಂಗ್ ಮಾಲ್‌ಗಳನ್ನು ಯೋಜಿಸಬಹುದಾಗಿದೆ. ಇಲ್ಲಿ ಪ್ರವಾಸಿಗರಿಗೆ ವಿಶೇಷ ಅನುಭವಗಳನ್ನು ಕೊಡುವಂಥ ಶಾಪಿಂಗ್ ರೂಪಿಸಬೇಕು. ನಮ್ಮ ದೇಶದ ವಿಶೇಷ ಉತ್ಪನ್ನಗಳನ್ನು ಮಾರಾಟಮಾಡಬೇಕು. ಪ್ರವಾಸಿಗರ ಮನೋರಂಜನೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದಲ್ಲದೆ ಫುಡ್ ಕೋರ್ಟ್‌ಗಳನ್ನೂ ಸ್ಥಾಪಿಸಬೇಕು. ಒಟ್ಟಾರೆ ಅವರಿಗೆ ಸಿಗುವ ಶಾಪಿಂಗ್ ಅನುಭವ ಬೇರೆಡೆ ಸಿಗದಂಥಿರಬೇಕು. ದಸರಾ, ದೀಪಾವಳಿ, ಹೋಳಿ ಹುಣ್ಣಿಮೆಯಂಥ ಹಬ್ಬಗಳ ಸಂದರ್ಭಗಳಲ್ಲಿ ವಿದೇಶೀಯರನ್ನೇ ಗುರಿಮಾಡಿಕೊಂಡು ಶಾಪಿಂಗ್ ಫೆಸ್ಟಿವಲ್‌ಗಳನ್ನು ಏರ್ಪಡಿಸಿದರೆ ಪ್ರವಾಸಿಗರು ನಮ್ಮ ದೇಶದ ಸಂಸ್ಕೃತಿಯನ್ನೂ ಅರಿಯುವಂತಾಗುತ್ತದೆ.
ವಿದೇಶಿ ಪಾಸ್‌ಪೋರ್ಟ್ ತೋರಿಸಿದವರಿಗೆ ಕಡಿಮೆ ಜಿಎಸ್‌ಟಿ ದರಗಳಲ್ಲಿ ವಸ್ತುಗಳನ್ನು ಮಾರಾಟಮಾಡಬಹುದಾಗಿದೆ. ಕರಕುಶಲ ವಸ್ತುಗಳು, ಹ್ಯಾಂಡ್ ಲೂಂ ಬಟ್ಟೆಗಳು, ಪಾದರಕ್ಷೆಗಳು ಮುಂತಾದ ವಸ್ತುಗಳಿಗೆ ಟ್ಯಾಕ್ಸ್ ವಿಧಿಸದಿರುವುದು ಉತ್ತಮ. ವಿಶೇಷ ಮಾಲ್‌ಗಳಲ್ಲಿ ಮಾರಾಟವಾಗುವ ಎಲ್ಲ ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸಲು ಏಜೆನ್ಸಿಯೊಂದನ್ನು ನೇಮಕಮಾಡಬೇಕು. ಶಾಪಿಂಗ್ ಟೂರಿಸಂ ನಗರಗಳಲ್ಲಿ ಕೇಂದ್ರೀಕೃತವಾಗದಂತೆ ಎಚ್ಚರಿಕೆ ವಹಿಸಬಹುದಾಗಿದೆ.
ಕೇವಲ ಸಾಂಪ್ರದಾಯಿಕ ಟೂರಿಸಂನ ಮೇಲೆಯೇ ಹೆಚ್ಚು ಅವಲಂಬಿಸುವ ಬದಲು ನಮ್ಮ ದೇಶವು ಶಾಪಿಂಗ್ ಟೂರಿಸಂನತ್ತ ಗಮನ ಹರಿಸಿದರೆ ಭಾರತದ ಸಾಂಪ್ರದಾಯಿಕ ಉತ್ಪನ್ನಗಳು ಹೆಚ್ಚು ಹೆಚ್ಚು ಮಾರಾಟವಾಗಿ ಗ್ರಾಮೀಣ ಜನರ ಆದಾಯ ಹೆಚ್ಚುತ್ತದೆ. ದೇಶಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿದಾಗ ದೇಶದ ಆರ್ಥಿಕತೆಯೂ ಅಭಿವೃದ್ಧಿಗೊಳ್ಳುತ್ತದೆ.
*****