• ಬಾಲಚಂದ್ರ ಹೆಗ್ಡೆ (ಹವ್ಯಾಸಿ ಬರಹಗಾರ)

ಅದೊಂದು ಶನಿವಾರ ಮುಂಜಾನೆ ಎಲ್ಲಾ ತಯಾರಿ ಮಾಡಿಕೊಂಡು ಹೊಸ ತಾಣ ನೋಡುವ ತವಕದಿಂದ ಸ್ಯಾನ್ ಹೊಸೆಯಿಂದ ಕಾರಿನಲ್ಲಿ ಮಗಳು ಹಾಗೂ ಅಳಿಯನೊಡನೆ ಹೊರಟೆವು. ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ಬಗ್ಗೆ ವಿವರಗಳನ್ನು ಮಗಳು ಮತ್ತು ಅಳಿಯ ಗುಟ್ಟಾಗಿ ಇಟ್ಟಿದ್ದರು. ಸುಮಾರು ಐದು ಘಂಟೆಗಳ ಪ್ರಯಾಣದ ನಂತರ ನಾವು ತಲುಪಿದ್ದು, ʻತಾಹೋ ಸರೋವರʼಕ್ಕೆ.

ವಾಸ್ತವ್ಯಕ್ಕೆ ಅಲ್ಲೇ ಒಂದು ರೆಸಾರ್ಟ್‌ ಬುಕ್‌ ಮಾಡಿದ್ದೆವು. ಅದು ರೋಡ್ ಪಕ್ಕದಲ್ಲಿಯೇ ಇದ್ದ ಸುಂದರವಾದ ರೆಸಾರ್ಟ್. ನಾವು ಅಲ್ಲಿಗೆ ತಲುಪಿದ ಹೊತ್ತಿಗಾಗಲೇ ಸೂರ್ಯಾಸ್ಥವಾಗುತ್ತಿತ್ತು. ಮೈಕೊರೆಯುವ ಚಳಿ ಬೇರೆ. ಅಳಿಯ ಸಂದೇಶ ಚೆಕ್ ಇನ್ ಮಾಡಲು ರೂಮಿಗೆ ಹೋದ. ನಾವು ಮೂವರು ಸೂರ್ಯಾಸ್ತದ ಸೊಬಗು ನೋಡುತ್ತಾ ಸರೋವರದ ಸಮೀಪ ಹೋದೆವು. ಅದು ಸರೋವರವೋ ಸಾಗರವೋ ಎನ್ನುವಂತಾಯಿತು. ಆ ಸರೋವರದಲ್ಲೂ ಸಾಗರದಂತೆ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದವು. ಆ ಹೊತ್ತಿಗೆ ಮುಳುಗುವ ಸೂರ್ಯನ ಕೆಂಪಾದ ಕಿರಣಗಳ ಬಿಂಬ ಸರೋವರದ ನೀರಿನ ಮೇಲೆ ಪ್ರತಿಪಲಿಸಿ ಅದ್ಭುತ ಸೌಂದರ್ಯವನ್ನೇ ಸೃಷ್ಟಿಸಿತ್ತು. ಸೂರ್ಯ ಮುಳುಗಿದ ನಂತರವೂ ಸುಮಾರು ಒಂದು ಘಂಟೆ ಅಲ್ಲೇ ಇದ್ದು, ರೂಮಿಗೆ ಬಂದಾಗ ರಾತ್ರಿ 8 ಘಂಟೆಯಾಗಿತ್ತು. ಫ್ರೆಶ್ ಆಗಿ ಸ್ವಲ್ಪ ಹೊತ್ತು ಹರಟೆ ಹೊಡೆಯುವಷ್ಟರಲ್ಲಿ ಹೊಟ್ಟೆ ತಾಳ ಹಾಕಲು ಪ್ರಾರಂಭ ಮಾಡಿತು. ರೂಮಿನಲ್ಲಿ ಅಡಿಗೆ ಮಾಡಿಕೊಳ್ಳುವ ವ್ಯವಸ್ಥೆ ಇತ್ತು. ಮೊದಲೇ ತಯಾರಿ ಮಾಡಿಕೊಂಡು ಬಂದಿದ್ದರಿಂದ ನನ್ನವಳು ಹಾಗೂ ಮಗಳು ಸೇರಿ ಅಚ್ಚುಕಟ್ಟಾಗಿ ಅಡುಗೆ ಮಾಡಿ ಬಡಿಸಿದರು.

Untitled design - 2026-04-22T131110.645

ರೂಮಿನ ಹೊರಗೆ ಚಿಕ್ಕ ಬಾಲ್ಕನಿ. ಕುಳಿತುಕೊಳ್ಳಲು ಚೇರ್ ವ್ಯವಸ್ಥೆ ಇತ್ತು. ಹಾಗಾಗಿ ಆ ಚಳಿಯಲ್ಲೂ ಎಲ್ಲರೂ ಸ್ವೆಟರ್, ಶಾಲ್ ಮತ್ತು ಕೈಗವಸುಗಳನ್ನು ಧರಿಸಿ ಬೆಳದಿಂಗಳು, ಸುಂದರವಾದ ಸರೋವರ, ತೆರೆಗಳ ಹೊಯ್ದಾಟ, ಮುಖಕ್ಕೆ ರಾಚುವ ತಣ್ಣನೆಯ ಗಾಳಿಯನ್ನು ಅನುಭವಿಸಲು ಬಾಲ್ಕನಿಯಲ್ಲಿ ಕುಳಿತೆವು. ಆ ಕ್ಷಣವನ್ನು ಅನುಭವಿಸಿ ಸಂತೋಷ ಪಟ್ಟೆವು.

ಮರುದಿನ ಸರೋವರದ ಬಳಿ ಅಡ್ಡಾಡುವಾಗ ಅಲ್ಲಲ್ಲಿ ಇದ್ದ ವಿವರಣೆಯ ಫಲಕಗಳಿಂದ ʻಲೇಕ್ ತಾಹೋʼ ಕುರಿತು ಮಾಹಿತಿ ತಿಳಿಯಿತು. ಕ್ಯಾಲಿಫೋರ್ನಿಯ ಹಾಗೂ ನೆವಾಡಾ ರಾಜ್ಜಗಳ ಗಡಿ ಪ್ರದೇಶದಲ್ಲಿ ಈ ಸರೋವರವಿದ್ದು, ಸುಮಾರು 6225 ಅಡಿ ಎತ್ತರದಲ್ಲಿದೆ. ಸುಮಾರು 1645 ಅಡಿ ಆಳವಿದ್ದು, ಅಮೆರಿಕದಲ್ಲಿ ಇದು ಎರಡನೆಯ ಆಳದ ಸರೋವರ. ಈ ಸರೋವರದ ಒಟ್ಟು ಸುತ್ತಳತೆ 150 ಕಿಮೀ ಆಗಿದ್ದು, ಅಮೆರಿಕದ 5 ದೊಡ್ಡ ಸರೋವರಗಳಲ್ಲಿ ಒಂದಾಗಿದೆ. 75 ಪ್ರತಿಶತ ತೀರ ಪ್ರದೇಶಗಳು ಅರಣ್ಯಗಳಿಂದ ಕೂಡಿವೆ. ಈ ಪ್ರದೇಶವನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ತಹೊ ಬೇಸಿನ್ ಯೂನಿಟ್ ನೋಡಿಕೊಳ್ಳುತ್ತಿದೆ. ಸುಮಾರು ಎರಡು ಮಿಲಿಯನ್ ವರ್ಷಗಳ ಹಿಂದೆ ತಹೋ ಬೇಸಿನ್ ನಿರ್ಮಾಣವಾಗಿದ್ದು, ಹಿಮ ವರ್ಷದಲ್ಲಿ ಹಿಮ ಕರಗಿ ಈ ರೀತಿ ಆಕಾರ ಪಡೆಯಿತು ಎನ್ನಲಾಗಿದೆ. ಫೆಬ್ರವರಿ-ಮಾರ್ಚ್ ನಂತರ ಸಂಪೂರ್ಣ ಸರೋವರ ಹಿಮಚ್ಛಾದಿತವಾಗಿರುತ್ತದೆ. ವಿಂಟರ್ ಸ್ಪೋರ್ಟ್ಸ್, ಸ್ಕೇಟಿಂಗ್ ಮಾಡಲು ಜನ ಬರುತ್ತಾರೆ. ಲೇಕ್ ಏರಿಯಾದಲ್ಲಿ ಹಲವಾರು ರಿಕ್ರಿಯೇಶನ್ ಕ್ಲಬ್‌ಗಳು, ಸ್ಕಿ ರೆಸಾರ್ಟ್ಸ್, ಕ್ಯಾಸಿನೊ ರೆಸಾರ್ಟ್‌ಗಳು ವರ್ಷವಿಡೀ ಇರುತ್ತವೆ.

ಇದನ್ನೂ ಓದಿ: ಫ್ರೆಮಾಂಟ್‌ನಲ್ಲಿ ಲೆನಿನ್ ಪ್ರತಿಮೆ

ಅಂತೂ ಮೊದಲನೆಯ ವ್ಯೂ ಪಾಯಿಂಟ್ ನೋಡಿ ರೂಮಿನಲ್ಲಿ ಎಲ್ಲರೂ ಫ್ರೆಶ್ ಆಗಿ ಸುಮಾರು 11 ಘಂಟೆಗೆ ರೂಮ್ ಚೆಕ್-ಔಟ್ ಮಾಡಿ ಮತ್ತೊಂದು ವ್ಯೂ ಪಾಯಿಂಟ್‌ಗೆ ಹೋದೆವು. ಇದು ತುಂಬಾ ದೊಡ್ಡದಾದ ಪ್ರದೇಶ. ಇಲ್ಲೂ ಬಹಳಷ್ಟು ವಿದೇಶಿ ಪ್ರವಾಸಿಗರಿದ್ದರು. ರೆಸ್ಟೋರೆಂಟ್, ಚಿಕ್ಕ ಶಾಪಿಂಗ್ ಸೆಂಟರ್‌ಗಳೂ ಇದ್ದವು. ಸರೋವರವನ್ನು ನೋಡಲು ಅನುಕೂಲವಾಗುವಂತೆ ಒಂದು ಚಿಕ್ಕ ಬ್ರಿಡ್ಜ್ ಇತ್ತು. ನಾವು ಅಲ್ಲಿಗೆ ಹೋಗಿ ಕೆಲವು ಫೊಟೋ ತೆಗೆದುಕೊಂಡೆವು.

ಎರಡನೆಯ ವ್ಯೂ ಪಾಯಿಂಟ್‌ನಿಂದ ಕೇವಲ 2 ಮೈಲಿ ದೂರದಲ್ಲಿ ಇನ್ನೊಂದು ವ್ಯೂ ಪಾಯಿಂಟ್ ಇತ್ತು. ಅಲ್ಲಿಗೆ ಹೋದೆವು. ಆ ಪ್ರದೇಶ ಇನ್ನೂ ಅದ್ಭುತವಾಗಿತ್ತು. ಅಲ್ಲಿ ಸರೋವರ ಕಲ್ಲು ಬಂಡೆಗಳ ನಡುವೆ ಹರಿಯುತ್ತಿತ್ತು. ಇಕ್ಕೆಲಗಳಲ್ಲಿ ಸುಂದರ ಪೈನ್‌ ಟ್ರೀ ಹಾಗೂ ಬಣ್ಣ ಬಣ್ಣದ ಗಿಡಗಳಿದ್ದುದರಿಂದ ಆ ಪ್ರದೇಶ ಸುಂದರವಾಗಿ ಕಂಗೊಳಿಸುತ್ತಿತ್ತು. ಈ ದೃಷ್ಯಗಳನ್ನೆಲ್ಲ ಕಣ್ತುಂಬಿಕೊಂಡು ನಮ್ಮ ಕಾರಿನ ಸಮೀಪ ಬಂದಾಗ ಮಧ್ಯಾಹ್ನ 3 ಘಂಟೆ.

ಅಲ್ಲಿಂದ ನಮ್ಮ ಕಾರು ಮರಳಿ ಸ್ಯಾನ್ ಹೊಸೆ ಕಡೆ ಹೊರಟಿತ್ತು. ಸುಮಾರು ದೂರದವರೆಗೂ ಕಣ್ಣಿಗೆ ರಾಚುತ್ತಿದ್ದ ಆ ಸರೋವರ ಕಡೆಗೆ ಗುಡ್ಡಗಳ ನಡುವೆ ಮರೆಯಾಯಿತು.

Untitled design - 2026-04-22T131117.759

ತಾಹೋ ಸರೋವರ, ಕ್ಯಾಲಿಫೋರ್ನಿಯ ಹಾಗೂ ನೆವಾಡಾ ರಾಜ್ಜಗಳ ಗಡಿ ಪ್ರದೇಶದಲ್ಲಿದೆ. ಸುಮಾರು 6225 ಅಡಿ ಎತ್ತರದಲ್ಲಿರುವ ಈ ಸರೋವರ ಸುಮಾರು 1645 ಅಡಿ ಆಳವಿದ್ದು, ಅಮೆರಿಕದಲ್ಲಿ ಇದು ಎರಡನೆಯ ಆಳವಾದ ಸರೋವರವಾಗಿದೆ. ಇದರ ಒಟ್ಟು ಸುತ್ತಳತೆ 150 ಕಿಮೀ ಆಗಿದ್ದು, ಅಮೆರಿಕದ 5 ದೊಡ್ಡ ಸರೋವರಗಳಲ್ಲಿ ಒಂದಾಗಿದೆ. ಈ ಸರೋವರದ 75 ಪ್ರತಿಶತ ತೀರ ಪ್ರದೇಶಗಳು ಅರಣ್ಯಗಳಿಂದ ಕೂಡಿವೆ. ಈ ಪ್ರದೇಶವನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ತಹೊ ಬೇಸಿನ್ ಯೂನಿಟ್ ನೋಡಿಕೊಳ್ಳುತ್ತಿದೆ.