ಕಾವೇರಿ ತೀರದಲ್ಲಿ ಕಳೆದುಹೋಗುವ ಖುಷಿ
ಗಾಳಿಬೋರೆಯಲ್ಲಿ ಸಂಜೆಯಾಗುತ್ತಿದ್ದಂತೆ ಶುರುವಾಗುವ ಕೊರಾಕಲ್ ವಿಹಾರ, ನಮ್ಮ ಪ್ರವಾಸದ ರೋಮಾಂಚನವನ್ನು ಇನ್ನಷ್ಟು ಹೆಚ್ಚಿಸಿತ್ತು. ನೀರಿನ ಮೇಲೆ ಮೆಲ್ಲನೆ ತೇಲುತ್ತಾ ಸಾಗುವಾಗ, ದಡದಲ್ಲಿ ಬಿಸಿಲು ಕಾಯಿಸುತ್ತಾ ಮಲಗಿದ್ದ ಒಂದೆರಡು ಮೊಸಳೆಗಳ ದರ್ಶನವೂ ಆಯಿತು. ಸುತ್ತಲೂ ಹಾರಾಡುವ ಬಗೆಬಗೆಯ ಪಕ್ಷಿಗಳು, ಅವುಗಳ ಚಿಲಿಪಿಲಿ ನಾದ, ಆಹಾ..
- ಚೈತ್ರಾ ಶ್ರೀನಿವಾಸ್
‘ದಟ್ಟ ಕಾಡಲ್ಲಿ ಜೊತೆ ಜೊತೆಯಾಗಿ ಕಳೆದು ಹೋಗೋಣ ಬರುವೆಯಾ...’ ಯಾರಾದರೂ ಹೀಗೆ ಕೇಳಿದರೆ, ಒಮ್ಮೆ ಸಹ ಮರು ಯೋಚಿಸದೆ, ಹೊರಟು ನಿಲ್ಲುವಷ್ಟು ಸುಂದರವಾದ ತಾಣವೊಂದು ನಮ್ಮ ಕಾವೇರಿ ತೀರದಲ್ಲಿದೆ. ಅದೇ ಗಾಳಿಬೋರೆ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್.
ಇದನ್ನೂ ಓದಿ: ವಾಸ್ತವ್ಯಕ್ಕಿದೆ ಜೆಎಲ್‌ಆರ್‌ನ ಹಂಪಿ ಹೆರಿಟೇಜ್ & ವೈಲ್ಡರ್‌ನೆಸ್ ರೆಸಾರ್ಟ್
ನೆಚ್ಚಿನ ನಟ ಪುನೀತ್ ಅಭಿನಯದ ಪೃಥ್ವಿ ಚಿತ್ರದ ಹಾಡಿನ ಈ ಸಾಲು ಪದೇ ಪದೆ ನೆನಪಾಗಿದ್ದು ಕಾಕತಾಳೀಯವಂತೂ ಅಲ್ಲ. ನನ್ನ ಜೀವನಸಂಗಾತಿಯ ಜನ್ಮದಿನ ಸೆಲೆಬ್ರೇಷನ್‌ಗೆ ಇದಕ್ಕಿಂತ ಚೆಂದದ ಜಾಗ ಆ ಕ್ಷಣಕ್ಕಂತೂ ನನಗೆ ಹೊಳೆಯಲಿಲ್ಲ. ಹೀಗಾಗಿ ಪತಿಯ ಬರ್ತ್ ಡೇ ಆಚರಿಸಲು ನಾನು ಮತ್ತು ಮಗು ಆಯ್ದುಕೊಂಡದ್ದು ಗಾಳಿಬೋರೆ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್. ತನ್ನ ಅತ್ಯದ್ಭುತ ಪ್ರಕೃತಿ ಸೌಂದರ್ಯ, ಶಾಂತಯುತ ವಾತಾವರಣ ಮತ್ತು ಸುಸಜ್ಜಿತ ವ್ಯವಸ್ಥೆಗಳಿಂದ ನಮ್ಮ ದಿನವನ್ನು ಚೆಂದವಾಗಿಸಿದ್ದು ಜೆಎಲ್‌ಆರ್‌ನ ಆತಿಥ್ಯ.
ಚಾಲನಾ ಕೌಶಲ್ಯವನ್ನು ಪ್ರಶ್ನಿಸುವ ಹಾದಿ!
ಇಲ್ಲಿಗೆ ತಲುಪುವ ದಾರಿಯೇ ಒಂದು ದೊಡ್ಡ ಸಾಹಸ. ಸಿಟಿಯಲ್ಲಿ ಡ್ರೈವ್ ಮಾಡಿ ನಾವು ಮಹಾನ್ ಎಕ್ಸ್‌ಪರ್ಟ್ ಚಾಲಕರು ಎಂಬ ಅಹಮ್ಮಿನಲ್ಲಿರುತ್ತೇವೆ. ಆ ಅಹಂಕಾರವನ್ನು ಈ ರಸ್ತೆಗಳು ಒಂದೇ ಏಟಿಗೆ ಹೊಡೆದು ಹಾಕುತ್ತವೆ. ಆದರೆ, ಒರಟು ಹಾದಿ, ತಿರುವುಗಳೆಲ್ಲವನ್ನೂ ದಾಟಿ ಕಾಡಿನೊಳಗೆ ಪ್ರವೇಶಿಸುತ್ತಿದ್ದಂತೆ, ನಮ್ಮೆಲ್ಲಾ ಆಯಾಸವನ್ನು ಪ್ರಕೃತಿಯ ತಂಪು ಗಾಳಿ ಅರೆಕ್ಷಣದಲ್ಲಿ ಮರೆಸಿಬಿಡುತ್ತದೆ. ಸಾಹಸವನ್ನು ಇಷ್ಟಪಡುವವರಿಗೆ ಈ ಪ್ರಯಾಣದ ಆರಂಭವೇ ಒಂದು ಥ್ರಿಲ್.

ಕಾಲವೇ ಸ್ತಬ್ಧವಾದ ಕ್ಷಣ
ರೆಸಾರ್ಟ್ ತಲುಪಿ, ಅಲ್ಲಿನ ರುಚಿಕರವಾದ ಭೋಜನ ಸವಿದ ಮೇಲೆ ಕಾವೇರಿ ನದಿ ತೀರದಲ್ಲಿರುವ ಹ್ಯಾಮಕ್ (ಜೋಕಾಲಿ) ಮೇಲೆ ಮೈಚಾಚಿದರೆ ಸಿಗುವ ಸುಖಕ್ಕೆ ಬೆಲೆಯೇ ಇಲ್ಲ. ಆ ಕ್ಷಣದಲ್ಲಿ ಬದುಕು ಅಲ್ಲಿಗೇ ಸ್ತಬ್ಧವಾದಂತೆ ಭಾಸವಾಗಿತ್ತು. ದಟ್ಟ ಕಾಡಿನ ನಡುವೆ, ಹರಿಯುವ ಕಾವೇರಿಯ ಜುಳುಜುಳು ನಾದ, ಮರಗಳ ಎಲೆಗಳ ಪಿಸುಮಾತು, ಇವೆಲ್ಲವೂ ಸೇರಿ ಮನಸಿಗೆ ಅವರ್ಣನೀಯ ನೆಮ್ಮದಿ ನೀಡಿತು.
ಪ್ರಕೃತಿಯ ಸುಮಧುರ ಸಂಗೀತ
ಸಂಜೆಯಾಗುತ್ತಿದ್ದಂತೆ ಶುರುವಾಗುವ ಕೊರಾಕಲ್ ವಿಹಾರ, ನಮ್ಮ ಪ್ರವಾಸದ ರೋಮಾಂಚನವನ್ನು ಇನ್ನಷ್ಟು ಹೆಚ್ಚಿಸಿತ್ತು. ನೀರಿನ ಮೇಲೆ ಮೆಲ್ಲನೆ ತೇಲುತ್ತಾ ಸಾಗುವಾಗ, ದಡದಲ್ಲಿ ಬಿಸಿಲು ಕಾಯಿಸುತ್ತಾ ಮಲಗಿದ್ದ ಒಂದೆರಡು ಮೊಸಳೆಗಳ ದರ್ಶನವೂ ಆಯಿತು. ಸುತ್ತಲೂ ಹಾರಾಡುವ ಬಗೆಬಗೆಯ ಪಕ್ಷಿಗಳು, ಅವುಗಳ ಚಿಲಿಪಿಲಿ ನಾದ, ಆಹಾ.. ಅದು ನಿಜಕ್ಕೂ ಯಾವುದೇ ಆಧುನಿಕ ವಾದ್ಯಗಳು ಸೃಷ್ಟಿಸಲಾಗದ ಅಪ್ಪಟ ನೈಸರ್ಗಿಕ ಸುಮಧುರ ಸಂಗೀತ. ಅಲ್ಲಿಂದ ಪ್ರತಿಯೊಂದು ಕ್ಷಣವೂ ಕ್ಯಾಮೆರಾ ಕಣ್ಣಿಗಿಂತ ಮನಸಿನ ಕ್ಯಾನ್ವಾಸ್ ಮೇಲೆ ಅಚ್ಚಳಿಯದೆ ಉಳಿಯುವಂಥ ದೃಶ್ಯಗಳು.

ಕಗ್ಗತ್ತಲಲ್ಲಿ ಕ್ಯಾಂಪ್‌ಫೈರ್
ಕತ್ತಲು ಆವರಿಸುತ್ತಿದ್ದಂತೆ ನದಿ ತೀರದಲ್ಲಿ ಹಾಕಿದ ಕ್ಯಾಂಪ್‌ಫೈರ್ ಈ ಪ್ರವಾಸದ ಅತ್ಯಂತ ಮರೆಯಲಾಗದ ಕ್ಷಣ. ಸುತ್ತಲೂ ಕಗ್ಗತ್ತಲು, ತಂಪಾದ ವಾತಾವರಣದಲ್ಲಿ ಬೆಂಕಿಯ ಕಾವು. ಅಲ್ಲಿ ಬೇರೇನೂ ಇರಲಿಲ್ಲ; ಕೇವಲ ನಾವು, ಆ ಕ್ಯಾಂಪ್‌ಫೈರ್ ಮತ್ತು ನಮ್ಮನ್ನು ಆವರಿಸಿಕೊಂಡಿದ್ದ ವಿಶಾಲವಾದ ಪ್ರಕೃತಿ. ಆ ಮೌನ ಮತ್ತು ಏಕಾಂತ ನೀಡುವ ಅನುಭವವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ.
ಡಿಜಿಟಲ್ ಜಗತ್ತಿನಿಂದ ಮುಕ್ತಿ
ಗಾಳಿಬೋರೆಯ ಮತ್ತೊಂದು ಪ್ರಮುಖ ಆಕರ್ಷಣೆ ಅಥವಾ ದೇವರು ಕರುಣಿಸಿದ ವರ ಎಂದರೆ, ಇಲ್ಲಿ ಮೊಬೈಲ್ ನೆಟ್‌ವರ್ಕ್ ಇರುವುದಿಲ್ಲ! ಸದಾ ವಾಟ್ಸಾಪ್, ಇಮೇಲ್, ಸೋಷಿಯಲ್ ಮೀಡಿಯಾ ಎಂದು ಮುಳುಗಿರುವ ನಮಗೆ ಈ 'ನೋ ನೆಟ್‌ವರ್ಕ್ ಝೋನ್' ನಿಜಕ್ಕೂ ಒಂದು ಆಶೀರ್ವಾದ. ತಮ್ಮದೇ ಆದ ಏಕಾಂತವನ್ನು ಇಷ್ಟಪಡುವವರಿಗೆ, ಯಾವುದೇ ಡಿಜಿಟಲ್ ಅಡಚಣೆಯಿಲ್ಲದೆ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯಲು, ಅಥವಾ ಕೇವಲ ತಮ್ಮೊಂದಿಗೆ ತಾವು ಸಮಯ ಕಳೆಯಲು ಇದಕ್ಕಿಂತ ಉತ್ತಮ ಜಾಗ ಬೇರೊಂದಿಲ್ಲ.
ಗಾಳಿಬೋರೆ ಜಂಗಲ್ ಲಾಡ್ಜ್‌ನ ಈ ಪಯಣ ದೈನಂದಿನ ಜಂಜಾಟಗಳಿಂದ ನಮ್ಮನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಿ, ಹೊಸ ಚೈತನ್ಯವನ್ನು ತುಂಬುವ, ರೋಮಾಂಚಕ ಹಾಗೂ ಪುನಶ್ಚೇತನಗೊಳಿಸುವ ಅದ್ಭುತ ಅನುಭವ. ಪ್ರಕೃತಿಯನ್ನು ಪ್ರೀತಿಸುವ, ಪರಿಸರಕ್ಕೆ ಧಕ್ಕೆಯಾಗದಂತೆ ಅದರ ಸೌಂದರ್ಯವನ್ನು ಆರಾಧಿಸುವ ಪ್ರತಿಯೊಬ್ಬರೂ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ತಾಣವಿದು. ಬೇಸಗೆಯ ತಾಪಮಾನ ಅತಿಯಾಗಿರುವುದರಿಂದ ಬೇರೆ ಸೀಸನ್‌ನಲ್ಲಿ ಈ ಜಾಗ ಇನ್ನಷ್ಟು ಅದ್ಭುತವಾಗಿರಬಹುದು ಎಂಬುದು ನನ್ನ ಅನಿಸಿಕೆ.