• ವಿ. ಶ್ರೀನಿವಾಸ

ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾ ನಗರದ ಹೆಸರನ್ನು ನಾವೆಲ್ಲ ಕೇಳಿದ್ದೇವೆ. ಇದು ಜಿನೀವಾ ಹೆಸರಿನ ಸರೋವರದ ತಟದಲ್ಲಿದೆ. ಜಗತ್ತಿನ ಶಾಂತಿಯ ರಾಜಧಾನಿ ಎಂದು ಹೆಸರಾಗಿದೆ. ಕಾರಣ, ಅನೇಕ ಜಾಗತಿಕ ಶಾಂತಿ ಒಪ್ಪಂದಗಳಿಗೆ ಈ ಸ್ಥಳ ಸಾಕ್ಷಿಯಾಗಿದೆ. ಅದೇ ಜಿನೀವಾ ಸರೋವರದ ಉತ್ತರ ಕರಾವಳಿಯಲ್ಲಿ ಇರುವುದು ‘ವೆವೆ’ ಹೆಸರಿನ ಪುಟ್ಟ ಊರು.

ಇದನ್ನೂ ಓದಿ: ಸ್ವಿಟ್ಜರ್‌ಲ್ಯಾಂಡ್‌ ಮತ್ತು ಚಾಕೊಲೆಟ್‌ ಎಂಬ ಪ್ರವಾಸಿಮಿತ್ರ!

ಚಾಪ್ಲಿನ್‌ ವರ್ಲ್ಡ್‌

ʻವೆವೆʼ ಸಹಜವಾಗಿ ಸ್ವಿಟ್ಜರ್‌ಲ್ಯಾಂಡಿನ ಪ್ರಕೃತಿ ಸೌಂದರ್ಯವನ್ನು ಮೈವೆತ್ತಿದೆ. ಆಲ್ಪ್ಸ್‌ ಪರ್ವತದ ಬದಿಗೆ ಜಿನೀವಾ ಸರೋವರ, ಅದರ ತಟದಲ್ಲಿ ಈ ‘ವೆವೆ’ ಎಂಬ ಸುಂದರ ಊರು. ಇದರ ವಿಶೇಷವೆಂದರೆ ಜಗತ್‌ ಪ್ರಸಿದ್ಧ ನಟ ‘ಚಾರ್ಲಿ ಚಾಪ್ಲಿನ್‌’ ಈ ಊರಿನಲ್ಲಿ ತಮ್ಮ ಜೀವನದ ಕೊನೆಯ 25 ವರ್ಷಗಳನ್ನು ಕಳೆದರು. ಅವರ ಮನೆಯನ್ನು ‘ಚಾಪ್ಲಿನ್‌ ವರ್ಲ್ಡ್‌’ ಎಂಬ ಮ್ಯೂಸಿಯಂ ಆಗಿ ಸಂರಕ್ಷಿಸಲಾಗಿದೆ. ಅವರ ಜೀವನ ಮತ್ತು ಸಿನಿಪಯಣವನ್ನು ಬಿಂಬಿಸುವ ಇನ್ನೊದು ಮ್ಯೂಸಿಯಂ ಸಹ ಬಳಿಯಲ್ಲಿದೆ. ರಾಜಕೀಯ ಕಾರಣಗಳಿಗಾಗಿ ಅಮೆರಿಕದಿಂದ ಬಹಿಷ್ಕೃತರಾದ ಚಾಪ್ಲಿನ್‌, 1952ರಲ್ಲಿ ಇಲ್ಲಿಗೆ ಬಂದು 1977ರಲ್ಲಿ ನಿಧನರಾಗುವವರೆಗೂ ನೆಲೆಸಿದ್ದರು. ವೆವೆಯ ಹಲವೆಡೆ ಚಾರ್ಲಿ ಚಾಪ್ಲಿನ್‌ ಅವರ ಪ್ರತಿಮೆಗಳು ಇವೆ.

Untitled design (2)

ಚಾಪ್ಲಿನ್‌ ʻಮಾಡ್ರೆನ್‌ ಟೈಮ್ಸ್‌ʼ

ನಾವು ವೆವೆ ಊರಿನ ʼಮಾಡ್ರೆನ್‌ ಟೈಮ್ಸ್‌ʼ ಹೊಟೇಲ್‌ನಲ್ಲಿ ಒಂದು ದಿನ ತಂಗಿದ್ದೆವು. ಇದು ಪ್ರಖ್ಯಾತ ಮ್ಯಾರಿಯೆಟ್‌ ಹೊಟೇಲ್‌ ಚೈನ್‌ಗೆ ಸೇರಿದ ಹೊಟೇಲ್‌. ಚಾರ್ಲಿ ಚಾಪ್ಲಿನ್‌ ಅವರ ʼಮಾಡ್ರೆನ್‌ ಟೈಮ್ಸ್‌ʼ ಸಿನಿಮಾದ ಹೆಸರನ್ನು ಹೊಂದಿರುವುದಷ್ಟೇ ಅಲ್ಲ; ಇಡೀ ಹೊಟೇಲ್‌ ಚಾಪ್ಲಿನ್‌ಮಯವಾಗಿದೆ. ಒಳಹೊಕ್ಕ ತಕ್ಷಣ ರಿಸೆಪ್ಷನ್‌ ಲಾಂಜ್‌ನಲ್ಲಿ ಅದೇ ಸಿನಿಮಾದ ಒಳಾಂಗಣ ಅಲಂಕಾರ. ಕಾರಿಡಾರ್‌ಗಳೂ ಚಾಪ್ಲಿನ್‌ ಸಿನಿಮಾದ ಚಿತ್ರಗಳು, ಮಾಹಿತಿಗಳು, ಹೇಳಿಕೆಗಳು ಇತ್ಯಾದಿಗಳಿಂದ ಅಲಂಕೃತವಾಗಿವೆ. ರೂಮುಗಳ ಒಳಗೂ ಚಾಪ್ಲಿನ್‌ ಗುರುತುಗಳಿವೆ. ಹೊಟೇಲ್‌ ಎದುರಿಗಿನ ಬೆಂಚಿನ ಮೇಲೆ ಚಾಪ್ಲಿನ್‌ ಕಾಲಿನ ಮೇಲೆ ಕಾಲು ಹಾಕಿ ಕುಳಿತಿರುವ ಪ್ರತಿಮೆಯಿದೆ. ಅದರ ಅಕ್ಕ-ಪಕ್ಕದಲ್ಲಿ ಕುಳಿತು ಚಿತ್ರ ತೆಗೆಸಿಕೊಳ್ಳದ ಪ್ರವಾಸಿಗರೇ ಇಲ್ಲ.

Untitled design

ವೆವೆಯಲ್ಲೇ ಉಳಿದರು ಚಾಪ್ಲಿನ್‌

ಈ ಮೇರು ನಟನಿಗೆ ಈ ವೆವೆ ಊರು ತೋರಿರುವ ಪ್ರೀತಿ ಅಸಾಧಾರಣವಾದುದು. ಅವರಿಗೆ ಆಶ್ರಯ, ಸುಖಮಯ ಸಾಂಸಾರಿಕ ಜೀವನ, ಮನಶಾಂತಿ ನೀಡಿದ ಈ ಊರನ್ನು ಬಿಡಲು ಅವರು ಒಪ್ಪಲಿಲ್ಲ. ಅಮೆರಿಕ ಬಹಿಷ್ಕಾರವನ್ನು ಹಿಂತೆಗೆದುಕೊಂಡರೂ ಅವರು ವಾಪಸ್‌ ಹೋಗಲಿಲ್ಲ. 1977ರಲ್ಲಿ ನಿಧನರಾಗುವವರೆಗೂ ಅವರು ಇಲ್ಲಿಯೇ ನೆಲೆಸಿದರು. ಇಂಥ ಮಹಾನ್‌ ನಟನ ಥೀಂ ಹೊಂದಿರುವ ಹೊಟೇಲ್‌ನಲ್ಲಿ ಒಂದು ದಿನ ಉಳಿದುಕೊಂಡಿದ್ದ ಸುಂದರ ಅನುಭವ ನಮ್ಮ ನೆನಪಿನಂಗಳದಲ್ಲಿ ಸದಾ ಹಸಿರಾಗಿರುತ್ತದೆ.

ಮಾಹಿತಿಗಾಗಿ

  • ವೆವೆ ಊರಿನಲ್ಲಿ 1867ರಲ್ಲಿ ಪ್ರಾರಂಭವಾದ ಅಂತಾರಾಷ್ಟ್ರೀಯ ಬ್ರ್ಯಾಂಡ್‌ ನೆಸ್ಲೆ. ಈಗಲೂ ಅದರ ಮುಖ್ಯ ಕಚೇರಿ ವೆವೆಯಲ್ಲಿದೆ.
  • ಇಲ್ಲಿ ನೆಸ್ಲೆ ಕಂಪೆನಿ ʻಅಲಿಮೆಂಟೇರಿಯಮ್ʼ ಸ್ಥಾಪಿಸಿದೆ. ಇದು ಆಹಾರ ಮತ್ತು ಪೌಷ್ಟಿಕತೆಗೆ ಮೀಸಲಾದ ವಿಶ್ವದ ಮೊದಲ ಮ್ಯೂಸಿಯಂ.
  • ಲೇಕ್ ಜಿನೀವಾದ ನೀರಿನೊಳಗಿನ ಬೃಹತ್ 'ಫೋರ್ಕ್' ಶಿಲ್ಪ ಪ್ರಸಿದ್ಧವಾಗಿದೆ.
  • ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಲಾವಾಕ್ಸ್ ದ್ರಾಕ್ಷಿತೋಟಗಳು ವೆವೆ ಪಕ್ಕದಲ್ಲೇ ಇವೆ.
  • ಸ್ವಿಟ್ಜರ್‌ಲ್ಯಾಂಡ್‌ ಚಾಕೊಲೆಟ್‌ಗೆ ಜಗತ್ಪ್ರಸಿದ್ಧವಾಗಿದೆ. 1875ರಲ್ಲಿ ಮಿಲ್ಕ್‌ ಚಾಕೊಲೆಟನ್ನು ಇಲ್ಲಿಯೇ ಮೊದಲಿಗೆ ತಯಾರಿಸಲಾಯಿತು.