ಅವನ ಹೆಸರು ಅಲೆಕ್ಸ್. ಅಲೆಕ್ಸ್ ವಾಂಡರ್‌ಸೈಟ್ ಹೆಸರಿನ ಇನ್‌ಸ್ಟಾಗ್ರಾಮ್ ಅಕೌಂಟಿನಿಂದ ಖ್ಯಾತನಾಗಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಎಪ್ಪತ್ತು ಸಾವಿರ ಅನುಯಾಯಿಗಳನ್ನು ಹೊಂದಿರುವ ಈತ ಇದುವರೆಗೂ ಸುತ್ತಿರುವ ದೇಶಗಳ ಸಂಖ್ಯೆ ಹದಿನೆಂಟು. ಆದರೆ ಬರೀ ವಿಯೆಟ್ನಾಂಗೆ ನಾಲ್ಕುನೂರಾ ಎಪ್ಪತ್ಮೂರು ಸಲ ಪ್ರವಾಸ ಮಾಡಿದ್ದಾನೆ. ಅಷ್ಟು ಬಾರಿ ಹೋಗೋಂಥದ್ದು ಏನಿರಬಹುದೋ ಅಲ್ಲಿ! ಒಂದೋ ಆತನ ಗರ್ಲ್ ಫ್ರೆಂಡ್ ಇರಬೇಕು ಅಥವಾ ವಿಯೆಟ್ನಾಂ ಆತನ ದೇಶವಾಗಿರಬೇಕು.

ಜಪಾನ್, ವಿಯೆಟ್ನಾಂ ಬಿಟ್ಟರೆ ಆತ ಅತಿ ಹೆಚ್ಚು ಬಾರಿ ಬಂದಿರುವುದು ಭಾರತಕ್ಕೆ. ನಾಲ್ಕನೇ ಬಾರಿ ಅಲೆಕ್ಸ್ ಭಾರತಕ್ಕೆ ಬಂದಿದ್ದಾನೆ. ಜಪಾನ್, ದಕ್ಷಿಣಕೊರಿಯಾ, ಮಲೇಷ್ಯಾ, ಬ್ರೂನೀ, ಫಿಲಿಪ್ಪೈನ್ಸ್, ವಿಯೆಟ್ನಾಂ, ಪಾಕಿಸ್ತಾನ್, ಇಂಡೋನೇಷ್ಯಾ, ಥೈಲ್ಯಾಂಡ್, ಹಾಂಗ್ ಕಾಂಗ್, ನೇಪಾಳ, ಓಮಾನ್, ಉಜ್ಬೆಕಿಸ್ತಾನ್, ಶ್ರೀಲಂಕಾ, ಹೀಗೆ ಏಷ್ಯಾದ ಎಲ್ಲ ದೇಶಗಳಿಗೆ ಭೇಟಿಕೊಟ್ಟಿರುವ ಅಲೆಕ್ಸ್ ಭಾರತದ ಬಗ್ಗೆ ಸಾಲು ಸಾಲು ವಿಡಿಯೋ ರೀಲ್ಸ್ ಮಾಡಿದ್ದಾನೆ. ಎಲ್ಲದರಲ್ಲೂ ಭಾರತವನ್ನು ಹಾಡಿ ಹೊಗಳಿದ್ದಾನೆ. ಆದರೆ ಅದ್ಯಾವುದೂ ವೈರಲ್ ಆಗಲಿಲ್ಲ. ಆದರೆ ಡಾರ್ಜಿಲಿಂಗ್ ಪ್ರವಾಸದಲ್ಲಿ ಈತ ಒಂದು ಸಣ್ಣ ಟೀಕೆ, ಬೇಸರ ವ್ಯಕ್ತಪಡಿಸಿರುವುದು, ದೇಶದ ತುಂಬ ಮಾತ್ರವಲ್ಲ ದೇಶದ ಆಚೆಗೂ ಸದ್ದು ಮಾಡಿದೆ.

Beauty of Darjeeling

’ಭಾರತದಲ್ಲಿನ ಹಲವಾರು ಇನ್‌ಸ್ಟಾ ಫಾಲೋವರ್ಸ್ ನನಗೆ ಮೆಸೇಜ್ ಕಳಿಸುತ್ತಾರೆ. ಹಾಗೊಂದು ಮೆಸೇಜ್ ನನಗೆ ವೆಸ್ಟ್ ಬೆಂಗಾಲ್‌ನಿಂದ ಬಂದಿತ್ತು. ಡಾರ್ಜಿಲಿಂಗ್ ಮತ್ತು ಕಲಿಂಪಾಂಗ್ ನಡುವೆ ಮಾರ್ಗದಲ್ಲಿ ಒಂದು ಲವರ್ಸ್ ವ್ಯೂ ಪಾಯಿಂಟ್ ಇದೆ. ನೀನು ನೋಡಲೇಬೇಕು ಅಂತ ಮೆಸೇಜುಗಳ ಸುರಿಮಳೆಯೇ ಆಗಿತ್ತು.ಅದರೆ ಆ ವ್ಯೂ ಪಾಯಿಂಟ್ ಬಳಿ ನನಗೆ ಕಂಡದ್ದು ರಾಶಿ ರಾಶಿ ಕಸಗಳ ಮತ್ತು ಪ್ಲಾಸ್ಟಿಕ್ ತ್ಯಾಜ್ಯ! ಇದು ಇಲ್ಲಿಗೆ ಬಂದಿರೋ ವಿದೇಶಿ ಪ್ರವಾಸಿಗರ ಕೃತ್ಯ ಅಲ್ಲ. ಇದೇ ದೇಶದ ಪ್ರವಾಸಿಗಳ ಬೇಜವಾಬ್ದಾರಿಯುತ ಕೆಲಸ. ಎದುರುಗಡೆಯೇ ಡಸ್ಟ್ ಬಿನ್ ಇದ್ದರೂ ಸಿಕ್ಕಸಿಕ್ಕಲ್ಲಿ ಕಸ ಬಿಸಾಡಿದ್ದಾರೆ. ದೂರಕ್ಕೆ ಕಣ್ಣು ಹಾಯಿಸಿದರೆ ಅದೆಂಥ ಪ್ರಕೃತಿ ಸೌಂದರ್ಯವಿದೆ. ಆದರೆ ಅಲ್ಲಿ ನಿಲ್ಲೋಕೂ ಅಸಹ್ಯ ಅನಿಸುವಷ್ಟ ತ್ಯಾಜ್ಯ ಎಸೆದಿದ್ದಾರೆ. ಇದೇನಾ ನೀವು ಭೂತಾಯಿಯನ್ನು ನಡೆಸಿಕೊಳ್ಳುವ ರೀತಿ?’ ಹೀಗಂತ ಒಂದು ವಿಡಿಯೋ ಮಾಡಿ ಪ್ರಶ್ನಿಸಿದ್ದಾನೆ ಅಲೆಕ್ಸ್. ಕರೆದು ಕೆರದಲ್ಲಿ ಹೊಡೆಸಿಕೊಳ್ಳೋದು ಅಂದರೆ ಇದೇನಾ? ನಮ್ಮವರು ತ್ಯಾಜ್ಯ ನಿರ್ವಹಣೆ ಕಲಿಯೋದಾದರೂ ಯಾವತ್ತು?

Garbage

ಪ್ರವಾಸೋದ್ಯಮದ ರಾಯಭಾರಿಗಳು ಕೇವಲ ಟ್ಯಾಕ್ಸಿ ಡ್ರೈವರ್ಸ್, ಹೊಟೇಲ್ ರೆಸಾರ್ಟ್ ಸಿಬ್ಬಂದಿ, ಅಧಿಕಾರಿಗಳು ಮಾತ್ರವೇ ಅಲ್ಲ, ಡೊಮೆಸ್ಟಿಕ್ ಪ್ರವಾಸಿಗರೂ ನಮ್ಮ ದೇಶದ ಪ್ರವಾಸೋದ್ಯಮದ ರಾಯಭಾರಿಗಳೇ. ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆ ಅಂಟಿಸುತ್ತಿರುವವರು ಸ್ಥಳೀಯ ಪ್ರವಾಸಿಗರೇ. ಈ ಪೋಸ್ಟ್ ಹಾಕಿದ್ದಕ್ಕೆ ಅವನ ಮೇಲೆ ಅಕ್ಷರದಾಳಿ ಮಾಡುವ ಮೂಲಕ ಇನ್ನಷ್ಟು ಕೆಟ್ಟ ಅಭಿಪ್ರಾಯ ಮೂಡಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ ಭಾರತೀಯರು. ಭಾರತವನ್ನು ಹಾಡಿ ಹೊಗಳಿರುವ ಅಷ್ಟೊಂದು ವಿಡಿಯೋ, ಅದ್ಯಾವುದೂ ಕಾಣಲಿಲ್ಲ. ಇದು ಇಟ್ಟುಕೊಂಡು ಬಯ್ತಾ ಇದ್ದಾರಲ್ಲ ಅಂತ ಬೇಸರಪಡಬೇಕೋ, ಇದಾದ್ರೂ ವೈರಲ್ ಆಯ್ತಲ್ಲ ಅಂತ ಖುಷಿಪಡಬೇಕೋ ಎಂಬ ಗೊಂದಲದಲ್ಲಿರಬಹುದು ಆತ. ಇಲ್ಲಿ ಹೊಗಳಿಕೆ ವರ್ಕ್ ಆಗುವುದಿಲ್ಲ. ನೆಗೆಟಿವ್ ಸುದ್ದಿಯೇ ಮಾರಾಟವಾಗುವುದು ಎಂದು ನಿರ್ಧರಿಸಿ ಆತ ಭಾರತದ ಬೇಜವಾಬ್ದಾರಿ ಪ್ರವಾಸೋದ್ಯಮವನ್ನ ಇಂಚಿಂಚಾಗಿ ಎಕ್ಸ್‌ಪೋಸ್‌ ಮಾಡಲು ನಿಲ್ಲದಿದ್ದರ ಸಾಕು!