-ಸಿರಿ ಮೈಸೂರು

ರೆಸಾರ್ಟ್‌ ಮಾದರಿಯ ಫಾರ್ಮ್‌ ಹೌಸ್ ಅಂದಾಕ್ಷಣ ನಮಗೆಲ್ಲಾ ನೆನಪಾಗುವುದು ಒಂದು ಐಷಾರಾಮಿ ಜಾಗ, ಇಂಡೋರ್‌ ಹಾಗೂ ಔಟ್‌ಡೋರ್‌ ಗೇಮ್ಸ್, ಒಳ್ಳೆ ಊಟ, ಸ್ವಿಮ್ಮಿಂಗ್‌ ಪೂಲ್. ಮತ್ತಿನ್ನೇನು? ಪೂರ್ತಿ ಮಸ್ತಿ. ಆದರೆ ಈ ಪರಿಕಲ್ಪನೆಗೆ ಸ್ವಲ್ಪ ವಿಭಿನ್ನವಾಗಿ ಮೈಸೂರಿನಲ್ಲಿ ಒಂದು ಫಾರ್ಮ್‌ ವಿಲ್ಲಾ ಇದೆ. ಬೆಂಗಳೂರಿನಿಂದ ಕೇವಲ 2.5 ಗಂಟೆ ಹಾಗೂ ಮೈಸೂರಿನಿಂದ ಮೂವತ್ತೇ ನಿಮಿಷ ಪ್ರಯಾಣ ಮಾಡಿದರೆ ಈ ಜಾಗ ಸಿಗುತ್ತದೆ. ಅಷ್ಟೇನೂ ನಿರೀಕ್ಷೆ ಇಟ್ಟುಕೊಳ್ಳದೆ ಇಲ್ಲಿ ಹೋದ ನನಗೆ ಈ ಜಾಗ ನೋಡಿ ಆಶ್ಚರ್ಯವಾಗಿದ್ದು ಮಾತ್ರ ಸುಳ್ಳಲ್ಲ. ಇದರ ಹೆಸರು ಕಪಿಲಾ ರಿವರ್‌ಫ್ರಂಟ್. ಸಾಮಾನ್ಯವಾಗಿ ಪ್ರಕೃತಿ, ನೀರು, ಶುದ್ಧ ಗಾಳಿ ಹಾಗೂ ಸ್ವಚ್ಛ ವಾತಾವರಣ, ಸ್ವಲ್ಪ ಹಳೆ ಕಾಲದ ಫೀಲ್‌, ನಗರದ ಜಂಜಾಟದಿಂದ ದೂರ ಇರುವ ಜಾಗಗಳೆಂದರೆ ನನಗೆ ಎಲ್ಲಿಲ್ಲದ ಪ್ರೀತಿ.‌ ಈ ಅಂಶಗಳನ್ನೂ ಭರಪೂರವಾಗಿ ನೀಡಿದ ಜಾಗ ಕಪಿಲಾ ರಿವರ್‌ಫ್ರಂಟ್.‌ ಹೆಸರೇ ಹೇಳುವಂತೆ ಇದು ನದಿಯ ಪಕ್ಕ ಇರುವ ಜಾಗ. ರೆಸಾರ್ಟ್‌ ಒಳಗಿನಿಂದಲೇ ನದಿಗೆ ಸಂಪರ್ಕ ಇದೆ.

Kapila riverfront resort

ಐದು ರೂಂಗಳಿರುವ ಈ ಫಾರ್ಮ್‌ ವಿಲ್ಲಾ ಇರುವುದು ಹಳೆಯ ಕಾಲದ ತೊಟ್ಟಿಮನೆಯ ಶೈಲಿಯಲ್ಲಿ. ಮಳೆ ಬಂದರೆ ನೀರು ಜಿನುಗುತ್ತದೆ, ಬಿಸಿಲು ಇದ್ದರೆ ತೊಟ್ಟಿಯ ಅಂಗಳದಲ್ಲೆಲ್ಲಾ ಬೆಳಕು ತುಂಬಿರುತ್ತದೆ. ಇದಕ್ಕೆ ತಕ್ಕಂತೆ ಅಪರೂಪದ ಕೆತ್ತನೆ ಇರುವ ಮರದ ಕಂಬಗಳು, ಗೋಡೆಯ ಮೇಲೆಲ್ಲಾ ರಾಜಾ ರವಿವರ್ಮನ ಪೇಂಟಿಂಗ್‌ಗಳು..ಆಹಾ! ಕಾಲವೇ ಹಿಂದಕ್ಕೆ ಪ್ರಯಾಣಿಸುತ್ತಿದೆಯೇನೋ ಎನಿಸುವಂತೆ ಮಾಡುತ್ತದೆ ಈ ಜಾಗ. ಇಲ್ಲಿರುವ ಒಂದೊಂದು ಮೇಜು, ಕುರ್ಚಿ, ಕನ್ನಡಿ ಹಾಗೂ ಇನ್ನಿತರ ಸಣ್ಣಪುಟ್ಟ ವಸ್ತುಗಳು ಸಹ ಹಳೆ ಕಾಲದ ಹುರುಪನ್ನು ನೆನಪಿಸುವಂಥದ್ದು. ಇದರ ಜತೆಗೆ ಇಡೀ ಫಾರ್ಮ್‌ ವಿಲ್ಲಾ ಪೂರ್ತಿ ಹಸಿರು. ಪ್ರತಿ ಕೋಣೆಯ ಸಿಟ್‌ ಔಟ್‌ನಲ್ಲೂ ಹಸಿರು, ಊಟ ಮಾಡುವ ಗಝೀಬೋ ಸುತ್ತ ಕೂಡ ಪೂರ್ತಿ ಹಸಿರು. ಮನೆಯಿಂದ ಸ್ವಲ್ಪ ಪಕ್ಕಕ್ಕೆ ಹೋದರೆ ಅಡಿಕೆ ತೋಟ. ಅದರ ಪಕ್ಕ ನಡೆದು ಹೋಗಲು ವಿಶಾಲವಾದ ಜಾಗ. ನಡೆಯುತ್ತಾ ಹೋದರೆ ದಾರಿ ಕೊನೆಯಾಗುವುದು ಮತ್ತೆ ಕಪಿಲಾ ನದಿಯ ಮಡಿಲಲ್ಲಿ.

Rooms in Kapila riverfront resort

ಪ್ರಕೃತಿಯ ಮಧ್ಯೆ ಸುಂದರವಾಗಿ ಅರಳಿದ ಹೂವಿನಂತಿರುವ ಈ ಜಾಗದಲ್ಲಿ ಕಾಲ ಕಳೆಯಲು ಅಳೆಗುಳಿಮನೆ, ಪಗಡೆ, ಚೌಕಾಬಾರ ಸೇರಿದಂತೆ ಇಂಡೋರ್‌ ಹಾಗೂ ಔಟ್‌ಡೋರ್‌ ಗೇಮ್ಸ್‌ಗಳಿವೆ, ಬಾರ್ಬಿಕ್ಯೂ, ಕ್ಯಾಂಪ್‌ ಫೈರ್‌, ಸ್ವಿಮ್ಮಿಂಗ್‌ ಪೂಲ್, ಸಸ್ಯಾಹಾರಿ ಹಾಗೂ ಮಾಂಸಾಹಾರಿ ಊಟದ ವ್ಯವಸ್ಥೆ, ಫಿಶಿಂಗ್, ಸೈಕ್ಲಿಂಗ್‌ ನಂಥ ಸೌಕರ್ಯಗಳಿವೆ. ಇಲ್ಲಿಂದ ಅನತಿ ದೂರದಲ್ಲಿರುವ ಐತಿಹಾಸಿಕ ಹತ್ವಾಳು ಕಟ್ಟೆ/ಹುಲ್ಲಹಳ್ಳಿ ಡ್ಯಾಂಗೆ ಜೀಪ್‌ ರೈಡ್‌ ಕೂಡ ಇದೆ. ಇಲ್ಲಿಂದ ಸೂರ್ಯಾಸ್ತ ನೋಡುವುದು ಮಾತ್ರ ಅತ್ಯಂತ ಸುಂದರ ಅನುಭವ. ನಾನು ಇಲ್ಲಿ ಉಳಿದಾಗ ನೋಡಿದ ಹಲವು ಅದ್ಭುತ ಜಾಗಗಳೆಂದರೆ ಹುಲ್ಲಹಳ್ಳಿ ಡ್ಯಾಂ, ಇತಿಹಾಸ ಪ್ರಸಿದ್ಧ ಕೆಂಬಾಳು ರಾಮನ ದೇವಸ್ಥಾನ, ನಂಜನಗೂಡು, ಸದ್ಗುರು ಮಹದೇವ ತಾತಪ್ಪನವರ ಸಂಗಮ. ಇವೆಲ್ಲಾ ಇರುವುದು ಇಲ್ಲಿಂದ ಕೆಲವೇ ನಿಮಿಷ ದೂರದಲ್ಲಿ. ಇನ್ನು ಮೈಸೂರಂತೂ ಇಲ್ಲಿಂದ ಅರ್ಧ ಗಂಟೆಯ ಪ್ರಯಾಣ. ಸಂಜೆ ಕಾಫಿ ಕುಡಿಯುತ್ತಾ ಅಡಿಕೆ ತೋಟದ ಪಕ್ಕ ಮಾಡಿದ ವಾಕಿಂಗ್, ನದಿ ಪಕ್ಕದ ಕಲ್ಲುಬೆಂಚಿನ ಮೇಲೆ ಕುಳಿತು ಸವಿದ ಬೆಳಗಿನ ತಿಂಡಿ, ಹಕ್ಕಿಗಳ ಚಿಲಿಪಿಲಿಯೊಂದಿಗೆ ದಿನ ಆರಂಭವಾದ ರೀತಿ, ಸಂಜೆ ಹತ್ವಾಳು ಕಟ್ಟೆಯ ಬಳಿ ಎಳನೀರು ಕುಡಿಯುತ್ತಾ ನೋಡಿದ ಸೂರ್ಯಾಸ್ತ, ರಾತ್ರಿ ನೀರು ಹರಿಯುವ ಸದ್ದು ಕೇಳುತ್ತಾ ನಕ್ಷತ್ರಗಳನ್ನು ನೋಡುತ್ತಾ ಉಯ್ಯಾಲೆಯಲ್ಲಿ ನಿದ್ರೆಗೆ ಜಾರಿದ ಕ್ಷಣ..ಆಹಾ! ಎಲ್ಲವೂ ಅವಿಸ್ಮರಣೀಯ! ಇಲ್ಲಿ ಬರ್ತ್‌ಡೇ, ಆನಿವರ್ಸರಿ, ಕಾರ್ಪೊರೇಟ್‌ ಪಾರ್ಟಿ ಸೇರಿದಂತೆ ಬೇರೆ ಬೇರೆ ಆಚರಣೆಗಳನ್ನೂ ಮಾಡಬಹುದಂತೆ. ನಿಮಗೂ ಹಳೆ ಕಾಲದ ತೊಟ್ಟಿಮನೆ ಹಾಗೂ ನದಿತೀರದ ಜಾಗ ಇಷ್ಟವಿದ್ದರೆ ತಪ್ಪದೆ ಕಪಿಲಾ ರಿವರ್‌ಫ್ರಂಟ್‌ಗೆ ಹೋಗಿಬನ್ನಿ. ನಾನಂತೂ ಅಲ್ಲಿಗೆ ಮತ್ತೊಮ್ಮೆ ಹೋಗಲು ಕಾತರಳಾಗಿದ್ದೇನೆ!

ಬುಕಿಂಗ್ ವಿಳಾಸ

ಸ್ಪೈಸ್ ಟ್ರಿಪ್, ಪ್ರಶಾಂತ್ ಪ್ಲಾಸಾ, 5ನೇ ಅಡ್ಡರಸ್ತೆ, ಸರಸ್ವತಿಪುರ, ಮೈಸೂರು, ಕರ್ನಾಟಕ, 570009

+91 96066 54482 || 0821-4001100 •

info@kapilariverfront.com