ಬೇರು: ಚಿಗುರಿದ ಕನಸು
ʻನಮ್ಮದು 'ಬೇರು' ಅರ್ಥಾತ್ ಮೂಲದಿಂದ ಚಿಗುರಿದ ಕನಸು. ಬೇರು ಎಂಬುದು ನಮ್ಮ ಜೀವನ ಶೈಲಿಗೆ ಹತ್ತಿರದಲ್ಲಿದೆ. ಯಾವಾಗ ನಮ್ಮ ಬೆಳವಣಿಗೆ ಬೇರಿನೊಂದಿಗೆ ಬೆಸೆದುಕೊಂಡಿರುತ್ತದೋ ಆಗ ಅದು ಬಲಿಷ್ಠವಾಗಿ ಬೆಳೆಯುತ್ತದೆ. ಈ ಮನೆಯನ್ನು ರಾಜ ಹಾಗೂ ಅರಮನೆಯ ಥೀಮ್‌ನಿಂದ ಮಾಡಿದ್ದೇವೆ. ಇಲ್ಲಿಗೆ ಬಂದವರು ನಿಸರ್ಗದ ನಡುವೆ ಇದ್ದು, ದೈನಂದಿನ ಗೋಜಲಿನಿಂದ ಬಿಡುಗಡೆ ಹೊಂದಿ, ಪ್ರಕೃತಿಯ ನಡುವೆ ಕಳೆದುಹೋಗಬೇಕು ಎಂಬುದು ನಮ್ಮ ಆಸೆ.
- ರವಿತೇಜ
ವರ್ಷಾಂತ್ಯ ಬರುತ್ತಿದ್ದಂತೆ ಕ್ರಿಸ್ಮಸ್ ರಜೆಯ ಸಮಯ ಬಂದಾಗ ಮಗನಿಗೂ ಶಾಲೆಗೆ ರಜಾ. ಕಚೇರಿಯಲ್ಲಿಯೂ ಬಿಡುವು ಪಡೆದದ್ದಾಯಿತು. ಮನೆಯವರೊಂದಿಗೆ ಎಲ್ಲಿಗಾದರೂ ಹೋಗಬೇಕೆಂದು ಯೋಚಿಸುವಾಗ ಕೆಲವು ದೇವಸ್ಥಾನಗಳು ನೆನಪಾದವು. ಹಾಗಂತ ಬರಿಯ ದೇವಸ್ಥಾನಗಳಿಗಾದರೆ ನಾನು ಬರುವುದಿಲ್ಲ ಎಂದ ಮಗರಾಯ. ಸರಿ, ದೇವಸ್ಥಾನ ಹಾಗೂ ಸಮುದ್ರದಂಡೆ ಇದ್ದಾರೆ ಎಲ್ಲರಿಗೂ ಆದೀತು ಎನ್ನುತ್ತಾ ಉಡುಪಿಯ ಕಡೆಗೆ ಹೋಗುವ ಮನಸಾಯಿತು. ಅತ್ತೆ ಮಾವಂದಿರೂ ಜತೆಗೆ ಬರುವ ಕಾರಣ ಹೋಟೆಲ್ ಬದಲಿಗೆ ಮನೆಯದ್ದೇ ವಾತಾವರಣ ಇದ್ದಾರೆ ಅವರಿಗೆ ಇಷ್ಟವಾದೀತು ಎಂದು ಹೋಂ ಸ್ಟೇ ಹುಡುಕುತ್ತಿದ್ದಾಗ ಕಣ್ಣಿಗೆ ಬಿದ್ದದ್ದೇ 'ಬೇರು: ಚಿಗುರಿದ ಕನಸು'. ಇದೊಂದು ವಿಭಿನ್ನವಾದ ಹೋಂ ಸ್ಟೇ ಎನ್ನಬಹುದು. ತನ್ನ ಕಲ್ಪನೆಯ ಕೂಸನ್ನು ನನಸಾಗಿಸಲು ಸಂಕಲ್ಪ ತೊಟ್ಟವರು ವೃತ್ತಿಯಲ್ಲಿ ಇಂಜಿನೀಯರ್ ಆಗಿರುವ, ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಜೈದೀಪ್. ಅವರ ವಿಶಿಷ್ಟ ಕಲ್ಪನೆಯನ್ನು ಸಾಕಾರಗೊಳಿಸಲು ಅವರ ಜತೆಗೆ ಮಿತ್ರರೂ ಕೈಜೋಡಿಸಿದ್ದಾರೆ. ಇಂಥ 'ಬೇರು' ಇರುವುದು ಉಡುಪಿಯ ಸಾಲಿಗ್ರಾಮದ ಸಮೀಪದಲ್ಲಿ.

ಇದರ ಪರಿಕಲ್ಪನೆಯ ಹಿಂದಿರುವ ಜೈದೀಪ್ ಅವರನ್ನೇ ಕೇಳಿದಾಗ ಅವರು ಹೀಗೆನ್ನುತ್ತಾರೆ: ʻನಮ್ಮದು 'ಬೇರು' ಅರ್ಥಾತ್ ಮೂಲದಿಂದ ಚಿಗುರಿದ ಕನಸು. ಬೇರು ಎಂಬುದು ನಮ್ಮ ಜೀವನ ಶೈಲಿಗೆ ಹತ್ತಿರದಲ್ಲಿದೆ. ಯಾವಾಗ ನಮ್ಮ ಬೆಳವಣಿಗೆ ಬೇರಿನೊಂದಿಗೆ ಬೆಸೆದುಕೊಂಡಿರುತ್ತದೋ ಆಗ ಅದು ಬಲಿಷ್ಠವಾಗಿ ಬೆಳೆಯುತ್ತದೆ. ಈ ಮನೆಯನ್ನು ರಾಜ ಹಾಗೂ ಅರಮನೆಯ ಥೀಮ್‌ನಿಂದ ಮಾಡಿದ್ದೇವೆ. ಇಲ್ಲಿಗೆ ಬಂದವರು ನಿಸರ್ಗದ ನಡುವೆ ಇದ್ದು, ದೈನಂದಿನ ಗೋಜಲಿನಿಂದ ಬಿಡುಗಡೆ ಹೊಂದಿ, ಪ್ರಕೃತಿಯ ನಡುವೆ ಕಳೆದುಹೋಗಬೇಕು ಎಂಬುದು ನಮ್ಮ ಆಸೆ. ಹೊಟ್ಟೆ ತುಂಬಾ ಊಟವಾದ ಮೇಲೆ ಚಾಪೆ/ಹೊದಿಕೆ/quilt ಮೇಲೆ ನಿದ್ದೆ ಮಾಡಿದಾಗ ದೇಹಕ್ಕೆ ಸಿಗುವ ವಿಶ್ರಾಂತಿ, ಶರೀರವನ್ನು ಬಹಳ ಅಚ್ಚುಕಟ್ಟಾಗಿ ಇಡುತ್ತದೆ. ನಮ್ಮಲ್ಲಿ ಬಂದವರಿಗೆ ಕಯಾಕಿಂಗ್ ಮಾಡಿದಾಗ ಮತ್ತು ಬೀಚಿನಲ್ಲಿ ಆಡಿದಾಗ ಉಂಟಾಗುವ ಹಿತವಾಗುವ ದಣಿವು, ಮನೆಗೆ ಬಂದು ಊಟಮಾಡಿದಾಗ ಆಗುವ ಸಮಾಧಾನ, ತದನಂತರ ನಿದ್ದೆಗೆ ಶರಣಾಗುವುದು ಒಂದು ವಿಭಿನ್ನ ದಿನಚರಿಯಂತೆ ಭಾಸವಾಗುತ್ತದೆ. ಜೊತೆಗೆ ಹಿನ್ನೀರು ಮತ್ತು ಕಡಲಿನಿಂದ ಆವರಿಸಿದ ನಮ್ಮ ಸಾಲಿಗ್ರಾಮ ಊರಂತೂ ಅತ್ಯಂತ ಪ್ರೇಕ್ಷಣೀಯ. ಅನೇಕ ದೇವಾಲಯಗಳು, ಥೀಮ್ ಪಾರ್ಕ್, ಸುತ್ತಮುತ್ತಲಿನ ಗದ್ದೆಗಳು, ನೈಸರ್ಗಿಕ ಗಾಳಿ-ಬೆಳಕು, ಬಾವಿಯ ನೀರು, ಆಗೊಮ್ಮೆ ಈಗೊಮ್ಮೆ ಹಳ್ಳಿಯ ಜನರ ಗಡಿಬಿಡಿಯಿಲ್ಲದ ಜೀವನದರ್ಶನ ಇದೆಲ್ಲವನ್ನು ಗಮನಿಸಿಯೇ ಅದಕ್ಕೆ ಹೆಸರು ಬೇರು 'Welcome to un Comfort Zone' ಎಂದು ಇಟ್ಟಿದ್ದೇವೆ. ಒಂದು ಬೇರು ಅದೆಷ್ಟೋ ಶ್ರಮ ಪಟ್ಟು ಮಣ್ಣಿನ ಒಡಲಿನಿಂದ ಚಿಗುರೊಂದನ್ನು ಮೇಲಕ್ಕೆ ಎತ್ತುತ್ತದೆ. ಆ ಚಿಗುರು ಮುಂದೊಂದು ದಿನ ಹೆಮ್ಮರವಾಗಿ ಅನೇಕ ಫಲಗಳನ್ನು ನೀಡುತ್ತದೆ. ಆದರೆ ಎಂದಿಗೂ ತನ್ನ ಬೇರನ್ನು ಬಿಟ್ಟಕೊಡದು. ನಾವಿಚ್ಚಿಸಿದರೆ ಎಲ್ಲವೂ ನಮ್ಲಲ್ಲಿ ಇದೆ, ನಮ್ಮ ನಮ್ಮ ಬೇರುಗಳನ್ನು ನಾವು ಅನ್ವೇಷಿಸಬೇಕಷ್ಟೆ.'
ನಮ್ಮ ಹಿರಿಯರೊಂದಿಗಿನ ಒಡನಾಟ ಮರೆತುಹೋಗಬಾರದು, ಮಕ್ಕಳು ಹಿರಿಯರೊಂದಿಗೆ ಕೂಡಿ ಬಾಳಬೇಕು, ಆಗಲೇ ನಮ್ಮ ಬದುಕು ಚೆನ್ನಾಗಿರುತ್ತದೆ. ಇದನ್ನು ನೆನಪಿಸಲು 'connecting2roots' ಎಂಬ ಪರಿಕಲ್ಪನೆಯಲ್ಲಿ ಈ ಮನೆಯನ್ನು ಕಟ್ಟಲಾಗಿದೆ. ಇಲ್ಲಿ ಗೋಡೆಯ ಮೇಲೆ ವಿವಿಧ ಚಿತ್ರಕಲೆಗಳಿವೆ. ಮಕ್ಕಳಿಗೆ ಮುದ ನೀಡುವ ಚಿತ್ತಾರಗಳು ಮನಸನ್ನು ಸೆಳೆಯುತ್ತವೆ. ದೊಡ್ಡವರಿಗೂ ಇಷ್ಟವಾಗುವಂತೆ ಗೋಡೆಗಳ ಮೇಲೆ ಪ್ರಕೃತಿ ಮತ್ತು ಅರಮನೆಯ ರೀತಿಯಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ.
ನಾವು ಬಪ್ಪನಾಡು ದೇವಸ್ಥಾನವನ್ನು ನೋಡಿಕೊಂಡು ಬೇರು ನಿವಾಸಕ್ಕೆ ತಲುಪುವಾಗ ಮಧ್ಯಾಹ್ನವಾಗಿತ್ತು. ಬಿಸಿಲಿನಿಂದ ಬಂದ ನಮಗೆ ಎಳನೀರು ಕಾಯುತ್ತಿತ್ತು. ಮನೆಯನ್ನು, ಅಲ್ಲಿನ ವರ್ಣ ಚಿತ್ತಾರಗಳನ್ನು ನೋಡಿ ಮೈ ಮರೆತೆವು. ಪ್ರತೀ ಕೋಣೆಯಲ್ಲಿ, ಪ್ರತೀ ಗೋಡೆಯಲ್ಲಿ ಹೊಸತನದಿಂದ ಕೂಡಿದ ಬೇರು ನಮಗೆಲ್ಲರಿಗೂ ತುಂಬಾ ಸಂತಸ ಸಂಭ್ರಮಗಳನ್ನು ತಂದಿತು. ಸ್ವಲ್ಪ ಹೊತ್ತಲ್ಲಿ ಊಟದ ಜತೆಗೆ ಕರ್ಣ ಅಣ್ಣ ಬಂದರು, ನಮಗೆ ತಿಂದು ಇನ್ನಷ್ಟು ಉಳಿಯುವಷ್ಟು ಶುಚಿ ರುಚಿಯಾದ ಊಟ ಅದಾಗಿತ್ತು.
ಆರಾಮವಾಗಿ ಊಟ ಮಾಡಿ ನಮ್ಮ ನೆಚ್ಚಿನ ಶಿವರಾಮ ಕಾರಂತರ ಥೀಮ್ ಪಾರ್ಕಿಗೆ ಹೋದೆವು. ಅಲ್ಲಿಯ ಸಿಬ್ಬಂದಿ ನಮ್ಮನ್ನು ನಗುಮುಖದಿಂದ ಸ್ವಾಗತಿಸಿ ಹಲವು ಮಾಹಿತಿಗಳನ್ನು ನೀಡಿದರು. ಕಾರಂತರ ಹಲವು ಅಪರೂಪದ ಚಿತ್ರಗಳನ್ನು ಅಲ್ಲಿ ಜೋಡಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪ್ರತಿಮೆಗಳನ್ನು ಇಟ್ಟಿದ್ದಾರೆ. ಈ ಥೀಮ್ ಪಾರ್ಕ್ ನಲ್ಲಿ ಏನೆಲ್ಲ ಇದೆ ಎನ್ನುವ ಅಜ್ಜಿ ಕಥೆಯನ್ನು ಕೇಳಿದೆವು. ಅಲ್ಲಿನ ಅಚ್ಚುಕಟ್ಟುತನ ನಮ್ಮೆಲ್ಲರ ಮನಸೂರೆ ಮಾಡಿತು. ಆಮೇಲೆ ಸಾಲಿಗ್ರಾಮದ ಸಮುದ್ರ ತೀರಕ್ಕೆ ಹೋದೆವು. ಅಷ್ಟೊಂದು ಜನಸಂದಣಿಯು ಇಲ್ಲದ, ಸುಂದರ ಸಮುದ್ರ ತೀರದಲ್ಲಿ ಸಂಜೆಯನ್ನು ಕಳೆದೆವು.

ರಾತ್ರಿಯ ಊಟದ ನಂತರ ಟೆರೇಸ್ ಗೆ ಹೋಗಿ ಆಗಸದ ನಕ್ಷತ್ರಗಳನ್ನು ಎಣಿಸಿದೆವು. ಯಾವುದೋ ಊರಿನಲ್ಲಿ ನಮ್ಮದೇ ಮನೆಯೇನೋ ಎಂಬಂತೆ ನಮಗೆಲ್ಲ ಅನುಭವವಾಯಿತು.
ಮರುದಿನ ಬೆಳಿಗ್ಗೆಯೇ ನಮ್ಮನ್ನು ಸೀತಾ ನದಿಯ ಬಳಿ ಕರೆದು ಕೊಂಡು ಹೋಗಲು ಲೋಕೇಶ್ ಬಂದಿದ್ದರು. ದೋಣಿ ಬಿಡುವುದು ನಮ್ಮಿಂದ ಸಾಧ್ಯವಾ ಎಂದು ಅಂಜುತ್ತಿದ್ದ ನಮಗೆ 'ನಿಮಗೂ ಸಾಧ್ಯ ಬನ್ನಿ' ಎಂದು ಸರಳವಾಗಿ ಹೇಗೆ ದೋಣಿ ಓಡಿಸಬೇಕು ಎಂದು ತಿಳಿಸಿಕೊಟ್ಟರು. ಅಂಬಿಗನಾಗಿ ಲೋಕೇಶ್ ಅವರು ಹಲವು ವಿಚಾರಗಳನ್ನು ತಿಳಿಸಿದರು. ನಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಹುಟ್ಟು ಹಾಕುತ್ತಾ ಫೊಟೋಗಳನ್ನು ವಿಡಿಯೋ ಗಳನ್ನೂ ತೆಗೆದುಕೊಟ್ಟರು. ಹಳೆಯ ಕನ್ನಡ ಹಾಡುಗಳನ್ನು ಕೇಳಿಸಿ, ಕಯಾಕಿಂಗ್ ಅನುಭವವನ್ನು ಸ್ಮರಣೀಯವಾಗಿಸಿದರು. ಅದೃಷ್ಟವಿದ್ದರೆ ಪುಟ್ಟ ಡಾಲ್ಫಿನ್ ಮರಿಗಳನ್ನೂ ಕಾಣಬಹುದಂತೆ!

ಇನ್ನೂ ಅನೇಕ ನೋಡಲೇ ಬೇಕಾದ ಸ್ಥಳಗಳು ಅಕ್ಕಪಕ್ಕದಲ್ಲಿವೆ. ಉಡುಪಿಯ ಶ್ರೀಕೃಷ್ಣ, ಸಾಲಿಗ್ರಾಮದ ಶ್ರೀ ಗುರುನರಸಿಂಹ ಸ್ವಾಮಿ ಹಾಗು ಆಂಜನೇಯ ದೇವಸ್ಥಾನ, ಕೊಲ್ಲೂರಿನ ಮೂಕಾಂಬಿಕಾ ಹಾಗೂ ಆನೆಗುಡ್ಡೆಯ ದೇವಸ್ಥಾನ, ಡಿವೈನ್ ಪಾರ್ಕ್ ಮತ್ತು ಇನ್ನೂ ಅನೇಕ ಪ್ರೇಕ್ಷಣೀಯ ಸ್ಥಳಗಳು ಹತ್ತಿರದಲ್ಲಿಯೇ ಇದ್ದು, ಸುಲಭವಾಗಿ ಹೋಗಿ ಬರಬಹುದಾಗಿವೆ.
ಸಂಜೆಯ ತಂಪಾದ ಗಾಳಿಯ ಜತೆಗೆ ನೀವು ಇಲ್ಲಿ ಮನೆಯ ಹೊರಗಡೆ ಹೋದರೆ ಸುಮ್ಮನೇ ನಡೆಯುತ್ತಾ ಪ್ರಕೃತಿಯ ನಡುವೆ ಕಳೆದುಹೋಗಬಹುದು. ಸುತ್ತಲಿನ ಗದ್ದೆ, ಸುಂದರವಾದ ಹಳ್ಳಿಯ ಪರಿಸರ ಮನಸ್ಸನ್ನು ತಣಿಸುವುದರಲ್ಲಿ ಸಂಶಯವೇ ಇಲ್ಲ.
ದಿನನಿತ್ಯದ ಜಂಜಡಗಳನ್ನು ಮರೆತು ಪ್ರಕೃತಿಯ ಮಡಿಲಿನಲ್ಲಿ ಹಾಯಾಗಿ ಸಮಯ ಕಳೆಯಬೇಕೆಂದರೆ ಇದು ಹೇಳಿ ಮಾಡಿಸಿದ ಜಾಗ. ಮತ್ತೇಕೆ ತಡ, ನಗರದ ಜೀವನಕ್ಕೆ ಟಾಟಾ ಹೇಳುತ್ತಾ ಸಮುದ್ರದ ದಂಡೆಯಲ್ಲಿ ವಿಹರಿಸಿ, ದೇವರ ದರುಶನವನ್ನೂ ಮಾಡಿಕೊಂಡು ಮನಸು ಹಗುರ ಮಾಡಿಕೊಳ್ಳಲು ಇಂದೇ ಹೊರಡಿ!
ವಿಳಾಸ:
Kodi Kanyana, Karnataka 576225
ಸಂಪರ್ಕ ಸಂಖ್ಯೆ: ಜೈದೀಪ್ 9886724182