Saturday, August 8, 2026
Saturday, August 8, 2026

ಶಾಂತಿಗಾಗಿ ನಲವತ್ತು ಸಾವಿರ ಹೃದಯಗಳ ಲಬ್‌ಡಬ್‌ ಲಬ್‌ಡಬ್‌!

ಆದರೆ Project 108 ರನ್ನು ನಿಜವಾಗಿಯೂ ವಿಶೇಷವಾಗಿಸುವುದು ಅದರ ಸಂಖ್ಯೆ 108. ಬೌದ್ಧ ಧರ್ಮದ ಸಂಪ್ರದಾಯಗಳಲ್ಲಿ 108 ಒಂದು ಪವಿತ್ರ ಸಂಖ್ಯೆ. ಜಪಮಾಲೆಯಲ್ಲಿಯೂ 108 ಮಣಿಗಳಿರುತ್ತವೆ. ಬುದ್ಧನ ಬೋಧನೆಗಳು 108 ಸಂಪುಟಗಳಲ್ಲಿ ಸಂಗ್ರಹವಾಗಿವೆ. ಮನುಷ್ಯನ ಮನಸಿನಲ್ಲಿ 108 ರೀತಿಯ ಆಸೆಗಳು ಮತ್ತು ಗೊಂದಲಗಳಿವೆ ಎಂದು ಹೇಳಲಾಗುತ್ತದೆ. ಈ ಎಲ್ಲವನ್ನೂ ದಾಟಿದಾಗಲೇ ಮುಕ್ತಿ. ಹೀಗಾಗಿ 108 ಎಂದರೆ ಸಂಪೂರ್ಣತೆ, ಪೂರ್ಣತೆಯ ಸಂಕೇತ.

- ಅಂಜಲಿ ರಾಮಣ್ಣ

ಈ ವರ್ಷದ ನವೆಂಬರ್ ಒಂದನೆಯ ತಾರೀಕು ಪ್ರಪಂಚವು ಹಿಂದೆಂದೂ ಕಂಡರಿಯದ, ಕೇಳರಿಯದ ಘಟನೆಗೆ ತೆರೆದುಕೊಳ್ಳಲಿದೆ. ಭೂತಾನ್ ಸುತ್ತುವಾಗ ಮಾರ್ಗದರ್ಶಕನಿಂದ ’Project 108’ ಎಂದು ಕೇಳಿಸಿಕೊಂಡ ಕೂಡಲೇ ಯಾವುದೋ ವಿಜ್ಞಾನದ ಅಥವಾ ಸಾಫ್ಟ್‌ವೇರ್‌ಗೆ ಸಂಬಂಧಪಟ್ಟ ವಿಷಯವೇನೋ ಅನಿಸುತ್ತಿತ್ತು. ಉಹುಂ, ಆದರೆ ಇದು ಅದಲ್ಲ. ಇದು 12 ಕಿಲೋಮೀಟರ್‌ಗಳಷ್ಟು ವಿಸ್ತೀರ್ಣದಲ್ಲಿ 40,000 ಜನರ ಹೃದಯಗಳು ಒಂದೇ ಲಯದಲ್ಲಿ ಬಡಿದುಕೊಳ್ಳುವ, ಒಂದೇ ಪ್ರಾರ್ಥನೆಯಲ್ಲಿ ಕೈಜೋಡಿಸುವ ಒಂದು ಮಹಾಯಜ್ಞ. ಶಾಂತಿ ಮತ್ತು ಏಕತೆಯ ಪ್ರಾರ್ಥನಾ ಮೆರವಣಿಗೆ.

ಹಿಮಾಲಯದ ತಪ್ಪಲಿನಲ್ಲಿ ಶಾಂತವಾಗಿ ನೆಲೆಸಿರುವ ಭೂತಾನ್ ದೇಶವು ಜಗತ್ತಿಗೆ ಕೇವಲ ಪ್ರಕೃತಿಯ ಸೌಂದರ್ಯದಿಂದ ಮಾತ್ರವಲ್ಲ, ತನ್ನ ಆಧ್ಯಾತ್ಮಿಕ ಆಳ ಮತ್ತು ವಿಶಿಷ್ಟ ಜೀವನ ದೃಷ್ಟಿಕೋನದಿಂದಲೂ ಪರಿಚಿತವಾಗಿದೆ. ಇಲ್ಲಿ ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಬೆಳವಣಿಗೆಯಲ್ಲ. ಅದು ಜನರ ಮನಸಿನ ಸಂತೋಷ, ಪ್ರಕೃತಿಯೊಂದಿಗೆ ಇರುವ ಸಾಮರಸ್ಯ ಮತ್ತು ಆಂತರಿಕ ಶಾಂತಿಯನ್ನು ಕೂಡ ಒಳಗೊಂಡಿದೆ. ಈ ಚಿಂತನೆಯ ಅತ್ಯಂತ ದೊಡ್ಡ ಪ್ರತಿಬಿಂಬವಾಗಿ ಈಗ ಹೊರಹೊಮ್ಮುತ್ತಿರುವುದು ಅಲ್ಲಿನ ರಾಜ Jigme Khesar Namgyel Wangchuck ಅವರ ಮಹತ್ವಾಕಾಂಕ್ಷೆಯ ಕನಸಾದ ’Project 108’.

ಇದನ್ನೂ ಓದಿ: ಕೆಲಸಕ್ಕೆ ಹೊಡಿ ಗೋಲಿ… ಸುತ್ತಾಡು ಜಾಲಿ ಜಾಲಿ.. ಇದು ಜೆನ್‌Z ಮಂತ್ರ

ದಕ್ಷಿಣ ಭೂತಾನ್‍ನಲ್ಲಿರುವ Gelephu ಪಟ್ಟಣದಲ್ಲಿ ಇದೆ Mau Chhu ನದಿ. ಈ ನದಿಯ ದಂಡೆಯ ಮೇಲೆ ಒಂದೇ ದಿನದಲ್ಲಿ ಒಂದೇ ಸಮಯದಲ್ಲಿ 40000 ಜನಗಳು ಒಟ್ಟಿಗೆ 108 ’ಜ್ಞಾನೋದಯದ ಸ್ತೂಪ’ಗಳನ್ನು (Jangchub Chortens) ನಿರ್ಮಿಸಿ, ಸ್ಥಾಪಿಸುವುದು ’Project 108’ ಯೋಜನೆಯ ಉದ್ದೇಶ. Gelephu ನಗರವನ್ನು ಅಂದಿನಿಂದ Gelephu Mindfulness City ಎಂದು ಗುರುತಿಸಲಾಗುತ್ತಿದೆ. ಅದೊಂದು ಕೇವಲ ಆರ್ಥಿಕ ಕೇಂದ್ರವಲ್ಲ; ಬದಲಿಗೆ ಸುಸ್ಥಿರತೆ ಮತ್ತು ಪ್ರಕೃತಿಯೊಂದಿಗಿನ ಸಾಮರಸ್ಯದ ನಗರವಾಗಬೇಕು ಎಂಬುದು ಭೂತಾನ್ ರಾಜನ ಆಶಯವಾಗಿದೆ. ಇಂದಿನ ಜಗತ್ತು ವೇಗವಾಗಿ ಓಡುತ್ತಿದೆ. ತಂತ್ರಜ್ಞಾನ, ಹಣ ಮತ್ತು ಸ್ಪರ್ಧೆಗಳ ನಡುವೆ ಮನುಷ್ಯ ತನ್ನ ಮನಸಿನ ಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಅಂಥ ಸಮಯದಲ್ಲಿ GMC (Gelephu Mindfulness City) ಒಂದು ಉಸಿರು ಎಂಬಂತೆ ಇರಬೇಕು. ಅಲ್ಲಿ ವ್ಯಾಪಾರವೂ ಇರಬೇಕು, ಆದರೆ ಅದರ ಜೊತೆಗೆ ಚಿಂತನೆಗೆ, ಪ್ರಾರ್ಥನೆಗೆ, ಒಳನೋಟಕ್ಕೆ ಜಾಗವೂ ಇರಬೇಕು. 15 ಮೀಟರ್ ಎತ್ತರದ 108 ಸ್ತೂಪಗಳು ನಗರಕ್ಕೆ ಬರುವ ಪ್ರತಿಯೊಬ್ಬರಿಗೂ ಮೊದಲು ಕಾಣುವ ಸಂಕೇತವಾಗಲಿವೆ. ಅವು ಕಟ್ಟಡಗಳಲ್ಲ, ಅವು ಪ್ರಶ್ನೆಗಳಾಗಿವೆ, ನಾವು ಎಲ್ಲಿಗೆ ಹೋಗುತ್ತಿದ್ದೇವೆ, ಯಾವ ಮೌಲ್ಯಗಳೊಂದಿಗೆ ಹೋಗುತ್ತಿದ್ದೇವೆ ಎಂದು ನಮ್ಮನ್ನೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಅವು ಎಂದು ಸಾರಲು ಸಜ್ಜಾಗಿದ್ದಾರೆ ಭೂತಾನಿಯರು.

Untitled design (87)

ಈ ಯೋಜನೆಯಲ್ಲಿ ಆಯ್ದುಕೊಂಡಿರುವುದು Jangchub Chorten ಎಂಬ ವಿಶೇಷ ಶೈಲಿ. Jangchub ಎಂದರೆ ಜ್ಞಾನೋದಯ. ಬುದ್ಧನು ಬೋಧಿವೃಕ್ಷದ ಕೆಳಗೆ ಸತ್ಯವನ್ನು ಕಂಡುಕೊಂಡ ಕ್ಷಣವನ್ನು ಇದು ನೆನಪಿಸುತ್ತದೆ. ಪ್ರತಿಯೊಂದು chorten ಕೂಡ ಚೌಕಾಕಾರದ ದೃಢವಾದ ಪೀಠದ ಮೇಲೆ ನಿಂತು ನಮ್ಮ ಜೀವನಕ್ಕೆ ಭೂಮಿಯಂತೆ ಆಧಾರ ಬೇಕು ಎಂಬುದನ್ನು ಹೇಳುತ್ತದೆ. ಅದರ ಮೇಲಿನ ಮೆಟ್ಟಿಲುಗಳು ಮತ್ತು ಗುಮ್ಮಟ ನಮ್ಮನ್ನು ಊರ್ಧ್ವಮುಖಿಯಾಗಲು ಪ್ರೇರೇಪಿಸಲಿದೆ. ಕೊನೆಯಲ್ಲಿ ಚಂದ್ರ, ಸೂರ್ಯ ಮತ್ತು ಜ್ವಾಲೆಯ ಸಂಕೇತಗಳು ಕರುಣೆ ಮತ್ತು ಜ್ಞಾನ ಒಂದಾದಾಗ ಮಾತ್ರ ನಿಜವಾದ ಬೆಳಕು ಬರುತ್ತದೆ ಎಂಬುದನ್ನು ಸಾರುತ್ತವೆ. ಹೀಗೆ ಪ್ರತಿಯೊಂದು ಸ್ತೂಪವೂ ಕೇವಲ ಕಲ್ಲು ಮತ್ತು ಮಣ್ಣಿನಿಂದ ಕಟ್ಟಿದ ರಚನೆಯಲ್ಲ. ಅದು ಒಂದು ಜೀವಂತ ಬೋಧನೆಯಾಗಲಿದೆ.

ಆದರೆ Project 108 ರನ್ನು ನಿಜವಾಗಿಯೂ ವಿಶೇಷವಾಗಿಸುವುದು ಅದರ ಸಂಖ್ಯೆ 108. ಬೌದ್ಧ ಧರ್ಮದ ಸಂಪ್ರದಾಯಗಳಲ್ಲಿ 108 ಒಂದು ಪವಿತ್ರ ಸಂಖ್ಯೆ. ಜಪಮಾಲೆಯಲ್ಲಿಯೂ 108 ಮಣಿಗಳಿರುತ್ತವೆ. ಬುದ್ಧನ ಬೋಧನೆಗಳು 108 ಸಂಪುಟಗಳಲ್ಲಿ ಸಂಗ್ರಹವಾಗಿವೆ. ಮನುಷ್ಯನ ಮನಸಿನಲ್ಲಿ 108 ರೀತಿಯ ಆಸೆಗಳು ಮತ್ತು ಗೊಂದಲಗಳಿವೆ ಎಂದು ಹೇಳಲಾಗುತ್ತದೆ. ಈ ಎಲ್ಲವನ್ನೂ ದಾಟಿದಾಗಲೇ ಮುಕ್ತಿ. ಹೀಗಾಗಿ 108 ಎಂದರೆ ಸಂಪೂರ್ಣತೆ, ಪೂರ್ಣತೆಯ ಸಂಕೇತ. ʼProject 108ʼರಲ್ಲಿ ಈ ಸಂಖ್ಯೆಯನ್ನು ಕೇವಲ ಸಂಕೇತವಾಗಿ ಮಾತ್ರವಲ್ಲ, ರಚನೆಯಾಗಿಯೂ ಬಳಸಲಾಗಿದೆ. 108 ಸ್ತೂಪಗಳ ನಡುವೆ 108 ಮೀಟರ್ ಅಂತರ. ನದಿಯ ದಡದಲ್ಲಿ ಸಾಲಾಗಿ ನಿಂತಾಗ ಅವು ಒಂದು ಪ್ರಾರ್ಥನಾ ಮೆರವಣಿಗೆಯಂತೆ ಕಾಣುತ್ತವೆ. ಗಾಳಿ ಬೀಸಿದಾಗ ಆ ಮೆರವಣಿಗೆಯಿಂದ ಶಾಂತಿಯ ಮಂತ್ರಗಳು ಎಲ್ಲೆಡೆ ಹರಡುವಂತೆ ಭಾಸವಾಗಲಿದೆ.

ಈ ಮಹತ್ಕಾರ್ಯವನ್ನು ಸಾಧ್ಯವಾಗಿಸಲು ನವೆಂಬರ್ ಒಂದರಂದು 40,000 ಜನರು ಒಟ್ಟಿಗೆ ಕೆಲಸಕ್ಕೆ ಇಳಿಯಲಿದ್ದಾರೆ. ಅವರಲ್ಲಿ ಶಾಲಾ ಮಕ್ಕಳಿರುತ್ತಾರೆ, ರೈತರಿರುತ್ತಾರೆ, ಸನ್ಯಾಸಿಗಳಿರುತ್ತಾರೆ, ವೈದ್ಯರಿರುತ್ತಾರೆ, ಕಲಾವಿದರಿರುತ್ತಾರೆ ಮತ್ತು ತಂತ್ರಜ್ಞರಿರುತ್ತಾರೆ. ಯಾರಿಗೂ ವಿಶೇಷ ಕೌಶಲ್ಯದ ಅವಶ್ಯಕತೆ ಇಲ್ಲ. ಬೇಕಾಗಿರುವುದು ಇಚ್ಛೆ ಮತ್ತು ಶಿಸ್ತು ಮಾತ್ರ. ಇದು ಭೂತಾನ್‌ನ ಪ್ರಾಚೀನ zhabto ಸಂಪ್ರದಾಯದ ಆಧುನಿಕ ರೂಪ. zhabto ಎಂದರೆ ಸಮುದಾಯದ ಒಳಿತಿಗಾಗಿ ಸ್ವಯಂಸೇವಕರಾಗಿ ದುಡಿಯುವುದು. ದೇವಾಲಯ ಕಟ್ಟುವುದು, ರಸ್ತೆ ಮಾಡುವುದು, ಹಬ್ಬ ಆಚರಿಸುವುದು ಎಲ್ಲವೂ ಒಟ್ಟಾಗಿ ಮಾಡುವ ಕೆಲಸ. Project 108 ಈ ಪರಂಪರೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಒಂದೇ ದಿನ, ಒಂದೇ ಗುರಿಗಾಗಿ ಲಕ್ಷಾಂತರ ಕೈಗಳು ಕೆಲಸ ಮಾಡಿದಾಗ ಅದು ಕೇವಲ ಕಾರ್ಯ ಆಗುವುದಿಲ್ಲ ಕೈಂಕರ್ಯ ಎನಿಸಿಕೊಳ್ಲಲಿದೆ. ಅದು ಇತಿಹಾಸವಾಗಲಿದೆ.

ಈ ಯೋಜನೆಯಲ್ಲಿ ಜಗತ್ತಿನ ಯಾರು ಕೂಡ ಭಾಗವಹಿಸಲು ಪರೋಕ್ಷವಾದ ಅವಕಾಶವಿದೆ. ಜಗತ್ತಿನ ಯಾವುದೇ ಮೂಲೆಯಿಂದಲೂ ಜನರು ಒಂದು ಸ್ತೂಪದ ಪೋಷಣೆಯನ್ನು ವಹಿಸಿಕೊಳ್ಳಬಹುದು. ಪ್ರತಿ chortenನ ವೆಚ್ಚ USD 200,000 ದಿಂದ ಪ್ರಾರಂಭವಾಗುತ್ತದೆ. ಅದನ್ನು ತಮ್ಮ ಪೋಷಕರ ನೆನಪಿಗಾಗಿ, ಗುರುಗಳಿಗಾಗಿ ಅಥವಾ ಜಗತ್ತಿನ ಶಾಂತಿಗಾಗಿ ಅರ್ಪಿಸಬಹುದು. ಹೀಗೆ Project 108 ಭೂತಾನ್‌ನ ಗಡಿಯನ್ನು ದಾಟಿ ಜಗತ್ತಿನಾದ್ಯಂತ ಇರುವ ಒಳ್ಳೆಯ ಮನಸುಗಳನ್ನು ಒಟ್ಟುಗೂಡಿಸ ಬಯಸುತ್ತಿದೆ.

Project 108 ಕೇವಲ ಭೂತಾನ್‌ಗೆ ಮಾತ್ರ ಸೀಮಿತವಾದ ಕಥೆಯಲ್ಲ. ಇದು ಇಡೀ ಮಾನವ ಕುಲಕ್ಕೆ ಒಂದು ಎಚ್ಚರಿಕೆ. ಅಭಿವೃದ್ಧಿ ಎಂದರೆ ಎತ್ತರದ ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದಷ್ಟೇ ಅಲ್ಲ. ಅಭಿವೃದ್ಧಿ ಎಂದರೆ ನಮ್ಮ ಒಳಗಿರುವ ಮನುಷ್ಯತ್ವವನ್ನು ಕಟ್ಟುವುದು. ಪ್ರಗತಿಯ ಜೊತೆಗೆ ನಾವು ನಮ್ಮ ಮೂಲವನ್ನು, ಕರುಣೆಯನ್ನು, ಪ್ರಾರ್ಥನೆಯನ್ನು ಉಳಿಸಿಕೊಳ್ಳಬೇಕು. Mau Chhu ನದಿಯ ದಡದಲ್ಲಿ ಎದ್ದು ನಿಲ್ಲುವ ಆ 108 Jangchub Chortens ಗಳು ಮುಂದಿನ ಶತಮಾನಗಳಲ್ಲೂ ಈ ಸಂದೇಶವನ್ನು ಹೇಳುತ್ತಲೇ ಇರುತ್ತವೆ.

Untitled design (89)

ನದಿಯ ನೀರು ಹರಿಯುತ್ತಿದ್ದಂತೆ, ಗಾಳಿ ಆ ಸ್ತೂಪಗಳನ್ನು ತಗುಲುತ್ತಿದ್ದಂತೆ, ಅಲ್ಲಿ ಬರುವ ಪ್ರತಿಯೊಬ್ಬ ಪ್ರಯಾಣಿಕನ ಮನಸ್ಸಿನಲ್ಲೂ ಒಂದು ಕ್ಷಣ ನಿಂತು ಯೋಚಿಸುವ ಅವಕಾಶ ಮಾಡಿಕೊಡುತ್ತದೆ. ಸುಖದ ಹಿಂದೆ ಓಡುವ ಬದಲು, ಸ್ವಲ್ಪ ಹೊತ್ತು ನಿಂತು ಸಂತೋಷವನ್ನು ಪ್ರತಿಬಿಂಬಿಸಲು. ವೇಗದ ಬದಲು ಸ್ವಲ್ಪ ತಾಳ್ಮೆಯನ್ನು ಅಭ್ಯಾಸ ಮಾಡಲು. ʼನಾನು ಮಾತ್ರವಲ್ಲ, ನಾವು ಎಲ್ಲರೂʼ ಎಂಬ ಭಾವವನ್ನು ಮತ್ತೆಮತ್ತೆ ನೆನಪಿಸಿಕೊಳ್ಳಲು ಆಚರಣೆಗೆ ತಂದುಕೊಳ್ಳಲು ಸನ್ನೆಕೋಲಾಗಿ ನಿಲ್ಲಲಿದೆ ಭೂತಾನಿನ ʼProject 108ʼ. ಹೀಗಾಗಿ Project 108 ಒಂದು ದಿನದ ಘಟನೆಯಲ್ಲ. ಅದು ಜಗತ್ಶಾಂತಿಯ, ಏಕತೆಯ, ಸಾವಧಾನತೆಯ ಚಳವಳಿ. ಭೂತಾನ್ ಈ ಮೂಲಕ ಜಗತ್ತಿಗೆ ಹೇಳುತ್ತಿದೆ ʼನಾವು ಚಿಕ್ಕ ದೇಶವಾಗಿರಬಹುದು, ಆದರೆ ನಮ್ಮ ಕನಸು ದೊಡ್ಡದು. ನಮ್ಮ ಕನಸು ಕೇವಲ ನಮ್ಮದಲ್ಲ, ಅದು ಎಲ್ಲಾ ಜೀವಿಗಳ ಒಳಿತಿನ ಕನಸು. ಆ ಕನಸನ್ನು ನನಸು ಮಾಡಲು 108 ಪ್ರಾರ್ಥನೆಗಳು ಮತ್ತು ಎಲ್ಲರಲ್ಲೂ ಮಿಡಿಯುವ ಒಂದು ಹೃದಯ ಸಾಕುʼ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?