• ಲಕ್ಷ್ಮಣ್ ಗೊರ್ಲಕಟ್ಟೆ

ನೀವು ಮೊದಲ ಬಾರಿಗೆ ಅಮೆರಿಕ ಪ್ರವಾಸಕ್ಕೆ ಹೋಗಲು ತಯಾರಾಗುತ್ತಿರುವಿರಾ? ಹಾಗಾದರೆ ಈ ಪುಸ್ತಕವನ್ನು ತಪ್ಪದೆ ಓದಿ. ನೀವು ಭೇಟಿನೀಡುವ ಸ್ಥಳಗಳ ಸಂಕ್ಷಿಪ್ತ ಆದರೆ ಬಹು ಉಪಯುಕ್ತ ಮಾಹಿತಿ ಇದರಲ್ಲಿದೆ. ನೀವು ವೀಸಾ, ಟಿಕೆಟ್, ಲಗೇಜ್ ಪ್ಯಾಕಿಂಗ್ ಇತ್ಯಾದಿಗಳಲ್ಲಿ ಬ್ಯುಸಿ ಆಗಿದ್ದೀರಾ? ಹಾಗಿದ್ದರೆ ಈ ಪುಸ್ತಕವನ್ನು ನಿಮ್ಮ ಪರ್ಸ್ ಅಥವಾ ಬ್ಯಾಕ್‌ಪ್ಯಾಕ್‌ನಲ್ಲಿ ಮರೆಯದೆ ಇಟ್ಟುಕೊಳ್ಳಿ. ವಿಮಾನ ಪ್ರಯಾಣದ ದೀರ್ಘ ಸಮಯದಲ್ಲಿ ಇದನ್ನು ಓದಿಕೊಳ್ಳಿ. ನಿಮಗೆ ನೀವೇ ಖಂಡಿತ ಥ್ಯಾಂಕ್ಸ್ ಹೇಳಿಕೊಳ್ಳುವಿರಿ!

ನೀವು ಈಗಾಗಲೇ ಅಮೆರಿಕ ಪ್ರವಾಸ ಮಾಡಿ ಮತ್ತೊಮ್ಮೆ ಅಲ್ಲಿಗೆ ಹೊರಟಿದ್ದೀರಾ? ನೀವೂ ಅವಶ್ಯವಾಗಿ ಈ ಪುಸ್ತಕವನ್ನು ಓದಿ. ಈಗಾಗಲೇ ನೀವು ನೋಡಿದ ಸ್ಥಳಗಳ ಬಗ್ಗೆ ನಿಮಗೆ ಬಹುಶಃ ಗೊತ್ತಿರದ ಮಾಹಿತಿ ದೊರೆಯಬಹುದು. ನೀವು ನೋಡುವ ಸ್ಥಳಗಳಿಗೆ ಸಮಯವನ್ನು ಹೊಂದಿಸಿಕೊಂಡು, ನೋಡದೆ ಇರುವ ಸ್ಥಳಗಳ ಬಗ್ಗೆ ನೀವು ಗಮನಹರಿಸಿ ಸರಿಪಡಿಸಿಕೊಳ್ಳಲು ಮೊದಲೇ ವ್ಯವಸ್ಥೆ ಮಾಡಿಕೊಳ್ಳಿ. ನೀವು ನೋಡಿದ ಸ್ಥಳಗಳ ಬಗ್ಗೆ ನಿಮಗೆ ಏನನ್ನಿಸಿತ್ತು? ಲೇಖಕರಿಗೆ ಯಾವ ರೀತಿ ಭಿನ್ನ ಅನುಭವ ಆಯಿತು? ಏಕೆ ಎಂಬುದನ್ನು ತಿಳಿದು ನಿಮಗೆ ಆಶ್ಚರ್ಯ ಆದರೂ ಆಗಬಹುದು. ನಯಾಗರ ಜಲಪಾತ ನಮ್ಮ ಜೋಗ ಜಲಪಾತದ ಮುಂದೆ ಸಪ್ಪೆ ಎಂದು ಅನಿಸಿತೇ ಇತ್ಯಾದಿ ಹಲವಾರು ಅನುಭವದ ಬಗ್ಗೆ ಓದಿರಿ.

ಇದನ್ನೂ ಓದಿ: ಲೆಸ್‌ ಲಗೇಜ್‌... ಈ ಪುಸ್ತಕ ಜತೆಗಿದ್ದರೆ ವಿದೇಶ ಪ್ರವಾಸ ಸುಲಭ

ನೀವು ಅನಿವಾರ್ಯ ಕಾರಣದಿಂದ ಅಮೆರಿಕ ಪ್ರವಾಸ ಮಾಡುವ ಸಂಭಾವ್ಯತೆ (ನನ್ನಂತೆ) ಇಲ್ಲವೇ? ನೀವೂ ಈ ಪುಸ್ತಕವನ್ನು ಓದಲೇಬೇಕು. ಕುಳಿತಲ್ಲೇ ಅಮೆರಿಕದ ಹಲವಾರು ಪ್ರೇಕ್ಷಣೀಯ ಸ್ಥಳಗಳ ಫೊಟೋ ಸಮೇತ ಲೇಖಕರು ಒಂದು ವರ್ಚುವಲ್ ಟೂರ್ ಮಾಡಿಸುತ್ತಾರೆ. ಓದುತ್ತಾ ಓದುತ್ತಾ, ಟೈಮ್ ಸ್ಕ್ವೇರ್ನಲ್ಲಿ ಓಡಾಡಿದ, 120 ವರ್ಷಗಳಷ್ಟು ಹಳೆಯದಾದ NYC ಸಬ್ಬ್ವೇ (ಮೆಟ್ರೋ) ಒಳಗೆ ಓಡಾಡಿದ, ಶಿಕಾಗೋ ನದಿಯ ನೀಲ ನೀರಿನಲ್ಲಿ ಕ್ರೂಸ್ ಟ್ರಾವೆಲ್‌ ಮಾಡಿದ ಇನ್ನೂ ಅನೇಕ ಸ್ವಾರಸ್ಯಗಳುಳ್ಳ ಅಮೆರಿಕದ ಸ್ಥಳಗಳನ್ನು ಸುತ್ತಾಡಿದ ಅನುಭವ ಆಗುವುದು ಖಂಡಿತ.

ಲೇಖಕರು ಮೂರು ತಿಂಗಳುಗಳ ಕಾಲ ಮೊದಲ ಅಮೆರಿಕ ಪ್ರವಾಸದಲ್ಲಿದ್ದಾಗ, ಅನೇಕ ಸ್ಥಳಗಳಿಗೆ ಭೇಟಿಕೊಟ್ಟಿದ್ದಾರೆ. ಸಾವಿರಾರು ಫೊಟೋಗಳನ್ನು ತೆಗೆದಿದ್ದಾರೆ. ಅವುಗಳಲ್ಲಿ ಸುಮಾರು 80 ಚಿತ್ರಗಳನ್ನು ಎದುರಿಟ್ಟುಕೊಂಡು, ಅವುಗಳನ್ನು ಹೇಗೆ ಪುಸ್ತಕದಲ್ಲಿ ಬಳಸಬಹುದು ಎಂದು ತಲೆ ಕೆರೆಯುತ್ತಾ ಕುಳಿತಾಗ ಹೊಳೆದದ್ದೇ ‘ಟಿಪ್ಪಣಿ’ಗಳುʼ ಎನ್ನುತ್ತಾರೆ ಲೇಖಕರು. ಇದನ್ನು ಓದುವಾಗ 75 ಪುಟ್ಟ ಪುಟ್ಟ ಟಿಪ್ಪಣಿಗಳಲ್ಲಿ ತಮ್ಮ ಪ್ರವಾಸದ ಅನುಭವವನ್ನು ಮತ್ತು ಸ್ವಾರಸ್ಯಕರವಾದ ವಿಷಯಗಳನ್ನು ಲೇಖಕರು ಓದುಗರ ಎದುರು ಕುಳಿತು ಹೇಳುತ್ತಿರುವಂತೆ ಭಾಸವಾಗುತ್ತದೆ. ಪ್ರತಿಯೊಂದು ಲೇಖನಕ್ಕೂ ಸಾಂದರ್ಭಿಕ ಚಿತ್ರಗಳು. ಓದಿದ ಮೇಲೆ ‘ನೋಡಿ ತಿಳಿಯುವಂತೆ’ ಪೂರಕವಾಗಿ ರಂಜಿಸುತ್ತವೆ. ಈ ಬಿಡಿ ಲೇಖನಗಳನ್ನು ಒಂದು, ಎರಡು, ಹೆಚ್ಚೆಂದರೆ ಮೂರು ನಿಮಿಷದಲ್ಲಿ ಓದಿ ಮುಗಿಸಬಹುದು. ಚಿತ್ರಗಳನ್ನು ನೋಡುವುದಂತೂ ಇದ್ದೇ ಇದೆ. ಈ ತಂತ್ರ ಈಗಿನ ‘ಫಾಸ್ಟ್ ಲೈಫ್ ಫಾಸ್ಟ್ ಫುಡ್’ ಸಂಸ್ಕೃತಿಯ ಪೀಳಿಗೆಗೆ ಇಷ್ಟವಾಗುತ್ತದೆ.

ಇದನ್ನೂ ಓದಿ: ದೇವಭೂಮಿಯಲ್ಲಿ ಪುರಾತನ ಬಾವಿ

ಒಂದು ದೇಶಕ್ಕೆ ಮೊದಲ ಬಾರಿ ಹೋದಾಗ ಮೂಡಬಹುದಾದ ಅಮಾಯಕತನದೊಂದಿಗೇ ಆ ದೇಶದಲ್ಲಿ ಸುತ್ತಾಡಿದಾಗ, ಆದ ಪ್ರವಾಸದ ಅನುಭವ ಮತ್ತು ಸ್ವಾರಸ್ಯಕರ ವಿಷಯಗಳ ಸಾರವೇ ಈ ಪುಸ್ತಕದ ವಸ್ತು ವಿಷಯ.

ಆರು ತಿಂಗಳ ವಿಪರೀತ ಚಳಿ, ನಂತರ ಏಪ್ರಿಲ್ ತಿಂಗಳಲ್ಲಿ ಒಮ್ಮೆಗೆ ಬಿಸಿಲು ಬಂದಾಗ ಯುವಕರು ಚೆಡ್ಡಿ ಮಾತ್ರ ಧರಿಸಿ ಬೀದಿಗಳಲ್ಲಿ ಸುತ್ತಾಡುವುದು ಸಾಮಾನ್ಯ ದೃಶ್ಯ. ಅದನ್ನು ಕಂಡು ಲೇಖಕರು ನೋಡುತ್ತಾ ನಿಲ್ಲುತ್ತಾರೆ. ಅವರ ಮಗಳು ನಯವಾಗಿ ʻಆ ರೀತಿ ನೋಡುತ್ತಾ ನಿಲ್ಲುವುದು ತರವಲ್ಲʻ ಎಂದು ಎಚ್ಚರಿಸುವವರೆಗೆ! ಇದು ಮತ್ತು ಅಮೆರಿಕದಲ್ಲಿ ತಮಗೆ ಪ್ರಿಯವಾದ ಪಾರ್ಲೆ ಜಿ ಬಿಸ್ಕೆಟ್ ಪತ್ತೆಹಚ್ಚಿ ಪುಳಕಿತರಾದ ಪ್ರಸಂಗ ಓದಿದವರಿಗೆ ನಗೆ ಹುಟ್ಟಿಸದಿರದು.

ಮೂರು ತಿಂಗಳ ಅಮೆರಿಕ ಪ್ರವಾಸದಲ್ಲಿ ಹೆಚ್ಚು ಇಷ್ಟವಾದ ಅನುಭವ ಶಿಕಾಗೋ ನದಿಯಲ್ಲಿ ಕೈಗೊಂಡ ಒಂದು ಗಂಟೆಯ ಕ್ರೂಸ್ ಪ್ರವಾಸ ಎನ್ನುತ್ತಾರೆ ಲೇಖಕರು. ಆದರೆ ʼಶಿಕಾಗೋ ನಗರ ನನಗೇಕೆ ಹೆಚ್ಚು ಆಪ್ತವಾಯಿತು ಎಂದು ಸ್ಪಷ್ಟವಾಗಿ ವಿವರಿಸಲು ನನ್ನಿಂದಾಗುತ್ತಿಲ್ಲʼ ಎಂಬ ಪ್ರಾಮಾಣಿಕ ನುಡಿಯನ್ನೂ ಅಳುಕಿಲ್ಲದೆ ಬರೆಯುತ್ತಾರೆ. ಈ ರೀತಿ ಕಂಡದ್ದನ್ನು ಕಂಡ ಹಾಗೆ ಅನಿಸಿದ್ದನ್ನು ಅನಿಸಿದ ಹಾಗೆ ಕಚ್ಚಾ ರೂಪದಲ್ಲೇ ಪ್ರಾಮಾಣಿಕವಾಗಿ ಬರೆದಿರುವುದು ಓದುಗರಿಗೆ ಆಪ್ಯಾಯಮಾನ ಎನಿಸದಿರದು.

ಕಣ್ಣಿಗೆ ಕಂಡ ಅನೇಕ ದೃಶ್ಯ ಸಂಗತಿಗಳನ್ನು ನೋಡಿ ಸುಮ್ಮನಾಗುವ ಜಾಯಮಾನದವರಲ್ಲ ಲೇಖಕರು. ಹೆದ್ದಾರಿಯಲ್ಲಿ ಸಾಗುವ ಉದ್ದ ಮೂತಿಯ ಬೃಹತ್ ಟ್ರಕ್‌ಗಳ ಬಗ್ಗೆ ಬರೆಯುತ್ತಾ ಅಮೆರಿಕದಲ್ಲಿ 70 ಪ್ರತಿಶತ ಸರಕು ಸಾಗಣೆ ಇಂಥ ಟ್ರಕ್‌ಗಳ ಮೂಲಕವೇ ಎಂಬ ಮಾಹಿತಿ ಕಲೆಹಾಕಿ, ಸಾಲಾಗಿ ನಿಂತ ಈ ಬೃಹತ್ ಟ್ರಕ್‌ಗಳ ಚಿತ್ರವನ್ನೂ ಕ್ಲಿಕ್ಕಿಸಿದ್ದಾರೆ. ಅಂತೆಯೇ ರಸ್ತೆಯಲ್ಲಿ ಪ್ರಯಾಣಿಸುವಾಗ ತಮ್ಮ ಕಾರಿನ ಪಕ್ಕದಲ್ಲೇ ಚಲಿಸುತ್ತಿದ್ದ 65 ವರ್ಷಗಳಷ್ಟು ಹಳೆಯ ‘ಶವರ್ಲೆ ಸ್ಟೇಷನ್ ವ್ಯಾಗನ್’ ಕಾರೊಂದನ್ನು ಅದು ಚಲಿಸುತ್ತಿರುವಾಗಲೇ (ತಾವು ಪಯಣಿಸುತ್ತಿದ್ದ ಕಾರಿನ ಕಿಟಕಿಯಿಂದಲೇ) ಕ್ಲಿಕ್ ಮಾಡಿ ಅದರ ಬಗ್ಗೆ ವಿವರಗಳನ್ನೂ ಬರೆದಿದ್ದಾರೆ.

ನಾರ್ಥ್ ವಿಲ್ಲೆ ಕಾಡಿನಲ್ಲಿ ಕತ್ತಲಲ್ಲಿ ನಿರ್ಭಯದಿಂದ ಓಡಾಡುವ ಒಂಟಿ ಮಹಿಳೆ, ಬೀದಿಗಳಲ್ಲಿ ಸ್ವಚ್ಛಂದವಾಗಿ ಓಡಾಡುವ ಜಿಂಕೆಗಳ ಹಿಂಡು, ನ್ಯೂಯಾರ್ಕ್ ನಗರದ ಷೇರು ಮಾರುಕಟ್ಟೆಯಲ್ಲಿ ಇರುವ ಗೂಳಿಯ ಸ್ಮಾರಕ, ಅದರ ಕಾಲುಗಳ ಒಳಗೆ ತೂರಿ ಅದರ ವೃಷಣ ಇತ್ಯಾದಿ ಭಾಗಗಳನ್ನು ಜನರು ಸವರುವ ಪರಿ, ವಾಷಿಂಗ್ಟನ್ ನಗರದ ಸ್ಮಿತ್ ಸೋನಿಯನ್ ಮ್ಯೂಸಿಯಂನಲ್ಲಿರುವ 146 ಮಿಲಿಯನ್ ಮಾದರಿಗಳು ಹೀಗೆ ಅನೇಕ ಸ್ವಾರಸ್ಯಕರ ವಿಷಯಗಳ ಬಗ್ಗೆ ಓದಿದವರಿಗೆ ಅಮೆರಿಕ ಪ್ರವಾಸ ಮಾಡಲೇಬೇಕು ಎಂದು ಅನಿಸದಿರದು.

ಪುಸ್ತಕವನ್ನು ಮೊದಲಿನಿಂದ ಪ್ರಾರಂಭಿಸಿಯೇ ಓದಬೇಕು ಎಂದಿಲ್ಲ. ಯಾವುದೋ ಪುಟ ತೆರೆದು ಓದಬಹುದು. ಯಾವೋ ಪುಟಗಳನ್ನು ಓದಿ ಬ್ರೇಕ್ ತೆಗೆದುಕೊಂಡು ಮತ್ತೆ ಯಾವುದೋ ಪುಟ ತೆರೆದು ಓದಲು ಆರಂಭಿಸಬಹುದು. ಬುಕ್ ಮಾರ್ಕ್ ಇಡುವ ಅವಶ್ಯಕತೆಯೇ ಬೇಡ.

ಪ್ರಯಾಣ ಮಾಡುವ ದಾರಿಯ ದೂರವನ್ನು ಮೈಲುಗಳ ಲೆಕ್ಕದಲ್ಲಿಯೇ ಬರೆದಿದ್ದಾರೆ. ನಮ್ಮಲ್ಲಿ ಮೈಲುಗಳ ಅಳತೆ ಹೋಗಿ ಕಿಲೋಮೀಟರ್ ಬಂದು ಬಹಳ ವರ್ಷಗಳಾದವು. ಅಮೆರಿಕದಲ್ಲಿ ಇನ್ನೂ ಮೈಲುಗಳ ಲೆಕ್ಕ ಇದೆಯೇ? ಇದರ ಬಗ್ಗೆ ಲೇಖಕರು ಬರೆದಂತೆ ಕಾಣಲಿಲ್ಲ. ಇರಲಿ. ಲೇಖಕರ ಈ ಪ್ರವಾಸಕ್ಕೆ ಸಹಾಯಕರಾದ ತಮ್ಮ ಮಗಳು ಮತ್ತು ಅವರ ಹಲವು ಸ್ನೇಹಿತರನ್ನು ಆತ್ಮೀಯತೆಯಿಂದ ನೆನೆದಿದ್ದಾರೆ. ಇವರೆಲ್ಲರೂ ಓದುಗರ ಮೆಚ್ಚುಗೆಗೆ ಭಾಜನರು. ಇದೊಂದು ಉತ್ತಮ ಪ್ರವಾಸಿ ಪುಸ್ತಕ. ಕೊಂಡು ಓದಿ.

ಪುಸ್ತಕ ಪರಿಚಯ:

ಪುಸ್ತಕದ ಹೆಸರು: ಇಲ್ಲಿ ಶಾಸ್ತ್ರ ಹೇಳಲಾಗುವುದು!

ಲೇಖಕ: ಶಶಿಧರ ಹಾಲಾಡಿ

ಪ್ರಕಾಶನ: ಸ್ನೇಹ ಬುಕ್ ಹೌಸ್, ಬೆಂಗಳೂರು. 9845031335

ಪುಟಗಳು: 190