ಬಿಹಾರದ ಬಟ್ಟೆ ಅಂಗಡಿಯೊಂದರಲ್ಲಿ ವಿದೇಶಿ ಪ್ರವಾಸಿಯೊಬ್ಬ ಚೌಕಾಸಿ ನಡೆಸುವ ಕ್ಯೂಟ್ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚೌಕಾಸಿ ಅನ್ನೋದು ಭಾರತೀಯರಿಗೆ ಮಾತ್ರ ಸೀಮಿತ ಅನ್ನೋ ಭ್ರಮೆ ಇದೆ ನಮಗೆ. ಅದೇ ರೀತಿ ವಿದೇಶಿಯರು ಚೌಕಾಸಿ ಮಾಡುವುದಿಲ್ಲ ಎಂಬ ತಪ್ಪು ಕಲ್ಪನೆ ಕೂಡ ಇದೆ. ಇಲ್ಲಿ ಎರಡು ಆಯಾಮಗಳಿವೆ. ನಮ್ಮ ವ್ಯಾಪಾರಿಗಳು ವಿದೇಶಿಯರು ಕಂಡ ತಕ್ಷಣ ’ಅವರ ಲೆಕ್ಕದಲ್ಲಿ ಹೇಗೂ ನಮ್ಮ ರುಪಾಯಿಗೆ ಬೆಲೆ ಇಲ್ಲ, ಒಂದು ಡಾಲರ್ ಅಂದ್ರೆ ತೊಂಬತ್ತೈದು ರುಪಾಯಿ. ನಾವು ಎಷ್ಟು ಬೇಕಾದರೂ ಕಿತ್ತುಕೋಬಹುದು’ ಎಂದು ಯದ್ವಾತದ್ವಾ ಬೆಲೆ ಹೇಳುತ್ತಾರೆ. ಅತ್ತ ವಿದೇಶಿಯರು ಕೂಡ ಮೊದಲೇ ಇದನ್ನೆಲ್ಲ ಅರಿತು ಚೌಕಾಸಿಗೆ ಸಿದ್ಧರಾಗಿ ಬಂದಿರುತ್ತಾರೆ, ’ನಮ್ಮನ್ನು ಕಂಡರೆ ಇವರು ನಾಲ್ಕುಪಟ್ಟು ಬೆಲೆ ಹೇಳುತ್ತಾರೆ. ನಾವು ಕಾಲುಭಾಗ ಬೆಲೆಗೆ ಚೌಕಾಸಿ ಮಾಡಬೇಕು’ ಅಂತ.

ಇದನ್ನೂ ಓದಿ: ಬೆಳಕಿನಿಂದ ಕತ್ತಲಿನೆಡೆಗೆ ಪ್ರವಾಸ!

ವ್ಯವಹಾರ ಬ್ಯಾಲೆನ್ಸ್ ಆಗುವುದೇ ಹೀಗೆ! ಆದರೆ ವಿದೇಶಿ ಪ್ರವಾಸಿಗರಲ್ಲಿ ಇನ್ನೊಂದು ಗುಣ ಇರುತ್ತದೆ. ಅದು ಸುಪೀರಿಯಾರಿಟಿ ಭಾವ. ತಮ್ಮ ಇಂಗ್ಲಿಷಿಗೆ, ತಮ್ಮ ಲುಕ್ಕಿಗೆ ಭಾರತೀಯ ವ್ಯಾಪಾರಿಗಳು ಸೋತು, ಬೆಬ್ಬೆಬ್ಬೆ ಅಂತ ಒಪ್ಪಿಬಿಡುತ್ತಾರೆಂದು. ತಮ್ಮ ಆಟಿಟ್ಯೂಡಿನಿಂದಲೇ ಭಾರತೀಯರ ಬಾಯಲ್ಲಿ ಓಕೆ ಅನಿಸಿಬಿಡುತ್ತೇವೆಂಬ ಭ್ರಮೆ ಇರುತ್ತದೆ. ಆದರೆ ಭಾರತೀಯ ವ್ಯಾಪಾರಿಗಳು ಇಂಗ್ಲಿಷಿನಲ್ಲಿ ಡಲ್ ಇರಬಹುದು. ಆದರೆ ವ್ಯಾಪಾರಕ್ಕೆ ಇಳಿದಾಗ ಅವರಿಗೆ ವಿದೇಶಿಯರ ಬೆವರಿಳಿಸೋಕೂ ಚೆನ್ನಾಗಿ ಗೊತ್ತು. ನಮ್ಮಲ್ಲಿ ಬೀದಿಬದಿ ಚಹಾ ಮಾರುವವನೂ ಫಿಲಾಸಫಿ ಮಾತಾಡಬಲ್ಲ, ಆಟೋ ಡ್ರೈವರ್ ಎಕನಾಮಿಕ್ಸ್ ಮಾತನಾಡಬಲ್ಲ, ರಸ್ತೆಬದಿ ಬಟ್ಟೆ ಮಾರೋವ್ನೂ ಜಿಯೋಪೊಲಿಟಿಕ್ಸ್ ಚರ್ಚೆ ನಡೆಸಬಲ್ಲ. ಯಾರೊಂದಿಗೆ ಏನನ್ನು ಹೇಗೆ ಮಾತಾಡಿ ರೂಟಿಗೆ ಎಳೆದುತರಬೇಕು ಎಂದು ನಮ್ಮ ದೇಶದ ವ್ಯಾಪಾರಿಗಳಿಗೆ ಚೆನ್ನಾಗಿ ಗೊತ್ತು. ಇಲ್ಲಿ ಆಗಿದ್ದೂ ಅದೇ.

ಮುನ್ನೂರು ರುಪಾಯಿ ಹೇಳಿದ ವಸ್ತುವನ್ನು ಆತ ನೂರು ರುಪಾಯಿಗೆ ಕೇಳುತ್ತಾನೆ. ವ್ಯಾಪಾರಿಗೆ ಇದೇನೂ ಹೊಸತಲ್ಲ. ಆತ ತನ್ನ ಮಾರ್ಜಿನ್ ಹತ್ತಿರಕ್ಕೆ ಬರುವವರೆಗೂ ಆಫರ್ ಕೊಡುತ್ತಾನೆ. ಆದರೆ ಗ್ರಾಹಕ ಯಾವಾಗ ಒಂದೇ ಬೆಲೆಗೆ ಅಂಟಿ ನಿಂತು ಆಟಿಟ್ಯೂಡ್ ತೋರಿಸಿದನೋ ಆಗ, ಚಲ್ ಹಟ್ ಎಂದುಬಿಡುತ್ತಾನೆ. ಭಾರತದ ವ್ಯಾಪಾರಿಗಳ ಜತೆ ಚೌಕಾಸಿಗಿಳಿಯುವ ಮುನ್ನ ವಿದೇಶಿಯರು ಇದರ ಬಗ್ಗೆ ಕೇಸ್ ಸ್ಟಡಿ ಮಾಡಬೇಕು. ಭಾರತೀಯ ವ್ಯಾಪಾರಿಗಳು ಗೂಗಲ್‌ಗಿಂತ ಫಾಸ್ಟ್ ಇದ್ದಾರೆ. ’ಅಮೆಜಾನ್‌ನಲ್ಲಿ ಇಷ್ಟಕ್ಕೆ ಸಿಗುತ್ತದೆ’ ಅಂತ ಗ್ರಾಹಕ ಹೇಳುವ ಮೊದಲು “ಅದು ಡೂಪ್ಲಿಕೇಟ್ ಸಾರ್… ಇದು ಒರಿಜಿನಲ್’ ಅಂತ ಪ್ರೂಫ್ ಸಮೇತ ತೋರಿಸಿರುತ್ತಾನೆ.

ಭಾರತವನ್ನು ವಿದೇಶಿಯರು ಸಸ್ತಾ ದೇಶ ಅಂತ ನೋಡಬಹುದು. ಆದರೆ ಇಲ್ಲಿ ಬದುಕುವ ಜನರ ಅನುಭವ, ಲೆಕ್ಕಾಚಾರ, ಮಾತಿನ ಚಾತುರ್ಯ ಇದನ್ನು ಡಾಲರ್‌ನಲ್ಲಿ ಅಳೆಯಲು ಆಗುವುದಿಲ್ಲ. ಹಾಗಾಗಿ ಭಾರತಕ್ಕೆ ಬರುವ ಪ್ರವಾಸಿಗರೇ, ತಾಜ್ ಮಹಲ್,ಗೋವಾ ಬೀಚ್, ಹಿಮಾಲಯ ನೋಡಿದ ಮಾತ್ರಕ್ಕೆ ನಿಮಗೆ ಭಾರತ ಅರ್ಥವಾಗುವುದಿಲ್ಲ. ಒಂದು ದಿನ ರಸ್ತೆ ಬದಿಯ ಅಂಗಡಿಯಲ್ಲಿ ಚೌಕಾಸಿ ವ್ಯಾಪಾರ ಮಾಡಿ ನೋಡಿ. ಆಗ ನಿಮಗೆ ಭಾರತ ಒಂಚೂರು ಅರ್ಥವಾಗುತ್ತದೆ!