- ವೈ.ಕೆ.ಸಂಧ್ಯಾಶರ್ಮ

ಎದುರಿನ ಸುಂದರದೃಶ್ಯ ಕಾಣುತ್ತ ತೆರೆದ ಬಾಯಿ ತೆರೆದಹಾಗೇ ಬೆಕ್ಕಸ ಬೆರಗಿನಿಂದ ಅರಳಿಕೊಂಡುಬಿಟ್ಟಿತ್ತು. ಕಲಾವಿದನೊಬ್ಬ ಹರವಾದ ಕ್ಯಾನ್‍ವಾಸಿನ ಮೇಲೆ ತನ್ನ ಕಲ್ಪನೆಯ ಕುಂಚವರಳಿಸಿ ಅದ್ಭುತ ವರ್ಣಮೇಳದಲ್ಲಿ ಮನೋಹರ ಚಿತ್ರ ಬಿಡಿಸಿದಂತೆ ಭಾಸ. ಹೌದು, ಆ ಮನಸೆಳೆವ ದೃಶ್ಯ ದಂಗು ಬಡಿಸಿತ್ತು. ಅದು ‘ಆಸ್ಟ್ರೇಲಿಯಾ’ದ ಸಿಡ್ನಿಯಿಂದ 120 ಕಿಮಿ ದೂರದಲ್ಲಿರುವ ‘ಕಯಾಮಾ’ ಎಂಬ ಸುಂದರ ತಾಣ!

ಕಣ್ಣ ದಿಗಂತದವರೆಗೂ ಪಸರಿಸಿದ ಸಾಗರದ ಹೆದ್ದೆರೆಗಳು ನಿಧಾನವಾಗಿ ನಮ್ಮತ್ತ ಬಿಳಿನೊರೆಯುಕ್ಕಿಸುತ್ತ ಫ್ರಿಲ್‍ಲಂಗ ತೊಟ್ಟ ಪುಟ್ಟಬಾಲೆಯಂತೆ ಕುಪ್ಪಳಿಸಿಕೊಂಡು ಚಿಮ್ಮಿಬರುತ್ತಿತ್ತು. ಹಾಗಂಥ ಅದು ಸಮುದ್ರದ ದಂಡೆಯಲ್ಲ. ಸಾಗರದಂಚಿನ ನೀರು ತೆಳುವಾಗಿ ಹರಿಯುತ್ತ `ಕೊಲ್ಲಿ'ಯಂಥ ವಿನ್ಯಾಸದಲ್ಲಿ ಭೂಸೆರಗಿಗೆ ತಾಗಿ ನಿಲ್ಲುವ ರಮ್ಯ ತಾಣ. ಅದಕ್ಕೆ ತಡೆಗೋಡೆ ಒಡ್ಡಿದಂತೆ ಕಪ್ಪನೆಯ ಶಿಲೆಯ ದಿಂಡುಗಲ್ಲುಗಳು ಉದ್ದಕ್ಕೂ ಚೆಲ್ಲಿ ಬಿದ್ದಿದ್ದವು. ಸಣ್ಣಗುಡ್ಡದ ಹಚ್ಚ ಹಸುರಿನ ಲಾನಿನಮೇಲೆ ನಿಂತು ಸುತ್ತಣ ಸುಂದರ ಪ್ರಕೃತಿನೋಟಗಳನ್ನು ಕಣ್ಣಿನಲ್ಲಿಯೇ ಹೀರಿಕೊಳ್ಳುವಂತಿದ್ದವು.

Untitled design (18)

ನೀರಿನ ಈ ದಂಡೆಯ ಮೇಲೆ ನಾವಿದ್ದರೆ ಅನತಿ ದೂರದ ಎದುರು ತೀರದ ಪ್ರದೇಶ ಹಸಿರು ಹುಲ್ಲಿನ ಮಕಮಲ್ಲಿನಂಥ ಗುಡ್ಡಗಳ ಮಾಲೆ. ಅದರ ಮೇಲೆ ಅಲ್ಲಲ್ಲಿ ಬೆಳೆದು ನಿಂತ ಉದ್ದನೆಯ ಪೈನ್ ಮರಗಳ ಸೊಬಗಿನ ಹಿನ್ನಲೆಯಲ್ಲಿ ಅಂದವಾದ ಹೆಂಚಿನ ಮನೆಗಳು ಕಾಣುತ್ತ ಒಂದು ಅನ್ಯಾದೃಶ ಚಿತ್ರಣವನ್ನು ಕಣ್ಣೆದುರು ಹರಡಿತ್ತು. ನಾವು ಹೊರಟ ಹಸಿರುಗುಡ್ಡದ ದಾರಿಗುಂಟ ಅಲ್ಲಲ್ಲಿ ಗುಂಪಾಗಿ ನೆಲದ ಮೇಲೆ ಆಹಾರವನ್ನು ಹೆಕ್ಕುವುದರಲ್ಲಿ ನಿರತವಾಗಿದ್ದ ಪಾರಿವಾಳಕ್ಕಿಂತ ದೊಡ್ಡ ಗಾತ್ರದ ಬಿಳಿಬಣ್ಣದ, ಕೆಂಪು ಕೊಕ್ಕಿನ ಹಕ್ಕಿಗಳು.

ಸುತ್ತ ಕೊರಳು ಹೊರಳಿಸಿ ನೋಡುತ್ತ, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಲೇ ಸಣ್ಣಗುಡ್ಡವೇರಿದರೆ ಅದರ ನೆತ್ತಿಯ ಮೇಲಿದ್ದ ಹಾಲುಬಿಳುಪಿನ ನೀಳಗಂಭವೇ ಲೈಟ್ಹೌಸ್ ಗೋಪುರ. 1887 ರಲ್ಲಿ ನಿರ್ಮಾಣವಾದದ್ದು. ಅಲ್ಲಿಗೆ ತಲುಪುವ ರಸ್ತೆಯ ಇಬ್ಬದಿಯಲ್ಲೂ ನೂರಾರು ಪ್ರವಾಸಿಗರ ಕಾರುಗಳು ನಿಂತಿದ್ದವು. ಅಲ್ಲಿಂದ ಮುಂದಕ್ಕೆ ನೂರು ಹೆಜ್ಜೆ ಹಾಕಿದರೆ ಕಾಣುವುದೇ, ವಿಶ್ವದಲ್ಲೇ ಅತ್ಯಂತ ದೊಡ್ಡದಾದ ವಿಖ್ಯಾತ, ಕಯಾಮದ `ಬ್ಲೋ ಹೋಲ್' ಎಂಬ ವಿಸ್ಮಯ!

ಸಾವಿರಾರು ವರ್ಷಗಳ ಕೆಳಗೆ ಪರ್ವತದಿಂದ ಉಕ್ಕಿ ಹರಿದ ಜ್ವಾಲಾಮುಖಿಯ ಅವಶೇಷಗಳು, ಅದರ ಪಳೆಯುಳಿಕೆಗಳಂತೆ ಕಾಣುವ ಸುತ್ತ ರಾಶಿ ರಾಶಿಯಾಗಿ ಬಿದ್ದಿರುವ ಕಡುಗಪ್ಪು ಬಣ್ಣದ ನುಣ್ಣನೆಯ ಶಿಲೆಗಳು ಸಮುದ್ರಕ್ಕೆ ತಡೆಗೋಡೆಯಂತೆ ಕೋಟೆಗಟ್ಟಿವೆ. ಆ ಪರ್ವತದ ಒಳ ಭಾಗವೆಲ್ಲ ಬರಿದಾಗಿ ಕುಗ್ಗಿ, ಈಗ ಸಣ್ಣಗುಡ್ಡದಂತೆ ಹರಡಿಕೊಂಡಿರುವ ಸ್ಥಳದ ನೆತ್ತಿಯ ಮೇಲೆಯೇ ನಾವು ನಿಂತದ್ದು. ಇಂದು ಅದೇ ಜಾಗ ಸುಂದರ ಉದ್ಯಾನವನ, ಹಸಿರುಹುಲ್ಲಿನ ಲಾನ್ ಆಗಿ, `ಬ್ಲೋ ಹೋಲ್' ಪ್ರಸಿದ್ಧಿಯ ಪ್ರವಾಸೀ ಆಕರ್ಷಣಾ ಕೇಂದ್ರವಾಗಿದೆ.

Untitled design (17)

ಕಳೆದ ನೂರು ವರ್ಷಗಳಿಗೂ ಹಿಂದಿನಿಂದ ಜನಗಳನ್ನು ಸೆಳೆಯುತ್ತಿರುವ ಅಚ್ಚರಿಯ ಕೇಂದ್ರವಾಗಿ ಪ್ರಸಿದ್ಧವಾದ ಈ `ಬ್ಲೋ ಹೋಲ್' ನೋಡಲು ಪ್ರಪಂಚದ ಮೂಲೆ ಮೂಲೆಗಳಿಂದ ಪ್ರತಿವರ್ಷ ಏಳು ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆಂಬ ಅಂದಾಜಿದೆ.

ದಕ್ಷಿಣದಿಂದ ಪೂರ್ವಕ್ಕೆ ಹಾದುಹೋಗುವ ಈ ಸಾಗರದ ನೀರಿನಲೆಗಳು ಸುತ್ತ ಕೋಟೆಯಂತೆ ನಿಂತಿರುವ ಕರಿಶಿಲೆಯ ಹೆಬ್ಬಂಡೆಯನ್ನು ಅದೆಷ್ಟೋ ಸಹಸ್ರ ವರ್ಷಗಳಿಂದ ಕೊರೆ ಕೊರೆಯುತ್ತಲೇ ಇದ್ದು, ಅವು ಬೆಲ್ಲದಚ್ಚುಗಳನ್ನು ಜೋಡಿಸಿದಂತೆ ಕಾಣುತ್ತವೆ. ಅದೆಷ್ಟೋ ಶತಮಾನಗಳಿಂದ ದೈತ್ಯಾಕಾರದ ಅಲೆಗಳ ಹೊಡೆತಕ್ಕೆ ಸಿಕ್ಕ ಹೆಬ್ಬಂಡೆಯ ನಡುವೆ ದೊಡ್ಡ ರಂಧ್ರದಂತಾಗಿ, ಅಥವಾ ಬಿರುಕುಬಿಟ್ಟಂತಾಗಿ ಅದರೊಳಗೆ ಭರದಿಂದ ನುಗ್ಗುವ ಅಲೆಗಳಬ್ಬರದ ನೀರು, ಬಂಡೆಗಳ ಈ ಬದಿ ನಾಲ್ಕಾಳೆತ್ತರ ಜೋರಾಗಿ ಚಿಮ್ಮುವ ವಿಸ್ಮಯ ನೋಟವೇ ಈ `ಬ್ಲೋ ಹೋಲ್'.

ಸಮುದ್ರದ ವಾತಾವರಣದ ಸ್ಥಿತಿಗನುಗುಣವಾಗಿ ಅಲೆಗಳು ಭರದಿಂದ ಹೆಬ್ಬಂಡೆಯ ಬಿರುಕಿನ ರಂಧ್ರದೊಳಗಿಂದ ತೂರಿ ಇತ್ತಕಡೆ ಜೋರಾಗಿ ಹೊರಚಿಮ್ಮುವ ಕಾರಂಜಿ ಸುಮಾರು 25 ಮೀಟರುಗಳಷ್ಟು (82 ಅಡಿ) ಎತ್ತರಕ್ಕೇರಿ ಚಿಮುಕಿಸುವ ಜಲರಾಶಿಯ ಸೊಬಗಿನ ನೋಟವೇ ನೋಟ. ಈ ಬಗೆಯ ನೀರಿನ ಚಿಮ್ಮುವಿಕೆ ಸುಮಾರು ಐದೈದು ನಿಮಿಷಕ್ಕೂ ಸಂಭವಿಸಿದರೂ ಅದು ಎಲ್ಲ ಬಾರಿಯೂ ಒಂದೇ ರಭಸದಲ್ಲಿರುವುದಿಲ್ಲ, ಎತ್ತರಕ್ಕೇರುವುದಿಲ್ಲ. ಅತ್ತಕಡೆ ಎತ್ತರದ ಜಾಗದಲ್ಲಿ ಕಬ್ಬಿಣದ ಕಟಕಟೆಯ ಆಚೆ, ಈ ಅಚ್ಚರಿಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕುತೂಹಲದಿಂದ ಜಮಾಯಿಸುವ ಟೂರಿಸ್ಟ್ ಗಳ ದೊಡ್ಡ ಜನಗುಂಪು. ಒಂದೊಮ್ಮೆ ಎತ್ತರಕ್ಕೆ ಚಿಮ್ಮುವ ಜಲರಾಶಿ ನೆರೆದವರ ಮೈಮುಖಗಳನ್ನು ನೆನೆಸಿ ಸ್ನಾನ ಮಾಡಿಸಿದಾಗ `ಹೋ' ಎಂದು ಕೂಗುವ ಅವರ ಸಡಗರವನ್ನು ನೋಡಬೇಕು. ಪುಲಕಗೊಂಡ ಜನ ಮತ್ತೆ ಮತ್ತೆ ಅದನ್ನು ಕಾಣಲು ಕಾತುರರಾಗಿ ಇನ್ನು ಕೊಂಚ ಹೊತ್ತು ಅಲ್ಲೇ ಕಾಯುತ್ತಾರೆ. ಒಟ್ಟಾರೆ ಈ ಜಲಧಾರೆಯ ಅನುಭವ ರೋಮಾಂಚಕ ಮತ್ತು ಸ್ಮರಣೀಯ. ಕಡುಗಪ್ಪು ಕಲ್ಲಿನ ದೊಡ್ಡ ಒರಳಿನಂಥ ರಂಧ್ರವನ್ನು ಬರಿದೇ ನೋಡಲು ಕೂಡ ಚೆಂದ.

ಈ ಸುಂದರ ವಿಸ್ಮಯ ತಾಣವನ್ನು 1797 ರ ಡಿಸೆಂಬರ್ 6 ರಂದು ಮೊದಲು ಗುರುತಿಸಿದ ಯೂರೋಪಿಯನ್, ಕಿಯಾರ್ನೆ ಸ್ಮಿತ್.

Untitled design (16)

ಈ ಜಾಗದಿಂದ ಕದಲಿ, ಮತ್ತೆ ಗುಡ್ಡದ ಇಳಿಜಾರಿನ ದಾರಿಗುಂಟ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಹಸಿರು ಹಾಸು, ಸಾಲು ಸಾಲು ಪೈನ್ ಟ್ರೀಗಳು...ರಾಶಿ ರಾಶಿ ಹಕ್ಕಿಗಳು ಸಣ್ಣ ಸಣ್ಣ ಹೆಜ್ಜೆಗಳಲ್ಲಿ ಕುಪ್ಪಳಿಸುತ್ತ ಆಹಾರ ಹೆಕ್ಕುವ ಮುದ ನೀಡುವ ದೃಶ್ಯ. ಇದೊಂದು ಪಿಕ್‍ನಿಕ್‍ಗೆ ಹೇಳಿಮಾಡಿಸಿದ ಸುಂದರ ತಾಣ. ಅದರಲ್ಲೂ ಬೇಸಿಗೆಯ ಸ್ವರ್ಗ.

ಸಮುದ್ರ ತೀರದ ಕರಾವಳಿಯ ಈ ಪುಟ್ಟ ಊರು ನಿಜವಾಗಲೂ ನೋಡಲು ಬಲು ಮಾಟವಾಗಿದೆ. ದಕ್ಷಿಣ ಸಿಡ್ನಿಯ ಭಾಗದ `ಇಲ್ಲಾವರ' ಜಿಲ್ಲೆಯಲ್ಲಿರುವ ಈ ಕಯಾಮಾ, ಸಿಡ್ನಿನಗರದಿಂದ 120 ಕಿ.ಮೀ ದೂರದಲ್ಲಿದೆ. 23,973 ರಷ್ಟು ಜನಸಂಖ್ಯೆ ಹೊಂದಿರುವ 5.4 ಚದರ ಮೈಲಿ ಅಳತೆಯ ಈ ಚಿಕ್ಕ ಊರಿನ ಸುತ್ತ ಮುತ್ತ ಅನೇಕ ಪ್ರವಾಸೀ ತಾಣಗಳಿವೆ. ನೀರಿನಾಟದ ಸರ್ಫಿಂಗ್ ಮಾಡಲು ಅನೇಕ ರಮಣೀಯ ಬೀಚ್‍ಗಳಿವೆ. ರಮ್ಯವಾದ ಕ್ಯಾರವಾನ್ ಪಾರ್ಕ್‍ಗಳು ಇರುವ ಈ ಸ್ಥಳದ ಸುತ್ತ ಕರಾವಳಿಯ ಗುಡ್ಡಗಳು ಮಳೆ ಬೀಳುವ ಕಾನನದ ದಟ್ಟ ಪೊದೆಗಳಿಂದಾವೃತವಾಗಿದೆ.

ಹಸಿರು ನಳನಳಿಸುವ ಪ್ರಕೃತಿ ಸೌಂದರ್ಯದಿಂದ ಸೆಳೆವ ಈ ಸುಂದರ ಪುಟ್ಟ ಊರಿನ, ಸ್ವಚ್ಛತೆಯಿಂದ ಹೊಳೆವ ಮುಖ್ಯರಸ್ತೆಯ ಒಂದು ಬದಿಗೆ ಸಾಲಾಗಿ ವಿವಿಧ ಬಗೆಯ ಅಂಗಡಿಗಳು, ಬೇಕರಿ, ಕಾಫೀ ಷಾಪುಗಳು, ರೆಸ್ಟುರಾಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಎದುರು ಬದಿಯಲ್ಲಿ ಸುಂದರ ಹೂದೋಟಕ್ಕೆ ಅಂಟಿಕೊಂಡಂತೆ ಯುದ್ಧ ಸ್ಮಾರಕವಿದೆ. ಅನತಿ ದೂರದಲ್ಲಿ ಆರ್ಟ್‍ಗ್ಯಾಲರಿ. ಚಾರಿತ್ರಿಕ ಹಳೆಯ ಕಟ್ಟಡಗಳಲ್ಲಿ ಇಲ್ಲಿನ ಕೆಂಪುಬಣ್ಣದ ಪೋಸ್ಟ್ ಆಫೀಸ್ ಕೂಡ ಒಂದು. ಹಾಗೇ ರಸ್ತೆಯ ದಿನ್ನೆಯೇರಿ ಏರು ರಸ್ತೆಯಲ್ಲಿ ಸಾಗಿದರೆ ಗುಡ್ಡವೇರಿದಂತೆ ಭಾಸ. ನಡೆಯಲು ತ್ರಾಸವಾಗುತ್ತದೆ. ಎಡ- ಬಲ ಎರಡು ದಿಕ್ಕುಗಳಲ್ಲೂ ರಸ್ತೆಗಳು ಏರುತ್ತ, ಇಳಿಯುತ್ತ ಸಾಗುತ್ತವೆ. ಹೆಚ್ಚೂ ಕಡಮೆ ಒಂದು ಕಿಮಿನೊಳಗೆ ಊರು ಮುಗಿದೇ ಹೋಗುತ್ತದೆ. ಆದರೆ ಸುಂದರಾನುಭವ ಮುಗಿಯುವುದಿಲ್ಲ.

ಈ `ಬ್ಲೋಹೋಲ್'ನ ಉತ್ತರದ ಪಶ್ಚಿಮಕ್ಕೆ ‘ಕಯಾಮ’ ಬಂದರು ಇದೆ. ಫಿಷಿಂಗ್ ಬೋಟ್ಸ್ ನೆಲೆದಾಣ. ಸಮುದ್ರದ ಆಹಾರದ ಮಾರುಕಟ್ಟೆ ಕೂಡ ಇದೆ. ಮೋಜಿನ ವಿಹಾರಕ್ಕೆ ಹೇಳಿ ಮಾಡಿಸಿದ ಜಾಗ. ಅಲ್ಲೇ ತಂಗಲು ಸಮುದ್ರ ತೀರದ ಕ್ಯಾಬಿನ್‍ಗಳ ಸೌಲಭ್ಯವೂ ಇದೆ. ಪಶ್ಚಿಮಕ್ಕೆ ಹಸಿರು ಗುಡ್ಡಗಳಿದ್ದು ಅಲ್ಲಿರುವ ‘ಜೆರ್ರಾರ’ ಅಣೆಕಟ್ಟನ್ನು 1800 ನೇ ಇಸವಿಯಲ್ಲಿ ಕಟ್ಟಲಾಗಿದ್ದು, ಸುತ್ತಲ ಪ್ರದೇಶಗಳಿಗೆ ಆ ರಿಸರ್ವಾಯರ್‍ನಿಂದಲೇ ನೀರು ಸರಬರಾಜು ಆಗುತ್ತದೆ .

ಹಾಲು ಉತ್ಪಾದನೆ ಮತ್ತು ಗಣಿಗಾರಿಕೆಗಳ ಶ್ರೀಮಂತ ಪರಂಪರೆಯುಳ್ಳ ಈ ಕಯಾಮ ಪಯೊನಿಯರ್ ಡೈರಿ, ಆಸ್ಟ್ರೇಲಿಯನ್ ಸಹಕಾರಿ ಹೈನೋದ್ಯಮ ಫ್ಯಾಕ್ಟರಿಗಳ ಪ್ರಾರಂಭಿಕ ಸಂಸ್ಥೆಗಳಲ್ಲಿ ಒಂದಾಗಿದೆ.

ಕಯಾಮಾ ಇಂದು ತನ್ನ ಗ್ರಾಮೀಣ ಚಟುವಟಿಕೆಗಳೊಂದಿಗೆ ಪ್ರವಾಸೋದ್ಯಮದಿಂದಲೂ ಆರ್ಥಿಕ ಸುಭದ್ರತೆ ಪಡೆದಿದೆ. ಒಟ್ಟಿನಲ್ಲಿ ಆಸ್ಟ್ರೇಲಿಯಾ – ಸಿಡ್ನಿಗೆ ಹೋದವರು ಅಲ್ಲಿಗೆ ಸಮೀಪವಾದ ಕಯಾಮಾಗೆ ಭೇಟಿ ಕೊಡಲು, ಯಾರೂ ಮಿಸ್ ಮಾಡಲೇಬಾರದಂಥ ಚೆಲುವಿನ ಖನಿ ಇದು .