ಮಿಯಾಂವ್.. ಮಿಯಾಂವ್ ಬೆಕ್ಕೆ ಕದ್ದು ಹಾಲು ನೆಕ್ಕೆ!
ಮನೆಯ ಅಂಗಳದಲ್ಲಿ ಮುದ್ದಾಗಿ ಓಡಾಡುವ ಬೆಕ್ಕನ್ನು ಕಂಡರೆ ಕೆಲವರು ಮುದ್ದಾಡುತ್ತಾರೆ, ಇನ್ನೂ ಕೆಲವರು ‘ಕಳ್ಳ ಬೆಕ್ಕು’, ‘ಅಪಶಕುನ’ ಎಂದು ದೂರ ಸರಿಯುತ್ತಾರೆ. ಆದರೆ, ನಂಬಿಕೆಗಳು ಏನೇ ಇರಲಿ, ಬೆಕ್ಕುಗಳ ಮೇಲಿನ ಪ್ರೀತಿ ಮಾತ್ರ ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ರತಿ ವರ್ಷ ಆಗಸ್ಟ್ 8ರಂದು ಅಂತಾರಾಷ್ಟ್ರೀಯ ಬೆಕ್ಕುಗಳ ದಿನವನ್ನು ಆಚರಿಸಿ ಈ ಮುದ್ದಾದ ಜೀವಿಗಳಿಗೆ ಗೌರವ ಸಲ್ಲಿಸಲಾಗುತ್ತದೆ.
- ನಂದಿನಿ ಪಟೇಲ್
ಬೆಕ್ಕೆ ಕದ್ದು ಹಾಲು ನೆಕ್ಕೆ... ಎಂಬ ಸಾಲುಗಳನ್ನು ಬಾಲ್ಯದಲ್ಲಿ ಕೇಳದವರೇ ಇಲ್ಲ. ಅಂದಿನಿಂದಲೇ ಬೆಕ್ಕಿನ ಬಗ್ಗೆ ನಮ್ಮ ಮನಸಿನಲ್ಲಿ ಒಂದಿಷ್ಟು ಕುತೂಹಲ, ಒಂದಿಷ್ಟು ಕಳ್ಳತನದ ಚಿತ್ರ ನಮ್ಮಚಿತ್ತದಲ್ಲಿ ಮೂಡಿರುತ್ತದೆ. ಆದರೆ, ನಿಜ ಜೀವನದಲ್ಲಿ ಬೆಕ್ಕುಗಳ ಕಥೆ ಅಷ್ಟಕ್ಕೇ ಸೀಮಿತವಾಗಿಲ್ಲ. ಮನುಷ್ಯನ ಬದುಕಿನ ಭಾಗವಾಗಿ, ಕುಟುಂಬದ ಸದಸ್ಯನಾಗಿ, ಮನಸಿಗೆ ನೆಮ್ಮದಿ ನೀಡುವ ಸಂಗಾತಿಯಾಗಿ ಬೆಕ್ಕು ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.
ಎಲ್ಲಿಗಾದರು ಪ್ರಯಾಣ ಮಾಡುವಾಗ ಬೆಕ್ಕು ನಮ್ಮ ದಾರಿಯಲ್ಲಿ ಎಡಕ್ಕೆ ಅಥವಾ ಬಲಕ್ಕೆ ಹೋದರು ನಾವು ಮಿಲೇನಿಯಲ್ಸ್ ಒಂದು ಅಥವಾ ಎರಡು ನಿಮಿಷ ನಿಂತು ಹೋಗುತ್ತೇವೆ. ಆದರೆ, ಈ ಜೆನ್ ಜಿ಼ಗಳು ಮಾತ್ರ ಯಾವುದಕ್ಕು ತಲೆ ಕೆಡಿಸಿಕೊಳ್ಳದೇ ಕ್ಯಾಟ್-ಐ ಸನ್‌ಗ್ಲಾಸ್‌ನ್ನು ಧರಿಸಿ ಟ್ರಿಪ್‌ಗೆ ಹೊರಡುವುದು ಇಂದಿನ ಫ್ಯಾಷನ್ ಟ್ರೆಂಡ್. ಆ ವಿನ್ಯಾಸದ ಹಿಂದಿರುವ ಸ್ಫೂರ್ತಿ ಬೆಕ್ಕಿನ ಕಣ್ಣಿನ ಚೂಪಾದ, ಆಕರ್ಷಕ ಆಕಾರ ಎಂಬುದು ಅನೇಕರಿಗೆ ಗೊತ್ತಿಲ್ಲ. ಅಂತಾರಾಷ್ಟ್ರೀಯ ಬೆಕ್ಕುಗಳ ದಿನದಂದು ಈ ಫ್ಯಾಷನ್ ಹಿಂದೆ ಅಡಗಿರುವ ಬೆಕ್ಕುಗಳ ಸೌಂದರ್ಯ ಮತ್ತು ಅವುಗಳ ಮೇಲಿನ ಪ್ರೀತಿಯನ್ನು ನೆನಪಿಸಿಕೊಳ್ಳುವ ಸಮಯ ಇದು.
ಇದನ್ನೂ ಓದಿ: ಎರಡು ವಿಸ್ಮಯ ಗಡಿಯಾರಗಳು!
ನೀವು ಬೆಕ್ಕನ್ನು ಪ್ರೀತಿಸುವವರೇ?
ನೀವು ಬೆಕ್ಕುಗಳನ್ನು ಪ್ರೀತಿಸುವವರಾಗಿದ್ದರೆ, ಅವುಗಳ ಉಗುರುಗಳಿಂದ ಪರಚಿಸಿಕೊಳ್ಳುವುದು ಕೂಡ ಮುದ್ದಾಗಿಯೇ ಕಾಣುತ್ತದೆ. ಹಾಲಿಗಾಗಿ ಅಡುಗೆಮನೆಯ ಸುತ್ತ ಓಡಾಡುವ ಹಟ, ಕಾಲಿಗೆ ಸವರಿಕೊಂಡು ಪ್ರೀತಿ ತೋರುವ ರೀತಿ, ಮನೆಯ ಮೂಲೆಮೂಲೆಗಳಲ್ಲಿ ಮಾಡುವ ತುಂಟಾಟ ಇವೆಲ್ಲವೂ ಅವುಗಳ ಸ್ವಭಾವ. ನಿಮ್ಮನ್ನು ಮತ್ತಷ್ಟು ಪ್ರೀತಿಯ ಪರವಶರನ್ನಾಗಿಸುದರಲ್ಲಿ ಅನುಮಾನವೇ ಇಲ್ಲ.

ನನಗೆ ಈ ಪುಟ್ಟ ಮರಿ ಸಿಕ್ಕಿತು!
ಬೆಕ್ಕುಗಳನ್ನು ಸಾಕುವ ಬಹುತೇಕ ಜನರ ಕಥೆ ಹೀಗೆ ಆರಂಭವಾಗುತ್ತದೆ. ರಸ್ತೆ ಬದಿಯಲ್ಲೋ, ಮನೆಯ ಅಂಗಳದಲ್ಲೋ ಕಾಣಿಸಿಕೊಂಡ ಪುಟ್ಟ ಮರಿ ಬೆಕ್ಕನ್ನು ಒಮ್ಮೆ ಕೈಗೆತ್ತಿಕೊಂಡರೆ, ಅದನ್ನು ಅಲ್ಲೇ ಬಿಟ್ಟುಬರುವುದು ಅನೇಕರಿಗೆ ಸಾಧ್ಯವಾಗುವುದಿಲ್ಲ. ಅದರ ಮುಗ್ಧ ನೋಟ, ಮೃದುವಾದ 'ಮಿಯಾಂವ್' ಮತ್ತು ಮುದ್ದಾದ ಚೇಷ್ಟೆಗಳು ಯಾರ ಮನಸನ್ನಾದರೂ ಕರಗಿಸಿಬಿಡುತ್ತವೆ.
ಇವರಿಬ್ಬರಲ್ಲಿ ಯಾರು ಉತ್ತಮ?
ನಾಯಿ ಅಥವಾ ಬೆಕ್ಕು ಇವರಿಬ್ಬರಲ್ಲಿ ಯಾರು ಉತ್ತಮ ಸಂಗಾತಿ ಎಂಬ ಚರ್ಚೆ ಹೊಸದೇನಲ್ಲ. ಒಂದು ಕಡೆ ನಾಯಿಯ ನಿಷ್ಠೆ ಮತ್ತು ಉತ್ಸಾಹವನ್ನು ಹೊಗಳುವವರಿದ್ದರೆ, ಮತ್ತೊಂದು ಕಡೆ ಬೆಕ್ಕಿನ ಸ್ವತಂತ್ರ ಸ್ವಭಾವ, ಮುದ್ದಾಟ ಮತ್ತು ಶಾಂತ ನಡವಳಿಕೆಯನ್ನು ಇಷ್ಟಪಡುವವರಿದ್ದು, ಅವುಗಳನ್ನು ಕುಟುಂಬದ ಸದಸ್ಯರಂತೆ ಪ್ರೀತಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಆರೋಗ್ಯಕ್ಕೂ ಇವುಗಳು ಹಿತವೇ?
ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದ ಮೀಡಿಯಾ ಸ್ಕೂಲ್ ನಡೆಸಿದ ಅಧ್ಯಯನವು ಕುತೂಹಲಕಾರಿ ಸಂಗತಿಯನ್ನು ಹೇಳುತ್ತದೆ. ಅಧ್ಯಯನದ ಪ್ರಕಾರ, ಅಂತರ್ಜಾಲದಲ್ಲಿ ಬೆಕ್ಕುಗಳ ವಿಡಿಯೋಗಳನ್ನು ವೀಕ್ಷಿಸುವುದರಿಂದ ಕೇವಲ ಮನೋರಂಜನೆಯಷ್ಟೇ ಅಲ್ಲ, ಮನಸಿನಲ್ಲಿ ಸಕಾರಾತ್ಮಕ ಭಾವನೆಗಳು ಹೆಚ್ಚಾಗುತ್ತವೆ. ಒತ್ತಡ ಮತ್ತು ನಕಾರಾತ್ಮಕ ಭಾವನೆಗಳು ಕಡಿಮೆಯಾಗಲು ಸಹ ಇದು ನೆರವಾಗುತ್ತದೆ. ಆದ್ದರಿಂದ, ನಿಯಮಿತವಾಗಿ ಬೆಕ್ಕುಗಳ ವಿಡಿಯೋಗಳನ್ನು ನೋಡುವವರಲ್ಲಿ ಮಾನಸಿಕ ನೆಮ್ಮದಿ ಹೆಚ್ಚಿರುವುದನ್ನು ಸಂಶೋಧಕರು ಗಮನಿಸಿದ್ದಾರೆ. ಇದರಿಂದ ಬೆಕ್ಕುಗಳು ಕೇವಲ ಮುದ್ದಾದ ಸಾಕುಪ್ರಾಣಿಗಳಷ್ಟೇ ಅಲ್ಲ, ಮಾನಸಿಕ ಆರೋಗ್ಯಕ್ಕೂ ಸಹಕಾರಿಯಾಗಬಲ್ಲ ಸಂಗಾತಿಗಳು.

ಜಾಗತಿಕ ಒತ್ತು
ಭೂಮಿಯ ಮೇಲಿನ ಅತ್ಯಂತ ಜನಪ್ರಿಯ ಸಾಕುಪ್ರಾಣಿಯನ್ನು ಗೌರವಿಸಲು, 'ಇಂಟರ್‌ನ್ಯಾಷನಲ್ ಫಂಡ್ ಫಾರ್ ಅನಿಮಲ್ ವೆಲ್ಫೇರ್' (IFAW) 2002 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬೆಕ್ಕುಗಳ ದಿನವನ್ನು ಆಚರಿಸಿತು. ಅಂತಾರಾಷ್ಟ್ರೀಯ ಬೆಕ್ಕುಗಳ ದಿನದ ಉದ್ದೇಶ ಕೇವಲ ಬೆಕ್ಕುಗಳನ್ನು ಸಂಭ್ರಮಿಸುವುದಲ್ಲ, ಅವುಗಳ ಹಕ್ಕುಗಳು ಮತ್ತು ಅವುಗಳ ಬಗ್ಗೆ ಜಾಗೃತಿ ಮೂಡಿಸುವುದೂ ಆಗಿದೆ. ಭಾರತ ಸೇರಿದಂತೆ ಹಲವು ದೇಶಗಳು ಪ್ರಾಣಿ ರಕ್ಷಣೆಗೆ ಕಾನೂನುಬದ್ಧ ಮಾನ್ಯತೆ ನೀಡಿವೆ. ಆದರೂ ನಿರ್ಲಕ್ಷ್ಯ, ಕ್ರೌರ್ಯ ಮತ್ತು ಸೂಕ್ತ ಆರೈಕೆಯ ಕೊರತೆಯಿಂದ ಅನೇಕ ಪ್ರಾಣಿಗಳು ಇನ್ನೂ ಸಂಕಷ್ಟ ಅನುಭವಿಸುತ್ತಿವೆ. ವಿಶ್ವಸಂಸ್ಥೆ ಹಾಗೂ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳು ಅವುಗಳ ಕಲ್ಯಾಣಕ್ಕೆ ಜಾಗತಿಕ ಮಟ್ಟದಲ್ಲಿ ಬಲವಾದ ಕಾನೂನು ಚೌಕಟ್ಟು ರೂಪಿಸಲು ಪ್ರಯತ್ನಿಸುತ್ತಿವೆ. ಪ್ರಾಣಿಗಳ ಮೇಲಿನ ಕರುಣೆ ಮತ್ತು ಜವಾಬ್ದಾರಿಯುತ ಆರೈಕೆಯೇ ಈ ದಿನದ ನಿಜವಾದ ಸಂದೇಶವಾಗಿದೆ.