ವಿಭಿನ್ನವಾದ ಹೆಸರಿನ ಮೂಲಕವೇ ಸದ್ದು ಮಾಡುವ ಅದೆಷ್ಟೋ ರೆಸ್ಟೋರೆಂಟ್ಸ್‌ ನಮ್ಮ ಬೆಂಗಳೂರಿನಲ್ಲಿವೆ. ಅವುಗಳ ಪೈಕಿ ಪ್ರಮುಖವಾದುದು ಸಿಲಾ..ಅದೆಷ್ಟು ಸುಂದರ ಹೆಸರು ಅಲ್ವಾ..ಇದರ ಅರ್ಥ ಸರಿಯಾದ ದಾರಿ ಎಂಬುದಾಗಿದೆ. ಈ ವಿಶೇಷ ಹೊಟೇಲ್‌ ಸಂಗೀತ, ಸಾಹಿತ್ಯ, ನಗು, ಮನೆಯೂಟ ಹಾಗೂ ಸುಂದರ ವಾತಾವರಣಕ್ಕೆ ಹೆಸರು ಮಾಡಿದೆ. ಇದುವೇ ಇಲ್ಲಿನ ಸೀಕ್ರೆಟ್‌ ರೆಸಿಪಿ ಕೂಡ.

ಬೆಂಗಳೂರಿನಲ್ಲಿ ಬೆಸ್ಟ್‌ ಕಾಂಟಿನೆಂಟಲ್ ಡಿಶ್‌ಗಳನ್ನೂ ಟೇಸ್ಟ್‌ ಮಾಡಬೇಕು. ಆದರೆ ಅದ್ಧೂರಿ ರೆಸ್ಟೋರೆಂಟ್‌ಗಳು ಬೇಕಿಲ್ಲ. ಬದಲಾಗಿ ರೆಸ್ಟೋರೆಂಟ್‌ ಒಳಗೆ ಪ್ರವೇಶಿಸುತ್ತಲೇ ಮನಸ್ಸಿಗೆ ಖುಷಿ ನೀಡುವ ವಾತಾವರಣವಿರಬೇಕು. ತಣ್ಣನೆಯ ಗಾಳಿ, ಖುಷಿಕೊಡುವ ಮಳೆಯ ವಾತಾವರಣ, ಕರಾವಳಿ ಭಾಗದ ಹೆರಿಟೇಜ್‌ ವೈಬ್‌, ಹೀಗೆ ಸಾಲು ಸಾಲು ಬೇಡಿಕೆಗಳು ನಿಮಗಿದ್ದರೆ ಯೋಚಿಸಬೇಕಿಲ್ಲ. ನಿಮ್ಮ ಬೇಡಿಕೆ ಒಪ್ಪುವಂಥ ರೆಸ್ಟೋರೆಂಟ್‌ ಒಂದು ಮಲ್ಲೇಶ್ವರಂನ 14ನೇ ಕ್ರಾಸ್‌ನಲ್ಲಿದೆ.

ಆಹಾರ ಪ್ರಿಯರ ಬೇಡಿಕೆಗೆ ತಕ್ಕಂತೆ ವಿಭಿನ್ನ ರೂಪದೊಂದಿಗೆ ಕಾರ್ಯನಿರ್ವಹಿಸುತ್ತಿರುವ ʻಸಿಲಾ ದಿ ಗಾರ್ಡನ್‌ ಕೆಫೆʼ ರೆಸ್ಟೋರೆಂಟ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದು, ಬಹುಬೇಡಿಕೆಯನ್ನೂ ಪಡೆದುಕೊಂಡಿದೆ. ಇದು ಸಸ್ಯಾಹಾರಿ ವೆಜ್‌ ರೆಸ್ಟೋರೆಂಟ್‌ ಆಗಿದ್ದು, ಧೂಮಪಾನಕ್ಕೂ, ಮದ್ಯಪಾನಕ್ಕೂ ಇಲ್ಲಿ ಅವಕಾಶವಿಲ್ಲ. ಆದರೆ ಸಾಹಿತ್ಯ ಪ್ರಿಯರಿಗೆ, ಸಂಗೀತಪ್ರಿಯರಿಗೆ, ನಿಸರ್ಗ ಪ್ರಿಯರಿಗೆ ಮಾತ್ರವಲ್ಲದೇ ಆಹಾರಪ್ರಿಯರಿಗೂ ಇಂದೊಂದು ಉತ್ತಮ ಆಯ್ಕೆಯಾಗಿದೆ.

Cila cafe

ರೆಸ್ಟೋರೆಂಟ್‌ ಒಳಗೆ ಬರುವ ಮುನ್ನ ಚಪ್ಪಲಿ ಬಿಟ್ಟು ಒಳಬರಬೇಕಿದ್ದು, ಮೊದಲು ಫುಡ್‌ ಆರ್ಡರ್‌ ಮಾಡಿಕೊಂಡುಬಿಟ್ಟರೆ ಅದು ಬರುವಷ್ಟರಲ್ಲಿ ಮ್ಯೂಸಿಕ್‌ ಜಾಮಿಂಗ್‌ ನಿಮ್ಮ ಮನಸೂರೆಗೈಯ್ಯುತ್ತದೆ. ದಣಿವನ್ನು ನಿವಾರಿಸಿ, ಆಹಾರ ಸೇವನೆಗೆ ನಿಮ್ಮನ್ನು ಅಣಿಯಾಗಿಸುತ್ತದೆ. ವೀಕೆಂಡ್‌ ತುಂಬಾ ಜನಸಂದಣಿ ಇರುವುದರಿಂದ ವೀಕ್‌ ಡೇಸ್‌ ಹೋಗುವುದು ಉತ್ತಮ.

ಮ್ಯೂಸಿಕ್‌ ಜಾಮಿಂಗ್‌ ದರ್ಬಾರ್

ಇಲ್ಲಿ ವಾರದ ಎಲ್ಲ ದಿನವೂ ಜಾಮಿಂಗ್‌ ಸೆಶನ್ಸ್‌ ನಡೆಯುತ್ತದೆ. ಆದರೆ ಅದಕ್ಕೆ ಬುಕ್‌ ಮೈ ಶೋನಲ್ಲಿ ಟಿಕೆಟ್‌ ಬುಕ್‌ ಮಾಡಿಕೊಂಡೇ ಬರಬೇಕು. ಟಿಕೆಟ್‌ ದರ 199 ರಿಂದ 349 ರು. ವರೆಗೂ ಇರುತ್ತದೆ. ಕನ್ನಡ ಹಾಡುಗಳಿಗೆ ಇಲ್ಲಿ ಮೊದಲ ಆದ್ಯತೆ. ಲೈವ್‌ ಆಗಿ ಚಲನಚಿತ್ರಗಳ ಹಾಡುಗಳು, ಜನಪದ ಹಾಡುಗಳನ್ನು ಇಲ್ಲಿ ಗಾಯಕರು ಹಾಡುವ ಮೂಲಕ ಮಾಯಾಲೋಕವನ್ನೇ ಸೃಷ್ಟಿಸುತ್ತಾರೆ. ಇನ್ನೊಂದು ವಿಶೇಷವೆಂದರೆ ನೀವು ಸಿಂಗರ್‌ ಅಲ್ಲದೇ ಹೋದರೂ ಹಾಡುಗಾರರ ಜತೆ ಕೋರಸ್‌ನಲ್ಲಿ ಹಾಡುವ ಅವಕಾಶ ಪ್ರತಿಯೊಬ್ಬ ಸಂಗೀತ ಪ್ರಿಯನಿಗೂ ಇಲ್ಲಿ ಲಭ್ಯವಿದೆ. ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುವುದಾದರೂ ಬೇಡ ಅನ್ನುವವರಿಲ್ಲ.

Music jamming

ಏನಿದೆ ಸ್ಪೆಷಲ್‌ ?

ಪ್ಯೂರ್‌ ವೆಜ್‌ ಕೆಫೆ

ಗೋವಾ ಹಾಗೂ ಕಾಂಟಿನೆಂಟಲ್‌ ಫುಡ್‌

ಬಿವರೇಜಸ್‌

ಪ್ಲ್ಯಾಂಟ್‌ ಅಂಡ್‌ ಪಾಟ್ಸ್‌ ಏರಿಯಾ

ಮಿನಿ ಲೈಬ್ರರಿ

ಮ್ಯೂಸಿಕ್‌ ಜಾಮಿಂಗ್‌

ಫ್ರೀ ವೈಫೈ

ಪುಸ್ತಕ ಪ್ರಿಯರಿಗಿದೆ ಮಿನಿ ಲೈಬ್ರರಿ

ಆಹಾರಪ್ರಿಯರ ಜತೆ ಪುಸ್ತಕ ಪ್ರಿಯರ ಆಸಕ್ತಿಗೆ ಅನುಗುಣವಾಗಿ ಇಲ್ಲಿ ಅನೇಕ ಆಯ್ಕೆಗಳಿವೆ. ಅವುಗಳಲ್ಲಿ ಪ್ರಮುಖವಾದುದು ಇಲ್ಲಿರುವ ಚಿಕ್ಕದಾದರೂ ಚೊಕ್ಕದಾದ ಮಿನಿ ಲೈಬ್ರರಿ. ಕನ್ನಡ, ಇಂಗ್ಲಿಷ್‌, ಹಿಂದಿ ಸೇರಿದಂತೆ ಬಹುಭಾಷೆಯ ಪುಸ್ತಕಗಳು ಓದುಗರಿಗಾಗಿ ಇಲ್ಲಿ ಲಭ್ಯವಿದ್ದು ಆಹಾರ ಸೇವನೆಯ ಜತೆಗೆ ಪುಸ್ತಕಗಳ ಒಡನಾಟವನ್ನೂ ಹೆಚ್ಚಿಸಿಕೊಳ್ಳಲಿ ಎಂಬ ಆಶಯ ಇಲ್ಲಿದೆ. ಅಚ್ಚುಕಟ್ಟಾಗಿ ಜೋಡಿಸಿಟ್ಟ ಪುಸ್ತಕಗಳ ನಡುವೆ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗವಿದೆ. ಕಾಫಿ ಹೀರುತ್ತಲೋ, ಸ್ನ್ಯಾಕ್ಸ್‌ ತಿನ್ನುವ ವೇಳೆಗೋ ಪುಸ್ತಕಗಳ ಸಾಂಗತ್ಯವನ್ನೂ ಪಡೆಯುವ ಅವಕಾಶ ಇಲ್ಲಿ ಎಲ್ಲರಿಗೂ ಇದೆ.

silaa cafe garden

ಖರೀದಿಗಿದೆ ಪ್ಲಾಂಟ್ ಅಂಡ್‌ ಪಾಟ್ಸ್‌

ರುಚಿಕರವಾದ ಆಹಾರ ಸೇವನೆಯ ನಂತರ ಗಿಡಗಳ ಜತೆಗೊಂದಿಷ್ಟು ಕಾಲ ಕಳೆಯುವುದಕ್ಕೆ, ಗಿಡಗಳನ್ನು, ಪಾಟ್‌ಗಳನ್ನು ಕೊಂಡುಕೊಳ್ಳುವುದಕ್ಕೂ ಸಿಲಾ ದಿ ಗಾರ್ಡನ್‌ ಕೆಫೆ ಅವಕಾಶ ನೀಡಿದೆ.

ಮುದ್ದಾದ ಪುಟ್ಟ ಪುಟ್ಟ ಇಂಡೋರ್‌ ಪ್ಲಾಂಟ್ಸ್ ಕೊಳ್ಳದಿರಲು ಮನಸೇ ಬರುವುದಿಲ್ಲ. ಮನೆಯ ಅಂದವನ್ನು ಹೆಚ್ಚಿಸುವ ಮನಿಪ್ಲ್ಯಾಂಟ್ನಿಂದ ತೊಡಗಿ ಜೇಡ್‌, ಲೋಟಸ್‌ನಂಥ ಇಂಡೋರ್‌ ಪ್ಲ್ಯಾಂಟ್‌ಗಳು ಇಲ್ಲಿವೆ.

ಈಗಾಗಲೇ ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಹು ಬೇಡಿಕೆಯನ್ನು ಪಡೆದುಕೊಂಡಿರುವ ಈ ರೆಸ್ಟೋರೆಂಟ್‌, ಸದ್ಯದಲ್ಲೇ ಮೈಸೂರು, ಹೆಚ್‌ಎಸ್‌ಆರ್‌ ಲೇಔಟ್‌ ಹಾಗೂ ಜಯನಗರದಲ್ಲಿ ತನ್ನ ಹೊಸ ಶಾಖೆಗಳನ್ನು ತೆರೆಯಲಿದೆ.

ಒಬ್ಬ ಮನುಷ್ಯನಿಗೆ ಆರೋಗ್ಯಕರ ಮನಸ್ಸು, ದೇಹ ಮತ್ತು ಆತ್ಮ ಇರಬೇಕಾದುದು ಬಹಳ ಮುಖ್ಯ. ರುಚಿಕರವಾದ ಮನೆಯೂಟ ಹೊಟ್ಟೆಯನ್ನು ತುಂಬಿಸಿದರೆ, ಸುತ್ತಮುತ್ತಲ ಗಿಡಗಳು, ಪುಸ್ತಕಗಳು, ಯಾವಾಗಲೂ ಬರುವ ತುಂತುರು ಮಳೆ, ಅಜ್ಜಿ ಮನೆಯ ಶೈಲಿಯಲ್ಲಿ ಕೆಳಗೆ ಕುಳಿತು ತಿನ್ನುವ ಶೈಲಿ, ಲೈವ್‌ ಜಾಮಿಂಗ್‌ ಮ್ಯೂಸಿಕ್‌, ಇವೆಲ್ಲ ಮನಸ್ಸು ಮತ್ತು ಆತ್ಮ ತೃಪ್ತಿಯನ್ನು ಕೊಡುತ್ತದೆ. ಅದಕ್ಕಾಗಿಯೇ ನಿಮ್ಮ ಮುಂದೆ ಸಿಲಾ ಇದೆ.
ಸಹನಾ ಸುಧಾಕರ್‌ - ಸಂಸ್ಥಾಪಕರು