ಶಿವ ಪಾರ್ವತಿಯರು ಪಗಡೆ ಆಡುವ ಸ್ಥಳ ಯಾವುದು ಗೊತ್ತೇ?
ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ನರ್ಮದಾ ನದಿಯಲ್ಲಿ ರಾತ್ರಿಯ ಸಮಯದಲ್ಲಿ ನಡೆಯುವ ದೀಪಾರತಿ. ಎಲೆಗಳನ್ನು ಬಟ್ಟಲಿನಂತೆ ಮಡಚಿ, ಮಧ್ಯದಲ್ಲಿ ಎಣ್ಣೆ ಬತ್ತಿ ಇಟ್ಟು, ನದಿಯಲ್ಲಿ ತೇಲಿಬಿಡುವ ದೀಪಗಳು ಒಂದು ಮರೆಯಲಾಗದ ಅನುಭವವನ್ನು ಕೊಡುತ್ತವೆ. ಜುಳುಜುಳು ಹರಿಯುವ ನದಿಯ ಮೇಲೆ ತೇಲಾಡುವ ನೂರಾರು ದೀಪದ ಬಟ್ಟಲುಗಳು.
- ಅರುಣ ಷಡಕ್ಷರಿ
ಹೌದು! ಶಿವಭಕ್ತರು ನಂಬುವ ಒಂದು ಸ್ಥಳ! ಅದು ಓಂಕಾರೇಶ್ವರ ಜ್ಯೋತಿರ್ಲಿಂಗದ ಸ್ಥಳ. ಅಲ್ಲಿ ಪ್ರತಿದಿನ ಶಿವಪಾರ್ವತಿಯರು ಪಗಡೆ ಆಡುತ್ತಾರಂತೆ! ಓಂಕಾರೇಶ್ವರ ಜ್ಯೋತಿರ್ಲಿಂಗ ಮತ್ತು ಅದರ ಪಕ್ಕದಲ್ಲಿರುವ ಪಾರ್ವತಿಯ ಶ್ವೇತವರ್ಣದ ಮೂರ್ತಿಗಳ ನಡುವೆ ಪಗಡೆ ಮಣೆ ಇಟ್ಟಿರುತ್ತಾರೆ. ಪ್ರತಿ ರಾತ್ರಿ ಶಿವ-ಪಾರ್ವತಿಯರು ಇಲ್ಲಿಗೆ ಆಗಮಿಸುತ್ತಾರೆ. ವಿಶ್ರಾಂತಿ ಪಡೆಯುತ್ತಾರೆ, ಪಗಡೆ ಆಟ ಆಡುತ್ತಾರೆ ಎಂಬುದು ನಂಬಿಕೆ.
ಈ ಓಂಕಾರೇಶ್ವರ ಜ್ಯೋತಿರ್ಲಿಂಗದ ದೇವಾಲಯವು ಮಧ್ಯಪ್ರದೇಶ ರಾಜ್ಯದಲ್ಲಿರುವ ಮಾಂಧಾತಾ ಎಂದು ಕರೆಯಲ್ಪಡುವ ದ್ವೀಪದಲ್ಲಿದೆ. ಈ ದ್ವೀಪವು ನರ್ಮದಾ ನದಿಯ ದಡದಲ್ಲಿದೆ. ಈ ದ್ವೀಪದ ಆಕಾರವು ಸಂಸ್ಕೃತದ ಓಂ ಪದದ ರೂಪದಲ್ಲಿರುವುದರಿಂದ ಇಲ್ಲಿರುವ ಶಿವನನ್ನು ಓಂಕಾರೇಶ್ವರ ಎಂದು ಕರೆಯಲಾಗುತ್ತದೆ. ನದಿಯ ಒಂದು ದಡದಲ್ಲಿ ಓಂಕಾರೇಶ್ವರ ದೇವಾಲಯವಿದೆ. ಮತ್ತೊಂದು ದಡದಲ್ಲಿ ಅಮರೇಶ್ವರ ಅಥವಾ ಮಮಲೇಶ್ವರ ಎಂದು ಕರೆಯಲ್ಪಡುವ ಶಿವ ದೇವಾಲಯವೂ ಇದೆ.
ಇದನ್ನೂ ಓದಿ: ಶಿವಪಾರ್ವತಿಯರಿಗೆ ಪ್ರಿಯವಾದ ಹಿಲ್ ಸ್ಟೇಷನ್ – ಶ್ರೀಶೈಲ!!
ನಾವು ಬೆಂಗಳೂರಿನಿಂದ ಇಂದೋರಿಗೆ ವಿಮಾನದಲ್ಲಿ ಹೋದೆವು. ಅಲ್ಲಿಂದ 77 ಕಿಮೀ. ದೂರದಲ್ಲಿರುವ ಓಂಕಾರೇಶ್ವರ ದ್ವೀಪಕ್ಕೆ ಹೋದೆವು. ಈ ಸ್ಥಳವು ಎರಡು ನದಿಗಳ ಸಂಗಮದಲ್ಲಿದೆ. ಆ ಎರಡು ನದಿಗಳಲ್ಲಿ ಒಂದು ನದಿ ನರ್ಮದಾ ನದಿ. ಮತ್ತೊಂದು ಸಣ್ಣ ನದಿಯು ಕಾವೇರಿ ಎಂದು ಕರೆಯಲ್ಪಡುತ್ತದೆ. (ಇದು ಕರ್ನಾಟಕದ ಕಾವೇರಿ ನದಿಯಲ್ಲ) ಅತಿ ಸುಂದರ ಪರಿಸರ ಇಲ್ಲಿದೆ. ನರ್ಮದಾ ನದಿಯನ್ನು ದಾಟಿ ಹೋದರೆ (ದೋಣಿಯ ಮೂಲಕವೂ ಹೋಗಬಹುದು. ಅಥವಾ ಅಲ್ಲಿರುವ ಸೇತುವೆಯನ್ನು ಉಪಯೋಗಿಸಿ ಹೋಗಬಹುದು) ಅಲ್ಲಿರುವ ನೂರಾರು ಮೆಟ್ಟಿಲುಗಳನ್ನು ಹತ್ತಿ ಜ್ಯೋತಿರ್ಲಿಂಗ ದೇವಾಲಯವನ್ನು ತಲುಪಬಹುದು. ಈ ದೇವಾಲಯವು ಸದಾ ಭಕ್ತ ಜನರಿಂದ ತುಂಬಿರುತ್ತದೆ. ಸರತಿಯ ಸಾಲಿನಲ್ಲಿ ನಿಂತು ನಾವು ದೇವಾಲಯವನ್ನು ಪ್ರವೇಶಿಸಿದೆವು. ಅರ್ಚಕರ ದೊಡ್ಡ ಗುಂಪೇ ಅಲ್ಲಿರುತ್ತದೆ. ಆ ಅರ್ಚಕರು ನಮಗೆ ಅಭಿಷೇಕ ಮಾಡಲು ಮತ್ತು ಪೂಜೆ ಪುನಸ್ಕಾರಗಳನ್ನು ಮಾಡಲು ಸಹಕರಿಸುತ್ತಾರೆ. ಈ ಓಂಕಾರೇಶ್ವರನ ವಿಶೇಷವೆಂದರೆ ಈತನಿಗೆ ಬಿಲ್ವಪತ್ರೆಯೂ ಅರ್ಪಿಸಲ್ಪಡುತ್ತದೆ. ತುಳಸಿ ಪತ್ರೆಯೂ ಅರ್ಪಿಸಲ್ಪಡುತ್ತದೆ.

ನಾವು ಮೊದಲು ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದೆವು. ಇಲ್ಲಿ ಭಕ್ತ ಜನರ ಸಂದಣಿ ಕಡಿಮೆ ಇರುವುದರಿಂದ ಶಾಂತ ವಾತಾವರಣ ಇದೆ. ದರ್ಶನ ಮತ್ತು ಪೂಜೆಗಳು ಬೇಗ ಬೇಗ ಆಗುತ್ತವೆ. ಇದಾದ ನಂತರ ನಾವು ಓಂಕಾರೇಶ್ವರ ದೇವಸ್ಥಾನಕ್ಕೆ ಹೋದೆವು. ಇಲ್ಲಿನ ನರ್ಮದಾ ನದಿಯ ಮೇಲಿನ ದೋಣಿ ಸಂಚಾರ ಬಹಳ ಮನೋಹರವಾಗಿರುತ್ತದೆ. ವಿಶೇಷ ಅನುಭವವನ್ನು ನೀಡುತ್ತದೆ. ಈ ದೋಣಿ ಪ್ರಯಾಣದಲ್ಲಿ ನಾವು ಕೆಲವು ಪ್ರಮುಖ ದರ್ಶನೀಯ ಸ್ಥಳಗಳನ್ನು ನೋಡಬಹುದು. ಮೊದಲನೆಯದು ನರ್ಮದಾ ಮತ್ತು ಅದರ ಉಪನದಿಯ ಸಂಗಮ ಸ್ಥಳ. ಎರಡನೆಯದು ನೂರೆಂಟು ಅಡಿ ಎತ್ತರದ ಆದಿಶಂಕರಾಚಾರ್ಯರ ಪ್ರತಿಮೆ. ಮತ್ತು ಮೂರನೆಯದು ನರ್ಮದಾ ನದಿಗೆ ಅಡ್ಡವಾಗಿ ಕಟ್ಟಿರುವ ಭವ್ಯವಾದ ಅಣೆಕಟ್ಟು.
ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ನರ್ಮದಾ ನದಿಯಲ್ಲಿ ರಾತ್ರಿಯ ಸಮಯದಲ್ಲಿ ನಡೆಯುವ ದೀಪಾರತಿ. ಎಲೆಗಳನ್ನು ಬಟ್ಟಲಿನಂತೆ ಮಡಚಿ, ಮಧ್ಯದಲ್ಲಿ ಎಣ್ಣೆ ಬತ್ತಿ ಇಟ್ಟು, ನದಿಯಲ್ಲಿ ತೇಲಿಬಿಡುವ ದೀಪಗಳು ಒಂದು ಮರೆಯಲಾಗದ ಅನುಭವವನ್ನು ಕೊಡುತ್ತವೆ. ಜುಳುಜುಳು ಹರಿಯುವ ನದಿಯ ಮೇಲೆ ತೇಲಾಡುವ ನೂರಾರು ದೀಪದ ಬಟ್ಟಲುಗಳು. ಆದರೆ ಈ ದೀಪಾರತಿಯನ್ನು ನೋಡಬೇಕೆಂದು ಬಯಸುವವರು ರಾತ್ರಿ ಇಲ್ಲಿ ತಂಗಬೇಕಾಗುತ್ತದೆ. ಅಮಾವಾಸ್ಯೆಯೆಂದು, ಶ್ರಾವಣ ಮಾಸದಲ್ಲಿನ ಸೋಮವಾರಗಳಂದು ಇಲ್ಲಿಗೆ ಲಕ್ಷಾಂತರ ಜನ ನೀಡುತ್ತಾರೆ. ಆ ದಿನಗಳಲ್ಲಿ ದರ್ಶನಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಇಲ್ಲಿರುವ ಓಂಕಾರೇಶ್ವರ ಜ್ಯೋತಿರ್ಲಿಂಗ ದೇವಸ್ಥಾನದ ಟ್ರಸ್ಟ್ ದೇವರ ದರ್ಶನ, ವಸತಿ ವ್ಯವಸ್ಥೆ, ವಿಶೇಷ ದರ್ಶನ ಅಭಿಷೇಕ, ಆರತಿ ಮುಂತಾದವುಗಳ ವ್ಯವಸ್ಥೆಯನ್ನು ಕ್ರಮಬದ್ಧವಾಗಿ ಮಾಡಿಕೊಡುತ್ತಾರೆ.

ಇಲ್ಲಿನ ಮತ್ತೊಂದು ಪೂಜಾ ವಿಶೇಷವಿದೆ. ಅದೇನೆಂದರೆ ನರ್ಮದಾ ನದಿಯ ಮಣ್ಣಿನಿಂದ ಸಣ್ಣ ಸಣ್ಣ ಲಿಂಗುಗಳನ್ನು ಮಾಡಿ ಇಟ್ಟಿರುತ್ತಾರೆ. ಆ ಸಣ್ಣ ಸಣ್ಣ ಶಿವಲಿಂಗುಗಳಿಗೆ ನಮ್ಮಿಂದ ಅರ್ಚನೆ ಪೂಜೆಗಳನ್ನು ಮಾಡಿಸುತ್ತಾರೆ. ಈ ಸಣ್ಣ ಲಿಂಗುಗಳಿಗೆ ಪೂಜೆ ಮಾಡಿದರೆ ಮಾತ್ರ ಓಂಕಾರೇಶ್ವರನ ದರ್ಶನದ ಪುಣ್ಯ ನಮಗೆ ಲಭಿಸುತ್ತದೆಂದು ಹೇಳಲಾಗುತ್ತದೆ. ಇಲ್ಲಿರುವ ಅನ್ನಪೂರ್ಣೇಶ್ವರಿ ದೇವಸ್ಥಾನವೂ ದರ್ಶನಯೋಗ್ಯ ಸ್ಥಳ. ಇಲ್ಲಿರುವ ಮತ್ತೊಂದು ದೇವಾಲಯವೆಂದರೆ ಋಣಮುಕ್ತೇಶ್ವರ ದೇವಾಲಯ. ಈ ದೇವರ ದರ್ಶನ ಮಾಡಿ ಆತನಿಗೆ ಕಡಲೇಬೇಳೆಯನ್ನು ನೈವೇದ್ಯ ರೂಪವಾಗಿ ಅರ್ಪಿಸಿದರೆ ನಾವು ಎಲ್ಲಾ ಋಣಗಳಿಂದಲೂ ಮುಕ್ತಿ ಪಡೆಯಬಹುದು ಎಂದು ಹೇಳುತ್ತಾರೆ.
ಈ ಕ್ಷೇತ್ರಕ್ಕೆ ಸಂಬಂಧಿಸಿದ ಮತ್ತೊಂದು ನಂಬಿಕೆಯೂ ಇದೆ, ಅದೇನೆಂದರೆ ಬಹಳ ಹಿಂದೆ ದೇವತೆಗಳಿಗೂ, ದಾನವರಿಗೂ ಯುದ್ಧವಾಯಿತಂತೆ. ಆ ಯುದ್ಧದಲ್ಲಿ ದಾನವರ ಕೈಯೇ ಮೇಲಾಯಿತಂತೆ. ಆಗ ದೇವತೆಗಳು ಶಿವನ ಮೊರೆ ಹೊಕ್ಕಾಗ ಶಿವನು ಬಂದು ದಾನವರನ್ನು ಸೋಲಿಸಿದನಂತೆ. ಆನಂತರ ಆ ಪ್ರದೇಶದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಅಲ್ಲಿಯೇ ನೆಲೆಸಿದನಂತೆ. ಆತನೇ ಓಂಕಾರೇಶ್ವರ ಎಂಬ ನಂಬಿಕೆ!
ಇಂದೋರಿಗೆ ವಿಮಾನಯಾನವೇ ಅಲ್ಲದೆ ರೈಲು ಪ್ರಯಾಣದ ಮೂಲಕವೂ ಹೋಗಬಹುದು. ಇಂದೋರಿಗೆ ಹೋದರೆ ಒಂದು ಅನುಕೂಲವೆಂದರೆ ಅಲ್ಲಿಂದ ನಾವು ಎರಡು ಜ್ಯೋತಿರ್ಲಿಂಗಗಳನ್ನು ನೋಡಬಹುದು. ಒಂದು ನರ್ಮದಾ ನದಿ ತೀರದ ಓಂಕಾರೇಶ್ವರ ( ಮತ್ತು ಅಮರೇಶ್ವರ ) ಅದಲ್ಲದೆ ಉಜ್ಜಯಿನಿಯು ಇಂದೋರಿಗೆ ಹತ್ತಿರದಲ್ಲಿರುವುದರಿಂದ ಉಜ್ಜಯಿನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗದ ದರ್ಶನವನ್ನೂ ಮಾಡಬಹುದು.
ಇಂದೋರಿನ ಮತ್ತೊಂದು ಆಕರ್ಷಣೆ! ಅಲ್ಲಿ ಸಿಗುವ ಸಮೋಸೆ, ಪಾನಿಪೂರಿ, ಮಸಾಲಪೂರಿ, ಕಚೋರಿ ಮುಂತಾದ ಬೀದಿ ಬದಿಯ ತಿಂಡಿಗಳು. ಅವುಗಳ ರುಚಿಯನ್ನು ಸೇವಿಸಿದವರೇ ಬಲ್ಲರು.