Monday, March 23, 2026
Monday, March 23, 2026

ತಿಂದು ಓಡಾಡಿ ಇದು ಇಂದೋರ್‌ ಪ್ರವಾಸ

ಮಧ್ಯಪ್ರದೇಶ ಎಲ್ಲಾ ಥರದ ಪಾರಂಪರಿಕ ತಿನಿಸುಗಳು ಸೇರಿ ವಿವಿಧ ಬಗೆಯ ಚಾಟ್ಸ್‌ ಇಲ್ಲಿ ದೊರೆಯುತ್ತವೆ. ವಿಶೇಷವಾಗಿ ಲೀಲಾಜಾಲವಾಗಿ ಜಾದುವಿನಂತೆ ಬಟ್ಟಲನ್ನು ಮೇಲೆ ತೂರಿ ಗ್ರಾಹಕರ ಕೈ ಸೇರುವಂತೆ ಮಾಡುವ ಫ್ಲೈಯಿಂಗ್ ದಹಿ ವಡಾ, ಮೆಕ್ಸಿಕೋದ ಸ್ವೀಟ್ ಕಾರ್ನ್ ಅನ್ನು ಚೆನ್ನಾಗಿ ತುರಿದು ಹಾಲಿನೊಂದಿಗೆ ಕುದಿಸಿ, ಕಾಯಿತುರಿ ನಿಂಬೆರಸ ಹಾಗೂ ಮಸಾಲೆಗಳನ್ನು ಬೆರಿಸಿ ತಯಾರಿಸುವ ಬುಟ್ಟೆ ಕಿ ಕೀಸ್, ಸುವರ್ಣ ಗೆಡ್ಡೆಯನ್ನು ಪನ್ನೀರ್ ಕ್ಯೂಬ್‌ಗಳಂತೆ ಕತ್ತರಿಸಿ ಎಣ್ಣೆಯಲ್ಲಿ ಕರೆದು ಮಸಾಲೆಯ ಮಳೆ ಸುರಿಸಿ ತಯಾರಿಸಿದ ಗರಾಡು, ಇಂದೋರಿ ಪೋಹಾ (ಅವಲಕ್ಕಿ), ರಬಡಿ, ಜಲೇಬಿ, ಜಾಮನ್, ರಸಗುಲ್ಲ, ರಸ್ ಮಲಯಿ ಇವುಗಳನ್ನಂತೂ ಮಿಸ್ ಮಾಡಂಗೇ ಇಲ್ಲ.

ಅಶ್ವಿನಿ ಕುಲಕರ್ಣಿ

ಈ ಮಾರುಕಟ್ಟೆಯ ಹೆಸರು ಸರಾಫ್ ಬಜಾರ್. ಸರಫಾ ಬಜಾರ್ ಎಂದೂ ಕರೆಯುವುದುಂಟು. ಇದಕ್ಕೆ ಬೆಳ್ಳಿ ಬಂಗಾರ ಹರಳುಗಳ ಮಾರುಕಟ್ಟೆ ಎಂಬ ಅರ್ಥವಿದೆ. ನೂರಾರು ವರ್ಷಗಳ ಹಿಂದೆ ಚಿನ್ನ-ಬೆಳ್ಳಿ ವ್ಯಾಪಾರಕ್ಕೆ ಈ ಮಾರುಕಟ್ಟೆ ನಿರ್ಮಾಣವಾಗಿತ್ತು. ಆದರೆ ಈ ಮಾರುಕಟ್ಟೆ ಭಾರತದಾಧ್ಯಂತ ಪ್ರಸಿದ್ಧವಾಗಿದ್ದು ಅಲ್ಲಿ ಸಂಜೆಯ ಹೊತ್ತಿಗೆ ತೆರೆದುಕೊಳ್ಳುವ ತಿನಿಸುಗಳ ಲೋಕಕ್ಕೆ. ವ್ಯಾಪಾರಿಗಳ ಹೊಟ್ಟೆ ತುಂಬಿಸಲು ಇಲ್ಲಿ ಒಂದೊಂದಾಗಿ ತಿನಿಸುಗಳ ಅಂಗಡಿ ಆರಂಭವಾದವು. ತಿನಿಸುಗಳನ್ನು ಸವಿಯಲೆಂದೇ ಇಲ್ಲಿಗೆ ಬರುವ ಜನಸಂಖ್ಯೆಯೂ ಹೆಚ್ಚಾಯಿತು. ಈಗ ರಾತ್ರಿ 9ರಿಂದ ಬೆಳಗಿನ ಜಾವದ ವರೆಗಿನ ಸಮಯದಲ್ಲಿ ಈ ಬಜಾರ್ ಖಾದ್ಯ ಪ್ರಿಯರಿಂದ ತುಂಬಿರುತ್ತದೆ.

ಮಧ್ಯಪ್ರದೇಶದ ಇಂದೋರ್‌ಗೆ ಭೇಟಿ ನೀಡಿದವರು ಈ ಸರಾಫಾ ಬಜಾರ್‌ಗೆ ಭೇಟಿ ನೀಡಲೇಬೇಕು. ಅದರಲ್ಲೂ ಭೋಜನ ಪ್ರಿಯರಿಗಂತು ಇಲ್ಲಿ ರಸದೌತಣ ಸಜ್ಜಾಗಿರುತ್ತದೆ. ಮುಂಜಾನೆ ಅಥವಾ ಮಧ್ಯಾಹ್ನದ ವೇಳೆ ಈ ಮಾರುಕಟ್ಟೆ ಕಣ್ಣು ಕುಕ್ಕುವ ಚಿನ್ನದ ಅಂಗಡಿಗಳು ಮಾತ್ರ ಕಣ್ಣಿಗೆ ಬೀಳುತ್ತವೆ. ರಾತ್ರಿ ಎಂಟೂವರೆ ಅಥವಾ ಒಂಬತ್ತರ ಸಮಯಕ್ಕೆ ಈ ಮಾರುಕಟ್ಟೆಗೆ ಹೆಜ್ಜೆ ಇಟ್ಟರೆ ಮೊದಲು ಚುರುಕಾಗುವುದು ಮೂಗು. ಒಂದೊಂದು ದಿಕ್ಕಿನಿಂದ ಒಂದೊಂದು ವಿಶೇಷ ತಿನಿಸುಗಳ ಘಮಲು ನಮ್ಮನ್ನು ಸ್ವಾಗತಿಸುತ್ತದೆ.

ಇದನ್ನೂ ಓದಿ: Road to Heaven... ಕಛ್‌ನಿಂದ ಸ್ವರ್ಗಕ್ಕೆ ಮೂರೇ ಗೇಣು

ಇಲ್ಲಿ ಏನೆಲ್ಲಾ ತಿನ್ನಲೇಬೇಕು?

ಮಧ್ಯಪ್ರದೇಶ ಎಲ್ಲಾ ಥರದ ಪಾರಂಪರಿಕ ತಿನಿಸುಗಳು ಸೇರಿ ವಿವಿಧ ಬಗೆಯ ಚಾಟ್ಸ್‌ ಇಲ್ಲಿ ದೊರೆಯುತ್ತವೆ. ವಿಶೇಷವಾಗಿ ಲೀಲಾಜಾಲವಾಗಿ ಜಾದುವಿನಂತೆ ಬಟ್ಟಲನ್ನು ಮೇಲೆ ತೂರಿ ಗ್ರಾಹಕರ ಕೈ ಸೇರುವಂತೆ ಮಾಡುವ ಫ್ಲೈಯಿಂಗ್ ದಹಿ ವಡಾ, ಮೆಕ್ಸಿಕೋದ ಸ್ವೀಟ್ ಕಾರ್ನ್ ಅನ್ನು ಚೆನ್ನಾಗಿ ತುರಿದು ಹಾಲಿನೊಂದಿಗೆ ಕುದಿಸಿ, ಕಾಯಿತುರಿ ನಿಂಬೆರಸ ಹಾಗೂ ಮಸಾಲೆಗಳನ್ನು ಬೆರಿಸಿ ತಯಾರಿಸುವ ಬುಟ್ಟೆ ಕಿ ಕೀಸ್, ಸುವರ್ಣ ಗೆಡ್ಡೆಯನ್ನು ಪನ್ನೀರ್ ಕ್ಯೂಬ್‌ಗಳಂತೆ ಕತ್ತರಿಸಿ ಎಣ್ಣೆಯಲ್ಲಿ ಕರೆದು ಮಸಾಲೆಯ ಮಳೆ ಸುರಿಸಿ ತಯಾರಿಸಿದ ಗರಾಡು, ಇಂದೋರಿ ಪೋಹಾ (ಅವಲಕ್ಕಿ), ರಬಡಿ, ಜಲೇಬಿ, ಜಾಮನ್, ರಸಗುಲ್ಲ, ರಸ್ ಮಲಯಿ ಇವುಗಳನ್ನಂತೂ ಮಿಸ್ ಮಾಡಂಗೇ ಇಲ್ಲ. ತಂಪಾದ ಪಾಲುದಾ, ಕುಲ್ಫಿ ಕೂಕೋನಟ್ ಕ್ರಶ್‌ನ ರುಚಿಯನ್ನೂ ಸವಿಯಲೇಬೇಕು.

Untitled design - 2026-03-23T180202.528

ತಿಂದದ್ದನ್ನು ಅರಗಿಸಿಕೊಳ್ಳಲು ಬಗೆ ಬಗೆಯಾದ ಸೋಡಾ. ಸೋಡಾಗಳಲ್ಲೂ ನೂರಾರು ನಮೂನೆ ಬಣ್ಣ ಬಣ್ಣದ ಸೋಡಾಗಳೂ ಇಲ್ಲಿವೆ. ಲಾಸ್ಟ್ ಬಟ್ ನಾಟ್ ಲೀಸ್ಟ್ ಗುಲ್ಕನ್ ಅಡಿಕೆ ಚಮನ್ ಕಾಜೂಗಳನ್ನು ತುಂಬಿಕೊಂಡ ಜಬರ್ದಸ್ತ್ ಪಾನ್ ತಿಂದಮೇಲೆಯೇ ಸರಾಫಾ ಬಜಾರ್‌ನ ಯಾತ್ರೆ ಸಂಪೂರ್ಣವಾಗುತ್ತದೆ.

ಚಪ್ಪನ್ ಬಜಾರ್ ಎಂಬ ಚಪ್ಪರಿಕೆಯ ತಾಣ

ಸರಾಫ್ ಬಜಾರ್‌ನ ಸಮಯ ರಾತ್ರಿ 9:00ರಿಂದ ಬೆಳಗಿನ ಜಾವ ಎರಡು ಗಂಟೆವರೆಗೆ. ಆದರೆ, ನಾವು ಇಂದೋರ್‌ನಲ್ಲಿ ಹಗಲು ಮಾತ್ರ ಇರಲು ಸಾಧ್ಯ, ಈ ಇಂದೋರಿ ಖಾದ್ಯಗಳನ್ನು ಸವಿಯಲು ಆಗುವುದಿಲ್ಲ ಎಂಬ ಅನಾನುಕೂಲದ ಚಡಪಡಿಕೆ ಪ್ರವಾಸಿಗಳಿಗೆ ಬರವುದು ಸಹಜ. ಇದನ್ನು ಸರಿಪಡಿಸಲೆಂದೇ ಇಂದೋರಿನ ಚಪ್ಪನ್ ಬಜಾರ್ ಹಾಜರಿದೆ. ಹೆಸರೇ ಹೇಳುವಂತೆ ಇಲ್ಲಿ 56 ಥರದ ತಿನಿಸುಗಳ ಮಳಿಗೆಗಳಿವೆ.

ಕೊಬ್ಬರಿಯ ಕೋಪ್ರಾ ಪ್ಯಾಟಿಸ್

ದಹಿ ವಡಾ, ಆಲೂ ವಡಾ, ಸಮೋಸಾ ಕಚೋರಿ, ಹಸಿ ಬಟಾಣಿಯ ಬಾಟ್ಲಾ ಕಚೋರಿ, ಸಾಬುದಾನ ವಡಾ, ಸಾಬುದಾನ ಕಿಚಡಿ, ಕಮನ್, ಲೊಛೊ, ಹಾಟ್ ಡಾಗ್, ಜಲೇಬಿ ಇಲ್ಲಿ ಸವಿಯಲೇಬೇಕಾದ ಖಾದ್ಯಗಳು. ಇಲ್ಲಿನ ಇನ್ನೊಂದು ವಿಶೇಷವೆಂದರೆ ಶಾಹಿ ಶಿಖಂಜಿ.

ಪರಸ್ಪರ ವಿರುದ್ಧ ಗುಣಗಳ ಕೆನೆ ಭರಿತ ಹಾಲು ಹಾಗೂ ಮಜ್ಜಿಗೆ ಇಲ್ಲಿ ಒಂದಾಗಿ ಕೇಸರಿ, ಏಲಕ್ಕಿ, ಗೋಡಂಬಿ, ಬಾದಾಮಿ, ಫಿಸ್ತಾ ಸಕ್ಕರೆಯ ಜತೆಗೆ ಬೆರೆತು ಶಾಹಿ ಶಿಖಂಜಿ ತಯಾರಾಗುತ್ತದೆ.ಇದನ್ನು ತಿನ್ನಲಾದರೂ ಇಂದೋರಿಗೆ ಭೇಟಿ ನೀಡಬೇಕು.

Untitled design - 2026-03-23T180149.631

ಕೇವಲ ಆಹಾರಪ್ರಿಯರು ಮಾತ್ರ ಇಂದೋರಿಗೆ ಹೋಗಬೇಕು ಎಂದೇನಿಲ್ಲ. ಮಧ್ಯಪ್ರದೇಶ ಹಲವಾರು ಪ್ರೇಕ್ಷಣೀಯ ಸ್ಥಳಗಳ ತವರೂರು. ಈ ಸುಂದರ ತಾಣಗಳನ್ನು ಕಣ್ತುಂಬಿಸಿಕೊಳ್ಳಲು ಹೋಗಬಹುದು. ಹೀಗೆ ಹೋದಾಗ ಇಂದೋರ್‌ನ ಈ ತಿನಿಸುಗಳ ಬಜಾರ್‌ನಲ್ಲಿ ತಿರುಗಿ ಹೊಟ್ಟೆ ತುಂಬಿಸಿಕೊಳ್ಳಿ. ಕಣ್ಣು, ಮನಸ್ಸು, ಫೋನ್‌ ಗ್ಯಾಲರಿ ತುಂಬಿಸುವ ಪ್ರವಾಸದ ಜತೆಗೆ ನಾಲಿಗೆ ನೀರೂರಿಸುವ ವಿಶೇಷ ಖಾದ್ಯಗಳಿಂದ ಹೊಟ್ಟೆಯೂ ಬರ್ತಿಯಾಗುತ್ತದೆ. ಅದಕ್ಕೆ ತಾನೆ ಇಂದೋರ್‌ಗೆ ʻನಮ್ಕಿನ್ ಸಿಟಿ ಆಫ್ ಇಂಡಿಯಾʼ, ʻಫುಡ್ ಕ್ಯಾಪಿಟಲ್ ಆಫ್ ಮಧ್ಯಪ್ರದೇಶʼ, ʻಚಟೋರೊ ಕಾ ಷಹರ್ʼ ಎಂದೆಲ್ಲ ಬಿರುದು ಕೊಟ್ಟಿರುವುದು.

ದಾರಿ ಹೇಗೆ?

ಸರಫಾ ಬಜಾರ್‌ ಇಂದೋರ್‌ ಬಸ್‌ ನಿಲ್ದಾಣದಿಂದ 3ಕಿಮೀ, ರೈಲು ನಿಲ್ದಾಣದಿಂದ 2 ಕಿಮೀ ದೂರದಲ್ಲಿದೆ. ಸ್ಥಳೀಯ ವಾಹನಗಳ ಮೂಲಕ ಬಜಾರ್‌ನ ಪ್ರವೇಶದವರೆಗೂ ತಲುಪಬಹುದು. ಅಲ್ಲಿಂದ ಕಾಲ್ನಡಿಗೆಯಲ್ಲೇ ಬಜಾರ್‌ ಸುತ್ತುವುದು ಉತ್ತಮ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat