ಕೋಟೆಯ ಕಲ್ಲುಗಳಲ್ಲಿ ಬೆಂಗಳೂರಿನ ಇತಿಹಾಸ
ಹೈದರಾಲಿ ಆರಂಭಿಸಿದ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ ನಿರ್ಮಾಣ ಟಿಪ್ಪು ಕಾಲದಲ್ಲಿ ಪೂರ್ಣಗೊಂಡಿತು. ನಂತರ ಬ್ರಿಟಿಷರು ಇದನ್ನು ಆಡಳಿತ ಕಚೇರಿಯಾಗಿಯೂ ಬಳಸಿದರು. ಈ ಪ್ರದೇಶದ ಇತಿಹಾಸ ನೆಲದಡಿಯಲ್ಲೂ ಅಡಗಿದೆ. 2012ರಲ್ಲಿ ಕೆ.ಆರ್. ಮಾರ್ಕೆಟ್ ಬಳಿ ಮೆಟ್ರೋ ಭೂಗತ ಕಾಮಗಾರಿಯ ವೇಳೆ ಎರಡು ಬೃಹತ್ ಹಳೆಯ ಫಿರಂಗಿಗಳು ಹಾಗೂ ಫಿರಂಗಿ ಗುಂಡು ಪತ್ತೆಯಾಗಿದ್ದವು. 2015ರಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜು ಆವರಣದಲ್ಲಿ ಮತ್ತೊಂದು ಹಳೆಯ ಫಿರಂಗಿ ದೊರಕಿತು.
- ಕೆ. ರಾಧಾಕೃಷ್ಣ ಹೊಳ್ಳ
ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ (ರಿ.)
ಬೆಂಗಳೂರು ಇಂದು ಐಟಿ, ಮೆಟ್ರೋ ಮತ್ತು ಗಗನಚುಂಬಿ ಕಟ್ಟಡಗಳ ನಗರ. ಆದರೆ ಚಾಮರಾಜಪೇಟೆ–ಕೆ.ಆರ್.ಮಾರ್ಕೆಟ್–ಬೆಂಗಳೂರು ಕೋಟೆ–ಟಿಪ್ಪು ಸುಲ್ತಾನನ ಬೇಸಗೆ ಅರಮನೆ ಸುತ್ತ ಕೆಲವೇ ಕಿಲೋಮೀಟರ್ ನಡೆದರೆ, ಐದು ಶತಮಾನಗಳ ನಗರದ ಇತಿಹಾಸ ನಮ್ಮ ಮುಂದೆ ತೆರೆದುಕೊಳ್ಳುತ್ತದೆ.
1537ರಲ್ಲಿ ಕೆಂಪೇಗೌಡರು ನಿರ್ಮಿಸಿದ ಮಣ್ಣಿನ ಕೋಟೆಯನ್ನು ನಂತರ ಹೈದರಾಲಿ ಕಲ್ಲಿನ ಕೋಟೆಯಾಗಿ ಬಲಪಡಿಸಿದರು. ಟಿಪ್ಪು ಸುಲ್ತಾನನ ಕಾಲದಲ್ಲಿ ಇದು ಪ್ರಮುಖ ಸೈನಿಕ ಕೇಂದ್ರವಾಯಿತು. 1791ರ ಮೂರನೇ ಆಂಗ್ಲ–ಮೈಸೂರು ಯುದ್ಧದಲ್ಲಿ ಬ್ರಿಟಿಷರು ಬೆಂಗಳೂರು ಕೋಟೆಯನ್ನು ವಶಪಡಿಸಿಕೊಂಡರು. ಇಂದು ಉಳಿದಿರುವ ದೆಹಲಿ ಗೇಟ್ ಮತ್ತು ಕೋಟೆಯ ಗೋಡೆಗಳ ಕೆಲವು ಭಾಗಗಳು ಆ ಕಾಲದ ನೆನಪು.
ಇದನ್ನೂ ಓದಿ: ಇಂಧನ ಸ್ವಾವಲಂಬನೆಯ ಭವಿಷ್ಯಕ್ಕೆ ಇವಿ ಅಗತ್ಯ
ಕೋಟೆಯ ಪಕ್ಕದ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಗರುಡಗಂಭ ಮತ್ತೊಂದು ಕುತೂಹಲಕಾರಿ ಇತಿಹಾಸವನ್ನು ಹೇಳುತ್ತದೆ. ದೇವಾಲಯದ ಅಧಿಕೃತ ಇತಿಹಾಸದಲ್ಲಿ ದಾಖಲಾಗಿರುವ ಪರಂಪರೆಯ ಪ್ರಕಾರ, 1791ರ ಯುದ್ಧದ ವೇಳೆ ಟಿಪ್ಪು ಅರಮನೆಯತ್ತ ಹಾರಿಸಲಾದ ಗುಂಡು ಗರುಡಗಂಭಕ್ಕೆ ಬಡಿದು ಕಲ್ಲಿನ ಸ್ತಂಭದಲ್ಲಿ ಬಿರುಕು ಮೂಡಿಸಿತು ಎನ್ನಲಾಗುತ್ತದೆ.

ಅಲ್ಲಿಂದ ಕೆಲವೇ ಹೆಜ್ಜೆಗಳಲ್ಲಿ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ ಇದೆ. ಹೈದರಾಲಿ ಆರಂಭಿಸಿದ ಇದರ ನಿರ್ಮಾಣ ಟಿಪ್ಪು ಕಾಲದಲ್ಲಿ ಪೂರ್ಣಗೊಂಡಿತು. ನಂತರ ಬ್ರಿಟಿಷರು ಇದನ್ನು ಆಡಳಿತ ಕಚೇರಿಯಾಗಿಯೂ ಬಳಸಿದರು.
ಈ ಪ್ರದೇಶದ ಇತಿಹಾಸ ನೆಲದಡಿಯಲ್ಲೂ ಅಡಗಿದೆ. 2012ರಲ್ಲಿ ಕೆ.ಆರ್. ಮಾರ್ಕೆಟ್ ಬಳಿ ಮೆಟ್ರೋ ಭೂಗತ ಕಾಮಗಾರಿಯ ವೇಳೆ ಎರಡು ಬೃಹತ್ ಹಳೆಯ ಫಿರಂಗಿಗಳು ಹಾಗೂ ಫಿರಂಗಿ ಗುಂಡು ಪತ್ತೆಯಾಗಿದ್ದವು. 2015ರಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜು ಆವರಣದಲ್ಲಿ ಮತ್ತೊಂದು ಹಳೆಯ ಫಿರಂಗಿ ದೊರಕಿತು.
ಕಲಾಸಿಪಾಳ್ಯ ಪ್ರದೇಶದಲ್ಲಿ ಉಳಿದಿರುವ ಹಳೆಯ ಶಸ್ತ್ರಾಗಾರವೂ ಅಂದಿನ ಸೈನಿಕ ಬೆಂಗಳೂರಿನ ನೆನಪು. ಮೈಸೂರು ಸೇನೆಯ ರಾಕೆಟ್ ತಂತ್ರಜ್ಞಾನದ ಇತಿಹಾಸವನ್ನೂ ಇದರೊಂದಿಗೆ ಪ್ರವಾಸಿಗರಿಗೆ ಪರಿಚಯಿಸಬಹುದು.
ಇಂದು ಮೆಟ್ರೋ, ಮಾರುಕಟ್ಟೆ, ಆಸ್ಪತ್ರೆ ಮತ್ತು ವಾಹನ ದಟ್ಟಣೆಯ ನಡುವೆ ಈ ಇತಿಹಾಸ ಚದುರಿಹೋಗಿದೆ. ಬೆಂಗಳೂರು ಕೋಟೆ–ವೆಂಕಟರಮಣಸ್ವಾಮಿ ದೇವಾಲಯ–ಗರುಡಗಂಭ–ಟಿಪ್ಪು ಅರಮನೆ–ಶಸ್ತ್ರಾಗಾರ–ಚಾಮರಾಜಪೇಟೆಗಳನ್ನು ಜೋಡಿಸಿ ಎರಡು ಗಂಟೆಗಳ ಹೆರಿಟೇಜ್ ವಾಕ್ ರೂಪಿಸಬಹುದು.

ಕೋಲ್ಕತ್ತಾ ತನ್ನ ವಸಾಹತು ಕಟ್ಟಡಗಳನ್ನು, ರಾಜಸ್ಥಾನ ತನ್ನ ಕೋಟೆ–ಅರಮನೆಗಳನ್ನು ಪ್ರವಾಸೋದ್ಯಮದ ಆಕರ್ಷಣೆಯನ್ನಾಗಿ ಮಾಡಿಕೊಂಡಂತೆ, ಬೆಂಗಳೂರೂ ತನ್ನ ಕೆಂಪೇಗೌಡ–ಒಡೆಯರ್–ಹೈದರಾಲಿ–ಟಿಪ್ಪು–ಬ್ರಿಟಿಷ್ ಕಾಲದ ಇತಿಹಾಸವನ್ನು ಜಗತ್ತಿಗೆ ಪರಿಚಯಿಸಬೇಕು.
ಬೆಂಗಳೂರಿನ ಇತಿಹಾಸ ಕೇವಲ ಪುಸ್ತಕದಲ್ಲಿಲ್ಲ; ಕೋಟೆಯ ಕಲ್ಲಿನಲ್ಲಿ, ಗರುಡಗಂಭದ ಬಿರುಕಿನಲ್ಲಿ, ಅರಮನೆಯ ಮರದ ಕಂಬಗಳಲ್ಲಿ ಮತ್ತು ನಾವು ನಡೆಯುವ ರಸ್ತೆಯ ಕೆಳಗಿನ ಮಣ್ಣಿನಲ್ಲೂ ಅಡಗಿದೆ.