ಡಾಕ್ಟರ್ ಸಿಗೋದು ದೇವರ ದರ್ಶನಕ್ಕಿಂತ ಕಷ್ಟ!
ನಮ್ಮ ಊರಿನಲ್ಲಿ ರಸ್ತೆಯಲ್ಲಿ ಹೋಗುವಾಗ ಯಾರಾದರೂ ಪರಿಚಯದವರು ಸಿಕ್ಕರೆ, "ಏನ್ ಸಾರ್, ಊಟ ಆಯ್ತಾ? ಮಕ್ಳು ಏನ್ ಮಾಡ್ತಿದಾರೆ? ಆಫೀಸಿಗೆ ರಜಾನಾ?" "ಮಗಳಿಗೆ ಕೆಲಸ ಸಿಕ್ತಾ" ಅಂತ ಇಡೀ ಜಾತಕ ವಿಚಾರಿಸ್ತೀವಿ. ಆದರೆ ಜರ್ಮನ್ನಲ್ಲಿ ಹಾಗಿಲ್ಲ. ಇಲ್ಲಿನ ಜನರು ಬಹಳ ಗಂಭೀರ. ದಾರಿಯಲ್ಲಿ ಹೋಗುವಾಗ ಕಣ್ಣು ಕಣ್ಣು ಸೇರಿದರೆ ಒಂದು ಸಣ್ಣ ಸ್ಮೈಲ್ ಮಾಡಿ, ತಲೆ ಬಾಗಿಸಿ "ಹಲೋ" (Hello) ಅನ್ನುತ್ತಾರೆ. ಅಷ್ಟೇ ಅವರ ಸಂಬಂಧ! ಇದಕ್ಕೆ ಅವರು ಕೊಡುವ ಹೆಸರು 'ಪ್ರೈವೆಸಿ'. ಇದು ಅಹಂಕಾರವಲ್ಲ, ಬದಲಿಗೆ ಅನವಶ್ಯಕವಾಗಿ ಇನ್ನೊಬ್ಬರ ವಿಷಯಕ್ಕೆ ಮೂಗು ತೂರಿಸಬಾರದು ಎನ್ನುವ ಅವರ ಸಂಸ್ಕೃತಿ.
- ಚಂದನ್ ಶರ್ಮ, ಜರ್ಮನಿಯಿಂದ ಪತ್ರಕರ್ತ, ನಿರೂಪಕ
ಬೆಂಗಳೂರಿನಿಂದ ವಿಮಾನವೇರಿ ಸುಮಾರು ಎಂಟು ಸಾವಿರ ಕಿಮೀ. ಹಾರಿ ಬಂದರೆ ಸಿಗುವುದೇ ಜರ್ಮನಿ. ಈ ದೇಶದ ವಿಶೇಷ ಅಂದ್ರೆ, ಇದಕ್ಕೆ ಅಂಟಿಕೊಂಡಂತೆ ಒಂದಲ್ಲ, ಎರಡಲ್ಲ, ಬರೋಬ್ಬರಿ ಒಂಬತ್ತು ದೇಶಗಳಿವೆ! ಡೆನ್ಮಾರ್ಕ್, ಪೋಲ್ಯಾಂಡ್, ಝೆಕ್ ರಿಪಬ್ಲಿಕ್, ಆಸ್ಟ್ರಿಯ, ಸ್ವಿಟ್ಜರ್ಲ್ಯಾಂಡ್, ಫ್ರಾನ್ಸ್, ಲಕ್ಸೆಂಬರ್ಗ್, ಬೆಲ್ಜಿಯಂ ಹಾಗೂ ನೆದರ್‌ಲ್ಯಾಂಡ್ಸ್... ಹೀಗೆ ಒಂಬತ್ತು ದಿಕ್ಕುಗಳಿಂದಲೂ ಸ್ನೇಹಿತರನ್ನು ಹೊಂದಿರುವ ಯುರೋಪಿನ ಹೃದಯವಿದು!
ಪಯಣ ಅಂದ್ರೆ ಬರೀ ಜಾಗ ನೋಡೋದಲ್ಲ, ಹೊಸ ಜೀವಗಳ ಪರಿಚಯ ಕೂಡ ಹೌದು. ನಾನು ಏರಿದ ಇತಿಹಾದ್ (Etihad) ವಿಮಾನದಲ್ಲಿ, ನೆಲದಿಂದ 30 ಸಾವಿರ ಅಡಿ ಎತ್ತರದಲ್ಲಿ ಸಿಕ್ಕಿದ್ದು ಉಕ್ರೇನ್ ಮೂಲದ ಗಗನಸಖಿ ಕ್ರಿಸ್ಟಿನಾ ಮತ್ತು ಟ್ಯುನೀಶಿಯಾದ ಅನೀಸ್. ನೆಲದ ಮೇಲೆ ದೇಶಗಳ ನಡುವೆ ಎಷ್ಟೇ ಗಡಿಗಳಿರಬಹುದು, ಆದರೆ ಬಾನಂಗಳದಲ್ಲಿ ನಾವೆಲ್ಲರೂ ಒಂದೇ! ವಿಮಾನದ ಯಾಂತ್ರಿಕತೆಯ ನಡುವೆಯೂ ಅರಳಿದ ನಮ್ಮ ಈ ಪುಟ್ಟ ಸ್ನೇಹ, ಜರ್ಮನಿ ತಲುಪುವ ಮುನ್ನವೇ ನನ್ನ ಪಯಣಕ್ಕೊಂದು ಸುಂದರ ಆರಂಭ ನೀಡಿತ್ತು.
ಈಗ ನಾನು ಜರ್ಮನಿಯಲ್ಲೇ ಕುಳಿತು ಈ ಸಾಲುಗಳನ್ನು ಗೀಚುತ್ತಿದ್ದೇನೆ. ಕಿಟಕಿ ಆಚೆ ಮೈ ಕೊರೆಯುವ ಚಳಿ, ಕೈಯಲ್ಲಿ ಬಿಸಿ ಕಾಫಿ...ಈ ಬಾರಿಯ ನನ್ನ ವಿದೇಶ ಪ್ರಯಾಣ ಹತ್ತಾರು ಜಾಗಗಳನ್ನು ನೋಡಿ ಫೊಟೋ ಕ್ಲಿಕ್ಕಿಸುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ನನ್ನ ಕುಟುಂಬ ಕಳೆದ ಐದು ವರ್ಷಗಳಿಂದ ಜರ್ಮನಿಯಲ್ಲಿ ವಾಸವಾಗಿದ್ದರೂ, ಹಲವು ಬಾರಿ ನಾನು ಯುರೋಪಿನ ದಾರಿ ಹಿಡಿದಿದ್ದರೂ, ಈ ಸಲದ ನನ್ನ ಭೇಟಿಗೆ ಕಾರಣಗಳು ಬೇರೆಯೇ ಇದ್ದವು. ಯೂನಿವರ್ಸಿಟಿಗಳ ಅಂಗಳದಿಂದ ಹಿಡಿದು, ಜರ್ಮನಿ, ಝೆಕ್ ರಿಪಬ್ಲಿಕ್, ಹಂಗೇರಿ, ಸ್ಲೋವಾಕಿಯ, ನೆದರ್‌ಲ್ಯಾಂಡ್ಸ್, ಬೆಲ್ಜಿಯಂ, ಫ್ರಾನ್ಸ್, ಆಸ್ಟ್ರಿಯ ಹೀಗೆ ಹಲವು ದೇಶಗಳ ಮಾಧ್ಯಮ ಸಂಸ್ಥೆಗಳ ಜತೆಗಿನ ಮಾತು-ಮಂಥನಕ್ಕೆ ಸಾಕ್ಷಿಯಾಯಿತು. ಹೊಸ ಅನುಭವಗಳ ಪುಟ್ಟ ಖಾತೆಯೊಂದು ತೆರೆದುಕೊಂಡಿತ್ತು.
ಎಷ್ಟೆಲ್ಲಾ ಸುತ್ತು ಹಾಕಿದರೂ, ನೂರಾರು ಜನರ ಸಂಪರ್ಕ ಸಿಕ್ಕಿದರೂ ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡ, ನಡುರಾತ್ರಿಯ ಕೊರೆಯುವ ಚಳಿಯಲ್ಲೂ ಧಿಗ್ಗನೆ ಎಚ್ಚರಿಸಿದ ದೇಶ - ಜರ್ಮನಿ!
ಕ್ಯಾಬ್ ಡ್ರೈವರ್ ಮತ್ತು ಸ್ಕ್ವಿಡ್ ಗೇಮ್!
"ಗುಟೆನ್ ಮೊರ್ಗನ್!" (ಶುಭೋದಯ!)

ನಾನು ಮ್ಯುನಿಕ್ ರೈಲು ನಿಲ್ದಾಣದಿಂದ ಹೊರಟು ಜರ್ಮನಿಯ ರಾಜಧಾನಿ ಬರ್ಲಿನ್ ಸೇರಿದಾಗ ಬೆಳಗಿನ ಜಾವ. ಯುರೋಪಿನ ಅತ್ಯಂತ ಜನ ದಟ್ಟಣೆ ಇರುವ ರೈಲು ನಿಲ್ದಾಣಗಳಲ್ಲಿ ಬರ್ಲಿನ್ ಕೂಡಾ ಒಂದು. ಹೊರಗೆ ಮೂರು ಡಿಗ್ರಿ ಕೊರೆಯುವ ಚಳಿ.
ಹಾಗೇ ನಿಲ್ದಾಣದಿಂದ ಹೊರ ಬಂದು ಕಾರು ಏರಿದಾಗ ಎದುರಾಗಿದ್ದೇ ದಕ್ಷಿಣ ಕೊರಿಯ ಮೂಲದ ಕ್ಯಾಬ್ ಚಾಲಕ 'ಮೀ ಜುನ್ ಹೋ'. ಬಹಳ ಪ್ರಖ್ಯಾತಿ ಪಡೆದ 'Squid Game' ಸೀರೀಸ್ ನ ನಾಯಕನ ಹೆಸರಿನಂತೆ ಕೇಳಿಸಿದರೂ ಜುನ್ ಹೋ ಕಾರಿಗೆ ಆತನೇ ಕ್ಯಾಪ್ಟನ್! `ಹೇಗಿದ್ದೀರಿ ಸಾರ್' ಅಂದಿದ್ದೆ ತಡ. `ಈ ಅಂತಾರಾಷ್ಟ್ರೀಯ ಕಂಪನಿಗಳ ಕ್ಯಾಬ್ ನವರು ಬಂದು ನಮ್ಮಂಥ ಮೀಟರ್ ಟ್ಯಾಕ್ಸಿಯವರನ್ನು ಹಾಳು ಮಾಡಿಬಿಟ್ಟರು ಅಂತ ಶುರು ಮಾಡಿ.. ಆದರೂ ನಾನು ಆರಾಮಿದ್ದೇನೆ.. ಕುಟುಂಬವೆಲ್ಲಾ ಕೊರಿಯಾದಲ್ಲಿದೆ" ಅನ್ನುವಷ್ಟರಲ್ಲಿ ನಾನು ಉಳಿಯಬೇಕಿದ್ದ ಹೊಟೇಲ್ ಬಂದಿತ್ತು. ಹೊಟೇಲ್ ಕೋಣೆ ಸೇರಿ, ಬಿಸಿ ನೀರು ಮೈಗೆ ಬಿದ್ದಾಗಷ್ಟೇ ಪಯಣದ ಆಯಾಸ ಇಳಿದಿದ್ದು.
ಸೂರ್ಯನಿಗೂ ಇಲ್ಲಿ ಸೋಮಾರಿತನ!
ಒಂದು ತಮಾಷೆ ಹೇಳ್ತೀನಿ ಕೇಳಿ. ನಾವು ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ನೋಡಿ 'ಜರ್ಮನಿ ಅಂದ್ರೆ ಕಲರ್ ಫುಲ್ಲು, ಪಾರ್ಟಿ, ಮಜಾ' ಅಂದ್ಕೊಂಡಿರ್ತೀವಿ. ಆದರೆ ಇಲ್ಲಿಗೆ ಬಂದಾಗಲೇ ಗೊತ್ತಾಗೋದು ಅಸಲಿ ಕತೆ. ಚಳಿಗಾಲ ಬಂತು ಅಂದ್ರೆ ಇಲ್ಲಿ ಸೂರ್ಯನಿಗೂ ಹೊರಬರೋಕೆ ಸೋಮಾರಿತನ!
ಬೆಳಗ್ಗೆ 8 ಗಂಟೆಯಾದರೂ ಕತ್ತಲು ಸರಿದಿರಲ್ಲ. ಇನ್ನು ರಸ್ತೆಗಳಂತೂ ಚಳಿಯ ಹೊದಿಕೆ ಹೊದ್ದು ಸುಮ್ಮನೆ ಮಲಗಿರುತ್ತವೆ. 10 ಗಂಟೆಯಾದರೂ ಅಂಗಡಿ ಮುಂಗಟ್ಟುಗಳು ಬಾಗಿಲು ತೆಗೆಯಲ್ಲ. ಕಾಫಿ ಶಾಪ್‌ಗಳು, ಆಫೀಸುಗಳು ಗರಿಗೆದರಿ, ಈ ದೇಶ ಮೈ ಮುರಿದು ಏಳುವಷ್ಟರಲ್ಲಿ ಬೆಳಗ್ಗೆ 11 ಗಂಟೆ ಆಗಿರುತ್ತೆ! ನಮ್ಮೂರಿನಲ್ಲಿ ಬೆಳಗ್ಗೆ 6 ಗಂಟೆಗೆ ಹಾಲು, ಪೇಪರ್ ಅಂತ ಗಿಜಿಗುಡುವ ರಸ್ತೆಗಳನ್ನು ನೋಡಿ ಅಭ್ಯಾಸವಾದ ಕಣ್ಣುಗಳಿಗೆ, ಇವರ ಈ 'ನಿಧಾನಗತಿಯ ಬೆಳಗು' ನೋಡಿದ್ರೆ ಕಾಲವೇ ಸ್ತಬ್ಧವಾದಂತೆ ಭಾಸವಾಗುತ್ತದೆ. ಇದು ಕೇವಲ ಚಳಿಗಾಲದ ಕತೆಯಲ್ಲ. ಈ ದೇಶ ನಡೆಯುವುದೇ ಹೀಗೆ!
ಹದಿನಾರು ಪ್ರಾಂತ್ಯಗಳು, ಹದಿನಾರು ಲೋಕಗಳು!
ನಮಗೆ ಜರ್ಮನಿ ಅಂದರೆ ಅದೊಂದು ದೇಶ ಅಷ್ಟೇ. ಆದರೆ ಇದರ ಒಳಗೆ ಇಣುಕಿ ನೋಡಿದರೆ ನಮ್ಮ ಭಾರತದಂತೆಯೇ ವೈವಿಧ್ಯವಿದೆ. ಇಲ್ಲಿ ಒಟ್ಟು 16 ರಾಜ್ಯಗಳಿವೆ. ದಕ್ಷಿಣದ ಬವೇರಿಯಾ ಪ್ರಾಂತ್ಯಕ್ಕೂ, ಉತ್ತರದ ಬರ್ಲಿನ್ ಅಥವಾ ಹ್ಯಾಂಬರ್ಗ್ ಪ್ರಾಂತ್ಯಕ್ಕೂ ಬಹಳ ವ್ಯತ್ಯಾಸ! ಬವೇರಿಯಾದ ಜನರಿಗೆ ಸಂಪ್ರದಾಯ, ಸಿರಿವಂತಿಕೆ ಮತ್ತು ತಮ್ಮ ಹಳೆಯ ಸಂಸ್ಕೃತಿಯ ಬಗ್ಗೆ ಎಲ್ಲಿಲ್ಲದ ಹೆಮ್ಮೆ. ಬಿಳಿ ಚರ್ಮದ ಪ್ಯಾಂಟ್ ಹಾಕಿಕೊಂಡು, ದೊಡ್ಡ ದೊಡ್ಡ ಮಗ್ಗುಗಳಲ್ಲಿ ಬಿಯರ್ ಕುಡಿಯುವ ಸಂಭ್ರಮ ಅವರದ್ದು. ಆದರೆ ರಾಜಧಾನಿ ಬರ್ಲಿನ್ ಹಾಗಿಲ್ಲ. ಅದು ಆಧುನಿಕತೆಯ, ಬಂಡಾಯದ ಮತ್ತು ಮಿಶ್ರ ಸಂಸ್ಕೃತಿಯ ತವರು. "ನಾನು ಜರ್ಮನಿ ನೋಡಿದೆ" ಎಂದು ಒಂದೇ ಮಾತಿನಲ್ಲಿ ಹೇಳುವ ಹಾಗಿಲ್ಲ, ಯಾವ ಊರು ನೋಡಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ.
ಹಲೋ ಎಂದರೆ ಮುಗಿಯಿತು ಸಂಬಂಧ!
ಇನ್ನು ಇಲ್ಲಿನ ಜನರ ಬಗ್ಗೆ ಹೇಳಲೇಬೇಕು. ನಮ್ಮ ಊರಿನಲ್ಲಿ ರಸ್ತೆಯಲ್ಲಿ ಹೋಗುವಾಗ ಯಾರಾದರೂ ಪರಿಚಯದವರು ಸಿಕ್ಕರೆ, 'ಏನ್ ಸಾರ್, ಊಟ ಆಯ್ತಾ? ಮಕ್ಳು ಏನ್ ಮಾಡ್ತಿದಾರೆ? ಆಫೀಸಿಗೆ ರಜಾನಾ?' 'ಮಗಳಿಗೆ ಕೆಲಸ ಸಿಕ್ತಾ' ಅಂತ ಇಡೀ ಜಾತಕ ವಿಚಾರಿಸ್ತೀವಿ. ಆದರೆ ಇಲ್ಲಿ ಹಾಗಿಲ್ಲ. ಇಲ್ಲಿನ ಜನರು ಬಹಳ ಗಂಭೀರ. ದಾರಿಯಲ್ಲಿ ಹೋಗುವಾಗ ಕಣ್ಣು ಕಣ್ಣು ಸೇರಿದರೆ ಒಂದು ಸಣ್ಣ ಸ್ಮೈಲ್ ಮಾಡಿ, ತಲೆ ಬಾಗಿಸಿ 'ಹಲೋ' (Hello) ಅನ್ನುತ್ತಾರೆ. ಅಷ್ಟೇ ಅವರ ಸಂಬಂಧ! ಅಲ್ಲಿಗೆ ಚಾಪ್ಟರ್ ಕ್ಲೋಸ್. ಇದಕ್ಕೆ ಅವರು ಕೊಡುವ ಹೆಸರು 'ಪ್ರೈವೆಸಿ'. ಇದು ಅಹಂಕಾರವಲ್ಲ, ಬದಲಿಗೆ ಅನಾವಶ್ಯಕವಾಗಿ ಇನ್ನೊಬ್ಬರ ವಿಷಯಕ್ಕೆ ಮೂಗು ತೂರಿಸಬಾರದು ಎನ್ನುವ ಅವರ ಸಂಸ್ಕೃತಿ.
ಶಾಲೆಯ ಪತ್ರ ಮತ್ತು 'ಫ್ಯಾಮಿಲಿ ಡಾಕ್ಟರ್' ಸಂಕಟ!
ಇಲ್ಲಿನ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಬಗ್ಗೆ ಕೇಳಿದರೆ ನೀವು ದಂಗಾಗುತ್ತೀರಿ. ಜರ್ಮನಿಯಲ್ಲಿ ಶಿಕ್ಷಣ ಕಡ್ಡಾಯ. ನೀವು ಇಲ್ಲಿನ ಯಾವುದೇ ಊರಿಗೆ ಬಂದು, ಸರಕಾರಿ ಕಚೇರಿಯಲ್ಲಿ ನಿಮ್ಮ ವಿಳಾಸವನ್ನು ನೋಂದಾಯಿಸಿದ (City Registration) ಕೆಲವೇ ದಿನಗಳಲ್ಲಿ, ನಿಮ್ಮ ಮಗು ಇಂಥದ್ದೇ ಶಾಲೆಗೆ ಸೇರಬೇಕು ಎಂದು ಸರಕಾರದಿಂದ ಒಂದು ಪತ್ರ ಮನೆಗೆ ಬಂದು ಬೀಳುತ್ತದೆ! 'ನನ್ನ ಮಗನಿಗೆ ಹುಷಾರಿಲ್ಲ, ಶಾಲೆಗೆ ಕಳಿಸಲ್ಲ' ಅನ್ನೋ ಹಾಗಿಲ್ಲ. ಸರಕಾರ ಸೂಚಿಸಿದ ಶಾಲೆ ಬೇಡ ಎಂದರೆ, ಸರಿಯಾದ ಕಾರಣ ಕೊಟ್ಟು, 'ನಾನು ಇಂಥದ್ದೇ ಖಾಸಗಿ ಶಾಲೆಗೆ ಸೇರಿಸುತ್ತಿದ್ದೇನೆ' ಎಂದು ದಾಖಲೆಗಳನ್ನು ಒಪ್ಪಿಸಬೇಕು. ವ್ಯವಸ್ಥೆಯೇ ಇಲ್ಲಿನ ಉಸಿರು.
ಆದರೆ, ಕಾಯಿಲೆ ಬಂದರೆ ಮಾತ್ರ ದೇವರೇ ಗತಿ! ನಮ್ಮಲ್ಲಾದರೆ ಜ್ವರ ಬಂದರೆ, ಗಲ್ಲಿಗೊಬ್ಬರಂತೆ ಇರುವ ಡಾಕ್ಟರ್ ಹತ್ರ ಹೋಗಿ ಇಂಜೆಕ್ಷನ್ ಚುಚ್ಚಿಸ್ಕೊಂಡು ಬರ್ತೀವಿ. ಇಲ್ಲಿ ಹಾಗಿಲ್ಲ. ಇಲ್ಲಿ ಪ್ರತಿಯೊಬ್ಬರಿಗೂ ಒಬ್ಬ 'ಫ್ಯಾಮಿಲಿ ಡಾಕ್ಟರ್' (Hausarzt) ಇರಲೇಬೇಕು.
ನಿಮಗೆ ಏನೇ ಕಾಯಿಲೆ ಬಂದರೂ ಮೊದಲು ಅವರನ್ನೇ ನೋಡಬೇಕು. ವಿಪರ್ಯಾಸ ಅಂದ್ರೆ, ಆ ಫ್ಯಾಮಿಲಿ ಡಾಕ್ಟರ್ ಸಿಗೋದು ದೇವರ ದರ್ಶನಕ್ಕಿಂತ ಕಷ್ಟ! ಅಪಾಯಿಂಟ್ಮೆಂಟ್ ಇಲ್ಲದೆ ಹೋದರೆ ಬಾಗಿಲಲ್ಲೇ ತಡೆದು ನಿಲ್ಲಿಸುತ್ತಾರೆ. 'ತುರ್ತು ಇಲ್ಲ ಅಂದ್ರೆ ಮುಂದಿನ ತಿಂಗಳು ಬನ್ನಿ' ಅಂತಾರೆ. ದುಡ್ಡು ಕೊಡ್ತೀನಿ ಅಂದ್ರೂ ನೋಡಲ್ಲ. ಇನ್ಶೂರೆನ್ಸ್ ಪೇಪರ್ ಗಳೇ ಇಲ್ಲಿ ವೈದ್ಯರಿಗಿಂತ ಹೆಚ್ಚು!
ರುಹೆಟಾಗ್: ರಸ್ತೆಗಳೂ ಧ್ಯಾನ ಮಾಡುವ ದಿನ

ನಮ್ಮಲ್ಲಿ ಭಾನುವಾರ ಬಂತೆಂದರೆ ಮಾಲ್ ಗಳು, ರಸ್ತೆಗಳು ಗಿಜಿಗಿಡುತ್ತವೆ. ಆದರೆ ಜರ್ಮನಿಯಲ್ಲಿ ಭಾನುವಾರವನ್ನು ಅವರು 'ರುಹೆಟಾಗ್' (Ruhetag) ಅಂತಾರೆ. ಅಂದರೆ 'ವಿಶ್ರಾಂತಿಯ ದಿನ'. ಅಂದು ಸೂಪರ್ ಮಾರ್ಕೆಟ್ ನಿಂದ ಹಿಡಿದು ಮೆಡಿಕಲ್ ಶಾಪ್ ವರೆಗೂ ಎಲ್ಲವೂ ಬಂದ್. ಇಡೀ ಊರೇ ಮೌನವ್ರತ ಧರಿಸಿದಂತೆ ಭಾಸವಾಗುತ್ತದೆ. ಮನೆಯಲ್ಲಿ ವಾಷಿಂಗ್ ಮೆಷಿನ್ ಹಾಕುವ ಹಾಗಿಲ್ಲ, ಜೋರಾಗಿ ಹಾಡು ಹಾಕುವ ಹಾಗಿಲ್ಲ. ಹಾಗಾದರೆ ಜನ ಎಲ್ಲಿ ಹೋಗುತ್ತಾರೆ? ಅವರ ದಾರಿ ಕಾಡಿನ ಕಡೆಗೆ. ಜರ್ಮನ್ನರಿಗೆ ಪ್ರಕೃತಿ ಅಂದ್ರೆ ಪ್ರಾಣ. BMW, Audi ನಂಥ ಕಾರುಗಳನ್ನು ಗ್ಯಾರೇಜ್ ನಲ್ಲಿಟ್ಟು, ಶೂ ಏರಿಸಿ ಕಾಡು ಮೇಡು ಅಲೆಯುತ್ತಾರೆ. ಕಾಂಕ್ರೀಟ್ ಕಾಡಿನ ಜಂಜಾಟದಿಂದ ತಪ್ಪಿಸಿಕೊಂಡು ಹಸಿರಿನ ಮಡಿಲಲ್ಲಿ ಮಲಗುವುದೇ ಇವರಿಗೆ ಸ್ವರ್ಗ.
ವೇಗದ ರಸ್ತೆ, ಸೈಕಲ್ ಸವಾರರ ಅಬ್ಬರ!
ಜರ್ಮನಿ, ಕಾರು ಪ್ರಿಯರ ಸ್ವರ್ಗ. ಇಲ್ಲಿನ 'ಆಟೋಬಾನ್' (Autobahn) ರಸ್ತೆಗಳಲ್ಲಿ ಕಾರು ಓಡಿಸುವುದೇ ಒಂದು ಥ್ರಿಲ್. ಅಲ್ಲಿ ವೇಗದ ಮಿತಿಯೇ ಇಲ್ಲ. ಕಾರುಗಳು ರಸ್ತೆಯ ಮೇಲೆ ಓಡುವುದಿಲ್ಲ, ಗಾಳಿಯಲ್ಲಿ ತೇಲುತ್ತವೆ.
ಆದರೆ, ರಸ್ತೆಯಲ್ಲಿ ನಡೆಯುವಾಗ ಹುಷಾರ್! ಇಲ್ಲಿ ಪಾದಚಾರಿಗಳಿಗಿಂತ ಸೈಕಲ್ ಸವಾರರಿಗೆ ಹೆಚ್ಚು ಪವರ್. ಫುಟ್ ಪಾತ್ ಮೇಲೆ ಕೆಂಪು ಬಣ್ಣ ಬಳಿದಿರುತ್ತಾರೆ, ಅದು ಸೈಕಲ್ ಲೇನ್. ಅಪ್ಪಿತಪ್ಪಿ ನೀವು ಫೊಟೋ ತೆಗೆಯುವ ಗುಂಗಿನಲ್ಲಿ ಆ ಲೈನಿಗೆ ಕಾಲಿಟ್ಟರೆ ಮುಗಿಯಿತು, ಹಿಂದಿನಿಂದ ಬರುವ ಸೈಕಲ್ ನವರು ಬೆಲ್ ಕೂಡ ಹೊಡೆಯುವುದಿಲ್ಲ, ನೇರವಾಗಿ ಬಂದು ಗುದ್ದಿಕೊಂಡೇ ಹೋಗುತ್ತಾರೆ! 'ಅದು ನನ್ನ ಜಾಗ, ನೀನ್ಯಾಕೆ ಬಂದೆ?' ಎಂಬ ಧೋರಣೆ ಅವರದ್ದು.
ಆಮೆಗತಿಯಲ್ಲಿ ರೈಲುಗಳು!
ವಿಪರ್ಯಾಸವೆಂದರೆ, ಕಾರುಗಳು ಜೆಟ್ ವಿಮಾನದಂತೆ ಹೋದರೆ, ಇಲ್ಲಿನ ರೈಲುಗಳು (Deutsche Bahn) ಈಗೀಗ ನಮ್ಮ ಊರಿನ ಪ್ಯಾಸೆಂಜರ್ ರೈಲುಗಳಂತೆ ವರ್ತಿಸುತ್ತಿವೆ! 'ಜರ್ಮನ್ ಟೈಮಿಂಗ್ಸ್' ಎನ್ನುವ ಮಾತು ಈಗ ಹಳೆಯದಾಗಿದೆ. ರೀಜನಲ್ ಟ್ರೇನ್, ಅತಿವೇಗದ ರೈಲುಗಳು ಕೂಡಾ ತಡವಾಗಿ ಬರುವುದು, ಕ್ಯಾನ್ಸಲ್ ಆಗುವುದು ಈಗ ಇಲ್ಲಿಯೂ ಫ್ಯಾಷನ್ ಆಗಿದೆ. ಬಹುಶಃ ಸಮಯಪಾಲನೆ ಅನ್ನುವುದೇ ಮರೀಚಿಕೆಯೇನೋ!
ಬ್ರೆಡ್ ಸರಿ, ಉಡುಪಿ ಹೋಟ್ಲು ಇದ್ಯಾ?
ಇಲ್ಲಿನ ಬೇಕರಿಗಳ ಮುಂದೆ ಹಾದು ಹೋದರೆ ಸಾಕು, ಆ ಘಮಕ್ಕೆ ಅರ್ಧ ಹೊಟ್ಟೆ ತುಂಬುತ್ತದೆ. ಬರೋಬ್ಬರಿ 3000 ಬಗೆಯ ಬ್ರೆಡ್ ಗಳಿವೆ. ಆದರೆ ನಾಲಿಗೆ ಎಷ್ಟು ದಿನ ಅಂತ ಬ್ರೆಡ್ ತಿನ್ನುತ್ತೆ ಹೇಳಿ? ನಾಲ್ಕು ದಿನ ಕಳೆದ ಮೇಲೆ, ನಮ್ಮೂರಿನ ರಾಗಿ ಮುದ್ದೆ, ಬಿಸಿ ಬಿಸಿ ಬಸ್ಸಾರು, ಜೊತೆಗೆ ನೆಂಚಿಕೊಳ್ಳಲು ಏನಾದರೂ ಖಾರ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ ಅನ್ನಿಸದೇ ಇರಲ್ಲ. ತಣ್ಣನೆಯ ಬ್ರೆಡ್ ಎಷ್ಟೇ ರುಚಿಯಾಗಿದ್ದರೂ, ಮುದ್ದೆ, ಅನ್ನ ಸಾರಿನ ಮುಂದೆ ಸೋಲಲೇಬೇಕು! ಆದರೆ ನಿರಾಸೆಯಾಗಬೇಕಿಲ್ಲ. ಭಾರತೀಯರು ಜಗತ್ತಿನ ಮೂಲೆ ಮೂಲೆಗೂ ತಲುಪಿದ್ದಾರೆ. ಬರ್ಲಿನ್, ಮ್ಯುನಿಕ್, ಫ್ರಾಂಕ್ ಫರ್ಟ್ ಸೇರಿ ಹಲವು ಪ್ರಮುಖ ಮತ್ತು ಸಣ್ಣ ಸಣ್ಣ ನಗರಗಳಲ್ಲೂ ಭಾರತ ಮೂಲದ 'ಸರವಣ ಭವನ್' ಅಂಜಪ್ಪಾರ್, ಬೆಣ್ಣೆ ಬರ್ಲಿನ್, ದೋಸಾ ಕಿಂಗ್, ಗೋವಾ, ಗಣೇಶ ನಂಥ ರೆಸ್ಟೋರೆಂಟ್ ಗಳು ರಾರಾಜಿಸುತ್ತಿವೆ. ಅಲ್ಲಿ ಹೋಗಿ ಬಿಸಿ ಬಿಸಿ ದೋಸೆ ಅಥವಾ ಅನ್ನ ಸಾಂಬಾರ್ ತಿಂದಾಗಲೇ ಜೀವಕ್ಕೆ ಸಮಾಧಾನ!
ಸೌಂದರ್ಯದ ಹಿಂದಿನ ಕರಾಳ ನೆರಳು

ಇದೆಲ್ಲವೂ ಜರ್ಮನಿಯ ಒಂದು ಮುಖ ಮಾತ್ರ. ಈ ಸುಂದರ ರಸ್ತೆಗಳು, ಈ ಮೌನ, ಈ ಶಿಸ್ತಿನ ಆಚೆಗೆ ಇನ್ನೊಂದು ಜರ್ಮನಿ ಇದೆ. ಅದು ಎದೆಯಾಳದಲ್ಲಿ ಅಡಗಿರುವ ಗಾಯದ ಕಲೆ.
ನಾನು ನಿಂತಿರುವ ಈ ಬರ್ಲಿನ್, ಎರಡನೇ ಮಹಾಯುದ್ಧದ ಕರಾಳತೆಯನ್ನು ಉಸಿರಾಡಿದ ನಗರ. ಇಲ್ಲಿನ ಗಾಳಿಯಲ್ಲಿ ಯಹೂದಿಗಳ ನರಳಾಟದ ದನಿ ಇನ್ನೂ ಕೇಳಿಸುವಂತಿದೆ. ಲಕ್ಷಾಂತರ ಮುಗ್ಧರನ್ನು ವಿಷಾನಿಲ ಕೊಟ್ಟು ಸಾಯಿಸಿದ 'ಕಾನ್ಸಂಟ್ರೇಷನ್ ಕ್ಯಾಂಪ್' ಗಳು, ಒಂದು ಸುಂದರ ಸರೋವರದ ದಡದಲ್ಲಿ ಕುಳಿತು ಲಕ್ಷಾಂತರ ಜನರ ಹತ್ಯೆಗೆ ಸ್ಕೆಚ್ ಹಾಕಿದ "ವಾನ್ಸೀ ವಿಲ್ಲಾ'ದ ಕಥೆಗಳು ಇಂದಿಗೂ ಎದೆ ನಡುಗಿಸುತ್ತವೆ.
ವಿಶೇಷವೇನೆಂದರೆ, ಯುದ್ಧ ಮುಗಿದು 80 ವರ್ಷಗಳಾದರೂ, ಜರ್ಮನಿ ಇಂದಿಗೂ ಆ ತಪ್ಪುಗಳಿಗಾಗಿ ಜಗತ್ತಿನ ಮುಂದೆ ತಲೆಬಾಗಿ "ಕ್ಷಮಿಸಿ" ಎಂದು ಕೇಳುತ್ತಲೇ ಇದೆ.
ಅಷ್ಟೇ ಅಲ್ಲ, ಇಂದಿನ ಜರ್ಮನಿಗೂ ಹೊಸ ಬಗೆಯ ತಲೆನೋವುಗಳಿವೆ. ಒಂದೆಡೆ ಯುದ್ಧ ಪೀಡಿತ ದೇಶಗಳಿಂದ ಹರಿದು ಬರುತ್ತಿರುವ ವಲಸಿಗರು, ಇನ್ನೊಂದೆಡೆ ಜರ್ಮನಿಯ ಕತ್ತಲ ಮೂಲೆಗಳಲ್ಲಿ ನಶೆಯಲ್ಲಿ ತೇಲುತ್ತಾ ಬದುಕು ಕಳೆದುಕೊಳ್ಳುತ್ತಿರುವ ಯುವ ಸಮೂಹ, ಮನೆ-ಮಠ ಕಳೆದುಕೊಂಡು ಬೀದಿ ಪಾಲಾಗಿರುವ ಸಾವಿರಾರು ಜನ, ಇವೆಲ್ಲವೂ ಈ ಶ್ರೀಮಂತ ದೇಶದ ಇನ್ನೊಂದು ಕರಾಳ ಮುಖ. ಇದು ಕೇವಲ ಪ್ರವಾಸ ಕಥನವಲ್ಲ, ಒಂದು ದೇಶದ ಆತ್ಮಶೋಧನೆ.
ಅಂಚೆ ಪೆಟ್ಟಿಗೆಯೇ ಇಲ್ಲಿ ದೇವರು!
ಇಷ್ಟೆಲ್ಲಾ ಮುಂದುವರಿದ ದೇಶದಲ್ಲಿ, ಒಂದು ವಿಚಿತ್ರ ಹೇಳ್ತೀನಿ ಕೇಳಿ. ತಂತ್ರಜ್ಞಾನದಲ್ಲಿ ಇವರು "ತಂದೆ"ಯ ಸಮಾನ. ಆದರೆ ಇಂದಿಗೂ ಇವರಿಗೆ ಕಾಗದ ಪತ್ರಗಳ ಮೇಲಿರುವ ಮೋಹ ಹೋಗಿಲ್ಲ. ಬ್ಯಾಂಕ್ ಖಾತೆ, ಇನ್ಶೂರೆನ್ಸ್, ಕೊನೆಗೆ ಮನೆಗೆ ಇಂಟರ್ ನೆಟ್ ಕನೆಕ್ಷನ್ ಬೇಕು ಅಂದರೂ, ಅದರ ಪಾಸ್‌ವರ್ಡ್ ಅಂಚೆಯಲ್ಲೇ ಬರಬೇಕು! ಇಲ್ಲಿ ಇಂಟರ್ ನೆಟ್ ವೇಗಕ್ಕಿಂತ "ಅಂಚೆ ಅಣ್ಣನ" ವೇಗ ಹೆಚ್ಚು. ಪ್ರತಿಯೊಂದು ಅಪಾರ್ಟ್ಮೆಂಟ್ ಕೆಳಗೂ ಸಾಲಾಗಿ ಅಂಚೆ ಪೆಟ್ಟಿಗೆಗಳಿರುತ್ತವೆ. ಅಲ್ಲಿ ನಿಮ್ಮ ಹೆಸರಿಲ್ಲದಿದ್ದರೆ, ನಿಮಗೆ ಈ ದೇಶದಲ್ಲಿ ಅಸ್ತಿತ್ವವೇ ಇಲ್ಲ! ಡಿಜಿಟಲ್ ಯುಗದಲ್ಲೂ ಕಾಗದ ಹಿಡಿದು ಕ್ಯೂ ನಿಲ್ಲುವ ಇವರನ್ನು ಕಂಡರೆ ಆಶ್ಚರ್ಯವಾಗುತ್ತದೆ!
ಖಾಲಿ ಬಾಟಲಿಗೂ ಬೆಲೆ ಇದೆ!
ಇಲ್ಲಿನ ರಸ್ತೆಗಳು ಕನ್ನಡಿಯಂತೆ ಇರುವುದಕ್ಕೆ ಕಾರಣ 'ಫಾಂಡ್' (Pfand) ಸಿಸ್ಟಮ್. ನೀವು ಅಂಗಡಿಯಲ್ಲಿ ಒಂದು ಬಾಟಲ್ ನೀರು ಅಥವಾ ಕೋಕ್ ತೆಗೆದುಕೊಂಡರೆ, ಎಕ್ಸ್-ಟ್ರಾ 25 ಸೆಂಟ್ಸ್ (ಸುಮಾರು 25 ರೂಪಾಯಿ) ಕೊಡಬೇಕು. ನೀವು ನೀರು ಕುಡಿದ ಮೇಲೆ ಆ ಖಾಲಿ ಬಾಟಲಿಯನ್ನು ವಾಪಸ್ ಸೂಪರ್ ಮಾರ್ಕೆಟ್ ನಲ್ಲಿರುವ ಮಷಿನ್ ಗೆ ಹಾಕಿದರೆ ನಿಮ್ಮ 25 ಸೆಂಟ್ಸ್ ನಿಮಗೆ ವಾಪಸ್ ಸಿಗುತ್ತದೆ! ಕಸಕ್ಕೂ ಹಣದ ಮೌಲ್ಯ ಕಟ್ಟಿದಾಗ, ಸ್ವಚ್ಛತೆ ತಾನಾಗಿಯೇ ಬರುತ್ತದೆ.