ಕ್ಯೂರಿ, ಕ್ಯೂರಿಯಾಸಿಟಿ ಮತ್ತು ಕ್ಯೂರ್ ಆಗಲೊಲ್ಲದ ಗಾಸಿಪ್ ಕಾಯಿಲೆ!
ಲ್ಯಾಂಗ್ವಿನ್ ಎನ್ನುವ ವಿಜ್ಞಾನಿ ಕ್ಯೂರಿಯನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದರು. ಅವರಿಗಾಗಿ ತಮ್ಮ ಕುಟುಂಬವನ್ನು ತೊರೆದು ಬಂದಿದ್ದರು. ಕ್ಯೂರಿಯ ಪ್ರೀತಿಯಲ್ಲಿ ಸಮ್ಮೋಹಿತರಾಗಿದ್ದ ಲ್ಯಾಂಗ್ವಿನ್‌ಗೆ ಪ್ರೀತಿಯ ಹೊರತಾಗಿ ಪ್ರಪಂಚದ ಪರಿವೆಯೇ ಇರಲಿಲ್ಲ. ಆದರೆ ಕ್ಯೂರಿಯವರಿಗೆ ತಮ್ಮ ಸಂಶೋಧನೆಗಳ ಹೊರತಾಗಿ ಮತ್ಯಾವುದೇ ಜಗತ್ತಿನ ಅರಿವಿರಲಿಲ್ಲ. ನೊಬೆಲ್ ಪ್ರಶಸ್ತಿ ನೀಡುವ ಸಮಿತಿಯಲ್ಲಿ ಈ ವಿಷಯದ ಬಗ್ಗೆ ಇಬ್ಬಣವಾಯಿತು. ಆಕೆಯ ಚಾರಿತ್ರ್ಯದ ಬಗ್ಗೆ ಗುಲ್ಲೆದ್ದಿತು. ಅವರಿಗೆ ಪ್ರಶಸ್ತಿ ಸಲ್ಲಕೂಡದು ಎನ್ನುವ ಪ್ರತಿಭಟನೆ ಜೋರಾಯಿತು.
- ಅಂಜಲಿ ರಾಮಣ್ಣ
ಒಲ್ಲದ್ದನ್ನು ಒಪ್ಪಿಕೊಳ್ಳಬೇಕು ಅಥವಾ ಕಡ್ಡಾಯವಾಗಿ ವಿರೋಧಿಸಲೇಬೇಕು ಅಂತೇನಿಲ್ಲ. ಸುಮ್ಮನೆ ಗಮನಿಸುವುದೂ ನಮ್ಮನ್ನು ನಾವು ನಿರ್ಮಿಸಿಕೊಳ್ಳುವುದಕ್ಕೆ ಅತ್ಯಂತ ಜರೂರಾಗಿ ಬೇಕಾದ ಅಂಶ. ಅದನ್ನು ಅನೂಚಾನವಾಗಿ ಕಲಿಸಿಕೊಡುವುದು ಪ್ರವಾಸ. ಪೋಲೆಂಡಿನ ವಾರ್ಸ ಮೂಲಭೂತ ಅವಶ್ಯಕತೆಗಳಿಂದ ವಂಚಿತವಾದ ಜಗತ್ತಿನ ಯಾವುದೇ ಮನುಷ್ಯನ ಬಗ್ಗೆ ಮಿಡಿಯುವ ಮನಸ್ಸುಗಳಿಗೆ ಸ್ಪಂದಿಸುವ ನಗರವದು. ಅಲ್ಲಿ ‘ಮಾರಿಯಾ ಸ್ಲೊಡವಸ್ಕಿ ಕ್ಯೂರಿ ಮ್ಯೂಸಿಯಂ’ ಇದೆ. ಎರಡೆರಡು ನೊಬೆಲ್ ಪ್ರಶಸ್ತಿ ಪಡೆದ ಏಕೈಕ ಮಹಿಳಾ ವಿಜ್ಞಾನಿ ಮೇಡಂ ಕ್ಯೂರಿ. ಅಲ್ಲಿ ಪ್ಯಾರಿಸ್‌ನ ರೇಡಿಯಂ ಇನ್‌ಸ್ಟಿಟ್ಯೂಟ್‌ನ ನಿವೃತ್ತ ಪ್ರೊಫೆಸರ್ ಜಾರ್ಜ್ ಅವರ ಪರಿಚಯವಾಯ್ತು. ಅವರ ವಿದ್ಯಾರ್ಥಿಗಳಿಗೆ ಮೇಡಂ ಕ್ಯೂರಿಯ ಜೀವನವನ್ನು ಬಹಳ ಸೊಗಸಾಗಿ ಪರಿಚಯ ಮಾಡಿಕೊಡುತ್ತಿದ್ದರು.

ರೇಡಿಯಂ ಪ್ರಭಾವದ ಬಗ್ಗೆ ತಮ್ಮ ಸಂಶೋಧನಾತ್ಮಕವಾದ ಪ್ರಬಂಧವನ್ನು ನಲವತ್ತೈದು ವರ್ಷದ ಮೇಡಂ ಕ್ಯೂರಿಯವರು ಸಮಿತಿಗೆ ಸಲ್ಲಿಸಿಯಾಗಿತ್ತು. ಅದನ್ನು ಪರಿಶೀಲಿಸಿದ ಸದಸ್ಯರು ಇನ್ನೇನು ಕ್ಯೂರಿಯವರಿಗೆ ಪ್ರಶಸ್ತಿಯನ್ನು ಘೋಷಿಸಲಿದ್ದರು. ಆಗ ಅಲ್ಲಿ ಹುಟ್ಟಿಕೊಂಡಿದ್ದು ‘ಮೇಡಂ ಕ್ಯೂರಿಯವರ ಪ್ರೇಮ ಹಗರಣ’ ಎನ್ನುವ ಪ್ರಚಾರ. ಲ್ಯಾಂಗ್ವಿನ್ ಎನ್ನುವ ವಿಜ್ಞಾನಿ ಕ್ಯೂರಿಯನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದರು. ಅವರಿಗಾಗಿ ತಮ್ಮ ಕುಟುಂಬವನ್ನು ತೊರೆದು ಬಂದಿದ್ದರು. ಕ್ಯೂರಿಯ ಪ್ರೀತಿಯಲ್ಲಿ ಸಮ್ಮೋಹಿತರಾಗಿದ್ದ ಲ್ಯಾಂಗ್ವಿನ್‌ಗೆ ಪ್ರೀತಿಯ ಹೊರತಾಗಿ ಪ್ರಪಂಚದ ಪರಿವೆಯೇ ಇರಲಿಲ್ಲ. ಆದರೆ ಕ್ಯೂರಿಯವರಿಗೆ ತಮ್ಮ ಸಂಶೋಧನೆಗಳ ಹೊರತಾಗಿ ಮತ್ಯಾವುದೇ ಜಗತ್ತಿನ ಅರಿವಿರಲಿಲ್ಲ. ನೊಬೆಲ್ ಪ್ರಶಸ್ತಿ ನೀಡುವ ಸಮಿತಿಯಲ್ಲಿ ಈ ವಿಷಯದ ಬಗ್ಗೆ ಇಬ್ಬಣವಾಯಿತು. ಆಕೆಯ ಚಾರಿತ್ರ್ಯದ ಬಗ್ಗೆ ಗುಲ್ಲೆದ್ದಿತು. ಅವರಿಗೆ ಪ್ರಶಸ್ತಿ ಸಲ್ಲಕೂಡದು ಎನ್ನುವ ಪ್ರತಿಭಟನೆ ಜೋರಾಯಿತು. ಆದರೆ ಪ್ರಶಸ್ತಿ ಕೊಡುತ್ತಿರುವುದು ಆಕೆಯ ಸಂಶೋಧನೆಗೆ ಆಕೆಯ ವೈಯಕ್ತಿಕ ವಿಷಯಕ್ಕೆ ಅಲ್ಲ ಎನ್ನುವವರ ಸಂಖ್ಯೆ ಹೆಚ್ಚಾಗಿ ಆಕೆಗೆ ನೊಬೆಲ್ ಪ್ರಶಸ್ತಿ ಸಿಕ್ಕಿತು. ಹೀಗೆ ಮೇಡಂ ಕ್ಯೂರಿಗೆ ರಸಾಯನಶಾಸ್ತ್ರದಲ್ಲಿ ಎರಡನೆಯ ನೊಬೆಲ್ ಬಹುಮಾನ ಬಂದ ಹಿನ್ನೆಲೆಯಲ್ಲಿ ನಡೆದ ಕಥೆಯನ್ನು ಪ್ರೊ. ಜಾರ್ಜ್ ಅವರು ಹೇಳಿದ ಪರಿ ನದಿಯೊಂದು ಸುಮ್ಮನೆ ತನ್ನ ಪಾಡಿಗೆ ತಾನು ಹರಿದಂತಿತ್ತು.
ಕೃಪಣತೆಯೇ ಮನುಷ್ಯನ ಸಹಜತೆ ಎಂದಾಗಿದೆಯೇನೋ ಎಂದು ಅನುಮಾನ ಆವರಿಸುವಾಗ ಖ್ಯಾತನಾಮರ ಹುಟ್ಟೂರಿಗೆ ಪ್ರವಾಸ ಹೊರಡಬೇಕು. ಅವರುಗಳಿಗಾಗಿ ಇರುವ ಮ್ಯೂಸಿಯಂಗಳಿಗೆ ಭೇಟಿ ಕೊಡಬೇಕು. ಅವರದ್ದೇ ಜನರ ಬಾಯಿಂದ ಅವರ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು. ಲಂಡನ್ನಿನ ಮ್ಯಾನ್ಸ್ ಫರ್ಡ್ ರಸ್ತೆಯಲ್ಲಿ ಚಾರ್ಲ್ಸ್ ಡಿಕನ್ಸ್ ಮನೆ ಇದೆ. ಅಲ್ಲಿ ಆತ The Great Expectations ಎನ್ನುವ ತನ್ನ ಜಗದ್ವಿಖ್ಯಾತ ಕೃತಿಯನ್ನು ಬರೆಯುವಾಗ ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನು ಜೋಪಾನ ಮಾಡಿಟ್ಟಿದ್ದಾರೆ. ಆತ ನಿತ್ಯವೂ ಬೆಳಿಗ್ಗೆ 9 ಗಂಟೆಯಿಂದ 2 ಗಂಟೆ ಮಧ್ಯಾಹ್ನದವರೆಗೂ ಮಾತ್ರ ಬರೆಯುತ್ತಿದ್ದನಂತೆ. ಏನೇ ಆದರೂ ನಂತರದ ಸಮಯದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳದೆ ಶಿಸ್ತು ಕಾಪಾಡಿಕೊಂಡಿದ್ದಕ್ಕೆ ಅಷ್ಟು ಅದ್ಭುತ ಸಾಹಿತಿಯಾಗಿದ್ದು ಎಂದು ಹೆಮ್ಮೆಯಿಂದ ಹೇಳುವಾಗಲೇ ಆತನ ಕೆಲವು ನಡವಳಿಕೆಯನ್ನು ಹೇಳುತ್ತಾರೆ. 22 ವರ್ಷಗಳ ಮದುವೆಯಲ್ಲಿ 10 ಮಕ್ಕಳನ್ನು ಪಡೆದು ಚಾರ್ಲ್ಸ್ ಸಿನಿಮಾ ತಾರೆಯೊಬ್ಬಳ ಪ್ರೇಮ ಪಾಶಕ್ಕೆ ಸಿಲುಕಿದಾಗ ತನ್ನ ಹೆಂಡತಿ ಕ್ಯಾಥೇರಿನ ಒಬ್ಬ ಮಾನಸಿಕ ಅಸ್ವಸ್ಥೆ ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಅವಳನ್ನು ದೂರ ಮಾಡಿರುತ್ತಾನೆ. ಇಂಥ ವಿಷಯಗಳು ಕೇಳುವವರನ್ನು ಉದ್ವೇಗಕ್ಕೆ ಒಳಪಡಿಸಿದರೂ ಹೇಳುವವರು ತೋರಿಸುವ ಸಮಧ್ವನಿ ಬದುಕಿಗೆ ಕೈಪಿಡಿಯಂತೆ.

Solitary Reaper ಪದ್ಯವನ್ನು ಓದದ ಇಂಗ್ಲಿಷ್ ಸಾಕ್ಷರ ಇರಲಾರ. ಅದನ್ನು ಬರೆದ ವಿಲಿಯಂ ವರ್ಡ್ಸ್ ವರ್ಥ್ ಇದ್ದ ಮನೆಯನ್ನು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನ್ಯಾಷನಲ್ ಟ್ರಸ್ಟ್‌ನವರು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. ಬೇರೆಲ್ಲಿಯೂ ಕಾಣಸಿಗದ ಒಂದು ವಿಷಯ ಇಲ್ಲಿದೆ. ಅದೇನೆಂದರೆ ಅಲ್ಲಿಗೆ ಭೇಟಿ ಇತ್ತ ಯಾರೊಬ್ಬರೂ ಹಿಂದಿರುಗುವಾಗ ಅಲ್ಲೇ ಇಟ್ಟಿರುವ ಒಂದು ಪಕ್ಷಿಯ ದೊಡ್ಡ ಪುಕ್ಕವೊಂದರಿಂದ ಅಲ್ಲಿರುವ ಶಾಯಿಯೊಳಗೆ ಅದ್ದಿ ತಾವೂ ಪದ್ಯ ಬರೆದು ಅಲ್ಲಿಟ್ಟು ಬರಬಹುದು. ವಿಲಿಯಂ ವರ್ಡ್ಸ್ ವರ್ಥ್ ಜಗತ್ತಿನಲ್ಲಿ ಎಲ್ಲರೂ ಕವಿಗಳೇ ಆಗಬೇಕು ಎನ್ನುತ್ತಿದ್ದನಂತೆ.
ಆತನ ಈ ಆಶಯದ ಪೂರೈಕೆಗೆ ಇದೊಂದು ಸಣ್ಣ ಪ್ರಯತ್ನ ಎಂದು ವಿನಯದಿಂದ ಹೇಳುವ ಅಲ್ಲಿನ ವಿವರಣೆಕಾರರು ಯಾವುದೇ ಏರಿಳಿತವಿಲ್ಲದೆ ಕವಿ ಮಹಾಶಯನ ಜೀವಿತಾವಧಿಯಲ್ಲಿ ಹೊರಬರದೇ ಹೋದ ಗುಟ್ಟೊಂದನ್ನು ಕೂಡ ಹಂಚುತ್ತಾರೆ. ವಿಲಿಯಂ ವರ್ಡ್ಸ್ ವರ್ಥ್ 1802ರಲ್ಲಿ ವಿವಾಹವಾಗುವ ಮೊದಲೇ ಕರೋಲಿನ ಎನ್ನುವ ಮಗಳಿಗೆ ತಂದೆಯಾಗಿದ್ದನಂತೆ. ಆತ ತೀರಿಕೊಂಡ ನಂತರವೂ 1902 ರವರೆಗೂ ಈ ವಿಷಯವನ್ನು ಆತನ ಕುಟುಂಬದವರು ಗುಟ್ಟಾಗಿಯೇ ಇಟ್ಟುಕೊಂಡಿದ್ದರಂತೆ. ರಾಗವೂ ಇಲ್ಲದೆ ದ್ವೇಷವೂ ತೋರದೆ ಆ ಘಟನೆ ಆ ಮನುಷ್ಯನ ಸ್ವಭಾವ ಅಥವಾ ಆ ವ್ಯಕ್ತಿಯ ಜೀವನದಲ್ಲಿ ನಡೆದ ಒಂದು ವಿಷಯವಷ್ಟೇ ಎನ್ನುವಂತೆ ಅವರುಗಳು ಹೇಳುವ ಪರಿಯಿಂದಾಗಿ ಮನುಷ್ಯನ ಯಾವ ಗುಣವೂ ಅವನ ಕೆಲಸಕ್ಕಿಂತ ಇಂಟರೆಸ್ಟಿಂಗ್ ಅಲ್ಲ ಅನಿಸಿಬಿಡುತ್ತದೆ.
ಉಪಗ್ರಹ ತಯಾರಿಸಿ ಉಡಾವಣೆ ಮಾಡಿ ಜಗತ್ತಿನ ಏಳಿಗೆಗೆ ಕಾರಣನಾದ ವಿಜ್ಞಾನಿಯೊಬ್ಬನಿಗೆ ಚಪ್ಪಾಳೆ ಹೊಡೆಯುವ ಮುನ್ನ ಆತ ದೇವರ ಪ್ರಾರ್ಥನೆ ಮಾಡಿದ್ದನ್ನು ಎತ್ತಾಡುವಾಗ ಮನುಷ್ಯನ ವೈಯಕ್ತಿಕ ಗುಣಲಕ್ಷಣಗಳನ್ನು ಅವನ ದ್ವಂದ್ವಗಳೊಂದಿಗೇ ಸ್ವೀಕರಿಸುವ ಮನಃಸ್ಥಿತಿಯನ್ನು ಐರೋಪ್ಯರಿಂದ ಕಲಿಯಬೇಕು.

ಸುಮಿತ್ರಾನಂದನ್ ಪಂತ್ ನಮ್ಮ ದೇಶದ ಹೆಮ್ಮೆಯ ಕವಿ. ಜ್ಞಾನಪೀಠ ಪಡೆದ ಸಾಧಕ ಸಾಹಿತಿ. ಈಗಿನ ಉತ್ತರಾಖಂಡ ರಾಜ್ಯದ ಕೌಸಾನಿ ಎನ್ನುವ ಗಿರಿಧಾಮದಲ್ಲಿ ಅವರು ಹುಟ್ಟಿದ ಸಣ್ಣ ಮನೆಯನ್ನು ಪ್ರವಾಸಿಗರಿಗಾಗಿ ತೆರೆದಿಡಲಾಗಿದೆ. ಗೂಗಲ್ ಜತೆ ಸಖ್ಯವಿದ್ದರೆ ಮಾತ್ರ ಗುರುತು ಸಿಗಬಹುದಾದ ಜಾಗ. ಯಾಕೆಂದರೆ ಅಲ್ಲಿನವರ್ಯಾರಿಗೂ ಈ ಸ್ಥಳದ ಬಗ್ಗೆ ಮಾಹಿತಿ ಇಲ್ಲ. ಮಬ್ಬುಗತ್ತಲೆಯ ಕೋಣೆಯ ಒಂದು ಮೂಲೆಯಲ್ಲಿ ಒಬ್ಬಾತ ಕುಳಿತು ಆ ಕಟ್ಟಡದ ಉಸ್ತುವಾರಿ ಮಾಡುತ್ತಾರೆ ಎನ್ನುವುದು ಬಿಟ್ಟರೆ ಸುಮಿತ್ರಾನಂದನ್ ಅವರ ವೈಯಕ್ತಿಕ ಜೀವನವಿರಲಿ ಸಾಹಿತ್ಯ ಕೃಷಿಯ ಬಗ್ಗೆಯೂ ಹೆಚ್ಚಿನ ಮಾಹಿತಿ ಅಲ್ಲಿ ಸಿಗದು. ಅವರ ಮೂಲ ಹೆಸರು ಗೋಸಾಯಿನ್ ದತ್ ಎಂದು. ಪ್ರೌಢಶಾಲೆಯ ದಿನಗಳಲ್ಲಿ ಕವನ ಬರೆಯಲು ಆರಂಭಿಸಿದಾಗ ರಾಮಾಯಣದ ಸುಮಿತ್ರೆಯ ಪಾತ್ರ ಚಿತ್ರಣದಿಂದ ಬಹುವಾಗಿ ಪ್ರೇರಿತರಾಗಿದ್ದ ದತ್ ತಮ್ಮ ಹೆಸರನ್ನು ಸುಮಿತ್ರಾನಂದನ್ ಎಂದು ಬದಲಿಸಿಕೊಂಡರಂತೆ. ನೆಪೋಲಿಯನ್‌ನ ತಲೆಗೂದಲಿನ ಸ್ಟೈಲ್ ಅನ್ನು ಮೆಚ್ಚಿ ಇವರು ಕೂಡ ಅಂಥದ್ದೇ ಹೇರ್ ಕಟ್ ಮಾಡಿಸಿಕೊಳ್ಳುತ್ತಿದ್ದರಂತೆ. ಈ ಎರಡು ವಿಷಯಗಳು ನಂತರದ ದಿನಗಳಲ್ಲಿ ದೆಹಲಿಯ ಸಾಹಿತ್ಯ ಸಮ್ಮೇಳನದಲ್ಲಿ ಸಿಕ್ಕ ಬಂಗಾಳಿ ಅಧ್ಯಾಪಕಿ ಸೌಮಿತಾ ಚಟರ್ಜಿಯಿಂದ ತಿಳಿಯಿತು. ವೈಯಕ್ತಿಕ ವಿಷಯಗಳನ್ನು ತಿಳಿದುಕೊಳ್ಳಬೇಕಿರುವುದು ಯಾಕಾಗಿ? ಅವರ ಸಾಹಿತ್ಯವನ್ನಷ್ಟೇ ಓದಿದರೆ ಸಾಲದೇ? ಎನ್ನುವ ಪ್ರಶ್ನೆಗೆ ಆಕೆ ಅಗಲಗಣ್ಣಿಂದ ಬೆಚ್ಚಗೆ ನಗುತ್ತಾ “ಪುರಾಣಗಳನ್ನು ಕಾಲಧರ್ಮದ ಮಾಪಕದಲ್ಲಿ ನೋಡಿ ಅರ್ಥ ಮಾಡಿಕೊಳ್ಳುತ್ತೇವಲ್ಲ ಇದೂ ಹಾಗೇ” ಎಂದರು. ನಮ್ಮ ಸಣ್ಣತನ, ನಮ್ಮ ಅಗಾಧತೆ ಎರಡರ ಪಾಠಶಾಲೆಗೂ ಇರುವುದು ಸುತ್ತಾಟ ಎನ್ನುವ ಒಬ್ಬನೇ ಗುರು ಎನ್ನುವುದು ಸೋಜಿಗ.