ಡಾಲ್ಫಿನ್..ಪ್ರಪಂಚದಲ್ಲಿ ಕಂಡು ಬರುವ ಅತಿ ಬುದ್ಧಿವಂತ ಸಸ್ತನಿಗಳು ಮಾತ್ರವಲ್ಲ ಸ್ನೇಹ ಜೀವಿಗಕೂ ಕೂಡ. ಕೊಕ್ಕಿನಂತೆ ಚಾಚಿಕೊಂಡಿರುವ ಇವುಗಳ ಉದ್ದನೆಯ ಮೂತಿ, ವಿಶೇಷವಾಗಿ ಆಕರ್ಷಿಸುವ ಮೈಬಣ್ಣ ಆಬಾಲವೃದ್ಧರನ್ನೂ ರೋಮಾಂಚನಗೊಳಿಸುತ್ತವೆ. ಮತ್ತೆ ಮತ್ತೆ ನೋಡಬೇಕು, ಅವುಗಳ ತುಂಟಾಟವನ್ನು ಕಣ್ತುಂಬಿಕೊಳ್ಳಬೇಕು ಅನ್ನಿಸುವಂತೆ ಮಾಡುತ್ತವೆ. ಹೆಚ್ಚಾಗಿ ಅನ್ಯ ರಾಜ್ಯಗಳಲ್ಲೋ ಅಥವಾ ದೇಶಗಳಲ್ಲಿ ಮಾತ್ರವೇ ಡಾಲ್ಫಿನ್‌ ಕಾಣಸಿಗೋದು. ಆದರೆ ಡಾಲ್ಫಿನ್‌ಗಳ ಆಕರ್ಷಕವಾದ ಜಿಗಿತವನ್ನು ಕಣ್ತುಂಬಿಕೊಳ್ಳಲು ನೀವು ಬೇರೆ ರಾಜ್ಯಕ್ಕೆ ಹೋಗಬೇಕಾಗಿಲ್ಲ.

ಸಮುದ್ರದ ತಟದಲ್ಲಿ ಕಾಣಸಿಗುವ ಸಣ್ಣಪುಟ್ಟ ಸಮುದ್ರ ಜೀವಿಗಳನ್ನು ನೋಡುವುದೇ ಮನಸ್ಸಿಗೆ ಮುದ ನೀಡುತ್ತದೆ. ಅಂಥದ್ದರಲ್ಲಿ ಸಮುದ್ರ ತೀರದಿಂದ ಹಾಗೇ ಸ್ವಲ್ಪ ಮುಂದಕ್ಕೆ ತೆರಳಿದಾಗ ಅಲ್ಲೆಲ್ಲೋ ನಡುವೆ ಮಿಂಚಿ ಮರೆಯಾಗುವ, ಶೀಘ್ರಗತಿಯಲ್ಲಿ ಸೊಗಸಾಗಿ ಈಜುವ ಡಾಲ್ಫಿನ್ಗಳನ್ನು ಸಮೀಪದಿಂದ ನೋಡುವಂತಾದರೆ..? ಹೌದು , ಕರ್ನಾಟಕದ ಬೆರಳೆಣಿಕೆಯಷ್ಟು ಸಮುದ್ರಗಳಲ್ಲಿ ಡಾಲ್ಫಿನ್‌ಗಳನ್ನು ಕಾಣಬಹುದು. ಕುಟುಂಬದ ಜೊತೆ ತೆರಳಿ ವಿವಿಧ ಜಾತಿಯ ಡಾಲ್ಫಿನ್ಗಳನ್ನು ನೋಡುವ ಯೋಚನೆ ನಿಮಗಿದ್ದರೆ ತಪ್ಪದೇ ಈ ತಾಣಗಳಿಗೊಮ್ಮೆ ಭೇಟಿ ಕೊಡಿ.

ದೇವ್ಬಾಗ್‌ ಬೀಚ್ :

ಕರ್ನಾಟಕದ ಬೆಸ್ಟ್‌ ಡಾಲ್ಫಿನ್‌ ಪ್ಲೇಸಸ್‌ ಯಾವುದು ಅಂತ ಯೋಚನೆ ಮಾಡುವವರಿಗೆ ಕುಮಟಾದ ದೇವ್ಬಾಗ್‌ ಬೀಚ್‌ ಮೊದಲ ಆಯ್ಕೆಯಾಗಿರಲಿ. ಕಾರವಾರದಿಂದ ಸ್ವಲ್ಪವೇ ದೂರದಲ್ಲಿ, ಗೋವಾದಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿರುವ ಸಣ್ಣದಾದ ಹಾಗೂ ಪ್ರತ್ಯೇಕ ದ್ವೀಪವಿದು. ಇಲ್ಲಿ ಓಪನ್‌ ಸೀ ಬೋಟಿಂಗ್‌ ರೈಡ್ಸ್‌ನಲ್ಲಿ ಸಮುದ್ರದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಡಾಲ್ಫಿನ್ಗಳ ತುಂಟಾಟಗಳನ್ನು ಎಂಜಾಯ್‌ ಮಾಡಬಹುದು.

ಬೆಸ್ಟ್‌ ಟೈಮ್:‌ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ

ದರ: ಬೋಟ್‌ ರೈಡ್‌ ಮಾಡಲು 800 - 1500 ರೂಪಾಯಿ.

ಓಂ ಬೀಚ್:‌

ಡಾಲ್ಫಿನ್‌ಗಳನ್ನು ಸಮೀಪದಿಂದ ನೋಡಬಯಸುವ ಪ್ರವಾಸಿಗರು ಗೋಕರ್ಣಕ್ಕೊಮ್ಮೆ ಭೇಟಿ ಕೊಡಲೇ ಬೇಕು. ಗೋಕರ್ಣ ಪ್ರಮುಖ ಬೀಚ್‌ ಎಂದೇ ಹೆಸರು ಪಡೆದಿರುವ ಓಂ ಬೀಚ್‌ನಲ್ಲಿ ಬೋಟ್‌ ಪ್ರಯಾಣ ಪ್ರಾರಂಭಿಸಿ, ಪ್ಯಾರಡೈಸ್‌ ಬೀಚ್‌, ಹಾಫ್‌ ಮೂನ್‌ ಬೀಚ್‌ ಸೇರುವ ಸ್ಥಳದಲ್ಲಿ ಡಾಲ್ಫಿನ್‌ಗಳ ದರ್ಶನವಾಗುತ್ತದೆ.

ಬೆಸ್ಟ್‌ ಟೈಮ್:‌ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ

ದರ: ಬೋಟ್‌ ರೈಡ್‌ ಮಾಡಲು 1000 - 1500 ರೂಪಾಯಿ.

ಸೇಂಟ್‌ ಮೇರೀಸ್‌ ದ್ವೀಪ:‌

ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ಕಿನಾರೆಯಿಂದ ಕೆಲವೇ ಕಿಲೋ ಮೀಟರ್‌ ದೂರದಲ್ಲಿರುವ ಸೇಂಟ್‌ ಮೇರೀಸ್‌ ದ್ವೀಪವು ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿ ಬೋಟ್‌ ಮೂಲಕ ದ್ವೀಪವನ್ನು ಸೇರುವ ವೇಳೆ ಅಪರೂಪದಲ್ಲಿ ಡಾಲ್ಫಿನ್‌ಗಳು ಕಾಣಿಸಿಕೊಂಡು ಪ್ರವಾಸಿಗರನ್ನು ಪುಳಕಗೊಳಿಸುತ್ತವೆ.

ಬೆಸ್ಟ್‌ ಟೈಮ್:‌ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ

ದರ: ಬೋಟ್‌ ರೈಡ್‌ ಮಾಡಲು 400 ರೂಪಾಯಿ

ಅಘನಾಶಿನಿ ರಿವರ್‌ ಎಸ್ಚುವರಿ:

ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ, ಕುಮಟಾ ಮೂಲಕ ಹರಿದು ಅರಬ್ಬಿ ಸಮುದ್ರವನ್ನು ಸೇರುವ ಪವಿತ್ರ ನದಿಯಿದು. ಇಲ್ಲಿ ಅದೃಷ್ಟವಿದ್ದರೆ ಬೆಳಗ್ಗಿನ ಸಮಯದಲ್ಲಿ ಡಾಲ್ಫಿನ್ಗಳನ್ನು ನೋಡುವ ಅವಕಾಶ ನಿಮ್ಮದಾಗಬಹುದು.

ಬೆಸ್ಟ್‌ ಟೈಮ್:‌ ನವೆಂಬರ್‌ನಿಂದ ಫೆಬ್ರವರಿ

ದರ: ಬೋಟ್‌ ರೈಡ್‌ ಮಾಡಲು 600 - 1000 ರೂಪಾಯಿ

Dolphin_Spotting-1_result-1675743490195

ಕೋಡಿ ಬೀಚ್:

ಕುಂದಾಪುರದಲ್ಲಿರುವ ಕೋಡಿ ಬೀಚ್‌ ಹಿನ್ನೀರು ಹಾಗೂ ಸಮುದ್ರ ಸೇರುವ ಡೆಲ್ಟಾ ಪಾಯಿಂಟ್‌ನಲ್ಲಿ ಡಾಲ್ಫಿನ್‌ಗಳನ್ನು ಕಾಣಲುಸಾಧ್ಯ. ಬೆಳಗ್ಗೆ 8ರಿಂದ 11ಗಂಟೆಯ ಅವಧಿಯಲ್ಲಿ ಹೆಚ್ಚಿಗೆ ಡಾಲ್ಫಿನ್‌ಗಳ ಕಾಣಸಿಗುತ್ತಿದ್ದು, ಜೂನ್‌ನಿಂದ ಅಗಸ್ಟ್‌ ವರೆಗೆ ಬೋಟಿಂಗ್‌ ಸೌಲಭ್ಯವಿರುವುದಿಲ್ಲ.

ಬೆಸ್ಟ್‌ ಟೈಮ್:‌ ನವೆಂಬರ್‌ನಿಂದ ಫೆಬ್ರವರಿ

ದರ: ಬೋಟ್‌ ರೈಡ್‌ ಮಾಡಲು 800-1200 ರೂಪಾಯಿ

ಮುರುಡೇಶ್ವರ:

ಡಾಲ್ಫಿನ್‌ಗಳನ್ನು ಕಣ್ತುಂಬಿಕೊಳ್ಳಲು ಕರ್ನಾಟಕದ ಮುರುಡೇಶ್ವರಕ್ಕೊಮ್ಮೆ ಭೇಟಿ ಕೊಟ್ಟು ನೋಡಿ. ಇಲ್ಲಿ ಬೋಟ್‌ ರೈಡ್‌ ಮಾಡುವ ಸಂದರ್ಭದಲ್ಲಿ ಬೋಟಿನ ಆಸುಪಾಸಿನಲ್ಲಿ ಈಜುತ್ತಾ ಬರುವ ಡಾಲ್ಫಿನ್‌ಗಳು ಎಲ್ಲರೂ ಕೌತುಕವನ್ನು ಹುಟ್ಟುಹಾಕುತ್ತವೆ.

ಬೆಸ್ಟ್‌ ಟೈಮ್:‌ ಅಕ್ಟೋಬರ್‌ನಿಂದ ಮಾರ್ಚ್

ದರ: ಬೋಟ್‌ ರೈಡ್‌ ಮಾಡಲು 1888 ರೂಪಾಯಿ

ಕರ್ನಾಟಕದ ಈ ಪ್ರಮುಖ ಪ್ರವಾಸಿ ತಾಣಗಳಲ್ಲಿ ನೀವು ಡಾಲ್ಫಿನ್‌ಗಳನ್ನು ನೋಡುವ ಅವಕಾಶವಿದೆ. ಆದರೆ ನಿಮಗೆ ಗೊತ್ತಾ ? ಈ ತಾಣಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರವಾಸಿಗರು ಇರುವಾಗ ಅಂದರೆ ಜನಜಂಗುಳಿಯಿಲ್ಲದೆ, ಸದ್ದು ಗದ್ದಲವಿಲ್ಲದಿರುವಾಗ ಡಾಲ್ಫಿನ್‌ಗಳು ಸಮುದ್ರದ ಅಂಚಿನಲ್ಲೂ ಕಾಣಿಸಿಕೊಳ್ಳುತ್ತವಂತೆ. ಹಾಗೊಂದು ವೇಳೆ ಬಂದರೆ ಬೋಟ್‌ ರೈಡ್‌ಗೆ ಕೊಡುವ ದರವೂ ಉಳಿತಾಯವಾಗಬಹುದು. ಎಲ್ಲದಕ್ಕೂ ಅದೃಷ್ಟವಿರಬೇಕು. ಏನಂತೀರಿ..