Monday, August 24, 2026
Monday, August 24, 2026

ಇಕೋ-ಟೂರಿಸಂ: ಪ್ರವಾಸೋದ್ಯಮದ ಹಸಿರು ಹಾದಿ..!

ಇಕೋ-ಟೂರಿಸಂನ ಪೂರ್ಣ ಪ್ರಯೋಜನ ಪಡೆಯಲು ಪ್ರವಾಸಿಗರು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಪ್ರವಾಸೋದ್ಯಮವು ವ್ಯಾಪಾರೀಕರಣಗೊಂಡಂತೆ ಪ್ಲಾಸ್ಟಿಕ್ ಮಾಲಿನ್ಯ, ಸಂಪನ್ಮೂಲಗಳ ದುರ್ಬಳಕೆ ಮತ್ತು ಅತಿಯಾದ ಜನಸಂದಣಿಯಿಂದಾಗಿ ಸುಂದರ ತಾಣಗಳು ಇಂದು ಅಳಿವಿನ ಅಂಚಿನಲ್ಲಿವೆ. ಇವುಗಳೆಲ್ಲವೂ ಪ್ರತ್ಯೇಕ ಸಮಸ್ಯೆಗಳಷ್ಟೇ ಅಲ್ಲ; ಅವು ದಿನೇದಿನೇ ಉಲ್ಬಣಿಸುತ್ತಿರುವ ಪರಿಸರ ಬಿಕ್ಕಟ್ಟಿನ ಸಂಕೇತಗಳಾಗಿವೆ.

  • ಹೊಸ್ಮನೆ ಮುತ್ತು

ಪ್ರವಾಸೋದ್ಯಮವೆಂದರೆ ಸಾಮಾನ್ಯವಾಗಿ ನಮ್ಮ ಕಣ್ಮುಂದೆ ಮೂಡುವ ಚಿತ್ರಗಳೆಂದರೆ ಇತಿಹಾಸ ಪ್ರಸಿದ್ಧ ಅರಮನೆಗಳು, ವೈಭವದ ಶಿಲ್ಪಕಲೆಗಳು ಹಾಗೂ ಹಸಿರು ಕಾಡು-ಬೆಟ್ಟ, ನದಿ ತೀರಗಳ ನಯನ ಮನೋಹರ ದೃಶ್ಯಗಳು. ನಿಸರ್ಗದ ಈ ಅನನ್ಯ ಸೌಂದರ್ಯವು ಕೇವಲ ಕಣ್ಣಿಗೆ ಹಬ್ಬವಷ್ಟೇ ಅಲ್ಲ; ಇಂದಿನ ಯಾಂತ್ರಿಕ ಜೀವನದ ಜಂಜಾಟದಲ್ಲಿ ದಣಿದ ಮನಸ್ಸಿಗೆ ಸಂಜೀವಿನಿಯಿದ್ದಂತೆ. ಆದರೆ, ನೆಮ್ಮದಿಯನ್ನರಸಿ ಪ್ರಕೃತಿಯ ಮಡಿಲು ಸೇರುವ ನಾವು, ಅರಿಯದೆಯೇ ಅದರ ನಾಶಕ್ಕೆ ಕಾರಣವಾಗುತ್ತಿರುವುದು ಇಂದಿನ ಕಹಿ ವಾಸ್ತವ. ಅತಿಥಿಗಳಾಗಿ ಹೋದ ನಾವು ಆ ಪ್ರಕೃತಿಯ ಮೇಲೆ ಯಾವುದೇ 'ಗಾಯದ ಗುರುತು' ಮೂಡಿಸದೆ ಅದರ ಸೌಂದರ್ಯವನ್ನು ಸವಿಯುವುದು ಹೇಗೆ? ಈ ಜ್ವಲಂತ ಪ್ರಶ್ನೆಗೆ ಪರಿಹಾರವಾಗಿ ನಮ್ಮ ಮುಂದಿದೆ ಒಂದು ವಿಶಿಷ್ಟ ಪಯಣ; ಅದೇ ʻಪರಿಸರ ಪ್ರವಾಸೋದ್ಯಮ ಅಥವಾ ಇಕೋ-ಟೂರಿಸಂ (Eco-Tourism).ʼ

ಪರಿಸರ ಪ್ರವಾಸೋದ್ಯಮ ಅಥವಾ ಇಕೋ-ಟೂರಿಸಂ ಎನ್ನುವುದು ಕೇವಲ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಯಲ್ಲ; ಅದಕ್ಕಿಂತ ಮಿಗಿಲಾಗಿ ಅದೊಂದು ಜವಾಬ್ದಾರಿಯುತ ಪಯಣ. ಇದು ಪ್ರಕೃತಿಯೊಂದಿಗೆ ಬೆರೆಯುವ, ಅದನ್ನು ಆಳವಾಗಿ ಅರ್ಥೈಸಿಕೊಳ್ಳುವ ಮತ್ತು ಅದರ ಸಂರಕ್ಷಣೆಗೆ ಕೈಜೋಡಿಸುವ ಪ್ರಕ್ರಿಯೆಯಾಗಿದೆ. ವಿಶ್ವ ಪ್ರವಾಸೋದ್ಯಮ ಸಂಘಟನೆ(UNWTO), 'ಪರಿಸರದ ನೈಜತೆಗೆ ಧಕ್ಕೆ ತರದೇ, ಸ್ಥಳೀಯ ಸಂಸ್ಕೃತಿಯನ್ನು ಆಸ್ವಾದಿಸುತ್ತಾ ಅವುಗಳನ್ನು ಗೌರವಿಸುವುದು ಮತ್ತು ಸಂರಕ್ಷಿಸುವುದು ಈ ಪ್ರವಾಸೋದ್ಯಮದ ಮೂಲ ಆಶಯ' ಎನ್ನುತ್ತದೆ. ಸಾಂಪ್ರದಾಯಿಕ ಪ್ರವಾಸೋದ್ಯಮವು ಐಷಾರಾಮಿ ಹೊಟೇಲ್‌ಗಳು ಮತ್ತು ನಗರಗಳ ಅಬ್ಬರಕ್ಕೆ ಒತ್ತು ನೀಡಿದರೆ, ಇಕೋ-ಟೂರಿಸಂ ನಮ್ಮನ್ನು ಕಾಡಿನ ಹಸಿರು, ಹಕ್ಕಿಗಳ ಚಿಲಿಪಿಲಿ ಮತ್ತು ಶುದ್ಧ ಗಾಳಿಯ ಸನಿಹಕ್ಕೆ ಕೊಂಡೊಯ್ಯುತ್ತದೆ. ಇಲ್ಲಿ ಪ್ರವಾಸಿಗನು ಕೇವಲ ಪ್ರೇಕ್ಷಕನಾಗಿರದೆ, ಪರಿಸರದ ಪಾಲುದಾರನಾಗುತ್ತಾನೆ. ತನ್ನ ಭೇಟಿಯಿಂದ ಆ ಪ್ರದೇಶದ ಜೀವವೈವಿಧ್ಯತೆಗೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸುವುದು ಈ ಪದ್ಧತಿಯ ವಿಶೇಷ. 1980ರ ದಶಕದಲ್ಲಿ ಮೊಳಕೆಯೊಡೆದ ಈ 'ಹಸಿರು ಪರಿಕಲ್ಪನೆ' ಇಂದು ಜಗತ್ತಿನಾದ್ಯಂತ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕನ್ನೇ ತೋರಿದೆ.

ಇದನ್ನೂ ಓದಿ: ಎಲ್ಲರಿಗೂ ಲಾಭದಾಯಕವಾಗಿರುವ ಶಾಪಿಂಗ್ ಟೂರಿಸಂ

ಪರಿಸರ ಪ್ರವಾಸೋದ್ಯಮವು ಕೇವಲ ಮನುಷ್ಯನ ಮನರಂಜನೆಗೆ ಸೀಮಿತವಾಗಿರದೆ, ಪ್ರಕೃತಿ ಮತ್ತು ಸಮುದಾಯದ ಏಳಿಗೆಗೆ ಪೂರಕವಾಗಿದೆ. ಇದರ ಪ್ರಮುಖ ಅನುಕೂಲವೆಂದರೆ ಜೀವವೈವಿಧ್ಯದ ಸಂರಕ್ಷಣೆ. ಪ್ರವಾಸೋದ್ಯಮದಿಂದ ಬರುವ ಆದಾಯವನ್ನು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಧಾಮಗಳ ನಿರ್ವಹಣೆಗೆ ಬಳಸುವುದರಿಂದ, ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಜತೆಗೆ ಇದು ಸ್ಥಳೀಯ ಸಮುದಾಯಗಳ ಸಬಲೀಕರಣಕ್ಕೆ ದಾರಿಯಾಗುತ್ತದೆ. ಪ್ರವಾಸಿಗರು ಸ್ಥಳೀಯ ಹೋಂ-ಸ್ಟೇಗಳಲ್ಲಿ ಉಳಿಯುವುದು, ಅಲ್ಲಿನ ಸ್ಥಳೀಯ ಉಡುಪು, ಕರಕುಶಲ ವಸ್ತುಗಳು ಹಾಗೂ ಆಹಾರ ಪದಾರ್ಥಗಳನ್ನು ಖರೀದಿಸುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ. ಇದರಿಂದಾಗಿ ಸ್ಥಳೀಯರೇ ಪರಿಸರ ಸಂರಕ್ಷಣೆಯ ಕಾವಲುಗಾರರಾಗುತ್ತಾರೆ.

ಭಾರತದ ಮಧ್ಯಪ್ರದೇಶದ ಖಾರಿ ಗ್ರಾಮದಂಥ ಸ್ಥಳಗಳು ಮತ್ತು ಆಫ್ರಿಕಾದ ವನ್ಯಜೀವಿ ಸಂರಕ್ಷಣಾ ಕೇಂದ್ರಗಳು ಈ ಮಾದರಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇದಕ್ಕಿಂತ ಮಿಗಿಲಾಗಿ, ಇಕೋ-ಟೂರಿಸಂ ಎಂಬುದು ಪ್ರಕೃತಿಯೊಂದಿಗೆ ಬೆರೆಯುವ ಮೂಲಕ ನಾವು ಪಡೆಯುವ ಶೈಕ್ಷಣಿಕ ಅನುಭವವಾಗಿದೆ. ಕಾಡು-ಮೇಡುಗಳ ಒಡನಾಟದಲ್ಲಿ ಕಾಲ ಕಳೆಯುವಾಗ ನಮಗೆ ಪರಿಸರದ ಸೂಕ್ಷ್ಮತೆ ಮತ್ತು ಅದರ ಅಳಿವು-ಉಳಿವಿನ ಅನಿವಾರ್ಯತೆ ನೇರವಾಗಿ ಮನವರಿಕೆಯಾಗುತ್ತದೆ.

Untitled design (8)

ಇಕೋ-ಟೂರಿಸಂನ ಪೂರ್ಣ ಪ್ರಯೋಜನ ಪಡೆಯಲು ಪ್ರವಾಸಿಗರು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಪ್ರವಾಸೋದ್ಯಮವು ವ್ಯಾಪಾರೀಕರಣಗೊಂಡಂತೆ ಪ್ಲಾಸ್ಟಿಕ್ ಮಾಲಿನ್ಯ, ಸಂಪನ್ಮೂಲಗಳ ದುರ್ಬಳಕೆ ಮತ್ತು ಅತಿಯಾದ ಜನಸಂದಣಿಯಿಂದಾಗಿ ಸುಂದರ ತಾಣಗಳು ಇಂದು ಅಳಿವಿನ ಅಂಚಿನಲ್ಲಿವೆ. ಇವುಗಳೆಲ್ಲವೂ ಪ್ರತ್ಯೇಕ ಸಮಸ್ಯೆಗಳಷ್ಟೇ ಅಲ್ಲ; ಅವು ದಿನೇದಿನೇ ಉಲ್ಬಣಿಸುತ್ತಿರುವ ಪರಿಸರ ಬಿಕ್ಕಟ್ಟಿನ ಸಂಕೇತಗಳಾಗಿವೆ. (All these are not just isolated concerns but a growing ecological crisis)

ಈ ಹಿನ್ನೆಲೆಯಲ್ಲಿ, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವಾಗ ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವುದು ಮತ್ತು ಪರಿಸರಕ್ಕೆ ಪೂರಕವಾದ ಸೌರಶಕ್ತಿ ಅಥವಾ ಮಳೆನೀರು ಕೊಯ್ಲು ಅಳವಡಿಸಿಕೊಂಡಿರುವ ಇಕೋ-ಫ್ರೆಂಡ್ಲಿ ವಸತಿಗೃಹಗಳನ್ನು ಆಯ್ದುಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಲಿ. ಪ್ರವಾಸದ ಅವಧಿಯಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಸೇರಿದಂತೆ ಯಾವುದೇ ತ್ಯಾಜ್ಯವನ್ನು ಅಲ್ಲಿಯೇ ಬಿಡದೆ ಮರಳಿ ತಂದು ನಿಗದಿತ ಕಸದ ಬುಟ್ಟಿಗೆ ಹಾಕಬೇಕು; ಅಜಾಗರೂಕತೆಯಿಂದ ಎಸೆಯುವ ಕಸವು ವನ್ಯಜೀವಿಗಳ ಜೀವಕ್ಕೆ ಕುತ್ತು ತರಬಲ್ಲದು. ವನ್ಯಜೀವಿಗಳನ್ನು ವೀಕ್ಷಿಸುವಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಮತ್ತು ಅವುಗಳಿಗೆ ಆಹಾರ ನೀಡಿ ನೈಸರ್ಗಿಕ ಜೀವನಕ್ರಮಕ್ಕೆ ಧಕ್ಕೆ ತರದಂತೆ ಎಚ್ಚರವಹಿಸುವುದು ಕ್ಷೇಮ. ಕಾಡಿನ ಶಾಂತತೆಯನ್ನು ಭಂಗಗೊಳಿಸುವ ಕಿರುಚಾಟ ಅಥವಾ ಜೋರಾದ ಸಂಗೀತವು ಪಕ್ಷಿ-ಪ್ರಾಣಿಗಳಿಗೆ ತೊಂದರೆ ನೀಡುವುದರಿಂದ, ಮೌನಕ್ಕೆ ಹೆಚ್ಚಿನ ಒತ್ತು ನೀಡಬೇಕು. ನೆನಪಿಗಾಗಿ ಸಸ್ಯ, ಹೂವು ಅಥವಾ ಕಲ್ಲುಗಳನ್ನು ಸಂಗ್ರಹಿಸಿ ತರುವುದು ಹಾಗೂ ಬಂಡೆಗಳ ಮೇಲೆ ಹೆಸರು ಕೆತ್ತುವುದು ಕಾನೂನುಬಾಹಿರ ಮತ್ತು ಪರಿಸರ ವಿರೋಧಿ ಕೃತ್ಯಗಳಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಕಾಡ್ಗಿಚ್ಚಿಗೆ ಕಾರಣವಾಗುವ ಧೂಮಪಾನ ಅಥವಾ ಬೆಂಕಿ ಹಚ್ಚುವ ಚಟುವಟಿಕೆಗಳಿಂದ ದೂರವಿರುವ ಮೂಲಕ ನಾವು ಮುಂದಿನ ಪೀಳಿಗೆಗೆ ಸುಸ್ಥಿರ ಪರಿಸರವನ್ನು ಹಸ್ತಾಂತರಿಸುವ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕಿದೆ.

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಪರಿಸರ ಪ್ರವಾಸೋದ್ಯಮವು ಗಣನೀಯ ಬೆಳವಣಿಗೆಯನ್ನು ಕಂಡಿದ್ದು, ಇದು ರಾಜ್ಯದ ಆರ್ಥಿಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಉಳಿವಿಗೆ ದೊಡ್ಡ ಕೊಡುಗೆ ನೀಡುತ್ತಿದೆ. ಪಶ್ಚಿಮ ಘಟ್ಟಗಳ ದಟ್ಟ ಅರಣ್ಯಗಳು, ಕುದುರೆಮುಖ, ಆಗುಂಬೆ, ದಾಂಡೇಲಿ ಮತ್ತು ಭದ್ರಾ ವನ್ಯಜೀವಿ ಅಭಯಾರಣ್ಯಗಳು ಪ್ರಕೃತಿ ಪ್ರಿಯರ ಪಾಲಿನ ಸ್ವರ್ಗಗಳಾಗಿವೆ. ಕೊಡಗು ಮತ್ತು ಚಿಕ್ಕಮಗಳೂರಿನ ಕಾಫಿ ತೋಟಗಳ ಮಧ್ಯೆ ಇರುವ ಕೆಲವು ಹೋಮ್‌ಸ್ಟೇಗಳು ಪ್ರವಾಸಿಗರಿಗೆ ಮಣ್ಣಿನ ವಾಸನೆ ಮತ್ತು ಸ್ಥಳೀಯ ಆತಿಥ್ಯದ ಅನನ್ಯ ಅನುಭವವನ್ನು ನೀಡುತ್ತಿವೆ. ಬಂಡೀಪುರ ಮತ್ತು ನಾಗರಹೊಳೆಯಂತಹ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕೈಗೊಳ್ಳುವ ಸಫಾರಿಗಳು ಕೇವಲ ವನ್ಯಜೀವಿ ವೀಕ್ಷಣೆಗೆ ಸೀಮಿತವಾಗದೆ, ಅರಣ್ಯ ಸಂರಕ್ಷಣೆಗೆ ನಾವು ನೀಡುವ ಬೆಂಬಲವೂ ಆಗಿದೆ.

ಪರಿಸರ ಪ್ರವಾಸೋದ್ಯಮದ ಹಾದಿಯಲ್ಲಿ ಕೆಲವು ಸವಾಲುಗಳಿವೆ ಎಂಬುದು ಕಹಿ ಸತ್ಯ. ಅತಿಯಾದ ಪ್ರವಾಸೋದ್ಯಮವು (Over tourism) ಸುಂದರ ತಾಣಗಳ ನೈಸರ್ಗಿಕ ಸಮತೋಲನವನ್ನು ಹಾಳುಮಾಡುತ್ತಿವೆ. ಇದಕ್ಕೆ ಥೈಲ್ಯಾಂಡ್‌ನ ಮಾಯಾ ಕೊಲ್ಲಿಯ ಹವಳದ ದಿಬ್ಬಗಳ ನಾಶವೇ ಸಾಕ್ಷಿ. ಈ ಸಮಸ್ಯೆಗೆ ಪರಿಹಾರವಾಗಿ ಈಗ 'ಪುನರುತ್ಪಾದಕ ಪ್ರವಾಸೋದ್ಯಮ' (Regenerative Tourism) ಎಂಬ ಪರಿಕಲ್ಪನೆ ಮೂಡಿಬಂದಿದೆ ಇದರರ್ಥ ನಾವು ಹೋದ ಸ್ಥಳವನ್ನು ನಾವು ಹೋಗುವ ಮೊದಲಿನ ಸ್ಥಿತಿಗಿಂತಲೂ ಉತ್ತಮಗೊಳಿಸಿ ಬರುವುದು. ಅಲ್ಲಿ ಗಿಡ ನೆಡುವುದು ಅಥವಾ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಪ್ರಕೃತಿಗೆ ಮರಳಿ ಕೊಡುಗೆ ನೀಡುವುದೇ ಇದರ ಉದ್ದೇಶ. ಒಬ್ಬ ಜವಾಬ್ದಾರಿಯುತ ಪ್ರವಾಸಿಗನಾಗಿ ‘ಲೀವ್ ನೋ ಟ್ರೇಸ್’ (Leave No Trace) ಅಥವಾ ‘ಕೇವಲ ಹೆಜ್ಜೆಗುರುತುಗಳನ್ನು ಮಾತ್ರ ಬಿಟ್ಟು ಬನ್ನಿ’ ಎಂಬ ತತ್ವವನ್ನು ಪಾಲಿಸಬೇಕು. ಪ್ಲಾಸ್ಟಿಕ್ ಬಳಸದಿರುವುದು, ಶಬ್ದ ಮಾಲಿನ್ಯ ಮಾಡದಿರುವುದು ಮತ್ತು ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವುದು ಇಲ್ಲಿನ ಆದ್ಯತೆಗಳಾಗಿವೆ. ಒಟ್ಟಾರೆಯಾಗಿ, ಪರಿಸರ ಪ್ರವಾಸೋದ್ಯಮವು ಭೂಮಿಯ ಜೀವಾಳವನ್ನು ಉಳಿಸುತ್ತಾ ನಮಗೆ ಶಾಂತಿ ಮತ್ತು ಹೊಸ ಚೈತನ್ಯವನ್ನು ನೀಡುವ ಭವಿಷ್ಯದ ದಾರಿಯಾಗಿದೆ.

ಪರಿಸರ ಪ್ರವಾಸೋದ್ಯಮವು ಕೇವಲ ಒಂದು ಪ್ರವಾಸಿ ಚಟುವಟಿಕೆಯಲ್ಲ, ಬದಲಾಗಿ ಪ್ರಕೃತಿಯ ಸೊಬಗನ್ನು ಸವಿಯುತ್ತಲೇ ಅದರ ಸಂರಕ್ಷಣೆಗೆ ಕೈಜೋಡಿಸುವ ಜವಾಬ್ದಾರಿಯುತ ಜೀವನಶೈಲಿಯಾಗಿದೆ. ಮುಂದಿನ ಬಾರಿ ನೀವು ಪ್ರವಾಸವನ್ನು ಯೋಜಿಸುವಾಗ, ಕೇವಲ ಮನರಂಜನೆಗಾಗಿ ಅಲ್ಲದೆ ಪರಿಸರದೊಂದಿಗೆ ಅವಿನಾಭಾವ ಸಂಬಂಧ ಬೆಳೆಸಲು ಇಕೋ- ಟ್ರಿಪ್ ಯೋಜಿಸಿ. ಪ್ರಕೃತಿಯ ಮಡಿಲಿಗೆ ಜವಾಬ್ದಾರಿಯುತ ಹೆಜ್ಜೆ ಇರಿಸಿ ನಿಮ್ಮ ಮನಸ್ಸು ಹಸಿರಾಗಿ, ಭೂಮಿ ಸುಸ್ಥಿರವಾಗಿರಲಿ.

Untitled design (7)

ಮಧ್ಯಪ್ರದೇಶದ ಸೀಹೋರ್ ಜಿಲ್ಲೆಯ ‘ಖಾರಿ ಗ್ರಾಮ’ವು ಸಮುದಾಯ ಆಧಾರಿತ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ಒಂದು ಅತ್ಯುತ್ತಮ ಮಾದರಿಯಾಗಿದೆ. ಇಲ್ಲಿನ ಗ್ರಾಮಸ್ಥರೇ ಪ್ರಕೃತಿಯ ಕಾವಲುಗಾರರಾಗಿದ್ದು, ಸಾಂಪ್ರದಾಯಿಕ ಮಣ್ಣಿನ ಹೋಂಸ್ಟೇಗಳು, ಸಾವಯವ ಕೃಷಿ ಮತ್ತು ಮಹಿಳಾ ಉದ್ಯಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರವಾಸೋದ್ಯಮವು ಗ್ರಾಮದ ಆರ್ಥಿಕತೆಯನ್ನು ಹಸನುಗೊಳಿಸಿದೆ. ಪ್ರವಾಸಿಗರಿಗೆ ಹಳ್ಳಿಗಾಡಿನ ನೈಜ ಅನುಭವದೊಂದಿಗೆ ಪಕ್ಷಿ ವೀಕ್ಷಣೆ, ಟ್ರೆಕ್ಕಿಂಗ್ ಮತ್ತು ಸ್ಥಳೀಯ ಕಲೆಗಳನ್ನು ಪರಿಚಯಿಸುವ ಈ ಗ್ರಾಮವು, ಪ್ರಕೃತಿ ಮತ್ತು ಮನುಷ್ಯನ ಸಹಬಾಳ್ವೆಯ ಮೂಲಕ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂಬುದನ್ನು ಜಗತ್ತಿಗೆ ತೋರಿಸಿಕೊಡುತ್ತಿದೆ.

ಅತಿಯಾದ ಪ್ರವಾಸೋದ್ಯಮದಿಂದ (Over tourism) ಉಂಟಾಗುವ ಅನಾಹುತಕ್ಕೆ ಥೈಲ್ಯಾಂಡ್‌ನ ‘ಮಾಯಾ ಕೊಲ್ಲಿ’(Maya Bay) ಒಂದು ಎಚ್ಚರಿಕೆಯ ಪಾಠವಾಗಿದೆ. ತನ್ನ ಸ್ಫಟಿಕದಂತಹ ನೀಲಿ ನೀರು ಮತ್ತು ಸುತ್ತುವರಿದ ಸುಣ್ಣದ ಕಲ್ಲಿನ ಬೆಟ್ಟಗಳಿಂದಾಗಿ ವಿಶ್ವವಿಖ್ಯಾತವಾಗಿತ್ತು. 'ದಿ ಬೀಚ್' (The Beach) ಎಂಬ ಹಾಲಿವುಡ್ ಸಿನಿಮಾದಿಂದಾಗಿ ಇದು ಜಾಗತಿಕ ಪ್ರವಾಸಿ ತಾಣವಾಗಿ ಮಾರ್ಪಟ್ಟಿತು. ಪ್ರತಿದಿನ ಸಾವಿರಾರು ಪ್ರವಾಸಿಗರು ಮತ್ತು ನೂರಾರು ಮೋಟಾರ್ ಬೋಟ್‌ಗಳು ಈ ಪುಟ್ಟ ಕೊಲ್ಲಿಗೆ ಬರಲಾರಂಭಿಸಿದವು. ಇದರಿಂದ ಸಮಸ್ಯೆಗಳು ಎದುರಾದವು. ಪ್ರವಾಸಿ ಬೋಟ್‌ಗಳ ಲಂಗರು, ಬೋಟ್‌ಗಳಿಂದ ಹೊರಬರುವ ತೈಲ ಮತ್ತು ಸನ್‌ಸ್ಕ್ರೀನ್ ರಾಸಾಯನಿಕಗಳಿಂದಾಗಿ ಇಲ್ಲಿನ ಸುಮಾರು 80% ರಷ್ಟು ಹವಳದ ದಿಬ್ಬಗಳು ನಾಶವಾಗಿದ್ದವು. ಈ ಗಂಭೀರ ಪರಿಸ್ಥಿತಿಯನ್ನು ಅರಿತ ಸರ್ಕಾರವು ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ, ಪ್ರಕೃತಿ ತಾನಾಗಿಯೇ ಚೇತರಿಸಿಕೊಳ್ಳಲು ಅವಕಾಶ ನೀಡಿತು. ನಾಲ್ಕು ವರ್ಷಗಳ ಕಾಲ ನಡೆದ ಈ ಪುನಶ್ಚೇತನ ಪ್ರಕ್ರಿಯೆಯಿಂದಾಗಿ ಹವಳಗಳು, ಶಾರ್ಕ್‌ಗಳು ಮತ್ತೆ ಈ ತಾಣಕ್ಕೆ ಮರಳಿವೆ. ಪ್ರಕೃತಿಯನ್ನು ಕೇವಲ ಬಳಸಿಕೊಳ್ಳುವುದಲ್ಲದೆ, ಅದನ್ನು ಮೊದಲಿನ ಸ್ಥಿತಿಗೆ ತರುವ 'ಪುನರುತ್ಪಾದಕ ಪ್ರವಾಸೋದ್ಯಮ' (Regenerative Tourism) ಇಂದಿನ ಅನಿವಾರ್ಯತೆ ಎಂಬುದನ್ನು ಇದು ಸಾಬೀತುಪಡಿಸಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?