ಫ್ಲೈಯಿಂಗ್ ಪಾಸ್ ಪೋರ್ಟ್ ದಂಪತಿಗಳ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕದಲ್ಲಿ ಜಗತ್ಪ್ರಸಿದ್ಧರು. ಇನ್ ಸ್ಟಾಗ್ರಾಮ್ ಮೂಲಕ ಡಿಜಿಟಲ್ ಜಗತ್ತಿನಲ್ಲೂ ಖ್ಯಾತರಾಗಿದ್ದಾರೆ. ಆಶಾ ಮತ್ತು ಕಿರಣ್ ದಂಪತಿಯ ಒಂದು ವಿಡಿಯೋ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದೆ. ಅದು ದಿಢೀರ್ ಮುನ್ನೆಲೆಗೆ ಬರೋದಕ್ಕೆ ಕಾರಣವೂ ಗೊತ್ತಿಲ್ಲ. ಸುಮಾರು ಎರಡು ವರ್ಷಗಳ ಹಿಂದೆ ಐಸ್ ಲ್ಯಾಂಡ್ ನಲ್ಲಿ ಕಾರ್ ಚಲಾಯಿಸುತ್ತಿರುವಾಗ ವೇಗದ ಮಿತಿ ದಾಟಿದ್ದಕ್ಕಾಗಿ ದಂಡ ವಿಧಿಸಿದ ವಿಡಿಯೋ ಅದು. ಆಶಾ ಮತ್ತು ಕಿರಣ್ ಯುರೋಪ್ ನ ಐಸ್ ಲ್ಯಾಂಡ್ ನಲ್ಲಿ ವಾಹನ ಬಾಡಿಗೆಗೆ ಪಡೆದು ಪ್ರವಾಸ ಮುಂದುವರಿಸಿದ್ದರು. ಅಲ್ಲಿನ ವೇಗದ ಮಿತಿ ಗಂಟೆಗೆ 90ಕಿಲೋಮೀಟರ್ ಇತ್ತು. ಆದರೆ ಇವರ ಕಾರು ನೂರರ ವೇಗ ದಾಟಿ ನಡೆದಿತ್ತು. ಅವರನ್ನು ಹಿಂಬಾಲಿಸುವ ಟ್ರಾಫಿಕ್ ಪ್ಯಟ್ರೋಲ್ ಅಡ್ಡಗಟ್ಟಿ ನಿಲ್ಲಿಸಿ ಸ್ಥಳದಲ್ಲೇ ದಂಡ ವಿಧಿಸಿ ದಂಡ ವಸೂಲಿಯನ್ನೂ ಮಾಡಿದ್ದರು. ದಂಡದ ಅಮೌಂಟ್ ಎಷ್ಟು ಗೊತ್ತೇ? ಕೇವಲ 58ಸಾವಿರ ರುಪಾಯಿ!

ಇದನ್ನೂ ಓದಿ: ಸ್ಕ್ಯಾನರ್ ಅಡಿಯಲ್ಲಿ ಪ್ರವಾಸೋದ್ಯಮ!

ದಂಡ ಕಟ್ಟದೇ ಹೋದಲ್ಲಿ ಅದೇ ಕ್ಷಣ ಬಂಧನಕ್ಕೊಳಗಾಗುತ್ತಿದ್ದರು. ಅಷ್ಟೇ ಅಲ್ಲ ಕ್ಷಮಾಪಣೆಯನ್ನೂ ಕೇಳಿದ್ದರು. ಈ ವಿಡಿಯೋ ಈಗ ವೈರಲ್ ಆಗುತ್ತಿರುವುದು ಭಾರತದ ಫೈನ್ ಸಿಸ್ಟಮ್ ಜತೆಗೆ ತುಲನೆ ಮಾಡಿ! ಇಲ್ಲಿ ಒಬ್ಬ ಓವರ್ ಸ್ಪೀಡ್ ಹೋಗುತ್ತಿದ್ದರೆ, ಅವನನ್ನು ಅಡ್ಡಗಟ್ಟಲಂತೂ ಸಾಧ್ಯವೇ ಇಲ್ಲ. ಇಲ್ಲಿನ ಪೊಲೀಸರು ಅಷ್ಟು ಸಮರ್ಥರಿಲ್ಲ. ಅಂಥ ವಾಹನ ಅವರ ಬಳಿ ಇಲ್ಲ. ಕ್ಯಾಮೆರಾಗಳಲ್ಲೂ ಆ ವಾಹನ ಸೆರೆಯಾಗಿ ನಂಬರ್ ರಿಜಿಸ್ಟರ್ ಆಗುವುದು ಅನುಮಾನವೇ! ಇತ್ತೀಚೆಗೆ ಕೊಂಚ ಇಂಪ್ರೂವ್ ಆಗಿದೆ ಬಿಡಿ.

Untitled design (78)

ಹೈವೇಗಳಲ್ಲಿ ಸ್ಪೀಡ್ ದಾಟಿದರೆ ತಕ್ಷಣ ಚಲನ್ ಜನರೇಟ್ ಆಗುತ್ತದೆ. ಆದರೆ ಒಂದೊಮ್ಮೆ ಪೊಲೀಸರೇ ಅಡ್ಡಗಟ್ಟಿ ಹಿಡಿದರು ಅಂದುಕೊಳ್ಳಿ. ಒಂದೋ ಅದು ಮಾಮೂಲಿ ಕೊಟ್ಟು ಮುಗಿಸಲಾಗುತ್ತದೆ. ಫೈನ್ ಕಟ್ಟಿ ರಸೀದಿ ಪಡೆದರಂತೂ ಮುಗಿದೇ ಹೋಯ್ತು. ಆ ರಸೀದಿ ಇಟ್ಟುಕೊಂಡು ಅವತ್ತಿಡೀ ಆತ ಎಷ್ಟು ಬಾರಿ ಬೇಕಾದರೂ ಓವರ್ ಸ್ಪೀಡ್ ಹೋಗಬಹುದು. ಅವನನ್ನು ಕೇಳುವಂತೆಯೇ ಇಲ್ಲ. ನಮ್ಮ ಕಾನೂನು ಹಾಗಿದೆಯೋ ಅಥವಾ ಅವುಗಳ ಹುಳುಕುಗಳನ್ನು ಜನಸಾಮಾನ್ಯರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಸಾರಿಗೆ ನಿಯಮಗಳನ್ನು ಪಾಲಿಸುವುದು ನಾಗರೀಕತೆಯ ಭಾಗ ಎಂಬುದು ಅರ್ಥವಾಗದ ಹೊರತು ಇದು ಬದಲಾಗುವುದಿಲ್ಲ. ಭ್ರಷ್ಟಾಚಾರ ಮತ್ತು ಪೊಲೀಸ್ ವ್ಯವಸ್ಥೆಯ ದೌರ್ಬಲ್ಯಗಳೂ ಇದಕ್ಕೆ ಪೂರಕವಾಗುತ್ತಿದೆ. ಬಿಡಿ.. ಅತಿ ವೇಗ ತಿಥಿ ಬೇಗ ಎಂಬ ಸ್ಲೋಗನ್ ನೆನಪಾಗಿಯಾದರೂ ಮಂದಿ ವೇಗಕ್ಕೆ ಕಡಿವಾಣ ಹಾಕಲಿ ಎಂಬುದು ಆಶಯ.