• ಹು ವಾ ಶ್ರೀಪ್ರಕಾಶ

ಸ್ಯಾನ್ ಫ್ರಾನ್ಸಿಸ್ಕೋ. ಇದು ಗೋಲ್ಡನ್ ಗೇಟ್ ಬ್ರಿಡ್ಜ್ ಗೆ ಹೆಸರಾಗಿರುವ ವಾಣಿಜ್ಯ ಹಾಗೂ ಸಾಂಸ್ಕೃತಿಕ ನಗರ. ಪ್ರಪಂಚದ ದೊಡ್ಡ ಟೆಕ್ ಸಿಟಿಗಳಲ್ಲಿ ಒಂದಾಗಿದೆ. ಇಲ್ಲಿನ
"ಬೇ ಏರಿಯಾ" ಆರ್ಥಿಕ ವ್ಯವಹಾರಗಳ ಕೇಂದ್ರ. ಸಾಕಷ್ಟು ಸಂಖ್ಯೆಯಲ್ಲಿ ವಿಶ್ವವಿದ್ಯಾಲಯ ಮತ್ತು ಐಟಿ ಸಂಸ್ಥೆಗಳನ್ನು ಹೊಂದಿದೆ. ಬಹಳ ದುಬಾರಿ ನಗರ ಎಂದೂ ಕರೆಸಿಕೊಂಡಿದೆ. ಹೀಗಿದ್ದರೂ ಅತ್ಯಧಿಕ ಪ್ರವಾಸಿಗರು ಭೇಟಿ ನೀಡುವ ಸ್ಥಳವೂ ಇದಾಗಿದೆ. ಅನೇಕ ಬೆಟ್ಟಗಳಿಂದ ಕೂಡಿರುವುದರಿಂದ ರಸ್ತೆಗಳಲ್ಲಿ ಏರಿಳಿತಗಳು ಹೆಚ್ಚು.

ಗೋಲ್ಡನ್ ಗೇಟ್ ಬ್ರಿಡ್ಜ್, ತನ್ನ ರಚನೆ ಮತ್ತು ವಿನ್ಯಾಸದಿಂದ ವಿಶ್ವ ವಿಖ್ಯಾತವಾಗಿದೆ. ಹೆಸರು ಗೋಲ್ಡನ್ ಎಂದಿದ್ದರೂ ಇದು ಚಿನ್ನದಿಂದ ಮಾಡಿದ್ದೇನೂ ಅಲ್ಲ. ಸ್ಟೀಲ್ ಸಿಮೆಂಟಿನಿಂದಲೇ ನಿರ್ಮಿಸಲಾಗಿದೆ. ಸುಮಾರು 1.7 ಕಿಮೀ ಉದ್ದ ಮತ್ತು 90 ಅಡಿ ಅಗಲದ ಈ ಸೇತುವೆ ಇಲ್ಲಿಯ ಪ್ರಮುಖ‌ ಆಕರ್ಷಣೆ. ಇದರ ಕೆಂಪು ಬಣ್ಣ ಮತ್ತು ಎರಡೂ ಬದಿಗಳಲ್ಲಿರುವ ಟವರ್ ಗಳು ಆಕರ್ಷಣೀಯವಾಗಿವೆ.

golden bridge

ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚು ಭೂಕಂಪಗಳಾಗುತ್ತವೆ. ಈ ಸೇತುವೆ ನಿರ್ಮಾಣ ಆಗುತ್ತಿರುವಾಗಲೇ ಭೂಕಂಪವಾಗಿತ್ತಂತೆ. ಅದ್ಭುತವಾದ ಈ ಸೇತುವೆಯನ್ನು ನಿರ್ಮಿಸಿದ ಪರಿಯ ವಿವರಣೆ ತಿಳಿದರೆ ಅಚ್ಚರಿಯಾಗದೇ ಇರದು.

ಈ ಪ್ರದೇಶದಲ್ಲಿ ಸಮುದ್ರ ಭೂಮಿಯ ಒಳಗೆ ಸರಿದಂತಿದೆ. ನಾವು ಇಲ್ಲಿ ಬೋಟ್ ನಲ್ಲಿ ಕುಳಿತು ಸೇತುವೆಯ ಅಡಿಯಲ್ಲಿ ಪ್ರಯಾಣಿಸಿದೆವು. ಮುಂದೆ ಸಾಗಿ ಅಲ್ಲಿನ ಅಲ್ಕಟ್ರಾಜ್ ದ್ವೀಪವನ್ನು ಹತ್ತಿರದಿಂದ ಕಣ್ತುಂಬಿಸಿಕೊಂಡೆವು. ಇದೊಂದು ಒಂಟಿ ದ್ವೀಪ. ಸುತ್ತಲೂ ಪೆಸಿಫಿಕ್ ಶಾಂತ ಮಹಾಸಾಗರವಿದೆ. ಇಂಥ ಕಠಿಣ ಭದ್ರತೆಯ ಸನ್ನಿವೇಶಗಳನ್ನು ಗಮನಿಸಿ ಇಲ್ಲಿಯೇ ಸೆರೆಮನೆ ನಿರ್ಮಿಸಿ ಅಪರಾದಿಗಳನ್ನು ಇಲ್ಲಿಡುತ್ತಿದ್ದರು. ಜತೆಗೆ ಯಾವ ಸೌಲಭ್ಯಗಳೂ ಇಲ್ಲದೆ ಕಠಿಣ ಕಾವಲು ಕಾಯುತ್ತಿದ್ದರಂತೆ.

ಆದರೂ ಇಲ್ಲಿನಿಂದ ಮೂವರು ತಪ್ಪಿಸಿಕೊಂಡಿದ್ದು ಅಮೆರಿಕದ ಇತಿಹಾಸದಲ್ಲಿ " ದಿ ಗ್ರೇಟ್ ಎಸ್ಕೇಪ್" ಎನಿಸಿಕೊಂಡಿದೆ. ಹೀಗೆ ತಪ್ಪಿಸಿಕೊಂಡವರು ಸತ್ತರೋ ಬದುಕಿದರೋ ಎಂಬುದು ಇದುವರೆಗೂ ತಿಳಿಯದ ಸಂಗತಿ.

1963 ರಲ್ಲಿ ಅಲ್ಕಟ್ರಾಜ್ ಸೆರೆಮನೆಯನ್ನು ಮುಚ್ಚಲಾಗಿದೆ. ಈಗ ಈ ದ್ವೀಪ ಪ್ರವಾಸಿ ತಾಣವಾಗಿದೆ. ಈ ದ್ವೀಪದಲ್ಲಿ ಇಂಡಿಯನ್ಸ್ ಎಂಬ ಅಮೆರಿಕದ ಮೂಲ ನಿವಾಸಿಗಳು ಪ್ರತಿಭಟನೆ ನಡೆಸಿದ ಇತಿಹಾಸವೂ ಇದೆ.

1492 ರಲ್ಲಿ‌ ಇಟಲಿ ಮೂಲದ ಕ್ರಿಸ್ಟೋಫರ್ ಕೊಲಂಬಸ್, ಭಾರತದ ಅಮೂಲ್ಯ ವಸ್ತುಗಳನ್ನು ಹೊತ್ತು ತರಲು ರಾಣಿ ಇಸಬೆಲ್ಲಾಳ ಮನ ಒಲಿಸಿದನು. ಸಂತ ಮೇರಿಯಾ ಎಂಬ ಹಡಗಿನಲ್ಲಿ ಹೊರಟು ದಿಕ್ಕು ತಪ್ಪಿ ಅಮೆರಿಕ ತಲುಪಿ ಅಲ್ಲಿನವರನ್ನು ಇಂಡಿಯನ್ಸ್ ಎಂದನಂತೆ. ಹೀಗಾಗಿ ನೇಟಿವ್ ಅಮೆರಿಕನ್ ಟ್ರೈಬ್ಸ್ ನ್ನು ಇಂಡಿಯನ್ಸ್ ಎಂದು ಕರೆಯಲಾಗುತ್ತಿತ್ತು. ಕೊಲಂಬಸ್ ಅಮೆರಿಕವನ್ನು ಕಂಡುಹಿಡಿದ ಕೀರ್ತಿಗೆ ಭಾಜನನಾದ. ಕೊಲಂಬಸ್ ಅಮೆರಿಕಕ್ಕೆ ಕಾಲಿಡುವ ಮುಂಚೆಯೇ ಅಲ್ಲಿ ಹಲವಾರು ಬುಡಕಟ್ಟುಗಳಿದ್ದವು. ಆದ್ದರಿಂದ ಕೊಲಂಬಸ್ ಅಮೆರಿಕ ಕಂಡುಹಿಡಿದ ಎನ್ನುವುದು ಸರಿಯಲ್ಲ ಎಂಬುದು ತರ್ಕ. ಅನೇಕ ಮೂಲ ನಿವಾಸಿಗಳನ್ನು ಕೊಂದು ಅಲ್ಲಿಯ ಸಂಪನ್ಮೂಲ ದೋಚಿದ ಕೊಲಂಬಸ್ ಅಲ್ಲಿಯವರಿಗೆ ಮಹಾ ಕ್ರೂರಿಯಾಗಿ ಕಂಡರೆ ಇಟಲಿ ಫ್ರಾನ್ಸ್ ನವರಿಗೆ ಹೆಮ್ಮೆಯ ವಿಷಯ. ಪಿಟ್ಸ್ ಬರ್ಗ್ ನ ಒಂದು ಉದ್ಯಾನದಲ್ಲಿ ಕೊಲಂಬಸ್ ನ ಬೃಹತ್ ಪ್ರತಿಮೆಯನ್ನು ಬಟ್ಟೆಯಲ್ಲಿ ಸುತ್ತಿ ಕಟ್ಟಿಟ್ಟಿರುವುದು ಕಂಡಿದ್ದೇನೆ. ಕೊಲಂಬಸ್ ನ‌ ಪ್ರತಿಮೆ ಇರಬಾರದು ಎಂದು ಕೆಲವು ಕಡೆ ತೆಗೆದಿದ್ದಾರಂತೆ.

golden bridge 3

ಕೊಲಂಬಸ್ ನಂತೆ ಮತ್ತೊಬ್ಬ ಸಮರ್ಥ ನಾವಿಕ ವಾಸ್ಕೋ ಡ ಗಾಮ ಭಾರತದ ಕೇರಳ ತಲುಪುವಲ್ಲಿ ಯಶಸ್ವಿಯಾದದ್ದು ಇತಿಹಾಸ.

ಸ್ಯಾನ್ ಫ್ರಾನ್ಸಿಸ್ಕೊದ ಮತ್ತೊಂದು ಆಕರ್ಷಣೆ ಸಿವಿಕ್ ಸೆಂಟರ್ ಕಟ್ಟಡ. ಯೂನಿಯನ್ ಸ್ಕ್‌ವೇರ್ ಮಾರುಕಟ್ಟೆಯಂಥ ಸ್ಥಳ.‌ ಬಹಳಷ್ಟು ಹೊಟೇಲ್‌ ಹಾಗೂ ಮಳಿಗೆಗಳಿಂದ ಕೂಡಿದ್ದು ಸದಾ ಪ್ರವಾಸಿಗರಿಂದ ತುಂಬಿರುತ್ತದೆ. ಇಲ್ಲಿನ ಬೀದಿಯಲ್ಲಿ ಪ್ರವಾಸಿಗರನ್ನು ನೋಡುತ್ತಾ ಅಲೆಯುವುದೇ ಸಂತೋಷ.

ಕಡಿದಾದ ತಿರುವು ರಸ್ತೆಗೆ ಹೆಸರಾದ ಲೊಂಬಾರ್ಡ್ ಸ್ಟ್ರೀಟ್ ನಲ್ಲಿ ಹೋಗಿ‌ ಎತ್ತರದ ಸ್ಥಳದಿಂದ ನಗರವನ್ನು ವೀಕ್ಷಿಸಬಹುದು. ಸಾಧಾರಣವಾಗಿ‌ ಪ್ರವಾಸಿಗರನ್ನು ಇಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಇಲ್ಲಿನಿಂದ ನಗರ ಹಾಗು ಸಮುದ್ರದ ನೋಟ ಸುಂದರವಾಗಿ ಕಾಣುತ್ತದೆ.