Tuesday, July 28, 2026
Tuesday, July 28, 2026

ಅಡ್ವೆಂಚರ್ ಟೂರಿಸಂನ ಮೇಲೆ ಬೇಕಾಗಿದೆ ಹೆಚ್ಚಿನ ನಿಗಾ

ಸಾಹಸ ಕೃತ್ಯಗಳಲ್ಲಿ ಪಾಲ್ಗೊಳ್ಳಲು ಪ್ರವಾಸಕ್ಕೆ ಹೋಗುವವರ ಸಂಖ್ಯೆ ಕಳೆದ ಕೆಲವು ವರ್ಷಗಳಲ್ಲಿ ತೀವ್ರವಾಗಿ ಮೇಲೇರುತ್ತಿರುವ ಪ್ರಮುಖ ಕಾರಣ ಯೂಟ್ಯೂಬ್ ವಿಡಿಯೋಗಳು ಮತ್ತು ಟ್ರಾವೆಲ್ ವ್ಲಾಗರ್‌ಗಳು ಇವಕ್ಕೆ ಕೊಡುತ್ತಿರುವ ಹೆಚ್ಚಿನ ಪಬ್ಲಿಸಿಟಿ. ಅಡ್ವೆಂಚರ್ ಟೂರಿಸಂ ವಲಯದಿಂದ 2025ರಲ್ಲಿ ವಿಶ್ವದ ಆದಾಯವು 465 ಬಿಲಿಯನ್ ಡಾಲರ್ ಇತ್ತು. 2033ರಷ್ಟರಲ್ಲಿ ಈ ಪ್ರಮಾಣವು 1765 ಬಿಲಿಯನ್ ಡಾಲರ್ ಮುಟ್ಟಬಹುದು ಎನ್ನುವ ಅಂದಾಜಿದೆ. ಯುರೋಪ್ ಖಂಡಗಳಲ್ಲಿರುವ ದೇಶಗಳು ಈ ಆದಾಯದ ಶೇ. 38ರಷ್ಟು ಗಳಿಸಿದರೆ ಭಾರತದ ಪ್ರಮಾಣ ಕೇವಲ ಶೇ. 0.05ರಷ್ಟು.

  • ಡಿ.ವಿ.ಗುರುಪ್ರಸಾದ್‌

ನಾನು ಪತ್ನಿಯೊಡನೆ 2023ರಲ್ಲಿ ಮಲೇಷಿಯಾ ದೇಶದ ಕೋಟಾ ಕಿನಾಬಾಲುವಿಗೆ ಹೋಗಿದ್ದೆ. ಆ ನಗರಕ್ಕೆ ಹತ್ತಿರವಿರುವ ನಾಲ್ಕು ದ್ವೀಪಗಳು ಅತಿ ಸುಂದರ ಪ್ರವಾಸಿ ತಾಣಗಳು. ಅಲ್ಲಿಗೆ ಸ್ಪೀಡ್ ಬೋಟ್‌ನಲ್ಲಿಯೇ ಹೋಗಬೇಕು. ಆ ದಿನ ನಮಗೆ ಸರ್ಕಾರಿ ಸ್ಪೀಡ್ ಬೋಟ್ ಸಿಗದ ಕಾರಣ ನಾವಿಬ್ಬರೂ ಖಾಸಗಿ ಬೋಟ್ ಒಂದರಲ್ಲಿ ಹೋಗಬೇಕಾಯಿತು. ಒಂದು ದ್ವೀಪದಲ್ಲಿ ಸಾಹಸ ಕ್ರೀಡೆಗಳಾದ ಸ್ಕೂಬಾ ಡೈವಿಂಗ್ ಮತ್ತು ಜೆಟ್ ಸ್ಕೀಯಿಂಗ್ ಮಾಡುತ್ತಿದ್ದರು. ನಾವು ಮಾಡಲಿಲ್ಲ.

ಇದನ್ನೂ ಓದಿ: ಸೆಕ್ಸ್ ಟೂರಿಸಂ-ಪ್ರವಾಸೋದ್ಯಮದ ಒಂದು ಕರಾಳ ರೂಪ

ಎಲ್ಲ ದ್ವೀಪಗಳನ್ನೂ ನೋಡಿಕೊಂಡು ಕಿನಾಬಾಲುವಿಗೆ ಮರಳುವಾಗ ಸಂಜೆಯಾಗುತ್ತ ಬಂದಿತ್ತು. ನಮ್ಮ ಪಯಣ ಇನ್ನೇನು ಮುಗಿಯಿತು ಎನ್ನುವಾಗ ನಮ್ಮ ಸ್ಪೀಡ್ ಬೋಟ್‌ನ ಎಂಜಿನ್ ಫೇಲ್ ಆಯಿತು. ನಮ್ಮ ದೋಣಿ ನಡು ಸಮುದ್ರದಲ್ಲಿ ನಿಂತು ಹೋಯಿತು. ಅಲೆಗಳ ರಭಸಕ್ಕೆ ಅದು ತರಗೆಲೆಯಂತೆ ಹೊಯ್ದಾಡತೊಡಗಿತು. ಸಮುದ್ರದ ನೀರು ಬೋಟಿನೊಳಗೆ ನಿಧಾನವಾಗಿ ತುಂಬತೊಡಗಿತು. ಎಷ್ಟೇ ಪ್ರಯತ್ನಿಸಿದರೂ ಬೋಟಿನಲ್ಲಿದ್ದ ಏಕೈಕ ನಾವಿಕನಿಗೆ ಬೋಟಿನ ಕಂಟ್ರೋಲ್ ಸಿಗಲೇ ಇಲ್ಲ. ನಾವಿಬ್ಬರೂ ಸತ್ತೇಹೋಗುತ್ತೇವೆ ಎಂದು ನಮಗೆ ಖಾತ್ರಿಯಾಯಿತು. ಇಬ್ಬರೂ ಭಗವಂತನ ಧ್ಯಾನವನ್ನು ಮಾಡತೊಡಗಿದೆವು. ನಮ್ಮ ಪ್ರಾರ್ಥನೆಗೆ ಉತ್ತರ ಸಿಕ್ಕಂತೆ ಅಲ್ಲಿಯೇ ಹೋಗುತ್ತಿದ್ದ ಇನ್ನೊಂದು ದೋಣಿ ನಮ್ಮ ಬಳಿಗೆ ಧಾವಿಸಿ ಬಂದಿತು. ನಮ್ಮಿಬ್ಬರನ್ನೂ ಆ ದೋಣಿಯಲ್ಲಿ ಹತ್ತಿಸಿಕೊಂಡ ಅದರ ನಾವಿಕರು ನಮ್ಮನ್ನು ಅಪಾಯದಿಂದ ಪಾರು ಮಾಡಿದರು. ʼಆ ಬೋಟಿಗೆ ಲೈಸನ್ಸ್ ಇಲ್ಲ, ನೀವು ಅದನ್ನೇಕೆ ಹತ್ತಿದಿರಿ?ʼ ಎಂದು ಅವರು ಕೇಳಿದಾಗ ನಾನು ಉತ್ತರನಿಲ್ಲದೆ ಮೂಕನಾದೆ. ಸಾಹಸ ಕ್ರೀಡೆಯಂತೆಯೇ ನಡೆದ ಆ ಘಟನೆಯನ್ನು ನೆನೆಸಿಕೊಂಡರೆ ಇನ್ನೂ ಮೈ ಜುಂ ಎನ್ನುತ್ತದೆ.

Untitled design - 2026-07-28T123814.761

2025ರಲ್ಲಿ ನಾನು ನನ್ನ ಕುಟುಂಬದ ಸದಸ್ಯರೊಂದಿಗೆ ಹಿಮಾಚಲ ಪ್ರದೇಶದ ಕುಲುಗೆ ಹೋಗಿದ್ದೆ. ಅಲ್ಲಿ ನನ್ನ ಮಕ್ಕಳು ಜಿಪ್ ಲೈನ್ ಎಂದು ಕರೆಯುವ ತಂತಿಯ ಸಾಹಸದಲ್ಲಿ ಪಾಲ್ಗೊಂಡರು. ಅವರೆಲ್ಲ ತಂತಿಯ ಮೇಲೆ ಚಲಿಸುತ್ತಿದ್ದಾಗ ನಮ್ಮ ಚಾಲಕ ನನಗೆ ಹೇಳಿದ್ದೇನೆಂದರೆ, ʼಸರ್, ಕಳೆದ ವಾರವಷ್ಟೇ ಕೇರಳ ರಾಜ್ಯದ ಯುವತಿಯೊಬ್ಬಳು ಇದೇ ರೀತಿ ಜಿಪ್ ಲೈನ್ ಮಾಡುತ್ತಿದ್ದಾಗ ತಂತಿ ಕಟ್ ಆಗಿ 30 ಅಡಿ ಕೆಳಗಿನ ಪ್ರಪಾತಕ್ಕೆ ಬಿದ್ದು ಸತ್ತೇ ಹೋದಳು. ಇದೇ ಊರಿನಲ್ಲಿ ವಿದೇಶಿ ಯುವಕನೊಬ್ಬ ಪ್ಯಾರಾ ಗ್ಲೈಡಿಂಗ್ ಮಾಡುವಾಗ ಹಗ್ಗ ಮುರಿದು ಆತ ಹಾಗೂ ಆತನ ಜತೆಗಿದ್ದ ನೇಪಾಳಿ ಶಿಕ್ಷಕ ಸತ್ತರು. ಕಳೆದ ಐದು ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ಪ್ಯಾರಾ ಗ್ಲೈಡಿಂಗ್ ಅವಘಡಗಳಲ್ಲಿ ಮೂವತ್ತು ಜನರು ಅಸುನೀಗಿದ್ದಾರೆ. ಆದರೂ ದೇಶ ವಿದೇಶಗಳ ಪ್ರವಾಸಿಗರು ಇಲ್ಲಿಗೆ ಬಂದು ಇಂಥ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಾರೆʼ ಎಂದ. ಆಗ ನನಗೆ ಇಂಥ ಸಾಹಸ ಕ್ರೀಡೆಗಳನ್ನು ಮಾಡುವಾಗ ಪ್ರವಾಸಿಗರು ಮೃತಪಟ್ಟ ಇಲ್ಲವೇ ಗಾಯಗೊಂಡ ಹಲವಾರು ಘಟನೆಗಳು ನೆನಪಾದವು. ಆದರೆ ಎಲ್ಲ ಸಾಹಸಗಳಲ್ಲಿಯೂ ಅಪಘಾತಗಳ ರಿಸ್ಕ್ ಇದ್ದೇ ಇರುತ್ತದೆ, ಇದನ್ನು ಅರಿತೇ ನಾವು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುತ್ತೇವೆ ಎನ್ನುವುದೂ ನೆನಪಾಯಿತು.

ಏಕೆಂದರೆ ಅನಾದಿ ಕಾಲದಿಂದಲೂ ಮಾನವನಲ್ಲಿ ಸಾಹಸ ಪ್ರವೃತ್ತಿ ಇದೆ. ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಏವರೆಸ್ಟ್ ಶಿಖರವನ್ನು ಹತ್ತುವುದು, ಅಂಟಾರ್ಕ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳಿಗೆ ಪ್ರವಾಸ ಮಾಡುವುದು, ಆಲ್ಪ್ಸ್ ಪರ್ವತಗಳಲ್ಲಿ ಸ್ಕೀಯಿಂಗ್ ಮಾಡುವುದು, ಒಂದು ದೇಶದಿಂದ ಇಲ್ಲವೇ ಒಂದು ಖಂಡದಿಂದ ಇನ್ನೊಂದಕ್ಕೆ ಈಜುವುದು ಮುಂತಾದವುಗಳು ಥ್ರಿಲ್ ಕೊಡುತ್ತವೆ. ಅವುಗಳು ಡೇಂಜರಸ್ ಎಂದು ತಿಳಿದೂ ಅವನ್ನು ಯಶಸ್ವಿಯಾಗಿ ಪೂರೈಸಲು ಸಾಹಸಿ ಪ್ರವೃತ್ತಿಯ ಜನರು ಮುಗಿಬೀಳುತ್ತಾರೆ.

ಸಾಹಸ ಕೃತ್ಯಗಳಲ್ಲಿ ಪಾಲ್ಗೊಳ್ಳಲು ಪ್ರವಾಸಕ್ಕೆ ಹೋಗುವವರ ಸಂಖ್ಯೆ ಕಳೆದ ಕೆಲವು ವರ್ಷಗಳಲ್ಲಿ ತೀವ್ರವಾಗಿ ಮೇಲೇರುತ್ತಿರುವ ಪ್ರಮುಖ ಕಾರಣ ಯೂಟ್ಯೂಬ್ ವಿಡಿಯೋಗಳು ಮತ್ತು ಟ್ರಾವೆಲ್ ವ್ಲಾಗರ್‌ಗಳು ಇವಕ್ಕೆ ಕೊಡುತ್ತಿರುವ ಹೆಚ್ಚಿನ ಪಬ್ಲಿಸಿಟಿ. ಅಡ್ವೆಂಚರ್ ಟೂರಿಸಂ ವಲಯದಿಂದ 2025ರಲ್ಲಿ ವಿಶ್ವದ ಆದಾಯವು 465 ಬಿಲಿಯನ್ ಡಾಲರ್ ಇತ್ತು. (ಒಂದು ಬಿಲಿಯನ್ ಡಾಲರ್‌ಗೆ ಅಂದಾಜು 9256 ಕೋಟಿ ರು.ಗಳು). 2033ರಷ್ಟರಲ್ಲಿ ಈ ಪ್ರಮಾಣವು 1765 ಬಿಲಿಯನ್ ಡಾಲರ್ ಮುಟ್ಟಬಹುದು ಎನ್ನುವ ಅಂದಾಜಿದೆ. ಯುರೋಪ್ ಖಂಡಗಳಲ್ಲಿರುವ ದೇಶಗಳು ಈ ಆದಾಯದ ಶೇ. 38ರಷ್ಟು ಗಳಿಸಿದರೆ ಭಾರತದ ಪ್ರಮಾಣ ಕೇವಲ ಶೇ. 0.05ರಷ್ಟು. ನಮ್ಮ ದೇಶವು ಅಡ್ವೆಂಚರ್ ಟೂರಿಸಂ ವಲಯದಿಂದಲೇ ಕಳೆದ ವರ್ಷ 20 ಬಿಲಿಯನ್ ಡಾಲರ್‌ಗಳನ್ನು ಗಳಿಸಿದೆ.

ಅಡ್ವೆಂಚರ್ ಟೂರಿಸಂನ ಚಟುವಟಿಕೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಅವೇನೆಂದರೆ ಭೂಮಿಯ ಮೇಲಿನ ಚಟುವಟಿಕೆಗಳಾದ ಟ್ರೆಕ್ಕಿಂಗ್, ಕ್ಯಾಂಪಿಂಗ್, ರಾಕ್ ಕ್ಲೈಂಬಿಂಗ್, ಮೌಂಟೇನಿಯರಿಂಗ್, ಸ್ಕೀಯಿಂಗ್, ಸ್ನೋ ಬೋರ್ಡಿಂಗ್, ಬಂಜಿ ಜಂಪಿಂಗ್, ಡ್ಯೂನ್ ಬ್ಯಾಷಿಂಗ್ ಮುಂತಾದವು. ಎರಡನೆಯದು ನೀರ ಮೇಲಿನ ಚಟುವಟಿಕೆಗಳಾದ ಸ್ಕೂಬಾ ಡೈವಿಂಗ್, ವೈಟ್ ವಾಟರ್ ರಾಫ್ಟಿಂಗ್, ಪ್ಯಾರಾ ಸೇಲಿಂಗ್, ಜೆಟ್ ಸ್ಕೀಯಿಂಗ್, ಕಯಾಕಿಂಗ್, ಕ್ಯಾನೋಯಿಂಗ್ ಮುಂತಾದವು. ಆಗಸದ ಮೇಲಿನ ಚಟುವಟಿಕೆಗಳಾದ ಪ್ಯಾರಾ ಗ್ಲೈಡಿಂಗ್, ಸ್ಕೈ ಡೈವಿಂಗ್, ಹಾಟ್ ಏರ್ ಬಲೂನಿಂಗ್ ಇತ್ಯಾದಿ ಮೂರನೆಯ ವಿಭಾಗಕ್ಕೆ ಸೇರುತ್ತವೆ.

Untitled design - 2026-07-28T123828.769

ಭಾರತದಲ್ಲಿ ಜಮ್ಮು-ಕಾಶ್ಮೀರ, ಲಡಾಖ್‌, ಹಿಮಾಚಲ ಪ್ರದೇಶ, ಉತ್ತರಾಖಂಡ, ಹೃಷಿಕೇಶ, ಕರ್ನಾಟಕ, ಗೋವಾ, ಮೇಘಾಲಯ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಸಿಕ್ಕಿಂ, ಅಂಡಮಾನ್ ನಿಕೋಬಾರ್ ಮುಂತಾದವುಗಳು ಅಡ್ವೆಂಚರ್ ಟೂರಿಸಂನಿಂದ ಹೆಚ್ಚಿನ ಆದಾಯವನ್ನು ಗಳಿಸುತ್ತಿವೆ. ಟ್ರೆಕ್ಕಿಂಗ್ ಮತ್ತು ಕ್ಯಾಂಪಿಂಗ್ ಇವುಗಳಲ್ಲಿ ಹೆಚ್ಚಿನ ರಿಸ್ಕ್ ಇಲ್ಲದಿರುವುದರಿಂದ ಈ ವಲಯವು ಶೇ. 69ರಷ್ಟು ಸಾಹಸಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಯುವಕ ಯುವತಿಯರು, ಹೊಸದಾಗಿ ಲಗ್ನವಾದವರು, ಒಂಟಿ ಮಹಿಳೆಯರು ಮತ್ತು ವಿದೇಶಿಯರು ಹೆಚ್ಚು ಸಾಹಸವಿರುವ ಕ್ರೀಡೆಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದಾರೆ.

ಸಾಹಸಕ್ರೀಡೆಗಳಲ್ಲಿ ಸಾವು ನೋವುಗಳ ರಿಸ್ಕ್ ಬಹಳವಾಗಿ ಇರುವುದರಿಂದ 2018ರಲ್ಲಿ ಭಾರತ ಸರಕಾರವು ಅಡ್ವೆಂಚರ್ ಸ್ಪೋರ್ಟ್ಸ್ ಅಸೋಸಿಯೇಷನ್ ಜತೆಗೂಡಿ ಭಾರತದಲ್ಲಿ ಸಾಹಸಕ್ರೀಡೆಗಳನ್ನು ಯಾವ ರೀತಿ ನಡೆಸಬೇಕು ಎನ್ನುವ ಬಗ್ಗೆ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇದರಲ್ಲಿ 30 ಸಾಹಸ ಕ್ರೀಡೆಗಳನ್ನು ಗುರುತಿಸಲಾಗಿದ್ದು ಟೂರ್ ಆಪರೇಟರ್‌ಗಳಿಗೆ ನೀತಿ ನಿಯಮಗಳನ್ನು ರಚಿಸಲಾಗಿದೆ. ಸಾಹಸ ಕ್ರೀಡೆಗಳನ್ನು ಏರ್ಪಾಟು ಮಾಡುವ ಪ್ರತಿಯೊಬ್ಬ ಟೂರ್ ಆಪರೇಟರ್ ಮೊದಲಿಗೆ ಸಂಬಂಧಪಟ್ಟ ಸರಕಾರಿ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಸಾಹಸ ಕ್ರೀಡೆಗಳಿಗಾಗಿ ಉಪಯೋಗಿಸುವ ವಿವಿಧ ಉಪಕರಣಗಳ ಸುರಕ್ಷತೆಯ ಬಗ್ಗೆ ಅವನ್ನು ಕಾಲಕಾಲಕ್ಕೆ ಸರಕಾರಿ ಅಧಿಕಾರಿಗಳ ತಪಾಸಣೆಗೆ ಒಳಪಡಿಸಬೇಕು. ಅವುಗಳ ಬಳಕೆಯ ಬಗ್ಗೆ ಲಾಗ್ ಬುಕ್ ಇಟ್ಟಿರಬೇಕು. ಸಾಹಸಕ್ರೀಡೆಯನ್ನು ಮಾಡುವಾಗ ಪ್ರವಾಸಿಗರ ಜತೆ ಹೋಗುವ ಗೈಡ್‌ಗಳು ನಿಗದಿತ ಸಂಸ್ಥೆಗಳಿಂದ ತರಬೇತಿಯನ್ನು ಪಡೆದಿರಬೇಕು. ತಮ್ಮೊಡನೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಟ್ಟುಕೊಂಡಿರಬೇಕು ಮತ್ತು ಸಿಪಿಆರ್ ಮುಂತಾದ ವಿಷಯಗಳಲ್ಲಿ ತರಬೇತಿಯನ್ನು ಹೊಂದಿರಬೇಕು. ಯಾವುದಾದರೂ ಅನಾಹುತ, ಅವಘಡ ಸಂಭವಿಸಿದರೆ ಯಾವ ಆಸ್ಪತ್ರೆಗೆ ಗಾಯಾಳುಗಳನ್ನು ಕರೆದುಕೊಂಡು ಹೋಗಬೇಕೆಂದು ಗೈಡ್‌ಗಳು ತಿಳಿದಿರಬೇಕು. ಸಾಹಸಕ್ರೀಡೆಗಳನ್ನು ಮಾಡಲು ಬರುವವರ ವಯಸ್ಸು, ಆರೋಗ್ಯ ಸ್ಥಿತಿ ಮುಂತಾದವುಗಳನ್ನು ಅರಿಯಲು ಪ್ರವಾಸಿಗರಿಗೆ ನಿಗದಿತ ಅರ್ಜಿ ಫಾರ್ಮ್‌ ಕೊಟ್ಟು ಅದನ್ನು ಭರ್ತಿಮಾಡಿದ ನಂತರವೇ ಅವರನ್ನು ಕ್ರೀಡೆಗಳಿಗೆ ಒಯ್ಯಬೇಕು. ಇದಲ್ಲದೇ ಅವರಿಗೆ ಏನಾದರೂ ಗಾಯ ಮತ್ತು ಸಾವು ಉಂಟಾದರೆ ಯಾವ ರೀತಿ ವಿಮೆಯನ್ನು ಪಡೆಯಬಹುದು ಎಂದೂ ಸಂಬಂಧಿಕರಿಗೆ ತಿಳಿಸಬೇಕಾಗುತ್ತದೆ.

ಆದರೆ ಈ ನೀತಿ ನಿಯಮಗಳು ಕೇವಲ ಕಾಗದದ ಮೇಲಷ್ಟೇ ಎಂದು ಸಾಹಸ ಕ್ರೀಡೆಗಳ ಆಪರೇಟರ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಹೇಳುತ್ತಾರೆ. ನೋಂದಾಯಿಸಿದ ಸಂಸ್ಥೆಗಳ ಚಟುವಟಿಕೆಗಳ ಬಗ್ಗೆ ಕಾಲಕಾಲಕ್ಕೆ ಯಾವ ಪರಿಶೀಲನೆಯೂ ನಡೆಯುತ್ತಿಲ್ಲ. ಈ ವಲಯದಲ್ಲಿ ಹೆಚ್ಚಿನ ಪೈಪೋಟಿ ಇರುವ ಕಾರಣ ಭದ್ರತೆಯ ಬಗ್ಗೆ ರಾಜಿ ಮಾಡಿಕೊಳ್ಳಲಾಗುತ್ತದೆ ಎನ್ನುತ್ತಾರೆ. ಇದೇ ಕಾರಣದಿಂದಾಗಿಯೇ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ. ಹೀಗಾಗಿ ಸಾಹಸ ಕ್ರೀಡೆಗಳಿಗೆ ಹೋಗುವ ಮುನ್ನ ಆ ಕ್ರೀಡೆಗಳಲ್ಲಿ ಉಪಯೋಗಮಾಡುವ ಸಾಮಗ್ರಿಗಳಾದ ಹೆಲ್ಮೆಟ್‌ಗಳು, ಲೈಫ್ ವೆಸ್ಟ್‌ಗಳು, ದೋಣಿಗಳು ಮುಂತಾದವು ಸುಸ್ಥಿತಿಯಲ್ಲಿದೆಯೇ ಎಂದು ಪ್ರವಾಸಿಗರೇ ಪರಿಶೀಲಿಸಬೇಕು. ಈ ಸಾಮಗ್ರಿಗಳ ತಪಾಸಣೆಯನ್ನು ಸರಕಾರಿ ಅಧಿಕಾರಿಗಳು ಮಾಡಿದ್ದಾರೆಯೇ ಎಂದು ಪರಿಶೀಲಿಸುವುದಲ್ಲದೆ ಗೈಡ್‌ಗಳು ತರಬೇತಿ ಹೊಂದಿದವರೇ ಇಲ್ಲವೇ ಎನ್ನುವುದನ್ನೂ ಪರೀಕ್ಷಿಸಬೇಕು. ಇದು ಜೀವನ್ಮರಣದ ಪ್ರಶ್ನೆಯಾಗಿರುವುದರಿಂದ ಈ ಬಗ್ಗೆ ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ.

Untitled design - 2026-07-28T123841.641

2026ರ ಫೆಬ್ರವರಿ ವೇಳೆಗೆ ಸ್ವದೇಶ ದರ್ಶನ ಸ್ಕೀಮ್ ಅಡಿಯಲ್ಲಿ ಭಾರತ ಸರಕಾರವು ಅಡ್ವೆಂಚರ್ ಪ್ರವಾಸವೂ ಸೇರಿದಂತೆ 2200 ಕೋಟಿ ರುಗಳ ಪ್ರಾಜೆಕ್ಟ್‌ಗಳಿಗೆ ಮಂಜೂರಾತಿ ನೀಡಿದೆ. ಆದರೆ ಅದು ಸುರಕ್ಷತೆಯ ಬಗ್ಗೆ ಹೆಚ್ಚಿನ ಆದ್ಯತೆಯನ್ನು ಕೊಡದೇ ಇರುವುದು ವಿಷಾದಕರ. ಸುರಕ್ಷತೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಯುರೋಪಿಯನ್ ದೇಶಗಳಲ್ಲದೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳು ಕೊಡುತ್ತವೆ. ನಮ್ಮ ನೆರೆಯಲ್ಲಿರುವ ನೇಪಾಳವೂ ಈ ವಿಷಯದಲ್ಲಿ ರಾಜಿಯನ್ನು ಮಾಡಿಕೊಳ್ಳುವುದಿಲ್ಲ. ಆದರೆ ದೇಶದಲ್ಲಿ ಅಡ್ವೆಂಚರ್ ಟೂರಿಸಂ ಅತಿ ವೇಗದಲ್ಲಿ ಬೆಳೆಯುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಂಥ ಕ್ರೀಡೆಗಳನ್ನು ನಡೆಸುತ್ತಿರುವ ಸಂಸ್ಥೆಗಳ ತಪಾಸಣೆಯನ್ನು ಕೂಲಂಕಷವಾಗಿ ಮಾಡುತ್ತಿಲ್ಲ. ಹೀಗಾಗಿ ಹೈ ರಿಸ್ಕ್ ಕ್ರೀಡೆಗಳಿಗೆ ಹೋಗುವ ಪ್ರವಾಸಿಗರು ಅತಿ ಎಚ್ಚರದಿಂದಿರಬೇಕಾಗಿದೆ. ಸಾಹಸಕ್ರೀಡೆಗಳಲ್ಲಿ ರಿಸ್ಕ್ ಇದ್ದೇ ಇರುವುದರಿಂದ ಥ್ರಿಲ್ ಮತ್ತು ಜೀವನದ ನಡುವೆ ಇರುವ ಏಕೈಕ ತಡೆಗೋಡೆ ಪ್ರವಾಸಿಗರು ತೆಗೆದುಕೊಳ್ಳುವ ನಿರ್ಧಾರವೇ ಆಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?