ಇದು ಬರಿಯ ಊರಲ್ಲೋ ಅಣ್ಣಾ.. ದ್ವೀಪಗಳ ಸಮೂಹ!
ಇಲ್ಲಿ ಜನರು ನಾಳೆಗಳ ಭರವಸೆಯ ಕಿರಣಗಳನ್ನು ನೋಡುತ್ತಾರೆ, ಆಚರಿಸುತ್ತಾರೆ. ದಿನವಿಡಿ ಎಲ್ಲ ಕಡಲತೀರವನ್ನು ಸಂಭ್ರಮಿಸಿ, ಪ್ರಕೃತಿ ಮತ್ತು ವಿಜ್ಞಾನದ ವಿಸ್ಮಯವನ್ನು ಕಣ್ಣಾರೆ ಕಂಡು ಕೊನೆಗೆ ಇಲ್ಲಿ ಮೌನದಿಂದ ಕೂರುತ್ತಾರೆ. ಎಲ್ಲವುಗಳಿಂದ ಮುಕ್ತಿ ಪಡೆಯುತ್ತಾರೆ.
- ಸ್ಫೂರ್ತಿ ಚಂದ್ರಶೇಖರ್
ಲ್ಯಾಂಡ್ ಆಫ್ ಸ್ಮೈಲ್ಸ್ ಎಂದೇ ಖ್ಯಾತಿ ಹೊಂದಿರುವ, ಯುವಕ, ಯುವತಿಯರನ್ನು ವರ್ಷದಿಂದ ವರ್ಷಕ್ಕೆ ಸೆಳೆಯುತ್ತಿರುವ ದೇಶ ಥೈಲ್ಯಾಂಡ್. ಇಂಥ ದೇಶದಲ್ಲಿ ಬ್ಯಾಂಕಾಕ್, ಫುಕೆಟ್, ಪಟ್ಟಾಯಾ ಹೀಗೆ ಹಲವಾರು ಕಂಡು ಕೇಳರಿಯದ ಒಂದಿಷ್ಟು ನಗರಗಳು ದೇಶ, ವಿದೇಶಿಗರನ್ನು ಆಕರ್ಷಿಸುತ್ತಲಿದೆ. ಈ ಎಲ್ಲ ನಗರಗಳ ಮಧ್ಯೆ ಕ್ರಾಬಿ ಎಂಬ ಪುಟ್ಟ ನಗರ ತನ್ನಪಾಡಿಗೆ ಸದ್ದಿಲ್ಲದೆ ಸ್ವರ್ಗದ ಗಮ್ಯಸ್ಥಾನವಾಗಿ ನಿಂತಿದೆ.
ಕ್ರಾಬಿ ಥೈಲ್ಯಾಂಡ್ ದೇಶದ ಒಂದು ಪುಟ್ಟ ನಗರ ಮತ್ತು ತೀರದಾಚೆಯ ದ್ವೀಪಗಳ ಸಮೂಹ. ಅದ್ಭುತವಾದ ಪ್ರಕೃತಿಯ ಚೆಲುವು, ಇದರಲ್ಲಿ ಸುಣ್ಣಗಲ್ಲಿನ ಕಮರುಗಳು ಮತ್ತು ನೂರಕ್ಕೂ ಹೆಚ್ಚು ದ್ವೀಪಗಳು ಸೇರಿವೆ. ಸುಮಾರು 19 ಚದರ ಕಿಮೀ ವ್ಯಾಪ್ತಿ ಪ್ರದೇಶವನ್ನು ಹೊಂದಿದೆ. ಕಡಲತೀರ, ದ್ವೀಪಗಳು, ರಾಕ್ ಕ್ಲೈಂಬಿಂಗ್, ಸ್ಕೂಬಾ ಡೈವಿಂಗ್ ಮತ್ತು ಸಾಂಸ್ಕೃತಿಕ ಅನುಭವಗಳನ್ನು ಹುಡುಕುವ ಪ್ರವಾಸಿಗರಿಗೆ ಇದೊಂದು ಸುಂದರ ತಾಣ.
ಆ ನಾಂಗ್ ಕಡಲತೀರವು ತನ್ನ ಜೀವಂತ ವಾತಾವರಣ ಹಾಗೂ ದೋಣಿ ಸವಾರಿಗೆ ಪ್ರಸಿದ್ಧ. ಒಂದು ಬದಿ ರಸ್ತೆ ಇದ್ದರೆ ಇನ್ನೊಂದು ಬದಿ ಕಡಲತೀರ. 365 ದಿನವೂ ಅಂಬುಧಿ ಕೂಗುತ್ತಾಳೆ, ಜನರನ್ನು ಕರೆಯುತ್ತಾಳೆ ಮತ್ತೆ ಮತ್ತೆ ಮೋಹಿಸುತ್ತಾಳೆ.

ಆ ನಾಂಗ್ ಕಡಲತೀರದಿಂದ ಹೆಚ್ಚು ಶಾಂತವಾಗಿರುವ ಫ್ರಾ ನಾಂಗ್ ಗುಹೆ ಕಡಲತೀರವನ್ನು ಲಾಂಗ್ ಟೈಲ್ ದೋಣಿಯಿಂದ ಮಾತ್ರ ತಲುಪಬಹುದು. ಇಲ್ಲಿ ರಾಕ್ ಕ್ಲೈಂಬಿಂಗ್ ಮಾಡಬಹುದು. ಈ ಕಡಲತೀರದಲ್ಲಿ ನೀವು ಬಿಳಿ ಮರಳನ್ನು ನೋಡಬಹುದು. ಇಲ್ಲಿಂದ ರಯಾವದೀ ಎಂಬ ದ್ವೀಪ ಸಿಗುತ್ತದೆ. ಇದು ಕ್ರಾಬಿಯ ಹೃದಯ ಭಾಗದಲ್ಲಿದೆ. ಇದಾದನಂತರ ಇದರ ಹತ್ತಿರದಲ್ಲೇ ಇರುವ ಕೋಳಿಯ ಆಕಾರದ ಬಂಡೆಗೆ "ಚಿಕನ್ ಐಲ್ಯಾಂಡ್" ಅಥವಾ ಕೋಹ್ ಕೈ ಎಂದು ಕರೆಯುತ್ತಾರೆ. ದ್ವೀಪಗಳನ್ನು ನೋಡಲು ಬಂದ ಪ್ರತಿಯೊಬ್ಬರು ಇಲ್ಲಿ ಹೋಗುತ್ತಾರೆ ಮತ್ತು ಪ್ರಕೃತಿಯ ಸೊಬಗಿಗೆ ಮಾರು ಹೋಗುತ್ತಾರೆ. ಇಲ್ಲಿಂದ ಮುಂದೆ ಸಿಗುವುದೇ ಪ್ರಾ ನಾಂಗ್ ಕೇವ್ ಬೀಚ್. ಇದು ತನ್ನ ಸುಂದರ ಕಡಲತೀರ, ಆಕಾಶಮುಟ್ಟುವ ಸುಣ್ಣಗಲ್ಲಿನ ಕಮರುಗಳು ಹಾಗೂ ವಿಶಿಷ್ಟವಾದ ಫ್ರಾ ನಾಂಗ್ ಗುಹೆಗಾಗಿ ಪ್ರಸಿದ್ಧವಾಗಿದೆ. ಇಲ್ಲಿಂದಾಚೆಗೆ ಸಿಗುವುದೇ ತುಪ್ ಐಲ್ಯಾಂಡ್ ನ್ಯಾಚುರಲ್ ಬೀಚ್. ಇದೊಂದು ರಮಣೀಯವಾದ ಕಡಲತೀರ. ಇಲ್ಲಿ ಎರಡು ದ್ವೀಪಗಳ ನಡುವೆ ಸ್ವಲ್ಪವೇ ಜಾಗದಲ್ಲಿ ಮರಳಿನ ಹಾದಿ ಕಾಣಸಿಗುತ್ತದೆ.
ತುಪ್ ದ್ವೀಪದ ಕಡಲತೀರ ಮೃದುವಾದ, ಪುಡಿಯಂಥ ಬಿಳಿ ಮರಳಿನಿಂದ ಕೂಡಿದ್ದು, ಸುತ್ತುವರಿದ ಸಮುದ್ರದ ನೀರು ಅತ್ಯಂತ ಸ್ಪಷ್ಟವಾಗಿದ್ದು, ಆಕರ್ಷಕ ಟರ್ಕಾಯ್ಸ್ ಬಣ್ಣದಲ್ಲಿ ಕಾಣುತ್ತದೆ. ಅತಿಯಾದ ಬಿಸಿಲಿರುವ ಕಾರಣ ಸೂರ್ಯನ ಕಿರಣಗಳಿಂದ ಬರುವ ಎಲ್ಲ ಬಣ್ಣವನ್ನು ನೀರು ಹೀರಿ ಬರಿ ಟರ್ಕಾಯ್ಸ್ ಬಣ್ಣವನ್ನು ಹೊರ ಬಿಡುತ್ತದೆ ಹಾಗಾಗಿ ಇಲ್ಲಿ ಕಡಲು ಸ್ಪಟಿಕದಂತೆ ಸ್ಪಷ್ಟವಾಗಿ ಕಾಣುತ್ತದೆ.
ಈ ಸುಂದರ ನೀರು ಈಜು ಹಾಗೂ ಸ್ನಾರ್ಕಲಿಂಗ್‌ಗಾಗಿ ಆಹ್ವಾನಿಸುವಂತ ವಾತಾವರಣವನ್ನು ಸೃಷ್ಟಿಸಿದ್ದು; ವಿಶ್ರಾಂತಿ ಪಡೆಯಲು ಮತ್ತು ಸೂರ್ಯಸ್ನಾನಕ್ಕೆ ಹೇಳಿಮಾಡಿಸಿದ ಜಾಗವಾಗಿದೆ. ಇಲ್ಲಿಂದ ಕೊನೆಗೆ ಸಿಗುವು ಕಡಲತೀರವೇ ಕೋ ಪೋಡಾ. ಇದು ಸೂರ್ಯಾಸ್ತದ ಕಡಲತೀರ ಎಂದೇ ಪ್ರಖ್ಯಾತಿ ಹೊಂದಿದೆ. ಇಲ್ಲಿ ಜನರು ನಾಳೆಗಳ ಭರವಸೆಯ ಕಿರಣಗಳನ್ನು ನೋಡುತ್ತಾರೆ, ಆಚರಿಸುತ್ತಾರೆ. ದಿನವಿಡಿ ಎಲ್ಲ ಕಡಲತೀರವನ್ನು ಸಂಭ್ರಮಿಸಿ, ಪ್ರಕೃತಿ ಮತ್ತು ವಿಜ್ಞಾನದ ವಿಸ್ಮಯವನ್ನು ಕಣ್ಣಾರೆ ಕಂಡು ಕೊನೆಗೆ ಇಲ್ಲಿ ಮೌನದಿಂದ ಕೂರುತ್ತಾರೆ. ಎಲ್ಲವುಗಳಿಂದ ಮುಕ್ತಿ ಪಡೆಯುತ್ತಾರೆ.
ಸೂರ್ಯಾಸ್ತದ ನಂತರ ಕೋ ಪೋಡಾದಿಂದ ಆ ನಾಂಗ್ ಕಡಲತೀರದ ದೋಣಿ ನಿಲುಗಡೆ ಸ್ಥಳಕ್ಕೆ ಮರಳಿ ಬಂದಾಗ ನೀವು ಬಯೋಲ್ಯುಮಿನೆಸೆಂಟ್( ಸಮುದ್ರದ ನೀರು ಮೋಹಕವಾದ ನೀಲಿ ಬೆಳಕಿನಿಂದ ಹೊಳೆಯುತ್ತದೆ) ಕಾಣಬಹುದು. ಈ ಅಚ್ಚರಿಯ ಘಟನೆಯು ಬಯೋಲ್ಯುಮಿನೆಸೆಂಟ್ ಸೂಕ್ಷ್ಮಜೀವಿಗಳಿಂದ ಉಂಟಾಗುತ್ತದೆ; ಅವು ಕದಡಿದಾಗ ಬೆಳಕನ್ನು ಹೊರಹಾಕುತ್ತವೆ.
ನೋಡಿ ಒಂದು ಸಣ್ಣ ನಗರದಲ್ಲಿ ಅದೆಷ್ಟು ಕಡಲತೀರಗಳು, ದ್ವೀಪಗಳು ಮತ್ತೆ ಅದೆಷ್ಟು ಪ್ರಕೃತಿ ಮತ್ತು ವಿಜ್ಞಾನದ ಸಮ್ಮಿಲನ. ಇವೆಲ್ಲ ನೋಡಿದಾಗ ಪ್ರಪಂಚದಲ್ಲಿ ಇನ್ನು ಎಷ್ಟೊಂದು ಅಚ್ಚರಿಗಳಿವೆ? ಒಂದು ಪ್ರವಾಸ ಎಷ್ಟೆಲ್ಲ ಅನುಭವಗಳನ್ನು ಕೊಡುತ್ತದೆ ಮತ್ತು ಬೆರಗುಗಳನ್ನು ನಮ್ಮೊಳಗೆ ಜೀವಂತವಾಗಿರಿಸುತ್ತದೆ.
ಕಡಲತೀರಕ್ಕೆ ಹೋಗುವವರಿಗೆ ಒಂದಷ್ಟು ಟ್ರಾವೆಲ್ ಟಿಪ್ಸ್:
ಯಾವಾಗಲು 2-3 ಜತೆ ಸ್ವಿಮ್ ಸೂಟ್ ಅನ್ನು ಇಟ್ಟುಕೊಳ್ಳಿ.
ಆದಷ್ಟು ಮಳೆಗಾಲದಲ್ಲಿ ಹೋಗಬೇಡಿ.
ಬೀಚ್ ಹ್ಯಾಟ್ , ಸನ್ ಗ್ಲಾಸ್ ಮತ್ತು ಬೀಚ್ ಶೂ ಅನ್ನು ಮರೆಯದೆ ಕೊಂಡೊಯ್ಯಿರಿ.
ವಾಟರ್ಪ್ರೂಫ್ ಮೊಬೈಲ್ ಪೌಚ್ ಅನ್ನು ಒಯ್ಯಿರಿ.