ಇತ್ತೀಚೆಗೆ ಮೈಸೂರಿನ ಯುವಕನೊಬ್ಬ ಮಾಡಿರುವ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಷಯ ಇಷ್ಟೆ. ಆತನೊಬ್ಬ ಸೈಕ್ಲಿಸ್ಟ್. ಅವನ ಕೈಲೊಂದು ನೀರು ಖಾಲಿ ಆಗಿರೋ ಮಿನರಲ್ ವಾಟರ್ ಬಾಟಲಿ ಇದೆ. ಸ್ವಚ್ಛತಾ ಪ್ರಜ್ಞೆ ಇರುವ ಆ ಯುವಕನಿಗೆ ಅದನ್ನು ಎಲ್ಲೆಂದರಲ್ಲಿ ಎಸೆಯಲು ಇಷ್ಟವಿಲ್ಲ. ಹೀಗಾಗಿ ಡಸ್ಟ್ ಬಿನ್ ಹುಡುಕುತ್ತಿದ್ದಾನೆ. ಆದರೆ ಅವನಿಗೆ ಮೈಸೂರಿನ ಯಾವ ಬೀದಿ, ಯಾವ ಏರಿಯಾ ಅಂತ ಸುತ್ತಿದರೂ ಒಂದೇ ಒಂದು ಕಸದ ಬುಟ್ಟಿಯೂ ಸಿಗುತ್ತಿಲ್ಲ. ವಿಡಿಯೋ ಮಾಡುತ್ತಲೇ ಆತ ಲಕ್ಶ್ಮೀಪುರ, ವಿಜಯನಗರ, ಚಾಮರಾಜ, ರಾಜಬೀದಿ ಬಳಿ ಹೀಗೆ ಎಲ್ಲೆಂದರಲ್ಲಿ ಕಸದ ಬುಟ್ಟಿಗಾಗಿ ಹುಡುಕಾಟ ನಡೆಸುತ್ತಾನೆ. ಮೈಸೂರಿನ ವ್ಯಾಪಾರಿಗಳೇನೋ ಸ್ವಂತದ ಕಸದ ಬುಟ್ಟಿ ಇಟ್ಟುಕೊಂಡಿದ್ದಾರೆ. ಆದರೆ ಸಾರ್ವಜನಿಕರು ಕಸ ಎಸೆಯಬೇಕು ಅಂದರೆ ಎಲ್ಲಿಯೂ ಒಂದೇ ಒಂದು ಕಸದ ಬುಟ್ಟಿಯೂ ಇಲ್ಲ. ಹಾಗಾದರೆ ಆ ಯುವಕ ಏನು ಮಾಡಬೇಕು? ಅಲ್ಲಲ್ಲಿ ಬೇಕಾಬಿಟ್ಟಿ ಗುಡ್ಡೆಯಾಗಿರುವ ಕಸದ ರಾಶಿ ಅವನಿಗೆ ಮೈಸೂರಿನಲ್ಲಿ ಕಾಣಸಿಕ್ಕಿದೆ. ಆದರೆ ಅಲ್ಲಿ ಎಸೆದು ಆತನಿಗೆ ಬೇಜವಾಬ್ದಾರಿ ಮೆರೆಯಲು ಮನಸಿಲ್ಲ. ಕೊನೆಗೂ ಆತ ಮೈಸೂರಿನ ತುಂಬ ಎಲ್ಲಿಯೂ ಡಸ್ಟ್ ಬಿನ್ ಸಿಗದೆಯೇ ಬಾಟಲನ್ನು ಮನೆಗೊಯ್ಯುತ್ತಾನೆ.

ಇದನ್ನೂ ಓದಿ: ಪಾಸಿಟಿವ್ ಪತ್ರಿಕೋದ್ಯಮದ ಸಾರ್ಥಕ ವರ್ಷ

ಅಂದಹಾಗೆ ಮೈಸೂರು ಕರ್ನಾಟಕದ ಅತ್ಯಂತ ಪ್ರಮುಖ ಪ್ರವಾಸಿ ತಾಣ. ಮೈಸೂರಿಗೆ ಸ್ವಚ್ಛ ನಗರ ಎಂಬ ಗೌರವವೂ ಸಿಕ್ಕಿದೆ. ಆದರೆ ಪ್ರವಾಸಿಗರು ಬಂದರೆ ಅವರ ಓಡಾಟದ ಸಮಯದಲ್ಲಿ ಕಸ ಸೃಷ್ಟಿಯಾದರೆ ಅದನ್ನು ಎಸೆಯಲು ಎಲ್ಲಿಯೂ ಕಸದ ಬುಟ್ಟಿಗಳೇ ಇಲ್ಲ. ಹೀಗಾದರೆ ಪ್ರವಾಸಿಗರು ಕಸ ಎಲ್ಲಿ ಎಸೆಯಬೇಕು? ತಮ್ಮ ಊರಿಗೆ ಕೊಂಡೊಯ್ಯಬೇಕಾ? ಅಥವಾ ತಾವು ಉಳಿದುಕೊಂಡಿರುವ ರೂಮಿಗೆ ಹೋಗುವ ತನಕ ಕಸ ಹೊತ್ತುಕೊಂಡೇ ಓಡಾಡಬೇಕಾ? ಮೈಸೂರಿನ ಸ್ಥಳೀಯರು ಈ ಪರಿಸ್ಥಿತಿ ಹೇಗೆ ಎದುರಿಸುತ್ತಾರೆ? ಕಸ ಎಸೆಯಲು ಕಸದ ಬುಟ್ಟಿಯ ವ್ಯವಸ್ಥೆಯೇ ಇಲ್ಲದ ನಗರ ಸ್ವಚ್ಛ ನಗರ ಎಂಬ ಹೆಸರು ಪಡೆದಿದ್ದು ಹೇಗೆ ಅಂತ ಪ್ರವಾಸಿಗರು ಇದೀಗ ವ್ಯಂಗ್ಯವಾಡುತ್ತಿದ್ದಾರೆ. ಹಸಿಕಸ ಒಣಕಸದ ಜ್ಞಾನ ಮತ್ತು ಜವಾಬ್ದಾರಿ ಇಲ್ಲದ ಜನ ಕಸವನ್ನು ಅಧ್ವಾನಗೊಳಿಸುತ್ತಾರೆಂದು ಕಸದ ಬುಟ್ಟಿ ಇಟ್ಟಿಲ್ಲವಂತೆ. ಇದು ಒಬ್ಬರ ಪ್ರತಿಕ್ರಿಯೆ. ಇನ್ನೊಬ್ಬರ ಪ್ರತಿಕ್ರಿಯೆ ಇನ್ನೂ ಮಜವಿದೆ. ಕಸದ ಬುಟ್ಟಿಯನ್ನೇ ಕದ್ದೊಯ್ಯುತ್ತಾರೆ ಅಂತ ಈಗ ಡಸ್ಟ್ ಬಿನ್ ಇಡುತ್ತಿಲ್ಲವಂತೆ. ಸ್ವಚ್ಛತೆ ಎಂಬುದು ಒಂದು ದಿನದ ಸ್ಪರ್ಧಾವಿಷಯವಲ್ಲ. ಪ್ರೈಜ್ ತಗೊಂಡು ಮರುದಿನ ರಿಲ್ಯಾಕ್ಸ್ ಆಗುವ ಮ್ಯಾಟರ್ ಅಲ್ಲ ಇದು. ಮೈಸೂರು ಇದಕ್ಕೊಂದು ಶಾಶ್ವತ ವ್ಯವಸ್ಥೆ ಮಾಡದಿದ್ದರೆ, ಸ್ವಚ್ಛ ಮೈಸೂರು ಗಾರ್ಬೇಜ್ ಸಿಟಿಯಾಗುವುದರಲ್ಲಿ ಸಂಶಯವಿಲ್ಲ.