• ನಂಜನಗೂಡು ಪ್ರದ್ಯುಮ್ನ

ಐಯ್ಯಂಗಾರ್ ಹೆಸರು ಕೇಳಿದಾಕ್ಷಣ ಆಹಾರ ಪ್ರಿಯರಿಗೆ ಥಟ್ ಅಂತ ನೆನಪಿಗೆ ಬರೋದು ಪುಳಿಯೋಗರೆ ಮತ್ತು ತುಪ್ಪದ ಘಮಲು ತುಂಬಿದ ಬೆಲ್ಲದ ಪೊಂಗಲ್. ಇವೆರಡಕ್ಕೂ ‘ಐಯ್ಯಂಗಾರ್’ ಹೆಸರು ಒಂದು ರೀತಿ ಬ್ರಾಂಡ್ ಅಂಬಾಸಿಡರ್ ಇದ್ದಂತೆ. ವಿವಿಧ ರೀತಿ ಸ್ವಾದಿಷ್ಟಕರ ಸಿಹಿ ಹಾಗು ಕುರುಕಲು ತಿಂಡಿ ತಿನಿಸುಗಳನ್ನು ತಯಾರಿಸುವುದು ಐಯ್ಯಂಗಾರರಿಗೆ ಒಲಿದುಬಂದ ವರವೇ ಸರಿ.

ಇದನ್ನೂ ಓದಿ:ಮೈಸೂರಿನ ಮನೆಯೂಟಕ್ಕೆ ಶತಮಾನದ ಇತಿಹಾಸ!

ಈಗಂತು ದಿನಕ್ಕೊಂದರಂತೆ, ರಸ್ತೆಗೊಂದೊಂದು ಕೆಫೆ ಅಥವ ಹೊಟೇಲ್‌ಗಳು ತಲೆ ಎತ್ತುತ್ತಿವೆ. ಹಾಗೇ, ಒಂದು ತಿಂಗಳಿಗೆ ಹೇಳ ಹೆಸರಿಲ್ಲದಂತೆ ಮುಚ್ಚಿಯೂಹೋಗುತ್ತಿವೆ. ಹೊಟೇಲ್ ಉದ್ಯಮದಲ್ಲಿ ಎದುರಾಗುವ ಅನೇಕ ಸಮಸ್ಯೆಗಳು, ಸಾವಲುಗಳನ್ನೆಲ್ಲಾ ಎದುರಿಸಿ ಅಳಿದುಳಿದ ಕೆಲವೇ ಹೊಟೇಲ್‌ಗಳ ಪೈಕಿ 2017ರಲ್ಲಿ ಪ್ರಾರಂಭಗೊಂಡು ಕಳೆದ 7 ವರ್ಷದಿಂದ ಮೈಸೂರಿನ ವಾಣಿವಿಲಾಸ ಮೊಹಲ್ಲದ ಗೋಕುಲಂ ಮೊದಲನೇ ಹಂತದ ಮುಖ್ಯರಸ್ತೆಯಲ್ಲಿರುವ ‘ಟಿಕೆಎಸ್ ಐಯ್ಯಂಗಾರ್’ ಹೊಟೇಲ್ ಕೂಡ ಒಂದು.

Untitled design (20)

ಕನಸ್ಸಿನಲ್ಲೂ ಎಣಿಸಿರಲಿಲ್ಲ !

ಚಿಕ್ಕಮಗಳೂರಿನ ಐಯಂಗಾರ್ ಮನೆತನಕ್ಕೆ ಸೇರಿದ ಈ ಹೋಟೆಲ್‌ನ ಮಾಲೀಕರಾದ ವಸುಧಾರವರು ಮೂಲತಃ ಬಿ.ಎ.ಪತ್ರಿಕೋದ್ಯಮ ಪದವೀದರೆ. ಮದುವೆ ನಂತರ ಮಗುವಾದ ಬಳಿಕ ‘ನಾನು ಏನಾದರು ಮಾಡಬೇಕು ಎಂದು ಅವರಿಗೆ ಅನ್ನಿಸಿದಾಗ ಪ್ರಾರಂಭಿಸಿದ್ದೇ ಈ ‘ಟಿಕೆಎಸ್ ಐಯ್ಯಂಗಾರ್’. ಸಂಜೆ ವೇಳೆ ಮನೆಯ ಸಣ್ಣ ಗ್ಯಾರೇಜ್‌ನಲ್ಲಿ ಕೇವಲ ಪುಳಿಯೋಗರೆ, ಬೆಲ್ಲದ ಪೊಂಗಲ್ ಹಾಗೂ ಹಯಗ್ರೀವ ತಯಾರಿಸಿ ಪ್ರಸ್ತುತ ಹೊಟೇಲ್ ಇರುವ ಸ್ಥಳದಲ್ಲೇ ತಂದು ಮಾರಾಟ ಮಾಡಲಾಗುತ್ತಿತ್ತು. ಹೀಗೆ ಪ್ರಾರಂಭಗೊಂಡ ಇವರ ಕನಸು ಇಂದು ಬಾಳೆ ಎಲೆ ಊಟದವರೆಗೆ ಸಾಕಾರವಾಗಿದೆ.

ಹೇಳಿಕೇಳಿ ಐಯ್ಯಂಗಾರ್ ಮನೆತನ, ಜತೆಗೆ ಮನೆಯೇ ಮೊದಲ ಪಾಠಶಾಲೆ ಎನ್ನುವ ವಸುಧಾ ಅವರು, ತಾಯಿ ಹಾಗೂ ಅಕ್ಕ ಇಬ್ಬರ ಸಹಾಯದೊಂದಿಗೆ ಅಡಿಗೆ ಕಲಿತೆ ಎಂದು ಹೇಳುತ್ತಾರೆ. ಅದರಲ್ಲು ಖುದ್ದು ಸಿಹಿ ತಿಂಡಿಗಳನ್ನು ಮೆಚ್ಚಿಕೊಳ್ಳುವ ಇವರು, ಹೊಸತಾಗಿ ಯಾವುದೇ ಸಿಹಿತಿಂಡಿಗಳನ್ನು ಕಂಡರೂ ಸವಿಯುವುದಷ್ಟೇ ಅಲ್ಲದೆ, ಅದನ್ನು ತಯಾರಿಸಿ ಮನೆಮಂದಿಗೆಲ್ಲಾ ಹಂಚುತ್ತಾರೆ. ಮುಂದೊಂದು ದಿನ ನಾನೇ ಹೊಟೇಲ್ ಪ್ರಾರಂಭಿಸಿ ಇತರರಿಗೆ ವಿವಿಧ ರೀತಿಯ ತಿಂಡಿ-ತಿನಿಸುಗಳನ್ನು ಉಣಬಡಿಸುತ್ತೇನೆ ಎಂದು ಕನಸ್ಸಿನಲ್ಲೂ ಎಣಿಸಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..

Untitled design (21)

ಬಾಳೆಎಲೆ ಊಟದ ರುಚಿಯೇ ಬೇರೆ

ಕಳೆದ ಒಂದು ವರ್ಷದ ಹಿಂದಷ್ಟೇ ಟಿಕೆಎಸ್ ಐಯ್ಯಂಗಾರ್ ಹೊಟೇಲ್‌ನಲ್ಲಿ ಮಧ್ಯಾಹ್ನ ಬಾಳೆ ಎಲೆ ಊಟ ಪ್ರಾರಂಭಸಿದ್ದಾರೆ. ಇಲ್ಲಿಯ ಬಾಳೆಎಲೆ ಊಟ ನೋಡಿದರೆ ‘ವಿವಾಹ ಭೋಜನವಿದು ವಿಶಿಷ್ಠ ಭಕ್ಷಗಳಿವು, ಬೀಗರಿಗೆ ಔತಣವಿದು ಅಹ..ಹ..ಹ..ಹ ‘ ಎಂಬ ಹಾಡು ಮೊದಲು ನೆನಪಿಗೆ ಬರುತ್ತದೆ. ಮದುವೆ ಊಟವನ್ನೇ ಮೀರಿಸುವಂತಿದೆ ಇಲ್ಲಿ ಆಹಾರಪ್ರಿಯರಿಗೆ ಉಣಬಡಿಸುವ ಸವಿಯೂಟ.

ಬಾಳೆಎಲೆ ತುದಿಯಲ್ಲಿ ಬಡಿಸುವ ಉಪ್ಪಿನಿಂದ ಹಿಡಿದು ಮಜ್ಜಿಗೆವರೆಗೆ ಎಲ್ಲದರ ರುಚಿ ಹಾಗು ಶುಚಿ ಎರಡಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಉಪ್ಪು, ಎರಡು ತರದ ತರಕಾರಿ ಪಲ್ಯ, ಕೋಸಂಬರಿ, ತವ್ವೆ, ಚಟ್ನಿ, ಚಿತ್ರಾನ್ನ, ಸಾಂಬಾರ್, ರಸಂ, ದಿನಕ್ಕೊಂದು ರೀತಿಯ ಸಿಹಿ ಖಾದ್ಯ, ಮೊಸರು, ಮಜ್ಜಿಗೆ, ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ವಿಧವಿಧವಾದ ಖಾದ್ಯಗಳನ್ನು ಉಣಬಡಿಸುತ್ತಾರೆ. ಒಟ್ಟಾರೆ ಇಲ್ಲಿಗೆ ಬಂದವರು ಭೂರಿ ಭೋಜ ಸವಿಯಬಹುದು.

Untitled design (23)

ಭಟ್ಟರು ಮೆಚ್ಚಿದ ಭೋಜನ

ಕಳೆದ ಮೂರು ವಾರಗಳ ಹಿಂದೆ `ಪ್ರವಾಸಿ ಪ್ರಪಂಚ’ದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಹಾಗೂ ವಿಶ್ವವಾಣಿ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾದ ನಂಜನಗೂಡು ಮೋಹನ್, ಮೈಸೂರಿನ ಲಕ್ಮೀಪುರಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವಿಶಂಕರ್ ಮೈಸೂರಿನ ಟಿಕೆಎಸ್ ಐಯ್ಯಂಗಾರ್ ಹೊಟೇಲ್‌ಗೆ ಭೇಟಿ ನೀಡಿದ್ದರು. ಮಧ್ಯಾಹ್ನ ಬಾಳೆ ಎಲೆ ಊಟ ಸವಿದ ಭಟ್ಟರು ‘ವಾಹ್.. ಅದ್ಬುತವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬೆಳಗಿನ ವಿಶೇಷ ಐಯ್ಯಗಾರ್ ಸ್ಪೆಷಲ್

ನುಚ್ಚಿನಉಂಡೆ, ಬಿಸಿಬೇಳೆಬಾತ್, ಖಾರ ಪೊಂಗಲ್, ಶಾವಿಗೆ ಉಪ್ಪಿಟ್ಟು, ರವೆ ಇಡ್ಲಿ, ತಟ್ಟೆ ಇಡ್ಲಿ, ರವೆ ವಾಂಗಿಬಾತ್, ಹುಳಿ ಅವಲಕ್ಕಿ, ಟೊಮೇಟೊ ಕೇಸರಿಬಾತ್, ಪೈನಾಪಲ್ ಕೇಸರಿಬಾತ್, ಬೆಲ್ಲದ ಕೇಸರಿಬಾತ್, ಗೋದಿ ಹಾಲ್ಬಾಯಿ, ಸಕ್ಕರೆ ಪೊಂಗಲ್, ಹಯಗ್ರೀವ, ಪುಳಿಯೋಗರೆ, ಒತ್ತು ಶಾವಿಗೆ, ಬಾಳೆಎಲೆ ಇಡ್ಲಿ ಮಾತ್ರವಲ್ಲದೆ ಬಹುಬಗೆಯ ದೋಸೆಗಳು ಇಲ್ಲಿ ದೊರೆಯುತ್ತದೆ.

ಮಾಹಿತಿ ಪೆಟ್ಟಿಗೆ

  • ಸಮಯ : ಬೆಳಗ್ಗೆ 7ರಿಂದ ರಾತ್ರಿ 9.30ರವರೆಗೆ.
  • ಕ್ರಿಕೆಟ್ ಆಟಗಾರರು, ಸಿನಿಮಾ ತಾರೆಯರು, ರಾಜಕಾರಣಿಗಳು ಸೇರಿದಂತೆ ಅನೇಕ ಗಣ್ಯರು ಇವರ ಬಾಳೆಎಲೆ ಊಟ ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  • ಚಟ್ನಿಪುಡಿ, ಸಾರಿನಪುಡಿ, ಸಾಂಬಾರ್ ಪುಡಿ, ಪುಳಿಯೋಗರೆ ಪುಡಿ ಸೇರಿದಂತೆ ಚಕ್ಲಿ, ಕೋಡ್ಬಳೆ, ಬಾದಾಮಿಹಾಲು, ತೇಂಗಾಳು, ಹಾಲ್ಬಾಯಿ, ಖಾರಾಬೂಂದಿ, ಖಾರ ಅವಲಕ್ಕಿ, ಸಾದಾ ಅವಲಕ್ಕಿ, ಸಜ್ಜಪ್ಪ ಸೇರಿದಂತೆ ವಿವಿಧ ರೀತಿಯ ಕಾಂಡಿಮೆಂಟ್ಸ್‌ ಇಲ್ಲಿ ಲಭ್ಯವಿದ್ದು, ಕೊಡುವ ಬೆಲೆಗೆ ಮೀರಿದ ಗುಣಮಟ್ಟ ಇವರದ್ದು.