ಪ್ರವಾಸಿ ತಾಣಗಳ ಪಾವಿತ್ರ್ಯವೂ ಮುಖ್ಯ
ಗೋವಾಗಿಂತ ಭಿನ್ನ ಎಂದು ಗುರುತಿಸಿಕೊಳ್ಳುವುದರಲ್ಲೇ ಕರ್ನಾಟಕ ಪ್ರವಾಸೋದ್ಯಮ ಹೆಚ್ಚುಗಾರಿಕೆ ತೋರಬೇಕು. ದಕ್ಷಿಣ ಕನ್ನಡದ ಕಡಲತೀರಗಳು ಮತ್ತು ದಾಂಡೇಲಿಯ ಸಾಹಸ ಕ್ರೀಡೆಗಳು ಪ್ರವಾಸಿಗರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿವೆ. ಅದನ್ನು ಇನ್ನಷ್ಟು ಆಕರ್ಷಕವಾಗಿಸುವ ನಿಟ್ಟಿನಲ್ಲಿ ಯೋಜನೆಗಳಾಗಬೇಕು.
ಪ್ರಸ್ತುತ ಪ್ರವಾಸೋದ್ಯಮ ಸಚಿವರಾಗಿರುವ ಹಿರಿಯ ರಾಜಕಾರಣಿ ಹೆಚ್ ಕೆ ಪಾಟೀಲ್ ರವರು ಹಲವಾರು ಖಾತೆಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡವರು. ಬಹಳ ನೇರ ಮತ್ತು ಪ್ರಾಮಾಣಿಕ ಮಾತುಗಳು ಅವರದ್ದು.ಪ್ರವಾಸಿಪ್ರಪಂಚ ಪತ್ರಿಕೆಯ ಉದ್ಘಾಟನೆಯ ಸಮಯದಲ್ಲಿ ಅವರು ಮುಚ್ಚುಮರೆಯಿಲ್ಲದೆ ಹೇಳಿಕೊಂಡರು; ನಾನು ಪ್ರವಾಸೋದ್ಯಮ ಸಚಿವನಾಗಿದ್ದರೂ ಪ್ರವಾಸ ಮಾಡಿದ್ದು ಕಡಿಮೆ ಅಂತ. ಪ್ರವಾಸೋದ್ಯಮ ಖಾತೆ ಹೊಂದಿದಾಕ್ಷಣ ಪ್ರವಾಸ ಮಾಡಲೇಬೇಕೆಂಬ ನಿಯಮ ಖಂಡಿತ ಇಲ್ಲ. ಆಸಕ್ತಿ,ತಿಳಿವಳಿಕೆ ಮತ್ತು ಕಾಳಜಿ ಹೆಚ್ಚು ಮುಖ್ಯವಾಗುತ್ತದೆ. ಈ ವಿಷಯದಲ್ಲಿ ಹೆಚ್ ಕೆ ಪಾಟೀಲ್ ರವರನ್ನು ಅನುಮಾನಿಸುವಂತೆಯೇ ಇಲ್ಲ.
ಕಾರ್ಯಕ್ರಮದಲ್ಲಿ ಅವರು ಹೇಳಿದ ಒಂದು ಮಾತು ಇಲ್ಲಿ ಗಮನಾರ್ಹ. ದೇಶದಲ್ಲೇ ಅತಿ ಉದ್ದದ ಕರಾವಳಿ ಸಾಲು ಹೊಂದಿದ ರಾಜ್ಯ ನಮ್ಮದು. ಆದರೂ ನಮ್ಮಲ್ಲಿ ಬೀಚ್ ಟೂರಿಸಂ ಯಾಕೆ ಗೋವಾದಂತೆ ಪ್ರಖ್ಯಾತವಾಗಿಲ್ಲ? ರಾಜ್ಯಸರ್ಕಾರ ಯಾಕೆ ಗೋವಾ ಮಾದರಿಯಲ್ಲಿ ಬೀಚ್ ಟೂರಿಸಮ್ಮನ್ನು ಪ್ರೊಮೋಟ್ ಮಾಡಬಾರದು? ಈ ಪ್ರಶ್ನೆಗಳಿಗೆ ಬಹಳ ದಿಟ್ಟವಾದ ಉತ್ತರವಿತ್ತು. ಕ್ಯಾಸಿನೋಗಳಿಂದ ಹಣ ಮಾಡಿ ಆದಾಯ ತರುವ ಪ್ರವಾಸೋದ್ಯಮ ನಮಗೆ ಬೇಕಿಲ್ಲ ಎಂದು. ಬಹಳ ನಿಷ್ಠುರವಾದ ಅಭಿಪ್ರಾಯವಿದು.

ಕರ್ನಾಟಕದ ಬಹುತೇಕ ಬೀಚುಗಳು ಸಾಂಸ್ಕೃತಿಕ ಮತ್ತು ಧಾರ್ಮಿಕ ಬೆಸುಗೆ ಹೊಂದಿರುವುವು. ಗೋಕರ್ಣಾ, ಮುರ್ಡೇಶ್ವರ, ಉಡುಪಿ ಸುತ್ತಲಿನ ಮಲ್ಪೆ, ಮಟ್ಟು, ಮಂಗಳೂರು, ಹೊನ್ನಾವರ ಬೈಂದೂರು, ಮರವಂತೆ ಇವೆಲ್ಲವೂ ಅಂದವನ್ನೂ ಉಳಿಸಿಕೊಂಡು ಸಾಂಸ್ಕೃತಿಕವಾಗಿಯೂ ಜೀವಂತಿಕೆ ಇಟ್ಟುಕೊಂಡಿವೆ. ಇಲ್ಲಿ ಕ್ಯಾಸಿನೋ, ಜೂಜು, ಪಬ್, ಕ್ಯಾಬರೆ ಇತ್ಯಾದಿಗಳು ಬಂದಲ್ಲಿ ಸರಕಾರಕ್ಕೆ ಆದಾಯವೇನೋ ಬರಬಹುದು ಆದರೆ, ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ದುಷ್ಪರಿಣಾಮ ಬೀರುವುದು ಖಚಿತ. ಕ್ರೈಮ್ ರೇಟ್ ಕೂಡ ಹೆಚ್ಚಳವಾಗಬಹುದು. ಆದಾಯವೊಂದೇ ಆದ್ಯತೆ ಆಗಕೂಡದು, ಸಾಂಸ್ಕೃತಿಕ ಐತಿಹ್ಯ, ನೈಸರ್ಗಿಕ ಸೌಂದರ್ಯ ಉಳಿಸಿಕೊಂಡು ಸಾಹಸಮಯ ಆಕರ್ಷಣೆಗಳ ಮೂಲಕ ಬೀಚುಗಳನ್ನು ಜನಪ್ರಿಯವಾಗಿಸಿ ಆದಾಯ ತರಬಹುದು.
ಗೋವಾಗಿಂತ ಭಿನ್ನ ಎಂದು ಗುರುತಿಸಿಕೊಳ್ಳುವುದರಲ್ಲೇ ಕರ್ನಾಟಕ ಪ್ರವಾಸೋದ್ಯಮ ಹೆಚ್ಚುಗಾರಿಕೆ ತೋರಬೇಕು. ದಕ್ಷಿಣ ಕನ್ನಡದ ಕಡಲತೀರಗಳು ಮತ್ತು ದಾಂಡೇಲಿಯ ಸಾಹಸ ಕ್ರೀಡೆಗಳು ಪ್ರವಾಸಿಗರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿವೆ. ಅದನ್ನು ಇನ್ನಷ್ಟು ಆಕರ್ಷಕವಾಗಿಸುವ ನಿಟ್ಟಿನಲ್ಲಿ ಯೋಜನೆಗಳಾಗಬೇಕು. 320 ಕಿಮೀ ಉದ್ದದ ಕರಾವಳಿಯಲ್ಲಿ ಸಮುದ್ರ ಕ್ರೀಡೆಗಳು, ಹಿನ್ನೀರು ಪ್ರವಾಸ ಮತ್ತು ಸಂಸ್ಕೃತಿ ಆಧಾರಿತ ಆಕರ್ಷಣೆಗಳನ್ನು ಅಭಿವೃದ್ಧಿಪಡಿಸುವುದು ಗೋವಾ ಮಾದರಿಗಳಿಗಿಂತ ಭಿನ್ನ ಎನಿಸಿಕೊಳ್ಳುವ ಜತೆಗೆ ಪ್ರಾದೇಶಿಕ ಸೊಗಡಿನ ಅಸ್ತಿತ್ವವೂ ಗಟ್ಟಿಯಾಗುತ್ತದೆ. ಸ್ಥಳೀಯರ ಬದುಕೂ ಹಸನಾಗುತ್ತದೆ. ಪಾಟೀಲ್ ರ ಸಮಾಜಮುಖಿ ಆಲೋಚನೆ ಮತ್ತು ದೂರದೃಷ್ಟಿತ್ವ ಸ್ತುತ್ಯಾರ್ಹ..