Thursday, October 29, 2026
Thursday, October 29, 2026

ಅಮಿದ ಬುದ್ಧನ ಪವಿತ್ರ ತಾಣ

ಜಪಾನ್‌ನ ತಂತ್ರಜ್ಞಾನ ಮತ್ತು ಆಧುನಿಕತೆಯ ಆಚೆಗೆ, ಅಲ್ಲಿನ ಜನರ ನಂಬಿಕೆ, ಆಚರಣೆ ಮತ್ತು ಆಧ್ಯಾತ್ಮಿಕ ಪರಂಪರೆಗಳ ಪರಿಚಯವೂ ವಿಶಿಷ್ಟ ಅನುಭವ ನೀಡುತ್ತದೆ. ಕ್ಯೊಟೊ ಸಮೀಪದ ನೆನ್ಬುಟ್ಸು ಜಿ ದೇವಾಲಯದ ಬಿದಿರು ಕಾಡಿನ ನಡುವೆ ಬುದ್ಧನಿಗೆ ಸಲ್ಲಿಸುವ ಶ್ರದ್ಧೆ ಮತ್ತು ಸಾವಿರಾರು ಸ್ಮಾರಕ ಶಿಲೆಗಳು ಮನಸ್ಸನ್ನು ಆಳವಾಗಿ ಸ್ಪರ್ಶಿಸುತ್ತವೆ. ಭಾರತದಿಂದ ಹೊರಟ ಬೌದ್ಧ ಚಿಂತನೆಯ ಬೆಳಕು ಜಪಾನ್‌ನಲ್ಲಿ ಹೇಗೆ ಭಕ್ತಿ ಮತ್ತು ಪರಂಪರೆಯ ರೂಪ ಪಡೆದಿದೆ ಎಂಬುದನ್ನು ಈ ಪಯಣ ಪರಿಚಯಿಸಿತು.

  • ಶಿವಲಿಂಗಯ್ಯ ಎಸ್‌.

ಜಪಾನ್ ಎಂದ ಕೂಡಲೆ ಮನದಲ್ಲಿ ಮೂಡುವ ಮೊದಲ ಚಿತ್ರ ಅದರ ಅಭಿವೃದ್ಧಿ, ತಂತ್ರಜ್ಞಾನದ ಪ್ರಗತಿ.

ಈ ದೃಷ್ಟಿಯಲ್ಲಿ ಮುಂದುವರೆದ ಅನೇಕ ದೇಶಗಳ ಪ್ರವಾಸ / ವಾಸದ ಅನುಭವ ಈಗಾಗಲೆ ಹೊಂದಿದ್ದ ನಮಗೆ ಮತ್ತದೇ ಕುತ್ತಿಗೆ ನೋವು ಬರುವಷ್ಟು ಕತ್ತು ಮೇಲೆತ್ತಿ ನೋಡಬೇಕಾದ ಬಹು ಅಂತಸ್ತಿನ ಕಟ್ಟಡಗಳಲ್ಲಿ, ಒಂದರ ಹಿಂದೆ ಒಂದು ರೇಸಿಗೆ ಹೊರಟಂತೆ ಚಲಿಸುವ ಬಣ್ಣಬಣ್ಣದ/ವಿವಿಧ ಮಾದರಿಯ ಕಾರುಗಳ ಬಗೆಗೆ ಆಸಕ್ತಿ ಉಳಿದಿಲ್ಲ. ಪ್ರಕೃತಿ ದಯಪಾಲಿಸಿರುವ ನಯನಮನೋಹರ ನೋಟಗಳು, ನಮ್ಮ ದೇಶದಲ್ಲಿ ಲಭ್ಯವಿಲ್ಲದ/ ದುಬಾರಿಯಾದ ಆಡಂಬರದ ವಸ್ತುಗಳು ಸ್ವಲ್ಪ ಆಸಕ್ತಿ ಮೂಡಿಸಿದರೂ, ಅಲ್ಲಿಯ ಜನರ ನಂಬಿಕೆಗಳು, ಆಚರಣೆಗಳು, ಅವುಗಳ ಕುರಿತ ಅವರ ಗಾಢಶ್ರದ್ಧೆಯ ಪರಿಚಯ ಮಾಡಿಕೊಳ್ಳುವ ಆಸಕ್ತಿ ಜೀವಂತವಿತ್ತು. ಪ್ರವಾಸಕ್ಕೆ ಮೊದಲೇ ಇಂಥ ಅಂಶಗಳ ಕಡೆಗೆ ಹೆಚ್ಚು ಒತ್ತುಕೊಡುವಂತೆ ನಮ್ಮ ಜಪಾನ್ ಪ್ರವಾಸದ ಆಯೋಜಕಿ ಮೊಮ್ಮಗಳು ಶಕ್ತಿ ಶ್ರೀಧರ್‌ಗೆ ಸೂಚನೆ ನೀಡಿದ್ದೆವು.

ಇದನ್ನೂ ಓದಿ: ಬ್ಯಾಂಕಾಕ್‌ನ ಈ ಜಾಗದ ಬಗ್ಗೆ ಯಾರಿಗೂ ಹೆಚ್ಚು ಗೊತ್ತಿಲ್ಲ!

ಅದರಂತೆ ಅವಳು ಆರಿಸಿದ್ದ ಒಂದು ಸ್ಥಳದ ಹೆಸರು ನೆನ್ಬುಟ್ಸು ಜಿ ಟೆಂಪಲ್. ಕ್ಯೊಟೊದಿಂದ ಸ್ವಲ್ಪ ದೂರವಿದ್ದ ಅದಾಶಿನೊ ಎಂಬಲ್ಲಿ ಇರುವ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರ. ಇಂಥ ಸ್ಥಳಗಳಿಗೆ ಭೇಟಿ ನೀಡುವಾಗ ಸಾಂಪ್ರದಾಯಿಕ ಉಡುಗೆ-ತೊಡುಗೆ ಧರಿಸಬೇಕೆಂಬುದು ಜಪಾನೀಯರ ನಂಬಿಕೆ ಹಾಗು ಅನುಸರಿಸಿಕೊಂಡು ಬರುತ್ತಿರುವ ಸಂಪ್ರದಾಯ. ಹಾಗಾಗಿ ನಾವೂ ಅದರ ಅನುಭವ ಪಡೆಯಬೇಕೆಂಬ ಆಸೆಯಿಂದ ಅದಾಶಿನೊ ಪಟ್ಟಣದ ಅನೇಕ ತಿರುವು ದಾರಿಯಲ್ಲಿ ಸುತ್ತಿ ಕೊನೆಗೊಂದು ಮನೆಯನ್ನು ಹೊಕ್ಕೆವು. ಅದು ಜಪಾನಿನ ಸಾಂಪ್ರದಾಯಿಕ ‘ಕಿಮೊನೊʼ ದಿರುಸುಗಳು ಬಾಡಿಗೆಗೆ ದೊರೆಯುವ ಸ್ಥಳ. ಅಲ್ಲಿದ್ದ ವಿವಿಧ ಅಳತೆಯ, ಬಣ್ಣಬಣ್ಣದ ಚಿತ್ತಾರವುಳ್ಳ, ಹೆಣ್ಣು ಗಂಡುಗಳಿಗೆ ಪ್ರತ್ಯೇಕವಾಗಿದ್ದ ದಿರುಸುಗಳಲ್ಲಿ ನಮ್ಮ ಅಳತೆ, ಅಭಿರುಚಿಗೆ ಹೊಂದುವಂಥ ಬಟ್ಟೆಗಳ ಒಳಗೆ ತೂರಿಕೊಂಡು ಕನ್ನಡಿಯ ಮುಂದೆ ನಿಂತಾಗ , ʼ ಮೇರಾ ಜೂತಾ ಹೈ ಜಪಾನಿ, ಸಿರ್ ಪೆ ಲಾಲ್ ಟೋಪಿ ರೂಸಿ, ಫಿರ್ ದಿಲ್ ವಹಿ ಹಿಂದೂಸ್ಥಾನಿʼ ಎಂಬ ರಾಜ್ ಕಪೂರ್ ಸಿನಿಮಾದ ಹಾಡು ಅನಾಯಾಸವಾಗಿ ನೆನಪಿಗೆ ಬಂತು. ಆದರೂ ಚಪಲ ಪೂರೈಕೆಗಾಗಿ ಬಣ್ಣದ ಛತ್ರಿ ಹಿಡಿದು ವಿವಿಧ ಭಂಗಿಗಳಲ್ಲಿ ನಿಂತು ಫೋಟೊಶೂಟ್ ಮುಗಿಸಿ ಹೊರಬಂದಾಗ ಜಿಡಿ ಮಳೆ ನಮ್ಮನ್ನು ಸ್ವಾಗತಿಸಿತು.

Untitled Design - 2026-10-29T113422.619

ಛತ್ರಿ ಸಮೇತ ಹೊರನಡೆದ ನಾವು ಬಸ್ ಹಿಡಿದು ನೆನ್ಬುಟ್ಸು ಜಿ ದೇವಾಲಯವಿರುವ ಸ್ಥಳವನ್ನು ತಲುಪಿದೆವು. ಅದು ಬಿದುರಿನಿಂದಾವೃತವಾದ ಒಂದು ಗುಡ್ಡಗಾಡು ಪ್ರದೇಶ. ಇಲ್ಲಿಯ ಬಿದಿರು ದೂರದೂರ ಗಿಣ್ಣುಗಳಿಂದ ಕೂಡಿದ್ದು, ನಮ್ಮಲ್ಲಿ ಬೆಳೆಯುವ ಬಿದಿರಿನಲ್ಲಿ ಕಾಣುವಂಥ ಮುಳ್ಳುಗಳಿಂದ ಮುಕ್ತವಾಗಿರುತ್ತದೆ; ಒತ್ತೊತ್ತಾಗಿ ಶಿಸ್ತಿನಿಂದ ಮೇಲಕ್ಕೆ ಬೆಳೆದು ಚಾಮರವರಳಿಸುತ್ತದೆ. ಇದು ಜನಜುಂಗುಳಿಯಿಂದ ದೂರ, ಧಾರ್ಮಿಕ ಶ್ರದ್ಧೆಯ ಕೆಲವರು ಮಾತ್ರ ಇಲ್ಲಿಗೆ ಭೇಟಿ ನೀಡುತ್ತಾರೆ. ಬರುವ ಸ್ಥಳೀಯರು ಜಪಾನಿನ ಸಾಂಪ್ರದಾಯಿಕ ಕಿಮೊನೊ ಉಡುಗೆಯಲ್ಲೇ ಸಿಂಗರಿಸಿಕೊಂಡಿರುವವರು. ಹಳ್ಳಕೊಳ್ಳಗಳನ್ನು ದಾಟಿ, ಬಿದಿರು ಮೆಳೆಗಳ ಹಿನ್ನೆಲೆಯ ಫೊಟೋ ಕ್ಲಿಕ್ಕಿಸುತ್ತಾ ಸುಂದರ ಪ್ರಕೃತಿಯ ಮಡಿಲಲ್ಲಿರುವ ದೇವಾಲಯದ ಆವರಣ ಪ್ರವೇಶಿಸಲು ಟಿಕೆಟ್ ಪಡೆದು ಒಳಹೊಕ್ಕಾಗ ಕಂಡದ್ದು ಒಂದು ಮಧ್ಯಮ ಗಾತ್ರದ ಬುದ್ಧ ದೇವ ಮಂದಿರ.

ಪ್ರಕೃತಿಯ ಬೆಳಕು ಮೊದಲು ಜಪಾನಿನ ಮೇಲೆ ಬೆಳಗಿ ನಂತರ ಭಾರತದತ್ತ ಹೊರಳುತ್ತದೆ. ಆದರೆ, ಭರತಭೂಮಿಯಿಂದ ಹೊರಟ ಆಧ್ಯಾತ್ಮಿಕ ಪ್ರಭೆ ಇಡೀ ಪೂರ್ವ ಏಷ್ಯಾವನ್ನು ಬೆಳಗುತ್ತಿದೆ. ರಕ್ತ- ಮಾಂಸಗಳಿಂದ ಕೂಡಿದ, ಭರತ ಭೂಮಿಯಲ್ಲಿ ತಿರುಗಾಡಿದ ಜೀವವೊಂದು ತನಗೊದಗಿದ ಜ್ಞಾನೋದಯದ ಬೆಳಕನ್ನು ಸಹಮಾನವರ ಆತ್ಮೋದ್ಧಾರಕ್ಕಾಗಿ ಹಂಚಿದ ಮಹತ್ಕಾರ್ಯಕ್ಕಾಗಿ ದೈವತ್ವಕ್ಕೇರಿದ ಚೇತನವೊಂದರ ಮುಂದೆ ಕೈಜೋಡಿಸಿ ನಿಂತಾಗ ರೋಮಾಂಚನವಾಯಿತು. ಇಲ್ಲಿಯೂ ಪೂಜೆಗೊಳ್ಳುತ್ತಿರುವ ಭಾರತದ ಆ ಮಹಾನ್ ಚೇತನಕ್ಕೆ ಶಿರಬಾಗಿ, ಅಲ್ಲಲ್ಲ ಜಪಾನೀಯರ ಶೈಲಿಯಲ್ಲಿ ದೇಹಬಗ್ಗಿಸಿ ನಮ್ಮ ಗೌರವ ಸಮರ್ಪಿಸಿದೆವು.

ಹೊರಬಂದ ನಮಗೆ ಅಲ್ಲಿ ಕಂಡದ್ದು ಸಾಲಾಗಿ ಜೋಡಿಸಿಟ್ಟಿದ್ದ ಶಿರಗಾತ್ರದ ಸಾವಿರಾರು ಬುದ್ಧ ಪ್ರತಿಕೃತಿ ಶಿಲ್ಪಗಳು (ಸ್ಮಾರಕ ಶಿಲೆಗಳು). ಸಂಗ್ರಹಿಸಿದ ಅನೇಕ ಶಿಲ್ಪಗಳನ್ನು ಸುತ್ತಲೂ ನೆರೆದಿರುವಂತೆ ಹಾಗೂ ಮಧ್ಯದಲ್ಲಿ ಬುದ್ಧದೇವ ವಿರಾಜಮಾನವಾಗಿರುವಂತೆ ಒಂದು ಬಯಲಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಿನವರ ವಿವರಣೆಯಂತೆ ಹಿಂದೆ ಈ ಪ್ರದೇಶ ಪ್ರತಿಷ್ಠಿತ ಬೌದ್ಧ ಧರ್ಮಾನುಯಾಯಿಗಳ ರುದ್ರಭೂಮಿಯಾಗಿತ್ತು. ತೀರಿಕೊಂಡವರ ದೇಹವನ್ನು ನಾವು ಅನುಸರಿಸುವಂತೆ ಮಣ್ಣಿನಲ್ಲಿ ಮುಚ್ಚದೆ, ಅಗ್ನಿಗೆ ಅರ್ಪಿಸದೆ ಹಾಗೆಯೇ ಪ್ರಕೃತಿಯ ಮಡಿಲಲ್ಲಿಟ್ಟು ಬರುತ್ತಿದ್ದರು, ಜತೆಗೊಂದು ಸ್ಮಾರಕಶಿಲೆ. ಪುನರ್ಜನ್ಮದಲ್ಲಿ ಇವರಿಗೆ ನಂಬಿಕೆಯುಳ್ಳ ಕಾರಣ, ಬಿದಿರು ಮೆಳೆಗಳ ನಡುವೆ ಅಲ್ಲಲ್ಲಿ ಚದುರಿ ಹೋದಂತಿದ್ದ ಇಂಥ ಎಲ್ಲ ಸ್ಮಾರಕ ಶಿಲೆಗಳನ್ನು ಒಂದೆಡೆ ಸೇರಿಸಿ, ಅಗಲಿದ ಆತ್ಮಗಳು ಮರುಜನ್ಮ ಪಡೆದು ತಾವೂ ಬುದ್ದರಾಗಲು ಅವನ ದಿವ್ಯ ಸಂದೇಶ ಆಲಿಸಿ, ಅರ್ಥಮಾಡಿಕೊಳ್ಳಲು ಸ್ವರ್ಗದಲ್ಲಿ ನೆರೆದಿರುವುದರ ಪ್ರತಿರೂಪ ಇದು ಎಂದು ಪ್ರಚುರಪಡಿಸಲಾಯಿತು.

ನಮ್ಮ ನೆರೆಯ ಚೀನಾ ದೇಶದಲ್ಲಿ ಹೆಚ್ಚು ಪ್ರಚಲಿತವಾಗಿರುವ ಬೌದ್ಧ ಧರ್ಮದ ವಜ್ರಯಾನ ಶಾಖೆಯ ಟಿಸಿಲೊಂದಾದ ಶಿನ್ಗಾನ್ ಪಂಥದ ಪ್ರವರ್ತಕನಾದ ಕುಕೈ (ಕೊಬೊ ದೈಶಿ) ಒಂಬತ್ತನೆಯ ಶತಮಾನದಲ್ಲಿ ಈ ದೇವಾಲಯ ಸ್ಥಾಪಿಸಿದನೆಂದು ಹೇಳಲಾಗುತ್ತದೆ. ಕಾಲಾಂತರದಲ್ಲಿ ಧರ್ಮಗುರು ಹೊನೆನ್ ಪ್ರಚುರಪಡಿಸಿದ ಅಮಿದ ಬುದ್ಧ(ಅಮಿತಾಭ ) ಮಹಾಯಾನ ಪಂಥದ ಚಿಂತನೆಗಳ ಕಲಿಕೆ ಹಾಗೂ ಅನುಷ್ಠಾನದ ಪವಿತ್ರ ಕೇಂದ್ರವಾಗಿ ಸದ್ಯದ ಸ್ಥಿತಿಗೆ ಮಾರ್ಪಟ್ಟು ʼನೆನ್ಬುಟ್ಸು ಜಿ ದೇವಾಲಯʼ ಎಂದು ಪ್ರಸಿದ್ಧಿಗೆ ಬಂದಿದೆ.

Untitled Design - 2026-10-29T113412.642

ನಾವು ಪಿತೃಗಳಿಗೆ ವರ್ಷಕ್ಕೊಮ್ಮೆ ಕೃತಜ್ಞತೆ ಸಲ್ಲಿಸುವ ಆಚರಣೆಯಂತೆಯೇ ಜಪಾನೀಯರು ಸಹ ಆಗಸ್ಟ್ ತಿಂಗಳ ಕೊನೆಯ ಶನಿವಾರ ಮತ್ತು ಭಾನುವಾರ ಸಂಜೆ ಈ ಬುದ್ಧಾಲಯಕ್ಕೆ ಆಗಮಿಸಿ ಮೇಣದ ಬತ್ತಿ ಹಚ್ಚಿಟ್ಟು ತಮ್ಮ ಪಿತೃಗಳಿಗೆ ಗೌರವ ಸಲ್ಲಿಸುವ ‘ಸೆಂಟೊ ಕುಯೊ’ ಎಂಬ ವಿಧಿಯಲ್ಲಿ ಪಾಲ್ಗೊಳ್ಳುತ್ತಾರೆ. ಸುತ್ತಲಿನ ಕತ್ತಲು ಗಾಢವಾದಂತೆ ಹಚ್ಚಿಟ್ಟ ಜ್ಯೋತಿಯ ಕುಡಿ ಅಲುಗಾಡಿದಾಗ ಸಾವಿರಾರು ಚಿಟ್ಟೆಗಳು ಮೇಳೈಸಿದ ದೃಶ್ಯ ಮೂಡಿಸುತ್ತದೆ.

ನಾವು ಅಲ್ಲಿರುವಾಗಲೇ ಕೆಲವರು ಬಂದು ಹೂಗುಚ್ಛ ಅರ್ಪಿಸಿ, ದೇಹಭಾಗಿಸಿ ಗೌರವ ಸಲ್ಲಿಸಿದ ಘಟನೆಯೊಂದಿಗೆ ನಾವೂ ಸಹಭಾಗಿಗಳಾಗಿ ನಮ್ಮ ಪಿತೃಗಳನ್ನೂ ಮನದಲ್ಲಿ ನೆನೆದು ಹೊರಬಂದಾಗ ಯಾವುದೊ ಧನ್ಯತಾಭಾವ ನಮ್ಮನ್ನಾವರಿಸಿತ್ತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...