Thursday, February 12, 2026
Thursday, February 12, 2026

ಶಿವಪಾರ್ವತಿಯರಿಗೆ ಪ್ರಿಯವಾದ ಹಿಲ್ ಸ್ಟೇಷನ್ – ಶ್ರೀಶೈಲ!!

ಕನ್ನಡದ ಶರಣೆ ವಚನಕಾರ್ತಿ ಅಕ್ಕಮಹಾದೇವಿಯ ಆರಾಧ್ಯದೈವವು ಶ್ರೀಶೈಲ ಮಲ್ಲಿಕಾರ್ಜುನನೇ ಆಗಿದ್ದಾನೆ. ಆಕೆ ಶ್ರೀಶೈಲ ಮಲ್ಲಿಕಾರ್ಜುನನನ್ನು ಪತಿಯೆಂದೇ ಭಾವಿಸಿ ಭಕ್ತಿ ಸಲ್ಲಿಸಿದಾಕೆ. ಆಕೆ ಶಿವೈಕ್ಯಳಾದ ಸ್ಥಳವೂ ಇಲ್ಲಿಂದ ಬಹಳ ಹತ್ತಿರದಲ್ಲಿದೆ. ಆದರೆ ಅಲ್ಲಿಗೆ ನದಿಯ ಮೇಲೆ ಸಾಗುವ ಲಾಂಚುಗಳಲ್ಲಿ(ದೊಡ್ಡ ದೋಣಿಗಳು) ಹೋಗಬೇಕಾಗುತ್ತದೆ.

- ಅರುಣ ಷಡಕ್ಷರಿ

ಹೌದು! ಶಿವಪಾರ್ವತಿಯರಿಗೆ ಅತಿ ಪ್ರಿಯವಾದ ಪರ್ವತ ಪ್ರದೇಶವೊಂದು ಈಗಿನ ಆಂಧ್ರಪ್ರದೇಶದಲ್ಲಿದೆ. ಅದೇ ಶ್ರೀಶೈಲ ಪರ್ವತ. ಅಲ್ಲಿ ಶಿವಪಾರ್ವತಿ ನೆಲೆಸಿದ್ದಾರೆಂಬ ನಂಬಿಕೆ ಭಕ್ತ ಜನರಲ್ಲಿದೆ. ಅದು ಏಕೆ ಎಂದು ಕೇಳುವವರಿಗಾಗಿ ಒಂದು ಪುರಾಣ ಪ್ರಸಿದ್ಧವಾದ ಕತೆಯೊಂದಿದೆ.

ನಮಗೆ ಎಲ್ಲರಿಗೂ ತಿಳಿದಿರುವಂತೆ, ಶಿವ ಮತ್ತು ಪಾರ್ವತಿ ದೇವಿಗೆ ಇಬ್ಬರು ಪುತ್ರರು. ಒಬ್ಬ ಗಣೇಶ. ಆತ ಜ್ಞಾನ ಮತ್ತು ಬುದ್ಧಿಯ ಪ್ರತೀಕವಾದ ಆನೆ ಮುಖದ ದೇವರು. ಮತ್ತೊಬ್ಬಾತ ಕಾರ್ತಿಕೇಯ. ಷಣ್ಮುಖ, ಆರ್ಮುಗ, ಮುರುಗನ್ ಮುಂತಾದ ಹೆಸರುಗಳಿಂದ ದಕ್ಷಿಣ ಭಾರತೀಯರಿಂದ ಕರೆಸಿಕೊಳ್ಳುವವನು. ಆತ ಅಸುರರ ವಿರುದ್ಧ ದೇವತೆಗಳು ಮಾಡಿದ ಯುದ್ಧದ ನೇತೃತ್ವ ವಹಿಸಿದ ಸೇನಾಧಿಪತಿ!

ಇದನ್ನೂ ಓದಿ: ಅವನೇ ಶ್ರೀ ವೈದ್ಯನಾಥೇಶ್ವರ ಜ್ಯೋತಿರ್ಲಿಂಗ!

ಒಮ್ಮೆ ಕೈಲಾಸದಲ್ಲಿ ಇಬ್ಬರು ಸಹೋದರರು ತಮ್ಮ ವಿವಾಹದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಗಣೇಶ ತಾನು ಹಿರಿಯನಾದುದರಿಂದ ಮೊದಲು ನನ್ನ ವಿವಾಹ ಎಂದು ವಾದಿಸುತ್ತಿದ್ದ. ಕಾರ್ತಿಕೇಯ ಈ ವಾದವನ್ನು ಒಪ್ಪದೆ ತನ್ನ ವಿವಾಹ ಮೊದಲಾಗಬೇಕೆಂದು ವಾದಿಸುತ್ತಿದ್ದ. ಈ ವಾದ ವಿವಾದ ಶಿವ ಪಾರ್ವತಿಯರ ಕಿವಿಗೆ ಬಿತ್ತಂತೆ. ಅವರು ಯಾರು ವಿಶ್ವವನ್ನು ಮೂರು ಬಾರಿ ಸುತ್ತಿ ಬರುತ್ತಾರೋ ಅವರಿಗೆ ಮೊದಲು ವಿವಾಹ ಮಾಡುತ್ತೇವೆ ಎಂಬ ತೀರ್ಪನ್ನು ಕೊಟ್ಟರಂತೆ. ನವಿಲನ್ನು ವಾಹನವಾಗಿರಿಸಿಕೊಂಡ ಕಾರ್ತಿಕೇಯ ನವಿಲನ್ನು ಏರಿ ಭೂಮಿಯನ್ನು ಸುತ್ತಲು ಧಾವಿಸಿದ. ಆದರೆ ಗಣೇಶ ಎದ್ದು ನಿಂತು ನಿಧಾನವಾಗಿ ನಡೆಯುತ್ತಾ ತನ್ನ ತಂದೆ ತಾಯಿಯರಾದ ಶಿವ ಪಾರ್ವತಿಯರಿಗೆ ಮೂರು ಬಾರಿ ಪ್ರದಕ್ಷಿಣೆ ಹಾಕಿ, ತಂದೆ ತಾಯಿಯರಲ್ಲೇ ನನ್ನ ಲೋಕ ಅಡಗಿದೆ. ನಾನೀಗ ನಿಮ್ಮನ್ನು ಪ್ರದಕ್ಷಿಣೆ ಹಾಕಿರುವುದರಿಂದ ನಾನು ಭೂಮಿಯನ್ನು ಮೂರು ಬಾರಿ ಸುತ್ತಿದಂತಾಗಿದೆ. ನನಗೇ ಮೊದಲು ವಿವಾಹವಾಗಬೇಕೆಂದು ಕೇಳಿಕೊಂಡ. ಅಷ್ಟರಲ್ಲಿ ಕಾರ್ತಿಕೇಯನು ಮರಳಿ ಬಂದು, ಗಣೇಶನು ಸವಾಲನ್ನು ಆರಂಭಿಸಲೇ ಇಲ್ಲವೆಂದು ನಕ್ಕನು. ಆದರೆ ಗಣೇಶನ ಉತ್ತರವನ್ನು ಕೇಳಿದ್ದ ಶಿವ–ಪಾರ್ವತಿಯವರು ಸಂತಸದಿಂದ “ನೀನೇ ವಿಜೇತನು. ಮೊದಲು ನಿನಗೇ ವಿವಾಹ” ಎಂದು ಹೇಳಿದರು.

Untitled design (13)

ಇದನ್ನು ಕೇಳಿ ಕಾರ್ತಿಕೇಯನು ತುಂಬಾ ಕೋಪಗೊಂಡನು. ಕ್ಷಣಮಾತ್ರವೂ ನಿಲ್ಲದೆ ತನ್ನ ವಾಹನವನ್ನೇರಿ ಕ್ರೌಂಚ ಪರ್ವತಕ್ಕೆ ಹಾರಿಹೋದನಂತೆ. ಅಲ್ಲಿ ಕಠಿಣ ತಪಸ್ಸು ಮಾಡಲು ಕುಳಿತುಕೊಂಡನಂತೆ. (ಆ ಕ್ರೌಂಚ ಪರ್ವತವೇ ಇಂದಿನ ಪಳನಿ).

ಈ ನಡುವೆ ಗಣೇಶನ ವಿವಾಹವು ರಿದ್ಧಿ ಮತ್ತು ಸಿದ್ಧಿಯರೊಂದಿಗೆ ನಡೆಯಿತು. ಆದರೆ ಕಾರ್ತಿಕೇಯನು ಆ ವಿವಾಹಕ್ಕೆ ಬರಲಿಲ್ಲ. ಇದರಿಂದ ಪಾರ್ವತಿ ದೇವಿಗೆ ತುಂಬಾ ದುಃಖವಾಯಿತು. ತಮ್ಮ ಮಗನನ್ನು ಮರಳಿ ಕರೆತರಲು ಶಿವನನ್ನು ತಮ್ಮ ಜೊತೆ ಬರಲು ವಿನಂತಿಸಿದರು. ಅವರು ಹೊರಟಾಗ, ಕಾರ್ತಿಕೇಯನು ಅವರನ್ನು ಶ್ರೀಶೈಲಕ್ಕೆ ಬರಲು ಸೂಚಿಸಿದನು. ಅದು ಒಂದು ಅತ್ಯಂತ ಪವಿತ್ರ ಮತ್ತು ಸುಂದರ ಪರ್ವತವಾಗಿದ್ದು, ಕೈಲಾಸದ ನಂತರ ಶಿವನಿಗೆ ಅತಿ ಪ್ರಿಯವಾದ ಸ್ಥಳವೆಂದು ಶಿವನೇ ಹೇಳಿದ್ದಾನೆಂದು ಕಾರ್ತಿಕೇಯನು ಪಾರ್ವತಿ ದೇವಿಗೆ ತಿಳಿಸಿದನು.

ಶ್ರೀಶೈಲಕ್ಕೆ ಬಂದಾಗ, ಪಾರ್ವತಿ ದೇವಿಗೂ ಇಷ್ಟವಾಯಿತು. ಅಲ್ಲಿಯೇ ನೆಲೆಸಲು ಶಿವ–ಪಾರ್ವತಿಯರು ನಿರ್ಧರಿಸಿದರು.

ಆ ಕಾರಣದಿಂದಲೇ ಶ್ರೀಶೈಲವು ವಿಶೇಷ ಮಹತ್ವ ಹೊಂದಿದೆ. ಶಿವ ಪಾರ್ವತಿಯರು ಇಬ್ಬರೂ ಅಲ್ಲಿ ಇರುವುದರಿಂದ ಅದು ಜ್ಯೋತಿರ್ಲಿಂಗ ಕ್ಷೇತ್ರವೂ ಆಗಿದೆ, ಶಕ್ತಿ ಪೀಠವೂ ಆಗಿದೆ.

ನಮ್ಮ ಶ್ರೀಶೈಲ ಯಾತ್ರೆ

ಶ್ರೀಶೈಲಕ್ಕೆ ವಿಮಾನಮಾರ್ಗದಿಂದಲೂ ಮತ್ತು ರಸ್ತೆಮಾರ್ಗದಿಂದಲೂ ತಲುಪಬಹುದು. ನಾವು ವಿಮಾನಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದೆವು.

ಬೆಳಗ್ಗೆ ಬೇಗನೇ ಹೈದರಾಬಾದ್‌ಗೆ ತಲುಪಿದೆವು. ಮುಂಚಿತವಾಗಿ ಬುಕ್ ಮಾಡಿದ್ದ ಕ್ಯಾಬ್‌ನಲ್ಲಿ ಶ್ರೀಶೈಲಕ್ಕೆ ಪ್ರಯಾಣ. ಹೈದರಾಬಾದ್‌ನಿಂದ ಶ್ರೀಶೈಲದ ದೂರ ಸುಮಾರು 230 ಕಿಮೀ. ಬಹುತೇಕ ಪ್ರಯಾಣ ಬಯಲು ಸೀಮೆಯಲ್ಲಿ. ಬೆಟ್ಟದ ಹತ್ತಿರ ಬಂದಂತೆ, ಬೆಟ್ಟವನ್ನು ಏರುತ್ತಿದ್ದಂತೆ ಒಂದು ಅದ್ಭುತವಾದ ಸುತ್ತಮುತ್ತಲಿನ ದೃಶ್ಯವು ಮನಮೋಹಕವಾಗಿರುತ್ತದೆ. ಅಲ್ಲಿ ದೇವಸ್ಥಾನವನ್ನು ತಲುಪಿದೆವು. ದರ್ಶನದ ಸಾಲುಗಳು ಬಹಳ ವ್ಯವಸ್ಥಿತವಾಗಿದ್ದವು. ಎಲ್ಲೆಲ್ಲೂ ಸ್ಪಷ್ಟ ಮಾರ್ಗಸೂಚಿ ಫಲಕಗಳಿದ್ದವು. ನಾವು ಸುಲಭವಾಗಿ ದರ್ಶನ ಪಡೆದು ಶ್ರೀಶೈಲ ಮಲ್ಲಿಕಾರ್ಜುನನ ಅನುಗ್ರಹವನ್ನು ಪಡೆದೆವು. ಆನಂತರ ಶಕ್ತಿ ಪೀಠಕ್ಕೂ ಭೇಟಿ ನೀಡಿ ಭ್ರಮರಾಂಬೆಯ ಅನುಗ್ರಹವನ್ನೂ ಪಡೆದೆವು. ಇದು ಹದಿನೆಂಟು ಮಹಾಶಕ್ತಿ ಪೀಠಗಳಲ್ಲಿ ಒಂದು. ಎರಡೂ ದೇವಸ್ಥಾನಗಳಲ್ಲಿ ಭಕ್ತರ ಉದ್ದುದ್ದನೆಯ ಸಾಲುಗಳು ಇದ್ದವಾದರೂ ದರ್ಶನ ಪಡೆಯುವುದು ಕಷ್ಟವೇನೂ ಆಗಲಿಲ್ಲ.

ಮಧ್ಯಾಹ್ನ ದೇವಸ್ಥಾನದಲ್ಲೇ ಕೊಟ್ಟ ಪ್ರಸಾದವನ್ನು ಸ್ವೀಕರಿಸಿ ಹೈದರಾಬಾದಿನತ್ತ ಹಿಂದಿರುಗಿದೆವು.

ಈ ಮರುಪ್ರಯಾಣದಲ್ಲಿ ನಮಗೆ ನಾಗಾರ್ಜುನ ಸಾಗರದ ಅದ್ಭುತ ದೃಶ್ಯವೂ ಕಾಣ ಸಿಕ್ಕಿತು. ಇಲ್ಲಿ ಮತ್ತೂ ಕೆಲವು ವಿಶೇಷಗಳಿವೆ. ಬೌದ್ಧ ಧರ್ಮೀಯರ ಯಾತ್ರಾ ಸ್ಥಳವೂ ಇದೇ ಆಗಿದೆ. ಹಾಗೆಯೇ ಇಲ್ಲಿ ಕಟ್ಟಿರುವ ಶ್ರೀಶೈಲ ಅಣೆಕಟ್ಟಿಗೆ ನಾಗಾರ್ಜುನ ಸಾಗರವೆಂದೇ ಹೆಸರು.

Untitled design (15)

ಕನ್ನಡದ ಶರಣೆ ವಚನಕಾರ್ತಿ ಅಕ್ಕಮಹಾದೇವಿಯ ಆರಾಧ್ಯದೈವವು ಶ್ರೀಶೈಲ ಮಲ್ಲಿಕಾರ್ಜುನನೇ ಆಗಿದ್ದಾನೆ. ಆಕೆ ಶ್ರೀಶೈಲ ಮಲ್ಲಿಕಾರ್ಜುನನನ್ನು ಪತಿಯೆಂದೇ ಭಾವಿಸಿ ಭಕ್ತಿ ಸಲ್ಲಿಸಿದಾಕೆ. ಆಕೆ ಶಿವೈಕ್ಯಳಾದ ಸ್ಥಳವೂ ಇಲ್ಲಿಂದ ಬಹಳ ಹತ್ತಿರದಲ್ಲಿದೆ. ಆದರೆ ಅಲ್ಲಿಗೆ ನದಿಯ ಮೇಲೆ ಸಾಗುವ ಲಾಂಚುಗಳಲ್ಲಿ(ದೊಡ್ಡ ದೋಣಿಗಳು) ಹೋಗಬೇಕಾಗುತ್ತದೆ. ಇಲ್ಲಿರುವ ಶಿಖರೇಶ್ವರ ದೇವಾಲಯಕ್ಕೂ ಭೇಟಿ ನೀಡಬಹುದು. ಹೇಮರೆಡ್ಡಿ ಮಲ್ಲಮ್ಮ ತನ್ನ ಭಕ್ತಿಯನ್ನು ಸಾಕ್ಷಾತ್ಕರಿಸಿಕೊಂಡ ಸ್ಥಳವೂ ಈ ಶ್ರೀಶೈಲವೇ ಎಂಬ ನಂಬಿಕೆ ಇದೆ.

ಬೆಂಗಳೂರಿನಿಂದ ನೇರವಾಗಿ ಶ್ರೀಶೈಲಕ್ಕೆ ಹೋಗುವ ಬಸ್ ಸೌಕರ್ಯವೂ ಇದೆ. ಕೆ.ಎಸ್.ಟಿ.ಡಿ.ಸಿ ಅವರು ಏರ್ಪಾಡು ಮಾಡುವ ಒಂದೆರಡು ದಿನಗಳ ಪ್ರವಾಸದ ಪ್ಯಾಕೇಜ್ ಗಳೂ ಲಭ್ಯ ಇವೆ. ಬೆಂಗಳೂರಿನಿಂದ ಅಥವಾ ಕರ್ನಾಟಕದ ಯಾವುದೇ ಭಾಗದಿಂದ ಶ್ರೀಶೈಲ ಅಷ್ಟೇನೂ ದೂರವಿಲ್ಲದಿರುವುದರಿಂದ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನವನ್ನು ಮಾಡಿ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಪಟ್ಟಿಯಲ್ಲಿ ಮತ್ತೊಂದು ಪುಣ್ಯಕ್ಷೇತ್ರವನ್ನು ಸೇರಿಸಿಕೊಳ್ಳಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ