ತಮ್ಮ ಮಾತಿನಿಂದ ಬರಹದಿಂದ ಸಮಾಜಘಾತಕ ನಡವಳಿಕೆಗಳಿಂದ ಸಂಘರ್ಷ ಸೃಷ್ಟಿ ಮಾಡುವವರನ್ನು ಕಿಡಿಗೇಡಿಗಳು ಎಂಬ ವಿಶೇಷಣದಿಂದ ಕರೆಯುತ್ತೇವೆ. ಬೆಂಕಿ ಹಚ್ಚುವವರು ಎಂಬ ಅಕ್ಷರಶಃ ಅರ್ಥವಲ್ಲ ಅದು. ಆದರೆ ನಿಜವಾದ ಕಿಡಿಗೇಡಿಗಳು ಯಾರು ಗೊತ್ತಾ? ಕಾಡಿನಲ್ಲಿ, ಸೂಕ್ಷ್ಮ ಪ್ರದೇಶಗಳಲ್ಲಿ ಧೂಮಪಾನ ನಿಷೇಧವಿದ್ದರೂ ಚಟ ನಿಯಂತ್ರಿಸಿಕೊಳ್ಳಲಾಗದೆ ಹಟಕ್ಕೆ ಬಿದ್ದು ಸಿಗರೇಟು ಬೀಡು ಹಚ್ಚುವವರು. ಇನ್ನು ಕೆಲವರಿರ್ತಾರೆ. ಅವರಿಗೆ ಸಿಗರೇಟು ಬೀಡಿಯ ಚಟವೂ ಇರುವುದಿಲ್ಲ. ಆದರೂ ಕಾಡಿಗೆ ಬೆಂಕಿ ಹಚ್ಚುವ ಹುಚ್ಚು! ಇವರು ರಿಯಲ್ ಕಿಡಿಗೇಡಿಗಳು. ಒಣಗಿದ ಹುಲ್ಲು ಅಥವಾ ಯಾವುದೋ ಸತ್ತ ಮರಕ್ಕೆ ಬೇಕೆಂದೇ ಕಡ್ಡಿ ಗೀರಿಬಿಡುತ್ತಾರೆ. ಪರಿಣಾಮ ಏನಾದರೆ ಇವರಿಗೇನು? ಆ ಸಣ್ಣ ಕಿಡಿ ಇಡೀ ಕಾಡನ್ನು ಸುಡಬಲ್ಲದು. ಕಾಳ್ಗಿಚ್ಚನ್ನೇ ಸೃಷ್ಟಿಸಬಲ್ಲದು ಎಂಬ ಸಣ್ಣ ಅರಿವೂ ಇವರಿಗಿರುವುದಿಲ್ಲವಾ? ಅರಿವಿದ್ದೂ ಇಂಥ ಅನಾಹುತ ಮಾಡಿ ತಮಾಷೆ ನೋಡುವ ಸ್ಯಾಡಿಸ್ಟ್ ಮನಸ್ಥಿತಿಯಾ? ಒಂದು ಗಿಡ ನೆಟ್ಟು ಬೆಳೆಸದವರಿಗೆ ಮಾತ್ರ ಕಾಡು ಸುಡುವ ವಿಕೃತಿ ಇರಬಹುದಷ್ಟೆ. ನಾಯಿ ಬೆಕ್ಕು ಸಾಕಿದರೆ ಬೆಳೆದುಕೊಳ್ಳುವ ಬಾಂಧವ್ಯವೇ ಗಿಡಮರಗಳ ಜತೆಯೂ ಬೆಳೆದಿರುತ್ತದೆ. ಅದನ್ನು ನೆಟ್ಟುಬೆಳೆಸಿದವರಿಗೆ ಮಾತ್ರ ಅರ್ಥವಾಗುವ ಸಂಗತಿ ಇದು. ಕಾಡಿನಲ್ಲಿ ಬೆಂಕಿ ಕಿಡಿ ಹೊತ್ತಿಸುವುದು ಪ್ರಕೃತಿ ಮೇಲಿನ ಅತ್ಯಚಾರಕ್ಕೆ ಸಮ. ಅತ್ಯಾಚಾರಕ್ಕಿಂತಲೂ ಘೋರ ಅಪರಾಧ.

JADAV (1)

ಇಂಥ ಕಿಡಿಗೇಡಿಗಳನ್ನು ಶಪಿಸಲು ಕಾರಣವಿದೆ. ಪದ್ಮಶ್ರೀ ಜಾದವ್ ಪಯೆಂಗ್ ಅವರ ಬಗ್ಗೆ ಭಾರತದಲ್ಲಿ ಗೊತ್ತಿಲ್ಲದವರಿಲ್ಲ. ಕರ್ನಾಟಕದಲ್ಲಿ ಸಾಲುಮರದ ತಿಮ್ಮಕ್ಕ ಹೇಗೋ ಹಾಗೆಯೇ ಅಸ್ಸಾಂನಲ್ಲಿ ಜಾದವ್ ಪಯೆಂಗ್. ಮರಗಳನ್ನು ಹೆತ್ತ ಮಕ್ಕಳಂತೆ ಪ್ರೀತಿಸುವ ಜೀವ ಅದು. ಏಕಾಂಗಿಯಾಗಿ ಒಂದೊಂದೇ ಗಿಡನೆಟ್ಟು ಬೃಹತ್ ಕಾಡನ್ನೇ ಸೃಷ್ಟಿಸಿದ ಪವಾಡ ಪುರುಷ ಜಾದವ್. ಸಹಸ್ರಾರು ಮರಗಳ ಪೋಷಕನಾಗಿ ಮೊಲೈ ಕಟೋನಿ ಎಂಬ ಕಾಡನ್ನೇ ಸೃಷ್ಟಿಸಿ, ಹತ್ತು ಹಲವು ಜಾತಿಯ ಪ್ರಾಣಿಗಳಿಗೆ ಆಶ್ರಯ ಸಿಗುವಂತೆ ಮಾಡಿದ ಪುಣ್ಯಾತ್ಮ. ಪ್ರಶಸ್ತಿ ಮನ್ನಣೆ ಎಲ್ಲವೂ ಬಂದಮೇಲೂ ಕಾಡನ್ನು ಸಲಹುದರಲ್ಲಿಯೇ ಜೀವ ಸವೆಸುತ್ತಿದ್ದಾರೆ ಜಾದವ್. ಆದರೆ ಇತ್ತೀಚೆಗೆ ಕಿಡಿಗೇಡಿಗಳು ಪಿಕ್ ನಿಕ್ ಹೆಸರಲ್ಲಿ ಅಸ್ಸಾಂನ ಈ ಕಾಡು ಪ್ರವೇಶಿಸಿ ಬೆಂಕಿ ಹಚ್ಚಿದ್ದಾರೆ. ಇವರ ನೀಚಕೃತ್ಯಕ್ಕೆ ಬಲಿಯಾಗಿರುವುದು ಐದುಸಾವಿರಕ್ಕೂ ಹೆಚ್ಚು ಮರಗಳು. ಕೇವಲ ಮರಗಳು ಮಾತ್ರ ನಾಶವಾಗಿಲ್ಲ. ಪ್ರಾಣಿಪಕ್ಷಿಗಳೂ ಸುಟ್ಟು ಕರಕಲಾಗಿವೆ. ಒಬ್ಬ ವ್ಯಕ್ತಿಯ ಜೀವಮಾನದ ತಪಸ್ಸನ್ನು ಒಂದೇ ಕ್ಷಣದಲ್ಲಿ ವ್ಯರ್ಥಗೊಳಿಸಲು ಹೇಗಾದರೂ ಮನಸುಬಂದಿದ್ದೀತು? ಪಯೆಂಗ್ ನ ಪುತ್ರಿ ಮತ್ತು ಸಹಚರರ ಹರಸಾಹಸಮಾಡಿ ಬೆಂಕಿ ಆರಿಸದಿದ್ದರೆ, ಇಡೀ ಕಾಡೇ ಸುಟ್ಟುಹೋಗ್ತಿತ್ತೇನೋ! ಇನ್ನಾದರೂ ಪ್ರವಾಸಿಗರು ಜವಾಬ್ದಾರಿ ಪರಿಸರಪ್ರೇಮ ಕಲಿಯಬಹುದಾ? ಅಥವಾ ಇಂಥವರಿಗೆ ದಂಡಂದಶಗುಣಂ ಎಂದು ಕಠಿಣ ಶಿಕ್ಷೆ ಕೊಟ್ಟೇ ಬುದ್ಧಿ ಕಲಿಸಬೇಕಾ?

ಕಾಡಿಗೆ ಪ್ರವೇಶಿಸುವ ಪ್ರವಾಸಿಗರನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಬೆಂಕಿ ಹೊತ್ತಿಸುವ ಯಾವ ವಸ್ತುವೂ ಕೊಂಡೊಯ್ಯದಂತೆ ತಡೆಯುವುದು ಸದ್ಯದ ಅಗತ್ಯ.