Wednesday, November 26, 2025
Wednesday, November 26, 2025

ಪುತ್ತಿಗೆ ಮಠಕ್ಕೆ ಬರಲಿದ್ದಾರೆ ಪ್ರಧಾನಿ ಮೋದಿ!

ಗೀತಾ ಪಾರಾಯಣದಲ್ಲಿ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಸನಾತನ ಧರ್ಮ ಮತ್ತು ರಾಷ್ಟ್ರೀಯವಾದ ಇವೆರಡನ್ನೂ ಪಾಲಿಸುತ್ತ ಗೌರವಿಸುತ್ತ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೇ ಮೊದಲ ಬಾರಿಗೆ ಶ್ರೀ ಪುತ್ತಿಗೆ ಮಠಕ್ಕೆ ಆಗಮಿಸುತ್ತಿದ್ದಾರೆ. ದೇಶಾದ್ಯಂತ ಹಲವಾರು ಹಿಂದೂ ದೇವಾಲಯಗಳಿಗೆ ಭೇಟಿಯಿತ್ತು ದೇವರ ದರ್ಶನ ಪಡೆದಿರುವ ಪ್ರಧಾನಿ ಮೋದಿ, ಶ್ರೀ ಪುತ್ತಿಗೆ ಕೃಷ್ಣಮಠಕ್ಕೆ ಆಗಮಿಸುತ್ತಿರುವುದು ಇಡೀ ದೇಶದ ಗಮನವನ್ನು ಉಡುಪಿಯತ್ತ ಸೆಳೆದಿದೆ.

ಇದು ವಿಶ್ವ ಗೀತಾ ಪರ್ಯಾಯ

ಶ್ರೀ ಕೃಷ್ಣನ ಉಡುಪಿಯಲ್ಲಿ ಪರ್ಯಾಯದ ಪರ್ವ ಜಗಮಗಿಸುತ್ತಿದೆ. ವಿಶ್ವ ಶಾಂತಿಯ ಪ್ರತಿಪಾದಕ ಮಠಗಳು ವೈವಿಧ್ಯಮಯ ದೀಪಾಲಂಕಾರಗಳೊಂದಿಗೆ ರಂಗೇರಿವೆ. ಇಲ್ಲಿ ಅನುದಿನವೂ ಜನಸಾಗರವೇ ಸೇರುತ್ತಿದ್ದು, ಇಷ್ಟ ದೇವರ ದರ್ಶನಕ್ಕೆ, ಭಗವದ್ಗೀತೆಯ ಪಠಣ, ಲೇಖನ, ಮನನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಈ ಬಾರಿ ಪರ್ಯಾಯ ಭಗವದ್ಗೀತೆ ಮತ್ತು ಗೀತಾಚಾರ್ಯನಿಗೆ ಮುಡಿಪಾಗಿದ್ದು, ಎರಡು ವರ್ಷಗಳಿಂದ ನಡೆಯುತ್ತಿರುವ ಈ ಆಚರಣೆಗೆ ವಿಶ್ವ ಗೀತಾ ಪರ್ಯಾಯ ಎಂದು ನಾಮಕರಣ ಮಾಡಲಾಗಿದೆ. ಇದು ಭಗವದ್ಗೀತೆಯನ್ನು ಮತ್ತು ಗೀತಾ ಕರ್ತೃ ಶ್ರೀ ಕೃಷ್ಣನನ್ನು ಪರ್ಯಾಯದ ಮೂಲಕ ಪೂಜಿಸಿ ಗೌರವಿಸುತ್ತಿರುವ ಪರಿ. ಈ ಬಾರಿಯ ಗೀತಾ ಜಯಂತಿಯ ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮಗಳು ಈಗಾಗಲೇ ಉಡುಪಿಯ ಶ್ರೀ ಪುತ್ತಿಗೆ ಕೃಷ್ಣ ಮಠದಲ್ಲಿ ಅನುರಣಿಸುತ್ತಿವೆ. ಬಂದವರೆಲ್ಲ ಕಣ್ಣರಳಿಸಿ, ಮುಕ್ತ ಮನಸಿನಿಂದ ದೀಪಗಳ ದಿವ್ಯ ಕಾಂತಿಯ ಜತೆಗೆ ನಿತ್ಯವೂ ವಿವಿಧ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಾತುರದ ಕಣ್ಣುಗಳಿಂದ ಕೃಷ್ಣನ ಸಾನ್ನಿಧ್ಯವನ್ನು ತಮ್ಮೊಳಗೆ ತುಂಬಿಕೊಳ್ಳುತ್ತಿದ್ದಾರೆ.

ಪ್ರಧಾನಿ ಮೋದಿ ಆಗಮನ

ಗೀತೋತ್ಸವದ ಕಾರ್ಯಕ್ರಮಗಳಲ್ಲಿ ಒಂದಾದ, ನವೆಂಬರ್‌ 28ರಂದು ಗೀತಾ ಮಂದಿರದ ಎದುರಿನ ಆವರಣದಲ್ಲಿ ನಡೆಯಲಿರುವ ʻಲಕ್ಷ ಕಂಠ ಗೀತಾ ಪಾರಾಯಣʼ ಈಗಾಗಲೇ ಹೆಚ್ಚು ಜನರ ಗಮನ ಸೆಳೆದಿದೆ. ಹೌದು, ಈ ಗೀತಾ ಪಾರಾಯಣದಲ್ಲಿ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಸನಾತನ ಧರ್ಮ ಮತ್ತು ರಾಷ್ಟ್ರೀಯವಾದ ಇವೆರಡನ್ನೂ ಪಾಲಿಸುತ್ತ ಗೌರವಿಸುತ್ತ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೇ ಮೊದಲ ಬಾರಿಗೆ ಶ್ರೀ ಪುತ್ತಿಗೆ ಮಠಕ್ಕೆ ಆಗಮಿಸುತ್ತಿದ್ದಾರೆ. ದೇಶಾದ್ಯಂತ ಹಲವಾರು ಹಿಂದೂ ದೇವಾಲಯಗಳಿಗೆ ಭೇಟಿಯಿತ್ತು ದೇವರ ದರ್ಶನ ಪಡೆದಿರುವ ಪ್ರಧಾನಿ ಮೋದಿ, ಶ್ರೀ ಪುತ್ತಿಗೆ ಕೃಷ್ಣಮಠಕ್ಕೆ ಆಗಮಿಸುತ್ತಿರುವುದು ಇಡೀ ದೇಶದ ಗಮನವನ್ನು ಉಡುಪಿಯತ್ತ ಸೆಳೆದಿದೆ. ವಿಶೇಷವೆಂದರೆ ಲಕ್ಷಾಂತರ ಭಕ್ತಾದಿಗಳ ಜತೆಯಲ್ಲಿ ಪ್ರಧಾನಿ ಮೋದಿ ಕೂಡ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಿ ಭಗವದ್ಗೀತೆಯ ಪಠಣ ಮಾಡಲಿದ್ದಾರೆ. ಪುತ್ತಿಗೆ ಮಠ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಗೀತಾ ಪಾರಾಯಣದ ಜತೆಗೆ ತಮ್ಮ ನೆಚ್ಚಿನ ಪ್ರಧಾನಿಯನ್ನು ಕಂಡು ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ. ಇದೇ ಕಾರಣಕ್ಕೆ ಈಗಾಗಲೇ ಉಡುಪಿಯಲ್ಲಿ ಹಾಗೂ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿ ಸಾಕಷ್ಟು ತಯಾರಿಗಳೂ ನಡೆದಿವೆ. ಇನ್ನೂ ನಡೆಯುತ್ತಲೇ ಇವೆ.

PM Modi attending Geeta Mahotsava in Udupi

ಯೋಗಿ ಆದಿತ್ಯನಾಥ್ರಿಗೂ ಆಹ್ವಾನ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಸಂತ ಸಂದೇಶ ಮತ್ತು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಈಗಾಗಲೇ ಆಹ್ವಾನಿಸಲಾಗಿದೆ. ಸ್ವತಃ ಯೋಗಿಯಾಗಿರುವ ಯೋಗಿ ಆದಿತ್ಯನಾಥ್ ಅವರ ಆಗಮನವು ಈ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಲಿದೆ. ವೈಭವೋಪೇತವಾಗಿ ನಡೆಯಲಿರುವ ಈ ಆಚರಣೆಯಲ್ಲಿ, ದೇಶ ಮತ್ತು ರಾಜ್ಯಗಳ ಆಡಳಿತ ಜತೆಗೆ ಧಾರ್ಮಿಕ ಕಾರ್ಯಗಳಲ್ಲಿ ರಾಷ್ಟ್ರವ್ಯಾಪಿಯಾಗಿ ಗುರುತಿಸಿಕೊಂಡವರ ಭಾಗಿತ್ವವು ಹೆಚ್ಚು ಜನರ ಚಿತ್ತಾಕರ್ಷಣೆಗೆ ಕಾರಣವಾಗಲಿದೆ. ಇವರೂ ಉಡುಪಿಯಲ್ಲಿ ನಡೆಯಲಿರುವ ಈ ಪರ್ಯಾಯದ ಕಾರ್ಯಕ್ರಮಗಳಿಗೆ ಆಗಮಿಸಿದರೆ ಇದು ಮೋದಿ ಮತ್ತು ಯೋಗಿ ಭಾಗವಹಿಸಿದ ಪರ್ಯಾಯವಾಗಿ ಉಡುಪಿಯ ಇತಿಹಾಸದ ಪುಟಗಳಲ್ಲಿ ಸೇರಲಿದೆ. ಈ ಅಪರೂಪದ ಸಮ್ಮಿಲನ ನೋಡಲು ಇಲ್ಲಿಗೆ ಲಕ್ಷಾಂತರ ಜನರು ಒಟ್ಟುಗೂಡುವ ನಿರೀಕ್ಷೆಗಳಿವೆ.

ಗೀತಾ ಮಂದಿರ : ಗೋಡೆಗಳೆಲ್ಲ ಗೀತೆಗೆ ಮೀಸಲು

ಶ್ರೀ ಕೃಷ್ಣ ಮಠದ ನಿರ್ಗಮನ ದ್ವಾರದಲ್ಲೇ ಬಹುಮಹಡಿಯ ಬೃಹತ್‌ ಕಟ್ಟಡ ಗೀತಾ ಮಂದಿರ, ಭಗವದ್ಗೀತೆಗೆ ಗುಡಿಯಾಗಿ ತಲೆ ಎತ್ತಿ ನಿಂತಿದೆ. ಉತ್ಸುಕತೆಯಿಂದ ಒಳಹೊಕ್ಕರೆ, ಮೊದಲಿಗೆ ಕಿವಿಗೆ ಬೀಳುವುದು ಆನಂದ ಲಹರಿ ಹಾಡುವ ಭಗವದ್ಗೀತೆ, ಕಣ್ಣಿಗೆ ಬೀಳುವುದು ಕಪ್ಪು ಶಿಲೆಗಳ ಮೇಲೆ ಹಾಲೆರೆದಂತೆ ಕಾಣುವ ಭಗವದ್ಗೀತೆಯ 700ಶ್ಲೋಕಗಳು. ವಿಶೇಷವೆಂದರೆ ಇದನ್ನು ಕೆತ್ತಿದವರಿಗೂ ಸಂಸ್ಕೃತ ಬಾರದು, ಭಕ್ತಿಯ ಕಾರಣಕ್ಕೆ ಬರೆದ ಎಲ್ಲವೂ ಭಕ್ತಗಣವನ್ನು ಭಾವಪರವಶಾಗುವಂತೆ ಮಾಡುವ ಶಕ್ತಿ ಹೊಂದಿವೆ. ಕೇಳಿದರೂ ನೋಡಿದರೂ ಎಲ್ಲವೂ ಆನಂದ ಲಹರಿ. ಎರಡನೇ ಮಹಡಿಯಲ್ಲಿ ಕೈಮಗ್ಗದ ಉಡುಗೆಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಭಗವದ್ಗೀತೆ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗೆ ಈ ಮಂದಿರದಲ್ಲಿ ಕೋಟಿ ಗೀತಾ ಲೇಖನ ಯಜ್ಞ ಸಮರ್ಪಣಾ ಮಂದಿರ, ಛಾಯಾಚಿತ್ರ ಎಕ್ಸಿಬಿಷನ್‌, ಹಾಂ..3Dಯಲ್ಲಿ ವಿಶ್ವದರ್ಶನ ಪ್ರದರ್ಶನ ಕಣ್ಣಿಗೆ ಕಟ್ಟಿಕೊಡುವಂತಿದೆ. ಆರನೇ ಮಹಡಿಯಲ್ಲಿ ಸಂಪೂರ್ಣ ಹವಾ ನಿಯಂತ್ರಿತ ಸಂಗೀತ, ಸಾಹಿತ್ಯ, ಉಪನ್ಯಾಸ, ಯಕ್ಷಗಾನ ಮತ್ತಿತರ ಕಾರ್ಯಕ್ರಮಗಳಿಗೆ 350 ಜನರು ಕೂಡಬಹುದಾದ ಮಂಟಪ ನಿರ್ಮಾಣವಾಗಿದೆ. ಇಲ್ಲಿಂದ ಕೃಷ್ಣ ಮಠ ಮತ್ತು ಸುತ್ತಲಿನ ಸುಂದರ ಪರಿಸರವನ್ನು ಆಸ್ವಾದಿಸಬಹುದು. ಈ ಮಂದಿರದ ಹಿಂಭಾಗದಲ್ಲಿ ಯಾತ್ರಿಗಳಿಗೆ ಉಳಿದುಕೊಳ್ಳಲು ಸುಸಜ್ಜಿತ ವಾಸ್ತವ್ಯಕ್ಕೆ ಅನುವು ಮಾಡಿಕೊಡಲಾಗಿದೆ. ಈ ಗೀತಾ ಮಂದಿರ ಹೊರಗಿನಿಂದ ಭವ್ಯವಾಗಿ ಕಂಡು ಒಳ ಹೊಕ್ಕುತ್ತಿದ್ದಂತೆ ಭಗವದ್ಗೀತೆಯ ಶಕ್ತಿ ಅಗಾಧತೆ ಅರಿತವರಿಗೆ, ಅರಿಯಲು ಬಯಸುವವರಿಗೆ ದಿವ್ಯವಾಗಿ ಅನುಭವದ ನೆಲೆಯಲ್ಲಿ ನಿಲ್ಲುತ್ತದೆ. ಜಾತಿ, ಲಿಂಗ, ಧರ್ಮ, ವಯಸ್ಸು ಯಾವುದರ ಸೋಂಕು ಇಲ್ಲಿ ಎಲ್ಲಿಯೂ ಇಲ್ಲ. ಎಲ್ಲರೂ ಸ್ವಚ್ಛಂದವಾಗಿ ಓಡಾಡಬಹುದು. ಇಲ್ಲಿ ಸಿಂಗರಿಸಿದ ಸುಂದರ ಶ್ರೀಕೃಷ್ಣನನ್ನು ಕಂಡು ಕೋಟಿ ಗೀತಾ ಲೇಖನ ಯಜ್ಞಕ್ಕೆ ಪುಸ್ತಕಗಳನ್ನೂ ಆಶೀರ್ವಾದದೊಂದಿಗೆ ಪಡೆದು, ಬರೆದು ಮರಳಿಸಿ ಶ್ರೀಕೃಷ್ಣನ ಪ್ರಸಾದವಾಗಿ ಮರಳಿ ಪಡೆಯಬಹುದು.

Sri krishna of puttige matha

ಉಡುಪಿ ಈಗ ಭಗವದ್ಗೀತೆಯ ಬ್ರಹ್ಮಾಂಡ

ಗೀತಾ ಜಯಂತಿಯ ಭಾಗವಾಗಿ ಗೀತೋತ್ಸವ ಆಚರಿಸಲಾಗುತ್ತಿದೆ. ಈ ಉತ್ಸವದಲ್ಲಿ ಸಂತ ಸಂದೇಶ, ಅಂತಾರಾಷ್ಟ್ರೀಯ ಸಮ್ಮೇಳನ, ಅಖಂಡ ಉದಯಾಸ್ತಮಾನ ಗೀತಾ ಪಾರಾಯಣ, ಭಗವದ್ಗೀತಾ ಯಾಗ, ನಿತ್ಯ ಭಗವದ್ಗೀತಾ ವಿಶೇಷ ಪ್ರವಚನಗಳು ಈಗಾಗಲೇ ಉಡುಪಿಯ ಶ್ರೀಕೃಷ್ಣ ಮಠವನ್ನು ನಿತ್ಯ ನೂತನವಾಗಿಸಿದ್ದು ಸಹಸ್ರಾರು ಭಕ್ತರು ಪ್ರತಿನಿತ್ಯ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅವರ ಭಕ್ತಿ ಭಾವಗಳು ಇಮ್ಮಡಿಗೊಳ್ಳುವಂತೆ ಭಗವದ್ಗೀತೆಯ ಚಿಂತನೆಗಳನ್ನು ತುಂಬಲು ಶ್ರಮಿಸುತ್ತಿರುವ ಸರ್ವರನ್ನು ನೆನೆಯುತ್ತಿದ್ದಾರೆ.

ಜನವರಿ 17ಕ್ಕೆ ಪರ್ಯಾಯ

ಉಡುಪಿಯಲ್ಲಿ ನಡೆಯುವ ಪರ್ಯಾಯ ಆಚರಣೆಯು ಅತ್ಯಂತ ವೈಭವೋಪೇತವಾಗಿ ಆಚರಿಸಲ್ಪಡುವ ಮತ್ತು ಜಗತ್ಪ್ರಸಿದ್ಧ ಆಚರಣೆ. ಉಡುಪಿಯ ಮೂಲ ಶ್ರೀ ಕೃಷ್ಣನನ್ನು ಸರತಿಯಲ್ಲಿ ಪೂಜಿಸುವ ಕೈಂಕರ್ಯ. ಈ ಸಮಯದಲ್ಲಿ ಒಂದು ಮಠದಿಂದ ಇನ್ನೊಂದು ಮಠಕ್ಕೆ ಹಸ್ತಾಂತರವಾಗುತ್ತದೆ. ಸರ್ವಜ್ಞ ಪೀಠವನ್ನು ಶ್ರೀಪಾದರು ಅಲಂಕರಿಸುವುದು ಈ ಆಚರಣೆಯಲ್ಲೇ. ದೇವಾಲಯದ ನಿರ್ವಹಣೆಯನ್ನು ವಹಿಸಿಕೊಳ್ಳಲಿರುವ ಅಂದರೆ ಪರ್ಯಾಯ ಶ್ರೀ ಪುತ್ತಿಗೆ ಮಠದ ಕಿರಿಯ ಶ್ರೀಗಳಾದ ಶ್ರೀ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದಂಗಳವರು ಇಲ್ಲಿನ ಪವಿತ್ರ ಪುಷ್ಕರಿಣಿಯಲ್ಲಿ ಮಿಂದು ಶ್ರೀ ಕೃಷ್ಣನ ಸನ್ನಿಧಿಗೆ ಪಲ್ಲಕ್ಕಿಯಲ್ಲಿ ಸಾಗುತ್ತಾರೆ. ಜಗಮಗಿಸುವ ಮೆರವಣಿಗೆ ಮತ್ತು ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವದ ಹಲವು ಕಾರ್ಯಕ್ರಮಗಳಿಂದ ಅಂದು ಉಡುಪಿ ಅಕ್ಷರಶಃ ಮಿನುಗುತ್ತಿರುತ್ತದೆ. ಅಂದು ಅಲ್ಲಿಗೆ ಭೇಟಿ ನೀಡುವವರು ಭಕ್ತರಾಗಲೀ ಪ್ರವಾಸಿಗರಾಗಲೀ ಇಡೀ ಉಡುಪಿಯ ವೈಭವವನ್ನು ಆ ಕೆಲವೇ ದಿನಗಳಲ್ಲಿ ನೋಡಿಬಿಡಬಹುದು. ಬೆರಗು ಕಣ್ಣುಗಳಿಂದಲೇ ನೋಡುವಂತೆ ಅಲ್ಲಿನ ಆಚರಣೆಗಳು ಮೈದಳೆದಿರುತ್ತವೆ.

Koti geeta lekhana yajna

ಗೀತಾ ಪ್ರಚಾರಕ್ಕೆ ಕೃಷ್ಣಮಠ ಹೆಗ್ಗುರುತು

ಜಗತ್ತಿನ ಅತ್ಯದ್ಭುತ ಭಗವದ್ಗೀತೆಯನ್ನು ಒಪ್ಪಿಕೊಂಡು ಮತ್ತು ಅಪ್ಪಿಕೊಂಡು ಉಡುಪಿ ಮಠಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಕೃಷ್ಣನನ್ನು ಕಾಣಲು ಪ್ರಮುಖ ತಾಣವೇ ಉಡುಪಿ. ಅಂದಮೇಲೆ ಶ್ರೀ ಕೃಷ್ಣನೇ ನುಡಿದ ಭಗವದ್ಗೀತೆಯನ್ನು ಮತ್ತು ಅದರ ಸಾರಸತ್ವವನ್ನು ಜಗತ್ತಿಗೆ ಸಾರುವ ಕಾಯಕದಲ್ಲಿ ಇಲ್ಲಿನ ಮಠಗಳ ಪರಿಶ್ರಮವನ್ನು ಅಂದಾಜಿಸಬಹುದು. ಈ ಭಗವದ್ಗೀತೆಯನ್ನು ಭಾರತಕ್ಕೆ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಸಂಸ್ಥೆ, ವಿದೇಶಗಳಲ್ಲೂ ಕೃಷ್ಣ ಮಠ ಮತ್ತು ಮಂದಿರಗಳನ್ನು ಸ್ಥಾಪಿಸಿ ಅವುಗಳ ಮೂಲಕ ಇಡೀ ಭೂಗೋಳಕ್ಕೆ ಸಾರುವುದರಲ್ಲಿ ಉಡುಪಿ ತೊಡಗಿಕೊಂಡಿವೆ. ಈ ಬಾರಿಯ ಪರ್ಯಾಯ ಆಚರಣೆಯಲ್ಲೂ ಗೀತಾ ಪ್ರಚಾರಕ್ಕೆ ಬಹುಪ್ರಾಮುಖ್ಯತೆ ನೀಡಿದ್ದು, ಕೋಟಿ ಗೀತಾ ಲೇಖನ ಯಜ್ಞ, ಲಕ್ಷ ಕಂಠ ಗೀತಾ ಪಾರಾಯಣ, ನಿತ್ಯ ಭಗವದ್ಗೀತೆ ಪ್ರವಚನ ಹೀಗೆ ಗೀತೋತ್ಸವದಡಿ ಹಲವು ಕಾರ್ಯಕ್ರಮಗಳು ಪ್ರತಿನಿತ್ಯ ನಡೆಯುತ್ತಿವೆ.

ಸೂಚನೆ:

ಕೋಟಿ ಗೀತಾ ಲೇಖನ ಯಜ್ಞ ಕಾರ್ಯಕ್ರಮವೂ ಬಹುಜನರನ್ನು ಮುಟ್ಟಿದೆ, ಭಕ್ತರ ಬೇಡಿಕೆಯಂತೆ ಈ ಯಜ್ಞವನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಲಾಗಿದೆ. ಇದರಿಂದ ಇನ್ನೂ ಸಾಕಷ್ಟು ಜನರು ಭಗವದ್ಗೀತೆಯನ್ನು ಬರೆಯಲು ಅರಿಯಲು ಆ ಮೂಲಕ ಭಕ್ತಿಭಾವಗಳೊಂದಿಗೆ ಭಗವಂತನೊಂದಿಗೆ ಬೆರೆಯಲು ಅವಕಾಶ ವಿಸ್ತಾರವಾದಂತಾಗಿದೆ.

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳ ಪರ್ಯಂತ ವಿಶ್ವ ಗೀತಾ ಪರ್ಯಾಯ ನಡೆಯುತ್ತಿದೆ. ಭಗವದ್ಗೀತೆಯ ಪ್ರಚಾರಕ್ಕೆ ಪ್ರಾಧಾನ್ಯ, ಗೀತಾಚಾರ್ಯನ ಪೂಜೆ ಭಗವದ್ಗೀತೆಯ ಮೂಲಕ ಎನ್ನುವ ನಿಟ್ಟಿನಲ್ಲಿ ಈ ಹೆಸರನ್ನು ಇಡಲಾಗಿದೆ. ಈ ಬಾರಿಯ ಗೀತಾ ಜಯಂತಿಯ ಭಾಗವಾಗಿ ಗೀತೋತ್ಸವ ಆಚರಣೆ ನಡೆಯಲಿದ್ದು ಇದರಡಿಯಲ್ಲಿ ಭಗವದ್ಗೀತೆ ಪ್ರಚಾರಕ್ಕೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ನ.28ರಂದು ಗೀತಾ ಮಂದಿರದ ಎದುರಿನಲ್ಲಿ ಲಕ್ಷ ಕಂಠ ಗೀತಾ ಪಾರಾಯಣ ನಡೆಯಲಿದೆ. ವಿಶೇಷ ಎನ್ನುವಂತೆ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರೂ ಗೀತಾ ಪಠಣ ಮಾಡಲಿದ್ದಾರೆ. ನ.29ಕ್ಕೆ ಭಗವದ್ಗೀತಾ ಯಾಗ ನಡೆಯಲಿದೆ. ನ.30ಕ್ಕೆ ಸಂತ ಸಂದೇಶ, ಭಜನಾ ಕಾರ್ಯಕ್ರಮ ನಡೆಯಲಿವೆ. ಇದಕ್ಕೆ ಯೋಗಿ ಆದಿತ್ಯನಾಥ್‌ರನ್ನು ಆಹ್ವಾನಿಸಲಾಗಿದೆ. ಭಕ್ತರ ಬೇಡಿಕೆಯಂತೆ ಕೋಟಿ ಗೀತಾ ಲೇಖನ ಯಜ್ಞವನ್ನು ಮುಂದಿನ ಎರಡು ವರ್ಷಗಳವರೆಗೆ ವಿಸ್ತರಿಸಲಾಗಿದೆ. ಎಲ್ಲರೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ, ಉಪಯೋಗಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.
- ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ. ಪುತ್ತಿಗೆ ಮಠ
Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವ್ಹಾವ್..ವ್ಹಾವ್..ಗೋವಾ!

Read Next

ವ್ಹಾವ್..ವ್ಹಾವ್..ಗೋವಾ!