ಬ್ರಿಟೀಷ್ ನೆಲದಲ್ಲೂ ಕನ್ನಡದ ಡಿಂಡಿಮ !
ನಾನು ಯುನೈಟೆಡ್ ಕಿಂಗ್ಡಮ್‌ಗೆ ವಲಸೆ ಬಂದು ಹಲವಾರು ವರ್ಷಗಳು ಕಳೆದಿವೆ. ಆದರೂ ಎಂದಿಗೂ ನನಗೆ ಕರುನಾಡಿನಿಂದ ದೂರವಿದ್ದೇನೆ ಎಂಬ ಭಾವನೆ ಬಂದಿಲ್ಲ. ಇಲ್ಲಿನ ಸ್ಥಳೀಯರು ಜಾತಿ ಭಾಷೆ ಎಂಬ ಭೇದವಿಲ್ಲದೆ ನಮ್ಮೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸುತ್ತಾರೆ. ನನಗೆ ಬಹಳ ಇಷ್ಟವಾದದ್ದು, ಇಲ್ಲಿನ ಸ್ಥಳೀಯ ಮಕ್ಕಳು. ಇಂಗ್ಲೀಷನ್ನು ಮೊದಲ ಭಾಷೆಯನ್ನಾಗಿ ಕಲಿತರೂ, ಕನ್ನಡವನ್ನು ಮಾತಾಡುವ ಶೈಲಿ…
- ರಜನಿ ರಾಜು, ರೆಡಿಂಗ್, ಯು ಕೆ
ನವೆಂಬರ್ ತಿಂಗಳು ಬಂತೆಂದರೆ ಸಾಕು ಪ್ರತಿಯೊಬ್ಬ ಕನ್ನಡಿಗನ ಎದೆಯು ಗರ್ವದಿಂದ ಉಬ್ಬುತ್ತದೆ. ಇದು ನಮ್ಮ ಕರ್ನಾಟಕ ಅಸ್ತಿತ್ವಕ್ಕೆ ಬಂದ ದಿನ. ಈ ದಿನದಂದು ಎಲ್ಲೆಲ್ಲು ಹಬ್ಬದ ವಾತಾವರಣ ಚಿಮ್ಮುತ್ತದೆ. ಹಳದಿ ಕೆಂಪು ಬಣ್ಣದ ಬಾವುಟಗಳು ಎಲ್ಲೆಲ್ಲೂ ರಾರಾಜಿಸುತ್ತವೆ.
ಈ ಆಚರಣೆಗಳನ್ನು ಕಂಡು ವಿದೇಶಗಳಲ್ಲಿರುವ ಕನ್ನಡಿಗರು ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ತಾವು ನೆಲೆಸಿರುವಲ್ಲಿಯೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಆರಂಭಿಸಿದ್ದಾರೆ. ನಾನು ಯುನೈಟೆಡ್ ಕಿಂಗ್ಡಮ್‌ಗೆ ವಲಸೆ ಬಂದು ಹಲವಾರು ವರ್ಷಗಳು ಕಳೆದಿವೆ. ಆದರೂ ಎಂದಿಗೂ ನನಗೆ ಕರುನಾಡಿನಿಂದ ದೂರವಿದ್ದೇನೆ ಎಂಬ ಭಾವನೆ ಬಂದಿಲ್ಲ. ಇಲ್ಲಿನ ಸ್ಥಳೀಯರು ಜಾತಿ ಭಾಷೆ ಎಂಬ ಭೇದವಿಲ್ಲದೆ ನಮ್ಮೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸುತ್ತಾರೆ. ನನಗೆ ಬಹಳ ಇಷ್ಟವಾದದ್ದು, ಇಲ್ಲಿನ ಸ್ಥಳೀಯ ಮಕ್ಕಳು. ಇಂಗ್ಲೀಷನ್ನು ಮೊದಲ ಭಾಷೆಯನ್ನಾಗಿ ಕಲಿತರೂ, ಕನ್ನಡವನ್ನು ಮಾತಾಡುವ ಶೈಲಿ ಅದ್ಭುತ. ಅವರೂ ಈ ಸಂದರ್ಭದಲ್ಲಿ ಹುಮ್ಮಸ್ಸಿನಿಂದ ಹಾಡು ನೃತ್ಯಗಳಿಂದ ಎಲ್ಲರ ಮನರಂಜಿಸುತ್ತಾರೆ. ಈ ಮಕ್ಕಳಿಗೆ ಕನ್ನಡ ಕಲಿಸುವ ಪ್ರಯತ್ನದಲ್ಲಿರುವ ಪೋಷಕರಿಗೆ ಒಂದು ಚಪ್ಪಾಳೆ ಹೊಡೆಯಬೇಕೆನಿಸಿತು.

ಈ ವಿದೇಶದಲ್ಲೂ ನಮ್ಮ ನಾಡಿನಷ್ಟೇ ಅದ್ಭುತವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾರೆ. ಇದನ್ನು ಕಾಣುವ ನಾವೇ ಧನ್ಯರು. ಯುಕೆಯಲ್ಲಂತೂ ಹಲವೆಡೆ ಕನ್ನಡಿಗರ ಗುಂಪುಗಳಿದ್ದು, ಅಲ್ಲೆಲ್ಲ ನಮ್ಮ ನಾಡ ಗೀತೆಯನ್ನು ಹಾಡುತ್ತಾರೆ. ರಾಜ್ಯೋತ್ಸವನ್ನು ವೈಭವದಿಂದ ಆಚರಿಸುತ್ತಾರೆ. ಹಲವಾರು ತಮ್ಮ ಕಚೇರಿಗಳಿಗೆ ರಜೆ ಹಾಕಿ ಇದರಲ್ಲಿ ಭಾಗಿಯಾಗುತ್ತಾರೆ.
ವಾರಾಂತ್ಯದಲ್ಲಿ ಈ ಆಚರಣೆ ಬಂದರಂತೂ ಬಾಳೆ ಎಲೆ ಊಟ, ನೃತ್ಯ, ಸಂಗೀತ, ಚಿಣ್ಣರಿಗೆ ಫ್ಯಾನ್ಸಿ ಡ್ರೆಸ್‌ಗಳು ಹೀಗೆ ವೈವಿಧ್ಯ ಕಾರ್ಯಕ್ರಮಗಳು ಇರುತ್ತವೆ.
ನಮ್ಮ ಸಹ ಕನ್ನಡಿಗರನ್ನು ಭೇಟಿಯಾಗುವುದು ಮತ್ತು ಅವರೊಂದಿಗೆ ಸಮಯ ಕಳೆಯುವುದು, ನಮ್ಮ ನಾಡು ನುಡಿಗಳ ಬಗ್ಗೆ ವಿಚಾರ ವಿನಿಮಯ ಎಲ್ಲವೂ ಸಮಯದಲ್ಲೆ ನಡೆಯುತ್ತವೆ.

ನಾನು ಇಂಗ್ಲೆಂಡ್‌ಗೆ ಹೊಸದರಲ್ಲಿ ಬಂದ ಸಮಯದಲ್ಲಿ ನಮ್ಮವರನ್ನು ಹುಡುಕುವುದು ಹೇಗಪ್ಪಾ ಎಂದು ಯೋಚಿಸುತ್ತಿದೆ. ಆಗ ನನಗೆ ಪರಿಚಯವಾಗಿದ್ದು ಕನ್ನಡಿಗರು ಯುಕೆ ಎಂಬ ಸಂಸ್ಥೆ. ನಿಸ್ವಾರ್ಥವಾಗಿ ಕನ್ನಡವನ್ನು ಹೊರ ದೇಶದಲ್ಲಿ ಬೆಳೆಸಿ ಉಳಿಸಬೇಕು ಎಂಬ ಒಮ್ಮನಸ್ಸಿನ ಕನ್ನಡಿಗರೇ ಕೂಡಿರುವ ಈ ಸಂಸ್ಥೆಯಲ್ಲಿ, ಭಾಗಿಯಾಗಲು ನನಗೆ ಅವಕಾಶ ದೊರೆಯಿತು. ಈ ಸಂಸ್ಥೆಯ ರಾಜ್ಯೋತ್ಸವದಲ್ಲಿ ಭಾಗಿಯಾದುದು ನಾನು ವಿದೇಶದಲ್ಲಿ ಭಾಗವಹಿಸಿದ ಮೊದಲ ದೊಡ್ಡಮಟ್ಟದ ಕಾರ್ಯಕ್ರಮವಾಗಿತ್ತು. ಇಲ್ಲಿ ನನಗೆ ಒಂದು ಮೊಮೆಂಟೋ ಕೂಡ ದೊರಕಿತ್ತು. ಅದು ಬಹುದೊಡ್ಡ ಕಾರ್ಯಕ್ರಮವಾಗಿತ್ತು.
ಕನ್ನಡ ನಮ್ಮ ಮಾತೃ ಭಾಷೆ, ನಮ್ಮ ತಾಯಿಯ ಸ್ವರೂಪ, ನಮ್ಮ ಮೊದಲ ಗುರು. ಅವಳನ್ನು ಎತ್ತಿ ಹಿಡಿದು ಮತ್ತಷ್ಟು ಎತ್ತರಕ್ಕೆ ಕರೆದೊಯ್ಯಬೇಕು, ಪ್ರಪಂಚದ ಎಲ್ಲೆಡೆ ನಮ್ಮ ಭಾಷೆ ಬೆಳಗ ಬೇಕು.
ಇಂದಿನ ಮಕ್ಕಳಿಗೆ ನಾವು ಸರಿಯಾಗಿ ಕನ್ನಡ ಹೇಳಿಕೊಟ್ಟು, ರಾಜ್ಯೋತ್ಸವದ ಮಹತ್ವವನ್ನು ಅವರಲ್ಲಿ ಹಂಚಬೇಕು, ಎಲ್ಲರು ಕನ್ನಡವನ್ನು ಬಳಸಬೇಕು, ಅದು ಅದಾಗಿಯೇ ಬೆಳೆಯುತ್ತದೆ. ಇದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ.