ಮಠ-ಪೀಠಗಳ ನೆಲವೆಂದೇ ಗುರುತಿಸಿಕೊಂಡಿರುವ ಕರುನಾಡಿನ ಹೆಮ್ಮೆಯ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಕಾಯಕಯೋಗಿ ಶ್ರೀ ಶಾಂತವೀರ ಸ್ವಾಮೀಜಿಗಳು ಇಂದು ತಮ್ಮ 46 ನೆಯ ವರ್ಷದ ಜನ್ಮದಿನವನ್ನು ಸರಳವಾಗಿಯೇ ಆಚರಿಸಿಕೊಳ್ಳುತ್ತಿದ್ದಾರೆ. ಬಯಲು ಸ್ವಾಮೀಜಿಗಳೆಂದೇ ಹೆಸರು ಮಾಡಿ, ಶೂನ್ಯದಿಂದ ಪ್ರಾರಂಭಿಸಿ, ಕುಂಚಿಟಿಗ ಸಮುದಾಯವನ್ನು ಒಗ್ಗೂಡಿಸಿ, ಕುಂಚಿಟಿಗ ಮಹಾ ಸಂಸ್ಥಾನ ಮಠವನ್ನೇ ಹುಟ್ಟುಹಾಕಿ ಜಗತ್ಪ್ರಸಿದ್ಧಿಗೊಳಿಸಿರುವ ಕೀರ್ತಿ ಶ್ರೀ ಶಾಂತವೀರ ಸ್ವಾಮೀಜಿಗಳಿಗೆ ಸಲ್ಲುತ್ತದೆ.

ಬಾಲ್ಯ ಹಾಗೂ ವಿದ್ಯಾಭ್ಯಾಸ

ಮೂಲತಃ ಹೊಸದುರ್ಗ ತಾಲೂಕಿನ ಮಾಡದಕೆರೆ ಹೋಬಳಿಯ ಕೋಡಿಹಳ್ಳಿ ಗ್ರಾಮದವರಾದ ಶ್ರೀಗಳು ಅಪ್ಪಟ ರೈತಾಪಿ ಕುಟುಂಬದವರು. ಶ್ರೀನಿವಾಸಪ್ಪ ಹಾಗೂ ಸುಲೋಚನಮ್ಮ ದಂಪತಿಯ 3ನೆಯ ಮಗನಾಗಿ ಜನಿಸಿದ ಇವರ ಬಾಲ್ಯದ ಹೆಸರು ನಾಗರಾಜು. ಬಾಲ್ಯದಿಂದಲೇ ತಂದೆಯೊಂದಿಗೆ ತೆಂಗು, ಅಡಿಕೆ, ಬಾಳೆ ಕೃಷಿಯಲ್ಲಿ ತಂದೆಯೊಂದಿಗೆ ಕೈಜೋಡಿಸುತ್ತಿದ್ದ ಶ್ರೀಗಳು ತಂದೆತಾಯಿಯ ಪ್ರೀತಿಯ ಮಗನಾಗಿ ಬೆಳೆದವರು.

ಇದನ್ನೂ ಓದಿ: ಆಧುನಿಕ ದೃಷ್ಟಿ- ಸನಾತನ ಸಾರ

ಹುಟ್ಟೂರಾದ ಕೋಡಿಹಳ್ಳಿಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿದ ಶ್ರೀಗಳು, ಚಿತ್ರದುರ್ಗದ ಮಠದಲ್ಲಿಯೇ ಮುಂದಿನ ಶಿಕ್ಷಣವನ್ನು ಮಾಡಿದರು. ಹೈಸ್ಕೂಲು ಓದಿನ ನಂತರ ಗುರುಗಳ ಮಾರ್ಗದರ್ಶನದೊಂದಿಗೆ ಅಲ್ಲಿಯೇ ಬಸವತತ್ತ್ವ ಮಹಾವಿದ್ಯಾಲಯವೆಂಬ ಅಧ್ಯಾತ್ಮ ಕೇಂದ್ರವನ್ನು ಸೇರಿ, ಸಾಧಕ, ಬೋಧಕ, ಸುಧಾರಕ ಎಂದು ಮೂರು ವರ್ಷದ ತರಬೇತಿ ಪಡೆದುಕೊಂಡರು. ಆಮೇಲೆ ಪ್ರಚಾರಕನಾಗಿ ಸಮಾಜ ಸಂಘಟನೆಗೆ ಮುಂದಾದರು. ಅಲ್ಲಿ ಬಸವತತ್ತ್ವ, ಕ್ರೈಸ್ತ ಧರ್ಮ, ಇಸ್ಲಾಂ, ಯಹೂದಿ ಧರ್ಮ, ಬೌದ್ಧ ಧರ್ಮ ಮತ್ತು ಬಸವ ಧರ್ಮಕ್ಕಿರುವ ತೌಲನಿಕ ಅಧ್ಯಯನವನ್ನು ಐದು ವರ್ಷಗಳ ಕಾಲ ಮಾಡಿದರು. ನಂತರ ಸಮಾಜಕ್ಕೆ ಪ್ರಚಾರಕರಾಗಿ ಬಡ್ತಿ ಪಡೆದುಕೊಂಡು ಬಸವ ತತ್ತ್ವ ಪ್ರಚಾರವನ್ನು ಮಾಡುತ್ತಲೇ ಸಮಾಜವನ್ನು ಸಂಘಟಿಸುವ ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ.

Untitled design (43)

ಕೃಷಿಯಿಂದ ಸಂಸ್ಥಾನ

ಕೃಷಿ ಕುಟುಂಬದಿಂದಲೇ ಬಂದಿರುವ ಶ್ರೀ ಶಾಂತವೀರ ಮಹಾಸ್ವಾಮೀಜಿಯವರಿಗೆ ಅದನ್ನು ಮುಂದುವರಿಸಿಕೊಂಡು ಮಠಕ್ಕೆ ಉತ್ತಮ ಆದಾಯ ಮಾರ್ಗವಾಗಿಸುವ ಉದ್ದೇಶವಿತ್ತು. ಭಕ್ತರಲ್ಲಿ ಮಠದ ಏಳಿಗೆಗೆ ಸಹಕಾರ ಕೇಳುವ ಬದಲು ಹೊಸದುರ್ಗ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಬಾಡಿಗೆ ಪಡೆದ 40ಎಕರೆ ಭೂಮಿಯಲ್ಲಿ ದಾಳಿಂಬೆ ಕೃಷಿ ಮಾಡಿ ಬಂದಂಥ ಲಾಭದಲ್ಲಿ ಮಟದ ಏಳಿಗೆಯನ್ನು ಕಾಣುತ್ತಿದ್ದಾರೆ. ಮಠಕ್ಕಾಗಿಯೇ ಒಂದಷ್ಟು ಭೂಮಿಯನ್ನು ಖರೀದಿಸಿ, ಹೊಸದುರ್ಗ ಪಟ್ಟಣದ ಹತ್ತಿರದಲ್ಲಿ ಗುಡ್ಡ ಹೊಂದಿಕೊಂಡಿರುವ ವಿಶಾಲವಾದ ಜಾಗದಲ್ಲಿ ಕುಂಚಿಟಿಗ ಮಹಾಸಂಸ್ಥಾನದ ನಿರ್ಮಾಣಕ್ಕೆ ಮುಂದಾದಾಗ ಶ್ರೀಗಳ ಕೃಷಿ ಆದಾಯದ ಜತೆಗೆ ಭಕ್ತರು ಹಾಗೂ ಸರಕಾರದ ನೆರವು ಸಹ ದೊರೆಯಿತು. ಇದರ ಪರಿಣಾಮವಾಗಿ ಇಂದು ಹೊಸದುರ್ಗದ ಕುಂಚಗಿರಿಯಲ್ಲಿ ಭವ್ಯ ಕುಂಚಿಟಿಗ ಸಂಸ್ಥಾನ ತಲೆಎತ್ತಿ ನಿಂತಿದೆ. ಇದರ ಪರಿಶ್ರಮ, ಕೀರ್ತಿ ಶ್ರೀಗಳಿಗೆ ಸಲ್ಲಬೇಕು.

ರಾಜ್ಯದ ಹಲವೆಡೆ ಮಠದ ಶಾಖೆಗಳು

ಹೊಸದುರ್ಗದಲ್ಲಷ್ಟೇ ಅಲ್ಲದೆ ರಾಜ್ಯ ವಿವಿಧ ಜಿಲ್ಲೆಗಳಲ್ಲೂ ಮಠದ ಶಾಖೆಗಳಿವೆ. ಬೆಂಗಳೂರು, ಹೊನ್ನಾಳಿ, ಚಿತ್ರದುರ್ಗ, ನೆಲಮಂದಲಮ ಕಡೂರು ತಾಲೂಕಿನ ಮಲ್ಲೇನಹಳ್ಳೀ, ಶಿರಾ ತಾಲೂಕಿನ ಮಾದೇನಹಳ್ಳಿಯೂ ಶಾಖಾ ಮಠಗಳಿದ್ದು, ಸಮುದಾಯ ಭವನ, ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಉದ್ದೇಶವೂ ಶ್ರೀಗಳಿಗಿದೆ. ಸಮಾಜ ಸಂಘಟನೆ ಹಾಗೂ ಅಭಿವೃಧ್ಧಿಗೆ ಇನ್ನೂ ನೂರಾರು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ರೂಪಿಸಲಾಗುತ್ತಿದೆ.

ಸಂದರ್ಶನ:

ಜನ್ಮದಿನವಲ್ಲ, ಜನಸೇವೆಯ ದಿನ – ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮೀಜಿಗಳು

ಬಾಲ್ಯದ ದಿನಗಳಲ್ಲಿ ನಿಮ್ಮನ್ನು ಸಮಾಜ ಸೇವೆಯತ್ತ ಪ್ರೇರೇಪಿಸಿದ ಪ್ರಮುಖ ಘಟನೆ ಯಾವುದು?

ಮಠದೊಂದಿಗಿನ ನಮ್ಮ ಒಡನಾಟ ಇಂದು ನಿನ್ನೆಯದಲ್ಲ. ನಮ್ಮ ತಾಯಿಯ ಚಿತ್ರದುರ್ಗದ ಪಾಲವ್ವನಹಳ್ಳಿ ಎಂಬ ಗ್ರಾಮದವರು. ಚಿಕ್ಕಂದಿನಿಂದಲೂ ಚಿತ್ರದುರ್ಗಕ್ಕೆ ಹೋದಾಗಲೆಲ್ಲಾ ಅಲ್ಲಿನ ಮಠಕ್ಕೆ ಹೋಗುವ ಸಂಪ್ರದಾಯ, ಅಲ್ಲಿ ಪ್ರಸಾದ ಮಾಡುವ ರೂಢಿಯೂ ಇತ್ತು. ಮಠ ಸೇರುವ, ದೀಕ್ಷೆ ಪಡೆದುಕೊಳ್ಳುವ ತುಡಿತ ಹಿಂದಿನಿಂದಲೂ ಇತ್ತು. ಆದರೆ ಅದನ್ನು ವ್ಯಕ್ತಪಡಿಸುವುದಕ್ಕೆ 2-3 ವರ್ಷಗಳೇ ಬೇಕಾಯ್ತು. 1992ನೆಯ ಇಸವಿಯಲ್ಲಿಯೇ ಮಠಕ್ಕೆ ಸೇರಿಕೊಂಡೆವು. 1997ರಲ್ಲಿ ದೀಕ್ಷೆ ತೆಗೆದುಕೊಂಡೆವು. ದೀಕ್ಷೆ ಪಡೆದಾಗ ನಮಗಿನ್ನೂ 15-16 ವರ್ಷ ಪ್ರಾಯವಾಗಿತ್ತು.. ಅಲ್ಲಿಂದ ನಡೆದುಬಂದ ಹಾದಿ ಇಂದು ದೀಕ್ಷೆ ತೆಗೆದುಕೊಂಡು 29ವರ್ಷಗಳೇ ಸಂದಿವೆ.

ಜಗದ್ಗುರು ಪೀಠದ ಜವಾಬ್ದಾರಿ ವಹಿಸಿಕೊಂಡಾಗ ನೀವು ಹಾಕಿಕೊಂಡಿದ್ದ ಮೊದಲ ಗುರಿ ಯಾವುದು? ಅದು ಇಂದು ಎಷ್ಟರ ಮಟ್ಟಿಗೆ ಈಡೇರಿದೆ?

ಕುಂಚಿಟಿಕ ಸಮಾಜಕ್ಕೆ ಯಾರೂ ಗುರುಗಳಿರಲಿಲ್ಲ. ಈ ಸಮಾಜದ ಸಂಘಟನೆಗಾಗಿ ಯಾವುದೇ ಒಂದು ಮಠವೂ ಇರಲಿಲ್ಲ. ಹಾಗಾಗಿ 97 ರಿಂದಲೂ ನಾವು ಜಗದ್ಗುರು ಕುಂಚಿಟಿಗ ಶ್ರೀ ಮಹಾ ಸಂಸ್ಥಾನ ಮಠ ಎಂದು ನಾಮಕರಣ ಮಾಡಿಕೊಂಡು, ಜಗದ್ಗುರು ಪೀಠದ ಪ್ರಥಮ ಪೀಠಾಧ್ಯಕ್ಷರಾಗಿದ್ದೇವೆ. 2008ರಲ್ಲಿ ಮಠವನ್ನು ನೋಂದಣಿ ಮಾಡಿಕೊಂಡೆವು. ಹಾಗಾಗಿ ನಾವು ಬಯಲಿಗೇ ಸ್ವಾಮಿಯಾದವರು. ಯಾವುದೇ ಆಸ್ತಿ, ಮಠ, ಪರಂಪರೆಗೆ ಪೀಠಾಧಿಪತಿಯಾಗದೆಯೇ, ಖಾಲಿ ಕೈಯಲ್ಲಿ ನಾವು ಸ್ವಾಮಿಗಳಾದವರು. ಸಮಾಜ ಸಂಘಟನೆಯೇ ನಮ್ಮ ಮುಖ್ಯ ಧ್ಯೇಯ ಎಂಬ ಉದ್ದೇಶವನ್ನಿಟ್ಟುಕೊಂಡು, ಸಮಾಜಕ್ಕಾಗಿ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದೆವು. ಅಲ್ಲಿಂದ ಹಂತ ಹಂತವಾಗಿ ಜಮೀನುಗಳನ್ನು ಕೊಂಡುಕೊಂಡು ಕಟ್ಟಡಗಳನ್ನು ಕಟ್ಟಲು ಪ್ರಾರಂಭಿಸಿದೆವು. ಮೊದಲ ಹತ್ತು ವರ್ಷಗಳ ಕಾಲ ಮನಸುಗಳನ್ನು ಕಟ್ಟುವ ಪ್ರಯತ್ನದಲ್ಲಿ ತೊಡಗಿದ್ದೆವು. ಅಂದು ಕುಂಚಿಟಿಗ ಸಮಾಜದ ಅಸ್ತಿತ್ವದ ಬಗ್ಗೆ ಯಾರಿಗೂ ಅರಿವೇ ಇರಲಿಲ್ಲ. ಜಾತಿ ಸಮೀಕರಣವೂ ಅಷ್ಟಾಗಿ ಇರಲಿಲ್ಲ. ಆದರೆ ಇಂದು ಜಾತಿಯ ವೈಭವೀಕರಣವೇ ಅತಿಯಾಗುತ್ತಿದೆ.

Untitled design (44)

ನೀವು ಕಾಯಕ ದಾಸೋಹ ಮತ್ತು ತ್ರಿವಿಧ ದಾಸೋಹದಲ್ಲಿ ನಂಬಿಕೆ ಇಟ್ಟವರು. ಈ ತತ್ತ್ವಗಳ ಬಗ್ಗೆ ಹೇಳಿ.

ಕಾಯಕವನ್ನು ಎಲ್ಲರೂ ಮಾಡಲೇಬೇಕು. ಬಂದಂಥ ಸಂಪಾದನೆಯಲ್ಲಿ ಸ್ವಲ್ಪವಾದರೂ ಸಮಾಜಕ್ಕೆ ಹಂಚಲೇಬೇಕು. ಮನಸು ತಲ್ಲಣಕ್ಕೊಳಗಾದಾಗ ಶಿವ ಯೋಗ, ಧ್ಯಾನ, ಪೂಜೆ, ಅರ್ಚನೆ ಅಥವಾ ಅಭಿಷೇಕ ಯಾವುದಾದರೂ ಒಂದು ಪ್ರಕ್ರಿಯೆಯಲ್ಲಿ ತೊಡಗಿಕೊಂಡರೆ ಮಾತ್ರ ಮನಸ್ಸಿನ ಚಂಚಲತೆಯಿಂದ ಹೊರಬರುವುದಕ್ಕೆ ಸಾಧ್ಯ. ಕಾಯಕ ದಾಸೋಹ ಮತ್ತು ಶಿವಯೋಗ ಮನುಷ್ಯನಿಗೆ ಮೂಲಭೂತವಾಗಿ ಬೇಕಾಗಿರುವ ತತ್ತ್ವಗಳು. ಸಂಪಾದಿಸು, ಹಂಚು ಇವೆರಡರಿಂದ ಸಿಗುವ ನೆಮ್ಮದಿಯಿಂದ ಅಂತರ್ಮುಖಿಯಾಗು ಎಂಬುದೇ ನಿಜವಾದ ಪ್ರಕ್ರಿಯೆ. ನಮಗೆ ಹೆಚ್ಚು ಪ್ರಭಾವ ಬೀರಿದ್ದೇ 12ನೇ ಶತಮಾನದ ಶರಣರ ವಚನಗಳು ಮತ್ತು ವಚನ ಚಳವಳಿಗಳು. ಆ ತತ್ತ್ವದಲ್ಲೇ ನಾವು ಸಾಗಿದ್ದೇವೆ, ಸಾಗುತ್ತಲೇ ಇದ್ದೇವೆ.

ತಾವು ಶೋಷಿತ ಸಮುದಾಯಗಳ ಶಿಕ್ಷಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದೀರಿ. ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸುವುದು ಹೇಗೆ?

ಇತ್ತೀಚಿನ ಶಿಕ್ಷಣ ಎಂದರೆ ಅದು ವ್ಯಾಪಾರೀಕರಣ ಎಂಬಂತಾಗಿದೆ. ಮೊದಲೆಲ್ಲಾ ಗುರುಕುಲದ ಮಾದರಿಯಲ್ಲಿ ಶಿಕ್ಷಣ ವ್ಯವಸ್ಥೆಯಿತ್ತು. ಆಗ ಬೋಧಕರೂ ಉಚಿತವಾಗಿ ಬಂದು ಬೋಧನೆ ಮಾಡುತ್ತಿದ್ದರು. ಈ ಕಾರಣಕ್ಕೆ ಮಠಗಳೂ ಉಚಿತ ಶಿಕ್ಷಣವನ್ನೇ ಕೊಡುತ್ತಿದ್ದವು. ಆದರೆ ಇಂದು ಉಚಿತ ಶಿಕ್ಷಣ ನೀಡುವ ಅಧ್ಯಾಪಕರೇ ಇಲ್ಲದಿರುವಾಗ ಶಿಕ್ಷಣ ಸಂಸ್ಥೆಗಳು, ಮಠ ಮಾನ್ಯಗಳು ಏನುತಾನೇ ಮಾಡಲು ಸಾಧ್ಯ. ಇದರ ನಡುವೆ ಎಲ್ಲರೂ ಇಂಗ್ಲಿಷ್‌ ಶಿಕ್ಷಣದ ಮೋಡಿಗೆ ಒಳಗಾಗಿದ್ದಾರೆ. ಹಾಗಾಗಿ ನೈತಿಕ ಶಿಕ್ಷಣ ಕುಸಿದುಹೋಗಿದೆ. ಸಮಾಜದಲ್ಲೂ ಹೆತ್ತವರು, ಗುರು ಹಿರಿಯರ ಮಾತು ಕೇಳದ ವಾತಾವರಣ ನಿರ್ಮಾಣವಾಗಿದೆ. ಇಷ್ಟಕ್ಕೆಲ್ಲಾ ಕಾರಣವಾದ ಅಭಿವೃದ್ಧಿ ಆವಿಷ್ಕಾರಗಳು ಬೇಕಿರಲಿಲ್ಲ. ಮತ್ತೆ ಗುರುಕುಲ ಶಿಕ್ಷಣದತ್ತ ಮುಖ ಮಾಡುವುದು ಇದಕ್ಕೆ ಉತ್ತಮ ಪರಿಹಾರವಾಗಬಹುದು.

ಸಿಟಿ ಮಾತ್ರ ಅಲ್ಲ ಗ್ರಾಮೀಣ ಭಾಗದಲ್ಲೂ ಯುವಜನತೆ ಕೆಟ್ಟ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಇಂಥ ಅಭ್ಯಾಸಗಳನ್ನು ತಡೆಗಟ್ಟಲು ನೀವು ಹಮ್ಮಿಕೊಂಡಿರುವ ವಿಶೇಷ ಯೋಜನೆಗಳ ಬಗ್ಗೆ ತಿಳಿಸಿ.

ಮಠದಲ್ಲಿ ನಾವು ಪ್ರತಿ ತಿಂಗಳು ಪಂಚಾಯತಿಗಳನ್ನು ಮಾಡುತ್ತೇವೆ. ಪ್ರತಿಯೊಂದು ಸಾಮಾಜಿಕ ಕಾರ್ಯಕ್ರಮಗಳಲ್ಲೂ ಭಾಗಿಯಾದಾಗ ದುಶ್ಚಟಗಳಿಂದ ಮುಕ್ತರಾಗುವಂತೆ ಯುವ ಜನತೆಗೆ ಕರೆ ನೀಡುತ್ತೇವೆ. ಕಳೆದ 23 ವರ್ಷಗಳಿಂದ ಪ್ರತಿ ತಿಂಗಳ 10ನೇ ತಾರೀಕಿನಂದು ʻಸುಜ್ಞಾನ ಸಂಗಮʼ ಎಂಬ ಮಾಸಿಕ ಸಭೆ ಕಾರ್ಯಕ್ರಮವನ್ನು ಮಾಡುತ್ತಲೇ ಬಂದಿದ್ದೇವೆ. ಪ್ರತಿ ವರ್ಷ ಫೆ.28ರಂದು ಸಂಗಮೇಶ್ವರ ಜಯಂತಿಯನ್ನೂ ಆಯೋಜಿಸುತ್ತಲೇ ಬಂದಿದ್ದು, ಈ ಬಾರಿ 36ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಪ್ರತಿ ವರ್ಷ ಜುಲೈ 22 ರಂದು ನಾವು ದೀಕ್ಷೆ ತೆಗೆದುಕೊಂಡ ದಿನದಂದು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನೂ ಮಾಡುತ್ತೇವೆ. ಹೀಗೆ ಸಮಾಜಮುಖಿಯಾದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜವನ್ನು ದುಶ್ಚಟಗಳಿಂದ ಮುಕ್ತವಾಗಿಸುವ ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದೇವೆ.

Untitled design (45)

ಸಮಾಜದಲ್ಲಿ ಇನ್ನೂ ಬೇರೂರಿರುವ ಜಾತಿ ತಾರತಮ್ಯವನ್ನು ಹೋಗಲಾಡಿಸಲು ಕೇವಲ ಕಾನೂನು ಸಾಕೇ ಅಥವಾ ಧಾರ್ಮಿಕ ಮುಖಂಡರ ಪಾತ್ರ ಇದರಲ್ಲಿ ಎಷ್ಟು ಮುಖ್ಯ?

ಸಮಾಜವನ್ನು ಹಾಳುಮಾಡುತ್ತಿರುವ ಜಾತಿ ವ್ಯವಸ್ಥೆ, ಜಾತಿ ತಾರತಮ್ಯದಿಂದ ಎಲ್ಲ ಕ್ಷೇತ್ರಗಳೂ ಬಳಲುತ್ತಿವೆ. ಇತ್ತೀಚಿನ ದಿನಗಳಲ್ಲಿ ಪ್ರಬಲ ಜಾತಿಯವರಿಗಷ್ಟೇ ಸರಕಾರದ ಸೌಲಭ್ಯಗಳು ಸಿಗುತ್ತಿವೆ. ಅಲ್ಪಸಂಖ್ಯಾತರನ್ನು ಸರಕಾರ, ಜನಪ್ರತಿನಿಧಿಗಳು, ರಾಜಕೀಯ ವ್ಯವಸ್ಥೆ ದೂರ ಇಡುವ ಕೆಲಸವನ್ನು ಮಾಡುತ್ತಿದೆ. ಉದಾಹರಣೆಗೆ ಕುಂಚಿಟಿಗರು, ಉಪ್ಪಾರರು, ತಿಗಳರು, ಮಡಿವಾಳರು, ಯಾದವರು ಇಂಥ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಬೇಕಿರುವ ಸರಕಾರ ಬಲಾಢ್ಯ ಸಮುದಾಯಗಳ ರಾಜಕೀಯ ಶಕ್ತಿಗೆ ಹೆದರಿ ಆ ಜಾತಿ, ಮಠಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತಿರುವುದು ಖೇದಕರ ವಿಚಾರ. ಈ ಜಾತಿ ತಾರತಮ್ಯವನ್ನು ಹೋಗಲಾಡಿಸುವುದು ಧಾರ್ಮಿಕ ಮುಖಂಡರಿಂದ ಅಸಾಧ್ಯ. ಕಲಿಯುಗದಲ್ಲಿ ರಾಜಕೀಯ ಶಕ್ತಿಯೇ ಬಲಾಢ್ಯ ಶಕ್ತಿ. ಜನಸಂಖ್ಯೆಯಿದ್ದರಷ್ಟೇ ಸಮಾಜದಲ್ಲಿ ಗೌರವ.

ಮಹಿಳೆಯರ ಅಭಿವೃದ್ಧಿ ಮತ್ತು ಅವರಿಗೆ ಸಾಮಾಜಿಕ ನ್ಯಾಯ ಸಿಗುವಲ್ಲಿ ಮಠಗಳ ಕೊಡುಗೆ ಹೇಗಿರಬೇಕು?

ಸಮಾಜದಲ್ಲಿ ಜಾತಿ, ಲಿಂಗ, ವರ್ಗ, ವರ್ಣ ತಾರತಮ್ಯವಿರಬಾರದು ಎಂಬುದು ಮಠ ಮಾನ್ಯಗಳು, ಬಸವಾದಿ ಶರಣರ ಪ್ರಮುಖ ಆಶಯ. ಅದಕ್ಕಾಗಿಯೇ ಬಸವಣ್ಣನವರು ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ, ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ವಚನವನ್ನು ಹೇಳಿದ್ದಾರೆ. ಅಕ್ಕಮಹಾದೇವಿ,, ಸತ್ಯಕ್ಕ, ದುಗ್ಗಳೆಗೆ ಸ್ಥಾನ ಕೊಡುವ ಮೂಲಕ, ಸೂಳೆಸಂಕವ್ವಳ ಮನ ಪರಿವರ್ತನೆ ಮಾಡಿ, ಶರಣೆಯನ್ನಾಗಿ ಮಾಡುವ ಮೂಲಕ ಮಠಗಳು ಹಾಗೂ ಧಾರ್ಮಿಕ ವ್ಯವಸ್ಥೆ ಸಾಮಾಜಿಕ ಕೆಲಸಗಳನ್ನು ಮಾಡುತ್ತಲಿವೆ. ಒಮ್ಮೆ ಮೈಮೇಲೆ ಕಾವಿ ವಸ್ತ್ರ ತೊಟ್ಟುಕೊಂಡಮೇಲೆ ನಮಗೆ ಎಲ್ಲರೂ ಒಂದೇ ಸಮಾನರು. ಮಾನವರೆಲ್ಲರೂ ಒಂದೇ ಎಂಬುದಷ್ಟೇ ನಮ್ಮ ಆಶಯ.

ಇಂದಿನ ಯುವ ಪೀಳಿಗೆಯು ತಾಂತ್ರಿಕವಾಗಿ ಮುಂದುವರಿಯುತ್ತಿದ್ದರೂ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅವರಿಗೆ ನೀವು ನೀಡುವ ಕಿವಿಮಾತು ಏನು?

ಇಂದಿನ ಮಕ್ಕಳು ಬುದ್ಧಿವಂತರು, ಹೃದಯವಂತರು, ಆದರೆ ಜೊಳ್ಳಾಗಿದ್ದಾರೆ. ಖಿನ್ನತೆಗೆ ಒಳಗಾಗಿದ್ದಾರೆ. ಶಿಕ್ಷಣವಿದೆ ಆದರೆ ಸಹನೆಯಿಲ್ಲ. ಅಕ್ಷರವಿದ್ದರೂ ಅಹಂಕಾರ ಹೆಚ್ಚಾಗಿದೆ. ಇಂದಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆಯಿದೆ. ವಿದ್ಯೆಯನ್ನು ಬಲ್ಲವರಾದರೂ ಬದುಕಿನಲ್ಲಿ ಸೋಲುತ್ತಿದ್ದಾರೆ. ಆತ್ಮಬಲವಿಲ್ಲ. ಇದರಿಂದಾಗಿ ಬೇಗನೆ ಖಿನ್ನತೆಗೆ ಒಳಗಾಗುವುದು, ದುರಭ್ಯಾಸ- ದುಶ್ಚಟಗಳಿಗೆ ಒಳಗಾಗುವುದು, ಕ್ಷುಲ್ಲಕ ಕಾರಣಗಳಿಂದಾಗಿ ಪ್ರಾಣ ಬಿಡುವುದನ್ನು ಮಾಡುತ್ತಾರೆ. ಇದಕ್ಕೆ ಮೊಬೈಲ್‌, ಅಂತರ್ಜಾಲವೇ ಪ್ರಮುಖ ಕಾರಣ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಗಟ್ಟಿ ಸಮಾಜವನ್ನು ಕಟ್ಟುವುದು ಕಷ್ಟಸಾಧ್ಯವಾದೀತು. ಹೀಗೆ ಆಗಬಾರದೆಂದರೆ ಪೋಷಕರು ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು. ಉತ್ತಮ ಕೌಟುಂಬಿಕ ವ್ಯವಸ್ಥೆ ನಿರ್ಮಾಣವಾದರಷ್ಟೇ ಎಲ್ಲದಕ್ಕೂ ಪರಿಹಾರ ಸಿಗಲುಸಾಧ್ಯ. ಕುಟುಂಬದ ಉದ್ಧಾರವೇ ರಾಷ್ಟ್ರದ ಉದ್ಧಾರ, ರಾಷ್ಟ್ರದ ಉದ್ಧಾರವೇ ವಿಶ್ವದ ಉದ್ಧಾರ. ವ್ಯಕ್ತಿ, ವ್ಯಕ್ತಿಗತವಾಗಿ ಉದ್ಧಾರವಾಗದ ವಿನಾ ರಾಷ್ಟ್ರದಲ್ಲಿ ಬದಲಾವಣೆ, ಬೆಳವಣಿಗೆ ಸಾಧ್ಯವಿಲ್ಲ.

Untitled design (47)

ಈ ಜನ್ಮದಿನದ ಅಂಗವಾಗಿ ನೀವು ಸಂಕಲ್ಪ ಮಾಡಿರುವ ಹೊಸ ಸಮಾಜಮುಖಿ ಕಾರ್ಯಕ್ರಮಗಳು ಯಾವುವು?

ನಮ್ಮ ಜನ್ಮದಿನದ ಸಂದರ್ಭದಲ್ಲಿ ಕೈಗೊಂಡ ಸಂಕಲ್ಪ ಈಡೇರಿದೆಯಂಬ ಖುಷಿ ನಮಗಿದೆ. ನಮ್ಮ ಜಾತಿಯಲ್ಲಿ ಜನಸಂಖ್ಯೆ ಕಡಿಮೆಯಿರುವುದರಿಂದ ಸರಕಾರ ಯಾವುದೇ ಜಾಗವನ್ನು ಬೆಂಗಳೂರಿನಲ್ಲಿ ಕೊಟ್ಟಿರಲಿಲ್ಲ.ಆದರೆ ಕಳೆದ ಮೂರು ತಿಂಗಳಿನಿಂದ ದಲಿತ ಹಿಂದೂ ಮಠಾಧೀಶರ ಒಕ್ಕೂಟದ ನಿರಂತರ ಹೋರಾಟದ ಫಲವಾಗಿ ಸರಕಾರ ಸುಮಾರು 20 ಮಠಗಳಿಗೆ ಸೇರಿ 40 ಎಕರೆ ಜಾಗವನ್ನು ಅನುದಾನವಾಗಿ ನೀಡಿದ್ದು, ನಮ್ಮ ಮಠಕ್ಕೂ ಸುಮಾರು 4 ಎಕರೆ 1 ಗುಂಟೆ ಜಾಗ ಸಿಕ್ಕಿದೆ. ಅದು ಈ ಬಾರಿಯ ಸಾಧನೆ ಎನ್ನಬಹುದು. ಹುಟ್ಟುಹಬ್ಬದ ಸಂದರ್ಭದಲ್ಲಿ ಇದಕ್ಕಿಂತ ಸಿಹಿ ಸುದ್ದಿ ಬೇರೇನಿರಲು ಸಾಧ್ಯ.

ಹೊಸದುರ್ಗದಂಥ ಅರೆ-ಮಲೆನಾಡು ಮತ್ತು ಬಯಲು ಸೀಮೆಯ ಭಾಗದಲ್ಲಿ ರೈತರು ಎದುರಿಸುತ್ತಿರುವ ಕಷ್ಟಗಳಿಗೆ ಶಾಶ್ವತ ಪರಿಹಾರವೇನು? ಮಠಗಳು ರೈತರಲ್ಲಿ ಆತ್ಮವಿಶ್ವಾಸ ತುಂಬಲು ಏನು ಮಾಡಬಹುದು?

ಮಠಗಳಿಗೂ ರೈತರಿಗೂ ಅವಿನಾಭಾವ ಸಂಬಂಧ. ರೈತ ಬೆಳೆದರಷ್ಟೇ ಮಠದಲ್ಲಿ ದಾಸೋಹ ಬರುವುದು, ದಾಸೋಹ ಬಂದರಷ್ಟೇ ನಾವು ಮಠದಲ್ಲಿ ಭಕ್ತರಿಗೆ ಊಟ ಹಾಕುವುದಕ್ಕೆ ಸಾಧ್ಯ. ಮಠಗಳು ಯಾವತ್ತೂ ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದೆ. ಆದರೆ ಸರಕಾರದ ಇಲಾಖೆಗಳು ಇದಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಹೊಸ ಆವಿಷ್ಕಾರಗಳು, ರೋಗಗಳಿಗೆ ಸೂಕ್ತ ಔಷಧಗಳನ್ನು ಕಂಡುಕೊಳ್ಳುತ್ತಿಲ್ಲ. ಯಾವುದೇ ಇಲಾಖೆಯ ಮುಖ್ಯಸ್ಥರು ಹಳ್ಳಿಗಳನ್ನು ತಲುಪುತ್ತಿಲ್ಲ. ಸರಕಾರದ ಬದ್ಧತೆಯಿಲ್ಲದ ವ್ಯವಸ್ಥೆಗೆ ರೈತನ ಭೂಮಿ ಇಂದು ಬರಡಾಗಿಹೋಗಿದೆ. ವ್ಯಾವಹಾರಿಕ ಬೆಳೆಗೆ ಜೋತು ಬಿದ್ದು, ಪಾರಂಪರಿಕ ಕೃಷಿ, ಸಾವಯವ ಕೃಷಿ ದೂರವಾಗುತ್ತಿದೆ. ರೈತರ ಇಂಥ ಸಮಸ್ಯೆಗಳಿಗೆ ನಾವು ಸದಾ ಬೆಂಬಲವಾಗಿ ನಿಂತಿದ್ದೇವೆ. ಕೃಷಿ ಪದ್ಧತಿಯಲ್ಲಿ ಹೊಸತನ ತರುವ ಪ್ರಯತ್ನಕ್ಕೆ ಸದಾ ಶ್ರಮಿಸುತ್ತಲೇ ಬಂದಿದ್ದೇವೆ.

ಗಿಡ ಬೆಳೆಸಿ, ನಾಡು ಉಳಿಸಿ" ಎನ್ನುವ ಮಾತನ್ನು ನೀವು ಕೃತಿಯಲ್ಲಿ ತಂದವರು. ಭವಿಷ್ಯದ ಪೀಳಿಗೆಗೆ ನೀರು ಮತ್ತು ಮಣ್ಣನ್ನು ಉಳಿಸಿಕೊಡಲು ನಮ್ಮ ಜವಾಬ್ದಾರಿ ಏನು?

ಪ್ರತಿಯೊಬ್ಬರೂ ತಮ್ಮ ತಮ್ಮ ಆಯುಷ್ಯದಷ್ಟಾದರೂ ಗಿಡಗಳನ್ನು ನೆಡಬೇಕು ಎಂಬುದು ನಮ್ಮ ಅಭಿಪ್ರಾಯ. ಗಿಡಗಳನ್ನು ಸಾಧ್ಯವಾದಷ್ಟು ಸಂರಕ್ಷಣೆ ಮಾಡದೆ ಹೋದರೆ, ಇಂದಿನ ಹಾಗೂ ಮುಂದಿನ ಪೀಳಿಗೆಗೆ ಉಸಿರಾಡುವುದಕ್ಕೂ ಶುದ್ಧ ಗಾಳಿ ಸಿಗುವುದಿಲ್ಲ. ಎಲ್ಲವೂ ಮಾನವ ಸರಪಳಿಯನ್ನೇ ಆಧಾರವಾಗಿಸಿಕೊಂಡಿದೆ. ಪರಿಸರ ಸಂರಕ್ಷಣೆಯ ಕೆಲಸವನ್ನು ಎಲ್ಲರೂ ಮಾಡಲೇಬೇಕು. ಕೇವಲ ಮಠ ಮಾನ್ಯಗಳಷ್ಟೇ ಮಾಡುವುದಲ್ಲ, ಸರಕಾರಗಳೂ ಮಾಡಬೇಕಾಗುತ್ತದೆ. ಆದರೆ ಇಂದು ಸರಕಾರದ ಅನೇಕ ಯೋಜನೆಗಳೇ ನಮಗೆ ಅಡ್ಡವಾಗಿವೆ. ಸರಕಾರ ಈ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.

ಇಂದು ಧರ್ಮದ ಹೆಸರಿನಲ್ಲಿ ಸಂಘರ್ಷಗಳು ನಡೆಯುತ್ತಿವೆ. ಒಬ್ಬ ಸಾಮಾನ್ಯ ಮನುಷ್ಯನಿಗೆ ಧರ್ಮ ಎನ್ನುವುದು ಶಾಂತಿಗೋಸ್ಕರವೋ ಅಥವಾ ಶಕ್ತಿ ಪ್ರದರ್ಶನಕ್ಕೋ?

ದಯವೇ ಧರ್ಮದ ಮೂಲ ಎಂದು ಬಸವಣ್ಣವರು ಹೇಳಿದ್ದಾರೆ. ದಯೆಯಿದ್ದರೆ ಮಾತ್ರವೇ ಧರ್ಮ ಉಳಿಯಲು ಸಾಧ್ಯ. ಬಿದ್ದಿರುವನನ್ನು ಮೇಲೆತ್ತುವುದು ಧರ್ಮವೇ ಹೊರತು, ಸಂಖ್ಯಾಬಲ ತೋರಿಸಿ ಜೋರಾಗಿ ಭಾಷಣ ಮಾಡಿ ಚಪ್ಪಾಳೆ ತಟ್ಟಿಸಿಕೊಳ್ಳುವುದು ಧರ್ಮವಲ್ಲ. ಅಂತಃಕರಣದಿಂದ ಯಾರಿಗೆ ಅವಶ್ಯಕತೆಯಿದೆಯೋ ಅವನಿಗೆ ಸಹಾಯ ಮಾಡುವುದೇ ಧರ್ಮ. ಅದು ಶಾಂತಿಗೋಸ್ಕರವೇ ಹೊರತು ಶಕ್ತಿ ಪ್ರದರ್ಶನಕ್ಕಲ್ಲ.

ಸಮಾಜದಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ನೀವು ವಿಜ್ಞಾನ ಮತ್ತು ಆಧ್ಯಾತ್ಮವನ್ನು ಹೇಗೆ ಸಮೀಕರಿಸುತ್ತೀರಿ?

ಮೂಢನಂಬಿಕೆಯನ್ನು ಇವತ್ತು ಅನಿವಾರ್ಯವಾಗಿ ಬಿಡಲೇಬೇಕಾದ ಪರಿಸ್ಥಿತಿಯಿದೆ. ಮೂಢನಂಬಿಕೆಗಳನ್ನು ಅನುಸರಿಸುವ ಕಾರಣಕ್ಕೇ ಸಮಾಜದಲ್ಲಿ ಬೆಳವಣಿಗೆಗಳಾಗುತ್ತಿಲ್ಲ, ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದೇವೆ. ನಮ್ಮ ಸಮಾಜಕ್ಕೆ ಅಂಟಿರುವ ದೊಡ್ಡ ಶಾಪವದು. ಅದನ್ನು ಧಾರ್ಮಿಕ ಕೇಂದ್ರಗಳು ಮುಂದುವರಿಸಿಕೊಂಡು ಹೋಗುತ್ತಿರುವುದೇ ಅವಿವೇಕ ವಿಚಾರ. ಹಬ್ಬ ಹರಿದಿನಗಳ ಆಚರಣೆ ಬೇಕು, ಆದರೆ ದೇವರು ಧರ್ಮದ ಹೆಸರಿನಲ್ಲಿ ಶೋಷಣೆ ಮಾಡುತ್ತಿರುವುದು ಅಕ್ಷಮ್ಯ ಅಪಾರಾಧ.

ಬಸವಣ್ಣನವರ ಮತ್ತು ಶರಣರ ವಚನಗಳು ಇಂದಿನ 21ನೆ ಶತಮಾನದ ಸಮಸ್ಯೆಗಳಿಗೆ ಹೇಗೆ ಪರಿಹಾರವಾಗಬಲ್ಲವು?

ಬಸವಣ್ಣ, ಶರಣರ ವಚನಗಳು ಅತ್ಯಂತ ಸರಳೀಕೃತವಾಗಿರುವುದು. ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ ಎನ್ನುವ ಬಸವಣ್ಣನವರ ವಚನಗಳನ್ನು ಎಲ್ಲರೂ ಅನುಸರಿಕೊಂಡರೆ ಉತ್ತಮ ಸಮಾಜವನ್ನು ಸುಲಭವಾಗಿಯೇ ನಿರ್ಮಾಣಮಾಡಲು ಸಾಧ್ಯವಾದೀತು. ಬಸವಣ್ಣನವರು ಅರಿವೇ ಗುರು ಎನ್ನುತ್ತಾರೆ, ಗುರುವಾದರೂ ಕಾಯಕವೇ ಮಾಡಬೇಕು ಎನ್ನುತ್ತಾರೆ,. ಆಚಾರವೇ ಸ್ವರ್ಗ, ಅನಾಚಾರವೇ ನರಕವೆನ್ನುತ್ತಾರೆ. ಸಮಾಜದ ಒಳಿತಿಗಾಗಿ ಎಲ್ಲವನ್ನೂ ಸರಳೀಕೃತ ಮಾದರಿಯಲ್ಲೇ ತಿಳಿಸಿರುವ ಬಸವಣ್ಣನ ವಚನಗಳಿಂದಲೇ ಸಕಲ ಸಮಸ್ಯೆ, ಸವಾಲು, ಯೋಚನೆಗಳಿಗೆ ಪರಿಹಾರ ಕಾಣಲು ಸಾಧ್ಯ.

ಜನಪದ ಕಲೆಗಳು ಅಳಿಯುತ್ತಿರುವ ಈ ಕಾಲದಲ್ಲಿ, ಗ್ರಾಮೀಣ ಕಲಾವಿದರನ್ನು ಪ್ರೋತ್ಸಾಹಿಸಲು ನಿಮ್ಮ ಮಠದ ಮುಂದಿರುವ ಯೋಜನೆಗಳೇನು?

ನಾವು ತಿಂಗಳ ಕಾರ್ಯಕ್ರಮದಲ್ಲಿ ಭಜನೆ, ಸತ್ಸಂಗವನ್ನು ಮಾಡಿಸುತ್ತೇವೆ. ವೀರಗಾಸೆಯನ್ನು ಆಡಿಸುತ್ತೇವೆ. ಬಿಡುವಿದ್ದಾಗ ಹಳ್ಳಿಗಳಿಗೆ ಖುದ್ದು ತೆರಳಿ ಅನೇಕ ಜನಪದ ಕಲಾಪ್ರಕಾರಗಳನ್ನು ಸಂಭ್ರಮಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತೇವೆ. ನಮ್ಮ ಪ್ರತೀ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಳಿಸಿ, ಬೆಳೆಸುವುದಾಗಿರುತ್ತದೆ. ಅದಕ್ಕೇ ಮೊದಲ ಆದ್ಯತೆಯಿರುತ್ತದೆ.

ಇದನ್ನೂ ಓದಿ: ಪುತ್ತಿಗೆ ಮಠಕ್ಕೆ ಬರಲಿದ್ದಾರೆ ಪ್ರಧಾನಿ ಮೋದಿ!

ಅದ್ದೂರಿ ಕಾರ್ಯಕ್ರಮಗಳಿಗಿಂತ ಸರಳತೆಗೆ ನೀವು ಹೆಚ್ಚು ಒತ್ತು ನೀಡುತ್ತೀರಿ. ಈ ಸರಳ ಜೀವನದ ಹಿಂದಿನ ತತ್ವಜ್ಞಾನವೇನು?

ಅದ್ದೂರಿ ಮಾಡಲು ಹೋದರೆ ಸಮಸ್ಯೆ, ಸವಾಲುಗಳನ್ನು ಎದುರಿಸಬೇಕಾಗುತ್ತವೆ. ಇದರಿಂದ ಸಮಾಜಕ್ಕೆ ಯಾವ ಒಳಿತೂ ಆಗುವುದಿಲ್ಲ. ಅದರ ಬದಲು ಸಮಾಜಕ್ಕಾಗಿ ನಾವು ಏನಾದರೂ ಕೊಡುಗೆ ನೀಡಬೇಕು, ಅಭಿವೃದ್ಧಿಪರ ಕೆಲಸಗಳನ್ನು ಮಾಡಬೇಕೆನ್ನುವ ಕಾರಣಕ್ಕೆ ನಾವು ಪ್ರತಿ ತಾಲೂಕಿನಲ್ಲಿ ಸ್ಥಳ ಖರೀದಿ ಮಾಡುವ ಮೂಲಕ ಸಮುದಾಯ ಭವನ ಕಟ್ಟಿದ್ದೇವೆ. ಈಗಾಗಲೇ ಹೊನ್ನಾಳಿಯಲ್ಲಿ ಸಮುದಾಯ ಭವನ, ಸಂತೆ ಬೆನ್ನೂರಿನಲ್ಲಿ 3 ಎಕರೆ ಜಾಗದಲ್ಲಿ ಸಮುದಾಯ ಭವನ ಹಾಗೂ ವಿದ್ಯಾಸಂಸ್ಥೆಗಳನ್ನು ಕಟ್ಟಿದ್ದೇವೆ. ಚಿತ್ರದುರ್ಗದಲ್ಲಿ 5 ಎಕರೆ ಜಾಗ ತೆಗೆದುಕೊಂಡು ಶಿಕ್ಷಣ ಸಂಸ್ಥೆ ಕಟ್ಟುವುದು ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಹೊಸದುರ್ಗದಲ್ಲಷ್ಟೇ ಅಲ್ಲದೆ ಬೆಂಗಳೂರು ವಿಜಯನಗರದಲ್ಲಿ ದಾನಿಗಳು ಕೊಟ್ಟ ಮನೆ ಕೆಡವಿ, ಹೆಣ್ಣುಮಕ್ಕಳಿಗೆ ಉಚಿತವಾಗಿ ಐಎಎಸ್‌, ಕೆಎಎಸ್‌ ತರಬೇತಿ ಕೇಂದ್ರದ ವ್ಯವಸ್ಥೆ ಮಾಡಬೇಕೆಂಬ ತಯಾರಿಗಳು ನಡೆಯುತ್ತಿವೆ. ವಿಜಯನಗರದಲ್ಲೇ ಹಾಸ್ಟೆಲ್‌ ನಿರ್ಮಾಣವನ್ನೂ ಮಾಡುತ್ತಿದ್ದೇವೆ. ಬೆಂಗಳೂರಿನ ಹೆಚ್‌ಎಂಟಿ ಲೇಔಟ್‌ ನಲ್ಲೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಕಟ್ಟಡಗಳ ನಿರ್ಮಾಣವಾಗುತ್ತಿವೆ. ಹೀಗೆ ನಿರಂತರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಲೇ ಆದರ್ಶದ ಅಭಿವೃದ್ಧಿಯ ಕೆಲಸಗಳಿಗೆ ಪ್ರೋತ್ಸಾಹಿಸುತ್ತಿದ್ದೇವೆ.

“ಜನ್ಮದಿನವು ಆಚರಣೆಯಾಗದೆ, ಅದು ಜನಸೇವೆಯ ದಿನವಾಗಬೇಕು" ಎಂಬುದು ನಿಮ್ಮ ಆಶಯ. ಈ ವರ್ಷದ ನಿಮ್ಮ ಜನ್ಮದಿನದಂದು ಭಕ್ತರಿಂದ ನೀವು ನಿರೀಕ್ಷಿಸುವ ಉಡುಗೊರೆ (ಸಮಾಜ ಸೇವೆ ಅಥವಾ ಬದಲಾವಣೆ) ಯಾವುದು?

ಕಳೆದ 29 ವರ್ಷಗಳಿಂದಲೂ ನಾವು ಸಮಾಜ ಸೇವೆಯನ್ನು ಮಾಡುತ್ತಲೇ ಬಂದಿದ್ದೇವೆ. ಪ್ರತಿಷ್ಠೆಗಾಗಿ ಅಥವಾ ಅಸ್ತಿತ್ವಕ್ಕಾಗಿ ಸಂಘಗಳ ರಚನೆ ಮಾಡದೆಯೇ, ತಾಲೂಕಿಗೊಂದು ಸಂಘ ಮಾಡಿ, ಅದರ ಮೂಲಕ ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದೇವೆ. ಮುಂದೆಯೇ ಇಂಥ ಕೆಲಸಗಳನ್ನು ಮಾಡುತ್ತಲೇ ಇರುತ್ತೇವೆ. ಈ ವರ್ಷದ ನಮ್ಮ ಜನ್ಮದಿನದಂದು ಭಕ್ತರಿಂದ ನಾವು ನಿರೀಕ್ಷಿಸುವ ಉಡುಗೊರೆಯೂ ಅದೇ. ನಿಮ್ಮ ಕೈಲಾಗುವಷ್ಟು ಸಮಾಜ ಸೇವೆಯನ್ನು ಮಾಡುತ್ತಲೇ ಇರಿ. ಸಮಾಜದ ಪಿಡುಗುಗಳನ್ನು ತೊಡೆದುಹಾಕಲು ಕೈಜೋಡಿಸಿ, ಹೊಸ ಬದಲಾವಣೆಗೆ ನಾಂದಿ ಹಾಡಿ.

Untitled design (46)

ವಿಶ್ವವಾಣಿ ಸಮೂಹದ ಜತೆ ಕೂಡ ಸಾಕಷ್ಟು ವಿದೇಶ ಪ್ರವಾಸ ಮಾಡಿದ್ದೀರಿ. ನಿಮ್ಮ ಪ್ರವಾಸ ಆಸಕ್ತಿ ಬಗ್ಗೆ ಹೇಳಿ.

ಪ್ರವಾಸ ಹೋಗುವುದು ನಮ್ಮ ಹವ್ಯಾಸವಾದ್ದರಿಂದ ಈಗಾಗಲೇ 16 ದೇಶಗಳನ್ನು ಸುತ್ತಿದ್ದೇವೆ. ವಿಶ್ವವಾಣಿ ಸಮೂಹದ ಜತೆಗೆ ಅದರಲ್ಲೂ ವಿಶ್ವೇಶ್ವರ ಭಟ್ಟರ ಜತಗೆ ನಾವು ಈಗಾಗಲೇ ಚೀನಾ ಹಾಗೂ ಆಸ್ಟ್ರೇಲಿಯಾ ದೇಶಗಳಿಗೆ ಪ್ರವಾಸವನ್ನು ಕೈಗೊಂಡಿದ್ದೇವೆ. ನಾವು ಕಂಡಂತೆ ವಿಶ್ವೇಶ್ವರ ಭಟ್‌ ಅವರು ಚಲಿಸುವ ಗ್ರಂಥಾಲಯವಿದ್ದಂತೆ. ಅವರಿಂದ ಅನೇಕ ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಅವರೊಂದಿಗೆ ಒಂದು ಕ್ಷಣ ಕಳೆಯುದರೂ ಅದು ಸಮಯದ ಸದುಪಯೋಗವಾದಂತೆ. ಸುಮ್ಮನೇ ಪ್ರವಾಸ ಹೋಗುವುದು ದೊಡ್ಡ ವಿಚಾರವಲ್ಲ, ಜ್ಞಾನಿಗಳೊಂದಿಗೆ ಅನ್ವೇಷಣೆ ಮಾಡುವುದು ಎಲ್ಲದಕ್ಕೂ ಮಿಗಿಲಾದುದು. ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎಂಬಂತೆ ಈ ವಿಶೇಷ ಅನುಭವ ನಮಗೆ ಲಭ್ಯವಾಗಿದೆ. ಮತ್ತೆ ಅವಕಾಶ ಸಿಕ್ಕರೆ ಅವರೊಂದಿಗೆ ಪ್ರಯಾಣಿಸುವ ಮನಸು ನಮಗಿದೆ. ಅವರು ನಮಗೆ ಹವ್ಯಾಸಿ ಗೆಳೆಯರಿದ್ದಂತೆ.