ಜಪಾನಿನಲ್ಲಿ ಹೆಚ್ಚುತ್ತಲೇ ಇದೆ ಒಂಟಿಯಾಗಿ ಸಾವನ್ನಪ್ಪಿದವರ ಸಂಖ್ಯೆ
2024ರಲ್ಲಿ, ಜಪಾನಿನಲ್ಲಿ ಒಂಟಿಯಾಗಿ ಸಾವನ್ನಪ್ಪಿದವರ ಸಂಖ್ಯೆ 76 ಸಾವಿರಕ್ಕಿಂತ ಅಧಿಕವಾಗಿದ್ದು, ಅವರಲ್ಲಿ ಶೇ.76 ಮಂದಿ 65 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು. ಈ ಪೈಕಿ 85 ವರ್ಷ ಅಥವಾ ಹೆಚ್ಚು ವಯಸ್ಸಿನವರು ಹದಿನೈದು ಸಾವಿರಕ್ಕಿಂತ ಹೆಚ್ಚಾಗಿದ್ದಾರೆ. ಈ ಪಿಡುಗನ್ನು ತಡೆಯಲು, ಟೋಕಿಯೋದ ಟೋಕಿವದೈರಾ ಪ್ರದೇಶದಲ್ಲಿ ಹಾಟ್ ಲೈನ್‌ಗಳು, ಸ್ವಯಂಸೇವಕರ ಗಸ್ತು ಮತ್ತು ಸೆನ್ಸರ್ ಉಪಕರಣಗಳ ಮೂಲಕ ಹಿರಿಯರ ಮೇಲೆ ನಿಗಾ ಇಡಲಾಗುತ್ತಿದೆ. - ವಿಶ್ವೇಶ್ವರ ಭಟ್
ಕೆಲವು ದಿನಗಳ ಹಿಂದೆ, ಜಪಾನಿನ ಜನಪ್ರಿಯ 'ಜಪಾನ್ ಟೈಮ್ಸ್' ಪತ್ರಿಕೆ 'ಯಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಅದು ತೊಂಬತ್ತೆಂಟು ವರ್ಷದ ವೃದ್ಧನೊಬ್ಬನ ನಿಧನದ ಸುದ್ದಿ. ವಿಷಯ ಅದಲ್ಲ, ಆತ ಸತ್ತ ಹನ್ನೊಂದು ದಿನಗಳ ಬಳಿಕ, ಅದು ಸುತ್ತಲಿನವರಿಗೆ ಗೊತ್ತಾಗಿತ್ತು. ಹೌದು, ಜಪಾನಿನಲ್ಲಿ ಇತ್ತೀಚಿನ ದಿನಗಳಲ್ಲಿ ಒಂಟಿ ಮರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಜಪಾನಿಯರು 'ಕೊಡೋಕುಶಿ' ಎಂದು ಕರೆಯುತ್ತಾರೆ. ಇದು ಜಪಾನಿನಲ್ಲಿ ಕಂಡುಬರುತ್ತಿರುವ ಒಂದು ಸಾಮಾಜಿಕ ದುರಂತ.
ಇದು ವ್ಯಕ್ತಿಯೊಬ್ಬನು ಒಂಟಿಯಾಗಿ ಸಾವನ್ನಪ್ಪಿದ ನಂತರ, ಅವನ ಮೃತದೇಹವು ದಿನಗಳು, ವಾರಗಳು ಅಥವಾ ಕೆಲವೊಮ್ಮೆ ತಿಂಗಳುಗಳ ಕಾಲ ಅನಾವರಣವಾಗದೇ ಇರುವ ಪರಿಸ್ಥಿತಿಯನ್ನು ಸೂಚಿಸುತ್ತದೆ. ಹಾಗೆ ನೋಡಿದರೆ, ವೃದ್ಧರಲ್ಲಿ-ಒಂಟಿ ಮರಣದ ಮೊದಲ ಪ್ರಕರಣ ಸಂಭವಿಸಿದ್ದು 1970ರ ದಶಕದಲ್ಲಿ. ಅದಾಗಿ ಮೂವತ್ತು ವರ್ಷಗಳ ಬಳಿಕ, ಅಂದರೆ 2000ರಲ್ಲಿ, 69 ವರ್ಷದ ವೃದ್ಧನೊಬ್ಬನ ಮೃತದೇಹವು ಮೂರು ವರ್ಷಗಳ ನಂತರ ಪತ್ತೆಯಾದಾಗ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಆದರೆ ಕೊಡೋಕುಶಿ ಇತ್ತೀಚಿನ ದಿನಗಳಲ್ಲಿ ಸಹಜ ಎನ್ನಿಸುವಷ್ಟು ಆಗಾಗೆ ಸಂಭವಿಸುತ್ತಿರುವುದು ನಿಜಕ್ಕೂ ಗಾಬರಿ ಹುಟ್ಟಿಸುತ್ತಿದೆ.

2024ರಲ್ಲಿ, ಜಪಾನಿನಲ್ಲಿ ಒಂಟಿಯಾಗಿ ಸಾವನ್ನಪ್ಪಿದವರ ಸಂಖ್ಯೆ 76 ಸಾವಿರಕ್ಕಿಂತ ಅಧಿಕವಾಗಿದ್ದು, ಅವರಲ್ಲಿ ಶೇ.76 ಮಂದಿ 65 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು. ಈ ಪೈಕಿ 85 ವರ್ಷ ಅಥವಾ ಹೆಚ್ಚು ವಯಸ್ಸಿನವರು ಹದಿನೈದು ಸಾವಿರಕ್ಕಿಂತ ಹೆಚ್ಚಾಗಿದ್ದಾರೆ. ಈ ಪಿಡುಗನ್ನು ತಡೆಯಲು, ಟೋಕಿಯೋದ ಟೋಕಿವದೈರಾ ಪ್ರದೇಶದಲ್ಲಿ ಹಾಟ್ ಲೈನ್‌ಗಳು, ಸ್ವಯಂಸೇವಕರ ಗಸ್ತು ಮತ್ತು ಸೆನ್ಸರ್ ಉಪಕರಣಗಳ ಮೂಲಕ ಹಿರಿಯರ ಮೇಲೆ ನಿಗಾ ಇಡಲಾಗುತ್ತಿದೆ.
ಜಪಾನಿನಲ್ಲಿ ಹಿರಿಯರು ಬಹು ಪಾಲು ಒಂಟಿಯಾಗಿ ಬದುಕುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ವೃದ್ಧರ ಒಂಟಿ ಜೀವನ ಸಾಮಾನ್ಯವಾಗಿದೆ. ಸಾವು ಗೊತ್ತಾಗದಿರಲು ಇದೇ ಮುಖ್ಯ ಕಾರಣ. ಇದು ಕುಟುಂಬ ಬಂಧಗಳ ಸಂಪರ್ಕಹೀನತೆಯನ್ನು ಎತ್ತಿ ಹಿಡಿದಿದೆ. ಪಿಂಚಣಿ ಯೋಜನೆಗಳು ಮತ್ತು ಆರ್ಥಿಕ ಸಹಾಯದ ಕೊರತೆಯಿಂದಾಗಿ, ಹಲವರು ತಮ್ಮ ಜೀವನೋಪಾಯವನ್ನು ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ಹಿಂದಿನ ಕಾಲದಲ್ಲಿ, ಬಹುಪೀಳಿಗೆಯ ಕುಟುಂಬಗಳು ಸಾಮಾನ್ಯವಾಗಿದ್ದವು. ಆದರೆ ಈಗ, ಹೆಚ್ಚು ಮಂದಿ ತಮ್ಮ ಕುಟುಂಬಗಳಿಂದ ದೂರವಿರುವ ನಗರಗಳಲ್ಲಿ ವಾಸಿಸುತ್ತಿದ್ದಾರೆ. ಈ ಮಧ್ಯೆ ಜಪಾನಿನಲ್ಲಿ ವೃದ್ಧರ ಜನಸಂಖ್ಯೆ ಏರುತ್ತಿದೆ. 2050ರ ವೇಳೆಗೆ, ಒಂಟಿಯಾಗಿ ಬದುಕುತ್ತಿರುವ ಹಿರಿಯರ ಸಂಖ್ಯೆ ಶೇ.47 ರಷ್ಟು ಏರಲಿದೆ.

ಈ ಸವಾಲುಗಳನ್ನು ಎದುರಿಸಲು, ಸರಕಾರವು ಸಮುದಾಯ ಆಧಾರಿತ ಸೇವೆಗಳು, ಪಿಂಚಣಿ ಸುಧಾರಣೆಗಳು ಮತ್ತು ಆರೋಗ್ಯ ಸೇವೆಗಳ ಲಭ್ಯತೆ ಹೆಚ್ಚಿಸುವಂಥ ಕ್ರಮಗಳನ್ನು ಜಪಾನಿನ ಸಾಮಾಜಿಕ ಅಧ್ಯಯನಗಳಲ್ಲಿ ಹೇಳಿರುವಂತೆ, 'ಒಂಟಿತನದ ನೋವು ಮರಣಕ್ಕಿಂತಲೂ ಹೆಚ್ಚು ನೋವು ತರುವಂಥದ್ದುʼ ಇದು ಮನುಷ್ಯನ ಮೂಲಭೂತ ಮಾನವೀಯ -ಸಂಬಂಧದ ಅಗತ್ಯವನ್ನೇ ಅಣಕ ಮಾಡಿದಂತೆ. ಒಬ್ಬ ವ್ಯಕ್ತಿ ಸತ್ತರೂ ಗೊತ್ತಾಗದಿರುವುದು, ವಿಷಯ ತಿಳಿದರೂ ಅಂತ್ಯ ಸಂಸ್ಕಾರಕ್ಕೆ ಬರದಿರುವುದು ಬದಲಾಗುತ್ತಿರುವ ಸಮಾಜದ ಕ್ರೂರ ಮುಖಗಳಂತೆ ಭಾಸವಾಗುತ್ತಿದೆ.
ಒಂಟಿ ಮರಣಕ್ಕೆ ಇನ್ನೂ ಒಂದು ಕಾರಣವಿದೆ. ಜಪಾನಿನ ಸಮಾಜ ಜೀವನ ಮತ್ತು ಸಂಸ್ಕೃತಿಯಲ್ಲಿ ವ್ಯಕ್ತಿಗತ ಜೀವನ (individualism) ಮತ್ತು ಸ್ವಯಂ ನಿಯಂತ್ರಣ (self-restraint) ದೊಡ್ಡ ಪಾತ್ರ ವಹಿಸುತ್ತವೆ. ಜನರು ತಮ್ಮ ಸಮಸ್ಯೆಗಳನ್ನು ಬೇರೆಯವರ ಮುಂದೆ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಕೆಲವೊಮ್ಮೆ ಸಹಾಯ ಕೇಳುವುದು ಲಜ್ಜೆಯ ವಿಷಯವೆಂದು ಭಾವಿಸುತ್ತಾರೆ. ಪರಿಣಾಮ, ಒಬ್ಬ ವ್ಯಕ್ತಿ ತನ್ನ ಆರೋಗ್ಯ ಅಥವಾ ಸಾಮಾಜಿಕ ಸ್ಥಿತಿ ಕುಸಿದರೂ, ಯಾರಿಗೂ ತಿಳಿಸದೇ, ಸಹಾಯ ವಿಲ್ಲದೇ ಬದುಕುತ್ತಾರೆ ಮತ್ತು ಕೊನೆಗೆ ಮರಣ ಹೊಂದುತ್ತಾರೆ. ಒಂಟಿ ಯಾಗಿ ಸಾವನ್ನಪ್ಪಿದವರ ಮನೆಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ 'ಕೊಡೋಕುಶಿ ಕ್ಲೀನರ್ಸ್' ಎಂಬ ಉದ್ಯಮಗಳು ಜಪಾನಿನಲ್ಲಿ ಇತ್ತೀಚಿನ ದಿನಗಳಲ್ಲಿ ಹುಟ್ಟಿಕೊಂಡಿವೆ. ಈ ಉದ್ಯಮವನ್ನು 'ವಿಶೇಷ ಸ್ವಚ್ಛತಾ ಸೇವೆ' ಎಂದು ಕರೆಯುತ್ತಾರೆ. ಇವು ಮೃತದೇಹ ಪತ್ತೆಯಾಗದೇ ಇರುವ ದಿನಗಳಲ್ಲಿ ಉಂಟಾಗುವ ವಾಸನೆ, ಕೊಳೆತ ದೇಹದಿಂದ ಹಬ್ಬಿದ ಕ್ರಿಮಿ-ಕೀಟಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತವೆ.