ಪರರಾಜ್ಯದ ಪ್ರವಾಸಿಯೊಬ್ಬ ಟ್ಯಾಕ್ಸಿ ಚಾಲಕರ ಜತೆಗಿನ ತನ್ನ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ. ಆತನಿಗೆ ಆಟೋ/ಕ್ಯಾಬ್ ಯಾವುದರಲ್ಲೇ ಪ್ರಯಾಣ ಮಾಡಿದರೂ, ಗಾಡಿಯಿಂದ ಇಳಿಯುವಾಗ ಮೀಟರ್ ಗಿಂತ ಅಥವಾ ಆಪ್ ತೋರಿಸಿದ್ದಕ್ಕಿಂತ ಇಪ್ಪತ್ತೋ ಮೂವತ್ತೋ ರುಪಾಯಿ ಹೆಚ್ಚು ಕೊಟ್ಟು ಅಭ್ಯಾಸ. ಚಾಲಕರಿಗೆ ಟಿಪ್ಸ್ ಅಥವಾ ಕೃತಜ್ಞತೆ ರೂಪದಲ್ಲಿ ಕೊಟ್ಟು ಅವರ ಮುಖದಲ್ಲಿ ಮಂದಹಾಸ ನೋಡಿ ಮುಂದೆ ಸಾಗುವುದನ್ನು ರೂಢಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮೈಸೂರು ಟಾಂಗಾ ಸ್ವಾಗತಿಸುವ ಹೊತ್ತು

ಹೀಗೊಮ್ಮೆ ಮಧ್ಯರಾತ್ರಿ ಹೊತ್ತಿಗೆ ಕ್ಯಾಬ್ ಹತ್ತಿದ್ದಾರೆ. ಆಪ್ ನಲ್ಲಿ ಬುಕ್ ಆಗದ ಕಾರಣ ನೇರ ಸಿಕ್ಕ ಕ್ಯಾಬ್ ನಲ್ಲಿ ಹೊರಟಿದ್ದಾರೆ. ತಲುಪಬೇಕಾದ ಜಾಗ ಬಹಳ ಹತ್ತಿರವೇ ಇದ್ದರೂ ಲಗೇಜ್ ಇದ್ದುದರಿಂದ ಕ್ಯಾಬ್ ಪಡೆಯಬೇಕಾಗಿದೆ. ಕ್ಯಾಬ್ ಹತ್ತುವ ವರೆಗೆ ಸುಮ್ಮನಿದ್ದ ಚಾಲಕ, ಸ್ವಲ್ಪವೇ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ, ಒಂದು ಕಿಲೋಮೀಟರ್ ಕೂಡ ದೂರವಿಲ್ಲದ ಜಾಗಕ್ಕೆ ಮುನ್ನೂರು ರುಪಾಯಿ ಕೇಳಿದ್ದಾನೆ. ಇಲ್ಲವಾದರೆ ಇಲ್ಲೇ ಇಳಿಯಿರಿ ಅಂದಿದ್ದಾನೆ. ಪರರಾಜ್ಯದ ಪ್ರವಾಸಿಗೆ ಇದು ಶಾಕ್. ಇಂಥ ತಂತ್ರ ಅವನಿಗೆ ಹೊಸತೇನೂ ಅಲ್ಲ. ಆದರೂ ತನ್ನಂಥ ಒಳ್ಳೆಯ ಮನಸಿನ ಪ್ರವಾಸಿಯನ್ನು ಹೀಗೆ ನಡೆಸಿಕೊಳ್ಳುತ್ತಿರುವುದು ಸರಿಯಲ್ಲ ಅನಿಸಿದೆ. ಚಾಲಕನಿಗೆ ಈತನ ಒಳ್ಳೆಯ ಮನಸು ಮತ್ತು ಟಿಪ್ಸ್ ಕೊಡುವ ಅಭ್ಯಾಸದ ಬಗ್ಗೆ ಗೊತ್ತಿದ್ದರೆ ತಾನೆ. ಪ್ರವಾಸಿ ನೇರವಾಗಿ ಹೇಳಿದ್ದಾನೆ. ಮೀಟರ್ ಹಾಕು, ಎಷ್ಟಾಗುತ್ತೋ ಅಷ್ಟು ಖಂಡಿತ ಕೊಡುತ್ತೇನೆ ಎಂದು. ಅಲ್ಲಿ ಒಂದು ಸಣ್ಣ ಸೀನ್ ಕ್ರಿಯೇಟ್ ಆಗಿದೆ. ಜನ ಸೇರುವಂತಾಗಿದೆ. ಜನರು ನ್ಯಾಯದ ಪರ ನಿಂತು ಪ್ರವಾಸಿಯನ್ನು ಬೆಂಬಲಸಿದ್ದಾರೆ. ಚಾಲಕನನ್ನು ಗದರಿದ್ದಾರೆ. ಅನ್ಯಮಾರ್ಗವಿಲ್ಲದೇ ಚಾಲಕ ಪ್ರವಾಸಿಯನ್ನು ಗಮ್ಯಕ್ಕೆ ತಲುಪಿಸಿದ್ದಾನೆ.

Untitled design (20)

ಮೀಟರ್ ತೋರಿಸಿದ್ದು ಎಂಬತ್ತು ರುಪಾಯಿ. ಅದರ ಡಬಲ್ ಅಂದರೆ ನೂರಾ ಅರವತ್ತು. ಚಾಲಕ ಡಿಮ್ಯಾಂಡ್ ಮಾಡಿದ್ದು ಮುನ್ನೂರು! ಕಥೆಯ ಟ್ವಿಸ್ಟ್ ಇರೋದು ಇಲ್ಲಿ. ಪ್ರವಾಸಿ ಗಾಡಿಯಿಂದಿಳಿದು ಐನೂರರ ನೋಟು ಕೊಟ್ಟಿದ್ದಾನೆ. ಚಾಲಕ ಮುನ್ನೂರಾ ನಲವತ್ತು ರುಪಾಯಿ ವಾಪಸ್ ಕೊಟ್ಟಿದ್ದಾನೆ. ಆದರೆ ಪ್ರವಾಸಿ ಆ ಹಣ ಮರಳಿ ಚಾಲಕನಿಗೇ ಕೊಟ್ಟು ನಮಸ್ಕರಿಸಿ ಥ್ಯಾಂಕ್ಸ್ ಹೇಳಿದ್ದಾನೆ. ಮುನ್ನೂರು ಡಿಮ್ಯಾಂಡ್ ಮಾಡಿದವನಿಗೆ ಐನೂರು ಸಿಕ್ಕಂತಾಗಿದೆ. ಆತನ ಜೀವಮಾನದಲ್ಲೇ ಈ ರೀತಿಯ ಘಟನೆ ಹಿಂದೆಂದೂ ನಡೆದಿರಲಿಲ್ಲ. ಇದೊಂದು ರೀತಿಯ ಕಲಿಯುಗ ಪುಣ್ಯಕೋಟಿ ಕಥೆ ಅನ್ನಬಹುದಾ?

ಪ್ರವಾಸಿಗರು ಬಹುತೇಕ ಉದಾರಿಗಳಾಗಿರುತ್ತಾರೆ. ಅದರಲ್ಲೂ ಪರಊರಿನಲ್ಲಿ, ಅಪರಿಚಿತರೊಂದಿಗೆ ಅವರು ಬಯಸುವುದು ಒಳ್ಳೆಯ ಆತಿಥ್ಯ, ಮಾತು. ಟ್ಯಾಕ್ಸಿ ಚಾಲಕರು, ಗೈಡ್ ಗಳು, ಹೊಟೇಲ್ ನವರು, ರೆಸಾರ್ಟ್ ನ ಸಿಬ್ಬಂದ್ ಇವರು ಅತ್ಯುತ್ತಮ ಸೇವೆ ನೀಡಿದರೆ ಸಾಕು, ಪ್ರವಾಸಿಗರು ತಾವಾಗಿಯೇ ಹೆಚ್ಚು ಹಣ ನೀಡುತ್ತಾರೆ. ಇದರ ಬದಲು ಸುಲಿಗೆ, ದೌರ್ಜನ್ಯ, ಬೆದರಿಕೆ ಅಥವಾ ಗೋಗರೆತ ನಡೆಸಿದರೆ, ಹಣವೂ ಸಿಗುವುದಿಲ್ಲ, ನೆಗೆಟಿವ್ ರಿವ್ಯೂಗಳು ಬೀಳುತ್ತವೆ. ಅದರೊಂದಿಗೆ ದೇಶದ/ರಾಜ್ಯದ ಮಾನವೂ ಹರಾಜಾಗುತ್ತದೆ. ಎಷ್ಟೋ ಬಾರಿ ಪ್ರಯಾಣಿಕರು, ನಾವು ಟಿಪ್ಸ್ ನೇರವಾಗಿಯೇ ಕೊಡೋಣ, ಟ್ರಾವೆಲ್ ಆಪ್ ಗಳ ಮೂಲಕ ನೀಡೋದು ಬೇಡ ಎಂದು ಯೋಚಿಸುತ್ತಾರೆ. ಆದರೆ ಸೇವಾಸಿಬ್ಬಂದಿ ತಮ್ಮ ಆತುರದಿಂದ ಎಲ್ಲವನ್ನೂ ಹಾಳುಗೆಡವುತ್ತಾರೆ.