• ಹು ವಾ ಶ್ರೀಪ್ರಕಾಶ್

ಕ್ಯುಬೆಕ್ ಸೆಂಟ್ ಲಾರೆನ್ಸ್ ನದಿಯ ದಡದಲ್ಲಿರುವ ಒಂದು ಸುಂದರ ಐತಿಹಾಸಿಕ ಮತ್ತು ಸಾಂಸ್ಕೃತಿಕ ನಗರ‌. ಫಾಲ್ ಸೀಸನ್ ನಲ್ಲಿ ವರ್ಣ ರಂಜಿತ ಗಿಡಮರಗಳಿಂದ ನಗರದ ಸೌಂದರ್ಯ ಇಮ್ಮಡಿಗೊಂಡಿರುತ್ತದೆ ಎಂದು ಮಗಳು ಅಳಿಯ ಹೇಳಿದರು. ವಾರಾಂತ್ಯದಲ್ಲಿ ಅಲ್ಲಿ ಎರಡು ದಿನ ಕಳೆಯಲು ಬೇಕಾದ ಎಲ್ಲ ವ್ಯವಸ್ಥೆ ಆನ್ ಲೈನ್ ಮುಖಾಂತರ ಮಾಡಿದ್ದರು.

ಒಟ್ಟಾವದಿಂದ ಕಾರಿನಲ್ಲಿ ಸುಮಾರು ನಾಲ್ಕೂವರೆ ಗಂಟೆಯ ಪ್ರಯಾಣ. ಎಕ್ಸ್‌ಪ್ರೆಸ್ ವೇ ಹಾದಿಯಲ್ಲಿ ಇತರ ನಗರಗಳ ಒಳಗೆ ಹೋಗದೇ ನೇರವಾಗಿ ಸಾಗುವ ಹಾದಿಯೇ ಬಹಳ ಸುಂದರವಾಗಿತ್ತು. ಎರಡೂ ಕಡೆಯೂ ವರ್ಣರಂಜಿತ ಅರಣ್ಯ ನಯನ ಮನೋಹರ.

ಕೆನಡಾದಲ್ಲಿ ಫ್ರೆಂಚ್ ಸಿಟಿ!

ಕ್ಯುಬೆಕ್ ಒಂದು ಫ್ರೆಂಚ್ ಸಿಟಿ. ಇಲ್ಲಿ ಫ್ರೆಂಚ್ ಅಧಿಕೃತ ಭಾಷೆ. ಇಲ್ಲಿನ ರಸ್ತೆಗಳಲ್ಲೆಲ್ಲ ಫ್ರೆಂಚ್ ಬೋರ್ಡ್ ಗಳೇ ಇದ್ದು ಗೊತ್ತಿಲ್ಲದವರಿಗೆ ಗೊಂದಲವೂ ಆಗುತ್ತದೆ. ಇಂಗ್ಲಿಷ್ ಕೂಡಾ ಬಳಕೆಯಲ್ಲಿದ್ದರೂ ಕೆಲವರು ಫ್ರೆಂಚ್ ಮಾತ್ರ ಬಳಸುವರು. ಆಗೆಲ್ಲ ಗೂಗಲ್ ಟ್ರಾನ್ಸ್‌ ಲೇಟರ್ ಅನಿವಾರ್ಯ.

Quebec 1

ನಗರದ ಅದ್ಭುತ ವಿನ್ಯಾಸ, ಸುಂದರ ಕಟ್ಟಡಗಳು, ವರ್ಣರಂಜಿತ ಪಾರ್ಕ್, ಹರಿಯುವ ನದಿ, ಝಗಮಗಿಸುವ ಬೀದಿಗಳು, ಉಬ್ಬು ತಗ್ಗುಗಳ ಹಾದಿ , ಪ್ರವಾಸಿಗರ ಹರ್ಷೋಲ್ಲಾಸ ! ಎಲ್ಲಿ ನಿಂತು ನೋಡಿದರೂ ಸುಂದರ ಆಹ್ಲಾದಕರ ದೃಶ್ಯವೇ ಕಾಣುವುದು. ಯಾವುದೋ ಸುಂದರ ಕನಸಿನ ಲೋಕಕ್ಕೆ ಬಂದಂತೆ ಮನಸ್ಸು ಹರ್ಷಗೊಳ್ಳುವುದು.

ಈ ನಗರವನ್ನು ವರ್ಲ್ಡ್ ಹೆರಿಟೇಜ್ ಸಿಟಿ ಎಂದು ಯುನೆಸ್ಕೋ ಗುರುತಿಸಿದೆ. ಕೈಗಾರಿಕಾ ಹಾಗೂ ಸೇವಾ ಕ್ಷೇತ್ರಗಳಲ್ಲಿ ಬಹಳ ಮುನ್ನಡೆ ಸಾಧಿಸಿರುವ ಇದು ಶ್ರೀಮಂತ ಕೆನಡಾದ ಅತಿ ದೊಡ್ಡ ಪ್ರಾಂತ್ಯ. ಬಹಳ ಹಿಂದೆ ಇದು ಬ್ರಿಟಿಷ್ ಕಾಲೋನಿಯಾಗಿತ್ತು.

ಹೊಟೇಲ್ ಕೂಡ ಪ್ರವಾಸಿ ತಾಣ!

ಇಲ್ಲಿರುವ ಫೇರ್ಮಂಟ್ ಹೊಟೇಲ್ ಅಂಡ್ ರೆಸಾರ್ಟ್ 1893ರ ಐತಿಹಾಸಿಕ ಕಟ್ಟಡ .18 ಮಹಡಿಯ ಈ ಕಟ್ಟಡವನ್ನು ಕೆನಡಿಯನ್ ಪೆಸಿಫಿಕ್ ರೈಲ್ವೆ ಕಂಪನಿ ಕಟ್ಟಿದ್ದು ಇದು ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ.

ಇಲ್ಲಿಯ ಸ್ಥಳಗಳ ಹೆಸರುಗಳ ವಿಚಿತ್ರವಾಗಿದ್ದು ನೆನಪಿನಲ್ಲಿ ಉಳಿಯುವುದಿಲ್ಲ.

ಮೊದಲು ಯುದ್ಧಭೂಮಿಯಾಗಿತ್ತು

ಪ್ಲೇನ್ಸ್ ಆಫ್ ಅಬ್ರಾಹಂ ಬಹಳ ವಿಸ್ತಾರವಾದ ಸುಂದರ ಪಾರ್ಕ್. ನ್ಯೂಯಾರ್ಕ್ ನ ಸೆಂಟ್ರಲ್ ಪಾರ್ಕ್ ನ ಹಾಗೆ ಇದು ಇಲ್ಲಿಯ ಪ್ರಮುಖ ತಾಣ. ಇದೊಂದು ಯುದ್ಧಭೂಮಿಯಾಗಿತ್ತೆಂಬುದು ಇತಿಹಾಸ ಹೇಳುತ್ತದೆ. ಪಾರ್ಕ್‌ನ ವಿವಿಧ ಭಾಗಗಳಲ್ಲಿ ಫಿರಂಗಿಗಳು, ಸ್ಮಾರಕ ಸ್ತಂಭಗಳು ಇವೆ.ಇಲ್ಲಿ 1759ರಲ್ಲಿ ಫ್ರೆಂಚರಿಗೂ ಬ್ರಿಟಿಷರಿಗೂ ಯುದ್ಧ ನಡೆದು ಫ್ರೆಂಚರು ಸೋತರಂತೆ. ಪಾರ್ಕ್ ನ ಅತ್ಯಂತ ಸುದೀರ್ಘ ಹುಲ್ಲು ಹಾಸು ಮತ್ತು ನಡೆಯುವ ಹಾದಿ ಸುಂದರವಾಗಿದ್ದು ಸಂಜೆಯ ಹೊತ್ತಲ್ಲಿ ಇಲ್ಲಿಂದ ನಗರ ಬಹಳ ರಮಣೀಯವಾಗಿ ಕಾಣಿಸುತ್ತದೆ. ಪಾರ್ಕ್‌ನ ಒಂದು ಬದಿಯಲ್ಲಿ ಕೋಟೆ ಇದೆ. ಅಲ್ಲಿಂದ ಬೃಹತ್ ಕಾಲುವೆ ಒಂದು ಬದಿಯಲ್ಲಿ ಬಳುಕಿ ಸಾಗಿದೆ.

ಕ್ಯುಬೆಕ್ ನಗರದ ರಸ್ತೆಗಳು ಮಾತ್ರ ಬಹಳ ಏರಿಳಿತಗಳಿಂದ ಕೂಡಿದ್ದು ಕಡಿದಾಗಿವೆ. ನೋಡುವುದಕ್ಕೆ ಎಲ್ಲ ಬೀದಿಗಳು ಸುಂದರವಾಗಿದ್ದರೂ ಡ್ರೈವ್ ಮಾಡುವವರಿಗೆ ಸರಾಗವಲ್ಲ.

ಮನರಂಜನೆಯ ಟೆರೇಸ್

ಡಫ್ರಿನ್ ಟೆರೇಸ್ ಒಂದು ನೋಡಲೇಬೇಕಾದ ತಾಣ. ಇಲ್ಲಿಂದ ನಗರ, ಸೇಂಟ್ ಲಾರೆನ್ಸ್ ನದಿ ಎಲ್ಲವೂ ಬಹಳ ಚಂದವಾಗಿ ಕಾಣಿಸುತ್ತದೆ. ಗವರ್ನರ್ ಜನರಲ್ ಆಗಿದ್ದ ಡಫ್ರಿನ್ ಕ್ಯುಬೆಕ್ ನಗರವನ್ನು ಅತಿಯಾಗಿ ಪ್ರೀತಿಸುತ್ತಿದ್ದನಂತೆ. ಅವನ ಹೆಸರನ್ನೇ ಇಲ್ಲಿಗೆ ಇಟ್ಟಿದ್ದಾರೆ. ಪ್ರವಾಸಿಗರು ಸ್ಥಳೀಯ ಜನರು ಕುಟುಂಬ ಸಮೇತರಾಗಿ ಇಲ್ಲಿ ಬಂದು ಸಂತೋಷವಾಗಿ ಸಮಯ ಕಳೆಯುತ್ತಾರೆ. ಅಲ್ಲಲ್ಲಿ ಕಲಾವಿದರು ಸಂಜೆಯ ಹೊತ್ತು ವಾದ್ಯ ಸಂಗೀತಗಳೊಂದಿಗೆ ರಂಜಿಸುತ್ತಿರುತ್ತಾರೆ. ನಾವೂ ಅಲ್ಲಿ ಸಂಜೆಯನ್ನು ಬಹಳ ಚೆನ್ನಾಗಿ ಆನಂದಿಸಿದೆವು. ಪ್ರವಾಸಿಗರಿಂದ ಬೀದಿಗಳು ಉತ್ಸಾಹಮಯವಾಗಿತ್ತು . ತುಂಬಾ ವೈವಿಧ್ಯಮಯ ವಾದ ಅಂಗಡಿಗಳು, ಆರ್ಟ್ ಗ್ಯಾಲರಿಗಳು, ಹೊಟೇಲ್ ಗಳು, ಅಲ್ಲಲ್ಲಿ ವಾದ್ಯ ನುಡಿಸುವವರು, ನಿಮ್ಮ ಚಿತ್ರ ಬಿಡಿಸುವ ಕಲಾವಿದರು‌‌, ಕಾರ್ಟೂನಿಸ್ಟ್ ಗಳು, ಹೀಗೆ ಅನೇಕ ರಂಜನೀಯ ವಸ್ತು ವಿಶೇಷಗಳು ಹಾದಿ ಯುದ್ದಕ್ಕೂ ಕಾಣಿಸುತ್ತದೆ.ಎಲ್ಲವನ್ನೂ ನೋಡುತ್ತಾ ಸುತ್ತಾಡುವುದೇ ಚೆಂದ. ಸಮಯದ ಪರಿವೆಯೇ ಇರದು.

Quebec2

1750 ಎ ಲವ್ ಸ್ಟೋರಿ

ಮಾಂಟ್ ಮೊರೆನ್ಸಿ ನದಿಯ ದೊಡ್ಡ ಜಲಪಾತ ನಗರಕ್ಕೆ ಸಮೀಪದಲ್ಲೇ ಇರುವುದರಿಂದ ಇಲ್ಲಿಗೂ ಪ್ರವಾಸಿಗರ ಸಂಖ್ಯೆ ಹೆಚ್ಚು.

ಈ ಜಲಪಾತದ ಸೌಂದರ್ಯವನ್ನು ಹಲವು ಕಡೆಯಿಂದ ಇಳಿದು ನೋಡುವ ಹಾಗೆ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಎಲ್ಲಿಂದ ನೋಡಿದರೂ ಚೆಂದವೇ. ಚಲನಚಿತ್ರಗಳ ಚಿತ್ರೀಕರಣ ಇಲ್ಲಿ ಬಹಳ ಆಗುವುದಂತೆ. ಸಾಹಸ ಪ್ರಿಯರು ಇಲ್ಲಿ ಜಿಪ್ ಲೈನಿಂಗ್ ಹಾಗೂ ರಾಕ್ ಕ್ಲೈಂಬಿಂಗ್ ಮಾಡಬಹುದಾಗಿದೆ. ನನ್ನ ಮಗಳು ಇಲ್ಲಿ ಜಿಪ್ ಲೈನ್ ನಲ್ಲಿ ಹೋಗಿ ಜಲಪಾತದ ತೀರ ಸನಿಹದಲ್ಲಿ ಹಾರಿ ಬಂದಳು. ಈ ಜಲಪಾತಕ್ಕೆ ಸಂಬಂಧಿಸಿದ ಸುಂದರ ಕತೆ ಇದೆ. ಬಿಳಿಯ ಹುಡುಗಿ ಮಥಿಲ್ಡಾ ಮತ್ತು ಫ್ರೆಂಚ್ ಯುವಕ ಲೂಯಿಸ್ ಎಂಬ ಯುವ ಪ್ರೇಮಿಗಳು ಮದುವೆಯಾಗಲು ನಿರ್ಧರಿಸಿದ್ದರು. ಮದುವೆಗೆ ಕೆಲವೇ ದಿನಗಳ ಮೊದಲು ಜುಲೈ 1759 ರಲ್ಲಿ ಬ್ರಿಟಿಷರು ಜಲಪಾತದ ಬಳಿ ದಾಳಿ ನಡೆಸಿದರು. ಫ್ರೆಂಚರ ವಸಾಹತುಶಾಹಿ ಸೇನೆಯ ಸದಸ್ಯನಾಗಿ, ಲೂಯಿಸ್ ಯುದ್ಧದಲ್ಲಿ ಸೇರಿಕೊಂಡು ಕೊಲ್ಲಲ್ಪಟ್ಟ. ಮದುವೆ ಕನಸಾಯಿತು. ಮಥಿಲ್ಡಾ ಜಲಪಾತದ ಬಳಿ ಮರಳಿ ಬಾರದ ಆತನ ಹೆಸರು ಕೂಗುತ್ತಾ ರೋಧಿಸಿದಳು. ಮನೆಗೆ ಹಿಂದಿರುಗಿದ ಅವಳು ತನ್ನ ಮದುವೆಯ ನಿಲುವಂಗಿಯನ್ನು ಧರಿಸಿ ಜಲಪಾತದ ಬಳಿ‌ಬಂದು ಪ್ರಿಯತಮನನ್ನು ಕರೆಯುತ್ತಾ ಜಲಪಾತಕ್ಕೆ ಹಾರಿದಳು.

ಇಂದಿಗೂ, ಕೆಲವರು ಬಿಳಿಯ ಆಕೃತಿಯು ಅಲ್ಲಿ ಕಾಣುವುದು ಎಂದು ಹೇಳುತ್ತಾರೆ. ಈ ಕತೆ " ಕೇಳದೆ ನಿಮಗೀಗ ದೂರದಲ್ಲಿ ಯಾರೋ..." ಎಂಬ ವಿರಹಗೀತೆಯನ್ನು ನೆನಪಿಸುತ್ತದೆ.

ಈ ಜಾಗ ಮಕ್ಕಳಿಗಾಗಿ

ಕ್ಯುಬೆಕ್ ನಲ್ಲಿ ದೊಡ್ಡ ಮ್ಯೂಸಿಯಂ, ಬೃಹತ್ ಅಕ್ವೇರಿಯಂ ಇವೆ. ಅಕ್ವೇರಿಯಂ ನ ವಿವಿಧ ವರ್ಣಮಯ ಜಲಚರಗಳು ಅಚ್ಚರಿ ಉಂಟು ಮಾಡುತ್ತವೆ . ಪೋಲಾರ್ ಬೇರ್, ಸೀ ಹಾರ್ಸ್, ಸೀಲ್ ಮೊದಲಾದ ಪ್ರಾಣಿಗಳೂ ಇಲ್ಲಿವೆ. ಮಕ್ಕಳು ಇಲ್ಲಿ ಬಹಳ ಸಂತೋಷಪಡುತ್ತಾರೆ.

ಇಲ್ಲಿಯ ಹೊಟೇಲ್ ಗಳೂ ಪ್ರವಾಸಿಗರಿಂದ ತುಂಬಿರುತ್ತವೆ. ನಾವು ಅಲ್ಲಿನ ವಿಶೇಷ ರುಚಿಗಳನ್ನು ಸವಿದೆವು ಸಸ್ಯಾಹಾರಿ ಆಯ್ಕೆ ಯನ್ನು ಕೇಳಿದರೆ ಅದಕ್ಕೆ ವಿಶೇಷ ವೇಗನ್ ಮೆನು ಕೊಡುತ್ತಾರೆ