ಭಾರತದಿಂದ ಕೇವಲ ನಾಲ್ಕೈದು ಗಂಟೆಗಳಲ್ಲಿ ತಲುಪಬಹುದಾದ ಬಜೆಟ್‌ ಫ್ರೆಂಡ್ಲಿ ದೇಶ ವಿಯೆಟ್ನಾಂ. ಉತ್ತರ ಹಾಗೂ ದಕ್ಷಿಣ ವಿಯೆಟ್ನಾಂಗಳಲ್ಲಿ ಹೋ ಚಿ ಮಿನ್ಹ್, ಡ ನಾಂಗ್ಹ್‌, ಹೈ ಫಾಂಗ್‌ಗಳು ಸೇರಿದಂತೆ ಪ್ರಮುಖ ನಗರಗಳಲ್ಲಿದ್ದು ರಾಜಕೀಯ ಕ್ಷೇತ್ರ, ಆರ್ಥಿಕ ರಂಗ, ಟೆಕ್‌ ಹಾಗೂ ಟೂರಿಸಂ ತಾಣಗಳಿಗಾಗಿ ಹೆಸರು ಮಾಡಿದೆ. ಆದರೆ ವಿಯೆಟ್ನಾಂ ದೇಶದ ರಾಜಧಾನಿಯಾಗಿರುವ ಹನೋಯ್ ನಗರವಂತೂ ಸಾಂಸ್ಕೃತಿಕವಾಗಿ ಮನ್ನಣೆ ಗಳಿಸಿದ್ದು, ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಚೀನೀ, ಫ್ರೆಂಚ್ ಮತ್ತು ರಷ್ಯಾದ ಪ್ರಭಾವಗಳನ್ನು ಹೊಂದಿರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಈ ನಗರ, ಪ್ರಾಚೀನ ದೇವಾಲಯಗಳು, ಮ್ಯೂಸಿಯಂಗಳು ಮತ್ತು ವಸಾಹತುಶಾಹಿ ಕಟ್ಟಡಗಳಿಂದಾಗಿಯೂ ಹೆಸರು ಮಾಡಿದೆ. ಬರಿಯ ನಗರ ಪ್ರದೇಶಗಳಿಗಷ್ಟೇ ಅಲ್ಲದೆ ಗ್ರಾಮೀಣ ಸೌಂದರ್ಯದಿಂದಲೂ ಮೋಡಿ ಮಾಡಿದೆ.

ಹನೋಯಿ ಪ್ರವಾಸದ ವೇಳೆ ನೀವು ತಪ್ಪದೇ ಭೇಟಿ ನೀಡಬೇಕಿರುವ ಪ್ರವಾಸಿ ತಾಣವೊಂದಿದೆ. ಅದು ಹನೋಯಿಯಿಂದ ಸುಮಾರು 35-50 ಕಿಮೀ ದೂರದಲ್ಲಿರುವ ಕ್ವಾಂಗ್ ಫು ಎಂಬ ಸಾಂಪ್ರದಾಯಿಕ ಗ್ರಾಮ. ಕುಂಬಾರಿಕೆ ಮತ್ತು ಬುಟ್ಟಿ ನೇಯ್ಗೆಯಂಥ ಕರಕುಶಲತೆಗಳಿಗೂ ಹೆಸರುವಾಸಿಯಾಗಿರುವ ಈ ಸುಂದರ ಗ್ರಾಮದಲ್ಲಿ, 100 ವರ್ಷಗಳಿಗೂ ಹಳೆಯದಾದ ಅಗರಬತ್ತಿ ಕೇಂದ್ರಗಳೇ ಪ್ರಮುಖ ಆಕರ್ಷಣೆ.

hanoi

ಈ ಗ್ರಾಮದ ಅನೇಕ ಭಾಗಗಳಲ್ಲಿ ಗುಲಾಬಿ, ಕೆಂಪು, ಹಳದಿ, ಹಸಿರು ಬಣ್ಣಗಳಿಂದ ಕೂಡಿದ ಅಗರಬತ್ತಿಗಳನ್ನು ತಯಾರಿಸಿ, ಬಿಸಿಲಿಗೆ ಒಣಗಲು ಇಟ್ಟರಂತೂ ಹೂಗಳ ಸುಂದರ ಉದ್ಯಾನವನದಂತೆಯೇ ಕಂಗೊಳಿಸುತ್ತದೆ. ಲೆಕ್ಕವಿಲ್ಲದಷ್ಟು ಅಗರಬತ್ತಿಯ ಕಡ್ಡಿಗಳನ್ನು ಒಟ್ಟಿಗೆ ಜೋಡಿಸಿಟ್ಟರೆ ಹೂವಿನ ಲೋಕದ ನಡುವೆಯೇ ಇದ್ದೇವೆಂಬ ಭಾವ ಮೂಡುತ್ತದೆ. ಆ ಸುಂದರ ದೃಶ್ಯಗಳನ್ನು ಸೆರೆಹಿಡಿದಿರುವ ಅದೆಷ್ಟೋ ಛಾಯಾಚಿತ್ರಗಾರರು ಸಾಮಾಜಿಕಜಾಲತಾಣಗಳಲ್ಲಿ ಅವುಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಅಗರಬತ್ತಿ ತಯಾರಿಯ ಹಿಂದಿನ ಕತೆ

ಇಲ್ಲಿ ಜನರಿಗೆ ಅಗರಬತ್ತಿ ತಯಾರಿಕೆಯೆಂದರೆ ಬರಿಯ ಜೀವನವನ್ನು ರೂಪಿಸಿಕೊಳ್ಳುವುದಕ್ಕಿರುವ ಆದಾಯದ ಮಾರ್ಗವಷ್ಟೇ ಅಲ್ಲ. ಬದಲಾಗಿ ಇದು ತಲೆಮಾರುಗಳಿಂದ ಬಳುವಳಿಯಾಗಿ ಬಂದಿರುವ ಕಲೆ ಹಾಗೂ ಸಂಪ್ರದಾಯವಾಗಿದೆ. ಇವರು ಒಟ್ಟುಗೂಡಿಸುವ ಅಗರಬತ್ತಿಯ ಪ್ರತಿಯೊಂದು ಕೋಲಿಗೂ ಇಲ್ಲಿನವರ ಬದುಕಿನಲ್ಲೊಂದು ಅರ್ಥವಿದೆ. ಇದು ಪೂರ್ವಜರಿಗೆ ಅವರು ಸಲ್ಲಿಸುವ ಗೌರವ, ಆಧ್ಯಾತ್ಮಿಕ ಪ್ರಪಂಚದೊಂದಿಗಿನ ಸಂಪರ್ಕಕಷ್ಟೇ ಅಲ್ಲದೆ ಅದೃಷ್ಟದ ಸಂಕೇತವಾಗಿಯೂ ಗುರುತಿಸಿಕೊಂಡಿದೆ. ವ್ಯಾಪಾರ ಮತ್ತು ವಾಣಿಜ್ಯವನ್ನು ಶಾಶ್ವತಗೊಳಿಸಲು, ಕುಟುಂಬದ ಕನಿಷ್ಠ ಒಬ್ಬ ಸದಸ್ಯನಾದರೂ ಈ ಕಲರ್‌ಫುಲ್ ಅಗರಬತ್ತಿ ತಯಾರಿಸುವಲ್ಲಿ ತೊಡಗಿಸಿಕೊಂಡಿರುತ್ತಾರೆ.

hanoi (1)

ಹೊಸವರ್ಷಕ್ಕೆ ಹೆಚ್ಚಿನ ಬೇಡಿಕೆ

ವಿಯೆಟ್ನಾಂನಲ್ಲಿ ಹೊಸ ವರ್ಷಕ್ಕೆ ಮುಂಚಿತವಾಗಿ, ಈ ಹಳ್ಳಿಗಳು ಗುಲಾಬಿ ಬಣ್ಣದಿಂದ ಆವೃತವಾಗುತ್ತವೆ. ಏಷ್ಯಾದ ಅನೇಕ ದೇಶಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ವೇಳೆ ಅಥವಾ ಧನಾತ್ಮಕ ಚಿಂತನೆಗಳಿಗೆ ಮನಸನ್ನು ಅನುವು ಮಾಡಿಕೊಡುವುದಕ್ಕಾಗಿ ನಿತ್ಯವೂ ಮನೆಯಲ್ಲಿ ಅಗರಬತ್ತಿಗಳನ್ನು ಹಚ್ಚುವುದು ರೂಢಿಯಲ್ಲಿದೆ. ವಿಯೆಟ್ನಾಂನಲ್ಲಿಯೂ ಇದು ಭಿನ್ನವಾಗಿಲ್ಲ. ವಿಶೇಷವಾಗಿ, ಫೆಬ್ರವರಿ 1 ರಂದು ಟೆಟ್ ಚಂದ್ರ ವರ್ಷಕ್ಕೆ ಮುಂಚಿತವಾಗಿ, ಧೂಪದ್ರವ್ಯದ ಕಡ್ಡಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಈ ಅಗರಬತ್ತಿಗಳು ಬರಿಯ ವಿಯೆಟ್ನಾಂ ದೇಶಾದ್ಯಂತ ಮಾತ್ರವಲ್ಲದೆ ಭಾರತ, ಮಲೇಷ್ಯಾ ಮತ್ತು ಚೀನಾದಂಥ ದೇಶಗಳಿಗೂ ಮಾರಾಟವಾಗುತ್ತದೆ,

ಒಟ್ಟಿನಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿರುವ ಈ ಅಗರಬತ್ತಿ ತಯಾರಿಸುವ ತಾಣಗಳು ವಿಶ್ವದ ಹೆಸರಾಂತ ಹೂದೋಟಗಳನ್ನೇ ನಾಚಿಸುವಂತೆ ಕಂಗೊಳಿಸುತ್ತವೆ. ಈಗ ಹೇಳಿ ವಿಯೆಟ್ನಾಂನ ನಿಜವಾದ ಹೃದಯ ಬಡಿತವಿರುವುದು ಹನೋಯಿಯ ಈ ಪುಟ್ಟ ಗ್ರಾಮ ಕ್ವಾಂಗ್ ಫು ನಲ್ಲೇ ಅಲ್ವಾ..?