Friday, August 14, 2026
Friday, August 14, 2026

ನಮ್ಮ ಅಜ್ಜಿ ಮನೆಗೆ ನೀವೂ ಬರ್ತೀರಾ ?

ಬೆಂಗಳೂರಿನಲ್ಲಿ ಆಹಾರಪ್ರಿಯರಿಗೆ ಆಯ್ಕೆಗಳು ಹಲವು. ಗ್ರಾಹಕರನ್ನು ಸೆಳೆಯುವುದಕ್ಕಾಗಿ ಸೀಸನ್‌ಗೆ ತಕ್ಕಂತೆ ಒಂದಿಲ್ಲೊಂದು ಆಫರ್ಸ್‌, ಗಿಮಿಕ್‌ಗಳು ಹಾಗೂ ಹೊಸತನದ ಪ್ರಯೋಗಗಳೊಂದಿಗೆ ಹೊಟೇಲ್ಸ್, ಕೆಫೆಗಳು ತಲೆ ಎತ್ತುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಕ್ಲಿಕ್‌ ಆದರೆ ಮತ್ತೊಂದಷ್ಟು, ಉದ್ಯಮ ನಡೆಸಲಾಗದೆ ಅರ್ಧಕ್ಕೇ ಕೈಬಿಡುವುದೂ ಇದೆ. ಆದರೆ ಕುಮಾರಸ್ವಾಮಿ ಲೇಔಟ್‌ನಲ್ಲಿ ಸದ್ಯ ಸುದ್ದಿಯಲ್ಲಿರುವ ʻನಮ್ಮ ಅಜ್ಜಿ ಮನೆʼ, ಸಾಂಪ್ರದಾಯಿಕ ಶೈಲಿಯ ಅಡುಗೆಗಳನ್ನು ಉಣಬಡಿಸುವುದಷ್ಟೇ ಅಲ್ಲದೆ ಅಜ್ಜಿಯ ಕೈರುಚಿಯನ್ನ ಮತ್ತೆ ನೆನಪಿಸುತ್ತದೆ.

ಬೆಂಗಳೂರು ನಗರದಲ್ಲಿ ಸಾಂಪ್ರದಾಯಿಕ ಶೈಲಿಯ ಆಹಾರಗಳನ್ನು ನೀಡುವ ಹೊಟೇಲ್‌ಗಳು, ಕೆಫೆ, ಕ್ಯಾಂಟೀನ್‌ಗಳು ಸಾಕಷ್ಟಿವೆ. ಆದರೆ ಅಜ್ಜಿಯ ಕೈರುಚಿಯನ್ನು ನೀಡುವ ಆಹಾರದ ಸವಿಯನ್ನು ಅನುಭವಿಸಬೇಕು ಎಂದುಕೊಳ್ಳುವವರು ಅನೇಕ ಮಂದಿ. ಅಂಥವರು ತಪ್ಪದೇ ಭೇಟಿ ನೀಡಬೇಕಾದ ಆಹಾರ ತಾಣ ʻನಮ್ಮ ಅಜ್ಜಿ ಮನೆʼ ಹೊಟೇಲ್. ಬೆಂಗಳೂರು ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ನೆಲೆಗೊಂಡಿರುವ ‘ನಮ್ಮ ಅಜ್ಜಿ ಮನೆ’ ಹೊಟೇಲ್, ಮನೆಮಾತಾದ ಸಾಂಪ್ರದಾಯಿಕ ಊಟವನ್ನು ಮೆಚ್ಚಿಕೊಳ್ಳುವವರ ಫೇವರಿಟ್‌ ತಾಣವಾಗಿದೆ. ಅಜ್ಜಿ ಮನೆಯ ಅಡುಗೆಯ ಸೊಗಡು, ರುಚಿ ಮತ್ತು ಆತ್ಮೀಯತೆಯನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಈ ಹೊಟೇಲ್ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಹೆಸರಿಗೆ ತಕ್ಕಂತೆ ʼತಾಜಾʼ ತಿಂಡಿ ತಾಣ

ಇಂದಿನ ಬ್ಯುಸಿ ಲೈಫ್‌ನಲ್ಲಿ ಎಲ್ಲರೂ ದುಡಿಯುವ ಮಂದಿಯೇ ಆಗಿದ್ದಾರೆ. ಮನೆಯಲ್ಲಿ ರುಚಿಕರ ಅಡುಗೆ ಮಾಡಿ ಉಣ್ಣುವ ಮಂದಿ ಕಡಿಮೆಯಾಗಿದ್ದಾರೆ. ಇಂಥ ಸಂದರ್ಭಗಳಲ್ಲಿ ಮನೆಯೂಟದ ರುಚಿಯನ್ನು ನೀಡುವ, ಅಚ್ಚುಕಟ್ಟಾದ ಖಾದ್ಯಗಳನ್ನು ಉಣಬಡಿಸುವ ಹೊಟೇಲ್‌ಗಳ ಪೈಕಿ ಟ್ರೆಂಡ್‌ನಲ್ಲಿರುವುದು ʻನಮ್ಮ ಅಜ್ಜಿ ಮನೆʼ ಹೊಟೇಲ್. ಎರಡು ತಿಂಗಳ ಹಿಂದಷ್ಟೇ ಪ್ರಾರಂಭವಾಗಿರುವ ಈ ಹೊಟೇಲ್‌ ಮನೆಯಲ್ಲೇ ತಯಾರಿಸಿದಂತೆ ತಾಜಾ ಮತ್ತು ಆರೋಗ್ಯಕರವಾದ ಆಹಾರವನ್ನು ಉಣಬಡಿಸುತ್ತಿದೆ. ಸಾಂಪ್ರದಾಯಿಕ ಶೈಲಿಯ ಖಾದ್ಯಗಳು, ರುಚಿಕರವಾದ ಫಿಲ್ಟರ್‌ ಕಾಫಿ, ವಿಶೇಷ ಸಿಹಿತಿಂಡಿಗಳು ಈಗಾಗಲೇ ಗ್ರಾಹಕರ ಮನಗೆದ್ದಿದೆ.

Untitled design (97)

ಅಜ್ಜಿ ಮನೆಯೇ ಹೊಟೇಲ್‌ ಆಯ್ತು

ಈ ಅಜ್ಜಿ ಮನೆ ಹೊಟೇಲ್‌ ಹುಟ್ಟಿನ ಹಿಂದೆ ಸೊಗಸಾದ ಹಿನ್ನೆಲೆಯೊಂದಿದೆ. ಇಂಥದೊಂದು ಸಾಂಪ್ರದಾಯಿಕ ಶೈಲಿಯ ಹೊಟೇಲ್‌ನ ಸಂಸ್ಥಾಪಕರು ಮೀನಾ ಶ್ರೀಕಾಂತ್‌. ಇದು ಬರುವ ಗ್ರಾಹಕರಿಗಷ್ಟೇ ಅಜ್ಜಿ ಮನೆಯಲ್ಲ, ಖುದ್ದು ಸಂಸ್ಥಾಪಕರ ಅಜ್ಜಿ ಮನೆಯೂ ಹೌದು. ಅವರು ಹುಟ್ಟಿ ಬೆಳೆದ ಅವರ ಅಜ್ಜಿ ಮನೆಯೇ ಇಂದು ಎಲ್ಲರ ನೆಚ್ಚಿನ ಆಹಾರ ತಾಣವಾಗಿದೆ. ಕಾಫಿಯ ಬಗ್ಗೆ ಅತಿಯಾದ ಪ್ರೀತಿ ಬೆಳೆಸಿಕೊಂಡಿದ್ದ ಅಜ್ಜಿಯ ನೆನಪಿನಲ್ಲಿ ಚಿಕ್ಕದಾಗಿ ಕಾಫಿ ಮ್ಯಾನುಫ್ಯಾಕ್ಚರಿಂಗ್‌ ಕಂಪನಿಯನ್ನು ಇದೇ ಮನೆಯಲ್ಲಿ ಪ್ರರಂಭಿಸಿದ್ದು, ನಂತರದ ದಿನಗಳಲ್ಲಿ ಕೆಫೆಯ ರೂಪವನ್ನು ಪಡೆದುಕೊಂಡಿತ್ತು. ಇಲ್ಲಿ ಶಾಸ್ತ್ರೀ ಫಿಲ್ಟರ್‌ ಕಾಫಿ ಪೌಡರ್‌, ಇನ್‌ಸ್ಟೆಂಟ್‌ ಕಾಫಿ ಪೌಡರ್‌, ರೋಸ್ಟೆಡ್‌ ಕಾಫಿ ಬೀನ್ಸ್‌ ಕೊಂಡುಕೊಳ್ಳಲು ಲಭ್ಯವಿದೆ.

ಸ್ವಚ್ಛತೆ ಮತ್ತು ಗುಣಮಟ್ಟಕ್ಕೆ ಆದ್ಯತೆ

ನಮ್ಮ ಅಜ್ಜಿ ಮನೆಯ ವಿಶೇಷತೆ ಎಂದರೆ ಆರೋಗ್ಯಕರ, ಪ್ರೋಟೀನ್ ಸಮೃದ್ಧ ಮತ್ತು ಆವಿಯಲ್ಲಿ ಬೇಯಿಸಿದ ಸಾಂಪ್ರದಾಯಿಕ ಆಹಾರಗಳು. ಮಿನಿ ರಾಗಿ ಮುದ್ದೆ, ನುಚ್ಚಿನ ಉಂಡೆ, ಸಿಹಿ ಮತ್ತು ಖಾರ ಹಾವಿ ಕಡುಬು, ಕೇರಳದ ಏಲ ಅಡ, ರವಾ ಕೊಝುಕಟ್ಟೈ, ಪನೀರ್ ಕೊಝುಕಟ್ಟೈ ಸೇರಿದಂತೆ ಹಲವಾರು ಪೌಷ್ಟಿಕ ಆಹಾರ ಪದಾರ್ಥಗಳು ಇಲ್ಲಿ ಲಭ್ಯವಿವೆ. ಮಕ್ಕಳು ಹಾಗೂ ಹಿರಿಯರು ಎಲ್ಲರೂ ಇಷ್ಟಪಡುವಂತೆ ರುಚಿ ಮತ್ತು ಆರೋಗ್ಯ ಎರಡಕ್ಕೂ ಮಹತ್ವ ನೀಡಿ ತಯಾರಿಸಲಾಗುತ್ತದೆ.

ಈ ಹೊಟೇಲ್‌ನ ಮತ್ತೊಂದು ವಿಶೇಷತೆ ಎಂದರೆ ಸ್ವಚ್ಛತೆ ಮತ್ತು ಗುಣಮಟ್ಟ. ಇಲ್ಲಿ ಆಹಾರ ಪ್ರಿಯರಿಗಾಗಿ ಸಿದ್ಧವಾಗುವ ಆಹಾರ ತಯಾರಿಕೆಯಲ್ಲಿ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸಲಾಗುತ್ತದೆ. ಜತೆಗೆ ಸಿಬ್ಬಂದಿಯ ಆತ್ಮೀಯ ಸೇವೆ ಗ್ರಾಹಕರಿಗೆ ಮನೆಯಲ್ಲಿರುವ ಅನುಭವವನ್ನು ನೀಡುತ್ತದೆ. ಕುಟುಂಬ ಸಮೇತವಾಗಿ ಊಟ ಮಾಡಲು ಬರುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

Untitled design (99)

ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಹಿರಿಯ ನಾಗರಿಕರು ಸೇರಿದಂತೆ ವಿವಿಧ ವಯೋಮಾನದ ಜನರು ಈ ಹೊಟೇಲ್‌ಗೆ ಭೇಟಿ ನೀಡುತ್ತಾರೆ. ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ರುಚಿಕರ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸುವ ಕಾರಣದಿಂದ ‘ನಮ್ಮ ಅಜ್ಜಿ ಮನೆ’ ಹೊಟೇಲ್ ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದೆ.

ನಗರದ ಹೃದಯಭಾಗದಲ್ಲಿರುವ ಕುಮಾರಸ್ವಾಮಿ ಲೇಔಟ್‌ನ ‘ನಮ್ಮ ಅಜ್ಜಿ ಮನೆ’ ಹೊಟೇಲ್ ಕೇವಲ ಒಂದು ಊಟದ ಸ್ಥಳವಾಘಿ ಉಳಿಯದೆ, ಅದು ಅಜ್ಜಿ ಮನೆಯ ಪ್ರೀತಿ, ಸಂಪ್ರದಾಯ ಮತ್ತು ರುಚಿಯನ್ನು ನೆನಪಿಸುವ ವಿಶಿಷ್ಟ ಆಹಾರತಾಣವಾಗಿದೆ. ಸಾಂಪ್ರದಾಯಿಕ ಆಹಾರವನ್ನು ಸವಿಯಲು ಬಯಸುವವರು ಒಮ್ಮೆ ಈ ಹೋಟೆಲ್‌ಗೆ ಭೇಟಿ ನೀಡಲೇಬೇಕು.

ಆನ್‌ಲೈನ್‌ ಆರ್ಡರ್‌

ಕೇವಲ ಎರಡು ತಿಂಗಳಲ್ಲೇ ಉತ್ತಮ ಪ್ರತಿಕ್ರಿಯೆ ಪಡೆದಿರುವ ʻನಮ್ಮ ಅಜ್ಜಿ ಮನೆʼ ಈಗ ಸ್ವಿಗ್ಗಿ, ಝೊಮೇಟೊ ಮೂಲಕವೂ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಹಬ್ಬಗಳು, ಕುಟುಂಬ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿಶೇಷ ಸಂದರ್ಭಗಳಿಗಾಗಿ ಬಲ್ಕ್ ಆರ್ಡರ್‌ಗಳನ್ನು ಸಹ ಸ್ವೀಕರಿಸಲಾಗುತ್ತದೆ.

ಒಟ್ಟಿನಲ್ಲಿ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಿಂದ ನಡೆಸಲ್ಪಡುವ ಈ ಶುದ್ಧ ಸಸ್ಯಾಹಾರಿ ಅಡುಗೆಮನೆ, ದಕ್ಷಿಣ ಭಾರತದ ಆಹಾರ ಪರಂಪರೆಯನ್ನು ಯುವ ಜನತೆಗೆ ಪರಿಚಯಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಫಿಲ್ಟರ್‌ ಕಾಫಿ ಪ್ರೇಮಿಗಳ ನೆಚ್ಚಿನ ತಾಣವೆನಿಸಿಕೊಂಡಿದೆ.

Untitled design (98)

ಏನ್‌ ಫೇಮಸ್ಸು ?

ಕರ್ನಾಟಕ ಶೈಲಿಯ ನುಚ್ಚಿನುಂಡೆ

ಆವಿ ಕಡುಬು

ಆವಿ ಕಡುಬು ಸಿಹಿ ಮಿಶ್ರ

ಮಿನಿ ರಾಗಿ ಮುದ್ದೆ

ಹುರಿಟ್ಟು ಮುದ್ದೆ

ಸ್ಟೀಮ್ಡ್‌ ಮೋದಕ

ಆಂದ್ರದ ಸ್ಪೆಷಲ್‌ ಅಪ್ಪಾಛಿ

ತಮಿಳುನಾಡಿನ ಪನೀರ್‌ ಕೊಯುಕಟ್ಟೈ

ರವಾ ಕೊಯುಕಟ್ಟೈ

ಕೇರಳದ ಎಲ ಅಡ

ನಾನು ಚಿಕ್ಕಂದಿನಿಂದಲೂ ಆಡಿ ಬೆಳೆದ ನನ್ನ ಅಜ್ಜಿ ಮನೆಗೆ, ಅವರ ಕಾಲಾನಂತರದಲ್ಲಿ ಹೊಟೇಲ್‌ ರೂಪವನ್ನು ನೀಡಿದ್ದೇನೆ. ಅಜ್ಜಿಗೆ ಕಾಫಿ ಬಗ್ಗೆ ಅತಿಯಾದ ಪ್ರೀತಿಯಿದ್ದುದರಿಂದ ಅಲ್ಲಿ ಕಾಫಿ ಮ್ಯಾನುಫ್ಯಾಕ್ಚರಿಂಗ್‌ ಆಫೀಸ್‌ ಮಾಡಿಕೊಂಡಿದ್ದೆ. ನಂತರ ಮನೆಯಲ್ಲಿ ಅಜ್ಜಿ ಮಾಡುತ್ತಿದ್ದ ರುಚಿಕರ ಹಾಗೂ ಸಾಂಪ್ರಾದಾಯಿಕ ಶೈಳಿಯ ಆಹಾರವನ್ನೂ ಜನರಿಗೆ ಪರಿಚಯಿಸಿದರೆ ಹೇಗೆ ಎಂಬ ಯೋಚನೆ ಹುಟ್ಟಿಕೊಂಡಾದ ಈ ʻನಮ್ಮ ಅಜ್ಜಿ ಮನೆʼ ಎಂಬ ಹೊಟೇಲ್‌ ಮಾಡಿದೆ. ಇದನ್ನು ಪ್ರಾರಂಭಿಸಿ ಈಗಿನ್ನೂ ಎರಡು ತಿಂಗಳುಗಳಾಗಿವೆಯಾದರೂ ಬಲ್ಕ್‌ ಆರ್ಡರ್‌ಗಳು ಬರುತ್ತಿವೆ, ಇಲ್ಲಿಗೆ ಬಂದು ಆಹಾರ ಸೇವಿಸುವವರ ಜತೆಗೆ ಆನ್‌ ಲೈನ್‌ ಮೂಲಕ ಬೇಡಿಕೆಯೂ ಹೆಚ್ಚಿದೆ.

- ಮೀನಾ ಶ್ರೀಕಾಂತ್‌, ಸಂಸ್ಥಾಪಕಿ

ವಿಳಾಸ:

2471, 15ನೇ ಮುಖ್ಯ ರಸ್ತೆ, ಹೊಯ್ಸಳ ಪಾರ್ಕ್ ಮುಖ್ಯ ದ್ವಾರದ ಎದುರು, ಕುಮಾರಸ್ವಾಮಿ ಲೇಔಟ್ 2ನೇ ಹಂತ, ಬನಶಂಕರಿ, ಬೆಂಗಳೂರು - 560078

ಮೊ: +91 8431209695

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ