ಸುಗ್ಗಿ ರೆಸಾರ್ಟ್‌ನಲ್ಲಿ ಸಾಹಸಮಯ ದಿನ
ಬೆಂಗಳೂರಿನ ಜಂಜಾಟದಿಂದ ದೂರವಿರುವ ಈ ರೆಸಾರ್ಟ್, ಹಚ್ಚ ಹಸಿರಿನ ಮಾವಿನ ತೋಟದ ನಡುವೆ ಅಡಗಿಕೊಂಡಿದ್ದು, ಪ್ರಶಾಂತತೆ ಹಾಗೂ ರೋಮಾಂಚನಕಾರಿ ಸಾಹಸಗಳೆರಡನ್ನೂ ಒಟ್ಟಿಗೆ ನೀಡುತ್ತದೆ. ನಾವು ಕನಕಪುರ ನೈಸ್ ರಸ್ತೆಯ ಮೂಲಕ ಇಲ್ಲಿಗೆ ಪ್ರಯಾಣ ಬೆಳೆಸಿದೆವು.
- ಶುಚಿತ ಸುರೇಶ್
ಒಂದು ಆಹ್ಲಾದಕರ ಶುಕ್ರವಾರದ ಬೆಳಗ್ಗೆ, ಮನೆಯ ದಿನನಿತ್ಯದ ಗಡಿಬಿಡಿಯನ್ನು ನಿಭಾಯಿಸಿದ ನಂತರ, ಆನೇಕಲ್ ತಾಲೂಕಿನ 'ಸುಗ್ಗಿ ರೆಸಾರ್ಟ್'ನಲ್ಲಿ (Suggee Resort) ನಡೆಯಲಿರುವ ಬಹುದಿನಗಳ ನಿರೀಕ್ಷಿತ ನಮ್ಮ ತಂಡದ ಪ್ರವಾಸಕ್ಕಾಗಿ ನಾನು ಪೂರ್ಣ ಉತ್ಸಾಹದಿಂದ ಸಿದ್ಧಳಾಗಿದ್ದೆ. ಕಚೇರಿಯಲ್ಲಿ ಕಳೆದ ಎರಡು ತಿಂಗಳುಗಳ ನಿರಂತರ ಕೆಲಸದ ಒತ್ತಡದ ನಂತರ, ನಮ್ಮ ತಂಡದ ಪ್ರತಿಯೊಬ್ಬರಿಗೂ ಈ ಬ್ರೇಕ್ ಅತ್ಯಂತ ಅಗತ್ಯವಾಗಿತ್ತು.
ಇದನ್ನೂ ಓದಿ: ಈ ಜಂಗಲ್ ರೆಸಾರ್ಟ್‌ನಲ್ಲಿ ಉಳಿದರೆ ದಂಗಾಗ್ತೀರಿ!..
ವಿಶೇಷ ಆಕರ್ಷಣೆಗಳು
ರೆಸಾರ್ಟ್‌ಗೆ ಕಾಲಿಡುತ್ತಿದ್ದಂತೆಯೇ ವಾರ್ಲಿ ಕಲೆಯ ವರ್ಣಚಿತ್ರಗಳಿಂದ ಅಲಂಕೃತಗೊಂಡ ಕುಟೀರಗಳು ಮತ್ತು ಸಾಲು ಸಾಲು ಮಾವಿನ ಮರಗಳು ನಮ್ಮನ್ನು ಸ್ವಾಗತಿಸಿದವು. ಅಲ್ಲಿ ಹಸಿರು ಹಸಿರಾದ ಮಾವಿನಕಾಯಿಗಳಿಂದ ತುಂಬಿದ ಅಸಂಖ್ಯಾತ ಮರಗಳಿದ್ದವು. ಅವುಗಳನ್ನು ಕಂಡು ಬಾಲ್ಯದ ದಿನಗಳು ನೆನಪಾಗಿ ಕೆಲವು ಮಾವಿನಕಾಯಿಗಳನ್ನು ಕಿತ್ತು ರಹಸ್ಯವಾಗಿ ನಮ್ಮ ಬ್ಯಾಗ್‌ಗಳಲ್ಲಿ ತುಂಬಿಸಿಕೊಳ್ಳಬೇಕೆಂಬ ಆಸೆ ಮೂಡಿತು. ಆದರೆ, ಅಲ್ಲಿದ್ದ ʼಮಾವಿನಕಾಯಿ ಕೀಳಬೇಡಿʼ ಎಂಬ ನಾಮಫಲಕ, ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂಬುದನ್ನು ನೆನಪಿಸಿತು!

ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಬೆಂಗಳೂರಿನಲ್ಲೇ ಅತಿ ದೊಡ್ಡದಾದ 'ಬರ್ಡ್ ಏವಿಯರಿ'. ಇಲ್ಲಿ ಮೆಕಾವ್, ಕಾಕಟೂಸ್ ಸೇರಿದಂತೆ 20ಕ್ಕೂ ಹೆಚ್ಚು ತಳಿಯ ಅಪರೂಪದ ಪಕ್ಷಿಗಳನ್ನು ನೋಡಬಹುದು. ಇದರೊಂದಿಗೆ ಚೆನ್ನಾಗಿ ಬೆಳೆದ, ಆರೋಗ್ಯಕರವಾಗಿ ಕಾಣುತ್ತಿದ್ದ ನಾಲ್ಕು ಸೈಬೀರಿಯನ್ ಹಸ್ಕಿ ನಾಯಿಗಳು ನಮ್ಮನ್ನು ಸ್ವಾಗತಿಸಿದವು. ಕನ್ನಡಕ ಧರಿಸದ ನನಗೆ ದೂರದಿಂದ ಅವು ಸಿಂಹದ ಮರಿಗಳಂತೆ ಕಂಡವು! ಪ್ರಾಣಿ ಪ್ರೇಮಿಗಳು ಅವುಗಳನ್ನು ಮುದ್ದಾಡಲು ಓಡಿದರೆ, ನನ್ನಂಥವರು ದೂರದಿಂದಲೇ ನೋಡಿ ಆನಂದಿಸಿದೆವು.

ಸಾಹಸ ಕ್ರೀಡೆಗಳ ಜಗತ್ತು
ನಮ್ಮ ಆಕ್ಟಿವಿಟಿ ಟೋಕನ್‌ಗಳನ್ನು ಸಂಗ್ರಹಿಸಿ, ರೆಸಾರ್ಟ್ ಕ್ಯಾಪ್ಟನ್ ಅವರಿಂದ ಸಂಕ್ಷಿಪ್ತ ಮಾಹಿತಿ ಪಡೆದ ನಂತರ, ನಾವು 40ಕ್ಕೂ ಹೆಚ್ಚು ಆಕ್ಟಿವಿಟಿಗಳಿರುವ ಸಾಹಸ ವಲಯಕ್ಕೆ ಹೆಜ್ಜೆ ಹಾಕಿದೆವು.
- ರೋಪ್ ಕೋರ್ಸ್ ಮತ್ತು ಹೈ ರೋಪ್: ನಾಲ್ಕು ವಿಭಿನ್ನ ಮಾದರಿಗಳಿದ್ದ ಈ ಹಗ್ಗದ ಸಾಹಸವು ತುಂಬಾ ಎತ್ತರದಲ್ಲಿದ್ದು ನಮಗೆ ಸವಾಲು ಹಾಕುವಂತಿತ್ತು. ನಮ್ಮಲ್ಲಿ ಕೆಲವರು ಹಿಂಜರಿಯುತ್ತಿದ್ದರೂ, ಪರಸ್ಪರ ಪ್ರೋತ್ಸಾಹ ನೀಡುತ್ತಾ ಅಂತಿಮವಾಗಿ ಇಡೀ ತಂಡವೇ ಇದಕ್ಕೆ ಸಿದ್ಧವಾಯಿತು. ಕೆಲವರು ಅರ್ಧದಲ್ಲೇ ಬಿಡಲು ಬಯಸಿದಾಗಲೂ ತಂಡದ ಒಗ್ಗಟ್ಟು ಎಲ್ಲರನ್ನೂ ಫಿನಿಶ್ ಲೈನ್ ತಲುಪಿಸುವಂತೆ ಮಾಡಿತು. ಇದು ಆ ದಿನದ ಅತ್ಯುತ್ತಮ ಟೀಮ್-ಬಿಲ್ಡಿಂಗ್ ಆಕ್ಟಿವಿಟಿಯಾಗಿ ಮೂಡಿಬಂದಿತು.
- ಸ್ಕೈ ಸೈಕ್ಲಿಂಗ್ ಮತ್ತು ಜಿಪ್‌ಲೈನಿಂಗ್: ನೆಲದಿಂದ ಅತಿ ಎತ್ತರದಲ್ಲಿ ಕಟ್ಟಲಾದ ಕಿರಿದಾದ ಹಗ್ಗದ ಮೇಲೆ ಸೈಕಲ್ ಬ್ಯಾಲೆನ್ಸ್ ಮಾಡುವುದು ರೋಮಾಂಚನಕಾರಿಯಾಗಿತ್ತು. ಇನ್ನು ಹಸಿರಿನ ನಡುವೆ ಜಿಪ್‌ಲೈನಿಂಗ್ ಮಾಡುವುದು ನಾವು ಮರಗಳ ನಡುವೆ ಹಾರಾಡುವ ಹಕ್ಕಿಗಳಂತೆ ಭಾಸವಾಗುವಂತೆ ಮಾಡಿತು.
- ಹ್ಯೂಮನ್ ಫುಸ್‌ಬಾಲ್: ಸಾಹಸಗಳ ನಂತರ ತಂಪಾದ ನಿಂಬೆ ಪಾನಕ ಕುಡಿದು ರೀಚಾರ್ಜ್ ಆದ ನಾವು, ಫುಟ್‌ಬಾಲ್ ಪ್ರೇಮಿಗಳಾಗಿದ್ದರಿಂದ ನೇರವಾಗಿ ಈ ಅಖಾಡಕ್ಕೆ ಧಾವಿಸಿದೆವು. ನಾವು ಹಳದಿ ಮತ್ತು ಕಂದು ಎಂದು ಎರಡು ತಂಡಗಳಾಗಿ ವಿಭಜನೆಗೊಂಡೆವು. ಇಲ್ಲಿನ ನಿಯಮವೆಂದರೆ ರಾಡ್‌ಗಳನ್ನು ಎಂದಿಗೂ ಹಿಡಿದುಕೊಂಡಿರಬೇಕು! ಇದು ನಮ್ಮ ನಡುವಿನ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸುವ ಪಂದ್ಯವಅಗಿತ್ತು. ಪಂದ್ಯವು ತೀವ್ರ ಪೈಪೋಟಿಯಿಂದ ಕೂಡಿದ್ದು, ಕೊನೆಗೂ ಬಿದ್ದ ಒಂದು ಗೋಲು ಇಡೀ ಪಂದ್ಯಕ್ಕೆ ರೋಮಾಂಚಕ ಅಂತ್ಯ ನೀಡಿತು.

ಸೊಗಸಾದ ಭೋಜನ
ಬಿಸಿಲಿನ ಬೇಗೆಯಲ್ಲಿ ಅಷ್ಟೆಲ್ಲಾ ಮಜ ಮಾಡಿದ ನಂತರ, ನಮ್ಮ 'ಪೇಟ್ ಪೂಜೆ'ಗೆ ಸಮಯವಾಗಿತ್ತು. ಕಿಚನ್‌ನಿಂದ ಬರುತ್ತಿದ್ದ ತಾಜಾ ಮಾವಿನಕಾಯಿ ಮತ್ತು ಶುಂಠಿ-ಬೆಳ್ಳುಳ್ಳಿ ಮಸಾಲೆಗಳ ಸುವಾಸನೆಯು ನಮ್ಮ ಹಸಿವನ್ನು ಇನ್ನು ಹೆಚ್ಚಿಸಿತು. ವೆಜ್ ಹಾಗೂ ನಾನ್-ವೆಜ್ ಪ್ರಿಯರಿಗಾಗಿ ಬಫೆ ಶೈಲಿಯಲ್ಲಿ ಸಿದ್ಧವಾಗಿದ್ದ ಆ ರುಚಿಕರ ಊಟವನ್ನು ನಗುವಿನ ಅಲೆ ಹಾಗೂ ಹರಟೆಯೊಂದಿಗೆ ಸವಿದೆವು.
ಊಟದ ನಂತರ 'ನಿದ್ರಾ ದೇವಿ'ಯನ್ನು ದೂರವಿಡಲು ನಮ್ಮಲ್ಲಿ ಕೆಲವರು ವಿಶ್ರಾಂತಿ ಪಡೆಯಲು ವಿಶಾಲವಾದ ಸ್ವಿಮ್ಮಿಂಗ್ ಪೂಲ್‌ಗೆ ಧುಮುಕಿದರೆ, ಇನ್ನು ಕೆಲವು ಉತ್ಸಾಹಿಗಳು ನೇರವಾಗಿ ಕ್ರಿಕೆಟ್ ಮೈದಾನದ ಕಡೆಗೆ ಹೆಜ್ಜೆ ಹಾಕಿದರು. ರೆಸಾರ್ಟ್‌ನಲ್ಲಿ ಬಿರುಸಿನ ಸಂಗೀತದೊಂದಿಗೆ 'ರೈನ್ ಡ್ಯಾನ್ಸ್' ಮಾಡುವ ಸೌಲಭ್ಯವೂ ಇದೆ. ಪೂಲ್‌ನ ತಂಪಾದ ನೀರಿನಲ್ಲಿ ತೇಲಾಡಿದ ನಂತರ ನಾವೆಲ್ಲರೂ ಕಡ್ಡಾಯವಾದ ಟೀಮ್ ಫೊಟೋಗಾಗಿ ಮತ್ತೆ ಒಂದೆಡೆ ಸೇರಿದೆವು.
ಸಂಜೆ ಚಹಾ ಮತ್ತು ತಿಂಡಿ ಸವಿಯುತ್ತಾ, ಪ್ರತಿಯೊಬ್ಬರೂ ಆ ದಿನದ ತಮ್ಮ ನೆಚ್ಚಿನ ಕ್ಷಣಗಳನ್ನು ಹಂಚಿಕೊಂಡರು. ಶೀಘ್ರದಲ್ಲೇ ವಿದಾಯ ಹೇಳಿ ಮನೆಗೆ ಹೊರಡುವ ಸಮಯವೂ ಬಂದಿತು. ನಾವು ಮಾವಿನಕಾಯಿಗಳಿಂದ ತುಂಬಿದ ಬ್ಯಾಗ್‌ಗಳೊಂದಿಗೆ ಹಿಂತಿರುಗದಿದ್ದರೂ, ಸುಂದರ ಕ್ಷಣಗಳ ನೆನಪುಗಳನ್ನು ಹೊತ್ತು ತಂದೆವು. ಕಚೇರಿಯ ಒತ್ತಡದಿಂದ ಮುಕ್ತಿ ನೀಡಿ, ನಮ್ಮೊಳಗಿನ ಬಾಲ್ಯವನ್ನು ಮತ್ತೆ ಜಾಗೃತಗೊಳಿಸಲು ಸುಗ್ಗಿ ರೆಸಾರ್ಟ್ ಒಂದು ಅದ್ಭುತ ತಾಣವಾಗಿದೆ.
ದಾರಿ ಹೇಗೆ?
ಆನೇಕಲ್ ತಾಲೂಕಿನಲ್ಲಿರುವ ಈ ಜಾಗಕ್ಕೆ ಬಸ್ ಅಥವಾ ಕಾರಿನಲ್ಲಿ ಹೋಗಬಹುದು. ನೈಸ್ ರಸ್ತೆಯ ಮೂಲಕ ಕನಕಪುರ ರಸ್ತೆ ಎಕ್ಸಿಟ್ ಕಡೆಗೆ ಸಾಗಿ. ಅಲ್ಲಿಂದ ಹಾರೋಹಳ್ಳಿ ಮತ್ತು ಆನೇಕಲ್ ಸಂಪರ್ಕಿಸುವ ರಸ್ತೆಯ ಮೂಲಕ ರೆಸಾರ್ಟ್ ಅನ್ನು ಸುಲಭವಾಗಿ ತಲುಪಬಹುದು.