Tuesday, October 6, 2026
Tuesday, October 6, 2026

ಕಾನುನಾಡಿನ ಜಾಡು ಹಿಡಿದು ಸಾಗುವ ಕಾನ್ಧಾರಿ

ಉತ್ತರ ಕನ್ನಡವೆಂದರೆ ನೈಸರ್ಗಿಕ, ಸಾಂಸ್ಕೃತಿಕ, ಧಾರ್ಮಿಕ ಕೌತುಕಗಳೆಲ್ಲ ಹದವಾಗಿ ಬೆರೆತುಕೊಂಡ ರಸಪಾಕ, ಧರೆಯ ನಾಕ. ಬುಕ್ಯಾನನ್ ತಾನು ಕುದುರೆಯನ್ನೇರಿ ಸಾಗಿ ಲೇಖನಿಯಲ್ಲಿ ಸೆರೆ ಹಿಡಿದ ಮಾಹಿತಿಗಳನ್ನು ಈ ಚಿತ್ರವು ಅಚ್ಚುಕಟ್ಟಾಗಿ ನಿರೂಪಿಸುತ್ತದೆ.

  • ಡಾ ಗಣಪತಿ ಆರ್ ಭಟ್

ಒಂದೆಡೆ ನೆಲ ಕಾಣದ ದಟ್ಟ ಕಾಡು, ಇನ್ನೊಂದೆಡೆ ಕೊನೆ ಕಾಣದ ಗಾಢ ಸಮುದ್ರ. ಮತ್ತೊಂದೆಡೆ ಕೆರೆ ಕುಂಟಿಯನ್ನೆಲ್ಲ ಮೈಗಂಟಿಸಿಕೊಂಡ ಬಯಲನಾಡು. ಭೌಗೋಳಿಕವಾಗಿ, ಜೈವಿಕವಾಗಿ, ಸಾಂಸ್ಕೃತಿಕವಾಗಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಭಿನ್ನ-ಭಿನ್ನ ಆಯಾಮವಿರಿಸಿಕೊಂಡು ಗಮನ ಸೆಳೆಯುವ ಉತ್ತರ ಕನ್ನಡ ಜಿಲ್ಲೆಯನ್ನು ಕೇವಲ ಒಂದು ಭೂಪ್ರದೇಶವಾಗಿ ನೋಡಿದರೆ ತಪ್ಪಾಗುತ್ತದೆ. ಇದು ಅಪೂರ್ವವಾದ ಪ್ರವಾಸಿ ತಾಣಗಳಿರುವ, ವೈವಿಧ್ಯಮಯ ಕೃಷಿ ಕಣಗಳಿರುವ, ವಿಶಿಷ್ಟ ಜನಪದ, ಧಾರ್ಮಿಕ ಪರಂಪರೆಯ ತಜ್ಞ ಜನಗಳಿರುವ, ಸೃಷ್ಟಿಯ ಸುಂದರ ಕಲಾಕೃತಿ.

ಇದನ್ನೂ ಓದಿ: ಮೆಮರೀಸ್ ಆಫ್ ಬಾರ್ಸಾ

ಜಿಲ್ಲೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಬೆಳೆಯುವ ಬೆಳೆಗಳಲ್ಲಿ ವೈವಿಧ್ಯವುಂಟು, ಕಣ್ಣಿಗೆ ಕಾಣುವ ಜೀವ ಜಂತುಗಳಲ್ಲಿ ಭಿನ್ನತೆಯುಂಟು, ಜನರ ಆಚಾರ ವಿಚಾರಗಳಲ್ಲಂತೂ ಅನನ್ಯತೆ ಖಂಡಿತ ಉಂಟು.

ಹೀಗಿದ್ದೂ ಇಲ್ಲಿನ ಜನಾಂಗ, ಜನಪದ, ಸಂಸ್ಕೃತಿ, ಬದುಕಿನ ಹೋರಾಟಗಳ ಕುರಿತು ಏಕರೂಪದ ಇತಿಹಾಸವಿದೆ. ಇಲ್ಲಿನ ಜನರು ತಾವು ಎದುರಿಸುವ ಬದುಕಿನ ಪಲ್ಲಟಗಳಿಗೆ ಒಂದಾಗುತ್ತಾರೆ. ಅದರ ಕುರಿತಾದ ಕಾಳಜಿಗೆ ಪರಸ್ಪರ ಹೆಗಲು ಕೊಡುತ್ತಾರೆ. ಇಂಥ ಇತಿಹಾಸ ಮತ್ತು ಜಿಲ್ಲೆಯ ಜನರ ತುಡಿತಗಳನ್ನು ದೃಶ್ಯರೂಪದಲ್ಲಿ ಹಿಡಿದುಕೊಂಡ ಸಾಕ್ಷ್ಯಚಿತ್ರ ʼಕಾನ್ಧಾರಿʼ. ವಸ್ತುತಃ ಕಾನನ್ನೇ ಮೈ ತುಂಬಾ ಧರಿಸಿಕೊಂಡ ಭೂಲೋಕದ ಸಿರಿ ಉತ್ತರ ಕನ್ನಡ ಜಿಲ್ಲೆಯ ಗತ ವೈಭವ, ಸದ್ಯದ ವಾಸ್ತವ ಈ ಎರಡನ್ನೂ ಚೆನ್ನಾಗಿ ತೋರಿಸಿಕೊಡುವ ಚಿತ್ರವಿದು.

1800ರ ಹೊತ್ತಿಗೆ ಈಸ್ಟ್ ಇಂಡಿಯಾ ಕಂಪೆನಿಯ ವಾಣಿಜ್ಯೋದ್ಯಮವನ್ನು ವಿಸ್ತರಿಸುವ ದೃಷ್ಟಿಯಿಂದ ಕಂಪೆನಿಯ ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ ವೆಲ್ಲೆಸ್ಲಿಯು ದಕ್ಷಿಣ ಭಾರತದ ಭೌಗೋಳಿಕ, ಆರ್ಥಿಕ ಅಂಶಗಳನ್ನು, ಅದರಲ್ಲಿಯೂ ವಿಶೇಷವಾಗಿ ಇಲ್ಲಿ ಸಿಗುವ ಕಾಳುಮೆಣಸು ಮತ್ತು ಇನ್ನಿತರ ವಾಣಿಜ್ಯ ಬೆಳೆಗಳನ್ನು ಕುರಿತು ಅಭ್ಯಸಿಸಲು ಫ್ರಾನ್ಸಿಸ್ ಬುಕ್ಯಾನನ್ ಹ್ಯಾಮಿಲ್ಟನ್ ಎನ್ನುವ ಪಾಶ್ಚಿಮಾತ್ಯ ಭೂಗೋಳ ಶಾಸ್ತ್ರಜ್ಞನನ್ನು ನೇಮಿಸಸುತ್ತಾನೆ. ಆತನು ಮಲಬಾರ್ ಕರಾವಳಿಯ ಮೂಲಕ ಕೆನರಾ ಕರಾವಳಿ, ಕಾಳಿ, ಗಂಗಾವಳಿ, ಶಾಲ್ಮಲೀ ನದಿ ಭಾಗಗಳಲ್ಲಿ ಸಂಚರಿಸುತ್ತಾ ಕಲೆ ಹಾಕಿರುವ ಅಲ್ಲಿನ ಅಪರೂಪದ ಮಾಹಿತಿಯನ್ನು ಈ ಚಿತ್ರವು ವಿಶದ ಪಡಿಸುತ್ತದೆ.

Untitled design - 2026-10-06T152500.338

ಏನಿದೆ ಬುಕ್ಯಾನನ್ನ ಪರ್ಯಟನೆಯ ವರದಿಯಲ್ಲಿ?

1801ರ ಫೆಬ್ರುವರಿ, ಮಾರ್ಚ್ ತಿಂಗಳುಗಳಲ್ಲಿ ಕೇರಳದ ಮಲಬಾರ್ ಕರಾವಳಿಯ ಮೂಲಕ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಂಚರಿಸುವ ಬುಕ್ಯಾನನ್ ಇಲ್ಲಿನ ಭೌಗೋಳಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ಅಂಶಗಳನ್ನು ತನ್ನ A journey from madras through the countries of mysore, canara and malabar ಎಂಬ ಪ್ರವಾಸಾಧ್ಯಯನ ಗ್ರಂಥದಲ್ಲಿ ದಾಖಲು ಮಾಡಿದ್ದಾನೆ. 1807 ರಲ್ಲಿ ಪ್ರಕಟವಾದ ಈ ಗ್ರಂಥವು ಉತ್ತರ ಕನ್ನಡದ ಭೌಗೋಳಿಕ, ಆರ್ಥಿಕ, ಜಾನಪದ ಇತಿಹಾಸವನ್ನು ತಿಳಿಯುವ ದೃಷ್ಟಿಯಿಂದ ಮಹತ್ವಪೂರ್ಣ ಎನಿಸುತ್ತದೆ.

ಭಟ್ಕಳ, ನೇತ್ರಾಣಿ ದ್ವೀಪ, ಮುರುಡೇಶ್ವರ, ಹೊನ್ನಾವರ, ಗೋಕರ್ಣ, ಕುಮಟಾ, ಅಂಕೋಲಾ, ಸದಾಶಿವಗಢ ಹೀಗೆ ಕಡಲ ತಡಿ ಹಿಡಿದು ಸಾಗಿ ಅಲ್ಲಿನ ಭೂಪ್ರದೇಶದ ವೈಶಿಷ್ಟ್ಯ, ಭತ್ತದ ಗದ್ದೆ, ಮೀನುಗಾರಿಕೆ, ತೆಂಗಿನ ತೋಟ, ವ್ಯಾಪಾರ ವಹಿವಾಟು, ಇತಿಹಾಸ, ಸ್ಥಳ ಮಹಿಮೆ, ಇವೆಲ್ಲವನ್ನೂ ದಾಖಲು ಮಾಡುತ್ತಾ ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಯಲ್ಲಾಪುರ ಹಾಗೂ ಸೂಪಾ (ಇಂದಿನ ಜೋಯಿಡಾ) ಗಡಿ ಭಾಗಗಳಲ್ಲಿ ಪರ್ಯಟನೆ ಮಾಡುತ್ತಾನೆ. ವಿಶೇಷವಾಗಿ ಈ ಭಾಗಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಕಾಳುಮೆಣಸಿನ ಪ್ರಬೇಧಗಳು, ಅಡಿಕೆ ತೋಟ, ಮಾರುಕಟ್ಟೆಯ ಸ್ಥಿತಿಗತಿ ಇತ್ಯಾದಿ ಅಡಕ ಇದರಲ್ಲಿದೆ. ಸೋಂದಾ ಅರಸರ ಧಾರ್ಮಿಕ ಸಹಿಷ್ಣುತೆ, ಕೃಷಿಕರ ವೃತ್ತಿಪರತೆಯ ವಿವರಣೆ ಸಿಗುತ್ತದೆ

ಏನಿದೆ ಈ ಸಾಕ್ಷ್ಯಚಿತ್ರದಲ್ಲಿ?

ಉತ್ತರ ಕನ್ನಡವೆಂದರೆ ನೈಸರ್ಗಿಕ, ಸಾಂಸ್ಕೃತಿಕ, ಧಾರ್ಮಿಕ ಕೌತುಕಗಳೆಲ್ಲ ಹದವಾಗಿ ಬೆರೆತುಕೊಂಡ ರಸಪಾಕ, ಧರೆಯ ನಾಕ. ಬುಕ್ಯಾನನ್ ತಾನು ಕುದುರೆಯನ್ನೇರಿ ಸಾಗಿ ಲೇಖನಿಯಲ್ಲಿ ಸೆರೆ ಹಿಡಿದ ಮಾಹಿತಿಗಳನ್ನು ಈ ಚಿತ್ರವು ಅಚ್ಚುಕಟ್ಟಾಗಿ ನಿರೂಪಿಸುತ್ತದೆ.

ವಿಶೇಷವೆಂದರೆ, ಇತ್ತೀಚಿನ ವರ್ಷಗಳಲ್ಲಿ ಬುಕಾನನ್ ಸಾಗಿದ ಉತ್ತರ ಕನ್ನಡದ ಇದೇ ನದಿ ಕಣಿವೆಯ ಮಾರ್ಗವಾಗಿ ತಮ್ಮ ಸ್ಕೂಟರ್ ಏರಿ ಪ್ರವಾಸ ಕೈಗೊಂಡ ಖ್ಯಾತ ಪರಿಸರ ತಜ್ಞ ಶಿವಾನಂದ ಕಳವೆ ಅವರು ಅಧ್ಯಯನವನ್ನು ನೆಡೆಸಿ ಕಲೆ ಹಾಕಿದ ಮಹತ್ವಪೂರ್ಣವಾದ ಮಾಹಿತಿಯು ಚಿತ್ರದಲ್ಲಿ ಗಮನ ಸೆಳೆಯುತ್ತದೆ. ಹಾಗಾಗಿ ಈ ಸಾಕ್ಷ್ಯಚಿತ್ರವು ಬರೇ ಇತಿಹಾವನ್ನಷ್ಟೇ ಹೇಳಲು ಹೊರಟಿಲ್ಲ. ಸುಮಾರು ಇನ್ನೂರು ವರ್ಷಗಳಲ್ಲಿ ನಮ್ಮ ಕರಾವಳಿ ಹಾಗೂ ಮಲೆನಾಡು ನೆಲದಲ್ಲಿ ಆದ ಪ್ರಾಕೃತಿಕ, ಸಾಂಸ್ಕೃತಿಕ ಪಲ್ಲಟಗಳನ್ನೆಲ್ಲ ತೆರೆಯ ಮೇಲೆ ತೆರೆದಿಡುತ್ತದೆ.

ಇಲ್ಲಿನ ಪರಿಸರದ ಕುರಿತಾದ ಕಥನವನ್ನು ಸ್ವತಃ ಕಳವೆ ಅವರೇ ಹೇಳಿದ್ದಾರೆ. ಇನ್ನು ಇತಿಹಾಸದ ರೋಚಕ ವಿಚಾರವನ್ನು ಇತಿಹಾಸ ತಜ್ಞ ಲಕ್ಷ್ಮೀಶ್ ಸೋಂದಾ ಅವರಿಂದಲೂ, ಉತ್ತರ ಕನ್ನಡದ ಜನರ ಬದುಕಿನ ತಲ್ಲಣಗಳನ್ನು ನಿರಾಶ್ರಿತರ ನೆಲಕ್ಕಾಗಿ ಸುದೀರ್ಘವಾದ ಹೋರಾಟ ನಡೆಸಿದ ಕೃಷಿಕ ಶಿವರಾಮ ಗಾಂವ್ಕರ್ ಅವರಿಂದಲೂ ಹೀಗೆ ಅನೇಕ ವಿಚಾರಗಳನ್ನು ಆಯಾ ಕ್ಷೇತ್ರಗಳ ತಜ್ಞರ ಮೂಲಕವೇ ಇಲ್ಲಿ ಹೇಳಿಸಿರುವುದರಿಂದ ಚಿತ್ರದಲ್ಲಿ ಹೇಳಲಾದ ಮಾಹಿತಿಗಳು ಹೆಚ್ಚು ಅಧಿಕೃತ ಎನಿಸುತ್ತವೆ. ವಿನಾಯಕ ಹೆಗಡೆ ಬೊಮ್ಮನಹಳ್ಳಿ ಅವರ ನಿರ್ದೇಶನ ಹಾಗೂ ಸುಪ್ರೀತ್ ಹೆಗಡೆ ಸೋಮನಮನೆ ಅವರ ನಿರ್ಮಾಣ ಹೀಗೆ ಹೊಸಬರ ನಿರ್ಮಾಣದ ಚಿತ್ರವಾದರೂ ಚಿತ್ರವು ಹೊಸತನದಿಂದಲೇ ಪಕ್ವವಾಗಿದೆ. ಬುಕ್ಯಾನನ್ ಸಾಗಿದ ದಾರಿಯ ಜಾಡು ಹಿಡಿದು ಸಾಗುವ ಡ್ರೋನ್‌ ಕ್ಯಾಮರಾ ಉತ್ತರ ಕನ್ನಡದ ಪ್ರಾಕೃತಿಕ ಸೌಂದರ್ಯವನ್ನು ಒಪ್ಪಾಗಿ ಸೆರೆ ಹಿಡಿದಿದೆ. ಶ್ರೀನಿವಾಸ್ ಪ್ರಭು ಅವರ ನಿರೂಪಣೆ ಮತ್ತು ಗಾಯಕ ವಿಜಯ ಪ್ರಕಾಶ್ ಅವರ ಕಂಠಸಿರಿ ಹೆಚ್ಚುಕಾಲ ಪ್ರೇಕ್ಷಕರನ್ನು ಹಿಡಿದಿರಿಸುವುದು ಗ್ಯಾರಂಟಿ.

ಇಡೀ ಚಿತ್ರವನ್ನು ನೋಡಿದಾಗ ಪ್ರವಾಸದ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ಪರ್ಯಟನೆ ಆಗುವುದು ಪಕ್ಕಾ. ಅದು ಅಷ್ಟು ಮಾತ್ರಕ್ಕೆ ಸೀಮಿತ ಎನಿಸಿದೆ, ಪ್ರವಾಸಕ್ಕೆ ತೆರಳುವ ಮುನ್ನ ಪ್ರವಾಸಿಗ ಕಲೆ ಹಾಕಿ ಕೊಳ್ಳಬಹುದಾದ ಮಾಹಿತಿಗೆ ಚಿತ್ರವು ಕೈಪಿಡಿ ಆಗಬಲ್ಲದು. ಪ್ರಸ್ತುತ ದಿನಗಳಲ್ಲಿ ಇಲ್ಲಿನ ಜನರ ಬವಣೆಯನ್ನೂ ಮನವರಿಕೆ ಮಾಡಿಕೊಡುವ ಈ ಚಿತ್ರವು ಹಳ್ಳಿ ತೊರೆದು ನಗರ ಸೇರುವ ಯುವಕರ ಕಣ್ಣು ತೆರೆಸುವ ಆಶಾದೀಪ ಆಗಬಲ್ಲದು.

ಉತ್ತರ ಕನ್ನಡ ಜಿಲ್ಲೆಯ ಕುರಿತಾದ ಅಭಿಮಾನವುಳ್ಳ ಜನರಷ್ಟೇ ಈ ಚಿತ್ರವನ್ನು ನೋಡಬೇಕಂತೇನೂ ಇಲ್ಲ. ಮಲೆನಾಡಿನ ಕಾನು, ಜನಪದ, ಜೀವನ, ಇತಿಹಾಸಗಳ ಕುರಿತು ಆಸಕ್ತಿ ಇರುವವರಿಗೆ ಇದೊಂದು ಜ್ಞಾನಶಾಲೆ ಎನಿಸುವದು. ಪ್ರಕೃತಿಯನ್ನು ಆಸ್ವಾದಿಸಲು ಪ್ರವಾಸಕ್ಕೆ ತೆರಳುವ ಪ್ರತಿಯೊಬ್ಬನಿಗೂ ಮಲೆನಾಡಿನ ಕಥೆ ವ್ಯಥೆಯ ಅರಿವಾಗಬೇಕು. ನಾಡಿನ ಅಭಿವೃದ್ಧಿಗಾಗಿ ತ್ಯಾಗ ಮಾಡಿದ ಜನರ ಕುರಿತು ತಿಳಿಯಬೇಕು. ಪರಿಸರದ ಕುರಿತು ಕಾಳಜಿ ಉಂಟಾಗಬೇಕು. ಹೀಗಾದರೆ ಈ ಸಾಕ್ಷ್ಯಚಿತ್ರದ ಉದ್ದೇಶ ಈಡೇರಿದಂತೆ.

ಚಿತ್ರ ವಿವರ:

ಸಾಕ್ಷ್ಯಚಿತ್ರ: ಕಾನ್ಧಾರಿ

ತೆರೆಕಂಡ ವರ್ಷ: 2026

ನಿರ್ದೇಶನ: ವಿನಾಯಕ ಹೆಗಡೆ ಬೊಮ್ಮನಹಳ್ಳಿ

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?