Friday, June 13, 2025
Friday, June 13, 2025

ಅರ್ಮೇನಿಯದ ಕೆಲವು ನೆನಪುಗಳು

ಏಷ್ಯಾ ಮತ್ತು ಯೂರೋಪ್ ನಡುವಿನ ಕಾಕಸಸ್ ಪರ್ವತ ಶ್ರೇಣಿಯ ಸುಂದರ ಪ್ರಾಂತದಲ್ಲಿ ಈ ದೇಶವಿದೆ. ಸುಮಾರು ಮೂವತ್ತು ಲಕ್ಷ ಜನಸಂಖ್ಯೆಯಿರುವ ಈ ದೇಶ, ಕ್ರಿಶ್ಚಿಯಾನಿಟಿಯನ್ನು ಸ್ವೀಕರಿಸಿದ ಮೊದಲ ದೇಶವೂ ಹೌದು-ವಿಶ್ವೇಶ್ವರ ಭಟ್

ನಾನು ಎರಡು ವರ್ಷಗಳ ಹಿಂದೆ, ಅರ್ಮೇನಿಯ ರಾಜಧಾನಿ ಯೆರೆವನ್ ಗೆ ಹೋಗಿದ್ದೆ. ಇದನ್ನು 'ಲ್ಯಾಂಡ್ ಲಾಕ್ಡ್ ಕಂಟ್ರಿ' ಎಂದು ಕರೆಯುತ್ತಾರೆ. ಈ ದೇಶವನ್ನು ಜಾರ್ಜಿಯಾ, ಅಜರ್ಬೈಜಾನ್, ಟರ್ಕಿ ಮತ್ತು ಇರಾನ್ ಸುತ್ತುವರಿದಿದೆ. ರಸ್ತೆಯ ಮಾರ್ಗವಾಗಿ ಈ ದೇಶಕ್ಕೆ ಹೋಗಲು ಬೇರೆ ದೇಶವನ್ನು ಬಳಸಿಯೇ ಹೋಗಬೇಕು.

ಇದು ಮೊದಲಿನ ಸೋವಿಯತ್ ರಷ್ಯಾ(Russia) ಭಾಗವಾಗಿತ್ತು. ಏಷ್ಯಾ ಮತ್ತು ಯೂರೋಪ್(Europe) ನಡುವಿನ ಕಾಕಸಸ್ ಪರ್ವತ ಶ್ರೇಣಿಯ ಸುಂದರ ಪ್ರಾಂತದಲ್ಲಿ ಈ ದೇಶವಿದೆ. ಸುಮಾರು ಮೂವತ್ತು ಲಕ್ಷ ಜನಸಂಖ್ಯೆಯಿರುವ ಈ ದೇಶ, ಕ್ರಿಶ್ಚಿಯಾನಿಟಿಯನ್ನು ಸ್ವೀಕರಿಸಿದ ಮೊದಲ ದೇಶವೂ ಹೌದು. ಅದನ್ನು ಸಾಬೀತುಪಡಿಸಲು ಅಲ್ಲಿರುವ ಚರ್ಚ್ ಮತ್ತು ಬ್ಯಾಸಿಲಿಕಾಗಳೇ ಸಾಕ್ಷಿ. ಈ ಸಂಗತಿಯನ್ನು ಪ್ರಶ್ನಿಸುವವರೂ ಇದ್ದಾರೆನ್ನಿ.

ನಿಸರ್ಗದ ಎಲ್ಲಾ ಚೆಲುವುಗಳನ್ನು ಹೊತ್ತ ಈ ದೇಶದ ತಕರಾರು ಯಾವಾಗ ಮುಗಿಯುವುದೋ ಆ ಏಸುವೇ ಬಲ್ಲ. ಕಾರಣ ಪಕ್ಕದ ಅಜರ್ಬೈಜಾನ್ ಜತೆಗೆ ನಿತ್ಯ ಕದನ. ನಗೋರ್ನೋ - ಕರಬಕ್ ಎಂಬ ಸಣ್ಣ ಭೂಭಾಗಕ್ಕಾಗಿ ಎರಡೂ ದೇಶಗಳ ನಡುವೆ ಸದಾ ಲಡಾಯಿ. ಈ ಪ್ರದೇಶವಿರುವುದು ಅಜರ್ ಬೈಜಾನ್ ನಲ್ಲಿ. ಆದರೆ ಅಲ್ಲಿ ಹೆಚ್ಚಿನ ಜನರು ಅರ್ಮೇನಿಯನ್ ರು. ಜಾರ್ಜಿಯಾದಿಂದ ಅಜರ್ಬೈಜಾನ್ ಗೆ ಹೋಗಬೇಕೆಂದರೆ ಮಧ್ಯದಲ್ಲಿ ಸಿಗುವ ಅರ್ಮೇನಿಯ ಮೂಲಕವೇ ಹೋಗಬೇಕು. ಆದರೆ ಅರ್ಮೇನಿಯ ಹೋಗಲು ಬಿಡುವುದಿಲ್ಲ. ಹೀಗಾಗಿ ವೈಮಾನಿಕ ಪ್ರಯಾಣ ಅನಿವಾರ್ಯ.

ಅರ್ಮೇನಿಯನ್ನರು ತಮ್ಮ ದೇಶದಲ್ಲಿ ಇರುವುದಕ್ಕಿಂತ ಹೆಚ್ಚು ಬೇರೆ ದೇಶಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ. ಇದಕ್ಕೆ ಕಾರಣವೂ ಇದೆ. 1915 ರಲ್ಲಿ ಟರ್ಕಿಯ ಒಟ್ಟೋಮನ್ ಸಾಮ್ರಾಜ್ಯ ಅರ್ಮೇನಿಯದ ಮೇಲೆ ಸತತ ದಾಳಿ ನಡೆಸಿ, ಸುಮಾರು ಹದಿನೈದು ಲಕ್ಷ ಜನರನ್ನು ಹತ್ಯೆ ಮಾಡಿತು. ಸಿಟ್ಸರ್ನಕಬೇರ್ಡ್ (Tsitsernakaberd) ನಗರದಲ್ಲಿ ಜನಾಂಗೀಯ ನರಮೇಧದ ಭವ್ಯ ಸ್ಮಾರಕ ಕಟ್ಟಿದ್ದಾರೆ. ಈ ನರಮೇಧ ನಡೆದ ನಂತರದಿಂದ ಅರ್ಮೇನಿಯನ್ ರು ತಮ್ಮ ದೇಶವನ್ನು ತೊರೆಯಲಾರಂಭಿಸಿದರು.

ರಾಜಧಾನಿ ಯೆರೆವನ್ ಜಗತ್ತಿನ ಅತಿ ಪ್ರಾಚೀನ ಜನವಸತಿ ಹೊಂದಿದ ನಗರಗಳಲ್ಲೊಂದು. ರೋಮ್ ನಿರ್ಮಿಸುವುದಕ್ಕಿಂತ ಮೂವತ್ತು ವರ್ಷಗಳ ಮೊದಲು ಈ ನಗರವನ್ನು ನಿರ್ಮಿಸಲಾಗಿದೆಯಂತೆ. ಯೆರೆವನ್ ನ್ನು 'ಪಿಂಕ್ ಸಿಟಿ' ಎಂದು ಕರೆಯುತ್ತಾರೆ. ಕಾರಣ ಅಲ್ಲಿನ ಬಹುತೇಕ ಕಟ್ಟಡಗಳನ್ನು ಗುಲಾಬಿ ಬಣ್ಣದ ಜ್ವಾಲಾಮುಖಿ ಬಂಡೆಗಳಿಂದ ಕಟ್ಟಲಾಗಿದೆ.

ಅರ್ಮೇನಿಯಾದ ಕೋನಿಯಾಕ್ ವಿಶ್ವದಲ್ಲೇ ಪ್ರಸಿದ್ಧ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ರಷ್ಯಾದ ಅಧ್ಯಕ್ಷ ಜೋಸೆಫ್ ಸ್ಟಾಲಿನ್, ಬ್ರಿಟನ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಗೆ ಬ್ಯಾರೆಲ್ ಗಟ್ಟಲೆ ಕೋನಿಯಾಕನ್ನು ಕಳಿಸಿಕೊಟ್ಟಿದ್ದನಂತೆ.

ಅರ್ಮೇನಿಯದ ನಗರಗಳಲ್ಲಿ ಓಡಾಡುವಾಗ, ಮಕ್ಕಳಿಂದ ಹಿಡಿದು ಮುದುಕರ ತನಕ ಅಲ್ಲಲ್ಲಿ ಚೆಸ್ ಆಡುವ ದೃಶ್ಯಗಳು ಸಾಮಾನ್ಯ. ಅಲ್ಲಿನ ಶಾಲೆ - ಹೈಸ್ಕೂಲುಗಳಲ್ಲಿ ಚೆಸ್ ಆಟವನ್ನು ಗಣಿತ, ವಿಜ್ಞಾನ ಮತ್ತು ಇತಿಹಾಸದಂತೆ, ಒಂದು ವಿಷಯವಾಗಿ ಕಡ್ಡಾಯವಾಗಿ ಕಲಿಸುತ್ತಾರೆ. ಹೊಟೇಲುಗಳಲ್ಲಿ ಊಟದ ಟೇಬಲ್ ಕೂಡ ಚೆಸ್ ಬೋರ್ಡ್ ರೀತಿ ಇರುತ್ತದೆ. ಬಸ್ ನಿಲ್ದಾಣ, ಉದ್ಯಾನವನ, ಆಟದ ಮೈದಾನ, ಕೊಡುತಾಣಗಳಲ್ಲೆಲ್ಲಾ ದೊಡ್ಡ ದೊಡ್ಡ ಚೆಸ್ ಬೋರ್ಡನ್ನು ಕಾಣಬಹುದು.

ಅರ್ಮೇನಿಯನ್ ರಿಗೆ ಚೆಸ್, ಆಟವೂ ಹೌದು, ಕಲಿಕೆಯೂ ಹೌದು, ಕೆಲಸವೂ ಹೌದು. ಆ ದೇಶದಲ್ಲಿ ತನಗೆ ಚೆಸ್ ಗೊತ್ತಿಲ್ಲ ಎನ್ನುವವರು ಸಿಗಲಿಕ್ಕಿಲ್ಲ. ನಾನು ನೋಡಿದಂತೆ, ಇದೇ ರೀತಿ ಚೆಸ್ ಹುಚ್ಚನ್ನು ಅಂಟಿಸಿಕೊಂಡ ಇನ್ನೊಂದು ದೇಶವೆಂದರೆ ಐಸ್ ಲ್ಯಾಂಡ್.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!