ಅಮೆರಿಕದಲ್ಲೂ ಭಾರತೀಯ ಪರಂಪರೆಯ ಹೊನಲು
ಪ್ರತಿ ಭಾನುವಾರಗಳಂದು ಅಮೆರಿಕದ ಈ ದೇವಾಲಯದಲ್ಲಿ ಮಕ್ಕಳಿಗೆ ರಾಮಾಯಣ, ಮಹಾಭಾರತ ಮತ್ತು ವೇದಗಳ ಬಗ್ಗೆ ಪಾಠ ಮಾಡಲಾಗುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ತಜ್ಞರಿಂದ ಯೋಗ ತರಗತಿಗಳನ್ನು ಮತ್ತು ಸಾಮೂಹಿಕ ಧ್ಯಾನ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ಭಾರತದಿಂದ ಆಗಮಿಸುವ ಖ್ಯಾತ ವಿದ್ವಾಂಸರಿಂದ ಆಧ್ಯಾತ್ಮಿಕ ಪ್ರವಚನಗಳು ಮತ್ತು ಗೀತಾ ಪಾರಾಯಣಗಳೂ ನಡೆಯುತ್ತವೆ.
- ಜ್ಯೋತಿ ಪ್ರಸಾದ್
ವಾಷಿಂಗ್ಟನ್ ಡಿಸಿಯ ಹೊರವಲಯದಲ್ಲಿ ಶ್ರೀ ಶಿವ-ವಿಷ್ಣು ದೇವಸ್ಥಾನವಿದೆ. ಇದು ಅಮೆರಿಕದ ಅತ್ಯಂತ ಪ್ರಸಿದ್ಧ ಮತ್ತು ಭವ್ಯವಾದ ಹಿಂದೂ ದೇವಾಲಯಗಳಲ್ಲಿ ಒಂದು. ಮೇರಿಲ್ಯಾಂಡ್ ರಾಜ್ಯದ ಲ್ಯಾನ್‌ಹ್ಯಾಮ್‌ನಲ್ಲಿನ ಈ ದೇವಾಲಯ ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ. ಇದು ಅನಿವಾಸಿ ಭಾರತೀಯರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಅಸ್ಮಿತೆಯಾಗಿದೆ.
ಪಲ್ಲವ ಮತ್ತು ಚೋಳರ ವಾಸ್ತುಶೈಲಿ
1970ರಲ್ಲಿ ಆರಂಭವಾದ ಈ ದೇವಾಲಯದ ಕನಸು, ಇಂದು ಸಾವಿರಾರು ಭಕ್ತರನ್ನು ಸೆಳೆಯುವ ಬೃಹತ್ ಸಂಕೀರ್ಣವಾಗಿ ಬೆಳೆದು ನಿಂತಿದೆ. ದಕ್ಷಿಣ ಭಾರತದ ಪಲ್ಲವ ಮತ್ತು ಚೋಳ ರಾಜವಂಶದ ವಾಸ್ತುಶೈಲಿಯನ್ನು ಪ್ರತಿಬಿಂಬಿಸುವ ಇದರ ವಾಸ್ತುಶಿಲ್ಪ ಬಹಳ ವಿಶಿಷ್ಟವಾಗಿದೆ. ದೇವಸ್ಥಾನದ ಪ್ರವೇಶದ್ವಾರದಲ್ಲಿರುವ ‘ರಾಜಗೋಪುರ’ಗಳು ಭಾರತದ ಸುಪ್ರಸಿದ್ಧ ದೇವಾಲಯಗಳಾದ ಕಂಚಿ, ಮಧುರೈ ದೇವಲಾಯಗಳನ್ನು ನೆನಪಿಸುತ್ತವೆ. ಈ ದೇವಾಲಯ ಪ್ರಖ್ಯಾತ ವಾಸ್ತುಶಿಲ್ಪಿ ವಿ. ಗಣಪತಿ ಸ್ಥಪತಿ ಅವರ ಮಾರ್ಗದರ್ಶನದಲ್ಲಿ ಈ ದೇವಾಲಯ ನಿರ್ಮಾಣವಾಗಿದ್ದು, ಕಲಾತ್ಮಕವಾಗಿದೆ.
ಇದನ್ನೂ ಓದಿ: ಆಕಾಶದಿಂದ ಭೂಮಿಗೆ ಹಾರುವ ಆಟ
ಒಂದೇ ದೇವಾಲಯದಲ್ಲಿ ಶಿವ-ವಿಷ್ಣು
ದೇವಾಲಯದ ಒಳಗೆ ಎರಡು ಮುಖ್ಯ ಗರ್ಭಗುಡಿಗಳು ಕಾಣಸಿಗುತ್ತವೆ. 'ರಾಮನಾಥೇಶ್ವರ'ನಾಗಿ ನೆಲೆಸಿರುವ ಶಿವ ಸನ್ನಿಧಿ ಹಾಗೂ 'ಅನಂತ ಪದ್ಮನಾಭ'ನಾಗಿ ದರ್ಶನ ನೀಡುವ ವಿಷ್ಣುವಿನ ಸನ್ನಿಧಿ. ಶಿವ ಮತ್ತು ವಿಷ್ಣು ಇಬ್ಬರನ್ನೂ ಒಂದೇ ಸೂರಿನಡಿಯಲ್ಲಿ ಪೂಜಿಸುವ ಈ ದೇವಾಲಯ 'ಏಕತತ್ತ್ವ' ಸಂದೇಶವನ್ನು ಸಾರುತ್ತದೆ. ಶಿವ ಮತ್ತು ವಿಷ್ಣುವಿನ ಜತೆಗೆ ಇಲ್ಲಿ ಹಲವಾರು ದೇವತೆಗಳ ವಿಗ್ರಹಗಳನ್ನೂ ಪ್ರತಿಷ್ಠಾಪಿಸಲಾಗಿದೆ. ಗಣೇಶ, ಸುಬ್ರಹ್ಮಣ್ಯ, ಪಾರ್ವತಿ (ಕಾಮಾಕ್ಷಿ) ಮತ್ತು ಲಕ್ಷ್ಮಿ, ಸರಸ್ವತಿ, ಆಂಜನೇಯ, ನವಗ್ರಹಗಳು ಜತೆಗೆ ಶಬರಿಮಲೆ ಶೈಲಿಯ ಅಯ್ಯಪ್ಪನ ಸನ್ನಿಧಿಯೂ ಇಲ್ಲಿ ಬಹಳ ಜನಪ್ರಿಯವಾಗಿದೆ. ಈ ಎಲ್ಲ ವಿಗ್ರಹಗಳನ್ನೂ ಆಗಮ ಶಾಸ್ತ್ರದ ಪ್ರಕಾರ ಪ್ರತಿಷ್ಠಾಪಿಸಲಾಗಿದೆ. ಕೇರಳದ ಶಬರಿಮಲೆಯಂತೇ ವಿನ್ಯಾಸಗೊಂಡಿರುವ ಇಲ್ಲಿನ 'ಅಯ್ಯಪ್ಪ ಸ್ವಾಮಿ' ಸನ್ನಿಧಿಯಲ್ಲಿ ಮಂಡಲ ಪೂಜೆಯ ಸಮಯದಲ್ಲಿ ಹದಿನೆಂಟು ಮೆಟ್ಟಿಲುಗಳ ಪೂಜೆ (ಪಡಿ ಪೂಜೆ) ನಡೆಯುವುದು ವಿಶೇಷವೆನಿಸಿತು.

ಭಾರತೀಯ ಸಂಸ್ಕೃತಿ
ದೇವಸ್ಥಾನದಲ್ಲಿ ಪ್ರತಿದಿನವೂ ಶಾಸ್ತ್ರೋಕ್ತವಾಗಿ ಪೂಜೆಗಳು ನಡೆಯುತ್ತವೆ. ಅಮೆರಿಕದಂಥ ದೇಶದಲ್ಲೂ ಭಾರತದ ಪ್ರಮುಖ ದೇವಾಲಯಗಳಲ್ಲಿ ನಡೆಯುವಂತೆಯೇ ಕಟ್ಟುನಿಟ್ಟಾದ ಆಚರಣೆಗಳನ್ನು ಪಾಲಿಸಲಾಗುತ್ತದೆ. ಪ್ರತಿದಿನ ಸುಪ್ರಭಾತ ಸೇವೆಯೊಂದಿಗೆ ದಿನ ಆರಂಭವಾಗುತ್ತದೆ. ಪ್ರತಿ ವಾರದ ನಿರ್ದಿಷ್ಟ ದಿನಗಳಂದು ದೇವರಿಗೆ ವಿಶೇಷ ಅಭಿಷೇಕಗಳು ನಡೆಯುತ್ತವೆ. ದೇವಾಲಯದ ಹೊರಗಿನ ಯಜ್ಞಶಾಲೆಯಲ್ಲಿ ಶಾಂತಿ ಮತ್ತು ಲೋಕಕಲ್ಯಾಣಕ್ಕಾಗಿ ನಿಯಮಿತವಾಗಿ ಹೋಮಗಳನ್ನು ಆಯೋಜಿಸಲಾಗುತ್ತದೆ. ಸತ್ಯ ನಾರಾಯಣ ವ್ರತ, ನಾಮಕರಣ, ಅನ್ನಪ್ರಾಶನ, ಚೌಲ, ಅಕ್ಷರಾಭ್ಯಾಸ, ಹುಟ್ಟುಹಬ್ಬ, ಉಪನಯನ ಮೊದಲಾದ ಸಂಸ್ಕಾರಗಳನ್ನು ಅತ್ಯಂತ ಶಾಸ್ತ್ರೋಕ್ತವಾಗಿ ನೆರವೇರಿಸಲು ಎಲ್ಲ ಅನುಕೂಲಗಳೂ ಇಲ್ಲಿವೆ. ಭಾರತದ ಪ್ರತಿಷ್ಠಿತ ವೇದ ಪಾಠಶಾಲೆಗಳಲ್ಲಿ ತರಬೇತಿ ಪಡೆದ ಅನೇಕ ಅರ್ಚಕರು ಇಲ್ಲಿದ್ದಾರೆ. ಸಂಸ್ಕೃತ ಮತ್ತು ಇಂಗ್ಲಿಷ್ ಸೇರಿ ಭಾರತದ ವಿವಿಧ ಭಾಷೆಗಳಲ್ಲಿ ಪರಿಣಿತರಾದ ಅರ್ಚಕರು ಇಲ್ಲಿದ್ದು, ನಮ್ಮ ಭಾಷೆ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ಪುರೋಹಿತರನ್ನೂ ನಾವು ಆಯ್ಕೆಮಾಡಿಕೊಳ್ಳಬಹುದು.
ದೇವಾಲಯವು ಸುಸಜ್ಜಿತವಾದ ಅಡುಗೆಮನೆಯನ್ನು ಹೊಂದಿದ್ದು, ಭಕ್ತರಿಗೆ ಶುಚಿ-ರುಚಿಯಾದ ಸಾತ್ವಿಕ ಆಹಾರವನ್ನು ಒದಗಿಸುತ್ತಿರುವುದು ಈ ದೇವಾಲಯದ ವಿಶೇಷ.
ಭಾರತೀಯ ಕಲೆಗಳಿಗೆ ನೆಲೆ
ಪೂಜೆಯ ಜತೆಗೆ ಈ ದೇವಾಲಯವು ಅಮೆರಿಕದಲ್ಲಿ ಬೆಳೆಯುತ್ತಿರುವ ಭಾರತೀಯ ಮೂಲದ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿ ನಿಯಮಿತವಾಗಿ ಭರತನಾಟ್ಯ, ಕೂಚಿಪುಡಿ ಮತ್ತು ಕರ್ನಾಟಕ ಸಂಗೀತದ ಕಛೇರಿಗಳು ನಡೆಯುತ್ತವೆ. ಕನ್ನಡ, ತಮಿಳು, ತೆಲುಗು ಮತ್ತು ಸಂಸ್ಕೃತ ಭಾಷೆಗಳನ್ನು ಕಲಿಯಲು ಇಲ್ಲಿ ಅವಕಾಶವಿದೆ. ಅಲ್ಲದೇ ಧಾರ್ಮಿಕ ಮತ್ತು ದಾರ್ಶನಿಕ ಪುಸ್ತಕಗಳ ಬೃಹತ್ ಸಂಗ್ರಹವೂ ಇಲ್ಲಿದೆ. ದೇವಾಲಯವು ಸಾಮಾಜಿಕ ಮತ್ತು ಸಮುದಾಯದ ಸೇವೆಯಲ್ಲೂ ಮುಂಚೂಣಿಯಲ್ಲಿದೆ. ದೇವಾಲಯದ ಒಳಗಿನ ವಿಶಾಲವಾದ ಸಭಾಂಗಣದಲ್ಲಿ ಕಲಾವಿದರು ಸಂಗೀತ ಕಛೇರಿ ನೀಡಲು ಹೆಮ್ಮೆ ಪಡುತ್ತಾರೆ. ಸ್ಥಳೀಯ ವಿದ್ಯಾರ್ಥಿಗಳಿಗೆ ತಮ್ಮ ನೃತ್ಯ ಅಥವಾ ಸಂಗೀತದ 'ಅರಂಗೇಟ್ರಂ' ಮಾಡಲು ಇದು ಅತ್ಯಂತ ಪವಿತ್ರವಾದ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ.
ಯುವ ಪೀಳಿಗೆಗೆ ಸನಾತನ ಧರ್ಮದ ಅರಿವು
ಪ್ರತಿ ಭಾನುವಾರಗಳಂದು ಮಕ್ಕಳಿಗೆ ರಾಮಾಯಣ, ಮಹಾಭಾರತ ಮತ್ತು ವೇದಗಳ ಬಗ್ಗೆ ಪಾಠ ಮಾಡಲಾಗುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ತಜ್ಞರಿಂದ ಯೋಗ ತರಗತಿಗಳನ್ನು ಮತ್ತು ಸಾಮೂಹಿಕ ಧ್ಯಾನ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ಭಾರತದಿಂದ ಆಗಮಿಸುವ ಖ್ಯಾತ ವಿದ್ವಾಂಸರಿಂದ ಆಧ್ಯಾತ್ಮಿಕ ಪ್ರವಚನಗಳು ಮತ್ತು ಗೀತಾ ಪಾರಾಯಣಗಳೂ ನಡೆಯುತ್ತವೆ. ದೇವಾಲಯದ ಆವರಣವು ಪರಿಸರ ಸ್ನೇಹಿಯಾಗಿದ್ದು, ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ವರ್ಷವಿಡೀ ಇಲ್ಲಿ ಹಬ್ಬಗಳ ಸಂಭ್ರಮ
ಇಲ್ಲಿ ಪ್ರತಿ ದಿನವೂ ಸಂಭ್ರಮದ ವಾತಾವರಣವಿರುತ್ತದೆ. ವಿಶೇಷವಾಗಿ ನವರಾತ್ರಿ. ಮಹಾಶಿವರಾತ್ರಿ, ದೀಪಾವಳಿ ಹೀಗೇ ಎಲ್ಲ ಹಬ್ಬಗಳನ್ನು ಭಕ್ತಾದಿಗಳು ಸೇರಿ ಶ್ರದ್ಧೆ ಮತ್ತು ಸಂಭ್ರಮದಿಂದ ನೆರವೇರಿಸುತ್ತಾರೆ. ವೈಕುಂಠ ಏಕಾದಶಿಯಂದು ವಿಷ್ಣುವಿನ ದರ್ಶನಕ್ಕಾಗಿ ಸಾವಿರಾರು ಭಕ್ತರು ಸಾಲುಗಟ್ಟಿ ನಿಲ್ಲುತ್ತಾರೆ.

ಹಂತ ಹಂತವಾಗಿ ಹೊಸ ಹೊಸ ದೈವ ಸನ್ನಿಧಿಗಳನ್ನು ಸೇರಿಸುತ್ತಾ ಇಂದು ಇದು ಅಮೆರಿಕದ ಅತಿದೊಡ್ಡ ಹಿಂದೂ ದೇವಾಲಯ ಸಂಕೀರ್ಣಗಳಲ್ಲಿ ಒಂದಾಗಿ ಬೆಳೆದಿದೆ. ಅಮೆರಿಕದಂಥ ದೇಶದಲ್ಲಿ ಇಷ್ಟು ದೊಡ್ಡ ಹಿಂದೂ ದೇವಾಲಯವನ್ನು ನಿರ್ವಹಿಸುವುದು ನಿಜಕ್ಕೂ ಪ್ರಶಂಸನೀಯ. ದೇವಸ್ಥಾನದ ದೈನಂದಿನ ಕೆಲಸಗಳಲ್ಲಿ ನೂರಾರು ಸ್ವಯಂಸೇವಕರು ಪಾಲ್ಗೊಳ್ಳುತ್ತಾರೆ. ಹಬ್ಬಗಳ ಸಮಯದಲ್ಲಿ ಜನಸಂದಣಿಯನ್ನು ನಿಯಂತ್ರಿಸುವುದರಿಂದ ಹಿಡಿದು ಪ್ರಸಾದ ವಿತರಣೆಯವರೆಗೆ ಎಲ್ಲವನ್ನೂ ಭಕ್ತರೇ ಉತ್ಸಾಹದಿಂದ ಮಾಡುತ್ತಾರೆ. ಅಮೆರಿಕದ ಸ್ಥಳೀಯ ಸರಕಾರ ಮತ್ತು ಇತರ ಸಮುದಾಯಗಳೊಂದಿಗೆ ಈ ದೇವಾಲಯವು ಉತ್ತಮ ಬಾಂಧವ್ಯ ಹೊಂದಿದೆ. ಇದು ಅಮೆರಿಕದಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಒಂದು 'ಸಾಂಸ್ಕೃತಿಕ ರಾಯಭಾರ ಕಚೇರಿ'ಯಂತೆ ಕೆಲಸ ಮಾಡುತ್ತಿದೆ.
ಶ್ರೀ ಶಿವ-ವಿಷ್ಣು ದೇವಾಲಯವು ವಿದೇಶದಲ್ಲಿ ಭಾರತೀಯತೆಯ ಬೇರುಗಳನ್ನು ಜೀವಂತವಾಗಿರಿಸಿರುವ ಒಂದು ಅದ್ಭುತ ಕೇಂದ್ರ. ಇಲ್ಲಿನ ಶಾಂತಿಯುತ ವಾತಾವರಣ, ಸುಂದರವಾದ ಕೆತ್ತನೆಗಳು, ಪರಿಸರ ಕಾಳಜಿ ಹಾಗೂ ಶುಚಿತ್ವ ಮತ್ತು ಭಕ್ತಿಯ ಪರಾಕಾಷ್ಠೆ ಯಾವುದೇ ಪ್ರವಾಸಿಗನ ಮನಸನ್ನು ಗೆಲ್ಲುತ್ತದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಅಸ್ಮಿತೆಯಂತಿರುವ ಈ ದೇವಾಲಯಕ್ಕೆ ಭೇಟಿ ನೀಡಿದಾಗ ಮಾತ್ರ ನಮಗೆ ನಮ್ಮ ಪ್ರವಾಸ ಸಾರ್ಥಕವೆನಿಸುತ್ತದೆ. ನೀವು ವಾಷಿಂಗ್ಟನ್ ಡಿಸಿಯ ಪ್ರವಾಸದಲ್ಲಿದ್ದು ದೇವಾಲಯಕ್ಕೆ ಭೇಟಿ ನೀಡಬೇಕೆಂದುಕೊಂಡರೆ ಮಿಸ್ ಮಾಡದೇ ಹೋಗಿಬನ್ನಿ.
ಮಾಹಿತಿ ಪೆಟ್ಟಿಗೆ
ವಾಷಿಂಗ್ಟನ್ ಡಿಸಿಯಲ್ಲಿ ವಸಂತ ಕಾಲ ಏಪ್ರಿಲ್-ಮೇ ಆಗಿದ್ದು, ಈ ಸಮಯದಲ್ಲಿ ಚೆರ್ರಿ ಬ್ಲಾಸಂ ಹಬ್ಬವಿರುದರಿಂದ ವಾತಾವರಣ ಅತ್ಯಂತ ಸುಂದರವಾಗಿರುತ್ತದೆ. ಈ ಸಮಯದಲ್ಲಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುವುದು ಉತ್ತಮ. ಇಲ್ಲಿಂದ ಕೇವಲ 20-30 ನಿಮಿಷಗಳ ಪ್ರಯಾಣದಲ್ಲಿ ಲ್ಯಾನ್‌ಹ್ಯಾಮ್‌ನಲ್ಲಿನ ಈ ಶಿವ-ವಿಷ್ಣು ದೇವಾಲಯವನ್ನು ತಲುಪಬಹುದು.