ಒಂದು ವರ್ಷ. ಪತ್ರಿಕೆಯ ವಯೋಮಾನ ಅಂತ ನೋಡಿದಾಗ ಅದು ಬಹುಶಃ ಸಣ್ಣ ಅವಧಿಯಾಗಿರಬಹುದು. ಆದರೆ ಇಂದಿನ ದಿನಮಾನದ ಪಾಸಿಟಿವ್ ಪತ್ರಿಕೋದ್ಯಮಕ್ಕಿರುವ ಸವಾಲುಗಳನ್ನು ಗಮನಿಸಿದಾಗ ಒಂದು ವರ್ಷ ಎಂಬುದು ನಿಜಕ್ಕೂ ಅತ್ಯಂತ ಮಹತ್ವದ ಮೈಲಿಗಲ್ಲು.

ಪ್ರವಾಸಿ ಪ್ರಪಂಚ ಈ ಒಂದು ವರ್ಷದಲ್ಲಿ ಪ್ರವಾಸೋದ್ಯಮದ ಸುಂದರ ಮುಖವನ್ನಷ್ಟೇ ತೋರಿಸಿಲ್ಲ. ಕೇವಲ ಪ್ರವಾಸಿ ಸ್ಥಳಗಳ ಪರಿಚಯಕ್ಕೋ, ಪ್ರವಾಸಕಥನಗಳಿಗೋ ಅಥವಾ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರಗಳ ಪ್ರೊಮೋಷನ್ನುಗಳಿಗೋ ಸೀಮಿತವಾಗಲಿಲ್ಲ. ಪ್ರವಾಸೋದ್ಯಮದ ವ್ಯಾಪ್ತಿ, ಅಗತ್ಯಗಳು, ಕುಂದುಕೊರತೆಗಳು, ಭವಿಷ್ಯದ ಹಾದಿಗಳು ಎಲ್ಲದರ ಕಡೆಗೆ ಬೆಳಕು ಚೆಲ್ಲಿದೆ. ಸಶಕ್ತ ಸಂಪಾದಕೀಯ ಮತ್ತು ಅಂಕಣ ಬರಹಗಳ ಮೂಲಕ ಸರಕಾರವನ್ನು, ಪ್ರವಾಸೋದ್ಯಮದ ಅಂಗಗಳನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡಿದೆ. ಒಳ್ಳೆಯ ಕೆಲಸಗಳಾದಾಗ ಮೆಚ್ಚಿ ಬೆನ್ತಟ್ಟಿರುವ ಹಾಗೆಯೇ ಲೋಪದೋಷಗಳು ಕಂಡುಬಂದಾಗ ಗದರಿ ಬುದ್ಧಿ ಹೇಳಿದೆ. ಸ್ನೇಹಿತನ ಜಾಗದಲ್ಲಿ ನಿಂತು ಸಮಾಲೋಚನೆಯನ್ನೂ ನಡೆಸಿದೆ. ಓದುಗರಲ್ಲಿ ಪ್ರವಾಸೋದ್ಯಮದ ಆಸೆ ಹುಟ್ಟಿಸುವ ಜತೆಗೆ ಜವಾಬ್ದಾರಿಯುತ ಪ್ರವಾಸೋದ್ಯಮದ ಆಶಯವನ್ನು ಬಿತ್ತುವಲ್ಲಿ ಯಶಸ್ವಿಯಾಗಿದೆ. ಏಕೆಂದರೆ ಪ್ರವಾಸೋದ್ಯಮ ಅಂದರೆ ಕೇವಲ ರೆಸಾರ್ಟ್‌, ಹಿಲ್‌ಸ್ಟೇಷನ್‌, ಸೆಲ್ಫಿ ಪಾಯಿಂಟ್‌ಗಳ ಕಥೆಯಲ್ಲ. ಅದು ಮನುಷ್ಯ, ಪ್ರಕೃತಿ ಮತ್ತು ವ್ಯವಸ್ಥೆ — ಈ ಮೂರರ ಮಧ್ಯದ ಜವಾಬ್ದಾರಿಯುತ ಸಮತೋಲನ.

ಇದನ್ನೂ ಓದಿ: ಚೌಕಾಸಿ ಮಾಡಿ ನೋಡು

ಇತ್ತೀಚೆಗೆ ಮಲೆಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಚಿರತೆ ದಾಳಿಗಳ ಬಗ್ಗೆ ಹೊರಬಿದ್ದ ವರದಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ದೇವಸ್ಥಾನಕ್ಕೆ ಹೋಗುವ ಭಕ್ತರು ಕಾಡಿನ ನಡುವೆ ಜೀವ ಪಣಕ್ಕಿಟ್ಟು ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ವ್ಯವಸ್ಥೆಯ ವೈಫಲ್ಯವೆಂದು ಒಪ್ಪಿಕೊಳ್ಳಲೇಬೇಕು.
ಒಬ್ಬ ಬಾಲಕ ಚಿರತೆಯ ದಾಳಿಗೆ ಬಲಿಯಾಗುತ್ತಾನೆ. ಇನ್ನೊಬ್ಬರ ಮೇಲೆ ದಾಳಿ ನಡೆಯುತ್ತದೆ. ನಂತರ ಇಲಾಖೆಗಳು ಜಾಗೃತವಾಗುತ್ತವೆ. ನಿಯಮಗಳು ಬರುತ್ತವೆ. ಗಸ್ತು ಹೆಚ್ಚುತ್ತದೆ. ಕೆಲವು ದಿನಗಳ ಬಳಿಕ ಮತ್ತೆ ಎಲ್ಲವೂ ಹಳೆಯ ಸ್ಥಿತಿಗೆ ಮರಳುತ್ತದೆ.

ಪದೇಪದೆ ಹೇಳ್ತಿದ್ದೇವೆ ಅನಿಸಿದರೂ ಸರಿ, ನಮ್ಮ ಇಲಾಖೆಗಳು ದುರ್ಘಟನೆ ಜರುಗಿದ ಮೇಲೆ’ ಎಚ್ಚೆತ್ತುಕೊಳ್ಳುತ್ತವೆಯೇ ಹೊರತು ಮುಂಜಾಗ್ರತೆ ಎಂಬ ಪದವನ್ನೇ ಅರಿತಿಲ್ಲ. ಅಪಾಯವನ್ನು ತಡೆಯುವ ವ್ಯವಸ್ಥೆಗಿಂತ, ಘಟನೆ ಬಳಿಕ ಪತ್ರಿಕಾಗೋಷ್ಠಿ ನಡೆಸುವುದೇ ಸಾಮಾನ್ಯ ದೃಶ್ಯವಾಗಿದೆ.

ಎಂಎಂ ಹಿಲ್ಸ್‌ ಸಮಸ್ಯೆಯೂ ಅದೇ ಹಾದಿಯಲ್ಲಿದೆ. ಇಲ್ಲಿ ತಪ್ಪು ಚಿರತೆಯದಲ್ಲ.
ಅದು ತನ್ನ ಕಾಡಿನಲ್ಲಿ ಬದುಕುತ್ತಿದೆ. ತಪ್ಪು ಮನುಷ್ಯನ ಅತಿಕ್ರಮಣ ಪ್ರವೇಶದ್ದು.

ಪ್ರತಿ ವರ್ಷ ಲಕ್ಷಾಂತರ ಜನರು ಪಾದಯಾತ್ರೆ ಮಾಡುತ್ತಾರೆ. ರಾತ್ರಿ ಹೊತ್ತು, ಮುಂಜಾನೆ, ಕಾಡಿನ ನಡುವೆ, ಮೊಬೈಲ್‌ ಟಾರ್ಚ್ ಹಿಡಿದು ಸಾಗುತ್ತಾರೆ. ಅದೇ ಸಮಯದಲ್ಲಿ ಕಾಡುಪ್ರಾಣಿಗಳ ಚಟುವಟಿಕೆಯೂ ಗರಿಷ್ಠ ಮಟ್ಟದಲ್ಲಿರುತ್ತದೆ. ಅದು ಅರಣ್ಯ ಇಲಾಖೆಗೂ ಗೊತ್ತು. ದೇವಸ್ಥಾನ ಆಡಳಿತಕ್ಕೂ ಗೊತ್ತು. ರಾಜಕಾರಣಿಗಳಿಗೂ ಗೊತ್ತು. ಆದರೆ ಇಲ್ಲಿ ಶಾಶ್ವತ ಪರಿಹಾರಕ್ಕಿಂತ ತಾತ್ಕಾಲಿಕ ಪ್ರತಿಕ್ರಿಯೆಗಳು ಮಾತ್ರ ಕಾಣಿಸುತ್ತಿವೆ.

ಪ್ರವಾಸೋದ್ಯಮ ಎಂದರೆ ಕೇವಲ ಜನರನ್ನು ಪ್ರವಾಸಿ ತಾಣಕ್ಕೆ ಕರೆತರುವುದು ಮಾತ್ರವಲ್ಲ. ಅವರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುವ ಜವಾಬ್ದಾರಿಯೂ ಪ್ರವಾಸೋದ್ಯಮಕ್ಕಿದೆ. ಸರಕಾರ ಪ್ರವಾಸೋದ್ಯಮದ ಆದಾಯದ ಬಗ್ಗೆ ಹೆಚ್ಚು ಚಿಂತಿಸುತ್ತದೆಯೇ ಹೊರತು ಸುರಕ್ಷತೆಯ ಬಗೆಗಲ್ಲ ಎಂಬುದು ಇವರ ನಡೆಯಿಂದ ಸ್ಪಷ್ಟವಾಗುತ್ತಿದೆ. ಪ್ರವಾಸಿ ಪ್ರಪಂಚ ಆರಂಭದಿಂದಲೇ ಈ ಮನೋಭಾವವನ್ನು ಪ್ರಶ್ನಿಸುತ್ತಾ ಬಂದಿದೆ. ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಬೇಕು. ಹೌದು. ಆದರೆ ಅದು ಜವಾಬ್ದಾರಿಯುತವಾಗಿರಬೇಕು.
ಕಾಡಿನ ಮಧ್ಯೆ ಸಾವಿರಾರು ಜನರನ್ನು ನಡೆಯಲು ಬಿಟ್ಟು, ನಂತರ ಚಿರತೆ ಬಂದಿದೆ ಎಂದು ಹೇಳುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಅಥವಾ ನಿಷೇಧ/ನಿರ್ಬಂಧ ಹೇರುವುದೇ ಪರಿಹಾರವೂ ಅಲ್ಲ. ಇಲ್ಲಿ ಬೇಕಿರುವುದು ರಾತ್ರಿ ಪಾದಯಾತ್ರೆಗೆ ಕಟ್ಟುನಿಟ್ಟಿನ ನಿಯಮಗಳ ಜಾರಿ. ಅರಣ್ಯ ಪ್ರದೇಶಗಳಲ್ಲಿ ಕಡ್ಡಾಯ ಎಸ್ಕಾರ್ಟ್ ವ್ಯವಸ್ಥೆ ಬೇಕು. ನಿರ್ದಿಷ್ಟ ಸಮಯದ ಬಳಿಕ ಪ್ರವೇಶ ನಿಷೇಧ ಎಂಬ ನಿಯಮ ಬರಬೇಕು. ಸಿಸಿಟಿವಿ, ಸೆನ್ಸರ್‌ ಮತ್ತು ರೆಸ್ಕ್ಯೂ ತಂಡಗಳು ಬೇಕು. ಜತೆಗೆ ಭಕ್ತರಿಗೂ ಜಾಗೃತಿ ಬೇಕು. ಅತ್ಯಂತ ಮುಖ್ಯವಾಗಿ, ದೇವಸ್ಥಾನ, ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತ ಒಟ್ಟಿಗೆ ಕೆಲಸ ಮಾಡುವ ಕಲ್ಚರ್ ಬರಬೇಕು. ಇನ್ನಾದರೂ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಈ ದಿಸೆಯಲ್ಲಿ ವಿವೇಕಯುತ ನಿರ್ಧಾರಗಳನ್ನು ತೆಗೆದುಕೊಂಡು ಸಾಗೀತೆಂಬ ಭರವಸೆ ಪ್ರವಾಸಿಪ್ರಪಂಚ ಪತ್ರಿಕೆಯದ್ದು.

ಪತ್ರಿಕೋದ್ಯಮದ ಕೆಲಸ ಕೇವಲ ಪ್ರಚಾರವಲ್ಲ. ಅದು ಸಾರ್ವಜನಿಕ ಹಿತದ ಕಾವಲುಗಾರನೂ ಹೌದು. ಪ್ರವಾಸೋದ್ಯಮದ ಭವಿಷ್ಯ ಉಜ್ವಲವಾಗಿರಬೇಕು ಅಂದರೆ ಜವಾಬ್ದಾರಿಯುತ ಚಿಂತನೆ ಅಗತ್ಯ. ಪ್ರವಾಸಿ ಪ್ರಪಂಚ ತನ್ನ ಎರಡನೆಯ ವರ್ಷದ ಪಯಣದಲ್ಲಿಯೂ ಅದೇ ಧ್ಯೇಯದೊಂದಿಗೆ ಮುಂದುವರಿಯಲಿದೆ. ಪ್ರಶಂಸಿಸಬೇಕಾ ಸಂದರ್ಭದಲ್ಲಿ ಪ್ರಶಂಸಿಸಲಿದೆ. ಟೀಕಿಸಬೇಕಾದಲ್ಲಿ ಟೀಕಿಸಲಿದೆ. ಸಲಹೆ ನೀಡಬೇಕಾದಲ್ಲಿ ಸಲಹೆ ನೀಡಲಿದೆ. ಪ್ರವಾಸಪ್ರಿಯ ಓದುಗ ಮಿತ್ರರು, ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರದ ಸರ್ವರೂ ಈ ಜವಾಬ್ದಾರಿಯುತ ಪಯಣದಲ್ಲಿ ನಮ್ಮೊಂದಿರುತ್ತೀರೆಂಬ ನಂಬುತ್ತಾ, ಪತ್ರಿಕೆ ಮುಂದೆಯೂ ಪ್ರವಾಸೋದ್ಯಮದ ಏಳಿಗೆಗಾಗಿ ಶ್ರಮಿಸುತ್ತದೆ ಎಂಬ ವಾಗ್ದಾನ ನೀಡುತ್ತಾ ಎರಡನೆಯ ವರ್ಷಕ್ಕೆ ಕಾಲಿಡುತ್ತಿದೆ. ಶುಭವಾಗಲಿ.