- ಶಿವಪ್ರಸಾದ್ ಎ.

ಡಾ. ಜ್ಯೋತ್ಸ್ನಾ ಸೂರಿಯವರು ಭಾರತ್ ಹೊಟೇಲ್ ಸ್ಥಾಪನೆಯಾದಾಗಿನಿಂದಲೂ ಅದರೊಂದಿಗೆ ನಿಕಟಸಂಬಂಧ ಹೊಂದಿದ್ದಾರೆ. ಅವರು 2006ರಲ್ಲಿ ಲಲಿತ್ ಹೊಟೇಲ್ಸ್ ಸಂಸ್ಥೆಯ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿಯಾಗಿ ಅಧಿಕಾರವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶೀಯ ಮಾಲೀಕತ್ವದ ಡಾ. ಜ್ಯೋತ್ಸ್ನಾ ಸೂರಿಯವರ ನಾಯಕತ್ವದಲ್ಲಿ ʼದಿ ಲಲಿತ್ ಸೂರಿ ಹಾಸ್ಪಿಟಾಲಿಟಿ ಗ್ರೂಪ್ʼ ಭಾರತದ ಅಗ್ರಗಣ್ಯ ಖಾಸಗಿ ಹೊಟೇಲ್‌ಗಳ ಬ್ರಾಂಡ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಐಷಾರಾಮಿ ಹೊಟೇಲ್‌ಗಳ ರಂಗದಲ್ಲಿ ತನ್ನ ಬಲವಾದ ಛಾಪನ್ನು ಮೂಡಿಸಿದೆ.

ಮುಂದಿನ ಪೀಳಿಗೆಗೆ ತಮ್ಮ ವಾರಸಿನ ಪರಂಪರೆ ಏನಾಗಿರಬೇಕೆಂಬುದರ ಕುರಿತು ಡಾ. ಜ್ಯೋತ್ಸ್ನಾ ಸೂರಿ “ನಮ್ಮ ಹೊಟೇಲ್‌ಗಳು ಗ್ರಾಹಕ ಸೇವೆಯನ್ನಷ್ಟೇ ಒದಗಿಸದೆ, ಭಾರತದ ಸಂಸ್ಕೃತಿ ಮತ್ತು ಆತಿಥ್ಯದ ಪರಂಪರೆಯನ್ನಾಚರಿಸುವ ನವಿರಾದ ನೆನಪುಗಳನ್ನು ಸೃಷ್ಟಿಸುವ ಒಂದು ಅನುಭೂತಿಯನ್ನೊದಗಿಸಬೇಕು” ಎನ್ನುತ್ತಾರೆ.

ಐಷಾರಾಮಿ ಹೊಟೇಲ್ ರಂಗದ ಮುಂದಿನ ಭವಿಷ್ಯದ ಬಗ್ಗೆ ಅವರು ಆಶಾವಾದಿಗಳಾಗಿದ್ದಾರೆ. “ಭಾರತೀಯ ಆತಿಥ್ಯದ ಭವಿಷ್ಯವು ಉಜ್ವಲ, ರೋಮಾಂಚಕ ಮತ್ತು ಉತ್ತೇಜನಕಾರಿಯಾಗಿದೆಯೆಂದು ನಾನು ನಂಬಿದ್ದೇನೆ” ಎನ್ನುತ್ತಾರೆ ಡಾ. ಜ್ಯೋತ್ಸ್ನಾ ಸೂರಿ. ಅವರ ಮಾರ್ಗದರ್ಶಿ ತತ್ತ್ವವು ಸಹಾನುಭೂತಿ ಮತ್ತು ದೃಢಸಂಕಲ್ಪದ ಬೇರನ್ನವಲಂಬಿಸಿದೆ. “ಸ್ಥಿತಿಸ್ಥಾಪಕ ದಿಕ್ಕಿನಲ್ಲಿ ನಡೆಯುತ್ತ, ಸಹಾನುಭೂತಿಯೊಂದಿಗೆ ಆಲಿಸಿ, ದೃಢಸಂಕಲ್ಪದಿ೦ದ ವರ್ತಿಸುವುದೇ ಪ್ರತಿ ಸವಾಲು ಮತ್ತು ವಿಜಯದ ಬೀಜಮಂತ್ರ” ಎಂದು ಡಾ. ಜ್ಯೋತ್ಸ್ನಾ ಸೂರಿ ಹೇಳುತ್ತಾರೆ.

Dr Jyotsna Suri Award

ಡಾ. ಜ್ಯೋತ್ಸ್ನಾ ಸೂರಿ ಜಪಾನ್ ಸರ್ಕಾರದ ಪ್ರತಿಷ್ಠಿತ ʼಆರ್ಡರ್ ಆಫ್ ದಿ ರೈಸಿಂಗ್ ಸನ್ʼ, ಸಿಲ್ವರ್ ಮತ್ತು ಗೋಲ್ಡ್ ಸ್ಟಾರ್ ಸೇರಿದಂತೆ 50ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1981ರಲ್ಲಿ ಆರಂಭಗೊಂಡ ಈ ಗೌರವವನ್ನು ಪಡೆದ ಮೊದಲ ಭಾರತೀಯ ಮಹಿಳೆಯೆಂಬ ಹೆಗ್ಗಳಿಕೆಗೆ ಡಾ. ಜ್ಯೋತ್ಸ್ನಾ ಸೂರಿ ಪಾತ್ರರಾಗಿದ್ದಾರೆ. FICCIನ ಪೂರ್ವ ಅಧ್ಯಕ್ಷ ಸ್ಥಾನ, WTTC (ವರ್ಲ್ಡ್ ಟ್ರಾವೆಲ್ ಅಂಡ್ ಟೂರಿಸಂ ಕೌನ್ಸಿಲ್) ನ ಇಂಡಿಯಾ ಇನೀಷಿಯೇಟಿವ್‌ನ ಉಪಾಧ್ಯಕ್ಷ ಸ್ಥಾನ ಹಾಗೂ NCHMCT (ನ್ಯಾಷನಲ್ ಕೌನ್ಸಿಲ್ ಫಾರ್ ಹೊಟೇಲ್ ಮ್ಯಾನೇಜ್‌ಮೆಂಟ್ ಅಂಡ್ ಕ್ಯಾಟರಿಂಗ್ ಟ್ರೈನಿಂಗ್) ಮತ್ತು IICA (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಾರ್ಪೊರೇಟ್ ಅಫೇರ್ಸ್) ನ ಗವರ್ನಿಂಗ್ ಮಂಡಳಿಗಳ ಸದಸ್ಯ ಸ್ಥಾನ ಮುಂತಾದ ವಿಶಿಷ್ಟ ಸ್ಥಾನಗಳನ್ನಲಂಕರಿಸಿದ್ದ ಡಾ. ಜ್ಯೋತ್ಸ್ನಾ ಸೂರಿ ಭಾರತೀಯ ಹೊಟೇಲ್ ರಂಗದ ದಿಗ್ಗಜರು.

ತಮಗೆ ದೊರೆತಿರುವ ಜಾಗತಿಕ ಮನ್ನಣೆ ಮತ್ತು ತಮ್ಮ ಈ ಉದ್ಯಮದಲ್ಲಿ ತಮಗಿರುವ ಬಲವಾದ ಧ್ವನಿಯ ಮೂಲಕ ಡಾ. ಜ್ಯೋತ್ಸ್ನಾ ಸೂರಿ ಭಾರತೀಯ ಆತಿಥ್ಯ ರಂಗದಲ್ಲಿ ಸಮಗ್ರತೆ, ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ನಾಯಕತ್ವದ ಮಾನದಂಡಗಳನ್ನು ರೂಪಿಸುವ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

Dr Jyotsna

1995ರಲ್ಲಿ ಸ್ಥಾಪನೆಯಾದ ಗ್ಲೋಬಲ್ ರೆಸಿಲಿಯೆನ್ಸ್ ಕೌನ್ಸಿಲ್ ಹಾಲ್ ಆಫ್ ಫೇಮ್, ಈಗ ಜಾಕೊಬ್ಸ್ ಮೀಡಿಯಾದ ಭಾಗವಾಗಿದೆ. ಹೊಟೇಲ್ ಉದ್ಯಮದಾದ್ಯಂತ ಸ್ಥಿತಿ ಸ್ಥಾಪಕತ್ವ, ನಾವೀನ್ಯತೆ ಮತ್ತು ರೂಪಾಂತರಕ್ಕೆ ಕಾರಣೀಭೂತರಾಗಿರುವ ಗಮನಾರ್ಹ ವ್ಯಕ್ತಿಗಳಿಗೆ ಈ ಗೌರವ ನೀಡಿ ಅವರ ಸೇವೆಯನ್ನು ಗುರುತಿಸಲಾಗುತ್ತದೆ. ಗ್ಲೋಬಲ್ ರೆಸಿಲಿಯೆನ್ಸ್ ಕೌನ್ಸಿಲ್ ಹಾಲ್ ಆಫ್ ಫೇಮ್‌ನ ಸದಸ್ಯೆಯಾಗಿ ಡಾ. ಜ್ಯೋತ್ಸ್ನಾ ಸೂರಿಯವರ ನೇಮಕವು ಅವರ ಕಿರೀಟದ ಮಕುಟ ಮಣಿ. ಲಂಡನ್‌ನ ಐತಿಹಾಸಿಕ ಪ್ಲಾಸ್ಟರರ್ಸ್ ಹಾಲ್‌ನಲ್ಲಿ ಈ ಗೌರವ ನೀಡಲಾಗುತ್ತದೆ. ಜಾಗತಿಕ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳಿಗೆ ಡಾ. ಜ್ಯೋತ್ಸ್ನಾ ಸೂರಿಯವರಿಂದ ಸಂದಿರುವ ಅತ್ಯಮೂಲ್ಯ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಸುಸ್ಥಿರ ಬೆಳವಣಿಗೆಗಾಗಿ ಡಾ. ಜ್ಯೋತ್ಸ್ನಾ ಸೂರಿಯವರ ಸಮರ್ಪಣೆ, ಉದ್ಯಮದಲ್ಲಿ ವೈವಿಧ್ಯಕ್ಕಾಗಿ ಅವರು ಪಟ್ಟ ಶ್ರಮ ಹಾಗೂ ಅವರ ದೂರದೃಷ್ಟಿಯ ನಾಯಕತ್ವವು ಈ ಉದ್ಯಮವನ್ನು ರೂಪಿಸಿದ ಬಗೆಯನ್ನು ಈ ಗೌರವ ಗುರುತಿಸುತ್ತದೆ. “ಗ್ಲೋಬಲ್ ರೆಸಿಲಿಯೆನ್ಸ್ ಕೌನ್ಸಿಲ್ ಮತ್ತು ಜಾಕೊಬ್ಸ್ ಮೀಡಿಯಾದವರ ಮನ್ನಣೆ ನನಗೆ ಗೌರವ ತ೦ದಿದೆ. ವೈವಿಧ್ಯ, ಸಮಾನತೆ ಮತ್ತು ಶ್ರೇಷ್ಠತೆಯ ನಮ್ಮ ಮೌಲ್ಯಗಳನ್ನು ಎತ್ತಿಹಿಡಿಯುವ ನನ್ನ ಅಸಾಧಾರಣ ತಂಡದೊ೦ದಿಗೆ ನಾನು ಈ ಮನ್ನಣೆಯನ್ನು ಹಂಚಿಕೊಳ್ಳುತ್ತೇನೆ” ಎಂದು ಡಾ. ಜ್ಯೋತ್ಸ್ನಾ ಸೂರಿ ಹೇಳುತ್ತಾರೆ.

ಜಾಕೊಬ್ಸ್ ಮೀಡಿಯಾದ ಅಧ್ಯಕ್ಷ ಕ್ಲೈವ್ ಜಾಕೊಬ್ಸ್ “ನಮ್ಮ ಉದ್ಯಮದ ಮೇಲೆ ಗಾಢವಾದ ಪ್ರಭಾವ ಬೀರಿದವರು, ಅಸಾಧಾರಣ ನಾಯಕರು ಮತ್ತು ಅಪ್ರತಿಮ ವ್ಯವಹಾರಗಳನ್ನು ಮಾತ್ರ ನಮ್ಮ ಹಾಲ್ ಆಫ್ ಫೇಮ್ ಗೌರವಿಸುತ್ತದೆ. ಡಾ.ಜ್ಯೋತ್ಸ್ನಾ ಸೂರಿಯವರಂಥ ವ್ಯಕ್ತಿಗಳನ್ನು ಗುರುತಿಸಲು ನಾವು ರೋಮಾಂಚಿತರಾಗಿದ್ದೇವೆ. ಅವರ ನಾಯಕತ್ವದಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ನಾವೀನ್ಯತೆಯಿದೆ, ಹೀಗಾಗಿ ನಮ್ಮ ವಲಯದಲ್ಲಿ ಅವರು ಅಪಾರ ಪ್ರಭಾವ ಹೊಂದಿದ್ದಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹೀಗೆ ಭಾರತದ ಐಷಾರಾಮಿ ಹೋಟೆಲ್‌ಗಳ ರಂಗದಲ್ಲಿ ಡಾ. ಜ್ಯೋತ್ಸ್ನಾ ಸೂರಿ ತಮ್ಮ ಹೆಗ್ಗುರುತುಗಳನ್ನು ಮೂಡಿಸುತ್ತ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ.