Tuesday, October 6, 2026
Tuesday, October 6, 2026

ಮೆಮರೀಸ್ ಆಫ್ ಬಾರ್ಸಾ

ಸ್ಪೇನ್ ದೇಶದಲ್ಲಿ ಸ್ಪ್ಯಾನಿಷ್ ಹೊರತಾದ ಭಾಷೆಗಳೂ ಇವೆಯಂತೆ. ಇರುವ ನಾಲ್ಕು ಭಾಷಿಕರ ನಡುವೆ ಜಗಳವಾಗಿ, ಪ್ರತ್ಯೇಕ ದೇಶ ಬೇಡುವ ಮಟ್ಟಕ್ಕೆ ಹೋರಾಟವಾಗುತ್ತದಂತೆ. ಅಂತದ್ದರಲ್ಲಿ ಅಷ್ಟೊಂದು ಭಾಷೆಗಳನ್ನು ಹೊಂದಿರುವ ಭಾರತ ಅದ್ಹೇಗೆ ಒಂದು ರಾಷ್ಟ್ರವಾಗಿ ಉಳಿದಿದೆ?!ʼ ಎಂಬದು ಸ್ಪೇನಿನ ಜನರಿಗೊಂದು ಅಚ್ಚರಿಯ ವಿಷಯವಂತೆ!

  • ವಾಣಿ ಭಟ್ಟ, ಹಂಡ್ರಮನೆ

--

ಲೇಖಕರು: ರಂಗಸ್ವಾಮಿ ಮೂಕನಳ್ಳಿ

ಬೆಲೆ: ₹160/-

ಪ್ರಕಾಶಕರು: ವೀರಲೋಕ ಪ್ರಕಾಶನ

--

‘ಮೆಮರೀಸ್ ಆಫ್ ಬಾರ್ಸಾ’ ಒಂದು ಅನುಭವ ಕಥನ. 17 ವರ್ಷಗಳ ಕಾಲ ಸ್ಪೇನಿನ ಬಾರ್ಸಿಲೋನಾದಲ್ಲಿ ನೆಲೆಸಿದ ಅನುಭವಗಳನ್ನು ಲೇಖಕರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ವಿದೇಶದಲ್ಲಿ ನೆಲೆಸುವುದೆಂದರೆ ಅಲ್ಲಿನ ಸಮಾಜದಲ್ಲಿ ಬೆರೆತು, ಅಲ್ಲಿನ ನಾಗರಿಕರಲ್ಲಿ ಒಬ್ಬರಾಗಿ ಬದುಕಬೇಕಾಗುತ್ತದೆ. ಪ್ರವಾಸಕ್ಕೆಂದು ಒಂದೆರಡು ದಿನ ಹೋದಾಗ ಕಾಣದ ವಿಭಿನ್ನ ಒಳನೋಟಗಳು ನಮಗಿಲ್ಲಿ ದೊರೆಯುತ್ತವೆ. ಅಲ್ಲಿನ ಸಾಮಾಜಿಕ ಜೀವನಶೈಲಿಯ ವಿವರದೊಂದಿಗೆ ಭಾರತದ ಜನಜೀವನ, ನಮ್ಮಲ್ಲಿ ಬದಲಾಗಬೇಕಾದ ಮಾನಸಿಕತೆಗಳ ಚರ್ಚೆಯೂ ಪುಸ್ತಕದಲ್ಲಿದೆ. 1992ರ ಓಲಂಪಿಕ್ಸ್ ನಡೆದ ಕ್ರೀಡಾಗ್ರಾಮದ ಉಲ್ಲೇಖವಿದೆ. ಓಲಂಪಿಕ್ಸ್ ಕ್ರೀಡಾಪಟುಗಳಿಗೆಂದು ನಿರ್ಮಿಸಿದ ಸುಸಜ್ಜಿತ ಮನೆಯೊಂದನ್ನು ಲೇಖಕರು ಕೊಂಡುಕೊಳ್ಳುತ್ತಾರೆ. ಹೀಗೆ, ಅಲ್ಲಿ ಕಳೆದ ದಿನಗಳ ಅಪರೂಪದ ಸನ್ನಿವೇಶಗಳನ್ನು 25 ಪುಟ್ಟಪುಟ್ಟ ಲೇಖನಗಳ ಮೂಲಕ ತೆರೆದಿಟ್ಟಿದ್ದಾರೆ.

ಸ್ಪ್ಯಾನಿಷ್ ಜನರ ಭಾಷಾಪ್ರೇಮ

ಸ್ಪ್ಯಾನಿಷ್ ಜನರು ಸ್ನೇಹಜೀವಗಳು. ಅವರ ಭಾಷಾಭಿಮಾನದ ಬಗ್ಗೆ ಲೇಖಕರು ಪದೇಪದೆ ಉಲ್ಲೇಖಿಸುತ್ತಾರೆ. ಹೊಸಬರು ಭಾಷೆ ಕಲಿಯಲು ಯತ್ನಿಸುವಾಗ ಅವರು ನೀಡುವ ಪ್ರೋತ್ಸಾಹ ಮೆಚ್ಚತಕ್ಕದ್ದು ಎನ್ನುತ್ತಾರೆ. ಅವರ ಭಾಷೆಯ ಕೆಲವು ಪದಗಳನ್ನು ಸರಿಯಾಗಿ ಆಡಿದರೂ ಬಹುವಾಗಿ ಮೆಚ್ಚಿ ಹುರಿದುಂಬಿಸುತ್ತಾರಂತೆ. ತಮ್ಮ ಭಾಷೆಯ ರಕ್ಷಣೆಗಾಗಿ ಸಮಿತಿಯೊಂದನ್ನು ರಚಿಸಿ, ಯಾವುದೇ ಹೊಸ ಅನ್ವೇಷಣೆಯಾದರೆ, ಹೊಸ ವಸ್ತುವೊಂದು ಉತ್ಪಾದನೆಯಾದರೆ, ಅದಕ್ಕೊಪ್ಪುವ ಸ್ಪ್ಯಾನಿಷ್ ಶಬ್ದದೊಂದಿಗೆ ಆ ವಸ್ತು ಮಾರುಕಟ್ಟೆ ಪ್ರವೇಶಿಸುತ್ತದಂತೆ. ಇದರಿಂದ ವಸ್ತು ಪರಿಚಯವಾಗುವಾಗಲೇ ಸ್ಪ್ಯಾನಿಷ್ ಪದ ಜನರ ಮನಸಲ್ಲಿ ಅಚ್ಚೊತ್ತುತ್ತದೆ. ಇದನ್ನೋದುವಾಗ, ಆಂಗ್ಲಪದದಿಂದ ಪರಿಚಿತವಾದ ವಸ್ತುವೊಂದಕ್ಕೆ, ಸರಿಹೊಂದುವ ಕನ್ನಡ ಪದ ಹುಡುಕುತ್ತಾ, ಅದನ್ನು ಬಳಸಲು ತಿಣುಕುವ ನಮ್ಮ ಸ್ಥಿತಿ ನೆನಪಾಯ್ತು.

ಸ್ಪೇನ್ ದೇಶದಲ್ಲಿ ಸ್ಪ್ಯಾನಿಷ್ ಹೊರತಾದ ಭಾಷೆಗಳೂ ಇವೆಯಂತೆ. ಇರುವ ನಾಲ್ಕು ಭಾಷಿಕರ ನಡುವೆ ಜಗಳವಾಗಿ, ಪ್ರತ್ಯೇಕ ದೇಶ ಬೇಡುವ ಮಟ್ಟಕ್ಕೆ ಹೋರಾಟವಾಗುತ್ತದಂತೆ. ಅಂತದ್ದರಲ್ಲಿ ಅಷ್ಟೊಂದು ಭಾಷೆಗಳನ್ನು ಹೊಂದಿರುವ ಭಾರತ ಅದ್ಹೇಗೆ ಒಂದು ರಾಷ್ಟ್ರವಾಗಿ ಉಳಿದಿದೆ?!ʼ ಎಂಬದು ಸ್ಪೇನಿನ ಜನರಿಗೊಂದು ಅಚ್ಚರಿಯ ವಿಷಯವಂತೆ!

ಸ್ವಾವಲಂಬಿಯಾಗಿಸುವ ಧಾವಂತ!

ಮಗು ಸ್ವತಂತ್ರ್ಯವಾಗಿ ಬದುಕಲು ಕಲಿಯಬೇಕು ಎಂದು ಬಯಸುವುದು, ಅದಕ್ಕಾಗಿ ತಯಾರು ಮಾಡುವುದು ಸರಿ. ಆದರೆ, ತೀರಾ ಪ್ರಾಥಮಿಕ ಹಂತದಲ್ಲಿರುವ ಚಿಕ್ಕಮಕ್ಕಳಿಗೆ ʼಇದನ್ನು ಓದಲು ನಿನಗಿಷ್ಟವೇ?ʼ ಎಂದು ಕೇಳುವುದು, ಮಗು ಅರಿವಿಲ್ಲದೇ ಹೇಳಿದ್ದನ್ನು ಪಾಲಿಸುವುದು ವಿಪರೀತವಾಯ್ತು ಎಂಬುದು ಲೇಖಕರ ಅಭಿಪ್ರಾಯ. ಯಾವ ಮಗು ತಾನೇ ಆ ವಯಸ್ಸಲ್ಲಿ ಓದಲು ಇಷ್ಟ ಎಂದೀತು? ಅರಿಯದ ವಯಸ್ಸಲ್ಲಿ ಮಕ್ಕಳ ಇಚ್ಛೆಯಂತೆ ನಡೆಯುವ ಕಾರಣ ಅಲ್ಲಿ ಉನ್ನತ ಶಿಕ್ಷಣ ಪಡೆಯುವವರು ವಿರಳವಾಗಿದ್ದಾರೆ. ಅದೇ ಕಾರಣಕ್ಕೆ ಉನ್ನತ ಹುದ್ದೆಗಳು, ಸ್ಥಾನಗಳು ವಿದೇಶಿಯರ ಪಾಲಾಗುತ್ತಿದೆ. ʼಮಕ್ಕಳ ಮೇಲೆ ಹೇರಿಕೆ ಮಾಡಬಾರದುʼ ಎಂಬ ತನ್ನ ನಿಲುವಿಗೆ ಸ್ಪೈನ್ ಬೆಲೆ ತೆರುತ್ತಿದೆ ಎಂದಿದ್ದಾರೆ. ಅದನ್ನು ಹೇಳುತ್ತಲೇ, ಭಾರತದಲ್ಲಿ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯ ಬಗ್ಗೆಯೂ ಕಳಕಳಿ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಸ್ವಾವಲಂಬಿಯಾಗಿಸುವ ಭರದಲ್ಲಿ ದೇಶವೇ ಪರಾವಲಂಬಿಯಗುತ್ತಿರುವುದು ಸ್ಪೈನ್ ದೇಶದ ವಿಪರ್ಯಾಸವೇ ಸರಿ.

ಸ್ಪ್ಯಾನಿಷರ ನಾಯಿಪ್ರೀತಿ

ಸ್ಪಾನಿಷರು ನಾಯಿಯನ್ನು ಪ್ರೀತಿಸುವ ಪರಿ, ಅದನ್ನು ಸಾಕುವ ರೀತಿ, ನಾಯಿ ಪಾಲಕರು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ವಿವರವಾಗಿ ಹೇಳಿದ್ದಾರೆ. ನಾಯಿಯ ಪಾಲಕರು ಅದನ್ನು ಸುತ್ತಾಡಲು ಕರೆದುಕೊಂಡು ಹೋದಾಗ, ನಾಯಿ ವಿಸರ್ಜಿಸಿದ ಮಲವನ್ನು ವಿಲೇವಾರಿ ಮಾಡಬೇಕಾದ ಕಟ್ಟುನಿಟ್ಟಿನ ನೀತಿಯನ್ನು, ಅಲ್ಲಿನ ಜನ ಅದನ್ನು ಶಿಸ್ತಾಗಿ ಪಾಲಿಸುವ ರೀತಿಯನ್ನು ಲೇಖಕರು ಮೆಚ್ಚುತ್ತಾರೆ. ನೀತಿ ಮುರಿದವರಿಗೆ ಅಲ್ಲಿನ ನಗರಪಾಲಿಕೆ ವಿಧಿಸುವ ಶಿಕ್ಷೆಯ ಮಾಹಿತಿಯೂ ಇದೆ. ಅದರೊಂದಿಗೆ ಕೆಲವು ಭಾರತೀಯ ಪ್ರಾಣಿಪ್ರಿಯರ ಕಿವಿಹಿಂಡುವಲ್ಲಿ ಲೇಖಕರು ಸಫಲರಾಗಿದ್ದಾರೆ‌.

“ನಮ್ಮ ದೀಪಾವಳಿಯ ತಮ್ಮ ಸ್ಪೇನಿನ ಮರ್ಸೆ” ಎಂದು ಭಾರತದ ಉದಾಹರಣೆಯೊಂದಿಗೆ ಅಲ್ಲಿನ ಬೆಳಕಿನ ಹಬ್ಬವನ್ನೂ, ‘ಫಿಯೆಸ್ತಾ’ ಎಂಬ ಊರಹಬ್ಬವನ್ನು ವರ್ಣಿಸುತ್ತಾರೆ. ಸ್ಪೇನಿನ ವಿಶೇಷ ಕಾಫಿಯ ಬಗ್ಗೆ, ಅಪರೂಪಕ್ಕೆ ದೊರೆಯುವ ರುಚಿಕರ ಸಸ್ಯಹಾರಿ ಆಹಾರದ ಬಗ್ಗೆ ಬರೆಯುತ್ತಾರೆ. ಅಲ್ಲಿನ ಪ್ರವಾಸೀ ಸ್ಥಳಗಳು, ಮದುವೆಗಳು, ಶಿಷ್ಟಾಚಾರ, ನಂಬಿಕೆ, ಆಹಾರ, ಕಾರ್ಯಸಂಸ್ಕೃತಿ, ಕುಟುಂಬವ್ಯವಸ್ಥೆ, ಕ್ರೀಡೆ, ಹೀಗೆ ಹತ್ತು ಹಲವು ವಿಷಯಗಳನ್ನು ಚರ್ಚಿಸುವ ರಸವತ್ತಾದ ಅನುಭವಗಳ ಲೇಖನಗುಚ್ಛವಿದು. ಪ್ರವಾಸಿಗರಿಗೆ ಉಪಯುಕ್ತವಾಗುವ ಸ್ಪಾನಿಷ್ ಪದಗಳನ್ನು ಪುಸ್ತಕದುದ್ದಕ್ಕೂ ಬಳಸಲಾಗಿದೆ. ದೇಶ, ಭಾಷೆ ಬೇರೆಯಾದರೂ, ಮಾನವರಾಗಿ ನಾವೆಲ್ಲಾ ಒಂದೇ! ಎಂಬ ಭಾವನೆಯ ಹಲವು ಉದಾಹರಣೆಗಳನ್ನು ನೀಡಿದ್ದಾರೆ. ಒಂದೊಳ್ಳೆಯ ಓದು. ಪ್ರವಾಸದ ಹೊರತಾಗಿ ಕಾರ್ಯನಿಮಿತ್ತ ಸ್ಪೈನ್ ದೇಶಕ್ಕೆ ಹೋಗುವವರಿಗೂ ಉಪಯುಕ್ತವಾಗುವ ಪುಸ್ತಕ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?