ಪ್ರಯಾಣದ ವೇಳೆ ನಿಮ್ಮ ಲಗೇಜ್ ಕಳೆದುಹೋದರೆ ಇಡೀ ಪ್ರವಾಸವೇ ಹಾಳಾದಂತಾಗುತ್ತದೆ. ಈ ಬಗ್ಗೆ ಯೋಚನೆ ಮಾಡುವಾಗಲೂ ಭಯ ಎನಿಸುತ್ತದೆ. ಸಂತೋಷದ ಪ್ರವಾಸದಲ್ಲಿ ಬ್ಯಾಗ್ ಕಳ್ಳತನವಾದರೆ ಇಡೀ ಪ್ರವಾಸದ ಮಜವೇ ಹೋಗಿ ಬಿಡುತ್ತದೆ. ಒಂದು ಚೂರು ಯಾಮಾರಿದರೂ ಕೂಡ ನಿಮ್ಮ ಅಮೂಲ್ಯ ವಸ್ತುಗಳು, ಬಟ್ಟೆಗಳು, ಕಳ್ಳರ ಪಾಲಾಗಬಹುದು. ಕಳ್ಳಕಾಕರಿಂದ ನಿಮ್ಮ ವಸ್ತುಗಳನ್ನು ಜಾಗರೂಕವಾಗಿಡಲು ಕೆಲವು ಸುಲಭ ಉಪಾಯಗಳನ್ನು ಇಲ್ಲಿವೆ.

ಹೊಳೆಯುವ ಬಣ್ಣದ ಬ್ಯಾಗ್ ಗಳನ್ನು ಆದಷ್ಟು ಕಡಿಮೆ ಮಾಡಿ:

ಹೊಳೆಯುವ ಬಣ್ಣದ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗುವುದರಿಂದ ನಿಮ್ಮ ಬ್ಯಾಗ್ ಕಳ್ಳರ ಕೈಗೆ ಸಿಗದೇ ಇರಬಹುದು ಅಂತ ನೀವು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಇಂಥ ಬ್ಯಾಗ್ ಗಳು ಬಹುಬೇಗನೇ ಕಳ್ಳರ ಗಮನ ಬೇಗ ಸೆಳೆಯಬಹುದು. ಹಾಗಾಗಿ ಗಮನ ಸೆಳೆಯುವಂಥ ಬಣ್ಣಗಳು ಮತ್ತು ವಿನ್ಯಾಸಗಳನ್ನು ಆದಷ್ಟು ತಪ್ಪಿಸಿ. ಬದಲಾಗಿ, ಸರಳ ಮಾದರಿಯ ಬ್ಯಾಗ್ ಆಯ್ಕೆಮಾಡಿ ಮತ್ತು ಅದಕ್ಕೆ ನಿಮ್ಮ ಹೆಸರು ಟ್ಯಾಗ್ ಅಥವಾ ರಿಬನ್ ಜೋಡಿಸಿ ಆಗ ಎಲ್ಲೆ ಇದ್ರೂ ನಿಮ್ಮ ಬ್ಯಾಗ್ ನಿಮಗೆ ಬೇಗನೆ ಕಣ್ಣಿಗೆ ಬೀಳುತ್ತದೆ.

smart lock

ಸ್ಮಾರ್ಟ್ ಲಾಕ್‌ಗಳನ್ನು ಬಳಸಿ:

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಉಪಯೋಗಿಸಲು TSA ಅಂಗೀಕೃತ ಲಾಕ್‌ಗಳು ಉತ್ತಮವಾದವು. ಇವು ಮಾಸ್ಟರ್ ಕೀಯೊಂದಿಗೆ ಬರುತ್ತವೆ. ಇದರಿಂದ ವಿಮಾನ ನಿಲ್ದಾಣದ ಅಧಿಕಾರಿಗಳು ಲಾಕ್ ತೊಡಕಿಲ್ಲದೇ ನಿಮ್ಮ ಬ್ಯಾಗ್‌ ಅನ್ನು ಪರಿಶೀಲಿಸಬಹುದು. ಸ್ಥಳೀಯ ಪ್ರಯಾಣದ ವೇಳೆ, ಉತ್ತಮ ಗುಣಮಟ್ಟದ non-TSA ಲಾಕ್ ಗಳನ್ನು ಬಳಸಿ. ಇದು ಸಾಕಷ್ಟು ಸುರಕ್ಷಿತವಾಗಿದೆ. ನೀವು ರೈಲು ಅಥವಾ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರೆ, ನಿಮ್ಮ ಲಗೇಜ್‌ ಅನ್ನು ಚೈನ್ ನಿಂದ ಕಟ್ಟುವುದು ಕೂಡ ಒಂದು ಉತ್ತಮ ಆಯ್ಕೆ. ಇದರಿಂದ ಕಳ್ಳತನದ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

ಜಿಪಿಎಸ್ ಟ್ರ್ಯಾಕರ್ ಬಳಸಿ:

GPS ಟ್ರ್ಯಾಕರ್‌ಗಳನ್ನು ಸಹ ಬ್ಯಾಕ್‌ಪ್ಯಾಕರ್‌ಗಳು ಮತ್ತು ಪ್ರಯಾಣಿಕರು ತಮ್ಮ ಸೊತ್ತುಗಳನ್ನು ಕಳ್ಳತನದಿಂದ ರಕ್ಷಿಸಲು ಉಪಯೋಗಿಸುತ್ತಾರೆ. ಇವು ನಿಮ್ಮ ಲಗೇಜ್‌ ಅನ್ನು ಪತ್ತೆಹಚ್ಚಿ, ಲಗೇಜ್ ಇರುವ ನಿಮ್ಮ ಸ್ಥಳದ ಬಗ್ಗೆ ಅದೇ ಸಮಯದಲ್ಲಿ ನಿಮ್ಮ ಫೋನ್‌ಗೆ ಸಂದೇಶ ರವಾನಿಸುತ್ತದೆ. ಇದರಿಂದ ನೀವು ನಿಮ್ಮ ಬ್ಯಾಗ್‌ಗಳನ್ನು ಯಾವುದೇ ಸಂದರ್ಭದಲ್ಲಿ ಕಳೆದುಕೊಳ್ಳುವಂತಿರೋದಿಲ್ಲ. GPS ಟ್ರ್ಯಾಕರ್‌ಗಳು ಚಿಕ್ಕ ಟ್ಯಾಗ್‌ಗಳ ರೂಪದಲ್ಲಿ ಲಭ್ಯವಿರುತ್ತವೆ. ನೀವು ಅದನ್ನು ನಿಮ್ಮ ಲಗೇಜ್‌ನೊಳಗೆ ಇಡಬಹುದು ಅಥವಾ ಬ್ಯಾಕ್‌ಪ್ಯಾಕ್‌ಗೆ ಅಲಂಕಾರವಾಗಿ ಕಟ್ಟಿ ಹಾಕಬಹುದು.

bags

ಹಗುರವಾಗಿ ಪ್ಯಾಕ್ ಮಾಡಿ:

ಹೆಚ್ಚಿನ ಲಗೇಜ್‌ ಹೊಂದಿರುವುದರಿಂದ ನೀವು ನಿಮ್ಮ ಸುತ್ತಲಿನ ಪರಿಸ್ಥಿತಿಯನ್ನು ಗಮನಿಸಲು ಕಷ್ಟವಾಗಬಹುದು ಮತ್ತು ಕಳ್ಳತನಕ್ಕೆ ತುತ್ತಾಗುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಅಗತ್ಯವಿಲ್ಲದ ವಸ್ತುಗಳನ್ನು ಪ್ಯಾಕ್ ಮಾಡುವುದನ್ನು ತಪ್ಪಿಸಿ. ನಿಮ್ಮ ಬಟ್ಟೆಗಳನ್ನು ಪ್ಯಾಕಿಂಗ್ ಕ್ಯೂಬ್‌ಗಳ ಮೂಲಕ ವ್ಯವಸ್ಥಿತವಾಗಿ ಪ್ಯಾಕ್ ಮಾಡಿ. ಇದರಿಂದ ಕನಿಷ್ಠ ಜಾಗವನ್ನು ತೆಗೆದುಕೊಳ್ಳುತ್ತವೆ. ಪಾಸ್ ಪೋರ್ಟ್, ಗುರುತಿನ ದಾಖಲೆಗಳು, ವ್ಯಾಲೆಟ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳಂಥ ಮೌಲ್ಯವಸ್ತುಗಳನ್ನು ಒಂದು ಚಿಕ್ಕ ಬ್ಯಾಗ್‌ನೊಳಗೆ ಇಡಿ. ಅದನ್ನು ನೀವು ಎಲ್ಲೆಡೆ ಕೊಂಡು ಹೋಗಬಹುದು.

ನಿಮ್ಮ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಿ:

ನೀವು ನಿಮ್ಮ ಪ್ರಯಾಣ ಆರಂಭಿಸುವ ಮೊದಲು, ನೀವು ಪ್ರವಾಸ ಮಾಡಲು ಇಚ್ಛಿಸುವ ಸ್ಥಳದ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳಿ. ಉದಾಹರಣೆಗೆ, ಆ ನಗರದಲ್ಲಿ ಸಂಚರಿಸಲು ಅನುಕೂಲವಾದ ಮಾರ್ಗಗಳು, ಕಳ್ಳತನ ಸಂಭವಿಸಿದರೆ ಏನು ಮಾಡಬೇಕು ಎಂಬ ವಿವರಗಳನ್ನು ತಿಳಿದುಕೊಳ್ಳಿ. ಈ ರೀತಿಯ ಮಾಹಿತಿ ತಿಳಿದುಕೊಳ್ಳುವುದರಿಂದ ಕಳ್ಳರು ನಿಮ್ಮನ್ನು ಅಜ್ಞಾನಿ ಪ್ರವಾಸಿ ಎನ್ನುವ ಹಾಗೆ ಗುರುತಿಸುವ ಸಾಧ್ಯತೆ ಕಡಿಮೆಯಿರುತ್ತದೆ.