ಕಾಫಿ ಕುಡಿದ ಮೇಲೆ ಒಂದು ಸಂದೇಶ ಕೊಡದಿದ್ದರೆ ಹೇಗೆ?
ಹನೋಯಿಯ ಗಿಜಿಗುಡುವ ಓಲ್ಡ್ ಕ್ವಾರ್ಟರ್ ಮಧ್ಯೆ ಅಡಗಿರುವ 'ದಿ ನೋಟ್ ಕಾಫಿ' ಕಾಫಿ, ಕ್ರಿಯೇಟಿವಿಟಿ ಮತ್ತು ಜನರ ಭಾವನೆಗಳು ಒಂದಕ್ಕೊಂದು ಬೆರೆತು ಕಲರ್‌ಫುಲ್ ಆಗಿ ಅರಳಿರುವ ಒಂದು ಮಸ್ತ್ ಜಾಗ. ಹನೋಯ್ ಪ್ರವಾಸ ಮಾಡುವವರಿಗೆ 'ದಿ ನೋಟ್ ಕಾಫಿ' ಒಂದು ಮರೆಯಲಾಗದ ಸಾಂಸ್ಕೃತಿಕ ಅನುಭವ. ಇದು ಪ್ರವಾಸದ ಖುಷಿ, ಕಥೆಗಳು ಮತ್ತು ಮನುಷ್ಯರ ನಡುವಿನ ಮಧುರ ಬಾಂಧವ್ಯವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ.
ಕೆಫೆಯೊಳಗೆ ಕಾಲಿಡುತ್ತಿದ್ದಂತೆ ಅಲ್ಲಿನ ಗೋಡೆಗಳು, ಕಿಟಕಿಗಳು, ಸೀಲಿಂಗ್, ಟೇಬಲ್, ಅಷ್ಟೇ ಯಾಕೆ ಮೆಟ್ಟಿಲುಗಳ ಮೇಲೂ ರಾರಾಜಿಸುತ್ತಿರುವ ಸಾವಿರಾರು ಬಣ್ಣ ಬಣ್ಣದ ಸ್ಟಿಕಿ ನೋಟ್‌ಗಳು ಕಾಣಿಸುತ್ತವೆ. ಅಲ್ಲಿಗೆ ಬಂದ ಕಸ್ಟಮರ್ ಎಲ್ಲರೂ ಏನೋ ಒಂದು ಸಂದೇಶ ಬರೆದು ಅಂಟಿಸಿ ಹೋಗುವುದು ಇಲ್ಲಿನ ಸಂಪ್ರದಾಯ. ಪ್ರಪಂಚದ ನಾನಾ ಮೂಲೆಗಳಿಂದ ಬಂದ ಪ್ರವಾಸಿಗರು ಬರೆದಿಟ್ಟ ಈ ಚೀಟಿಗಳು, ಇಡೀ ಕೆಫೆಯನ್ನೇ ನೆನಪುಗಳು, ಕನಸುಗಳು, ನಗು ಮತ್ತು ಭಾವನೆಗಳ ಒಂದು ಜೀವಂತ ಆಲ್ಬಮ್ ಥರ ಬದಲಾಯಿಸಿಬಿಟ್ಟಿವೆ.
ಇದನ್ನೂ ಓದಿ: ಹೊಯ್ಸಳ ವಿಲೇಜ್ ರಿಸಾರ್ಟ್
ಸೆಳೆಯುವ ಮಾಯಾಲೋಕ!
ಪ್ರಸಿದ್ಧ ಹೊವಾನ್ ಕೀಮ್ (Hoàn Kiếm) ಕೆರೆಯಿಂದ ಕೆಲವೇ ಹೆಜ್ಜೆಗಳ ದೂರದಲ್ಲಿರುವ ಈ ಕೆಫೆ, ಈಗ ಹನೋಯಿಗೆ ಬರುವ ಪ್ರವಾಸಿಗರು ಮತ್ತು ಲೋಕಲ್ ಜನರಿಗೆ ಅತ್ಯಂತ ಪ್ರೀತಿಯ ತಾಣವಾಗಿದೆ. ಇದರ ಎಂಟ್ರೆನ್ಸ್ ತುಂಬಾ ಚಿಕ್ಕದಾಗಿದ್ದರೂ ಒಳಗೆ ಕಾಲಿಟ್ಟರೆ ಸಾಕು, ಯಾವುದೋ ಬೇರೆ ಪ್ರಪಂಚಕ್ಕೆ ಬಂದ ಹಾಗೆ ಭಾಸವಾಗುತ್ತದೆ. ಅಲ್ಲಿನ ಹಿತವಾದ ಲೈಟಿಂಗ್ಸ್, ಆರಾಮದಾಯಕ ಆಸನಗಳು ಮತ್ತು ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ಕಾಣುವ ಬಣ್ಣ ಬಣ್ಣದ ಸ್ಟಿಕಿ ನೋಟ್‌ಗಳು ಮನಸಿಗೆ ಏನೋ ಒಂಥರಾ ಖುಷಿ ಮತ್ತು ನಿರಾಳತೆ ನೀಡುತ್ತವೆ.

ಇಲ್ಲಿನ ಪ್ರತಿ ಮೂಲೆಯಲ್ಲೂ ಒಂದೊಂದು ಕಥೆಯಿದೆ. ಕೆಲವು ಚೀಟಿಗಳಲ್ಲಿ ಪ್ರೀತಿಯ ಸದ್ಭಾವನೆಗಳಿದ್ದರೆ, ಇನ್ನು ಕೆಲವದರಲ್ಲಿ ಪ್ರವಾಸದ ಅನುಭವಗಳು, ಮೋಟಿವೇಷನಲ್ ಕೋಟ್ಸ್, ಜೋಕ್ಸ್, ಅಥವಾ ಬರುವವರು ಬಿಟ್ಟು ಹೋದ ಮಜಾವಾದ ಡ್ರಾಯಿಂಗ್‌ಗಳು ಇಲ್ಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.
ನಿಮ್ಮದೂ ಒಂದಿರಲಿ!
ಈ ಕೆಫೆಯ ಅತ್ಯಂತ ಮಜಾವಾದ ಸಂಗತಿ ಎಂದರೆ, ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ತಮ್ಮದೇ ಆದ ಒಂದು ನೆನಪನ್ನು ಬಿಟ್ಟು ಹೋಗುವ ಅವಕಾಶವಿದೆ. ಗ್ರಾಹಕರು ತಮಗೆ ಇಷ್ಟ ಬಂದದ್ದನ್ನು ಚೀಟಿಯಲ್ಲಿ ಬರೆದು ತಮಗೆ ಇಷ್ಟ ಬಂದ ಜಾಗದಲ್ಲಿ ಅಂಟಿಸಬಹುದು! ಇದೇ ಈ ಕೆಫೆಯ ಅಸಲಿ ವಿಶೇಷತೆ.
ಯಾವ್ಯಾವುದೋ ದೇಶಗಳಿಂದ ಬರುವ ಪ್ರವಾಸಿಗರು ತಮ್ಮದೇ ಭಾಷೆಯಲ್ಲಿ ಇಲ್ಲಿ ಬರೆದಿಟ್ಟು ಹೋಗುತ್ತಾರೆ. ಇದು ಇಡೀ ಪ್ರಪಂಚವೂ ಒಂದೇ ಎಂಬ ಭಾವನೆ ಮೂಡಿಸುತ್ತದೆ. ಇಲ್ಲಿಗೆ ಬರುವ ಅನೇಕರು ಗಂಟೆಗಟ್ಟಲೆ ಕೂತು ಈ ಚೀಟಿಗಳನ್ನು ಓದುತ್ತಾ, ಹೃದಯಸ್ಪರ್ಶಿ ಕಥೆಗಳನ್ನು, ಕಾಮಿಡಿ ಕಮೆಂಟ್‌ಗಳನ್ನು ಅಥವಾ ವರ್ಷಗಳ ಹಿಂದೆ ಯಾರೋ ಬರೆದ ನೋಟ್‌ಗಳನ್ನು ಹುಡುಕುತ್ತಾ ಕಾಲ ಕಳೆಯುತ್ತಾರೆ. ಇದರಿಂದಾಗಿ ಇಲ್ಲಿ ಕೇವಲ ಕಾಫಿ ಕುಡಿಯುವುದಕ್ಕಿಂತ ಮಿಗಿಲಾದ ಒಂದು ಪರ್ಸನಲ್ ಕನೆಕ್ಷನ್ ಸಿಗುತ್ತದೆ.
ಸೂಪರ್ ಕಾಫಿ!
ಈ ಕೆಫೆ ಕೇವಲ ನೋಡೋಕೆ ಅಷ್ಟೇ ಚಂದ ಅಲ್ಲ, ಇಲ್ಲಿ ಸಿಗುವ ಡ್ರಿಂಕ್ಸ್ ಕೂಡ ಅಷ್ಟೇ ಅದ್ಭುತ! ವಿಯೆಟ್ನಾಂ ದೇಶ ತನ್ನ ಕಾಫಿ ಸಂಸ್ಕೃತಿಗೆ ಜಗತ್ಪ್ರಸಿದ್ಧ. 'ದಿ ನೋಟ್ ಕಾಫಿ'ಯಲ್ಲಿ ನಿಮಗೆ ಅಪ್ಪಟ ವಿಯೆಟ್ನಾಮಿ ಸ್ಟೈಲ್ ರುಚಿ ಸವಿಯಲು ಸಿಗುತ್ತದೆ.
ಎಗ್ ಕಾಫಿ: ಇಲ್ಲಿನ ಸ್ಪೆಷಾಲಿಟಿ ಅಂದರೆ ಸಾಂಪ್ರದಾಯಿಕ ವಿಯೆಟ್ನಾಮಿ ಎಗ್ ಕಾಫಿ. ಕಡು ಕಾಫಿಯ ಮೇಲೆ ಮೊಟ್ಟೆಯ ಹಳದಿ ಭಾಗ ಮತ್ತು ಸಿಹಿಯಾದ ಕಂಡೆನ್ಸ್ಡ್ ಮಿಲ್ಕ್ ಅನ್ನು ಚೆನ್ನಾಗಿ ವ್ಹಿಪ್ ಮಾಡಿ ಹಾಕಲಾಗಿರುತ್ತದೆ. ಇದು ಕೇಳಲು ವಿಚಿತ್ರ ಅನಿಸಿದರೂ ಕುಡಿದರೆ ಮಸ್ತ್ ಕ್ರೀಮಿಯಾಗಿ ಒಂಥರಾ ಐಸ್‌ಕ್ರೀಮ್ ಥರದ ಡೆಸರ್ಟ್ ಫ್ಲೇವರ್ ಕೊಡುತ್ತದೆ. ಹನೋಯಿಗೆ ಬಂದರೆ ಇದನ್ನು ಮಿಸ್ ಮಾಡಲೇಬಾರದು!
ಇತರ ವೆರೈಟಿಗಳು: ಕಾಫಿ ಪ್ರಿಯರಿಗಷ್ಟೇ ಅಲ್ಲ, ಉಳಿದವರಿಗೂ ಇಲ್ಲಿ ಸೂಪರ್ ಆಪ್ಷನ್‌ಗಳಿವೆ. ಕೋಕನಟ್ ಕಾಫಿ, ಐಸ್ಡ್ ಮಿಲ್ಕ್ ಕಾಫಿ, ಕ್ಯಾಪುಚಿನೋ ಜತೆಗೆ ಬೇರೆ ಬೇರೆ ಥರದ ಟೀಗಳು, ಸ್ಮೂತಿಗಳು, ಫ್ರೆಶ್ ಜ್ಯೂಸ್ ಮತ್ತು ಲೈಟ್ ಸ್ನ್ಯಾಕ್ಸ್ ಕೂಡ ಇಲ್ಲಿ ಲಭ್ಯವಿವೆ.
ಇಲ್ಲಿನ ಮತ್ತೊಂದು ಸ್ಪೆಷಾಲಿಟಿ ಎಂದರೆ, ಅವರು ಡ್ರಿಂಕ್ಸ್ ಸರ್ವ್ ಮಾಡುವಾಗಲೂ ಅದರ ಜತೆ ಪುಟ್ಟದಾಗಿ ಏನಾದರೂ ಸ್ವೀಟ್ ಮೆಸೇಜ್ ಬರೆದು ಪ್ರೀತಿಯಿಂದ ಕೊಡುತ್ತಾರೆ!

ಫ್ರೆಂಡ್ಲಿ ಸಿಬ್ಬಂದಿ
ಇಲ್ಲಿಗೆ ಬರುವ ಪ್ರವಾಸಿಗರು ಈ ಕೆಫೆಯನ್ನು ಇಷ್ಟ ಪಡಲು ಮತ್ತೊಂದು ಮುಖ್ಯ ಕಾರಣ ಅಂದರೆ ಅಲ್ಲಿನ ಸ್ಟಾಫ್‌ನ ಅಪಾರ ಪ್ರೀತಿ ಮತ್ತು ಸ್ನೇಹಪರತೆ. ಮುಖದಲ್ಲಿ ಸದಾ ನಗು ಇಟ್ಟುಕೊಂಡು ಬರಮಾಡಿಕೊಳ್ಳುವ ಅವರು, ನಿಮಗೆ ಬೆಸ್ಟ್ ಡ್ರಿಂಕ್ಸ್ ಸೆಲೆಕ್ಟ್ ಮಾಡಲು ಹೆಲ್ಪ್ ಮಾಡುತ್ತಾರೆ. ತುಂಬಾ ಬ್ಯುಸಿಯಾಗಿರುವ ಟೂರಿಸ್ಟ್ ಜಾಗಗಳಲ್ಲಿ ಕೆಫೆಗಳು ಕಮರ್ಷಿಯಲ್ ಆಗಿ ರಶ್ ಆಗಿರುತ್ತವೆಯಾದರೂ, 'ದಿ ನೋಟ್ ಕಾಫಿ' ಮಾತ್ರ ತನ್ನ ಆತಿಥ್ಯ ಮತ್ತು ಮುಗ್ಧ ಚಾರ್ಮ್ ಅನ್ನು ಇಂದಿಗೂ ಉಳಿಸಿಕೊಂಡಿದೆ.
ಹನೋಯಿಯ ಓಲ್ಡ್ ಕ್ವಾರ್ಟರ್‌ನ ಬಹುತೇಕ ಹಳೆಯ ಕಟ್ಟಡಗಳಂತೆ, ಈ ಕೆಫೆ ಕೂಡ ಸಣ್ಣ ಮೆಟ್ಟಿಲುಗಳಿವೆ, ಪುಟ್ಟ ಪುಟ್ಟ ಮಹಡಿಗಳಿವೆ. ಮೇಲಿನ ಮಹಡಿಗಳಲ್ಲಿ ಕೂತು ಕಿಟಕಿಯಿಂದ ಹೊರಗೆ ನೋಡಿದರೆ, ಕೆಳಗೆ ರಸ್ತೆಯಲ್ಲಿ ಸಾಗುವ ಸ್ಕೂಟರ್‌ಗಳ ಗಿಜಿಗಿಜಿ, ಬೀದಿ ಬದಿ ವ್ಯಾಪಾರಿಗಳು ಮತ್ತು ಜನರ ಓಡಾಟದ ಲೈವ್ ನೋಟ ಸಕತ್ ಆಗಿ ಕಾಣುತ್ತದೆ. ಹೊರಗಿನ ರಸ್ತೆಯ ಗದ್ದಲಕ್ಕೂ, ಒಳಗಿನ ಪ್ರಶಾಂತ ಹಾಗೂ ಆಹ್ಲಾದಕರ ವಾತಾವರಣಕ್ಕೂ ಇರುವ ವ್ಯತ್ಯಾಸವೇ ಈ ಕೆಫೆಯ ವಿಶಿಷ್ಟ ಆಕರ್ಷಣೆ.
ಜನರು ಇಲ್ಲಿಗೆ ಫೇಮಸ್ ಎಗ್ ಕಾಫಿಗಾಗಿಯೇ ಬರಲಿ, ಆ ಕಲರ್‌ಫುಲ್ ಲುಕ್ ನೋಡೋಕೆ ಬರಲಿ ಅಥವಾ ತಮ್ಮದೊಂದು ಪುಟ್ಟ ಚೀಟಿ ಅಂಟಿಸೋಕೆ ಬರಲಿ... ಹೋಗುವಾಗ ಮಾತ್ರ ತಮ್ಮ ಜತೆ ಒಂದು ಅಪೂರ್ವ ನೆನಪನ್ನು ಹೊತ್ತುಕೊಂಡು ಹೋಗುತ್ತಾರೆ.