ಪ್ರೀತಿ ಕಾಳಜಿ ಹೇಗೆ ತೋರಿಸಬೇಕು ಅನ್ನೋದೂ ಒಂದು ವಿದ್ಯೆ. ರಕ್ಷಣೆ ಮಾಡೋದು ಹೇಗೆ ಎಂಬುದೂ ಒಂದು ಕಲೆ ಅಥವಾ ಸೈನ್ಸು. ಅದನ್ನು ಕಲಿಯದೇ ಹೋದರೆ ಎಲ್ಲವೂ ಅನರ್ಥ. ಒಂದು ಜೋಕ್ ಇದೆ. ’ಅಪ್ಪಾ ಅಪ್ಪಾ ಇವತ್ತು ಸ್ಕೂಲಲ್ಲಿ ರನ್ನಿಂಗ್ ರೇಸ್ ಇದೆ’ ಅಂತ ಮಗು ಹೇಳಿದ್ರೆ, ’ಮೆಲ್ಲಗೆ ಓಡು ಮಗೂ, ಜೋರಾಗಿ ಓಡಿದ್ರೆ ಬಿದ್ದುಬಿಡ್ತೀಯಾ’ ಅಂದಿದ್ನಂತೆ ಅಪ್ಪ! ಇದೊಂಥರದ ಅತಿರೇಕ ಆದರೆ ಇನ್ನೊಂದು ಎಕ್ಸ್ ಟ್ರೀಮ್ ಇದೆ. ಅದು ಶೀತ ಆದ್ರೆ ಮೂಗೇ ಕೊಯ್ದುಬಿಡೋ ಲೆವೆಲ್ಲಿಂದು. ಇವತ್ತು ಈ ಎರಡು ಅತಿರೇಕಗಳ ಉಲ್ಲೇಖಕ್ಕೆ ಕಾರಣ ಸರಕಾರದ ಅಥವಾ ಪ್ರವಾಸೋದ್ಯಮ ವಿಭಾಗದ ಅವಿವೇಕದ ನಿರ್ಧಾರ. ಕೆಲವೇ ತಿಂಗಳುಗಳ ಹಿಂದೆ ತೀವ್ರ ಮಳೆಗಾಲದ ಸಂದರ್ಭದಲ್ಲಿ ಉತ್ತರಕನ್ನಡದ ಜಲಪಾತಗಳ ವೀಕ್ಷಣೆಗೆ ತೆರಳದಂತೆ ನಿರ್ಬಂಧ ಹೇರಲಾಗಿತ್ತು.

ಕಾರಣ ಏನೆಂದರೆ, ಸೆಲ್ಫೀ ತೆಗೆದುಕೊಳ್ಳುವ ನೆಪದಲ್ಲಿ ಯಾರೋ ಜಲಪಾತದಲ್ಲಿ ಬಿದ್ದು ಸತ್ತಿದ್ದರಂತೆ. ಈಗ ಅಂಥದ್ದೇ ಇನ್ನೊಂದು ಆದೇಶ ಸದ್ದು ಮಾಡುತ್ತಿದೆ. ಎಚ್ ಡಿ ಕೋಟೆ ಮತ್ತು ಸರ್ಗೂರು ಪ್ರದೇಶದಲ್ಲಿ ಸರಣಿ ಹುಲಿ ದಾಳಿ ನಡೆಯಿತೆಂಬ ಕಾರಣಕ್ಕೆ ಬಂಡಿಪುರ ಮತ್ತು ನಾಗರಹೊಳೆ ಸಫಾರಿಯನ್ನು ನಿಲ್ಲಿಸಿದ್ದಾರೆ. ಮಳೆಗಾಲದಲ್ಲಿ ಮಳೆ, ಜಲಪಾತ ಮತ್ತು ನೀರಿರುವ ಜಾಗಕ್ಕೆ ಹೋಗುವಂತಿಲ್ಲ. ಚಳಿಗಾಲದಲ್ಲಿ ಪ್ರಾಣಿಗಳು ಸೈಟ್ ಆಗುವ ಸೀಸನ್ ಇದ್ದಾಗ ಸಫಾರಿಗೆ ಹೋಗುವಂತಿಲ್ಲ. ಇನ್ನು ಪ್ರವಾಸೋದ್ಯಮಕ್ಕೆ ಉದ್ಧಾರ ಆಗು ಅಂದ್ರೆ ಹೇಗೆ ತಾನೇ ಉದ್ಧಾರ ಆದೀತು?

ಓಕೆ ಹುಲಿ ದಾಳಿಯಿಂದ ಸಾವುಗಳಾದವು, ಆನಂತರ ಶಂಕಿತ ಹುಲಿಗಳನ್ನು ಹಿಡಿದೂ ಆಯ್ತು. ಆದರೆ ಆ ಕಾರಣ ಇಟ್ಕೊಂಡು ಸಫಾರಿ ಬ್ಯಾನ್ ಮಾಡಿದ್ದೇಕೆ? ಲಾಜಿಕ್ಕೇ ಇಲ್ವಲ್ಲ ಸ್ವಾಮಿ? ಪ್ರತಿ ಪ್ರಾಣವೂ ಮುಖ್ಯವೇ. ಸೆಲ್ಫೀ ತಗೊಳೋಕೆ ಹೋಗಿ ನೀರಲ್ಲಿ ಬಿದ್ದು ಸತ್ತ ಘಟನೆಯಾದಾಗ, ಸುರಕ್ಷತಾ ಕ್ರಮ ಕೈಗೊಳ್ಳಬೇಕಿತ್ತೇ ಹೊರತು ಬ್ಯಾನ್ ಸೀಸನ್ನನ್ನೇ ಹಾಳುಮಾಡಿಕೊಳ್ಳೋದಲ್ಲ. ಅದೇ ರೀತಿ ಹುಲಿದಾಳಿಗಳಾದಾಗಲೂ ಸುರಕ್ಷತಾ ಕ್ರಮಕ್ಕೆ ಮುಂದಾಗಬೇಕೇ ಹೊರತು ಬ್ಯಾನ್ ಪರಿಹಾರವಲ್ಲ. ’ಆತ್ಮಹತ್ಯೆ ಮಾಡ್ಕೊಳೋಕೇನಾದ್ರೂ ಪ್ರಯತ್ನ ಪಟ್ರೆ ಸಾಯಿಸಿಬಿಡ್ತೀನಿ ನೋಡು’ ಎಂಬಂತಿದೆ ಸರಕಾರದ ಕ್ರಮಗಳು! ಸಫಾರಿ ನಿಲ್ಲಿಸಿದ್ದರಿಂದಾಗಿ ಡ್ರೈವರ್ ಗಳ, ಗೈಡ್ ಗಳ, ಸಫಾರಿ ಮಾರ್ಗದಲ್ಲಿದ್ದ ವ್ಯಾಪಾರಿಗಳ, ಟೂರ್ ಆಪರೇಟರ್ ಗಳ ದುಡಿಮೆಗೆ ಪೆಟ್ಟು ಬಿದ್ದಿರೋದು, ಇವೆಲ್ಲದರ ಮೂಲಕ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿರೋದು ಸಣ್ಣ ವಿಷಯವೇನಲ್ಲ. ಜೀವನೋಪಾಯಕ್ಕೆ ಇದನ್ನೇ ನೆಚ್ಚಿಕೊಂಡಿರುವವರ ದುಡಿಮೆ ನಿಂತುಹೋದರೆ ಉಪವಾಸ ಸಾಯುವ ಪರಿಸ್ಥಿತಿ ಬರುವುದಿಲ್ಲವೇ? ಇದಕ್ಕಿಂತ ಹುಲಿಬಾಯಿಗೆ ಸಿಗುವುದು ಲೇಸು ಅನಿಸುವುದಿಲ್ಲವೇ? ನಿಜ ಹೇಳಬೇಕಂದ್ರೆ ಈ ಬ್ಯಾನ್ ಪದವನ್ನು ಮೊದಲ ಬ್ಯಾನ್ ಮಾಡಬೇಕಪ್ಪ! ಏನಂತೀರಿ?